Eva, Eva!, Eva?, Eva?!, Eev, Eeeeva, Evaaaaaaa…

ಬಾಯಿ ಇಲ್ಲದೆಯೂ ಒಂದು ಕ್ಯಾರೆಕ್ಟರ್ ಸೃಷ್ಟಿ ಮಾಡಬಹುದೇ ? ನನ್ನ ಕೈನಲ್ಲಿ ಕಲ್ಪನೆನೂ ಮಾಡಕ್ಕೆ ಆಗ್ತಾ ಇಲ್ಲ. ಕಣ್ಣಿನಲ್ಲಿ ಭಾವನೆಗಳನ್ನು ಸೂಚಿಸಬಹುದಾದರೂ ಮಾತನಾಡಲು ಬಾಯಿಯೇ ಇಲ್ಲದಿದ್ರೆ, ಅಬ್ಬಬ್ಬಾ! ಕೈ ಇಲ್ಲದೇನೆ ಎಕ್ಟ್ ಮಾಡಿಸುವುದನ್ನು Carsನಲ್ಲಿ ನೋಡಿದ್ದೆ. ಆದ್ರೆ ಮೊನ್ನೆ ನೋಡಿದ್ದು ಇನ್ನೂ ಡಿಫರೆಂಟ್ ಆಗಿತ್ತು. ಇಲ್ಲಿ ಸಿನೆಮಾದ ಕ್ಯಾರೆಕ್ಟರಿಗೆ ಮನುಷ್ಯನನ್ನು ಹೋಲುವ ಕಣ್ಣೂ ಇಲ್ಲ, ಬಾಯಿ ಅನ್ನೊ ಅಂಗವೇ ಇಲ್ಲ. ಆಹಾಹಾ! ಹುಂ ಕಣ್ರಿ, Wall-Eನಲ್ಲಿನ ಹೀರೊ ಸ್ವಯಂ ಚಾಲಿತ ಯಂತ್ರ ; ತ್ಯಾಜ್ಯವನ್ನು ಕಂಪ್ರೆಸ್ ಮಾಡಿ, ಆ ಕಸದ ಇಟ್ಟಿಗೆ ಚೌಕಗಳಿಂದ ತ್ಯಾಜ್ಯದ ಗೋಪುರ ಕಟ್ಟುವ ರೊಬೋಟ್. ಅದಕ್ಕೆ ಚೌಕದ ಕಂಪ್ರೆಸರ್ ದೇಹ, ಬಂಕರ್ ಚಕ್ರಗಳೆಂಬ ಕಾಲುಗಳು, ಡಿಗ್ ಮಾಡುವ ಕೈಗಳು ಮತ್ತು ಬರೀ ಎರಡು ಕ್ಯಾಮೆರ ಲೆನ್ಸ್  ಕಣ್ಣುಗಳನ್ನು ಹೊಂದಿದ ಮುಖ! ಆದರೂ ಅದೇಷ್ಟು human ಅಂತ ಅನ್ನಿಸಿಬಿಡುತ್ತೆ ಗೊತ್ತಾ. ಅದರ ಹಾಗೇನೆ ಹೀರೊಯಿನ್ ರೊಬೊಟ್ ಇವಾ ಕೂಡ. ವಾಲ್ ಇ ಇವಾಳ ಎದುರು ಎಣ್ಣೆ ಹಚ್ಚಿ ಕ್ರಾಪ್ ಮಾಡಿದ ಓಲ್ಡ್ ಮಾಡೆಲ್ ಹುಡುಗನ ತರಹ ( ರಸ್ಟಿಕ್ – ರೆಕ್ಟಾಂಗ್ಯುಲರ್) . ಇವಾ ಬೆಳ್ಳನೆಯ ಅಂದವಾದ ದೇಹವುಳ್ಳ, ಕಿಲ ಕಿಲನೆ ನಗುವ ಹುಡುಗಿ ತರಹ ( ಸೊಫೆಸ್ಟಿಕೇಟೆಡ್ – ಸ್ಲೀಕ್ ಮಾಡೆಲ್ ) .

