ಒಂದು ಕಾಲದಲ್ಲಿ,

ಮೇ 6, 2022

ಸ್ವಲ್ಪ ಹೊತ್ತು ಮೊದಲು ‘ಲೋಕಧ್ವನಿ’ ದಿನಪತ್ರಿಕೆ ವಿಶ್ವವಾಣಿ ಬಳಗಕ್ಕೆ ಸೇರಿದ ಕುರಿತು ವಿಶ್ವೇಶ್ವರ ಭಟ್ಟರು ಹಾಕಿದ ಪೋಸ್ಟ್‌ ನೋಡಿ ಹಳೆಯ ನೆನಪುಗಳು ಒಟ್ಟಾಗಿ ಬಂತು.

ಶಿರಸಿ ಸಮಾಚಾರ
ಶಿರಸಿಯ ಮನೆಗಳಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಯ ಜೊತೆ ಅಲ್ಲಿಯ ಸ್ಥಳೀಯ ಜಿಲ್ಲಾ ಪತ್ರಿಕೆಗಳಾದ ʼಲೋಕ ಧ್ವನಿʼ ಇಲ್ಲಾ ʼಜನಮಾಧ್ಯಮʼ ದಿನನಿತ್ಯ ಬಂದೇ ಬರುತ್ತೆ ಎಂದು ನಾನು ನಂಬಿದ್ದೇನೆ. ಆ ಮಟ್ಟಿಗೆ ಅಲ್ಲಿ ಜನಪ್ರಿಯ. ನಾನು ತುಂಬಾ ಸಣ್ಣವಳಿದ್ದಾಗ ಅಜ್ಜನ ʼಶಿರಸಿ ಸಮಾಚಾರʼ ಜನಪ್ರಿಯವಾಗಿತ್ತು ಅನ್ನುವುದು ಕೇಳಿ ಗೊತ್ತು.

ಬಾಲ್ಯದಲ್ಲಿ 5-7ನೇಯ ವಯಸ್ಸಿನಲ್ಲಿ ಅಜ್ಜನ ʼಶಾರದಾ ಪ್ರೆಸ್‌ʼ ನೋಡಿದ್ದ ನೆನಪಿದೆ. ಅಥವಾ ಶಿವಮೊಗ್ಗ ತೊರೆದು ಅಪ್ಪ- ಅಮ್ಮ ಶಿರಸಿಗೆ ಬಂದ ಕೂಡಲೇ ಅದೇ ಕಟ್ಟಡದಲ್ಲಿ ಕೆಲವು ಕಾಲ ತಂಗಿದ್ದ ಕಾರಣ ಈ ನೆನಪುಗಳು ಇನ್ನೂ ಇರಬಹುದು. ಆಮೇಲೆ ಅಪ್ಪ ಸಿ ಪಿ ಬಜಾರಿನಲ್ಲಿ ʼಉದಯ ಮುದ್ರಣʼ ಶುರು ಮಾಡಿದ ಮೇಲೆ, ಸ್ಕೂಲಿನಿಂದ ಬರುತ್ತಾ ಕೆಲವೊಮ್ಮೆ ಅಜ್ಜನ ಕಛೇರಿಗೆ ಹೋಗುತ್ತಾ ಇದ್ದಿದ್ದು ನೆನಪಿದೆ. ಮೆಟ್ಟಿಲು ಹತ್ತಿ ಒಳ ಹೋಗುತ್ತ ಇದ್ದ ಹಾಗೆ ಉದ್ದವಾದ ಹಾಲ್‌, ಎದುರು ಮರದ ವಿಶಾಲವಾದ ಟೇಬಲ್‌, ಅದರ ಮಧ್ಯ ಗಾಂಧಿ ಟೋಪಿ ಮತ್ತು ಬಿಳಿ ಖಾದಿಧಾರಿ ಅಜ್ಜ ಕುಳಿತಿರುತ್ತಿದ್ದ ನೆನಪು. ಎಡಗಡೆ ವಿಶಾಲವಾದ ಕಿಟಕಿ, ಅದರ ಕೋನಾಕಾರದ ಬಿಳಿ ಬಣ್ಣ ಬಳಿದ ಮರದ ಪಟ್ಟಿಗಳಿಂದ ಕೋಣೆಗೆ ಬೀಳುತ್ತಿದ್ದ ಬೆಳಕು, ಮೇಲೆ ಕಳೆದ ದೀಪಾವಳಿಗೆ ದಾರದಲ್ಲಿ ಕಟ್ಟಿದ ಬಣ್ಣ ಬಣ್ಣದ ಪತಾಕೆಗಳು. ಬಲಗಡೆ ಕಿಟಕಿಗಳಿರಲಿಲ್ಲ. ಪ್ರಿಂಟಿಂಗ್‌ ಇಂಕ್‌ ತುಂಬಿದ ಡಬ್ಬಿಗಳಿರುವ ಮರದ ಕಪಾಟು ಇದ್ದ ನೆನಪು. ಹಾಗೆ ಬಲ ತುದಿಗೆ ಒಳಗಡೆ ಹೋಗುವ ದಾರಿ. ಒಳ ಹೋಗುತ್ತ ಮೊದಲು ಕಾಣುವುದು ಸದ್ದು ಮಾಡುತ್ತಿರುವ ಟ್ರೆಡಲ್‌ ಪ್ರಿಂಟಿಂಗ್‌ ಮೆಶಿನ್‌, ಹಾಗೇ ಮುಂದೆ ಹೋದರೆ ಮರದ ಅಚ್ಚು ಮೊಳೆಗಳ ವಿಭಾಗ, ಇನ್ನೊಂದು ಮೆಶಿನ್‌ ಹಾಗೂ ಅಚ್ಚು ಮೊಳೆಗಳ ಚೌಕಟ್ಟು ಕಟ್ಟುವ ಟೇಬಲ್.‌ ಸೀಮೆ ಎಣ್ಣೆ ಮತ್ತು ಇಂಕ್ ಗಳ ವಾಸನೆ, ಕಪ್ಪು ಬಣ್ಣ ಮೆತ್ತಿಕೊಂಡಿರುವ ಶರ್ಟ್ಗಳನ್ನು ಧರಿಸಿರುವ ಕೆಲಸಗಾರರು ಮತ್ತು ಕಪ್ಪು ಕೈಗಳು,….

ಅಜ್ಜನಿಗೆ ವಯಸ್ಸಾಗುತ್ತ ಬಂದ ಹಾಗೆ ಶಾರದಾ ಪ್ರೆಸ್‌ ಮಾರುವ ನಿರ್ಧಾರ ಮಾಡಿ ಮಾರಿಯೂ ಆಯಿತು. ಅಲ್ಲಿಯ ಕೆಲವು ಕುರ್ಚಿಗಳು, ಟೀಪಾಯಿಗಳು ಅಜ್ಜನ ಮನೆಗೆ ವರ್ಗಾಯಿಸಿದರು. ಅಜ್ಜನ ಮನೆಗೆ ಹೋದಾಗ ಮೆತ್ತಿಯ ರೂಮಿನಲ್ಲಿ ತುಂಬಿಟ್ಟಿದ್ದ ಮರದ ಪೀಠೋಪಕರಣಗಳು ಶಾರದಾ ಪ್ರೆಸ್ಸು ಮತ್ತು ಶಿರಸಿ ಸಮಾಚಾರದ ಗತ ವೈಭವ ಹೇಳುತ್ತಿದ್ದವು.

ನಾನು ಆವೆಮರಿಯಾ ಸ್ಕೂಲಿನಿಂದ ಸಿಪಿ ಬಜಾರಿನ ನಮ್ಮ ಮನೆಗೆ ನಡೆದು ಹೋಗುತ್ತಾ ಎಡಗಡೆ ಬೀಗ ಜಡಿದು ಕುಳಿತ ಆ ಬಿಳಿ ಕಟ್ಟಡ ನನ್ನಲ್ಲಿ ಯಾವ ಭಾವನೆಗಳನ್ನು ಹುಟ್ಟಿಸುತಿತ್ತು ಅನ್ನುವುದು ನಿಖರವಾಗಿ ನನಗೂ ತಿಳಿದಿಲ್ಲ. ಈಗಲೂ ಈ ಕಟ್ಟಡವಿದೆ. ಕೃಷ್ಣಾ ಫೈನ್‌ ಆರ್ಟಿಗೆ ಭೇಟಿ ಕೊಟ್ಟಗಲೆಲ್ಲ ಅಲ್ಲಿ ಹಿರಿಯ ಗುಡಿಗಾರರು ಸಿಕ್ಕಾಗ ಮತ್ತೆ ಹಳೆಯದು ನೆನಪಿಗೆ ಬರುತ್ತದೆ. ಶಿರಸಿ ಸಮಾಚಾರ ಆಮೇಲೆ ವಾರ ಪತ್ರಿಕೆಯಾಗಿ, ಅನೇಕ ಸಂಪಾದಕರು ಆಗಿ ಹೋಗಿ, ಸಧ್ಯ ಪ್ರಕಟನೆಯಲ್ಲಿ ಇದೆಯಾ ಅನ್ನವುದು ನನಗೆ ತಿಳಿದಿಲ್ಲ.

———-

ಜನಮಾಧ್ಯಮ

ಅಪ್ಪನದು ಮುದ್ರಣದ ಕಾರ್ಯ ಕ್ಷೇತ್ರವೇ ಆಗಿದ್ದರಿಂದ ಜನಮಾಧ್ಯಮದ ಜಯರಾಮ ಹೆಗಡೆಯವರ ಪರಿಚಯ ಅವರಿಂದಲೇ ಆಗಿದ್ದು. ಸಿಂಪಿಗಲ್ಲಿ(?)ಯಲ್ಲಿ ಅವರ ಕಛೇರಿ ಇದ್ದ ನೆನಪು. ಅಲ್ಲಿಯೇ ಇದ್ದ ಕೃಷ್ಣಾ ಪ್ರಿಂಟರ್ಸ್‌ ಕಛೇರಿಗೆ ಅಪ್ಪನ ಜೊತೆ ಬಾಲ್ಯದಲ್ಲಿ ಹೋದಾಗ ಜನಮಾಧ್ಯಮ ಕಛೇರಿಗೆ ಹೋಗಿದ್ದ ನೆನಪಿದೆ. ಅದಕ್ಕೂ ಹೆಚ್ಚಾಗಿ ಅಣ್ಣನ ಸ್ನೇಹಿತೆ ಸಿಂಧೂ ಅಕ್ಕಳ ಕಾರಣ ಜನಮಾಧ್ಯಮ ನೆನಪಿದ್ದಿದ್ದು ಹೆಚ್ಚು. ಆಮೇಲೆ ಸಿ ಪಿ ಬಜಾರಿನಿಂದ ಜಿಪಿ ಸೆಂಟರಿಗೆ ʼಉದಯ ಮುದ್ರಣʼ ಸ್ಥಳಾಂತರವಾದ ಮೇಲೆ ನಮ್ಮ ಮನೆಯೂ ಅದರ ಹಿಂದುಗಡೆ ಇದ್ದ ಗುರುನಗರಕ್ಕೆ ಬದಲಾಗಿತ್ತು. ಆಗ ಮೊದಲೇ ಸಿಗುತ್ತಿದ್ದ ಜಯರಾಮ ಹೆಗಡೆಯವರ ಮನೆ ಜನಮಾಧ್ಯಮದವರ ಮನೆಯಂತಲೇ ನೆನಪಿಟ್ಟುಕೊಂಡಿದ್ದಿದೆ.

——

ಧ್ಯೇಯನಿಷ್ಠ ಪರ್ತಕರ್ತ

ಕಾಲೇಜಿನಲ್ಲಿ ಸಚ್ಚಿದಾನಂದ ಹೆಗಡೆಯವರು ನಮ್ಮ ಪತ್ರಿಕೋದ್ಯಮದ ಗೆಸ್ಟ್‌ ಲೆಕ್ಚರ್‌ ಆಗಿ ಬಂದಾಗ ಆಗಲೇ ಡಿಜಿಟಲ್‌ ಕ್ರಾಂತಿ ಶುರುವಾಗಿ ಟ್ರೆಡಲ್‌ ಮಿಶಿನ್‌ ಬಿಟ್ಟು ಆಫ್‌ ಸೆಟ್‌ ಅದೂ ದೊಡ್ಡ ಮೆಶಿನ್‌ ಹಾಕಿದ್ದರು ಅನ್ನುವ ನೆನಪಿದೆ. ಪರ್ತಕರ್ತದ ಅಚ್ಚು ಮೊಳೆಗಳ ಅವರ ಕಛೇರಿಗೂ‌ ಬಾಲ್ಯದಲ್ಲಿ ಅಪ್ಪನ ಜೊತೆ ಹೋದ ನೆನಪಿದೆ. ಆಮೇಲೆ ಅವರ ಆಧುನಿಕ ಆಫ್‌ ಸೆಟ್ ಕಛೇರಿಗೆ ನನ್ನ ಪಜಲ್‌ ಕೊಡುವ ವಿಚಾರವಾಗಿ ಭೇಟಿ ಆಗಿದ್ದೆ. ಅದಕ್ಕೂ ಹೆಚ್ಚಾಗಿ ಪರ್ತಕರ್ತ ನೆನಪಿರುವುದು ಅವರಿಗೆ ಹೆಚ್ಚು ಸಲ ಟಿಎಸ್‌ ಎಸ್‌, ಕೆಡಿಸಿಸಿ,.. ಇನ್ನೀತರ ಮುಖ್ಯವಾದ ಪ್ರಿಂಟಿಂಗ್‌ ಟೆಂಡರ್‌ ಸಿಗ್ತಾ ಇತ್ತು ಅನ್ನುವುದು. ಶಿರಸಿಯಲ್ಲಿ ಎಣಿಸುವಷ್ಟು ಪ್ರಿಂಟಿಂಗ್‌ ಪ್ರೆಸ್ಸುಗಳು ಇದ್ದರೂ ಕಾಂಪಿಟೇಶನ್‌ ಕೂಡ ಹಾಗೆಯೇ ಇತ್ತು. ಈಗ ಡಿಜಿಟಲ್‌ ಪ್ರಿಂಟ್‌ ಬಂದ ಮೇಲಂತೂ ಆಫ್‌ ಸೆಟ್‌ ಮುದ್ರಣವೂ ಕಡಿಮೆಯಾಗಿ, ಅನೇಕ ಹಳೆಯ ಪ್ರೆಸ್ಸುಗಳು ಮುಚ್ಚಿ ಹೋಗಿವೆ.

——

ಲೋಕಧ್ವನಿ
ಅಪ್ಪ- ಅಮ್ಮ ಟ್ರೆಡಲ್‌ ಪ್ರಿಂಟಿಂಗ್‌ ತೆಗೆದು ಆಫ ಸೆಟ್‌ ಪ್ರಿಂಟಿಂಗ್‌ ಯುನಿಟ್ ಹಾಕುವ ಯೋಚನೆ ಮಾಡಿದಾಗ ಲೋಕಧ್ವನಿಯ ಗೋಪಾಲಕೃಷ್ಣ ಆನವಟ್ಟಿಯವರನ್ನು ಭೇಟಿ ಆಗಿದ್ದರು ಅನ್ನುವ ನೆನಪಿದೆ. ಶಿರಸಿಯಲ್ಲಿ ಮೊದಲ ಆಫ್‌ ಸೆಟ್‌ ಮುದ್ರಣ ತಂತ್ರಜ್ಞಾನ ತಂದಿದ್ದು ಇವರೇ ಅನ್ನುವುದು ನನ್ನ ನೆನಪು. ಆಮೇಲೆ ಕಾಲೇಜಿನ ಮೊದಲ ವರ್ಷದಲ್ಲಿ ನನ್ನ ಪಜಲ್‌ ಕೊಡುವ ವಿಚಾರವಾಗಿ ಅವರ ಕಛೇರಿಗೆ ಭೇಟಿ ಕೊಟ್ಟಿದ್ದೆ. ಮಧುವನ ಎದುರುಗಡೆಯ ಕ್ರಾಸಿನಲ್ಲಿ ಸ್ವಲ್ಪ ಮುಂದೆ ಹೋದರೆ ಬಲಗಡೆ ಲೋಕಧ್ವನಿಯ ಆಫೀಸು. ಕೆಳಗಡೆ ಆನವಟ್ಟಿಯವರ ಮನೆ, ಮೆಲುಗಡೆ ಪ್ರೆಸ್ಸು. ಗುಂಗುರು ಕೂದಲಿನ, ಕಪ್ಪು ಕನ್ನಡಕ ಹಾಕಿದ ಮುಖ ನೆನಪಿದೆ. ಒಂದೋ, ಎರಡೋ ಬಾರಿ ಅಷ್ಟೇ ಅವರನ್ನು ನೋಡಿದ ನೆನಪಿದೆ.

1996ರಲ್ಲಿ ಲೋಕಧ್ವನಿಯಲ್ಲಿ ಬರುತ್ತಿದ್ದ ಸಾಹಿತ್ಯ ಧ್ವನಿ ಮರೆಯಲು ಸಾಧ್ಯವೇ ಇಲ್ಲ. ಆಗಷ್ಟೇ ಹತ್ತನೇ ಕ್ಲಾಸು ನವೋದಯ ಮುಗಿಸಿ ಏಪ್ರಿಲ್-ಮೇ ರಜೆಯಲ್ಲಿ ಇದ್ದ ಸಮಯ. ಆಗ ಟ್ರೆಂಡಿನಲ್ಲಿ ಇದ್ದ ಪೆನ್‌ ಫ್ರೆಂಡುಗಳ ಟ್ರೆಂಡ್‌, ಅಜ್ಞಾತವಾಗಿ 15 ಪೈಸೆ ಹಳದಿ ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದ ಪತ್ರಗಳು,.. ಸುಪ್ರಿಯಾ ಅಂತ ಹೆಸರಿಟ್ಟುಕೊಂಡಿದ್ದೆ ಬೇರೆ. ಹೆಚ್ಚಾಗಿ ಇದೇ ಕಾರಣಕ್ಕೇ ಲೋಕಧ್ವನಿ ಜೊತೆ ಭಾವನೆಗಳು ಬೆಸೆದು ಕೊಂಡಿರಬಹುದು.

ಈಗ ಲೋಕಧ್ವನಿ ಅಂದರೆ ನೆನಪಾಗುವುದು ಅಶೋಕ ಕಾಕ. ಅವರು ಮೊದಲು ಕಾರವಾರದಲ್ಲಿ ʼಕರಾವಳಿ ಮುಂಜಾವುʼ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಆನವಟ್ಟಿಯವರು ಲೋಕಧ್ವನಿ ಮಾಲಿಕತ್ವ ಬೇರೆಯವರಿಗೆ ವಹಿಸಿದ ಮೇಲೆ, ಕಾಕ ಸಂಪಾದಕತ್ವ ವಹಿಸಿಕೊಂಡರು. ಚಿಕ್ಕಿ ಮತ್ತು ಕಾಕ ಶಿರಸಿಗೆ ಸ್ಥಳಾಂತರವಾದರು. ಕಪ್ಪು ಬಿಳುಪಿನ ಲೋಕಧ್ವನಿ ಕಲರ್‌ ಫುಲ್‌ ಆಯಿತು. ಆಮೇಲೆ ಶಿರಸಿಗೆ ಅವರ ಮನೆಗೆ ಹೋದಾಗಲೆಲ್ಲ ಲೋಕಧ್ವನಿಯ ಪ್ರಸ್ತಾಪ ಆಗೇ ಆಗುತಿತ್ತು. ಶಿರಸಿಗೆ ಹೋದಾಗಲೆಲ್ಲ ಲೋಕಧ್ವನಿಯ ಹೊಸ ಆಫೀಸು ಹೊರಗಡೆಯಿಂದ ನೋಡಿದ್ದೇ ಹೊರತು ಯಾವತ್ತೂ ಆಫೀಸಿಗೆ ಹೋಗಿ ಕಾಕನನ್ನು ಭೇಟಿ ಮಾಡುವ ಯೋಚನೆಯೇ ಮಾಡಿರಲಿಲ್ಲ. ಆಥವಾ ಮಧುವನದ ಎದುರಗಡೆ ಇದ್ದ ಲೋಕಧ್ವನಿಯ ಕಛೇರಿಯ ನೆನಪು ಕಳೆದು ಕೊಳ್ಳಲು ಇಷ್ಟವಿರಲಿಲ್ಲವೇನೊ, ತಿಳಿದಿಲ್ಲ.

