ಊಟದ ಮೊದಲ ತುತ್ತಿಡುವಾಗ ಆ ಚಿತ್ರಗಳು ಮತ್ತೆ ಮೂಡುತ್ತವೆ. ಇವನು ಕೇಳ್ತಾನೆ, ‘ಮತ್ತ್ಯಾಕೆ ಅಳ್ತಿದಿಯಾ? ಏನ್ ಕತೆಯೋ ನಿಂದು’ ಅಂತ.
ಚೆನ್ನೈ ಚಂಡಮಾರುತಕ್ಕೆ ಸಿಕ್ಕಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದವು. ಅದೇ ಸಮಯದಲ್ಲಿ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಬಸ್ ಕಾಯುತ್ತಾ ನಿಂತವಳಿಗೆ ಪೇಪರಿನಲ್ಲಿ ಏನನ್ನೋ ಹಿಡಿದುಕೊಂಡು ಇತ್ತ ಕಡೆ ಬರುತ್ತಿದ್ದ ಅವನು ಕಂಡ. ಬಡವ ಎಂದು ಅನ್ನಿಸುತ್ತಿರಲಿಲ್ಲ. ಬಟ್ಟೆ ಕೊಳಕಾಗಿತ್ತಷ್ಟೆ. ಇತ್ತ ನನ್ನ ಪಕ್ಕದಲ್ಲಿ ರಸ್ತೆಯಲ್ಲಿ ಕೂತ ಆಕೆಯತ್ತ ತೆರಳಿ ಪೇಪರಿನಲ್ಲಿದ್ದ ಬಿಳಿ ಅನ್ನ ತೋರಿಸಿದ. ಆಕೆ ದುಃಖದಲ್ಲಿ ತಿನ್ನಲು ತಯಾರಾಗಲಿಲ್ಲ. ಆತ ಪ್ರೀತಿಯಲ್ಲಿ ಅದೇನೋ ಹೇಳುತ್ತಾ ಕೈಯಲ್ಲಿದ್ದ ಪೇಪರಿನಿಂದ ಅನ್ನದ ತುತ್ತೆತ್ತಿ ಆಕೆಗೆ ತಿನ್ನಿಸತೊಡಗಿದ. ಬಸ್ ಬಂತು, ನಾನು ಹತ್ತಿ ಸೀಟಿನಲ್ಲಿ ಕೂತು ಆತನತ್ತ ಕಣ್ ತುಂಬಿ ನೋಡಿದಾಗ ಚಲಿಸುತ್ತಿದ್ದ ಗಾಜಿನ ಹಿಂದೆ ಆತ ನನ್ನೆಡೆ ಮುಗುಳ್ನಕ್ಕಂತೆ ಕಂಡಿತು.
ಹರಿದ್ವಾರದ ಬೀದಿ ಬದಿಯ ಯಾವುದೋ ಒಂದು ಗುರುದ್ವಾರದ ಮೆಟ್ಟಿಲುಗಳ ಮೇಲೆ ಕೂತಿದ್ದೆ. ಮೊಬೈಲಿನಲ್ಲಿ ನಾಳೆ ದೆಹಲಿಗೆ ಹೋಗಿ ಉಳಿಯುವ ಹೋಟೆಲ್ ಗಳಿಗಾಗಿ ಹುಡುಕಾಟ ನಡೆಸಿದ್ದೆ. ಎದುರಿಗೆ ನೆಲದಲ್ಲಿ ಸಾಲಿನಲ್ಲಿ ಅವರೆಲ್ಲ ಕೈ ನಲ್ಲಿ ಪ್ಲಾಸ್ಟಿಕ್ ಹಿಡಿದು ಕೂತಿದ್ದರು. ಒಳಗಿನಿಂದ ಬಂದವರು ಅದರಲ್ಲಿ ಬಡಿಸುತ್ತಿದ್ದನ್ನು ತಿನ್ನುತ್ತಿದ್ದರು. ನಾನು ಸಾವಿರಗಳ ರೂಮಿನಲ್ಲಿ ಯಾವುದು ಸರಿ ಹೋಗುತ್ತೆ ಎಂದು ಲೆಕ್ಕಾಚಾರ ಮಾಡುತ್ತ, ನಾಳಿನ ದೆಹಲಿ ಸುತ್ತಾಟಗಳ ಬಗ್ಗೆ ಲೀಸ್ಟ್ ಮಾಡುತ್ತಾ ಕೂತಿದ್ದೆ. ಮತ್ತೆ ಹತ್ತು ನಿಮಿಷ ಬಸ್ ಹೊರಡುವವವರೆಗೆ ಅವರನ್ನು ಸುಮ್ಮನೇ ನೋಡುತ್ತಾ ಕುಳಿತಿದ್ದೆ. ಪ್ಲಾಸ್ಟಿಕ್ ಎತ್ತಿ ಕೊನೆಯ ಹನಿಯನ್ನು ಬಿಡದೇ ಅವನು ಕುಡಿಯುತ್ತಿದ್ದ.
ಜೊತೆಗೆ ಹುಷಾರಿಲ್ಲದ ಆ ಜೀವಕ್ಕೆ ರೊಟ್ಟಿ ತಿನ್ನಿಸುತ್ತಿರುವ ಅವನ ಚಿತ್ರ ಮತ್ತು ಎದುರಿಗಿನ ಕಪ್ಪು ಮಡಿಕೆಯ ಮೇಲಿನ ಮುಚ್ಚುಳ ತೆರೆದು,ಕಪ್ಪಿನಲ್ಲಿ ಅಂಬಲಿ ಎತ್ತಿ ಕುಡಿಯುತ್ತಾ , ಅಕೆಯೆಡೆ ನೋಡಿ ಮುಗುಳ್ನಗುವ ಅವನ ಚಿತ್ರ. ಇವೆರಡೂ ಪದೇ ಪದೇ ನೆನಪಿಗೆ ಬರುವ ಮತ್ತೆರಡು ಚಿತ್ರಗಳು. ಬಾಲ್ಯದಲ್ಲಿ ಯಾವ ಸಿನೆಮಾದಲ್ಲಿ ನೋಡಿದ್ದೇನೊ ಗೊತ್ತಿಲ್ಲ. ಅವನು, ಆಕೆ ಯಾರು ಅನ್ನೋದು ಗೊತ್ತಿಲ್ಲ. ಆದರೆ ರೊಟ್ಟಿ ಮಾಡಿಕೊಂಡು ತಿನ್ನುವಾಗ ಮಾತ್ರ ಮತ್ತೆ ನೆನಪಿಗೆ ಬರುತ್ತೆ. ಕಣ್ ತುಂಬಿ ಬರುತ್ತೆ, ಮತ್ತೆ ಇವನು ಕೇಳ್ತಾನೆ, ‘ಮತ್ತ್ಯಾಕೆ…………..
ನಿಮ್ಮದೊಂದು ಉತ್ತರ