Wall-E ಸಿನೆಮಾ ಇವರಿಬ್ಬರ ಲವ್ ಸ್ಟೋರಿ. ಹೀರೊ-ಹೀರೊಯಿನ್ ಇಬ್ಬರಿಗೂ ಬಾಯಿ ಇಲ್ಲದ್ದರಿಂದ ಅವರಿಬ್ಬರನ್ನೂ  fall in Love ಅಂತ ತೋರಿಸೊಕೆ ಕಿಸ್ ಕೊಡಿಸೊಕೆ ಆಗಲ್ಲ. ಅದಕ್ಕೆ ಇಲ್ಲಿ ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿಯೊದನ್ನು ತುಂಬಾ ರೊಮ್ಯಾಂಟಿಕ್ ಆಗಿ ಬಳಸಲಾಗಿದೆ. ಹಳೇ ಕ್ಯಾಸೆಟಿಂದ ಟಿವಿ ಪರದೆಯ ಮೇಲೆ ಮೂಡುವ ಮನುಷ್ಯರು ಟೋಪಿ ಎಸೆದು ಡಾನ್ಸ್ ಮಾಡುತ್ತ ಅಂತ್ಯದಲ್ಲಿ ಬೆರಳುಗಳನ್ನು ಬೆಸೆದು ಸಾಂಗತ್ಯವನ್ನು, ಪ್ರೀತಿಯನ್ನು ವ್ಯಕ್ತ ಪಡಿಸೋದನ್ನು ನಮ್ಮ ವಾಲ್ ಇ ಎಷ್ಟು passionate ಆಗಿ ನೋಡುತ್ತೆ ಗೊತ್ತಾ. ಅದಕ್ಕೂ ಯಾರ ಜೋಡಿಯಾದರೂ ಕೈ ಹಿಡಿದು ನಡೆಯೊ ಆಸೆ. ಆದ್ರೆ ಅದು ಸಾಧ್ಯವಿಲ್ಲ. ಏಕೆ ಅಂದ್ರೆ ……

ನಮ್ಮ ಭೂಮಿ ಫುಲ್ ಕಸದ ತೊಟ್ಟಿಯಾಗಿ ಹೋಗಿದೆ. ತ್ಯಾಜ್ಯದ ರಾಶಿಯಿಂದ ಹೊರಸೂಸುತ್ತಿರುವ ವಿಷಾನಿಲ ಮನುಷ್ಯರನ್ನು ಪೃಥ್ವಿಯಿಂದ ಅಂತರಿಕ್ಷಕ್ಕೆ ಕಳಿಸಿದೆ. ಜೀವರಾಶಿಯೇ ಇಲ್ಲದ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ರೊಬೊಟ್ ಗಳು ಶಿಥಿಲಗೊಂಡು ಕೇವಲ್ ವಾಲ್ ಇ ಮಾತ್ರ ಬದುಕಿಕೊಂಡಿದೆ. ಸವೆದ ತನ್ನ ಅಂಗಾಗಳನ್ನು ಸತ್ತ ಇತರ ರೊಬೊಟ್ ಗಳಿಂದ ತಂದು ಜೋಡಿಸಿಕೊಳ್ಳುತ್ತ ತನ್ನಷ್ಟಕ್ಕೆ ಗುನುಗುತ್ತ, ಶಿಳ್ಳೆ ಹೊಡೆಯುತ್ತ ಬದುಕಿಕೊಂಡಿದೆ. ಅದಕ್ಕಿರುವ ಒಂದೇ ಒಂದು ಕಂಪನಿ ಅಂದರೆ ಅದರ ಸಾಕು ಜಿರಳೆ!