ಈಗ ಕಾಕನೂ ಲೋಕಧ್ವನಿಯಲ್ಲಿ ಇಲ್ಲ. ಲೋಕಧ್ವನಿ ಮತ್ತೆ ಬದಲಾಗಿದೆ. ವಿಶ್ವವಾಣಿ ಬಳಗಕ್ಕೆ ಸೇರ್ಪಡೆ ಆಗಿದೆ. ಅಪ್ಪ-ಅಮ್ಮನೂ ಈಗ ಶಿರಸಿಯಲ್ಲಿಲ್ಲ. ಸಾಗರಕ್ಕೆ ಸ್ಥಳಾಂತರವಾಗಿದ್ದಾರೆ. ಹಾಗಾಗಿ ಮುಂದೆ ಯಾವಾಗಲೋ ಚಿಕ್ಕಿ-ಕಾಕರನ್ನು ಭೇಟಿಯಾಗಲು ಶಿರಸಿಗೆ ಹೋದಾಗ ಹೊಸದಾದ ʼಲೋಕ ಧ್ವನಿʼಯನ್ನು ಕೈಯಲ್ಲಿ ಹಿಡಿದು ಓದಬಹುದು. ಮತ್ತೆ ಇನ್ನೂ ಹಳೆಯ ನೆನಪುಗಳು ಹೊರ ಬರಬಹುದು.

ಪರಿವರ್ತನೆ ( ಭಾಗ 1)

ಆಗಷ್ಟ್ 24, 2021

ಸ್ವಂತ ಮನೆಯಲ್ಲಿ ಹುಟ್ಟಿದವರಿಗೆ/ ಸ್ವಂತ ಮನೆಯನ್ನೇ ಸೇರಿದವರಿಗೆ ಭಾಡಿಗೆ ಮನೆಯಲ್ಲಿ ಇರುವವರ ತಲ್ಲಣಗಳು ಅರ್ಥವಾಗುತ್ತಾ? ಇದನ್ನು ಯೋಚಿಸುತ್ತಾ ಬೇರೆಯ ವಿಷಯಗಳು ತಲೆಗೆ ಬರುತ್ತಾ ಹೋದವು.

————-

ನಾನೆಂದೂ ಸ್ವಂತ ಮನೆಯನ್ನು ನೋಡಿದವಳಲ್ಲ. ಭಾಡಿಗೆ ಮನೆಯಲ್ಲಿ ಹುಟ್ಟಿ ಬದುಕಿನ ನಲವತ್ತು ವರ್ಷ ಭಾಡಿಗೆ ಮನೆಯಲ್ಲಿ ಕಳೆದಿರುವುದರಿಂದ, ಸ್ವಂತ ಮನೆಯಲ್ಲಿ ಹುಟ್ಟಿ, ಸ್ವಂತ ಆಸ್ತಿ ಇರುವ ಇವನು ಹೇಳುವ ಸ್ವಂತ ಮನೆಯ ಕನಸು ಯಾವತ್ತೂ ನನ್ನದಾಗಲಿಲ್ಲ. ಈಗ ಇಷ್ಟು ದೊಡ್ಡ ಇರುವ ಭಾಡಿಗೆ ಮನೆಯನ್ನು ಬಿಟ್ಟು ಇದರ ಅರ್ಧವಾಗಿರುವ ಸ್ವಂತ ಮನೆಗೆ ಹೋಗುವುದು ನನ್ನಲ್ಲಿ ಯಾವುದೇ ಖುಷಿಯನ್ನು, ಆಸಕ್ತಿಯನ್ನು ಹುಟ್ಟಿಸದೇ ಇರುವುದಕ್ಕೆ ಇದು ಕಾರಣವಾಗಿರಬಹುದು. ಆದರೆ ಮುಂಬಯಿಯಂತಹ ಶಹರದಲ್ಲಿ ಇಷ್ಟು ದೊಡ್ಡ ಮನೆ ಮತ್ತು ಇದಕ್ಕಿಂತ ಆಧುನಿಕ ಸೌಕರ್ಯಗಳು ಬೇಕು ಅಂದರೆ ಲಕ್ಷಗಳನ್ನು ಬಿಟ್ಟು ಕೋಟಿಯತ್ತ ಮುಖ ಮಾಡಬೇಕು. ಹಾಗೇ ಮಾಡಿದರೆ ದೊಡ್ಡ ಮನೆ ಸಿಗುತ್ತದೆ, ಆದರೆ ಈಗಿರುವ ಹಣಕಾಸಿನ ನೆಮ್ಮದಿ ಬಿಟ್ಟು ಹೋಗುತ್ತದೆ. ಇಲ್ಲವೇ, ಮುಂಬಯಿಯ ಪಕ್ಕದ ಊರಾದ ಈ ಥಾಣೆಯನ್ನೂ ಬಿಟ್ಟು ಇನ್ನೂ ದೂರದ ಕಲ್ಯಾಣ, ದೊಂಬಿವಿಲಿ ಕಡೆ ಹೋಗಬೇಕು. ಆದರೆ ಥಾಣೆಯ ಶಹರದ ಸೌಕರ್ಯಗಳೂ ಅಲ್ಲಿ ಸಿಗುವುದಿಲ್ಲ. ಒಳ್ಳೆಯ ಶಾಪಿಂಗ್‌ ಮಾಲ್‌ ಬೇಕು ಅಂದರೂ ಥಾಣೆಗೆ ಬರಬೇಕು. ಅದೂ ಬೇಡ ಅಂದರೆ ಹತ್ತು ಹದಿನೈದು ವರ್ಷ ಹಳೆಯ ಸೌಕರ್ಯಗಳಿಗೆ ಹೋಗಬೇಕು. ನನ್ನ ಸ್ನೇಹಿತ ಹೇಳಿದ ಹಾಗೆ, ನೀವು ದುಡ್ಡು ಕೊಟ್ಟಿದ್ದು ಮನೆಗಲ್ಲ, 2 ಎಕರೆ ಪ್ರೈವೇಟ್ ಕಾಡಿಗೆ, ಐದು ಸ್ವಿಮ್ಮಿಂಗ್‌ ಪೂಲುಗಳಿಗೆ, ಫುಟ್‌ ಬಾಲ್‌ ಸ್ಟೇಡಿಯಂಗೆ, … ( ನಾನು ಅವನ ಹತ್ತಿರ ಕೊಚ್ಚಿಗೊಂಡ ಆಧುನಿಕ ಸೌಲಭ್ಯಗಳು)

——

ಈಗ ಹೊಸ ಮನೆಗೆ ಹೊಸತು ಬೇಕು. ಇಲ್ಲಿ ಮಾಡಿಕೊಂಡಿರುವ ಹೆಚ್ಚಿನ ಪಿಠೋಪಕರಣಗಳನ್ನು ಮಾರುವುದು ಎಂದಾಗಿದೆ. ಇವೆಲ್ಲ ಮಾಡುತ್ತಿರುವಾಗ ನಾನೂ ದುಡಿಯುತ್ತ ಇದ್ದೆ. ನಮ್ಮದು 50:50 ಫಾರ್ಮುಲಾ. ಅರ್ಧ ದುಡ್ಡು ನಾನು ಹಾಕುತ್ತಾ ಇದ್ದೆ. ಪ್ರತಿ ಸಾಮಾನಿನ ಹಿಂದೆ ದುಡ್ಡು ಶೇಖರ ಮಾಡಿ ಹುಡುಕಾಡಿ ತೆಗೆದುಕೊಂಡ ಕತೆಗಳಿವೆ. ಪ್ರತಿ ಸಾಮಾನನ್ನೂ ತೆಗೆದು ಕೊಂಡಾಗಲೂ ಹೆಮ್ಮೆಯಿಂದ ನೋಡಿದ್ದಿದೆ. ಬೆಂಗಳೂರಿನಿಂದಲೂ ಮುಂಬಯಿಗೆ ತಂದುಕೊಂಡ ವಸ್ತುಗಳಿವೆ. ಈಗ ಮೊದಲಿನ ಹಾಗೇ ದುಡ್ಡು ಕೂಡಿಟ್ಟು ಸಾಮಾನು ಮಾಡುವ ಅಗತ್ಯವಿಲ್ಲ. ಆದರೆ ಈ ಮನೆಯಲ್ಲಿ ಬದುಕಿದ ಹನ್ನೊಂದು ವರ್ಷದ ನೆನಪು ಇಲ್ಲಿರುವ ಎಲ್ಲಾ ಸಾಮಾನುಗಳಲ್ಲಿವೆ. ಇದನ್ನೆಲ್ಲಾ ಬಿಟ್ಟು ಅಥವಾ ತೆಗೆದಿಟ್ಟು ಹೊಸದು ಮತ್ತೆ ಬದುಕಿನಲ್ಲಿ ತಂದು ಕೊಳ್ಳುವುದು ನನಗೆ ಕಷ್ಟ. ನಾನೂ ದುಡ್ಡು ಹಾಕುತ್ತಾ ಇದ್ದರೆ ಈ ಕಷ್ಟ ನನಗೆ ಆಗುತ್ತಿರಲಿಲ್ಲವೇನೋ. ಈಗ ಅವನ ಸ್ವಂತ ದುಡಿಮೆಯ ಮನೆ, ಪೂರ್ತಿ ಅವನದೇ. ಅಲ್ಲಿರುವ ಎಲ್ಲಾ ಹೊಸ ಸಾಮಾನುಗಳೂ ಪೂರ್ತಿ ಅವನದ್ದೇ ಆಗಲಿವೆ. ವಿನ್ಯಾಸದ ಐಡಿಯಾ ನನ್ನದೇ ಆದರೂ ನನಗೆ ಸಮಾಧಾನವಿಲ್ಲ. ನಿನ್ನೆ ಮನೆಯ ಬಾಗಿಲಿಗೆ ಬಿಲ್ಡರ್‌ ಅವನ ಹೆಸರಿನ ನಾಮ ಫಲಕ ಅಂಟಿಸಿ ಹೋಗಿದ್ದರು. ನಾನೂ ದುಡಿಯುತ್ತಾ ಅರ್ಧ ದುಡ್ಡು ಹಾಕುವ ಹಾಗಿದ್ದರೆ, ನನ್ನ ಹೆಸರೂ ಇದರಲ್ಲಿ ಬರುತ್ತಾ ಇತ್ತು ಎಂದೆಣಿಸದೇ ಇರಲಿಲ್ಲ. ಆದರೆ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡ ಇವನಿಗೆ, ಅವನ ಹೆಸರು ಇರುವ ಹೊಳೆಯುವ ಫಲಕ ಕೊಡುತ್ತಿರುವ ಖುಷಿಯನ್ನು ಬೇರೆ ಏನೋ ಹೇಳಿ ಹಾಳು ಮಾಡುವ ಮನಸ್ಸಾಗಲಿಲ್ಲ. ನೋಡಿ, ಎಲ್ಲಾ ಭಾವಗಳನ್ನು ಮುಚ್ಚಿಟ್ಟು, ಕಂಗ್ರಾಟ್ಸ್‌ ಅಷ್ಟೇ ಹೇಳಿದೆ.ಹಾಗಂತ ಇವನಷ್ಟು ದುಡಿದು, ಸ್ವಂತ ಮನೆ ನಾನು ಮಾಡುವುದಾದರೆ, ಇನ್ನೂ ಹತ್ತು ವರ್ಷಗಳು ಮಿನಿಮಮ್‌ ಆಗಿ ಬೇಕು. ಕೆಲಸಕ್ಕೆ ವಾಪಾಸ್ಸು ಸೇರಿದರೂ ಸಂಬಳ ಸಿಗುವುದು ಏಳು ವರ್ಷ ಹಿಂದೆ ಮಗುವಿಗಾಗಿ ಬಿಟ್ಟ ಕೆಲಸದ ಮೇಲೆಯೇ. ಏಳು ವರ್ಷದಲ್ಲಿ ಕೆಲಸ ಮಾಡುವ ವಿಧಾನವೇ ಬೇರೆಯಾಗಿದೆ. ಮತ್ತೆ ಹೊಸದನ್ನು ಕಲಿತು, ಅದರಲ್ಲಿ ಪರಿಣತಿ ಗಳಿಸಿ, ಸಂಬಳ ಜಾಸ್ತಿ ಮಾಡಿಕೊಳ್ಳುತ್ತ, ಹಣ ಕೂಡಿಟ್ಟು, … ಕೂದಲೂ ಇನ್ನೂ ಬೆಳ್ಳವಾಗಿ, ….. ಇದೆಲ್ಲಕ್ಕಿಂತ ಒಳ್ಳೆಯ ಕೆಲಸ, ಸ್ವಲ್ಪ ಕಷ್ಟವಾದರೂ ಇವನ ಜೊತೆ ಇವನ ಸ್ವಂತ ಮನೆಯಲ್ಲಿ ಹೆಂಡತಿ ಪಟ್ಟದ ಆಧಾರದ ಮೇಲೆ, ಇದು ತನ್ನದೂ ಮನೆ ಅನ್ನುವ ಸುಳ್ಳು ನಂಬಿಕೆಯನ್ನು ಬೆಳೆಸಿಕೊಂಡು ಆರಾಮಾಗಿ ಈಗ ಮಾಡುತ್ತಿರುವ ಹಣ ಬರದೇ ಇರುವ ಕೆಲಸಗಳನ್ನು ತೃಪ್ತಿಯಿಂದ ಮಾಡುತ್ತ, ಅದಕ್ಕೂ, ಎಲ್ಲದಕ್ಕೂ ಇವನದೇ ಸಂಬಳದ ಹಣವನ್ನು ವಿನಿಯೋಗಿಸುತ್ತಾ ಖುಷಿಯಾಗಿರುವುದು. ಗಂಡನ ಹಣ, ಆಸ್ತಿಯ ಮೇಲೆ ಹೆಂಡತಿಯ ಅಧಿಕಾರ ಇಲ್ಲ ಎಂದು ನಂಬುವ ನಾನು, ಕಾನೂನು ಮತ್ತು ಸಮಾಜ ಕೊಟ್ಟಿರುವ ಈ ಹಕ್ಕನ್ನು ಚಲಾಯಿಸುವುದನ್ನು ಕಲಿತು ಕೊಳ್ಳಬೇಕಿದೆ.

————-

ಇಲ್ಲಿ ಏನೂ ಬರೆದರೂ ಮತ್ತೆ ನಾಳೆ ಬೆಳಿಗ್ಗೆಯಿಂದ ಕಣ್ಣೆದುರು ಕಾಣುತ್ತಿರುವ ಸಾಮಾನುಗಳನ್ನು ಮಾರಲು ಮನಸ್ಸಾಗುತ್ತಿಲ್ಲ. ಮೊನ್ನೆ ಇಲ್ಲಿಯ ಸೊಸೈಟಿಯಲ್ಲಿ ಮಾರುತ್ತೇನೆ ಎಂದು ಫೋಷಿಸಿ, ಬಹಳ ಜನ ಕೇಳಿ, ಇದ್ದಕ್ಕಿದ್ದ ಹಾಗೆ ಮನೆ ಖಾಲಿ ಆಗಿ ಹೋಗುತ್ತೆ, ನನ್ನದು-ನಾನು ಖರೀದಿಸಿದ್ದು ಅನ್ನುವ ಎಲ್ಲದೂ ಬಿಟ್ಟು ಹೋಗುತ್ತದೆ ಅನ್ನುವುದನ್ನು ಅರಗಿಸಿಕೊಳ್ಳಲಾಗದೇ ಸುಮ್ಮನಾಗಿದ್ದೆ. ಇವನಿಗೂ ಕಳೆದ ಒಂದು ತಿಂಗಳಿನಿಂದ ದಿನಾ ನನಗೆ ಹೇಳಿ ಬೇಜಾರು ಬಂದಿದೆ. ನೀನಾಗೇ ಮಾರದಿದ್ದರೆ, ಯಾರಿಗಾದರೂ ಉಚಿತವಾಗಿ ಕೊಟ್ಟು ಹೋಗುತ್ತೇವೆ, ಆಮೇಲೆ ನೀನು ಏನೂ ಹೇಳಬಾರದು ಅನ್ನುವದೂ ಆಗಿದೆ. ಏನೇ ಮಾಡಿದರೂ ಇನ್ನು ಹದಿನೈದು ದಿನಗಳಲ್ಲಿ ಎಲ್ಲವೂ, ಎಲ್ಲಾ ನೆನಪುಗಳೂ ಬಿಟ್ಟು ಹೋಗಲಿವೆ.

——————-

ದುಡ್ಡೇ ದೊಡ್ಡಪ್ಪ?!

ಮಾರ್ಚ್ 2, 2021

ಇವನು ನಂಗೆ ಯಾವತ್ತೂ ಹೇಳ್ತಾ ಇರೋದು, ಇಷ್ಟು ಟಾಲೆಂಟ್ ಇದೆ, ಸುಮ್ನೆ ಕೂತು ವೇಸ್ಟ್ ಮಾಡಿಕೊಳ್ತೀಯ, ಏನಾದ್ರೂ ಮಾಡ ಬಾರದ ಅಂತ. ಆದರೆ ನನ್ನ ತಲೆಯಲ್ಲಿ ಹುಟ್ಟುವ ಏಷ್ಟೋ ಯೋಜನೆಗಳಿಗೆ ಜೀವ ಕೊಡೋದು ನಂಗೆ ಕಷ್ಟ. ನಂಗೆ ಕಮಿಟ್ ಮಾಡೋಕೆ ಕಷ್ಟ. ದಿನಾ ಒಂದೇ ತರಹ, ಒಂದೇ ಕೆಲಸ ಮಾಡೋಕೆ ಕಷ್ಟ. ಹೊಸ ಹೊಸದು ಮಾಡಬೇಕು ಅನ್ನಿಸ್ತಾ ಇರುತ್ತೆ. ಸ್ನೇಹಿತರು ಕಾಲ್ ಮಾಡಿದಾಗ ಹೇಳೋದು ಅಷ್ಟೇ, ಏನಕ್ಕೆ ಟ್ಯಾಲೆಂಟ್ ವೇಸ್ಟ್ ಮಾಡ್ಕೊತ್ತಿಯ, ಉಪಯೋಗಿಸು ಅಂತ.

ಹೋಗಲಿ, ಏನಾದರೂ ಮಾಡ್ತೀನಿ ಅಂತ ಅಂದರೆ ಮೊದಲ ಪ್ರಶ್ನೆ, ದುಡ್ಡು ಬರುತ್ತಾ? ಅಂತ. ನೀನು ದುಡ್ಡು ಬರೋದು ಮಾಡಲ್ಲ, ಕೆಲಸಕ್ಕೆ ಬಾರದ್ದು ಮಾಡ್ತಾ ಇರುತ್ತಿಯ ಅಂತ. ಮೊದಲು ಬ್ಲಾಗ್ ಬರೀತಿನಿ ಅಂತ ಹೇಳಿದ್ರೆ, ಅದರಲ್ಲಿ ದುಡ್ಡು ಬರುತ್ತಾ ಅಂತ. ಓನಲೈನ್ ಶಾಪ್ ಮಾಡ್ತೀನಿ ಅಂದರೆ, ಏಷ್ಟು ದುಡಿಯೋ ಪ್ಲಾನ್ ಇದೆ ಅಂತ. ಎಲ್ಲದನ್ನೂ ದುಡ್ಡಿನ ಮೇಲೆ ಅಳೆಯೋಕೆ ಆಗುತ್ತಾ? ನಾನು ಮೊದಲು ಕೆಲಸ ಮಾಡೋ ಕಂಪನಿಯಲ್ಲಿ ಸಹ ಇವರು ಇಷ್ಟೇ ದುಡ್ಡು ಕೊಡೋದು, ಅದಕ್ಕೆ ಇಷ್ಟೇ ಕೆಲಸ ಮಾಡ್ತೀನಿ ಅಂತ ಯೋಚಿಸಿದ್ದೇ ಇಲ್ಲ. ಹಾಗಂತ ಜಾಸ್ತಿ ಏನು ದುಡಿತ ಇರಲಿಲ್ಲ. ಜಾಸ್ತಿ ಸಂಬಳ ತೆಗೆದು ಕೊಳ್ಳುವವರು, ಜಾಸ್ತಿ ಕೆಲಸ ಅಂತ ರಾತ್ರಿ ಹೆಚ್ಚು ಹೊತ್ತು ಆಫೀಸಿನಲ್ಲಿ ನಿಲ್ಲುವಾಗ ಗೊಳಾಡುವುದನ್ನು ನೋಡಿದಾಗ ಮಜಾ ಅನ್ನಿಸ್ತಿತ್ತು. ಆದರೆ ಅದೆಲ್ಲ ಪ್ರೊಫೆಷನಲ್ ಇಸಂ ಅಂತೆ! ದುಡ್ಡಿಲ್ಲದೆಯೂ ಕೆಲಸ ಮಾಡಿದ್ರೆ, ಅದಕ್ಕೆ ಒಂದು ಘನತೆ ಇಲ್ಲ ಅಂತ ಹೇಳ್ತಾರೆ. ಆದರೆ ನಾನು ಯಾವಾಗಲೂ ಈ ಫನತೆ ಬಗ್ಗೆ ತಲೆಯೇ ಕೆಡಿಸಿ ಕೊಂಡಿಲ್ಲ. ಎಲ್ಲರೂ ಎಲ್ಲರ ಬಗ್ಗೆಯೂ ಹಿಂದೆ ಬಿಟ್ಟು ಆಡಿ ಕೊಳ್ಳುವಾಗ, ಪರಸ್ಪರ ಅಸೂಯೆ ಹೋಗೆ ಆಡ್ತಾ ಇರುವಾಗ ಈ ಘನತೆ ತೆಗೆದು ಕೊಂಡು ಏನು ಮಾಡುವುದು. ಸಾದಾ ಸೀದಾ, ಎಲ್ಲರ ಜೊತೆ ಸೇರಿ, ನಮ್ಮ ಕೆಲಸ ಮಾಡುತ್ತಾ, ಆದಷ್ಟು ಉಳಿದವರಿಗೆ ಸಹಾಯ ಮಾಡುತ್ತಾ ನೆಮ್ಮದಿಯಾಗಿ ಇರುವುದು ಒಳ್ಳೆಯದು. ಎಲ್ಲದನ್ನೂ ಲಾಭ ಮತ್ತು ನಷ್ಟ ಇದರಲ್ಲಿ ಅಳೆಯುವ ಅಗತ್ಯವೇ ಇಲ್ಲ.

