ಇನ್ಕಂ ಟ್ಯಾಕ್ಸ್ ನಿಂದ ನವೋದಯದವರೆಗೆ

ಮೊನ್ನೆ ಮನೇಲಿ ಟ್ಯಾಕ್ಸ್ ಹೇಂಗೆ ಉಳಿಸಿಕೊಳ್ಳಬಹುದು ಎಂದು ಚರ್ಚೆ ಆಗ್ತಾ ಇತ್ತು. ನಂಗೆ ಇದು ಯಾಕೊ ಸರಿ ಬರಲ್ಲ. ಸರಕಾರಕ್ಕೆ ನಾವು ದುಡ್ಡು ಕಟ್ಟದೇ ಇದ್ರೆ ಅದಕ್ಕೆ ಬೇರೆ ಎಲ್ಲಿಂದ ದುಡ್ಡು ಬರುತ್ತೆ, ಸರಕಾರ ನಮ್ಮದು ತಾನೇ, ಟ್ಯಾಕ್ಸ್ ಉಳಿಸುವ ನಾವೇ ನಾಳೆ ಸರಕಾರ ರೋಡ್ ಸರಿ ಮಾಡಿಲ್ಲ, ಸಬ್ಸಿಡಿ ಕೊಡ್ತಿಲ್ಲ ಎಂದೆಲ್ಲ ಖ್ಯಾತೆ ತೆಗಿತೇವೆ ಅಂತ ನಾನು. ನಾವು ಕಷ್ಟ ಪಟ್ಟು ದುಡಿಯೊ ದುಡ್ಡು ಯಾರೋ ರಾಜಕಾರಣಿಗಳ ಹೊಟ್ಟೆಗೆ ಹೋಗುತ್ತೆ, ಹಾಂಗಾಗಿ ಆದಷ್ಟು ಕಡಿಮೆ ಟ್ಯಾಕ್ಸ್ ಕಟ್ಟಬೇಕು ಅಂತ ಅವರು. ಉಫ್ ! ಸರಪಳಿಯ ಎಲ್ಲ ಕೊಂಡಿಗಳು ಗಟ್ಟಿ ಇದ್ದರಷ್ಟೆ ಅದಕ್ಕೆ ಬಲ ಬರುವುದು, ಭದ್ರತೆ ಸಿಗುವುದು. ಇಲ್ಲಿ ಎಲ್ಲ ಕೊಂಡಿಗಳು ಸ್ವಾರ್ಥವನ್ನೇ ನೋಡಿಕೊಳ್ಳುತ್ತ ಕಳಚಿಕೊಳ್ಳುವ ತಯಾರಿ ನಡೆಸಿವೆ.

ನಂಗ್ಯಾಕೋ ಇದ್ದಕಿದ್ದಂತೆ ನವೋದಯ ನೆನಪಾಯಿತು, ನಾನು ಸತತ ಐದು ವರ್ಷ ಭಾರತದ ಪ್ರತಿಯೊಬ್ಬ ಪ್ರಜೆಯು ಕಟ್ಟುವ ಟ್ಯಾಕ್ಸ್ ನ ಹಣದ ಒಂದು ಭಾಗದಿಂದ ಬದುಕಿ ಬೆಳೆದಿದ್ದೇನೆ ಎಂದು ಅನ್ನಿಸತೊಡಗಿತು. ನಿಜ, ಭಾರತ ದೇಶ ಕೇವಲ ನನ್ನ ಬುದ್ಧಿಮತ್ತೆಗಾಗಿ ನನಗೆ ಅನ್ನ, ನೀರು, ವಿದ್ಯಾಭ್ಯಾಸ… ಎಲ್ಲ ಕೊಟ್ಟು ಪೊರೆದಿದೆ, ಇವತ್ತು ನಾನೇನಾಗಿದ್ದೇನೊ ಅದರಲ್ಲಿ ಇಡೀ ಭಾರತ ದೇಶದ ಕೊಡುಗೆಯಿದೆ. ನಾನು ಒಂದು ಐದು ವರ್ಷ ಅಕ್ಷರಶಹ ದೇಶದ ಮಗಳಾಗಿ ಹೋಗಿದ್ದೆ.

ನಮ್ಮ ಭಾರತ ಸರಕಾರ ಪ್ರತಿ ಜಿಲ್ಲೆಗೊಂದರಂತೆ ಜವಾಹರ ನವೋದಯ ವಿದ್ಯಾಲಯಗಳೆಂಬ ರೆಸಿಡೆನ್ಸಿ ಸ್ಕೂಲ್ ಗಳನ್ನು ನಡೆಸುತ್ತಿದೆ. ಭಾರತಾದ್ಯಂತ ಸಿಬಿಎಸ್ಸಿ ವತಿಯಿಂದ ೫ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳ ಐಕ್ಯೂ ಟೆಸ್ಟ್ ನಡೆಸಿ ಪ್ರತಿಭಾವಂತ ಮಕ್ಕಳ ಪಟ್ಟಿ ತಯಾರಿಸಲಾಗುತ್ತದೆ. ಹೀಗೆ ಹೆಕ್ಕಿ ತೆಗೆದವರಿಗೆ ಕೇಂದ್ರ ಸರಕಾರ ಏಳು ವರ್ಷಗಳ ಕಾಲ ಉಚಿತ ಶಿಕ್ಷಣ ಹಾಗೂ ವಸತಿಯನ್ನು ಕಲ್ಪಿಸುತ್ತದೆ. ಸಿಬಿಎಸ್ಸಿ ಪುಸ್ತಕ, ಪಟ್ಟಿ-ಪೆನ್-ಪೆನ್ಸಿಲ್, ಯುನಿಫಾರಂ, ಶೂ, ಚಪ್ಪಲಿ, ಹಾಸಿಗೆ ಬಟ್ಟೆಗಳು, ಮೈ-ಬಟ್ಟೆ ಸಾಬೂನು, ನೀಲಿ, ತಲೆಗೆ ಎಣ್ಣೆ, ಸೂಜಿ ದಾರ……. ಹೀಗೆ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತದೆ. ಎಲ್ಲವೂ ಒಳ್ಳೆಯ ಕ್ವಾಲಿಟಿದೇ. ಸ್ಪೋರ್ಟ್ಸನಲ್ಲಿ ಚೆನ್ನಾಗಿದ್ದವರಿಗೆ ಸ್ಪೊರ್ಟ್ಸ ಶೂ ಮತ್ತು ಎಕ್ಸಟ್ರಾ ಪ್ರೋಟೀನ್ ಫುಡಗಳು. ನಿಪುಣರಿದ್ದರೆ ಅವರನ್ನು ನ್ಯಾಶನಲ್ ಲೆವೆಲ್ ತನಕ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮ್ಯೂಸಿಕನಲ್ಲಿ ಆಸಕ್ತಿ ಇದ್ದವರಿಗೆ ಬಗೆ ಬಗೆಯ ವಾದನಗಳು ಹಾಗೂ ಶಾಸ್ತ್ರೀಯ ಸಂಗೀತ ಕಲಿಕೆ. ಕಲೆಯಲ್ಲಿ ಇಷ್ಟವಿದ್ದವರಿಗೆ ಬಣ್ಣ, ಕ್ಯಾನ್ವಾಸ್ ಗಳು. ನೆನಪಲ್ಲಿ ಇದ್ದಂತೆ ನನ್ನ ಕ್ಲಾಸಿನಲ್ಲಿ ಇದ್ದದ್ದು ಕೇವಲ ೨೦ ಜನ. ಪ್ರತಿ ವಿಷಯಕ್ಕೂ ನುರಿತ ಬೇರೆ ಬೇರೆ ಸರ್ರು, ಮೇಡಂಗಳು. ಪ್ರಾಬ್ಲಂ ಇದ್ದರೆ ವೈಯಕ್ತಿಕವಾಗಿ ಕೇಳಿ ಕಲಿಯುವ ಅವಾಕಾಶ. ಹೀಗೆ ಸರ್ವಾಂಗೀಣ ಬೆಳವಣಿಗೆ. ಅದೂ ಉಚಿತವಾಗಿ!

ನೆನಪಿದ್ದಂತೆ ನನ್ನ ದಿನಚರಿ ಹೀಂಗಿತ್ತು; ಬೆಳಿಗ್ಗೆ 5.30ಕ್ಕೆ ಅಲಾರಂ. 6 ಗಂಟೆಗೆ ಪಿಟಿ. 7ರವರೆಗೆ ರೋಲ್ ಕಾಲ, ಜಾಗಿಂಗು ಮತ್ತು ಎಕ್ಸರ್ ಸೈಸ್. 7.15ಕ್ಕೆ ಬೊರ್ನವೀಟಾ. 7.30 ರಿಂದ ರೋಲ್ ಕಾಲ್, ಪರೇಡ ಮತ್ತು ಪ್ರಾರ್ಥನೆ. 8ರಿಂದ 9ರವರೆಗೆ 2 ಪಿರಿಯೆಡ್ಡು. 9ರಿಂದ 10 ತಿಂಡಿ ಮತ್ತು ಹಾಲು. 10 ರಿಂದ 11.30 ವರೆಗೆ 3 ಪಿರಿಯೆಡ್ಡು. ಮತ್ತೆ ಬೊರ್ನವೀಟಾ. 11.45 ರಿಂದ 1.45ರವರೆಗೆ 3 ಪಿರಿಯೆಡ್ಡು. ಅಮೇಲೆ ಊಟ. ಅನ್ನ, ಸಂಬಾರು, ಪಲ್ಯ, ಮಜ್ಜಿಗೆ, ಉಪ್ಪಿನ ಕಾಯಿ. 3ರಿಂದ 5 ಓದು. 5ರಿಂದ 5.30 ಬೋರ್ನವೀಟಾ ಮತ್ತು ಬಿಸ್ಕಿಟು. ಆಮೇಲೆ 6.30 ತನಕ ರೋಲ್ ಕಾಲು, ಜೋಗಿಂಗು ಮತ್ತು ಆಟಗಳು. 7ರಿಂದ 8 ಮತ್ತೆ ಓದು. 8 ರಿಂದ ಊಟ. ಅನ್ನ, ಸಾರು, ಪಲ್ಯ, ಮಜ್ಜಿಗೆ, ಚಪಾತಿ. ವಾರಕ್ಕೆರಡು ದಿನ ಸ್ವೀಟ್ ಅಥವಾ ನಾನ್ ವೆಜ್. 9.30ಗೆ ರೋಲ್ ಕಾಲ್ ಮತ್ತು ನಿದ್ದೆ. ವಾರಕ್ಕೆರಡು ಟೆಸ್ಟಗಳು, ವಾರಕ್ಕೊಂದು ಕಲ್ಚರಲ್ ಕಾಂಪಿಟೇಶನ್ನುಗಳು. ಜೊತೆಗೆ ಇಂಟರ್ ಸ್ಕೂಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕಾಂಪಿಟೇಶನ್ನುಗಳು. ಹೀಗೆ ಸಾಗುತ್ತಿತ್ತು.