ಇಂತಿಪ್ಪ ಒಂದು ದಿನ ಆಕಾಶದಿಂದ ಬಂದ ರಾಕೆಟ್ ಒಂದು ಇವಾಳನ್ನು ನಮ್ಮ ವಾಲ್ ಇ ಇರುವ ಜಾಗಕ್ಕೆ ಇಳಿಸಿ ಹೋಗುತ್ತದೆ. ನೀವು ಇವಾಳನ್ನು ಧರೆಗಿಳಿದ ಅಪ್ಸರೆ ಅಂತನೂ ಅಂದುಕೊಳ್ಳಬಹುದು;) ನಮ್ಮ ವಾಲ್ ಇ ಇವಾಳ ಹಿಂದೆ ಬೀಳುತ್ತಾನೆ. ಅವಳನ್ನು ಒಲಿಸಿಕೊಳ್ಳಲು ಹರಸಾಹಸ ಮಾಡುತ್ತಾನೆ. ಇವಾ ಸುಂದರಿಯಾಗಿದ್ದರೂ ಸಹ ಭಯಂಕರ ಸಿಟ್ಟಿನವಳು. ಅಪಾಯ ಅಂದಾಕ್ಷಣ ಕೈಯಲ್ಲಿನ ಲೇಸರ್ ಕಿರಣಗಳನ್ನು ಹಾಯಿಸಿ ಎತ್ತರೆತ್ತರ ಬೆಂಕಿ ಉಗುಳಿಸಬಲ್ಲಳು. ಅಂತಹ ಕೈಯನ್ನೇ ಮುಟ್ಟಿ ವಾಲ್ ಇ ತನ್ನ ಸ್ನೇಹವನ್ನು ತೋರಿಸ ಬಯಸುತ್ತಾನೆ.  ಹೀಂಗಿರುವ ಡೆಂಜರಸ್ ನಾಯಕಿಯನ್ನು ನಮ್ಮ ಬಡಪಾಯಿ ಸಾಧು ಹೀರೊ ಮನೆಗೆ ಕರೆತರುತ್ತಾನೆ. ವಾಲ್ ಇ ಗೂ ಹಳೆ ಇಂಟರೆಸ್ಟಿಂಗ್ ವಸ್ತುಗಳನ್ನು ಸಂಗ್ರಹಿಸುವ hobby ಇರುತ್ತದೆ. ಇವಾಳನ್ನು ಇಂಪ್ರೆಸ್ ಮಾಡಲು ತಾನು ಕಲೆ ಹಾಕಿದ ಗಿಡವೊಂದನ್ನು ತೋರಿಸುತ್ತಾನೆ. ಸಕತ್ ಖುಷಿಯಾದ ಇವಾ ಅದನ್ನು ತನ್ನ ಹೊಟ್ಟೆಗೆ ತುರುಕಿಕೊಂಡು ತಟಸ್ಥಳಾಗುತ್ತಾಳೆ. ಜೀವಂತ ಇದ್ದಾಳೆ ಅನ್ನುವುದಕ್ಕಾಗಿ ಕೇವಲ ಬೀಪ್ ಶಬ್ದ ಬರುತ್ತಿರುತ್ತದೆ. ಪಾಪದ ವಾಲ್ ಇ. ಏಷ್ಟೋ ವರ್ಷಗಳ ನಂತರ ಸಿಕ್ಕ ಜೊತೆಗಾರ್ತಿ ಇದ್ದಕ್ಕಿದ್ದಂತೆ ಮಾತೇ ಆಡ್ತಾ ಇಲ್ಲ…….. ಅವಳನ್ನು ನಿದ್ದೆಯಿಂದ ಎಬ್ಬಿಸಲು ಏನೂ ಮಾಡಿದರೂ ಸಾಧ್ಯವಾಗುವುದಿಲ್ಲ. ಕೊನೆಗೊಂದು ದಿನ ಮತ್ತೆ ಬಂದ ರಾಕೆಟ್ ಇವಾಳನ್ನು ಜೊತೆಗೆ ಕರೆದುಕೊಂಡು ಹೋಗುತ್ತೆ. ಇವಾಳನ್ನು ಬಚಾವ್ ಮಾಡಲು ಬಂದ ವಾಲ್ ಇ ರಾಕೆಟ್ ಜೊತೆಗೆ ಅಂತರಿಕ್ಷಕ್ಕೆ ಜಿಗಿಯುತ್ತಾನೆ. ಆ ರಾಕೆಟ್ ಇಬ್ಬರನ್ನೂ ಸೀದಾ ಎಕ್ಸಿಯಮ್ ಎಂಬ ಅಂತರಿಕ್ಷ ನೌಕೆಗೆ ಕರೆದೊಯ್ಯುತ್ತದೆ. ಮನುಷ್ಯರು ವಾಸಿಸುವ ಅಲ್ಲಿಂದ ವಾಲ್ ಇ ಇವಾಳನ್ನು ಹೇಗೆ ರಕ್ಷಿಸಿ ವಾಪಸ್ಸು ಮನೆಗೆ ಕರೆದುಕೊಂಡು ಬರುತ್ತಾನೆ, ಇವಾ ಗಿಡ ತೆಗೆದುಕೊಂಡಾಕ್ಷಣ ಕೋಮಾಕ್ಕೆ ಹೋಗಿದ್ದೇಕೆ , ಅದಕ್ಕೂ ಮನುಷ್ಯರಿಗೂ ಏನು ಸಂಬಂಧ, ಆಕೆಯೂ ವಾಲ್ ಇ ಯನ್ನು ಪ್ರೀತಿಸಿದಳಾ……….. ಇವೆಲ್ಲ ಗೊತ್ತಾಗಬೇಕಿದ್ರೆ ಫಿಲ್ಮ್ ನೋಡಿ:D