ಹಾಗಂತ ದುಡ್ಡು ಅವಶ್ಯವೇ. ಜಾಸ್ತಿ ಜಾಸ್ತಿ ಮಾಡಬೇಕು ಅನ್ನುವ ಹಪಾಹಪಿ ಇಲ್ಲ. ಇರೋದರಲ್ಲಿ ಖುಷಿ ಇದೆ. ಈಗ ಮೊನ್ನೆ ಲೋಗೋ ಉಚಿತವಾಗಿ ಮಾಡಿ ಕೊಡ್ತೇನೆ ಅಂದಾಗ ಏನಕ್ಕೆ ದುಡ್ಡು ತೆಗೆದುಕೋ ಅಂತ ಅಂದರು. ನಂಗೆ ದುಡ್ಡು ಬೇಡ. ನಾನು ನನಗೆ ಏನು ಬರುತ್ತೋ ಅದನ್ನು ಮಾಡಿಕೊಟ್ಟೆ. ಹೊಸದು ಏನನ್ನೋ ಕಲಿಯುವ ಅವಕಾಶ ಆಯಿತು. ಹತ್ತು ಹೊಸ ವ್ಯಕ್ತಿಗಳ ಪರಿಚಯ ಆಯಿತು. ನನಗೆ ಯಾರೋ ಯಾವತ್ತೋ ಸಹಾಯ ಮಾಡಿರುತ್ತಾರೆ, ಇವತ್ತು ನಾನು ಬೇರೆ ಯಾರಿಗೂ ಸಹಾಯ ಮಾಡಿರುತ್ತೇನೆ. ಅಷ್ಟೇ. ಅದರ ಜೊತೆಗೆ ಅನೇಕ ಜನ ದುಡ್ಡು ಕೊಟ್ಟು ಲೋಗೋ ಮಾಡಿ ಕೊಡಿ ಅಂತ ಬಂದರು. ಒಂದು ಅವಕಾಶ ಸೃಷ್ಟಿ ಆಯಿತು. ನಾನು ಒಬ್ಬರಿಗೆ ಬಿಟ್ಟು ಉಳಿದವರಿಗೆ ಮಾಡಿ ಕೊಡಲಿಲ್ಲ. ಕೇಳಿದ ಉಳಿದವರನ್ನು ಫಾಲೋ ಅಪ್ ಸಹ ಮಾಡಲಿಲ್ಲ. ಒಟ್ಟಿನಲ್ಲಿ ಆ ಅವಕಾಶ ಉಪಯೋಗಿಸಲು ಮನಸ್ಸು ಬರಲಿಲ್ಲ, ಅದು ಬೇರೆ ವಿಷಯ. ಅದಕ್ಕೆ ಇವನು ದುಡ್ಡು ಬರೋ ಕೆಲಸ ನೀನು ಮಾಡಲ್ಲ ಅನ್ನೋದು.

ಇದೆಲ್ಲ ಏನಕ್ಕೆ ಪೀಠಿಕೆ ಹಾಕ್ತಾ ಇರೋದು ಅಂತ ಅಂದರೆ ದುಡ್ಡು ಇಲ್ಲದೇ ಫೇಸ್ ಬುಕ್ ಮಾರುಕಟ್ಟೆ ಮಾಡೋಕೆ ಆಗುತ್ತಾ ಅಂತ. ಮೊನ್ನೆ ಸ್ಕ್ರೀನ್ ಶಾಟ್ ಫೋಲ್ಡರ್ ನಲ್ಲಿ ನೋಡ್ತಾ , ಹೋದ ವರುಷ ಕನ್ನಡ ಮಹಿಳಾ ಮಾರುಕಟ್ಟೆ ಗ್ರೂಪ್ ನಲ್ಲಿ ನಾನು ಮಾಡಿಕೊಂಡ ಗಲಾಟೆ ಕಾಣ್ತು. ಆದರೆ ಅದರಲ್ಲಿ ನಾನು ಹೇಳಿದ ಹಾಗೆ ಇವತ್ತು ಆಗಿದ್ದು ಬೇರೆ ವಿಷಯ. ಮೆಂಬರ್ ಶಿಪ್ ಸಹ ಬಂತು, ಪ್ರದರ್ಶನ ಮಾರಾಟ ವ್ಯವಸ್ಥೆ ಸಹ ಆಯಿತು. ಇಷ್ಟು ವರ್ಷ ಫೇಸ್ ಬುಕ್ಕಿನಲ್ಲಿ ಏಷ್ಟೆಲ್ಲ ಬೇರೆ ಬೇರೆ ಗ್ರೂಪ್ ಗಳಲ್ಲಿ ಇದ್ದು  ನೋಡಿದ ಅನುಭವ ಅದು. ನಾವು ಆರ್ಕುಟ್ ಬಿಟ್ಟು ಸೀದಾ ಫೇಸ್ ಬುಕ್ ಗೆ ಬಂದವರು. ಹಳೆ ತಲೆಮಾರು. ಜಾಸ್ತಿ ಜಾಸ್ತಿ ಎಲ್ಲಾ ಆಟಗಳನ್ನು ನೋಡಿದ್ದಿವಿ.

ಈ ಆಟ ಹೇಗೆ ಇರುತ್ತೆ ಅಂದರೆ, ಒಂದು ಪೋಸ್ಟ್ ಗೆ ನೂರು ತೆಗೆದುಕೊಂಡರೆ, ದಿನ ಇಪ್ಪತ್ತು ಸೇಲ್ ಪೋಸ್ಟ್ ಬಂದರೆ ಎರಡು ಸಾವಿರ, ವಾರಕ್ಕೆ ಹತ್ತು ಸಾವಿರ. ಇಲ್ಲಾ, ನೂರು ಜನ ಮಾರಾಟಗಾರರನ್ನು ಒಟ್ಟು ಮಾಡಿ ತಲಾ ಐದನೂರು ತೆಗೆದು ಕೊಂಡರೆ ಐವತ್ತು ಸಾವಿರ. ಅದನ್ನು ವರ್ಷಕ್ಕೆ ನಾಲ್ಕು ಬಾರಿ ತೆಗೆದುಕೊಂಡರೆ ಅಥವಾ ಒಂದೇ ಬಾರಿ ಅವರವರ ಲೆಕ್ಕಾಚಾರ. ಇವತ್ತು ಸಮಯಕ್ಕೂ ದುಡ್ಡು ಇದೆ. ಇಲ್ಲಿಂದ ಅಲ್ಲಿ ಸೂಜಿ ಎತ್ತಿ ಇಡೋಕು ದುಡ್ಡು ಕೊಡಬೇಕು. ಇದು ಒಂದು ಸ್ಯಾಂಪಲ್ ಲೆಕ್ಕ. ಈಗ ಈ ದುಡ್ಡು ಮಾಡೋ ಆಟ ಬೇಡ.

ಹಾಗಾಗಿ ಒಂದು ಹೊಸ ಆಟ ಶುರು ಮಾಡಿಕೊಳ್ಳೋಣ ಅಂತ. ಫೇಸ್ ಬುಕ್ ‘ ಉಚಿತ ‘  ಆಗಿರುವಾಗ ಗ್ರೂಪ್ ಏನಕ್ಕೆ ‘ಉಚಿತ ‘ ಆಗಿರಬಾರದು? ಅನ್ನೋದು ನನ್ನ ಥಿಯರಿ. ನಾಳೆ ನಡೆಸೋಕೆ ಟೀಮ್ ಮಾಡಬೇಕಾ, ಅವರಿಗೆ ಸಂಬಳ ಅಂತ ದುಡ್ಡು ಬೇಕಾ, ಆಗ ಸೇಮ್ ಟು ಸೇಮ್ ‘ಫೇಸ್ ಬುಕ್ ಫಾರ್ಮುಲಾ’ ಉಪಯೋಗಿಸಬಹುದಲ್ಲ!  ಹೇಗೆ ಅಂತ ಗೊತ್ತಾಗಬೇಕು ಅಂತಿದ್ರೆ ಗ್ರೂಪ್ ಸೇರಿ, ಹೇಳ್ತೀನಿ.

ಮಹಿಳೆಯರಿಗೆ ಮಾತ್ರ ಎಂಬ ಬೋರ್ಡ್ ಇರೋದರಿಂದ ಇದನ್ನು ಓದುತ್ತ ಇರುವವರು ಪುರುಷ ಮಣಿಗಳಾಗಿದ್ದರೆ, ನಿಮ್ಮ ಮಹಿಳಾ ಮಣಿಗಳಿಗೆ ಹೇಳಿ, ಸೇರಿಸಬಹುದು. ಸೇರುವುದಕ್ಕೆ ಮತ್ತೆ ಮಾರುವುದಕ್ಕೆ ದುಡ್ಡಿಲ್ಲ ಇದರಲ್ಲಿ. ಇವತ್ತಿಗೂ ಹಾಗೂ ಮುಂದೆ ಸಹ. ಇದು ನನ್ನ ಮಾತು. ಅದಕ್ಕೆ ನನ್ನ ಬ್ಲಾಗ್ನಲ್ಲಿ ಬರೆದುಕೊಳ್ತಾ ಇದ್ದೀನಿ.

ಇದೆಲ್ಲ ಹೋಗಲಿ, ನಿಮಗೆ ಏನು ಅನ್ನಿಸುತ್ತೆ ದುಡ್ಡು ತೆಗೆದುಕೊಳ್ಳದೇ ಕೆಲಸ ಮಾಡಿದ್ರೆ ಅದಕ್ಕೆ ಘನತೆ ಇರುವುದಿಲ್ಲವೇ? ಸೇವೆ ಅಂತ ಮಾಡಿದರೆ, ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಆಗಲಿ ಅಂತ ಮಾಡಿದರೆ? ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡಬೇಕು ಅಂತ ಮಾಡಿದರೆ? ಅದರಲ್ಲಿ ಸಹ ದುಡ್ಡೇ ದೊಡ್ಡಪ್ಪ ಆಗಬೇಕಾ? ಹೇಳಿ.

ಅ ಪೊಲಿಟಿಕಲ್

ಫೆಬ್ರವರಿ 5, 2021

ಕಾಲೇಜು ದಿನಗಳ ಕತೆಯಿದು. (2001-2)
ನನ್ನ ಸ್ನೇಹಿತೆ ಎಬಿವಿಪಿ ಸಂಘಟನೆಯಲ್ಲಿ ಮೊದಲಿನಿಂದಲೂ ಸಕ್ರಿಯಳು. ಕಾಲೇಜಿನಿಂದ ಒಂದು ಕಾರ್ಯಕ್ರಮಕ್ಕೆ ಅಂತ ನಾನು ಅವಳು ಓಡಾಡ್ತಾ ಇರಬೇಕಾದರೆ, ಅವಳಿಗೆ ಆ ದಿನ ಸಂಘಟನೆಯ ಕಚೇರಿಗೆ ಹೋಗಬೇಕಿತ್ತು. ಹಾಗಾಗಿ ಜೊತೆಗೆ ನಾನು ಹೋದೆ. ಅಲ್ಲಿ ಆ ವಲಯವನ್ನು ನೋಡಿಕೊಳ್ಳುತ್ತಿದ್ದ ಸಂಯೋಜಕರು ಇದ್ದರು. ಅವಳಿಗೆ ಚೆನ್ನಾಗಿ ಪರಿಚಯ ಇದ್ದ ಕಾರಣ ನಾನೂ ಅವರ ಜೊತೆ ಮಾತನಾಡುವಂತಾಯಿತು. ಆಮೇಲೆ ಕಾಲೇಜು ಮುಗಿದ ಮೇಲೆ ಅವಳೇ ಜೊತೆಗೆ ಅಲ್ಲಿ ಕರೆದು ಕೊಂಡು ಹೋಗ್ತಾ ಇದ್ದಳು.

ಆ ಹೊತ್ತಲ್ಲಿ ಅವರ ಕಡೆಯಿಂದ ಒಂದು ಕಾರ್ಯಕ್ರಮ ಮಾಡುತ್ತ ಇದ್ದು ಈ ಸಲ ನೀನು ನಿರೂಪಣೆ ಮಾಡ್ತೀಯ ಅಂತ ಕೇಳಿದರು. ಈ ಮೊದಲೇ ಕಾಲೇಜಿನಲ್ಲಿ ನಿರೂಪಣೆ ಮಾಡ್ತಾ ಶ್ರೀ, ಶ್ರೀಮತಿ ಉಪಯೋಗಿಸದೆ ಸಂಬೋಧನೆ ಮಾಡಿ ಪ್ರಿನ್ಸಿ ಯಿಂದ ಹೇಳಿಸಿ ಕೊಂಡಿದ್ದ ನಾನು ಸ್ವಲ್ಪ ಹಿಂಜರಿಕೆಯಿಂದಲೇ ಒಪ್ಪಿದೆ. ನಾನು ಜೊತೆಗೆ ಇರ್ತೀನಿ, ಚೆನ್ನಾಗಿ ಆಗುತ್ತೆ ಅಂತ ಅವರು. ಕೊನೆಗೆ ಮಾಡಿಯೂ ಆಯಿತು. ಶಿರಸಿಯ ಮಾರಿಕಾಂಬಾ ಸಭಾ ಭವನದಲ್ಲಿ ಇತ್ತು ಎಂಬ ನೆನಪು ಮಾತ್ರ ಇದೆ. ಹೇಗಾಯಿತು ಅಂತ ಗೊತ್ತಿಲ್ಲ. ಚೆನ್ನಾಗಿಯೇ ಆಗಿತ್ತು ಅಂದುಕೊಂಡಿದ್ದೆ. ಆದರೆ ಅದು ಕಾಲೇಜು ಬಿಟ್ಟು ಹೊರಗಡೆ ಮೊದಲ ಬಾರಿ ಮತ್ತು ಕೊನೆಯ ಬಾರಿ ಮಾಡಿದ ನಿರೂಪಣೆ.

ಯಾಕೆ ಅಂದ್ರೆ ಅಲ್ಲಿ ಒಂದು ಯಡವಟ್ಟು ಆಯಿತು. ಅದೂ ಕಾರ್ಯಕ್ರಮ ಮುಗಿದ ಮೇಲೆ, ಸ್ನೇಹಿತನೊಬ್ಬ ಹೇಳಿದ ಮೇಲೆ ಗೊತ್ತಾಗಿದ್ದು.  ಪ್ರತಿ ಸಲ ಕಾರ್ಯಕ್ರಮ ನಿರೂಪಣೆ ನನ್ನ ಸ್ನೇಹಿತೆ ಮಾಡ್ತಾ ಇದ್ದು, ಈ ಸಲ ನನಗೆ ಸಿಕ್ಕಿದ್ದಕ್ಕೆ ಅವಳಿಗೆ ಕೋಪ ಬಂದಿದೆ ಅಂತ. ಅದೂ ಮೊನ್ನೆ ಮೊನ್ನೆ ಪರಿಚಯ ಆದ ನನಗೆ. ನಾನು ಆ ನಿಟ್ಟಿನಲ್ಲಿ ಯೋಚನೆ ಮಾಡಿರಲಿಲ್ಲ. ನಾ ಅಲ್ಲಿ ಹೋದೆ, ಅವರು ಮಾಡಿ ಅಂದರು, ನನ್ನ ಸ್ನೇಹಿತೆ ಕರೆದು ಕೊಂಡು ಹೋಗಿದ್ದಕ್ಕೆ ಅವಳಿಗೆ ಸಹ ಒಪ್ಪಿಗೆ ಇದೆ ಅಂತಲೇ ಅಂದು ಕೊಂಡಿದ್ದೆ.

ಆಮೇಲೆ ನಾನೂ ಅವರ ಆಫೀಸಿನ ಕಡೆ ತಲೆ ಹಾಕೋಕೆ ಹೋಗಿಲ್ಲ. ಆಗ ಎಬಿವಿಪಿ, ಎಸ್ ಎಫ್ ಐ ಅಂತ ಗೊತ್ತಿತ್ತೇ ಹೊರತು, ಇವತ್ತಿನ ತರಹ ಅದಕ್ಕೂ ರಾಜಕಾರಣಕ್ಕೆ ಏನೂ ಸಂಬಂಧ ಅನ್ನೋದು ಗೊತ್ತಿರಲಿಲ್ಲ .

ಆಮೇಲೆ ಒಂದು ದಿನ ಅವರೆಲ್ಲ ಸೇರಿ ಟೂರ್ ಹೋಗ್ತಾ ಇದ್ದಿದ್ದಕ್ಕೆ, ನನ್ನ ಸ್ನೇಹಿತೆ ಜೊತೆಗೆ ಬರೋಕೆ ಕೇಳಿದಳು. ಈಗಾಗಲೇ ನಾನು ಅಲ್ಲಿ ಹೋಗುವುದನ್ನು ಕಡಿಮೆ ಮಾಡಿರುವುದರಿಂದ ಅವಳೂ ಸಹ ಮೊದಲಿನಂತೆ ನನ್ನ ಜೊತೆ ಖುಷಿಯಲ್ಲಿ ಇದ್ದಳು. ಆದರೆ ನಾನೂ ಟೂರ್ ಗೆ ಹೋಗಲಿಲ್ಲ. ಮತ್ತು ಅಲ್ಪ ಸ್ವಲ್ಪ ಇದ್ದ ಕನೆಕ್ಷನ್ ಸಹ ಬ್ರೇಕ್ ಆಯಿತು.

ಆ ಹೊತ್ತಲ್ಲಿ ಅಮ್ಮ ಹೇಳಿದ ಮಾತು ನೆನಪಿದೆ. ನಾವು ಬ್ಯುಸಿನೆಸ್ ನಲ್ಲಿ ಇದ್ದವರು. ನಮ್ಮ ಪ್ರೆಸಿಗೆ ಬಿಜೆಪಿ ಯವರೂ ಬರುತ್ತಾರೆ, ಕಾಂಗ್ರೆಸ್ ನವರು ಬರುತ್ತಾರೆ. ಈಗ ನೀನು ಜಾಸ್ತಿ ಎಬಿವಿಪಿ ಜೊತೆ ಗುರುತಿಸಿ ಕೊಂಡರೆ ಮುಂದೆ ಕಾಂಗ್ರೆಸ್ ನವರೂ ನಮ್ಮಲ್ಲಿ ಬರಲ್ಲ. ಹಾಗಂತ ಇದನ್ನು ಯಾರೂ ಸಹ ಪಬ್ಲಿಕ್ ಆಗಿ ಹೇಳಲ್ಲ. ಸಮಾಜದ ಸೂಕ್ಷ್ಮಗಳು ಇವು. ನಮ್ಮ ಅಜ್ಜ ಹೇಗೆ ರಾಜಕೀಯ ಬಣಗಳಿಂದ ತೊಂದರೆಗೆ ಒಳಗಾಗ ಬೇಕಾಯಿತು ಅನ್ನುವುದನ್ನು ವಿವರಿಸಿದರು. 

ಆದರೆ ನಾನು ಆಗ ಅಮ್ಮನ ಮಾತನ್ನು ಕೇಳದೇ ಎಬಿವಿಪಿಯಲ್ಲಿ ಇದ್ದಿದ್ದರೆ ಏನಾಗ್ತಾ ಇತ್ತು ಗೊತ್ತಿಲ್ಲ. ಆದರೆ ಅದನ್ನು ಬಿಟ್ಟು ಬಂದಿದ್ದಕ್ಕೆ ನನ್ನ ಗೆಳತಿ ನನಗೆ ವಾಪಾಸ್ಸು ಸಿಕ್ಕಿದಳು. ಕೊನೆಗೆ ಅಷ್ಟೇ ಬೇಕಾಗಿದ್ದು.