ನಾನಿಲ್ಲಿ ಹೇಳಕ್ಕೆ ಹೊರಟಿರುವುದೇನಂದರೆ ನವೋದಯದಲ್ಲಿ ಸರಕಾರ ಕೊಡುತ್ತಿದ್ದದ್ದು ಒಂದು ಉತ್ತಮ ದರ್ಜೆಯ ಪ್ಯಾಕೇಜ್. ಕೇವಲ ಪ್ರತಿಭೆ ಒಂದರಿಂದ ಒಬ್ಬ ವಿದ್ಯಾರ್ಥಿ ಉಚ್ಚ ಮಟ್ಟದ ಶಿಕ್ಷಣವನ್ನು ಪಡೆಯುತ್ತಾನೆ. ಅದು ಬಿಟ್ಟಿಯಾಗಿ. ನನ್ನ ಕ್ಲಾಸಿನಲ್ಲೇ ಎಷ್ಟೋ ಜನರ ಪಾಲಕರಿಗೆ ಮನಸ್ಸಿದ್ದರೂ ಇಷ್ಟು ಒಳ್ಳೆಯ ಶಿಕ್ಷಣ ಕೊಡುವ ಆರ್ಥಿಕ ಶಕ್ತಿ ಇರಲಿಲ್ಲ. ಈ ತರಹ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡುವ ಅವಕಾಶಗಳು ಇರಲಿಲ್ಲ. ಇಲ್ಲಿ ಗ್ರಾಮೀಣ ವಿಭಾಗದ ವಿದ್ಯಾರ್ಥಿ ಅನ್ನೊ ಖೋಟಾ ಮಾತ್ರ ಇತ್ತು ಎಂಬ ನೆನಪಿದೆ.

ನಮ್ಮ ಸರಕಾರ ಇದೇ ತರಹ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ನಮ್ಮೆಲ್ಲರ ಗಮನಕ್ಕೆ ಬಂದಿಲ್ಲ ಅಷ್ಟೆ. ಹಾಗಂತ ನವೋದಯದಲ್ಲಿ ಎಲ್ಲೂ ಕುಂದು-ಕೊರತೆಗಳು ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ . ಭ್ರಷ್ಟತೆ ಭಾರತದಲ್ಲಿ ಸರ್ವೇ ಸಾಮಾನ್ಯ. ಪ್ಯೂನಿರಲಿ, ಬಸ್ ಕಂಡಕ್ಟರ್ ಇರಲಿ, ಮಂತ್ರಿಗಳಿರಲಿ, ಎಲ್ಲರಿಗೂ ಅನೇಕ ಕಾರಣಗಳಿಂದ ಲಂಚ ತೆಗೆದುಕೊಳ್ಳುವುದು ಅನಿವಾರ್ಯ ಎಂಬಂತೆ ಆಗಿದೆ. ಆದ್ದರಿಂದ ಸರಕಾರದ ಉತ್ತಮ ಯೋಜನೆಗಳಿದ್ದರೂ ನಾವು ಆಕ್ಷೆಪ ತೆಗೆಯುವುದು ಸುಲಭವಾಗಿದೆ. ಜಾಸ್ತಿ ಟ್ಯಾಕ್ಸ ಕಟ್ಟದೇ ಹಣ ಉಳಿಸಿಕೊಳ್ಳುವುದು ಹೆಮ್ಮೆಯ, ಬುದ್ಧಿವಂತಿಕೆಯ ವಿಷಯವಾಗಿದೆ. ಕಟ್ಟಬೇಕಾಗಿರುವ ಟ್ಯಾಕ್ಸನ್ನು ಕಾನೂನು ಬದ್ಧವಾಗಿ ಉಳಿಸಿಕೊಡುವುದನ್ನೇ ಕಾಯಕವನ್ನಾಗಿಸಿಕೊಂಡ ಒಂದು ವರ್ಗವನ್ನೇ ತಯಾರು ಮಾಡಿದ್ದೇವೆ.

ನನಗನ್ನಿಸುವುದೇನಂದರೆ, ಟ್ಯಾಕ್ಸ್ ಕಟ್ಟಿ ನಾವೇನು ಹೆಚ್ಚುಗಾರಿಕೆ ಮಾಡುತ್ತಿಲ್ಲ. ದೇಶದ ಪ್ರತಿ (ಸಲುವಾಗಿ) ಪ್ರಜೆಯೊಬ್ಬ ಮಾಡಬೇಕಾದ ಕರ್ತವ್ಯವನ್ನು ಮಾಡುತ್ತಿದ್ದೇವೆ. ಮುಖ ಹಿಂಡಿ, ಹೊಟ್ಟೆ ಉರಿಸಿಕೊಂಡು ಟ್ಯಾಕ್ಸ ಕಟ್ಟುವ ಬದಲು ಸ್ವಲ್ಪ ನಗು ಮುಖದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲಾಗದೇ ?

