ಸ್ವಂತ ಮನೆಯಲ್ಲಿ ಹುಟ್ಟಿದವರಿಗೆ/ ಸ್ವಂತ ಮನೆಯನ್ನೇ ಸೇರಿದವರಿಗೆ ಭಾಡಿಗೆ ಮನೆಯಲ್ಲಿ ಇರುವವರ ತಲ್ಲಣಗಳು ಅರ್ಥವಾಗುತ್ತಾ? ಇದನ್ನು ಯೋಚಿಸುತ್ತಾ ಬೇರೆಯ ವಿಷಯಗಳು ತಲೆಗೆ ಬರುತ್ತಾ ಹೋದವು.
————-
ನಾನೆಂದೂ ಸ್ವಂತ ಮನೆಯನ್ನು ನೋಡಿದವಳಲ್ಲ. ಭಾಡಿಗೆ ಮನೆಯಲ್ಲಿ ಹುಟ್ಟಿ ಬದುಕಿನ ನಲವತ್ತು ವರ್ಷ ಭಾಡಿಗೆ ಮನೆಯಲ್ಲಿ ಕಳೆದಿರುವುದರಿಂದ, ಸ್ವಂತ ಮನೆಯಲ್ಲಿ ಹುಟ್ಟಿ, ಸ್ವಂತ ಆಸ್ತಿ ಇರುವ ಇವನು ಹೇಳುವ ಸ್ವಂತ ಮನೆಯ ಕನಸು ಯಾವತ್ತೂ ನನ್ನದಾಗಲಿಲ್ಲ. ಈಗ ಇಷ್ಟು ದೊಡ್ಡ ಇರುವ ಭಾಡಿಗೆ ಮನೆಯನ್ನು ಬಿಟ್ಟು ಇದರ ಅರ್ಧವಾಗಿರುವ ಸ್ವಂತ ಮನೆಗೆ ಹೋಗುವುದು ನನ್ನಲ್ಲಿ ಯಾವುದೇ ಖುಷಿಯನ್ನು, ಆಸಕ್ತಿಯನ್ನು ಹುಟ್ಟಿಸದೇ ಇರುವುದಕ್ಕೆ ಇದು ಕಾರಣವಾಗಿರಬಹುದು. ಆದರೆ ಮುಂಬಯಿಯಂತಹ ಶಹರದಲ್ಲಿ ಇಷ್ಟು ದೊಡ್ಡ ಮನೆ ಮತ್ತು ಇದಕ್ಕಿಂತ ಆಧುನಿಕ ಸೌಕರ್ಯಗಳು ಬೇಕು ಅಂದರೆ ಲಕ್ಷಗಳನ್ನು ಬಿಟ್ಟು ಕೋಟಿಯತ್ತ ಮುಖ ಮಾಡಬೇಕು. ಹಾಗೇ ಮಾಡಿದರೆ ದೊಡ್ಡ ಮನೆ ಸಿಗುತ್ತದೆ, ಆದರೆ ಈಗಿರುವ ಹಣಕಾಸಿನ ನೆಮ್ಮದಿ ಬಿಟ್ಟು ಹೋಗುತ್ತದೆ. ಇಲ್ಲವೇ, ಮುಂಬಯಿಯ ಪಕ್ಕದ ಊರಾದ ಈ ಥಾಣೆಯನ್ನೂ ಬಿಟ್ಟು ಇನ್ನೂ ದೂರದ ಕಲ್ಯಾಣ, ದೊಂಬಿವಿಲಿ ಕಡೆ ಹೋಗಬೇಕು. ಆದರೆ ಥಾಣೆಯ ಶಹರದ ಸೌಕರ್ಯಗಳೂ ಅಲ್ಲಿ ಸಿಗುವುದಿಲ್ಲ. ಒಳ್ಳೆಯ ಶಾಪಿಂಗ್ ಮಾಲ್ ಬೇಕು ಅಂದರೂ ಥಾಣೆಗೆ ಬರಬೇಕು. ಅದೂ ಬೇಡ ಅಂದರೆ ಹತ್ತು ಹದಿನೈದು ವರ್ಷ ಹಳೆಯ ಸೌಕರ್ಯಗಳಿಗೆ ಹೋಗಬೇಕು. ನನ್ನ ಸ್ನೇಹಿತ ಹೇಳಿದ ಹಾಗೆ, ನೀವು ದುಡ್ಡು ಕೊಟ್ಟಿದ್ದು ಮನೆಗಲ್ಲ, 2 ಎಕರೆ ಪ್ರೈವೇಟ್ ಕಾಡಿಗೆ, ಐದು ಸ್ವಿಮ್ಮಿಂಗ್ ಪೂಲುಗಳಿಗೆ, ಫುಟ್ ಬಾಲ್ ಸ್ಟೇಡಿಯಂಗೆ, … ( ನಾನು ಅವನ ಹತ್ತಿರ ಕೊಚ್ಚಿಗೊಂಡ ಆಧುನಿಕ ಸೌಲಭ್ಯಗಳು)
——
ಈಗ ಹೊಸ ಮನೆಗೆ ಹೊಸತು ಬೇಕು. ಇಲ್ಲಿ ಮಾಡಿಕೊಂಡಿರುವ ಹೆಚ್ಚಿನ ಪಿಠೋಪಕರಣಗಳನ್ನು ಮಾರುವುದು ಎಂದಾಗಿದೆ. ಇವೆಲ್ಲ ಮಾಡುತ್ತಿರುವಾಗ ನಾನೂ ದುಡಿಯುತ್ತ ಇದ್ದೆ. ನಮ್ಮದು 50:50 ಫಾರ್ಮುಲಾ. ಅರ್ಧ ದುಡ್ಡು ನಾನು ಹಾಕುತ್ತಾ ಇದ್ದೆ. ಪ್ರತಿ ಸಾಮಾನಿನ ಹಿಂದೆ ದುಡ್ಡು ಶೇಖರ ಮಾಡಿ ಹುಡುಕಾಡಿ ತೆಗೆದುಕೊಂಡ ಕತೆಗಳಿವೆ. ಪ್ರತಿ ಸಾಮಾನನ್ನೂ ತೆಗೆದು ಕೊಂಡಾಗಲೂ ಹೆಮ್ಮೆಯಿಂದ ನೋಡಿದ್ದಿದೆ. ಬೆಂಗಳೂರಿನಿಂದಲೂ ಮುಂಬಯಿಗೆ ತಂದುಕೊಂಡ ವಸ್ತುಗಳಿವೆ. ಈಗ ಮೊದಲಿನ ಹಾಗೇ ದುಡ್ಡು ಕೂಡಿಟ್ಟು ಸಾಮಾನು ಮಾಡುವ ಅಗತ್ಯವಿಲ್ಲ. ಆದರೆ ಈ ಮನೆಯಲ್ಲಿ ಬದುಕಿದ ಹನ್ನೊಂದು ವರ್ಷದ ನೆನಪು ಇಲ್ಲಿರುವ ಎಲ್ಲಾ ಸಾಮಾನುಗಳಲ್ಲಿವೆ. ಇದನ್ನೆಲ್ಲಾ ಬಿಟ್ಟು ಅಥವಾ ತೆಗೆದಿಟ್ಟು ಹೊಸದು ಮತ್ತೆ ಬದುಕಿನಲ್ಲಿ ತಂದು ಕೊಳ್ಳುವುದು ನನಗೆ ಕಷ್ಟ. ನಾನೂ ದುಡ್ಡು ಹಾಕುತ್ತಾ ಇದ್ದರೆ ಈ ಕಷ್ಟ ನನಗೆ ಆಗುತ್ತಿರಲಿಲ್ಲವೇನೋ. ಈಗ ಅವನ ಸ್ವಂತ ದುಡಿಮೆಯ ಮನೆ, ಪೂರ್ತಿ ಅವನದೇ. ಅಲ್ಲಿರುವ ಎಲ್ಲಾ ಹೊಸ ಸಾಮಾನುಗಳೂ ಪೂರ್ತಿ ಅವನದ್ದೇ ಆಗಲಿವೆ. ವಿನ್ಯಾಸದ ಐಡಿಯಾ ನನ್ನದೇ ಆದರೂ ನನಗೆ ಸಮಾಧಾನವಿಲ್ಲ. ನಿನ್ನೆ ಮನೆಯ ಬಾಗಿಲಿಗೆ ಬಿಲ್ಡರ್ ಅವನ ಹೆಸರಿನ ನಾಮ ಫಲಕ ಅಂಟಿಸಿ ಹೋಗಿದ್ದರು. ನಾನೂ ದುಡಿಯುತ್ತಾ ಅರ್ಧ ದುಡ್ಡು ಹಾಕುವ ಹಾಗಿದ್ದರೆ, ನನ್ನ ಹೆಸರೂ ಇದರಲ್ಲಿ ಬರುತ್ತಾ ಇತ್ತು ಎಂದೆಣಿಸದೇ ಇರಲಿಲ್ಲ. ಆದರೆ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡ ಇವನಿಗೆ, ಅವನ ಹೆಸರು ಇರುವ ಹೊಳೆಯುವ ಫಲಕ ಕೊಡುತ್ತಿರುವ ಖುಷಿಯನ್ನು ಬೇರೆ ಏನೋ ಹೇಳಿ ಹಾಳು ಮಾಡುವ ಮನಸ್ಸಾಗಲಿಲ್ಲ. ನೋಡಿ, ಎಲ್ಲಾ ಭಾವಗಳನ್ನು ಮುಚ್ಚಿಟ್ಟು, ಕಂಗ್ರಾಟ್ಸ್ ಅಷ್ಟೇ ಹೇಳಿದೆ.ಹಾಗಂತ ಇವನಷ್ಟು ದುಡಿದು, ಸ್ವಂತ ಮನೆ ನಾನು ಮಾಡುವುದಾದರೆ, ಇನ್ನೂ ಹತ್ತು ವರ್ಷಗಳು ಮಿನಿಮಮ್ ಆಗಿ ಬೇಕು. ಕೆಲಸಕ್ಕೆ ವಾಪಾಸ್ಸು ಸೇರಿದರೂ ಸಂಬಳ ಸಿಗುವುದು ಏಳು ವರ್ಷ ಹಿಂದೆ ಮಗುವಿಗಾಗಿ ಬಿಟ್ಟ ಕೆಲಸದ ಮೇಲೆಯೇ. ಏಳು ವರ್ಷದಲ್ಲಿ ಕೆಲಸ ಮಾಡುವ ವಿಧಾನವೇ ಬೇರೆಯಾಗಿದೆ. ಮತ್ತೆ ಹೊಸದನ್ನು ಕಲಿತು, ಅದರಲ್ಲಿ ಪರಿಣತಿ ಗಳಿಸಿ, ಸಂಬಳ ಜಾಸ್ತಿ ಮಾಡಿಕೊಳ್ಳುತ್ತ, ಹಣ ಕೂಡಿಟ್ಟು, … ಕೂದಲೂ ಇನ್ನೂ ಬೆಳ್ಳವಾಗಿ, ….. ಇದೆಲ್ಲಕ್ಕಿಂತ ಒಳ್ಳೆಯ ಕೆಲಸ, ಸ್ವಲ್ಪ ಕಷ್ಟವಾದರೂ ಇವನ ಜೊತೆ ಇವನ ಸ್ವಂತ ಮನೆಯಲ್ಲಿ ಹೆಂಡತಿ ಪಟ್ಟದ ಆಧಾರದ ಮೇಲೆ, ಇದು ತನ್ನದೂ ಮನೆ ಅನ್ನುವ ಸುಳ್ಳು ನಂಬಿಕೆಯನ್ನು ಬೆಳೆಸಿಕೊಂಡು ಆರಾಮಾಗಿ ಈಗ ಮಾಡುತ್ತಿರುವ ಹಣ ಬರದೇ ಇರುವ ಕೆಲಸಗಳನ್ನು ತೃಪ್ತಿಯಿಂದ ಮಾಡುತ್ತ, ಅದಕ್ಕೂ, ಎಲ್ಲದಕ್ಕೂ ಇವನದೇ ಸಂಬಳದ ಹಣವನ್ನು ವಿನಿಯೋಗಿಸುತ್ತಾ ಖುಷಿಯಾಗಿರುವುದು. ಗಂಡನ ಹಣ, ಆಸ್ತಿಯ ಮೇಲೆ ಹೆಂಡತಿಯ ಅಧಿಕಾರ ಇಲ್ಲ ಎಂದು ನಂಬುವ ನಾನು, ಕಾನೂನು ಮತ್ತು ಸಮಾಜ ಕೊಟ್ಟಿರುವ ಈ ಹಕ್ಕನ್ನು ಚಲಾಯಿಸುವುದನ್ನು ಕಲಿತು ಕೊಳ್ಳಬೇಕಿದೆ.
————-
ಇಲ್ಲಿ ಏನೂ ಬರೆದರೂ ಮತ್ತೆ ನಾಳೆ ಬೆಳಿಗ್ಗೆಯಿಂದ ಕಣ್ಣೆದುರು ಕಾಣುತ್ತಿರುವ ಸಾಮಾನುಗಳನ್ನು ಮಾರಲು ಮನಸ್ಸಾಗುತ್ತಿಲ್ಲ. ಮೊನ್ನೆ ಇಲ್ಲಿಯ ಸೊಸೈಟಿಯಲ್ಲಿ ಮಾರುತ್ತೇನೆ ಎಂದು ಫೋಷಿಸಿ, ಬಹಳ ಜನ ಕೇಳಿ, ಇದ್ದಕ್ಕಿದ್ದ ಹಾಗೆ ಮನೆ ಖಾಲಿ ಆಗಿ ಹೋಗುತ್ತೆ, ನನ್ನದು-ನಾನು ಖರೀದಿಸಿದ್ದು ಅನ್ನುವ ಎಲ್ಲದೂ ಬಿಟ್ಟು ಹೋಗುತ್ತದೆ ಅನ್ನುವುದನ್ನು ಅರಗಿಸಿಕೊಳ್ಳಲಾಗದೇ ಸುಮ್ಮನಾಗಿದ್ದೆ. ಇವನಿಗೂ ಕಳೆದ ಒಂದು ತಿಂಗಳಿನಿಂದ ದಿನಾ ನನಗೆ ಹೇಳಿ ಬೇಜಾರು ಬಂದಿದೆ. ನೀನಾಗೇ ಮಾರದಿದ್ದರೆ, ಯಾರಿಗಾದರೂ ಉಚಿತವಾಗಿ ಕೊಟ್ಟು ಹೋಗುತ್ತೇವೆ, ಆಮೇಲೆ ನೀನು ಏನೂ ಹೇಳಬಾರದು ಅನ್ನುವದೂ ಆಗಿದೆ. ಏನೇ ಮಾಡಿದರೂ ಇನ್ನು ಹದಿನೈದು ದಿನಗಳಲ್ಲಿ ಎಲ್ಲವೂ, ಎಲ್ಲಾ ನೆನಪುಗಳೂ ಬಿಟ್ಟು ಹೋಗಲಿವೆ.
——————-
ನಿಮ್ಮದೊಂದು ಉತ್ತರ