ಅದೂ ಇವತ್ತಿಗೂ ನಿಜ ಕೂಡ. ನಾವು ಒಂದು ಪಕ್ಷ, ಪಂಥ ಅಂತ ಗುರುತಿಸಿ ಕೊಂಡರೆ ಉಳಿದವರು ನಾವು ಏಷ್ಟೋ ಒಳ್ಳೆಯದೇ ಮಾಡಿರಲಿ, ಸಾಧಿಸಿರಲಿ ಅದನ್ನೆಲ್ಲ ಪ್ರತಿ ಪಕ್ಷ, ಪ್ರತಿ ಪಂಥ ಅಂತ ಒಂದೇ ಕ್ಷಣದಲ್ಲಿ ನಿರ್ನಾಮ ಮಾಡಿ ಹಾಕುತ್ತಾರೆ. ಇದು ರಾಜಕೀಯ ಪಕ್ಷ ಮತ್ತು ಸಿದ್ದಾಂತ ಅನ್ನೋದೇ ಆಗ ಬೇಕಿಲ್ಲ. ಎರಡೂ ಗುಂಪುಗಳ ಮಧ್ಯೆ ಯಾರದ್ದು ಬಲ ಇರುತ್ತೋ ಅವನೇ ಮೇಲುಗೈ.

ಹಾಗಂತ ಸುಮ್ಮನಿರುವುದು  ಇವತ್ತಿನ ದಿನಗಳಲ್ಲಿ ಸಾಧ್ಯವಿಲ್ಲ. ಆದರೆ ಏನೇ ಹೇಳಿದರೂ ಅದನ್ನು ಯಾವ ಬಣಕ್ಕೆ ಸೇರಿದವರು ಅನ್ನುವುದರ ಮೇಲೆ ಆ ಮಾತಿಗೆ ಪ್ರಾಮುಖ್ಯತೆ ಬರುವುದನ್ನು ತಡೆಯುವುದು ಸಹ ಸಾಧ್ಯವಿಲ್ಲ.

ಒಂದು ಚೌತಿ ಕತೆ

ಸೆಪ್ಟೆಂಬರ್ 1, 2019

ಈ ಚೌತಿ ಒಂಥರಾ ಹಳೇ ನೆನಪುಗಳನ್ನು ಎತ್ತಿ‌ಹಾಕಿ ಬಿಡುತ್ತೆ. ಬಹುಶಃ ಬದುಕಿನ ಮೊದಲ ಇಪ್ಪತ್ತಾರು ವರ್ಷ ಗಳಲ್ಲಿ ಕಂಡ ಅಬ್ಬರದ ಹಬ್ಬ ಇದಾಗಿತ್ತು. ಆಗ ವರ್ಷದ ದೊಡ್ಡ ಹಬ್ಬ ಅಂದರೆ ಚೌತಿ. ಅದೂ ಅಜ್ಜನಮನೆಯ ಚೌತಿ. ಹೊಸ ಅಂಗಿ, ಎಲ್ಲರಿಗೆ ಕೊಡಲು ಬಳೆ, ಅದಕ್ಕಿಂತ ಜಾಸ್ತಿ ‌ನಾವೆಲ್ಲ ಸೇರಿ ರಾತ್ರಿ ಇಡೀ ಮಾಡುತ್ತಿದ್ದ ಗಣಪತಿ ಮಂಟಪ. ಮೊದಲು ಮಾವ ಅವನ ಸ್ನೇಹಿತರ ಜೊತೆ ಸೇರಿ ಪ್ರತಿ ವರ್ಷ ಹೊಸತೇನಾದರೂ ಮಾಡುತ್ತಿದ್ದ. ಅವರು ಫ್ಯಾನ್ ಉಪಯೋಗಿಸಿ ಮಾಡಿದ್ದ ರೊಬೊಟ್ ಇನ್ನೂ ನೆನಪಿದೆ. ತದನಂತರ ನಾವು ಬೆಳೆದ ಹಾಗೇ ಅಣ್ಣಂದಿರ ಜೊತೆ ಸೇರಿ ನಾವೆಲ್ಲ ಮಾಡುತ್ತಿದ್ದದ್ದು. ಮರುದಿನ ಊರೆಲ್ಲ ತಿರುಗಿ ಯಾರ ಮನೆಯ ಗಣಪತಿ ಅಲಂಕಾರ ಹೊಸದಾಗಿದೆ, ಚೆನ್ನಾಗಿದೆ ಎಂದು ಚರ್ಚಿಸುತ್ತಿದ್ದದ್ದು.

ಆಮೇಲೆ ಊರವರೆಲ್ಲ ಗಣಪತಿ ದೇವಸ್ಥಾನದಲ್ಲಿ ಸೇರಿ, ಊರ ಗಡಿಯಾದ ಚೌಡಿ ಕಟ್ಟೆಯ ಜೊತೆ ನಡೆದು‌ಹೋಗುತ್ತಿದ್ದು. ಅಲ್ಲಿ ಈಡುಗಾಯಿ ಒಡೆಯುವ ಚಿಕ್ಕ ಸ್ಪರ್ಧೆಯೂ ಇರುತಿತ್ತು. ಇದು ದೀಪಾವಳಿಗಾಗಿತ್ತಾ, ನೆನಪಾಗುತ್ತಿಲ್ಲ. ಒಂದು ವರ್ಷ ಅಲ್ಲಿ ಎಲ್ಲರನ್ನೂ ಸೇರಿಸಿ ದುಡ್ಡು ಕಲೆ ಹಾಕಿ ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮವೂ ನೆನಪಿದೆ.

ನನಗೆ ಏನು‌ ಹುಚ್ಚೊ‌ ಗೊತ್ತಿಲ್ಲ. ಎಲ್ಲರನ್ನೂ ಸೇರಿಸಿ ಈ ತರಹದ ಕಾರ್ಯಗಳನ್ನು ಮಾಡುವುದು. ಮದುವೆಯ ನಂತರ ಇವನ ಮನೆಯಲ್ಲಿ ಮಾಡುವ ನವರಾತ್ರಿಯ ಮಕ್ಕಳ ಕಾರ್ಯಕ್ರಮಗಳು ಇದರ ಮುಂದುವರೆದ ಭಾಗವಾಗಿರಬಹುದು.

ಹಾಗೇ ಗಣಪತಿಯ ಅಲಂಕಾರದ ವಿಷಯಕ್ಕೆ ಬಂದರೆ ಅಪ್ಪನ ಮನೆ, ಊರಲ್ಲಿ ಮಾಡಿದ ಒಂದೇ ಗಣಪತಿ ನೆನಪಿದೆ. ಆಗ ಚಿಕ್ಕಪ್ಪ ಮತ್ತು ದೊಡ್ಡಪ್ಪ ಜೊತೆಗೆ ಇದ್ದರು ಮತ್ತು ಚಿಕ್ಕಪ್ಪನಿಗೆ ಮದುವೆಯಾಗಿರಲಿಲ್ಲ. ಮನೆಯೂ ಒಡೆದಿರಲಿಲ್ಲ. ಆಗ ಬಣ್ಣ ಬಣ್ಣದ ಕಾಗದಗಳಲ್ಲಿ ಮಾಡಿದ್ದ ಅಲಂಕಾರ ನೆನಪಿದೆ. ಜಾಸ್ತಿ ಹಬ್ಬದ ಹಿಂದಿನ‌ ದಿನ ಸಾಗರಕ್ಕೆ ಹೋಗುತ್ತಿರಲಿಲ್ಲವಾಗಿದ್ದಕ್ಕೆ, ಒಂದೇ ಹಬ್ಬ ನೆನಪಿರುವುದು ಸಹಜ ಅನ್ನಿಸುತ್ತದೆ. ಹಬ್ಬದ ಮಾರನೇ ದಿನ ಹೋಗುತ್ತಿದ್ದದ್ದು, ಅಲ್ಲಿಯ ಕೆರೆಯ ಕಟ್ಟೆಯಲ್ಲಿ ಎಲ್ಲರೂ ಸಾಲಾಗಿ ಕೆಂಪು ಗಣಪತಿ ನಿಲ್ಲಿಸುತ್ತಿದ್ದದ್ದು ನೆನಪಿದೆ.

ಅಲ್ಲಿಯ ಅಂದರೆ ಸಾಗರದ ಗಣಪತಿಗೆ ಮತ್ತು ಶಿರಸಿಯ ಗಣಪತಿಗೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ಬಣ್ಣ ಮತ್ತು ಆಕಾರದಲ್ಲಿ. ಇಲ್ಲಿ ಮುಂಬಯಿಗೆ ಬಂದ ಮೇಲೆ ಶಿರಸಿಯ ಗಣಪತಿಗೆ ಮತ್ತು ಇಲ್ಲಿ ಮಾಡುವ ಗಣಪತಿಯ ಮೂರ್ತಿಗಳಿಗೆ ಸಾಮ್ಯವಿದೆಯೆಂದು ಅನ್ನಿಸುವುದು. ಹೆಚ್ಚಾಗಿ ಇವೆರಡೂ ಮುಂಬಯಿ ಪ್ರಾಂತ್ಯವಾಗಿದ್ದಕ್ಕಾ, ಈ ಕೊಂಕಣ್ ಸೀಮೆ ನಮ್ಮವರೆಗೂ ಬಂದಿರಬಹುದು. ಅದೇ ಸಾಗರವು ಕೆಳದಿ, ಮೈಸೂರಿಗೆ ಸೇರಿದ್ದಕ್ಕೆ ಎರಡೂ ಊರಲ್ಲೂ ಇಷ್ಟು ವ್ಯತ್ಯಾಸ ಬೆಳೆದಿರಬಹುದು, ಗೊತ್ತಿಲ್ಲ.

ಆದರೆ ಶಿರಸಿಯ ಅಜ್ಜನ ಮನೆಯ ಗಣಪತಿಯ ವಿಜ್ರಂಭಣೆ ಅಲ್ಲಿ ಇರುತ್ತಿದ್ದಿಲ್ಲ. ಸಾಗರದ ಅಜ್ಜಿ ಮಾಡುತ್ತಿದ್ದ ಮೊದಕ ಅದೂ ಹಿಟ್ಟಿನ ಗಂಟು ಹಾಕಿ ಮತ್ತು ಬೇಯಿಸಿದ ಕಾಯಿ ಕಡುಬಿನ ರುಚಿ ಮಾತ್ರ ಈಗಲೂ ನೆನಪಿದೆ.

ಶಿರಸಿಯ ಅಜ್ಜನಮನೆಯಲ್ಲಿ ( ಮುಂಡಿಗೇಸರ) ದಿನಾ ಏಷ್ಟು ಜನ ಊಟಕ್ಕೆ ಆಗುತ್ತಿದ್ದರು. ಈಗ ದೊಡ್ಡವರಾದ ಮೇಲೆ ಆ ಅಜ್ಜ, ಆಮೇಲೆ ಮಾವ ಬರೀ ಅಡಿಕೆ ತೋಟದ ಕಮಾಯಿಯಲ್ಲಿ ಅಷ್ಟೆಲ್ಲಾ ಮಾಡತ್ತಿದ್ದದ್ದು ಈಗ ಗ್ರೇಟ್ ಅನ್ನಿಸುತ್ತದೆ. ಅಮ್ಮಮ್ಮ ಮತ್ತು ಅತ್ತೆ ಸಹ. ಬಂದ ಅಷ್ಟೂ ಜನಕ್ಕೆ ಊಟೋಪಚಾರದಿಂದ ಹಿಡಿದು, ಹಬ್ಬದ ಅಷ್ಟೂ ಬಗೆ ಬಗೆಯ ನೈವೇದ್ಯ ಗಳನ್ನು ಮಡಿ ಬಟ್ಟೆ ಯಲ್ಲಿ ಮಾಡುತ್ತಿದ್ದದ್ದು!

ಅಲ್ಲಿ‌ ಎಲ್ಲರ ಮನೆಯಲ್ಲೂ ಡಬ್ಬಿಗಟ್ಟಲೇ ಚಕ್ಕಲಿ ಮತ್ತು ಹಬ್ಬದ ಹಿಂದಿನ‌ ದಿನಗಳಲ್ಲಿ ಆಗುವ ಚಕ್ಕಲಿ ಕಂಬಳ. ಎಲ್ಲದಕ್ಕೂ ಮಿಗಿಲಾಗಿ ಮಜಾ ಅನ್ನಿಸುವುದು, ಅಲ್ಲಿ ಗಣಪತಿಯಲ್ಲಿ ಒಡೆ ಏನಕ್ಕೆ ಮಾಡುತ್ತಿದ್ದರು ಎಂದು. ಮೂಲತಃ ಶ್ರಾದ್ಧಕ್ಕೆ ಮಾಡುವ ತಿನಿಸೊಂದನ್ನು ಹಬ್ಬಕ್ಕೆ ಮಾಡುವುದು. ಇದೂ ಗೊತ್ತಿಲ್ಲ.

ಈ ಗಂಗೂ ಬಾಯಿ, ಭೀಮ್ ಸೇನ್ ಜೋಶಿ ಎಲ್ಲ ಜಾಸ್ತಿ ಕೇಳಿದ್ದೆ ಅಜ್ಜನ ಮನೆಯಲ್ಲಿರಬಹುದು. ಆಗ ಎಲ್ಲರಿಗೂ ಕ್ಯಾಸೆಟ್ ಕಲೆಹಾಕುವ ಹವ್ಯಾಸ. ಮನೆಯಲ್ಲಿ ಎಲ್ಲ ಸಂಗೀತಾಸಕ್ತರೂ ಹಾಗೂ ಅಭ್ಯಾಸ ಮಾಡಿದವರೂ ಇದ್ದಿದ್ದಕ್ಕೆ ಹೆಚ್ಚಾಗಿ ಕ್ಲಾಸಿಕಲ್ ಸಂಗೀತ ಗಣಪತಿಯ ನಾಲ್ಕು ದಿನ ಚಾಲೂ ಇರುತ್ತಿತ್ತು. ಆಮೇಲೆ ಅಣ್ಣನ‌ ಜಮಾನೆಯಲ್ಲಿ ಅದೂ ಹಿಂದೀ ಚಿತ್ರಗೀತೆಗಳಿಗೆ ತಿರುಗಿತ್ತು.

ಹಬ್ಬದ ಕೊನೆಯ ದಿನ ಪಟಾಕಿಯ ಗೌಜು. ಅಂದಿಗೂ ಇಂದಿಗೂ ಪಟಾಕಿಯ ಅಲರ್ಜಿ ಯಿರುವ ನಾನೂ ಸಹ ಆ ತಿರುಗುವ ನೆಲಚಕ್ರ, ಹಾವು, ಹೂವು ಎಲ್ಲ ಆಸಕ್ತಿಯಿಂದ ನೋಡುತ್ತಿದ್ದೆ. ಎಲ್ಲ ಸಡಗರವೂ ನಿಲ್ಲುತ್ತಿದ್ದು ಮನೆಯ ಎದುರಿಗಿನ ಹೊಂಡದಲ್ಲಿ ಗಣಪತಿ, ಬಪ್ಪಾ ಮೊರೆಯಾ ಎಂಬ ಕೂಗಿನಲ್ಲಿ ಮರೆಯಾದಾಗ. ಈಗಲೂ ಸಂಭ್ರಮದ ಕೊನೆಯ ಸಾಲಿಗೆ ಎದೆ ಕಟ್ಟಿ, ಕಣ್ಣಂಚು ಒದ್ದೆಯಾಗುತ್ತದೆ. ಹಮ್.

ಹಾಗಂತ ಎಲ್ಲವಯ ಮುಗಿಯತ್ತಿರಲಿಲ್ಲ. ಶಿರಸಿಯ ಪೇಟೆ ಗಣಪತಿ ನೋಡುವ ಸಂಭ್ರಮ ಶುರುವಾಗುತ್ತಿತ್ತು. ದೇವಿಕೆರೆಯ ಚಡ್ಡಿ ಗಣಪತಿ, ಅದರ ಹಿಂದಿನ ಶಬರಿ ಮಲೈ ಗಣಪತಿ, ಜ್ಯೂ ಸರ್ಕಲ್ ಗಣಪತಿ, ಕೆಇಬಿ ಗಣಪತಿ, ಬಸ್ ಸ್ಟ್ಯಾಂಡ್ ಗಣಪತಿ, ನಟರಾಜ ಗಲ್ಲಿ ಗಣಪತಿಗಳು, ರಾಯರ ಪೇಟೆ ಗಣಪತಿ, ನೀಲೆಕಣಿ ಗಣಪತಿ,… ಕೊನೆಯ ದಿನದಲ್ಲಿ ಮೆರವಣಿಗೆಯ ಜೊತೆ ಸಾಗುವ ದೊಡ್ಡ ದೊಡ್ಡ ಗಣಪತಿಗಳು. ಮುಂಬಯಿಗೆ ಬಂದ ಮೇಲೆ ದೊಡ್ಡ ಗಣಪತಿ ಹೇಗಿರುತ್ತದೆ ಎಂದು ಗೊತ್ತಾದರೂ, ಬಾಲ್ಯ ಮತ್ತು ಯೌವನದಲ್ಲಿ ಶಿರಸಿಯದ್ದೇ ದೊಡ್ಡ ಗಣಪತಿಯಾಗಿತ್ತು. ಅಲ್ಲಿ ಇಲ್ಲಿಯ ತರಹ ಎಲ್ಲ ಸೇರಿ‌ ಕುಣಿಯುತ್ತಿರಲಿಲ್ಲ. ಅದೂ ಹೆಂಗಸರೂ ರಸ್ತೆಯಲ್ಲಿ ಮನಸ್ಸು ಬಿಚ್ಚಿ ಕುಣಿಯುವುದು ಇನ್ನೂ ನಾನು ಅರಗಿಸಿಕೊಂಡಿಲ್ಲ. ಅಲ್ಲಿ ಮುಖ್ಯ ರಸ್ತೆಯಾದ ಸಿ.‌ಪಿ. ಬಝಾರಿನಲ್ಲೇ ಜಾಸ್ತಿ ಕಾಲ ಮನೆ ಇದ್ದಿದ್ದಕ್ಕಾಗಿ ಎಲ್ಲ ಗಣಪತಿಗಳ ಪ್ರೊಸೆಷನ್ ನೋಡಲು ಸಿಗುತ್ತಿತ್ತು. ಅನೇಕ‌ ಜಾನಪದ ತಂಡದವರನ್ನು ಪರಿಚಯಿಸಿದ್ದು ಸಹ ಇದೇ ಗಣಪತಿಯೇ.

ಈಗ ಇವೆಲ್ಲ ನೋಡದೇ ವರ್ಷಗಳಾಗಿವೆ. ಅಜ್ಜನಮನೆಯಲ್ಲಿ ಮೊದಲಿದ್ದ ಸಂಭ್ರಮ ಈಗಿಲ್ಲ. ಮದುವೆಯಾಗಿ ಹನ್ನೆರಡು ವರ್ಷ ಗಳಲ್ಲಿ ಒಂದೊ ಎರಡೊ ಬಾರಿಯೇ ಶಿರಸಿಗೆ ಹೋಗಿದ್ದೇನೊ. ಈ ನವರಾತ್ರಿಯ ಕಾಲಕ್ಕೆ ಎಲ್ಲವೂ ನಿಂತು ಹೋಯಿತು. ಇವನ ಮನೆಯಲ್ಲಿ ವರ್ಷ ಕ್ಕೊಂದೇ ದೊಡ್ಡ ಹಬ್ಬ, ಅದೂ ನವರಾತ್ರಿ. ಗಣಪತಿಯ ಬೆನ್ನಿಗೆ ಅದೂ ಬರುವುದರಿಂದ ಗಣಪತಿಗೆ ರಜೆ ಹಾಕಿ ಮತ್ತೆ ನವರಾತ್ರಿ ಗೆ ಹದಿನೈದು ದಿನ ರಜೆ ಹಾಕುವುದು ಸಾಧ್ಯವಿರಲಿಲ್ಲ. ಜೊತೆಗೆ ಇವನ ಮನೆಯಲ್ಲಿ ಮುಖ್ಯ ದೇವರು ಗಣಪತಿ ಯಾಗಿದ್ದರಿಂದ ನಾನು ಗಣಪತಿಗೆ ನನ್ನ ಮನೆಗೆ, ಅಜ್ಜನ ಮನೆಗೆ ಹೋಗುವುದು ಇವನಿಗೆ ಸರಿ ಕಾಣುತ್ತಿರಲಿಲ್ಲ. ಆಮೇಲೆ ಗಣಪತಿಯ ರಜೆಯಲ್ಲಿ ಊರೂರು ತಿರುಗುವುದಕ್ಕೆ ಶುರುವಾಗಿ, ಒಂದು ಸಲ ಬಾದಾಮಿ , ಇನ್ನೊದು ಸಲ ಬಿಜಾಪುರ, ಮಗದೊಂದು ಸಲ ಹರಿದ್ವಾರ ಅಂತೆಲ್ಲ ಆಗಿ ಇಲ್ಲಿನ ಮುಂಬಯಿ ಮನೆಯಲ್ಲಿ ಗಣಪತಿ ಆಚರಿಸಿದ್ದು ಕಡಿಮೆಯೆ.

ಹೋಗಲಿ, ಈ ಸಲನೂ ಎಲ್ಲೂ ಹೋಗುತ್ತಿಲ್ಲ. ಹೊಸ ಊರು ಅಲೆಯಲು ಹೋಗಬಹುದು. ಮಗಳು ಗೋತಮಿಗೆ ದೇವರೆಂದರೆ ಗೊತ್ತಿಲ್ಲ. ದೊಡ್ಡವಳಾಗುತ್ತ ಇವಳು ಈ ದೇವರನ್ನು ( ಮೂರ್ತಿ ಪೂಜೆ) ಹೇಗೆ ಸ್ವೀಕರಿಸುತ್ತಾಳೆ ಎಂಬ ಕುತೂಹಲ ನನಗಿದೆ. ಮನೆಯಲ್ಲಿ ನಿತ್ಯ ಪೂಜಾ ಕ್ರಮ ನಾನು‌ ಮಾಡುವುದಿಲ್ಲ. ಇವನು ತನ್ನ ನಿತ್ಯ ಕರ್ಮ ಮಾಡುತ್ತಾನೆ. ಹಿಂದಿನ ಸಲ ಭೂತ ಕೋಲದ ಪರಿಣಾಮದಿಂದ ಗಣಪತಿಯಲ್ಲಿ ಗೋತಮಿಗೆ ಭೂತ ಕಾಣುತ್ತಿತ್ತು. ಈ ಸಲ ನೋಡಬೇಕು.

ಆಶ್ರಮ

ಸೆಪ್ಟೆಂಬರ್ 5, 2015

ಅವಳು ಅವತ್ತು ಹೇಳಿದ್ದು ಕೇಳಿಸಿಕೊಳ್ಳೋಕೆ ಕೆಟ್ಟದಾಗಿ ಇದ್ದರೂ ಸತ್ಯವಾಗೇ ಇತ್ತು. “ನಿಂಗೇನು? ಆಫೀಸಿನಿಂದ ಏಷ್ಟು ತಡ ಆಗಿ ಹೊರಟರೂ ಆಗುತ್ತೆ. ಮನೆಲಿ ಹೇಳಕೆ ಕೇಳೊಕೆ ಯಾರು ಇಲ್ಲ, ಮಕ್ಕಳೂ ಇಲ್ಲ, ಕಾಯ್ತಾ ಕುತಿರೋ ಗಂಡನೂ ಇಲ್ಲ. ನಮಗೆ ಹಾಗಲ್ಲವಲ್ಲ. ಬರೋದು ಸ್ವಲ್ಪ ತಡ ಆದರೂ ಗಾಬರಿಯಿಂದ ಹತ್ತು ಸಲ ಕಾಲ್ ಮಾಡಿ ಕೇಳ್ತಾರೆ. ನಾವು ಹೋಗೋ ತನಕ ಊಟನೂ ಮಾಡಿರಲ್ಲ. ನಾಳೆಯಿಂದ ನಿನ್ನ ಸಲುವಾಗಿ ಕಾಯಕೆ ಆಗಲ್ಲ” ಅಂತ ಕ್ಯಾಬಿನಿಂದ ಗುಬುಕ್ಕನೇ ಇಳಿದು ಹೋಗಿದ್ದಳು. ಅವಳ ಮಾತಿಗೆ ಸಾಕ್ಷಿ ಎಂಬಂತೆ ಅವಳ ಗಂಡ ಗೇಟಿನ ಬಳಿಯೇ ಕಾಯುತ್ತಾ ಇದ್ದ.

ಹಾಗಂತ ಅವಳು ಹಾಗೆ ಹೇಳುವುದಕ್ಕೆ ನಾನು ಕಾರಣವಾಗಿದ್ದೆ. ಮೊದಲೊಂದು ರಾತ್ರಿ ಕ್ಯಾಬಿನಲ್ಲಿ ನಾನೇ ಅವಳಿಗೆ  ” ನೋಡು, ನಿನಗೆ ಮನೆಗೆ ಹೋದ ಕೂಡಲೇ ಏಷ್ಟು ಜನ ಇರ್ತಾರೆ, ಊಟ ರೆಡಿ ಇರುತ್ತೆ. ನಾನು ಹೋದ ಕೂಡಲೇ ಬೆಳಿಗ್ಗೆ ನಾನು ಬಿಟ್ಟು ಬಂದ ಹಾಗೆ ಮನೆ ನನ್ನ ಕಾಯುತ್ತಾ ಇರುತ್ತೆ. ಎಲ್ಲ ನನಗೆ ನಾನೇ ಮಾಡಿಕೊ ಬೇಕು ಅಂತ ಹೇಳಿ ನಗಾಡಿ ಕೊಂಡಿದ್ದೆ. ಅದನ್ನೇ ತಿರುಗಿಸಿ ನನ್ನ ತಲೆ ಮೇಲೆ ಕುಕ್ಕಿ ಇಳಿದು ಹೋಗಿದ್ದಳು.

ಈಗ ಕೆಲಸ ಬಿಟ್ಟು ಮನೆಯಲ್ಲಿ ಇರುತ್ತಿರಬೇಕಾದರೆ ನನಗೊಂದು ವಿಷಯ ಅರ್ಥವಾಗತೊಡಗಿದೆ. ನಿಜಕ್ಕೂ ಇದು ನಾನು ಬಯಸಿದ್ದ ಬದುಕೇ ಅಲ್ಲವೇ ಅಂತ. ಕಾಲೇಜಿನ ದಿನಗಳಲ್ಲಿ ಎಲ್ಲವನ್ನೂ ಬಿಟ್ಟು ದೂರ ಹಿಮಾಲಯಕ್ಕೆ ಹೋಗಿ ಒಂಟಿಯಾಗಿ ಇರಬೇಕು ಅನ್ನಿಸುತಿತ್ತು. ಓದುವುದು ಮುಗಿಸಿ ಕಳೆದ ಹನ್ನೆರಡು ವರ್ಷಗಳು ಹೇಗಿದ್ದವು ? ಹೆಚ್ಚಿನ ಸಮಯ ನನ್ನ ಜೊತೆ ನಾನೊಂದೆ ಇದ್ದೆ. ನನ್ನ ಸಲುವಾಗಿ ಬದುಕುತ್ತಾ, ನನ್ನ ಜೊತೆ ಬದುಕುತ್ತ. ಇದಕ್ಕಾಗಿ ಹಿಮಾಲಯಕ್ಕೆ ಸಂಸಾರ ಬಿಟ್ಟು ಹೋಗುವ ಅವಶ್ಯಕತೆಯೇ ನನಗೆ ಬಂದಿರಲಿಲ್ಲ. ಈಗ ಜೊತೆಗೆ ಇನ್ನೊಂದು ಜೀವ ಇದ್ದರೂ, ಅದು ಸಹ ತನ್ನಷ್ಟಕೆ ತಾನು ಇರುವುದರಿಂದ ಮಧ್ಯದ ಕೆಲವು ಗಂಟೆಗಳ ವಿನಿಮಯ ಬಿಟ್ಟರೇ ಇಡೀ ದಿನ ನನ್ನ ಜೊತೆ ನಾನೇ.

———————–

ಗರ್ಭಿಣಿಯರಿಗೆ ಏನೇನೋ ಆಸೆಗಳು ಅರ್ಥಾತ್ ಬಯಕೆಗಳು ಆಗುತ್ತವೆಯಂತೆ. ಈ ತಾಯ್ತನ ಅನ್ನುವುದು ಮಧುರ, ಅಮರ, ಅಚಲ….. ಇತ್ಯಾದಿ ಮಣ್ಣಾಂಗಟ್ಟಿ ನನಗೆ ಇಲ್ಲ. ನನಗೆ ಹಾಗೇನೂ ಅನ್ನಿಸಲಿಲ್ಲ. ಅದರ ಬಗ್ಗೆ ಇನ್ನೊಮ್ಮೆ. ನನಗೆ ಆಸೆ ಆಗಿದ್ದು ಒಂದೇ. ಆಶ್ರಮಕ್ಕೆ ಹೋಗಬೇಕು ಎಂದು. ಹೆರಿಗೆ ಆಶ್ರಮಗಳಿದ್ದರೇ ಏಷ್ಟು ಚೆನ್ನಾಗಿರುತಿತ್ತು ಅಂತ ಗೂಗಲಿಸಿದರೆ ಆ ತರಹ ಯಾವ ಅಶ್ರಮವೂ ಇರಲಿಲ್ಲ. ಹೋಗಲಿ ಫಾರ್ಮ್ ಹೌಸ್ ಆದರೂ ಇರಬೇಕಿತ್ತು ಅಂತ ಆಸೆ ಆದರೂ ಆ ತರಹ ಏನು ಸ್ವಂತಕ್ಕೆ ನಾವಿನ್ನೂ ಮಾಡಿಕೊಂಡಿಲ್ಲ. ಊರಲ್ಲಿ ಹಳ್ಳಿಮನೆಗಳು ಇರುವವರಿಗೆ ತೊಂದರೆಯಿಲ್ಲ. ನನಗೆ ಹಾಗಿಲ್ಲವಲ್ಲ. ಹಸಿರು, ನೀರು, ಗದ್ದೆ, ತೋಟ,…

ಹಾಗೆ ಏನಕೋ ಕವಡಿಕೆರೆ ನೆನಪಾಗಿತ್ತು. ಕಾಲೇಜಿನ ದಿನಗಳಲ್ಲಿ ಮಠವೊಂದು ನಡೆಸುತಿದ್ದ ಕನ್ಯಾ ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಒಂದತ್ತು ದಿನ ಪಾಲ್ಗೊಂಡಿದ್ದೆ. ಅನುಭವ ತುಂಬಾ ಸುಂದರವಾಗಿತ್ತು. ಕವಡಿಕೆರೆ ನಾನು ನೋಡಿದ ಮೊದಲ ದೊಡ್ಡ ಕೆರೆ. ಬೆಳಿಗ್ಗೆ ಎದ್ದು ಧ್ಯಾನ ಮಂಟಪದಲ್ಲಿ ಕೂತು ಆ ಮಂಜು ಮತ್ತು ಆ ನೀರನ್ನು ನೋಡುವುದೇ ಒಂದು ಚೆಂದದ ಅನುಭವ. ಅದಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆ ಒಂಟಿ ದೇವಸ್ಥಾನದಲ್ಲಿ ಮಕ್ಕಳೊಂದಿಗೆ ಬೆಳಿಗ್ಗೆ ಎದ್ದು ವ್ಯಾಯಾಮ. ನಂತರದ ಚಟುವಟಿಕೆಗಳು. ಹಾಡು, ಶ್ಲೋಕ, ಕತೆ, ನಗು. ಮಧ್ಯಾಹ್ನ, ಸಂಜೆ, ರಾತ್ರಿ ಮತ್ತೆ ಬೆಳಗು.

ಕೊನೆಗೆ ಇಲ್ಲಿ ನೂರು ಕಿಲೋಮೀಟರು ಹತ್ತಿರವಿರುವ ಗೋವರ್ಧನ ಆಶ್ರಮಕ್ಕೆ ಒಂದು ದಿನದ ಮಟ್ಟಿಗೆ ಹೋಗಿ ಬಂದೆ. ವಿದೇಶಿ ಇಸ್ಕಾನ್ ಗುರುವೊಬ್ಬನ ಕನಸು ನನಸಾಗುತ್ತಿರುವ ಸ್ಥಳವದು. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳು, ಸಾವಯವ ಕೃಷಿ, ನೂರಾರು ತಳಿಯ ಭತ್ತ ಗಳು, ಅನೇಕ ಬಗೆಯ ತರಕಾರಿ, ಹೂ ಗಿಡಗಳು, ಮಳೆ ನೀರ ಹೊಂಡ, ನೀರಿನ ಪುನರ್ ಬಳಕೆ, ಕೊಳಚೆ ನೀರಿನ ಸಂಸ್ಕರಣ ಉಧ್ಯಾನ ಘಟಕ,.. ಇತ್ಯಾದಿಗಳ ಜೊತೆಗೆಗೆ ಯೋಗ ಮತ್ತು ಆಧ್ಯಾತ್ಮ.

————————–

ಈಗ ಮನೆಯಲ್ಲಿ ಕೊನೆಗೂ ಟೊಮೆಟೊ ಬೀಜ ಬಿತ್ತಿ ಅದು ಚಿಕ್ಕ ಸಸ್ಯವಾಗಿ, ಅದಕ್ಕಾಗೇ ತಯಾರಾಗುತ್ತಿರುವ ತರಕಾರಿ ತಾಜ್ಯಗಳಿಂದ ಮಾಡುತ್ತಿರುವ ಗೊಬ್ಬರದ ಮಣ್ಣು. ಈ ಫಾರ್ಮು, ಹಳ್ಳಿ ಮನೆ, ಆಶ್ರಮ ಎಂದು ಕನವರಿಸುವುದರ ಬಿಟ್ಟು ಇದ್ದಲ್ಲಿಯೇ ಚಿಕ್ಕ ಬಾಲ್ಕನಿ ತರಕಾರಿ ತೋಟವಾದರೂ ಮಾಡುತ್ತೇನೆ ಎಂದು ಹೊರಟಿದ್ದೇನೆ. ಆಸೆಗಳಿಗೆಲ್ಲ ಇನ್ನೂ ಸಮಯವಾಗುತ್ತದೆ ಮತ್ತು ತುಂಬಾನೇ ದುಡ್ಡು ಬೇಕು. ಈಗ ಇರೋದರಲ್ಲಿ ನಾಲ್ಕು ಟೋಮೆಟೊ, ಎರಡು ಮೆಣಸು, ಬದನೆಕಾಯಿ ಗಿಡವನ್ನಾದರೂ ಮಾಡಿ ಬೆಳೆ ಬಂದ ಮೇಲೆ ಮುಂದಿನ ದೊಡ್ಡ ದೊಡ್ಡ ಮಾತು.

( To know more about Govardhan eco village, Click on  http://ecovillage.org.in/)

ತುತ್ತು

ಡಿಸೆಂಬರ್ 24, 2014

ಊಟದ ಮೊದಲ ತುತ್ತಿಡುವಾಗ ಆ ಚಿತ್ರಗಳು ಮತ್ತೆ ಮೂಡುತ್ತವೆ. ಇವನು ಕೇಳ್ತಾನೆ,  ‘ಮತ್ತ್ಯಾಕೆ ಅಳ್ತಿದಿಯಾ? ಏನ್ ಕತೆಯೋ ನಿಂದು’ ಅಂತ.

ಚೆನ್ನೈ ಚಂಡಮಾರುತಕ್ಕೆ ಸಿಕ್ಕಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದವು. ಅದೇ ಸಮಯದಲ್ಲಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಬಸ್ ಕಾಯುತ್ತಾ ನಿಂತವಳಿಗೆ ಪೇಪರಿನಲ್ಲಿ ಏನನ್ನೋ ಹಿಡಿದುಕೊಂಡು ಇತ್ತ ಕಡೆ ಬರುತ್ತಿದ್ದ ಅವನು ಕಂಡ. ಬಡವ ಎಂದು ಅನ್ನಿಸುತ್ತಿರಲಿಲ್ಲ. ಬಟ್ಟೆ ಕೊಳಕಾಗಿತ್ತಷ್ಟೆ. ಇತ್ತ ನನ್ನ ಪಕ್ಕದಲ್ಲಿ ರಸ್ತೆಯಲ್ಲಿ ಕೂತ ಆಕೆಯತ್ತ ತೆರಳಿ ಪೇಪರಿನಲ್ಲಿದ್ದ ಬಿಳಿ ಅನ್ನ ತೋರಿಸಿದ. ಆಕೆ ದುಃಖದಲ್ಲಿ ತಿನ್ನಲು ತಯಾರಾಗಲಿಲ್ಲ. ಆತ ಪ್ರೀತಿಯಲ್ಲಿ ಅದೇನೋ ಹೇಳುತ್ತಾ ಕೈಯಲ್ಲಿದ್ದ ಪೇಪರಿನಿಂದ ಅನ್ನದ ತುತ್ತೆತ್ತಿ ಆಕೆಗೆ ತಿನ್ನಿಸತೊಡಗಿದ. ಬಸ್ ಬಂತು, ನಾನು ಹತ್ತಿ ಸೀಟಿನಲ್ಲಿ ಕೂತು ಆತನತ್ತ ಕಣ್ ತುಂಬಿ ನೋಡಿದಾಗ ಚಲಿಸುತ್ತಿದ್ದ ಗಾಜಿನ ಹಿಂದೆ ಆತ ನನ್ನೆಡೆ ಮುಗುಳ್ನಕ್ಕಂತೆ ಕಂಡಿತು.

ಹರಿದ್ವಾರದ ಬೀದಿ ಬದಿಯ ಯಾವುದೋ ಒಂದು ಗುರುದ್ವಾರದ ಮೆಟ್ಟಿಲುಗಳ ಮೇಲೆ ಕೂತಿದ್ದೆ. ಮೊಬೈಲಿನಲ್ಲಿ ನಾಳೆ ದೆಹಲಿಗೆ ಹೋಗಿ ಉಳಿಯುವ ಹೋಟೆಲ್ ಗಳಿಗಾಗಿ ಹುಡುಕಾಟ ನಡೆಸಿದ್ದೆ. ಎದುರಿಗೆ ನೆಲದಲ್ಲಿ ಸಾಲಿನಲ್ಲಿ ಅವರೆಲ್ಲ ಕೈ ನಲ್ಲಿ ಪ್ಲಾಸ್ಟಿಕ್ ಹಿಡಿದು ಕೂತಿದ್ದರು. ಒಳಗಿನಿಂದ ಬಂದವರು ಅದರಲ್ಲಿ ಬಡಿಸುತ್ತಿದ್ದನ್ನು ತಿನ್ನುತ್ತಿದ್ದರು. ನಾನು ಸಾವಿರಗಳ ರೂಮಿನಲ್ಲಿ ಯಾವುದು ಸರಿ ಹೋಗುತ್ತೆ ಎಂದು ಲೆಕ್ಕಾಚಾರ ಮಾಡುತ್ತ, ನಾಳಿನ ದೆಹಲಿ ಸುತ್ತಾಟಗಳ ಬಗ್ಗೆ ಲೀಸ್ಟ್ ಮಾಡುತ್ತಾ ಕೂತಿದ್ದೆ. ಮತ್ತೆ ಹತ್ತು ನಿಮಿಷ ಬಸ್ ಹೊರಡುವವವರೆಗೆ ಅವರನ್ನು ಸುಮ್ಮನೇ ನೋಡುತ್ತಾ ಕುಳಿತಿದ್ದೆ. ಪ್ಲಾಸ್ಟಿಕ್ ಎತ್ತಿ ಕೊನೆಯ ಹನಿಯನ್ನು ಬಿಡದೇ ಅವನು ಕುಡಿಯುತ್ತಿದ್ದ.

ಜೊತೆಗೆ ಹುಷಾರಿಲ್ಲದ ಆ ಜೀವಕ್ಕೆ ರೊಟ್ಟಿ ತಿನ್ನಿಸುತ್ತಿರುವ ಅವನ ಚಿತ್ರ ಮತ್ತು ಎದುರಿಗಿನ ಕಪ್ಪು ಮಡಿಕೆಯ ಮೇಲಿನ ಮುಚ್ಚುಳ ತೆರೆದು,ಕಪ್ಪಿನಲ್ಲಿ ಅಂಬಲಿ ಎತ್ತಿ ಕುಡಿಯುತ್ತಾ , ಅಕೆಯೆಡೆ ನೋಡಿ ಮುಗುಳ್ನಗುವ ಅವನ ಚಿತ್ರ.  ಇವೆರಡೂ ಪದೇ ಪದೇ ನೆನಪಿಗೆ ಬರುವ ಮತ್ತೆರಡು ಚಿತ್ರಗಳು. ಬಾಲ್ಯದಲ್ಲಿ ಯಾವ ಸಿನೆಮಾದಲ್ಲಿ ನೋಡಿದ್ದೇನೊ ಗೊತ್ತಿಲ್ಲ. ಅವನು, ಆಕೆ ಯಾರು ಅನ್ನೋದು ಗೊತ್ತಿಲ್ಲ. ಆದರೆ ರೊಟ್ಟಿ ಮಾಡಿಕೊಂಡು ತಿನ್ನುವಾಗ ಮಾತ್ರ ಮತ್ತೆ ನೆನಪಿಗೆ ಬರುತ್ತೆ. ಕಣ್ ತುಂಬಿ ಬರುತ್ತೆ, ಮತ್ತೆ ಇವನು ಕೇಳ್ತಾನೆ, ‘ಮತ್ತ್ಯಾಕೆ…………..