8 Responses to “ಇನ್ಕಂ ಟ್ಯಾಕ್ಸ್ ನಿಂದ ನವೋದಯದವರೆಗೆ”

  1. ರಂಜಿತ್ Says:

    ಮೇಡಮ್,

    ಕಾನೂನುಬದ್ಧವಾಗಿ ಟ್ಯಾಕ್ಸ್ ಉಳಿಸುವುದು ತಪ್ಪಲ್ಲವೆಂದು ನನ್ನ ಅಭಿಮತ. ಕೊನೆಯ ಪಕ್ಷ ಆ ಕಾರಣದಿಂದಾದರೂ ನಮ್ಮಂಥವರು ಹಣದ ಸೇವಿಂಗ್ಸ್ ಕುರಿತು ವಿಚಾರ ಮಾಡ್ತೀವಿ..:)

    Like

  2. ಸುನಾಥ Says:

    ನೀಲಾಂಜಲಾ,
    ನೀವು ನವೋದಯ ವಿದ್ಯಾರ್ಥಿನಿಯಾಗಿದ್ದನ್ನು ಓದಿ ಸಂತೋಷವಾಯಿತು. ಅಭಿನಂದನೆಗಳು.
    tax ಕಟ್ಟುವದು ನಮ್ಮ ಕರ್ತವ್ಯ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ಕರಭಾರ ನಮಗೆ ಹೊರಲಾರದಷ್ಟಾಗಿದೆಯಲ್ಲ,
    ಏನು ಮಾಡುವದು?

    Like

  3. ವಿಕಾಸ್ ಹೆಗಡೆ Says:

    ಕಾನೂನು ಬದ್ಧವಾಗಿ ಸರ್ಕಾರವೇ ತೆರಿಗೆ ತಪ್ಪಿಸಲು savings, investments ಅವಕಾಶಗಳನ್ನು ಮಾಡಿಕೊಟ್ಟಿದೆ. ಆದ್ದರಿಂದ ಅದು ತಪ್ಪಲ್ಲ ಎಂದು ನನ್ನನಿಸಿಕೆ. ಅದಕ್ಕೂ ಮೀರಿ ಆದಾಯವಿದ್ದರೆ ಕಟ್ಟಲೇಬೇಕು.

    Like

  4. Dr. BR. Satyanarayana Says:

    ನಿಮ್ಮ ಬ್ಲಾಗ್ ಫಾಲೋ ಮಾಡಬೇಕು, ಹೇಗೆ?
    http://www.nandondmatu.blogspot.com/

    Like

  5. ಮನೋಜ್ Says:

    ನಾನೂ ಒಂದು ವರ್ಷ ನವೋದಯದಲ್ಲಿದ್ದೆ. ಅಪ್ಪ ಅಮ್ಮನಿಗೆ ನನ್ನ ಬಿಟ್ಟಿರಲು ಆಗ್ಲಿಲ್ಲ, ಹಾಗಾಗಿ ಒಂದು ವರ್ಷ ಮುಗಿಸಿ ವಾಪಾಸಾದೆ. ಆದರೆ ಈಗಲೂ ನನಗೆ ಆ ಒಂದು ವರ್ಷ ಚೆನ್ನಾಗಿ ನನಪಿದ, ತುಂಬಾ ಚೆನ್ನಾಗಿತ್ತು.

    Like

  6. ನೀಲಾಂಜಲ Says:

    ರಂಜೀತ್ ಸಾರ್ and ವಿಕಾಸ್ ಹೆಗಡೆ,
    ನೀವು ಹೇಳಿದ್ದಕ್ಕೆ ಸಹಮತವಿದೆ. ಆದರೆ ಮುಖ ಹಿಂಡಿ, ಹೊಟ್ಟೆ ಉರಿಸಿಕೊಂಡು ಟ್ಯಾಕ್ಸ ಕಟ್ಟುವ ಬದಲು ಸ್ವಲ್ಪ ನಗು ಮುಖದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲಾಗದೇ ?