ವಾಲ್ ಇ ಕೋಮಾದಲ್ಲಿರುವ ಇವಾಳನ್ನು ಕರೆದುಕೊಂಡು ಬೋಟಿನಲ್ಲಿ ಹೋಗುವುದು, ಆಕೆಯನ್ನು ಲೈಟಿನ ಸರದಲ್ಲಿ ಬಂದಿಸಿ ಎಳೆಯುತ್ತ ಸೂರ್ಯಾಸ್ತವನ್ನು ಆಸ್ವಾದಿಸೊದು, ಆಕೆಯ ಹತ್ತಿರತ್ತಿರ ಸರಿಯೊದು, ಬೆರಳುಗಳನ್ನು ಹಿಡಿಯಲು ಪ್ರಯತ್ನಿಸಿ ಸಿಕ್ಕಿ ಹಾಕಿಕೊಂಡು ಒದ್ದಾಡೊದು, ಲವ್ ಮಾರ್ಕ್ ಕೊರೆಯೊದು…….. ತುಂಬಾ ಮಸ್ತ್ ಆಗಿದೆ. ಹ್ಹ ಹ್ಹ ಹ್ಹಾ. ಇಲ್ಲಿಯ ಜಿರಳೆಯ ಎನಿಮೇಶನ್ ಸಹ ಸಕತ್ ಆಗಿದೆ. ಅದು ದೇಹವನ್ನು ಮುಂದೆ ಬಗ್ಗಿಸಿ ಕುತೂಹಲ ತೋರಿಸೊದು, ಮೀಸೆಯನ್ನು ಹಂದಾಡಿಸಿ ಆಶ್ಚರ್ಯ-ಗಲಿಬಿಲಿ-ಖುಷಿ ತೊರಿಸೋದು, ಟೆನ್ಶನ್ ತಡೆಯಲಾಗದೇ ಅತ್ತಿಂದಿತ್ತ ಸುಳಿದಾಡೊದು, ಕುಪ್ಪಳಿಸಿ excitement ತೋರೊದು…… ವಾವ್!