ಬೆಡ್ ರೂಮ್

ಡಿಸೆಂಬರ್ 4, 2014

ಅಂದರೆ ಯಾರು ಯಾರಿಗೆ ಏನೋ ನನಗೆ ತಿಳಿದಿಲ್ಲ. ನನಗೆ ಮಾತ್ರ ಅದು ಧ್ಯಾನದ ಕೋಣೆ, ಏಕಾಂತದ ಕೋಣೆ. ನನ್ನ ಜೊತೆ ನಾನು ಮಾತ್ರ ಮಾತಾಡಿಕೊಳ್ಳಬಹುದಾದ ಅಮೂಲ್ಯವಾದ ಜಾಗ.

ಮಂಚದ ಒಂದು ಬದಿ ಅವನಿಗೆ, ಇನ್ನೊಂದು ನನಗೆ. ನನಗೆ ನಾನು ನನ್ನ ಜಾಗದಲ್ಲೇ ಮಲಗಬೇಕು. ಆ ಕಡೆ ಈ ಕಡೆ ಆಗುವ ಹಾಗಿಲ್ಲ. ನನ್ನ ಜಾಗ ಅನ್ನೋ ಹುಚ್ಚು ವ್ಯಾಮೋಹ ನನಗೆ.  ಅಲ್ಲಿರುವುದೇನಿಲ್ಲ.  ಈ ಕಡೆಯ ತರಹದ್ದೇ ಆದ ದಿಂಬು ಮತ್ತು ಅದೇ ಮೆತ್ತನೆಯ ಹಾಸಿಗೆ. ಆದರೆ ನನ್ನ ಜಾಗ, ಈ ಬದಿಯ ಹಾಗಲ್ಲ. ಅದು ನನ್ನೆಲ್ಲ ಹುಚ್ಚಾಟಗಳನ್ನು ತನ್ನೊಡನೆ ಅಡಗಿಸಿ ಇಟ್ಟುಕೊಂಡ ರಹಸ್ಯ ಡಬ್ಬಿ. ನನ್ನ ಜಾಗ ಅಂದರೆ ಅಲ್ಲಿ ಮತ್ತೊಮ್ಮೆ ಮಗಚುವ ತನಕ ನನ್ನ ಗಾತ್ರಕ್ಕೆ ತಕ್ಕಂತೆಯೇ ತಗ್ಗು, ದಿಣ್ಣೆಗಳನ್ನು ಒಳಗೊಂಡಿರುವ ಹಾಸಿಗೆ, ನನ್ನ ಅಸಹನೆ, ಅಸಹಾಯಕತೆ ಕಣ್ಣೀರಾಗಿ ಹರಿದು ಕಲೆಗೆಟ್ಟಿರುವ ದಿಂಬನ್ನು ಹೊದ್ದಿರುವ ಹೊಸ ಚೆಂದದ ಚಿತ್ರದ ಕವರ್ರು. ನನ್ನೆಲ್ಲ ಕನಸುಗಳನ್ನು ಹುಟ್ಟಿಸಿದ್ದು ಇಲ್ಲಿಯೇ. ಇಲ್ಲಿ ಕನಸು ಸತ್ತಿದ್ದಿಲ್ಲ. ಕನಸುಗಳನ್ನು ನನಸಾಗಿಸುವ ಛಲವನ್ನು ಪಡೆಯುವುದು ಇಲ್ಲಿಯೇ. ನನಗಾಗಿ ನಾನು ಬದುಕಿಕೊಳ್ಳುವುದು ಎಂದು ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸುವುದು ಈ ಜಾಗವೇ. ತುಂಬಾ ಖುಷಿಯಾದಾಗ, ಬೇಸರವಾದಾಗ ಬಂದು ಬೀಳುವುದು ಇದರ ತೆಕ್ಕೆಯಲ್ಲಿಯೇ. ಬೇಸರವನ್ನು ಹಿಮ್ಮೆಟ್ಟಿಸಿದಂತೆ, ಖುಷಿಯನ್ನು ಹೆಚ್ಚಿಸುವಂತೆ ಮಾಡುವುದು ಈ ಜಾಗವೇ.

ಇವನು ಮನೆಯಲ್ಲಿದ್ದರೆ ಕೋಪಗೊಳ್ಳುವುದು, ನಾನು ಇಲ್ಲಿ ಬಿದ್ದುಕೊಂಡಿದ್ದಾಗ. ಅವನಿಗೆ ಇದು ನಾನು ಕನಸಿಸುವ ಜಾಗ ಎಂದು ಗೊತ್ತು. ನಾನು ಯಾವ ಯಾವುದೇ ಲೋಕದಲ್ಲಿ ತಿರುಗುತ್ತಿರುವುದು ಅವನಿಗೆ ಇಷ್ಟವಿಲ್ಲ. ಹಾಗೆ ಕನಸಿಸದೇ ವಾಪಾಸ್ಸು ಇಹಲೋಕಕ್ಕೆ ನಾನು ಬರುವಳಲ್ಲ. ಪದೇ ಪದೇ ಎಬ್ಬಿಸುವುದು ಅವನ ಜಾಯಮಾನ.

ಹಾಗಂತ ಈ ಕೋಣೆ ಕೇವಲ ನನಗೆ ಮಾತ್ರ ಸೀಮಿತವಾದದ್ದಲ್ಲ. ಇಬ್ಬರಿಗೂ ಸೇರಿದ್ದು. ಕನಸುಗಳು, ಆಸೆಗಳು, ಬಯಕೆಗಳು, ಕತೆಗಳು, ಎಲ್ಲವೂ ಢಾಳಾಗಿ ಬಿದ್ದುಕೊಂಡಿವೆ. ಸಿಟ್ಟು, ಮುನಿಸು ಇಲ್ಲಿ ತುಂಬಾನೇ ಕಮ್ಮಿ. ದೇಹಕ್ಕೆ ಬೇಕಾಗುವ ಅಲಂಕಾರಿಕ ವಸ್ತುಗಳು ಮತ್ತು ಆಂತರಿಕವಾಗಿ ಬೇಕಿರುವ ಒಲುಮೆ, ಸಂತಸ ಮತ್ತು ನೆಮ್ಮದಿ ಇಲ್ಲಿದೆ. ಇದು ನನ್ನ ನಿದ್ದೆಗೆ, ಧ್ಯಾನಕ್ಕೆ ಮತ್ತು ಅಲಂಕಾರಕ್ಕೆ ಮಾತ್ರ ಮೀಸಲಿಟ್ಟಿರುವ ಜಾಗ. ನಾನಿಲ್ಲಿ ಪುಸ್ತಕ ಓದುವುದಿಲ್ಲ. ಕೆಲಸ ಮಾಡುವುದಿಲ್ಲ. ಬದಲಿಗೆ ಕನಸ ಕಾಣುತ್ತೇನೆ.

ಯಾಕೋ ನನಗೆ ನನ್ನದೇ ಆದ ಒಂದು ಕೋಣೆ ಅಂತ ಯಾವತ್ತೂ ಇದ್ದಿರಲಿಲ್ಲ. ಬಾಲ್ಯದಲ್ಲಿ ವಾಸಿಸಿದ್ದ ಮನೆಯಲ್ಲಿ ಬೆಡ್ ರೂಮ್ ಇತ್ತು. ಅದು ಅಪ್ಪ-ಅಮ್ಮನದ್ದು. ಬೇಕಾದಾಗ ಅವರೊಡನೆ ನನ್ನ ಬೆಡ್ ರೂಮ್ ಸಹ ಆಗುತ್ತಿತ್ತು. ಚಿಕ್ಕ ಮನೆಯಾದ್ದರಿಂದ ಅದು ಎಲ್ಲದಕ್ಕೂ ಬಳಕೆಯಾಗುತ್ತಿತ್ತು. ಮಂಚದ ಪಕ್ಕದಲ್ಲೇ ಟಿವಿಯೂ ಇತ್ತು. ಅದು ಲಕ್ಸುರಿ ಎಂದು ಇಟ್ಟಿದ್ದಲ್ಲ. ಹೊರಗೆ ಹಾಲಿನಲ್ಲಿ ಜಾಗವಿರಲಿಲ್ಲ. ಒಂದು ಮೂಲೆಯಲ್ಲಿ ಮರದ ಮೇಜಿನ ಮೇಲೆ ಕಪ್ಪು-ಬಿಳುಪು ಟಿವಿ ಮಿಂಚುತ್ತಿದ್ದರೆ, ಅದಕ್ಕೆ ತಾಗಿ ಅಮ್ಮನ ಸಿತಾರ ಮತ್ತು ಆಲ್ಮೆರಾ ಇತ್ತು. ಆ ಕಡೆ ನೇತು ಹಾಕಿದ ಅಪ್ಪನ ಶರ್ಟುಗಳು. ಈ ಕಡೆ ಮೂಲೆಯಲ್ಲಿ ಮಂಚ ಇಡೀ ರೂಮ್ ಅನ್ನೇ ಆವರಿಸಿಕೊಂಡಿತ್ತು. ಅದರ ಮೇಲೆ ಅನೇಕ ನ್ಯಾಲೆಗಳಲ್ಲಿ ಇಟ್ಟಿದ್ದ ನಮ್ಮೆಲ್ಲರ ಬಟ್ಟೆಗಳು. ನಮ್ಮಮ್ಮನಿಗೆ ನ್ಯಾಲೆಗಳು ಅಂದರೆ ಏನಕೆ ಪ್ರೀತಿಯೋ ನಾ ಕಾಣೆ. ಆದರೆ ಅದನ್ನು ಸರಿಪಡಿಸಿ ಇಡುವುದು ನನಗಿಷ್ಟದ ಕೆಲಸಗಳಲ್ಲಿ ಒಂದಾಗಿತ್ತು. ಒಂದೇ ರೀತಿಯ ಬಣ್ಣಗಳನ್ನು, ನಮೂನೆಗಳನ್ನು ಒಂದು ಕಡೆ ಇಡುವುದು, ಎಲ್ಲದನ್ನೂ ನೀಟಾಗಿ ಭಾಗಗಳಾಗಿ ಸೇರ್ಪಡಿಸಿ, ನನ್ನದು, ತಂಗಿದು, ಅಮ್ಮಂದು, ಅಪ್ಪಂದು ಅಂತ ಜೋಡಿಸಿಡೊದು. ಹಾಗೆಲ್ಲ ಇಡಬೇಕಾದರೆ ಕನಸುಗಳು ಬೀಳ್ತಾ ಇದ್ದವು. ಹೀಗೆನೆ ಪುರವಣಿಗಳಲ್ಲಿ ನೋಡಿದ ಚೆಂದದ ವಾರ್ಡ್ ರೋಬಿನಲ್ಲಿ ಇಡಬೇಕು ಎಂದು. ಅದಕ್ಕಾಗಿ ಇನ್ನೂ ಇಪ್ಪತ್ತೈದು ವರ್ಷ ಖಾಯಬೇಕೆಂದು ಆಗ ಗೊತ್ತಿರಲಿಲ್ಲ. ಗೊತ್ತಾಗಿದ್ದರೂ ಕನಸ ಕಾಣುವುದ ಬಿಡುತ್ತಿರಲಿಲ್ಲ.

ಏಕೋ, ಆಗಿನಿಂದಲೂ ನನಗೆ ಈ ಗೋದ್ರೇಜ್ ಅಂದರೆ ಕಬ್ಬಿಣದ ಬೀರುವನ್ನು ಕಂಡರೇ ಆಗುವುದಿಲ್ಲ. ಅದರಲ್ಲಿ ಬಟ್ಟೆ ಜೋಡಿಸಿಡುವುದು ನನಗೆ ಕಷ್ಟದ ಕೆಲಸ. ಮದುವೆ ಆದ ಮೇಲೂ ನಮ್ಮ ಜೊತೆ ಮೊದಲಿದ್ದದ್ದು ಬೆತ್ತದ ಸ್ಟಾಂಡ್, ನನಗೆ ಕಬ್ಬಿಣದ ಬೀರು ಬೇಕಿರಲಿಲ್ಲ. ಮನೆಗೆ ಮರದ ವಾರ್ಡ್ ರೋಬ್ ಬಂದಾಗ ಏಷ್ಟೋ ದಿನಗಳ ತನಕ ಅದನ್ನು ನೋಡುವುದೇ ದೊಡ್ಡ ಖುಷಿಯ ಕೆಲಸ ನನಗೆ. ಈಗ ಎಲ್ಲಿ ಯಾವ ರೀತಿಯ ಹೊಸ ಹೊಸ ಡಿಸೈನ್ ನೋಡಿದಾಗಲೂ ಆಸೆ ಆಗುವುದಿಲ್ಲ. ಸುಮ್ಮನೆ ಏಷ್ಟು ಚೆಂದಾಗಿ ಮಾಡಿದ್ದಾರೆ ಎಂದು ಖುಷಿ ಪಟ್ಟಿಕೊಳ್ಳುತ್ತೇನೆ.

ಮರಳಿ ನನ್ನ ಕತೆಗೆ. ಆ ಮನೆಯಿಂದ ಹೋಗಿದ್ದು ನವೋದಯಕ್ಕೆ. ಅಲ್ಲಿ ನಮ್ಮದೇ ಅಂತ ಕೊಣೆಯಿರುತ್ತಿತ್ತು. ನನ್ನದೇ ಅಂತ ಹಾಸಿಗೆ ಇರುತ್ತಿತ್ತು. ಆ ಹಾಸಿಗೆಯೇ ಮನೆ. ಪರಿಚಯ. ಓದುವ, ತಿನ್ನುವ, ಹರಟುವ, ನಗುವ, ಆಳುವ, ವಿರಮಿಸುವ ನನ್ನದು ಅನ್ನುವ ವಸ್ತುಗಳನ್ನು ಭಾವಗಳನ್ನು ಇಟ್ಟುಕೊಳ್ಳುವ ಜಾಗ. ಹೆಚ್ಚಾಗಿ ನವೋದಯದ ವಾತಾವರಣದಿಂದಲೇ ನನಗೆ ಹಾಸಿಗೆ ಅಂದರೆ ನನ್ನ ಜಾಗ ಅಂತ ಅನಿಸುವುದೋ ಗೊತ್ತಿಲ್ಲ.

ಮರಳಿ ಮನೆಗೆ ಬಂದಾಗ ಹೊರಗೆ ಇದ್ದ ಚಿಕ್ಕ ಹಾಲ್ ನನ್ನ ಬೆಡ್ ರೂಮ್ ಆಯಿತು. ಆ ಚಿಕ್ಕ ಮಂಚವೇ ಯಾರಾದರೂ ಬಂದಾಗ ವಿಶ್ರಮಿಸುವ ಜಾಗ. ಆ ಹಾಲಿನಲ್ಲಿ ಇದ್ದದ್ದು ಕಡಿಮೆ ಜಾಗವೇ. ಈ ಕಡೆ ದಿವಾನ್ ತರಹದ ಚಿಕ್ಕ ಮಂಚ, ಎದುರಿಗೆ ಹಳೆಯ ಕಾಲದ ವೃತ್ತಾಕಾರದ ಕಬ್ಬಿಣದ ಎರಡು ಛೇರುಗಳು. ಮಧ್ಯ ಓಡಾಡಲು ಜಾಗ. ಮಂಚದ ತಲೆಯ ಹತ್ತಿರ ನಾವು ಓದಿಗೆ ಬಳಸುವ ಕಬ್ಬಿಣದ ಸಣ್ಣ ಟೇಬಲ್ ಇದ್ದರೇ,  ಇನ್ನೊಂದು ಕಾಲಿನ ಹತ್ತಿರ ಅಮ್ಮನ ರಾಘವೇಂದ್ರ ಸ್ವಾಮಿಯ ಚಿತ್ರದ ಕೆಳಗೆ ಮರದ ಟೀಪಾಯಿ. ಅದರ ಮೇಲೆ ನಾನು, ಅಪ್ಪ, ಮನೆ ಓನರ್ ಭಿಕ್ಕು ರಾಯರು ಸೇರಿಕೊಂಡು ಅಪ್ಪನೇ ಮಾಡಿಕೊಟ್ಟ ಚದುರಂಗ, ಧಾಳ ಆಡುತ್ತಿದ್ದದ್ದು ನೆನಪಿದೆ.

ಈ ನನ್ನ ಬೆಡ್ ರೂಮ್ ಕಮ್ ಹಾಲ್ ನೆನಪಿದ್ದದ್ದು ಇನ್ನೊಂದು ಕಾರಣಕ್ಕೆ. ಈ ಚಿಕ್ಕ ಮಂಚಕ್ಕೆ ತಾಗಿಕೊಂಡಂತೆ ಗೋಡೆಯಲ್ಲೇ ಕುಳಿತಿರುವ ಶೋ ಕೇಸ್ ಇತ್ತು. ಅದಕ್ಕೆ ಮರದ ಫ್ರೇಮು, ಕಾಜು ಅಂತೆಲ್ಲ ಅಂದುಕೊಳ್ಳಬೇಡಿ. ಸಣ್ಣ ಮನೆಯ ಪುಟ್ಟ ಶೋಕೇಸ್ ಅದು. ನಾಲ್ಕು ಮರದ ಬೋರ್ಡ್ ಗಳನ್ನು ಅಡ್ಡಕ್ಕೆ ಹಾಕಿ ಉದ್ದದ ಸಣ್ಣ ಸಣ್ಣ ಖಾಣೆಗಳನ್ನಾಗಿ ಮಾಡಿದ್ದರು. ಅದರ ಮೇಲೆಲ್ಲಾ ನಮ್ಮ ಗೊಂಬೆಗಳು ವಿರಾಜಮಾನವಾಗಿದ್ದರೆ, ಕೆಳಗೊಂದು ಟೇಪ್ ರಿಕಾರ್ಡರ್ ಮತ್ತು ನನ್ನ ಕಾಲೇಜಿನ ಪುಸ್ತಕಗಳು. ಮತ್ತು ಅದರ ಮಧ್ಯ ತಂಗಿಯಿಂದ ಅಡಗಿಡಿಸುತ್ತಿದ್ದ ನನ್ನ ಡೈರಿ ಮತ್ತು ಅವನಿಗೆ ಬರೆದ ಪತ್ರಗಳು. ನವೋದಯದಲ್ಲಿ ಪತ್ರಿಸುವ ಗೀಳಿದ್ದ ನನಗೆ ಮತ್ತು ಪೆನ್ ಫ್ರೆಂಡ್ಸ್ ಚಾಲ್ತಿಯಲ್ಲಿದ್ದ ಆ ದಿನಗಳಲ್ಲಿ ಅವನಿಗೆ ಪತ್ರಿಸುವುದು ತಪ್ಪು ಏಕೆಂದು ಅರ್ಥವಾಗುತ್ತಿರಲಿಲ್ಲ. ಅದೇನು ಲವ್ ಗಿವ್ ಆಗಿರಲಿಲ್ಲ. ಆಗಿದ್ದರೂ ಹಾಗಂತ ನಾನು ಒಪ್ಪುತ್ತಿರಲಿಲ್ಲ. ಏಕೆಂದರೆ ಅಂದಿನಿಂದ ಇಂದಿಗೂ ಪ್ರೀತಿ ಅನ್ನೋದನ್ನು ಒಂದು ಭಾವದಲ್ಲಿ, ಮಾತಿನಲ್ಲಿ, ಸಂಬಂಧದಲ್ಲಿ ಕಟ್ಟಿ ಇಡೊದು ನನಗೆ ಆಗದ ಕೆಲಸ. ಜೀವನಕ್ಕೆ, ಜೀವಕ್ಕೆ ಮತ್ತು ಪ್ರೀತಿಗೆ ವ್ಯತ್ಯಾಸ ಅರ್ಥವಾಗುವುದಿಲ್ಲ ನನಗೆ.