    ಸುನಾಥ್,
    ನಿಮ್ಮ ಅಭಿನಂದನೆಗೆ ಧನ್ಯವಾದಗಳು.
    ಇನ್ಕ್ಂ ಟ್ಯಾಕ್ಸ್ ಅಷ್ಟು ಭಾರವಾಗಿದೆಯೇ? ಜಾಸ್ತಿ ಹಣ ಗಳಿಸಿದಂತೆ ಜಾಸ್ತಿ ಟ್ಯಾಕ್ಸ್ ಕಟ್ಟಬೇಕು ಅಂತ ಗೊತ್ತು. ಆದ್ರೆ ಅದರಿಂದ ಸಾಮಾಜಿಕ ಆರ್ಥಿಕ ಸಮತೋಲನ ಸಾಧ್ಯವಾಗುತ್ತೆ ಎಂದು ನಂಬಿದ್ದೇನೆ.

    Dr.BR. Satyanarayana,
    ಫೊಲೊ ಮಾಡಕ್ಕೆ ನಿಮ್ಮ ಬ್ಲಾಗ್ spot dashboardನಲ್ಲಿ ಇರೊ add listಗೆ ಸೇರಿಸಿಕೊಬೇಕಷ್ಟೆ. word press ನಲ್ಲಿ follow this blog option ಇಲ್ಲ.

    ಮನೋಜ್,
    ಓಹೊ! ನೀವು ನವೋದಯದ ಒಂದು ವರ್ಷದ ವಿದ್ಯಾರ್ಥಿಯಾ, ಖುಷಿಯಾಯಿತು. ಹೌದು. ನಿಮಗೆ ಅಪ್ಪ-ಅಮ್ಮನನ್ನು ಬಿಟ್ಟು ಇರಲಿಕ್ಕಾಗಲಿಲ್ಲವೊ / ಅವರಿಗೊ 😉

    Like

  7. santhosh Says:

    ನೀವು ಹೇಳಿದ್ದು ಸತ್ಯ. ಊರಿದ್ದಲ್ಲಿ ಕೊಳೆಗೇರಿ ಇದ್ದೇ ಇರುತ್ತೆ. ಹಾಗಂತ ನಾವು ಊರನ್ನೇ ದೂಷಿಸುವುದು ಸರಿಯಲ್ಲ ತಾನೇ…? ನವೋದಯ ಶಾಲೆಯ ಆಶಯಗಳನ್ನು ಹಾಗೂ ಅಲ್ಲಿನ ನಿಮ್ಮ ಅನುಭವಗಳು ಚೆನ್ನಾಗಿ ಮೂಡಿ ಬಂದಿವೆ. ಪ್ರತಿಯೊಬ್ಬ ನಾಗರಿಕನೂ ತನ್ನ ಕರ್ತವ್ಯವನ್ನು ತಾನಾಗಿ ಅರಿತು ಪಾಲಿಸಿಕೊಂಡು ಬಂದರೆ ಸಮಸ್ಯೆ ತಾನಾಗಿಯೇ ಪರಿಹಾರಗೊಳ್ಳುತ್ತದೆ. ಆದರೆ ಆ ದೃಷ್ಟಿಯಲ್ಲಿ ನೋಡುವ
    ನಮ್ಮ ಕಣ್ಣು ತೆರೆದಿರಬೇಕಷ್ಟೇ…ಸದಾ..!!!
    — ಸಂತೋಷ್ ಅನಂತಪುರ

    Like

  8. Geetha H N Says:

    Don’t worry, Govt has given the quote as SMILE and RELAX

    Like

ನಿಮ್ಮ ಟಿಪ್ಪಣಿ ಬರೆಯಿರಿ