ಹಾಂಗೆನೆ ಎಕ್ಸಿಯಮ್ ನಲ್ಲಿರುವ ಮನುಷ್ಯರು ಸಹ. ಆ ನೌಕೆ ದೊಡ್ಡ ಹೊಟೇಲ್ ತರಹ. ಏನೂ ಬೇಕೊ ಎಲ್ಲ ಸವಲತ್ತುಗಳು ಇಲ್ಲಿದೆ. ಅದೂ ಫುಲ್ಲಿ ಆಟೊಮ್ಯಾಟಿಕ್. ಇವರಿಗೆ ಕೆಲಸವೇ ಇಲ್ಲ.  ಹಲ್ಲುಜ್ಜುವುದರಿಂದ ಹಿಡಿದು ಮಕ್ಕಳಿಗೆ ಪಾಠ ಹೇಳಿಕೊಡುವ ತನಕ ಎಲ್ಲದಕ್ಕೂ ರೊಬೊಟ್ಸ್. ಗಾಳಿಯಲ್ಲಿ ತೇಲುವಂತಹ ಸೀಟಿನಲ್ಲಿ ಒರೆಗಿ ಎಲ್ಲ ಕೆಲಸವನ್ನೂ ಅಲ್ಲಿಂದಲೇ ಮಾಡುತ್ತಾರೆ. ನಡೆಯುವುದು ಅಂದರೇನೆ ಏನೂಂತ ಗೊತ್ತಿಲ್ಲ. ಸೀಟಿನಿಂದ ಕೆಳಗೆ ಬಿದ್ದರೆ, ವಾಪಸ್ಸು ಸೀಟು ಹತ್ತಿ ಕೂಡ್ರಿಸಲು ರೊಬೊಟ್ ಗಳೇ ಬೇಕು.  ದೈಹಿಕ ಶ್ರಮವಿಲ್ಲದಿದ್ದರಿಂದ ಹಾಗೂ ನೌಕೆಯ ಆರ್ಟಿಫಿಶಿಯಲ್ ಗ್ರಾವೆಟಿಯಿಂದ ಮೂಳೆಗಳೆಲ್ಲ ಸವಕಲಾಗಿ ಮೈಯೆಲ್ಲ ಬೊಜ್ಜು ತುಂಬಿಕೊಂಡಿರುತ್ತದೆ. ಅಕ್ಕ ಪಕ್ಕವೇ ಹೋಗುತ್ತಿದ್ದರೂ ಸಹಿತ ಮಾತನಾಡಲು ಎದುರಿಗಿರುವ ಪರದೆಯನ್ನೇ ಉಪಯೋಗಿಸುತ್ತಾರೆ. ಸ್ಪರ್ಶ ಜ್ಞಾನವಿರಲಿ ಸಾಮಾಜಿಕ ಮುಖಾಮುಖಿಯೇ ಇಲ್ಲ! ನಿಜ. ನಾವು ಸಹ ಮುಂದೊಂದು ದಿನ ಹೀಗೆನೆ ಆಗುತ್ತೇವೆ. ನಾನೇ ನೋಡಿ. ಬೆಳಗ್ಗೆಯಿಂದ ರಾತ್ರಿಯವರೆಗೆ ಕಂಪ್ಯೂಟರ್ ಖುರ್ಚಿ ಬಿಟ್ಟು ಏಳಲ್ಲ. ಬೊಜ್ಜು ಬೆಳೆಯುತ್ತಿದೆಯೇ ಹೊರತು ಕರಗುತ್ತಿಲ್ಲ. ಮಾತಾಡೊದೆಲ್ಲ ಜಿ ಟಾಲ್ಕ್ ನಲ್ಲಿ ಇಲ್ಲಾ ಮೊಬೈಲ್ ನಲ್ಲಿ. ಫ್ರೆಂಡ್ಸ್, ರಿಲೇಟಿವ್ ಎಲ್ಲರ ಜೊತೆ ಸಂವಹನ ಮಾಡೊದು virtual ಆಗಿನೆ. ಓದೊದು, work ಮಾಡೊದು, ಬರೆಯೊದು ಸಹ . ಇಂಟರ್ ನೆಟ್ ನಲ್ಲಿ ನಾನೊಂದು ಡಾಟಾ ಮಾತ್ರ. ಹಾಗಾಗಿಯೇ ರೊಬೊಟ್ ಆಗಿಯೂ, ಈ virtual worldನ ಸದಸ್ಯ ಆಗಿಯೂ ಕೂಡ ಭಾವನೆಗಳನ್ನು ಗುರುತಿಸುವ, ಬಾಯಿ ಎಂಬ ಅಂಗವಿಲ್ಲದೆಯೂ ಶಬ್ದದ ಏರಿಳಿತದಿಂದ ಸಂವಹಿಸುವ, ಸ್ಪರ್ಶ ಸುಖಕ್ಕಾಗಿ, ಮತ್ತೊಬ್ಬ ಸಹ ಜೀವಿಗಾಗಿ ಹಾತೊರೆಯುವ ವಾಲ್ ಇ ನನಗೆ ಪ್ರಿಯನಾಗಿದ್ದಾನೆ.