ಹೋಗಲಿ ಬಿಡಿ. ಅಲ್ಲಿಂದ ಮತ್ತೆ ಹೋಗಿದ್ದ ಇನ್ನೊಂದು ಮನೆಯಲ್ಲಿ ಬೆಡ್ ರೂಮ್ ಅಂತೆಲ್ಲ ಇರಲಿಲ್ಲ. ದೊಡ್ಡ ಹಾಲು ಮತ್ತು ಒಳಗೆ ಅಡಿಗೆ ಮನೆ ಹಾಗೂ ಇನ್ನೊಂದು ಕೋಣೆಯ ನಡುವೆ ಪಾರ್ಟಿಶನ್ ಮಾಡಿದ್ದರು. ಅಷ್ಟೇ. ಆ ರೂಮ್ ನೆನಪಿದ್ದದ್ದು ಎರಡು ಕಾರಣಗಳಿಗೆ. ಒಂದು ಅಲ್ಲಿದ್ದ ದೊಡ್ಡ ಮರದ ಗೋಡೆಯ ಒಳಗಿನ ಕಪಾಟು. ಅದರ ಒಳಗಡೆ ಇದ್ದ ಸಿಕ್ರೇಟ್ ಕಂಪಾರ್ಟ್ಮೆಂಟ್ ಮತ್ತು ಅದರಲ್ಲಿ ದೊರೆತ ಕೀಲಿ ಕೈ. ಆ ಮನೆಯು ಅಮ್ಮನ ಕಾಲೇಜಿನ ಲೆಕ್ಚರಿಗೆ ಸೇರಿದ್ದಾದ್ದರಿಂದ, ಅವರ ಬಗೆಗೆ ಕೇಳಿದ್ದ ಕತೆಗಳಿಗೆ ಈ ಕೀಲಿ ಕೈ ನಿಲುಕದ ಕಲ್ಪನೆಯ ಪೆಟ್ಟಿಗೆಯಾಗಿತ್ತು. ಗೊತ್ತಾ, ಆ ಕೀಲಿ ಕೈ ಏನಾದರೂ ಆಗಬಹುದಿತ್ತು. ಅನೇಕ ಉಹಾ ಕತೆಗಳನ್ನು ನನ್ನಲ್ಲಿ ಹುಟ್ಟಿಸುತ್ತಿತ್ತು. ಮತ್ತೊಂದು, ಅಲ್ಲಿ ಇಟ್ಟಿದ್ದ ದೇವರಪೀಠ. ನಾನು ದೇವರಿಗೆ ಕೈ ಮುಗಿಯದಿದ್ದರೂ ಅಲಂಕಾರ ಮಾಡುವುದು ನನ್ನ ಪ್ರೀತಿಯ ಕೆಲಸ. ಅಪ್ಪ-ಅಮ್ಮನ ಇಪ್ಪತ್ತನೇಯ ಮದುವೆ ಆನಿವರ್ಸರಿಯೆಂದು ನಾನು ಮತ್ತು ನನ್ನ ತಂಗಿ ಸೇರಿ ಕೊಟ್ಟ ಉಡುಗೊರೆ ಅದು. ದುಡ್ಡು ಪಜಲ್ ಗೆಂದು ಪೇಪರಿನವರು ಕೊಟ್ಟ ಸೇರಿಸಿಟ್ಟ ಗೌರವ ಧನ.

ಹೊರಗಿನ ನಾನು ಮಲಗುತ್ತಿದ್ದ ಜಾಗದಲ್ಲಿ ಇನ್ನೂ ಅನೇಕ ಕತೆಗಳಿವೆ. ಮಲಗುತ್ತಿದ್ದ ಮಂಚದ ಪಕ್ಕದಲ್ಲೇ ಒಂದು ಕಿಟಕಿ ಇತ್ತು. ಅಲ್ಲಿಂದ ಚಂದ್ರ ಕಾಣುತ್ತಿದ್ದ. ಮೊದಲ ಪ್ರೀತಿ ಹಂಚಿಕೊಂಡಿದ್ದು ಅವನಲ್ಲೇ, ಕಳೆದದ್ದು ಹೇಳಿ ಭಿಕ್ಕಳಿಸಿದ್ದು ಅವನಲ್ಲೇ. ಮೊದಲ ಬಾರಿ ಆತನೊಡನೆ ಮಾತಾಡಿದ್ದು ಅಲ್ಲಿಟ್ಟಿದ್ದ ಫೋನಿನಲ್ಲೇ ಮತ್ತು ಎಂದಿಗೂ ಸಿಗುವುದಿಲ್ಲ ಎಂದು ಅತ್ತಿದ್ದೂ ಅದೇ ಫೋನಿನಲ್ಲೇ. ಮತ್ತೆ ಬದುಕಲು ಕಲಿತದ್ದು ಅದೇ ರೂಮಿನಲ್ಲೇ. ಅಲ್ಲೇ ಹುಟ್ಟಿದ್ದು ಹೊಚ್ಚ ಹೊಸ ಕನಸುಗಳು. ಕೈಯಾರೆ ಮಾಡಿದ ಚಿತ್ರ, ವಿಚಿತ್ರಗಳು, ಚೆನ್ನಾಗಿರುವ ಫ್ರೇಮ್ ಹಾಕಿಸಲು ದುಡ್ಡು ಸಾಕಾಗದೇ ಮರದ ಚೌಕಟ್ಟು ಹೊದ್ದ ಕೆಲಸಗಳು. ಇವನ್ನೇ ಇಟ್ಟುಕೊಂಡು ಮಾಡಿದ ಪ್ರದರ್ಶನ, ಸ್ನೇಹಿತರೊಡನೆ ಆಚರಿಸಿಕೊಂಡ ಬರ್ತ್ ಡೇಗಳು, ಪಾನಿಪೂರಿ ಪಾರ್ಟಿಗಳು, ಎ ಬಿ ವಿ ಪಿ ಸೇರಿದ್ದು, ಬಿಟ್ಟಿದ್ದು, ಕಾಲೇಜು ಇಲೆಕ್ಷನ್ನಿಗೆ ನಿಂತಿದ್ದು, ಬಿಟ್ಟಿದ್ದು, ಎಲ್ಲ ಸೇರಿ ಸೃಜನ ಕಟ್ಟಿದ್ದು, ಪ್ರೆಸ್ ಇಂಟೀರಿಯರ್ ರಾತ್ರಿ ನಿದ್ದೆ ಗೆಟ್ಟು ಮಾಡಿದ್ದು, …. ಎಲ್ಲಾ ಈ ರೂಮಿನಲ್ಲೇ. ಅಂದರೆ ಹಾಲಿನಲ್ಲೇ.

ಅದಾದ ಮೇಲೆ ಹೋದ ಮನೆಯಲ್ಲೂ ನನಗೆ ಅಂತ ಬೆಡ್ ರೂಮಿರಲಿಲ್ಲ. ಅಲ್ಲೂ ಹಾಲೇ ಎಲ್ಲ. ಅದೊಂದು ಚೆಂದದ ಮನೆ. ಸ್ವಂತಕ್ಕೆ ಬೇಕು ಎಂದು ಹೋಗಿದ್ದು. ಅಲ್ಲಿನ ಹಾಲು ದೊಡ್ಡದಾಗಿದ್ದುದಕ್ಕೆ ಅದು ನನ್ನ ಬೆಡ್ ರೂಮ್ ಅಂತ ಕರೆಯುವ ಹಾಗಿಲ್ಲ. ರಾತ್ರಿ ಹಾಲಿನ ನಡುವೆ ಹಾಸಿಗೆ ಹಾಕಿ ಮಲಗುತ್ತಿದ್ದದ್ದು. ತಂಗಿಗೆ ಆ ಮಂಚ ಸೇರಿತ್ತು. ನನಗಾವಾಗ ಚಾಪೆಯ ಮೇಲೆ ಮಲಗುವ ಹುಚ್ಚು ಜೋರಾಗಿತ್ತು. ಹಾಸಿಗೆ ಉಪಯೋಗಿಸ್ತಾ ಇರಲಿಲ್ಲ. ಈಗ ನೆನಸಿಕೊಂಡರೆ ನಗು ಬರುತ್ತೆ. ಆದರೆ ಮಾಡಿದ ಮಂಗಾಟಗಳಿಂದಲೇ ಇಂದಿನ ನಾನು ಮತ್ತೂ ಗಟ್ಟಿಯಾಗುವುದಕ್ಕೆ, ಹಳೆಯದನ್ನು ಕತೆಯ ತರಹ ಬರೆಯಲು ಸಾಧ್ಯವಾಗಿರುವುದು.  ಆ ಹಾಲ್ ನೆನಪಿರುವುದು ಎರಡು ಕಾರಣಗಳಿಗೆ. ಒಂದು ನನ್ನ ಅನಿಮೇಶನ್ ಕನಸು ಹುಟ್ಟಿದ್ದೇ ಅಲ್ಲಿ ಮತ್ತು ಆ ಕನಸಿನೊಂದಿಗೆ ಹುಟ್ಟೂರು ಬಿಟ್ಟು ಮೊದಲ ಬಾರಿಗೆ ದೊಡ್ಡ ಊರಿಗೆ ಕಾಲಿಟ್ಟಿದ್ದು ಅದೇ ಹಾಲಿನಿಂದಲೇ.

ಆಮೇಲೆ ಹೊಸ ಊರು ಸೇರಿ ಮತ್ತೆ ಹಾಸ್ಟೆಲಿನಲ್ಲಿ ಹಾಸಿಗೆಯನ್ನೇ ಮತ್ತೆ ಮನೆಯನ್ನಾಗಿಸಿ, ಆಮೇಲೆ ಒಂದು ಮನೆಯನ್ನೇ ನನ್ನ ರೂಮಾಗಿಸಿ, ತದನಂತರ ಮದುವೆಯಾಗಿ ನನಗೆ ಅಂತ ಒಂದು ಬೆಡ್ ರೂಮ್ ಗಿಟ್ಟಿಸಿಕೊಂಡೆ. ಹಳೆಯ ಎಲ್ಲ ಬೆಡ್ ರೂಮ್ಗಳಲ್ಲಿ , ಹಾಲುಗಳಲ್ಲಿ ಕಂಡ ಮನೆಯ ಕನಸುಗಳು ನಿಧಾನವಾಗಿ ಒಂದೊಂದಾಗಿ ನೇರವೇರತೊಡಗಿತು. ಈಗಲೂ ಭಾಡಿಗೆ ಮನೆಯಲ್ಲೇ ಇದ್ದರೂ ನಾನು ಅಂದು ಕೊಂಡ ಹಾಗೆ ಮನೆಯಿದೆ. ಹಾಗಂತ ಎಲ್ಲವೂ ಅವನಿಂದಲೇ ಅಂತೇನೂ ಇಲ್ಲ. ಕೆಲವು ಅವನು, ಕೆಲವು ಇಬ್ಬರೂ. ಮತ್ತೆ ಹಲವು ನನ್ನ ಕನಸಿಗಾಗಿ ನಾನೇ ಮಾಡಿದ ಅನೇಕ ವಸ್ತುಗಳು. ನನ್ನ ಕನಸನ್ನು ನಾನೇ ಕಾಣಬೇಕು ಮತ್ತು ಅದನ್ನು ಸಾಧಿಸುವುದು ನನ್ನಿಂದ ಮಾತ್ರ ಸಾಧ್ಯ. ಅದನ್ನು ಇನ್ನೊಬ್ಬನ ಮೇಲೆ ಹೇರಿದರೆ ಅವರಿಗೆ ಅದು ಹೊರೆಯೇ ಆಗುತ್ತೆ ಅನ್ನೋದು ನಾನು ಕಂಡು ಕೊಂಡ ಸತ್ಯ. ಆ ಕಾರಣಕ್ಕೆ ಏನೋ ನನ್ನ ಬೆಡ್ ರೂಮಿನಲ್ಲಿ ಕನಸು ಕಾಣುವ ಧೈರ್ಯ ಮತ್ತು ಸಾಧಿಸುವ ನೆಮ್ಮದಿ ಮನೆ ಮಾಡಿದೆ.

ಫಿಶ್ಸು ಮತ್ತು ವೈಫು

ನವೆಂಬರ್ 24, 2014

ಈ ಹೆಂಡ್ತಿಗೂ ಬಂಗಾರದ ಮೀನಿಗೂ ಏಷ್ಟೆಲ್ಲಾ ಹೋಲಿಕೆ!
ತಿನ್ನಲು ಹೊತ್ತಿಗೆ ಸರಿಯಾಗಿ ಆಹಾರ
ಸದಾ ಹೊಳೆಯಿತ್ತಿರಲೆಂದೇ ಬೇಕಾಗುವಷ್ಟು ಬೆಳಕು ಮತ್ತು ಶಾಖ
ಜೀವಂತಿಕೆಗಾಗಿ ಅಲಂಕರಿಸಿದ ಮನೆ
ಬೇಸರಕ್ಕಾಗಿ ಸುತ್ತಲು ವಿವಿಧ ಸಾಮಾನುಗಳು
ಸಮಯಕ್ಕೆ ಸರಿಯಾಗಿ ಸ್ವಚ್ಛ ಹೊಸ ನೀರು
ಎಲ್ಲಕ್ಕಿಂತ ಜಾಸ್ತಿ ತುಂಬಾ ಪ್ರೀತಿ
ಆದರೆ ಇರಬೇಕಾಗಿದ್ದು ಮಾತ್ರ ನಾಲ್ಕು ಗೋಡೆ ಮಧ್ಯ
ಬಾಲ್ಯದಿಂದಲೂ ಬೆಳೆದದ್ದೂ ನಾಲ್ಕು ಗಾಜಿನ ನಡುವೆ
ನದಿಗೆ ಬಿಟ್ಟರೆ ತರಭೇತಿ ಇಲ್ಲದೇ ಸಾವ ಭಯ
ಅದಕ್ಕೆಂದೇ ದೊಡ್ಡ ಕೊಳ ಕಟ್ಟಿಸುವ ಆಸೆ
ಸುತ್ತ ಗೋಡೆ ಇದೆಯೆಂದು ಗೊತ್ತಾಗದಷ್ಟು !

ಸುಮ್ಮನೇ ಅನಿಸಿದ್ದು. ಬಯ್ಕೊಬೇಡಿ.

ಪಬ್ಲಿಕ್ ಕಿಸ್ಸು ( Kiss of Love)

ನವೆಂಬರ್ 20, 2014

ನನಗೆ ಈ ವಿಷಯ ಗೊತ್ತಾಗಿದ್ದೇ ಫೇಸ್‌ಬುಕ್ ಸ್ಟೇಟಸ್ ನೋಡಿ. ಓದಿ ನಗಾಡಿಕೊಂಡೆ. ಏನೇನು ಐಡಿಯಾ ಮಾಡ್ತರಪಾ ಜನಾ ಅಂತ. ಮೊದಲು ಒಂದು ಸಲ ಪಿಂಕ್ ಚೆಡ್ಡಿ ಕ್ಯಾಂಪೇನ್ ಮಾಡಿದ್ರಲ್ವಾ, ಅದರ ನೆನಪಾಯಿತು ನೋಡಿ. ಆಮೇಲೆ ಗೂಗಲ್ ಮಾಡಿ ಇದು ಏನಪಾ ಅಂತ ತಿಳ್ಕೊಂಡೆ. ವಿಷಯ ಗೊತ್ತಾದ ಮೇಲೆ ಈ ರೀತಿ ಪ್ರೋಟೆಸ್ಟ್ ಮಾಡೋದು ತಪ್ಪು ಅಂತ ಬಿಲ್ಕುಲ್ ಅನ್ನಿಸಲಿಲ್ಲ. ವಿಕಿ ಮಾಹಿತಿ ಪ್ರಕಾರ ಪಬ್ಲಿಕ್‌ನಲ್ಲಿ ಕಿಸ್ ಕೊಡೊದು, ಅಪ್ಪಿ ಹಾಕಿಕೊಳ್ಳುದು ಕಾನೂನು ಪ್ರಕಾರ ‘ಅಪರಾಧ’ ಅಲ್ಲ ಅಂತ ಓದಿ ಸಮಾಧಾನ ಆಯಿತು. ನೀವು ಈ ಎರಡು ಕೊಂಡಿಗಳನ್ನು ಓದಿಕೊಬಹುದು. ಒಂದು, ಎರಡು.  ಆದರೂ ಸಂಸ್ಕೃತಿ ರಕ್ಷಿಸೋ ನೆಪದಲ್ಲಿ ಮಾಡೋ ಹಲ್ಲೆಗಳ ಹಿಂದಿನ ಮನಸ್ಥಿತಿ ಬದಲಾಗಲ್ಲ.

ಕೇರಳದಲ್ಲಿ ಆದ ಘಟನೆಗಳನ್ನು ಓದಿ ನೋಡಿ, ಗರ್ಭಿಣಿ ಹೆಂಗಸಿನ ಮೇಲೆ ಆಕೆ ಒಂಟಿಯಾಗಿ ಕೂತಿದ್ದಕ್ಕೇ ಹಲ್ಲೆ ಮಾಡಿದ್ದು, ಗೆಳೆಯನ ಜೊತೆ ಬೈಕಿನಲ್ಲಿ ಹೋಗುತ್ತಿದ್ದಕ್ಕೆ ಕಪಾಳಮೋಕ್ಷ ನೀಡಿದ್ದು, ಹುಡುಗ, ಹುಡುಗಿ ಒಟ್ಟಿಗೆ ಪಯಣಿಸಿದ್ದಕ್ಕೆ ಪೊಲೀಸರು ಹಿಡಿದದ್ದು, ಕೆಫೇನಲ್ಲಿ ಇಬ್ಬರು ಮುತ್ತು ಕೊಟ್ಟು ಹಗ್ ಮಾಡಿದ್ರು ಅನ್ನೋದಕ್ಕೆ ಇಡೀ ಕೆಫೆಯನ್ನೇ ಒಡೆದು ಹಾಕೋದು,…… ಇದು ಯಾವುದು ಸಹ ಸರಿ ಅಲ್ಲ. ಅದಕ್ಕಾಗಿ ಇದನ್ನೆಲ್ಲಾ ವಿರೋಧಿಸುವ ಸಲುವಾಗಿ ಹುಟ್ಟಿದ್ದು ಈ ಕಿಸ್ ಆಫ್ ಲವ್. ನಾವು ಬೀದಿಲೇ ಬಂದು ನಿಂತು ಕಿಸ್ ಕೊಡ್ತೀವಿ, ಹಗ್ ಮಾಡ್ತೀವಿ, ನೀವು ಏನ್ ಮಾಡ್ತಿ ರಪಾ ಅಂತ? ಮೊದಲು ನಿಮ್ಮ ಮನಸ್ಥಿತಿ ಬದಲಾಗಿಸಿಕೊಳ್ಳಿ, ಪ್ರೀತಿ ಮಾಡೊದಕ್ಕೆ ಮತ್ತು ಅದನ್ನು ಅಭಿವ್ಯಕ್ತಿಸೊದಕ್ಕೆ ನಿಮ್ಮ ಹಾಗೆ ನಾಗರೀಕರಾದ ನಮಗೆ ಎಲ್ಲ ಹಕ್ಕುಗಳು ಇವೆ ಅಂತ. ಹಾಗಂತ ಅಶ್ಲೀಲವಾಗಿ ಏನೇನೋ ಬೀದೀಲಿ ಮಾಡೋಕೆ ಅವಕಾಶ ಕೊಡಿ ಅಂತೇನೂ ಆಲ್ವಲ್ಲಾ? ಒಂದು ಮುತ್ತು. ಒಂದು ಅಪ್ಪುಗೆ, ಅಷ್ಟೇ.

——————————

ಅವರಿಬ್ಬರೂ ಲವರ್ಸ್. ಮನೆಯಲ್ಲಿ ಭೇಟಿ ಮಾಡೋಕೆ ಆಗಲ್ಲ ಅಂತ ಪಾರ್ಕಿನಲ್ಲಿ ಸಿಗ್ತಾರೆ. ಕೈ ಕೈ ಹಿಡಿದು ನಡೆದಾಡ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಇರ್ತಾರೆ. ಪ್ರೀತಿ ಜಾಸ್ತಿಯಾಗಿ ಅವಳು ಅವನ ಕೆನ್ನೆಗೊಂದು ಮುತ್ತು ಕೊಡ್ತಾಳೆ. ಅಷ್ಟರಲ್ಲೇ ಹಿಂದಿನಿದ ಕುಟ್ಟುವ ಬೆತ್ತದ ಸದ್ದು ಕೇಳಿಸುತ್ತೆ. ಹೋಗಿ ಹೋಗಿ ಇಲ್ಲಿಂದ, ದೂರ ಆಗಿ! ಏನೋ ತಪ್ಪು ಮಾಡಿದವರ ತರಹ ಕೈ ಕೈ ಬಿಡಿಸಿಕೊಂಡು ಅತ್ತ ಕಡೆ ಸಾಗುತ್ತಾರೆ.

ಎದುರಿಗಿನ ವಿಶಾಲ ಕೆರೆಯನ್ನು ನೋಡುತ್ತಾ ಕುಳಿತುಕೊಳ್ಳುವುದು ಅವರಿಬ್ಬರಿಗೂ ಸಂತಸದ ವಿಷಯ. ತಣ್ಣನೆಯ ಗಾಳಿಗೆ ಹಾರುವ ಅವಳ ಮುಂಗುರುಳು, ಹೊಳೆಯುವ ಕಂಗಳು, ಅವನಿಗೆ ಪ್ರೀತಿ ಬಂದು ಅವಳ ಹೆಗಲಿಗೆ ಕೈ ಹಾಕಿ ಹತ್ತಿರಕ್ಕೆ ಒತ್ತಿಕೊಳ್ಳುತ್ತಾನೆ. ಮತ್ತೆ ಹಿಂದಿನಿಂದ ಬೆತ್ತ ಕುಟ್ಟುವ ಸದ್ದು. ಏಳಿ, ಏಳಿ, ದೂರ ಆಗಿ.

