ಪರ್ಮಿಶನ್ ಪ್ಲೀಸ್,
ಜೊಂಪೆ ಕೂದಲ ಹಿಡಿದೆಳೆಯಲಾ,
ಹಣೆಯ ನೆರಿಗೆಗಳ ಏಣಿಸಲಾ,
ಹುಬ್ಬ ಅಂದ ಬಣ್ಣಿಸಲಾ,
ಕಣ್ಣ ಮೋಹ ಜಾಲದಲ್ಲಿ ಬೀಳಲಾ,
ಗಡ್ಡದ ಬಿಳಿ ಎಳೆಗಳ ಹೆಕ್ಕಲಾ,
ಬಣ್ಣಗೆಡದ ಮೀಸೆ ಕಚ್ಚಲಾ,
ಆ ಕೆಂದುಟಿಗಳ ಮುತ್ತಲಾ,
ಕಿವಿಯಂಚು ಸವಿಯಲಾ,
ಕತ್ತನ್ನು ಮೋಹಿಸಲಾ,
ಭುಜವನ್ನು ಬಂಧಿಸಲಾ,
ಎದೆಯಾಳದಲ್ಲಿ ಕಳೆದು ಹೋಗಲಾ.
( ಯಾವತ್ತೋ ಬರೆದದ್ದು, ಎಫ್ ಬಿ ನಲ್ಲಿ ಈ ತರಹ ಹಾಕಬಾರದೆಂಬ ಇವನ ಕಟ್ಟಪ್ಪಣೆಗೆ ಮಣಿದು, ನನ್ನ ಬ್ಲಾಗಲ್ಲಿ ಹಾಕಿಕೊಳ್ತಿದ್ದೇನೆ)
———————
ಹೇಳ್ತಾರೆ,
ಬಿಟ್ಟು ಹೋಗೋದು ಅಂದ್ರೆ ಮತ್ತೆ ಸಿಗೋಕೇ ಅಂತ
ಇಲ್ಲಿ ,
ಸಿಗೋದು ಅಂದ್ರೆನೇ ಮತ್ತೆ ಬಿಟ್ಟು ಹೋಗಕೇ ಅಂತ.
October 8, 2014
———————
ಏಯ್ ಫ್ರೆಂಚ್ ಗಡ್ಡದ ಹುಡುಗ,
ನಿನ್ನ ಗಲ್ಲವೊಂದು ಬೆಂಕಿ ಪೊಟ್ಟಣ.
ತುಸುವೇ ಕೆನ್ನೆಯನ್ನು ಗೀರಿದರೂ
ಅಗ್ನಿ ಸ್ಪರ್ಷ!
June 5, 2014
———————
ನಿನ್ನ ರೆಪ್ಪೆಗಳಿಂಚಿನಲ್ಲಿ ವಿಷಾದ ಜಿನುಗದಿರಲಿ
ಒಂದೊಮ್ಮೆ ಉಕ್ಕಿದರೂ
ನನ್ನೀ ಅಧರಗಳು ಅವನ್ನು ಹೀರಿ ಬಿಡಲಿ
ಮತ್ತೊಮ್ಮೆ ಜೀವಕ್ಕೆ , ಜೀವನಕ್ಕೆ
ಸಾವಿರ ಉಮ್ಮಾಗಳು
May 8, 2014
———————
ನೀನು ಮುತ್ತಿಕ್ಕಿದರೆ
ಈ ಕೆನ್ನೆಗೇನು
ಇಡೀ ಜೀವಕ್ಕೇ
ರಂಗು ಬಂದೀತು
April 10, 2014
———————
ನೀ ಇದಿಯಾ ಅಂದ್ರೆ
ಎಲ್ಲಾ ಇದ್ದಂಗೆ
ನೀ ಇಲ್ಲಾ ಅಂದ್ರೆ
ಏನೋ ಕಮ್ಮಿ
ಬಾ ಸಿಕ್ಕು ಬಿಡು ಅನ್ನೊಕೆ
ಇಲ್ಲೇ ಪಕ್ಕದಲ್ಲಿ ಇರೋನು
ಮತ್ತ್ಯಾರು,.
April 2, 2014
———————
‘ಮುತ್ತಿದೆಯಾ?;
‘ಇಲ್ಲವೋ,ನನ್ನಲ್ಲೂ ಖಾಲಿಯಾಗಿವೆ. ಇನ್ನೇನು ಯುದ್ಧ ವಿರಾಮವಾಗಬೇಕು, ನಾನೂ ಕಾಯುತ್ತಿದ್ದೇನೆ.’
‘ಹಮ್..’
‘ನೋಡಲ್ಲಿ, ಚಂದಿರ. ನಿಂಗೊತ್ತಾ, ಆತ ಮಹಾಕಳ್ಳ.
ನಾವು ನಮ್ಮವರಿಗೆ ಎಂದು ಕಳಿಸುವ ಮುತ್ತುಗಳನ್ನು ಇವನು ಎತ್ತಿಕೊಂಡು ಧರಿಸುತ್ತಾನೆ.
ದಿನಕಳೆದಂತೆ ರಾಶಿ ರಾಶಿ ಮುತ್ತುಗಳನ್ನು ಕದ್ದೊಯ್ದು ಬೆಳಗುತ್ತಾ ಹೋಗುತ್ತಾನೆ.
ಕೊನೆಗೊಂದು ದಿನ ಭಾರವೆನಿಸಿ, ಒಂದೊಂದನ್ನೇ ಕಳಚುತ್ತಾ ಹೋಗುತ್ತಾನೆ.
ಅಷ್ಟೂ ಖಾಲಿಯಾದ ಮೇಲೆ ಮತ್ತೆ ಹೊಸ ಮುತ್ತುಗಳ ಹಿಂದೆ ಬೀಳುತ್ತಾನೆ.
ಅವನಿಗೊಂದು ಆಟ. ನಮ್ಮ ಸಂಕಟ ನಮಗೆ…’
‘ಹಮ್, ನಾಳೆ ಹುಣ್ಣಿಮೆ, ಹಾಗಾದರೆ
ನಾಡಿದಿನಿಂದ ಅಲ್ಲಿಂದ ಕಳಿಸಿರುವ ಮುತ್ತುಗಳು ನಮಗೆ ಸಿಗಬಹುದೇನೊ, ಅಲ್ಲವಾ?’
‘….ಹುಂ, ನೋಡು ಅಲ್ಲಿ ಹೊಳೆಯಿತ್ತಿರುವ ಮುತ್ತು ನಿಂದಾ, ನಂದಾ, …………..’
February 15 ,2014
———————
ಮಾತಲ್ಲಿ ಮುತ್ತಿಲ್ಲ , ಮುತ್ತಲ್ಲಿ ಮತ್ತಿಲ್ಲ, ಮದಿರೆಯೇ ನೀ ನನಗೆಲ್ಲ
December 3, 2013
————-