ಇವರಿಬ್ಬರಿಗೂ ಸಂಜೆ ಸಮುದ್ರ ದಂಡೆಯಲ್ಲಿ ಅಡ್ಡಾಡುವುದು ತುಂಬಾ ಪ್ರೀತಿಯ ಸಂಗತಿ. ಅವತ್ತು ಏನಾಗಿತ್ತೋ ಏನೋ, ಪ್ರೀತಿ ಉಕ್ಕಿ ಬಂದು ಅವನು ಇವಳಿಗೆ ಮುತ್ತಿಕ್ಕಿದ. ಆಷ್ಟೇ. ದೂರದಲ್ಲಿದ್ದ ಪೊಲೀಸ್ ಬೈಕ್ ಹತ್ತಿರ ಬರುವರೆಗೂ ಚುಂಬಿಸುತ್ತಲೆ ಇದ್ದ. ಕತೆ ಖಲಾಸ್. ಅವಳು ಅವತ್ತು ಕರಿಮಣಿ ಹಾಕಿರಲಿಲ್ಲ ಜೊತೆಗೆ ಇವರಿಬ್ಬರೂ ಮದುವೆ ಆಗಿದ್ದಕ್ಕೆ ಸಾಕ್ಷಿಯಾದ ಮ್ಯಾರೇಜ್ ಸರ್ಟಿಫಿಕೇಟ್ ಪರ್ಸಿನಲ್ಲಿರಲಿಲ್ಲ!

ಅವರಿಬ್ಬರೂ ಜೊತೆಯಾಗಿ ಓಡಾಡುವುದು ಇವನಿಗೆ ಇಷ್ಟವಿರಲಿಲ್ಲ. ಸೀದಾ ಹೋಗಿ ‘ಅವರ’ ಬಳಿ ಹೇಳಿದ. ಅವತ್ತು ಅವಳು ಅವನ ಬೆನ್ನ ಏರಿ ಬೈಕಿನಲ್ಲಿ ಹೋಗುತ್ತಿದ್ದಳು. ಸರಿಯಾದ ಸಮಯ. ‘ಅವರು’ ಜೀಪಿನಲ್ಲಿ ಬಂದು ಗಾಡಿಗೆ ಅಡ್ಡ ಹಾಕಿದರು. ಸರಿಯಾಗಿ ಪೂಜೆಯಾಯಿತು. ಆ ರಾತ್ರಿ ಅವರಿಬ್ಬರೂ ಹುಡುಗ, ಹುಡುಗಿ ಸ್ನೇಹಿತರಾಗೊದು ನಮ್ಮ ಸಮಾಜದಲ್ಲಿ ಇಷ್ಟು ದೊಡ್ಡ ತಪ್ಪೇ ಅಂತ ಅರ್ಥವಾಗದೆ ನೊವಿನಿಂದ ಒದ್ದಾಡಿದರು. ಈ ಸಂಸ್ಕೃತಿಯ ಬಗ್ಗೆನೇ ಜಿಗುಪ್ಸೆ ಹುಟ್ಟಿತು.

————————————

ಅವಳಿಗೆ ದೇವರೆಂದರೆ ಆಯಿತು. ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡೇ ಹೊರಡೊದು. ಸಂಕಷ್ಟಿ, ನವರಾತ್ರಿ ಎಲ್ಲ ಉಪವಾಸಗಳನ್ನು ನಿಷ್ಠೆಯಿಂದ ಮಾಡುತ್ತಾಳೆ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಉದ್ದ ಜಡೆ ಬಿಟ್ಟುಕೊಂಡು ಲಂಗ ದಾವಣಿ, ಸೀರೆ ಉಡುವ ಹುಡುಗಿಯಲ್ಲ. ಆಕೆಗೆ ಜೀನ್ಸ್ ಮತ್ತು ಮಿಡಿಗಳೆಂದರೆ ತುಂಬಾ ಇಷ್ಟ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಹುಡುಗರನ್ನು ತಿಂದು ಬಿಡುವಂತೆ ನೋಡುವ, ಆಡುವ ಹುಡುಗಿಯಂತೂ ಖಂಡಿತ ಅಲ್ಲ. ಆಕೆಗೆ ಚೆರ್ರಿ ಫ್ಲೇವರಿನ ಬ್ರಿಜರ್ ತುಂಬಾ ಇಷ್ಟ. ವೋಡ್ಕಾ ಸಹ. ಪಾರ್ಟಿಗೆ ಹೋಗೋದು, ಅಲ್ಲಿ ಸ್ನೇಹಿತರ ಜೊತೆ ಮ್ಯೂಸಿಕ್ ನಲ್ಲಿ  ಕುಣಿಯೋದು ಆಕೆಯ ವೀಕೆಂಡ್ ರಿಲಾಕ್ಸ್ ಮಂತ್ರಗಳು.

ಇವಳಿಗೆ ದೇವರೆಂದರೆ ಭಕ್ತಿ ಇದೆ. ಜಾಸ್ತಿ ಏನೂ ಇಲ್ಲ. ಮನೆ, ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾಳೆ. ಅಫೀಸಿನಲ್ಲಿ ಬಾಸ್. ಆಕೆಯ ಕಾರ್ಯ ಕೌಶಲ್ಯದ ಬಗ್ಗೆ ಮಾತನಾಡುವ ಹಾಗೇನೇ ಇಲ್ಲ.  ಅಷ್ಟು ಜಾಣೆ, ಪಟ ಪಟನೆ ಮಾತನಾಡುತ್ತಾ, ಎಲ್ಲರನ್ನೂ ಹುರಿದುಂಬಿಸುವ ಅವಳು ಆಫೀಸಿನ ಎಲ್ಲರಿಗೂ ಇಷ್ಟ. ತಾಸಿಗೊಮ್ಮೆ ಹೊರಗೆ ಹೋಗಿ ಬರ್ತಾಳೆ. ಸಿಗರೇಟ್ ಸೇದೊಕೆ. ದಿನಾ ಮನೆಗೆ ಹೋದ ಮೇಲೂ ಗಂಡನ ಜೊತೆ ಒಂದು ಪೆಗ್ ಹಾಕೇ ಮಲಗೋದು.

ಈಗ ಇವರಿಬ್ಬರೂ ತಪ್ಪು, ನಮ್ಮ ” ಭಾರತೀಯ ನಾರಿ ” ಕೆಟಗಿರಿಗೆ ಸೇರುವುದಿಲ್ಲ ಎಂದು ಹೇಗೆ ಹೇಳೋದು? ಇವರಿಬ್ಬರೂ ಸುಖವಾಗಿ ತಮ್ಮ ಕುಟುಂಬದ ಜೊತೆ ಚೆನ್ನಾಗೇ ಇದ್ದಾರೆ. ಸಮಾಜದ ಜೊತೆಗೂ ಸಹ.

———————————————

ಕಾಲೇಜಿಗೆ ಹೋಗೋ ಆ ಇಬ್ಬರು ಜೋಡಿಗಳಿಗೆ ಮನಸ್ಸು ತುಂಬಾ ಕಾಮನೆಗಳು. ಕದ್ದು ಓದಿದ ಪುಸ್ತಕ, ನೋಡಿದ ಸಿನೆಮಾ, ಚಿತ್ರಗಳು ಎಲ್ಲ ನೆನಪಿಗೆ ಬರುತ್ತೆ. ಹತ್ತಿರ ಬಂದರೆ ಮೈ ಪುಳಕ. ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಾಗುವುದಿಲ್ಲ. ಮನೆಯಲ್ಲಿ ಯಾರಿಗಾದರೂ ಗೊತ್ತಾದರೆ ಮೈ ಪುಡಿಯಾಗುತ್ತೆ. ಇದೆಲ್ಲ ‘ಪಾಪ’ ಎಂದು ನಂಬಿರುವರಲ್ಲಿ ತಮ್ಮ ಈ ಹೊಸ ಭಾವನೆಗಳನ್ನು ಹೇಗೆ ಹೇಳಿಯಾರು? ಅವತ್ತು ಪಾರ್ಕಿನಲ್ಲಿ ಮೈ ಚಳಿ ಬಿಟ್ಟಿದ್ದಾಯ್ತು. ಏನಾಗುತ್ತಿದೆ ಎಂದು ಗೊತ್ತಾಗುವುದರಲ್ಲೇ ಎಲ್ಲ ಮುಗಿದು ಹೋಗಿತ್ತು.

——————————————

ನಾನು ಕೇಳಿದ್ದಂತೆ ಮೊದಲು ಸೀರೆಯ ಜೊತೆ ಕುಪ್ಪಸವಿರಲಿಲ್ಲವಂತೆ. ಮಲೆನಾಡಿನಲ್ಲಿ ಗಿಡ್ಡವಾಗೇ ಸೀರೆ ಉಡುತ್ತಿದ್ದುದಂತೆ. ಒಳಗೆ ಲಂಗವೆನ್ನುವ ಪರಿಚಯ ದೇಹಕ್ಕೆ ಆಗಿರಲಿಲ್ಲವಂತೆ. ಏಷ್ಟೋ ಜಾತಿಗಳಲ್ಲಿ ಸೊಂಟಕ್ಕಿಂತ ಮೇಲೆ ಯಾವುದೇ ಉಡುಪನ್ನು ಧರಿಸುತ್ತಿರಲಿಲ್ಲವಂತೆ. ಜೊತೆಗೆ,  ಮುಖ್ಯವಾಗಿ ಆಗೆಲ್ಲ ಹುಡುಗರು, ಗಂಡಸರು ಧೋತ್ರವನ್ನೋ, ಕುರ್ತಿಯನ್ನೋ, ಪಂಜೆಯನ್ನೋ ಉಡುತ್ತಿದ್ದರಂತೆ! ಕೂದಲು ಸಹ ಉದ್ದವಾಗಿರುತ್ತಿತ್ತು ಅಲ್ಲವೇ? ಈಗ ಮಾತ್ರ ಅವರೆಲ್ಲ ಪ್ಯಾಂಟು, ಜೀನ್ಸಿಗೆ ಬದಲಾಗಿದ್ದಾರೆ ಹಾಗೂ ಹೆಂಗಸರು ಮಾತ್ರ ಇನ್ನೂ ಸೀರೆ, ಉದ್ದ ಜಡೆ, ಕುಂಕುಮ,,…………..ಪುಣ್ಯ ಯಾರು ಲಂಗ ದಾವಣಿ ಅನ್ನುವುದಿಲ್ಲ!

ಹಳೆಯ ಶಿಲ್ಪಗಳಲ್ಲಿ, ಅಜಂತಾ ಅಥವಾ ಇತರ ಪ್ರಾಚೀನ ಚಿತ್ರಗಳಲ್ಲಿ ಹೆಂಗಸರು ತುಂಬಾ ಚೆನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಹಾಗಂತ ಮೈ ತುಂಬಾ, ಮೇಲಿನಿಂದ ಕೆಳಗಿನ ತನಕ ಮೈ ಮುಚ್ಚಿರುವ ಚಿತ್ರಗಳನ್ನು ನೀವೇನಾದರೂ ನೋಡಿದ್ದೀರಾ?

ನನಗೆ ಅದಕ್ಕೆ “ಭಾರತೀಯ ಸಂಸ್ಕೃತಿ ” ಅಂದರೇ ಏನು ಎಂದು ಯಾವಾಗಲೂ ಕನ್‌ಫ್ಯೋಷನ್.  ದೇವರೆಂದರೆ ಯಾರು, ನನಗೂ ಈ ಜಗತ್ತಿಗೂ ಏನು ಸಂಬಂಧ, ಬದುಕೆಂದರೆ ಏನು? ಬದುಕನ್ನು ಸುಖವಾಗಿ, ಸಂತೋಷವಾಗಿ ಕಳೆಯುವುದು ಹೇಗೆ, ಸಾಧಿಸುವುದು ಹೇಗೆ, ಜೀವನ ಕ್ರಮ ಹೇಗೆ,  ಧರ್ಮ, ಕಾಮ, ಅರ್ಥ, ಯೋಗ, ಧ್ಯಾನ ಇತ್ಯಾದಿಗಳೋ ಅಥವಾ ………………………….?

ನಮ್ಮ ಸಂಸ್ಕೃತಿ ಹಾಳಾಯಿತು ಎಂದು ಕೂಗುವ ಮಂದಿ, ತಮ್ಮ ಮಕ್ಕಳಿಗೆ ಈ ಯೋಗ, ಧ್ಯಾನದ ಬಗ್ಗೆ ತರಭೇತಿ ಕೊಟ್ಟಿರುತ್ತಾರಾ? ದೇವರೆಂದರೆ ಎದುರಿಗಿರುವ ಮೂರ್ತಿಯೋ, ಚಿತ್ರ ಮಾತ್ರ ಅಲ್ಲಪ್ಪಾ ಎಂದು ತಿಳಿ ಹೇಳಿರುತ್ತಾರಾ? ಸತ್ವ, ತಮಸ್, ರಜಸ್ ಎಂಬ ಗುಣಗಳ ಬಗ್ಗೆ ಹೇಳಿರುತ್ತಾರಾ? ನಮ್ಮ ಚರಿತ್ರೆಯ ಕತೆಗಳನ್ನು ಹೇಳಿರುತ್ತಾರಾ? ಪುರಾಣದ ರಾಮಾಯಣ, ಮಹಾಭಾರತಗಳನ್ನು ಕೇವಲ ಕತೆಯಾಗಿ (ದೇವರ ಅವತಾರ ಎಂದಲ್ಲದೆ) ಹೇಳಿರುತ್ತಾರಾ? ಬದುಕೆಂದರೆ ಏನು ಎಂದು ತಿಳಿ ಹೇಳಿರುತ್ತಾರಾ? ಇನ್ನೂ ಜನ್ಮ, ಕರ್ಮದ ಬಗ್ಗೆ ನಾನು ಕೇಳುವುದಿಲ್ಲ.

————————————————-

ಮುತ್ತು ಒಂದು ಸುಂದರ ಅನುಭೂತಿ. ಅದು ಎರಡು ಮನಸ್ಸುಗಳ ನಡುವಿನ ಸೇತುವೆ. ಅಮ್ಮ ಮಗುವಿಗೆ ಕೊಡುವ ಮುತ್ತು, ಮಗಳು ಅಪ್ಪನಿಗೆ ಕೊಡುವ ಮುತ್ತು, ಹೆಂಡತಿ ಗಂಡನಿಗೆ, ಅಜ್ಜ, ಅಜ್ಜಿಗೆ,….. ಒಂದು ಅಪ್ಪುಗೆಗೆ, ಒಂದು ಮುತ್ತಿಗೆ ಈ ತರಹದ್ದೇ ಜಾಗ, ಈ ತರಹದ್ದೇ ಸಮಯ ಎಂದು ನಿಗದಿ ಮಾಡಲು ಸಾಧ್ಯಾನಾ? ಅದು ಎಲ್ಲೂ , ಹೇಗೋ ಹುಟ್ಟಬಹುದು. ಅದನ್ನು ನಾಲ್ಕು ಗೋಡೆಯ ಮಧ್ಯ ಮಾತ್ರ ಇರಬೇಕೆಂದು ತೀರ್ಮಾನಿಸಲು ನಾವ್ಯಾರು? ಎಲ್ಲರಿಗೂ ಜನರ ಎದುರು ಮುದ್ದಿಸುವುದು, ಮುದ್ದಿಸಿಕೊಳ್ಳುವುದು ಇಷ್ಟವಾಗುವ ಸಂಗತಿ ಆಗಬೇಕೆಂದಿಲ್ಲ. ಅದು ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಹಾಗಂತ ಎಲ್ಲರೆದುರೇ ಮುದ್ದಿಸುವ, ಮುದ್ದಿಸ್ಕೊಳ್ಳುವ ಸಂಗಾತಿಗಳನ್ನು ದೂಷಿಸಬಹುದೆ? ನಮಗೆ ಕಾಣುವ ತಪ್ಪು ಇನ್ನೊಬ್ಬನಿಗೆ ಸರಿಯಾಗಿರಬಹುದು. ಮುತ್ತು ಎಂದರೇ ಅಸಹ್ಯವೆಂದರೆ ಮತ್ತೇನೋ ಅಂದರೆ ಏನನ್ನುವರೋ!

ನನಗೊಂದು ಕನಸಿದೆ. ಸಮುದ್ರ ದಂಡೆಯಲ್ಲಿ ಜೋಡಿ ಹಕ್ಕಿಗಳು ಹಾರಾಡಿಕೊಂಡಿರುತ್ತವೆ. ಪರಸ್ಪರ ಮುದ್ದಿಸುತ್ತ ಸುಖವಾಗಿ ನಲಿಯುತ್ತಿರುತ್ತವೆ. ಅಲ್ಲಿ ಪ್ರೀತಿಯಿದೆ, ಬಿಸಿ ಬಿಸಿ ಮೈಯಿಲ್ಲ. ಸಿಹಿ ಸಿಹಿ ಅಪ್ಪುಗೆಯಿದೆ. ಕೆಂಪು ಕೆಂಪು ಬೆಂಕಿಯ ಕಣ್ಣುಗಳಿಲ್ಲ. ಆ ಕಡೆ ಮಕ್ಕಳ ಜೊತೆ ಕೂತಿರುವ ಕುಟುಂಬಗಳು. ಅವನು ಮಗುವಿಗೊಂದು ಮುತ್ತಿಕ್ಕಿ  ಅವಳೊಡನೆ ಚುಂಬಿಸಿಕೊಳ್ಳುತ್ತಾನೆ. ಇಬ್ಬರು ಒಬ್ಬರೊಬ್ಬರನ್ನು ನೋಡಿ ಖುಷಿಯಿಂದ ನಗುತ್ತಾರೆ.  ಆನಂದ ಎಲ್ಲ ಕಡೆ ತೇಲುತ್ತಿರುತ್ತೆ.

ಹಾಗೇನೇ ನನಗೊಂದು ಆಸೆಯೂ ಇದೆ. ಪ್ರತಿದಿನ ನೀವು ಆಫೀಸಿನಿಂದ ಮನೆಗೆ ಹೋದಾಗ ನಿಮ್ಮವಳು / ನು ಹತ್ತಿರ ಬಂದು ತಬ್ಬಿ ಮುತ್ತಿಡಲಿ, ಮಗು ಬಂದು ತಬ್ಬಿಕೊಂಡು ಮುತ್ತಿಡಲಿ. ಲವ್ ಯೂ ಅನ್ನಲಿ.  ಕೆಲಸಕ್ಕೆ ಹೊರಟಾಗ ಅಪ್ಪನೋ, ಅಮ್ಮನೋ ಬಂದು ಮುತ್ತಿಡಲಿ, ಲವ್ ಯೂ ಅನ್ನಲಿ. ಸ್ನೇಹಿತರು ಸಿಕ್ಕಾಗ ಅಪ್ಪಿಕೊಂಡು ತುಂಬಾ ಖುಷಿಯಾಯಿತು ಅನ್ನಲಿ, ಸಾಧಿಸಿದಾಗ ಹೆಮ್ಮೆಯಾಯಿತು ಅನ್ನಲಿ, ಬೇಸರವಾದಾಗ ಏನು ಹೇಳದೆ ಲವ್ ಯೂ ಅನ್ನಲಿ. ಎಲ್ಲರಿಗೂ ಜಾಸ್ತಿ ಜಾಸ್ತಿ ಸಿಹಿ ಮುತ್ತು ದಕ್ಕಲಿ.

ಏನಕಂದ್ರೆ ನೀವು ಇನ್ನೊಂದು ಜೀವವನ್ನು ಮುದ್ದಿಸಿದ್ದರೆ, ಮುದ್ದಿಸಿಕೊಂಡಿದ್ದರೆ ಈ ‘ಮಧುರ ಮುತ್ತು’ ಅನ್ನೋದು ಏಷ್ಟು ಅಮೂಲ್ಯವಾದದ್ದು ಅನ್ನೋದು ಗೊತ್ತಿರುತ್ತೆ. ಅದು ಸಿಗಲು ಮತ್ತು ಕೊಡಲು ಇಬ್ಬರ ಮಧ್ಯ ಅನುಬಂಧವೂ ಬೇಕು.  ಮಗುವನ್ನು ಮುದ್ದು ಗೊಂಬೆ ಎಂದು ಮುದ್ದಿಸುವ ಮನಸ್ಥಿತಿ, ನಮ್ಮಷ್ಟೇ ದೊಡ್ಡವರನ್ನು ಮುದ್ದಿಸುವಾಗಲು ಬೇಕು. ಆ ತರಹದ ಎನರ್ಜಿ ಬೂಸ್ಟರ್ ಮುತ್ತುಗಳು ನಿಮ್ಮ ಪ್ರೀತಿ ಪಾತ್ರರಿಂದ ಸದಾ ದೊರೆಯುತ್ತಲೇ ಇರಲಿ.

————————-

ಮತ್ತು ಮುತ್ತಿನ ದಿನ ಯಶಸ್ವಿಯಾಗಲಿ.