know more about animation; pixar

6 Responses to “Eva, Eva!, Eva?, Eva?!, Eev, Eeeeva, Evaaaaaaa…”

 1. Pramod Says:

  ಯಾರ ಕನಸಲ್ಲೂ ಕಾಣದ ಕ್ಯಾರೆಕ್ಟರ್ ಗಳು ಇಲ್ಲಿವೆ. ಮೊದಲನೇ ಬಾರಿಗೆ ಅರ್ಥೈಸಲಿಕ್ಕೆ ಕಷ್ಟ ಸಾಧ್ಯ. ಸಿನೆಮಾದ ಮೊದಲ 10-15 ನಿಮಿಷ ಸಹಿಸಿದ್ರೆ, ಆಮೇಲೆ ಸಿನೆಮಾ ಮುಗಿದದ್ದೇ ಗೊತ್ತಾಗಲ್ಲ. ಬ್ರಿಲ್ಲಿಯ೦ಟ್ ಆನಿಮೇಷನ್ ಮೂವಿ.

  Like

 2. ಗುರು ಬಾಳಿಗ Says:

  ……….. ಇವೆಲ್ಲ ಗೊತ್ತಾಗಬೇಕಿದ್ರೆ ಫಿಲ್ಮ್ ನೋಡಿ 🙂

  ಭಾಳಾ ಅಚ್ಚುಕಟ್ಟಾಗಿ ಕತೆ ಶುರು ಮಾಡಿ ಕುತೂಹಲ ಕೆರಳಿಸಿ ನಡು ನೀರಲ್ಲಿ ಕೈ ಬಿಟ್ಟು ನಗೋದು ನ್ಯಾಯ ಅಲ್ಲ. ನನಗೆ ಇದನ್ನು ಓದಿ ಹಳೆ ವಿಜಯಚಿತ್ರದಲ್ಲಿ ಹೊಸದಾಗಿ ಬಿಡುಗಡೆಯಾದ ಸಿನೆಮಾ ಕತೆ ಬರುತಿತ್ತಲ್ಲ… ಕೊನೆಗೆ ……… ಇನ್ನುಳಿದುದನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸಿ ಅಂತ. ಅದು ನೆನಪಾಯಿತು.

  Like

 3. ವಿಕಾಸ್ ಹೆಗಡೆ Says:

  ನಿಜ ರೀ.. ನಾನಂತೂ ಈ ಸಿನೆಮಾ ಮಾಡಿದವರ ಕ್ರಿಯೇಟಿವಿಟಿಗೆ ದಂಗಾಗಿ ಹೋದೆ!

  Like

 4. skhalana Says:

  ಇದನ್ನು ನಾನು ನೋಡಲೇಬೇಕು !

  Like

 5. Rashmi Says:

  Naanu ee moovie nodilla, aadre Idiocracy anta ondu movie nodide. Similar concept. Idiocracy cinema hit aagilla aadare manushya ide reeti yantrada mele avalambisidre, tanna buddhi upayogisodanna kadime madidre munde enagabahudu ann

  Like

 6. Venkatraman Hegde Says:

  ಪ್ರಿಯ ಸೌಪರ್ಣಿಕಾ ಅವರೇ,
  ನಾನು ಕೆಲವು ದಿನ ಮುಂಚೆ Wall E ನೋಡಿದೆ. ತುಂಬಾ ಚೆನ್ನಾಗಿದೆ. ವಾಲ್ ಇ “ಈ…ವಾ….” ಅಂತ ಕರೆಯೂ ದಾಟಿಗೆ ಮರುಳಾಗಿ ಅಂದಿನಿಂದ ನನ್ನ ಮಡದಿಗೂ ಹಾಗೇ ಕರೆಯುತ್ತಿದ್ದೇನೆ.
  ಅಂದಹಾಗೆ, ಈಗ ನಿಮಗೆ ಸೆಕೆಯ ಭರ ಸ್ವಲ್ಪ ಕಡ್ಮೆ ಆಗಿರಬೇಕಲ್ವ? ಹಾಗೇ ಸ್ವಲ್ಪ ತಣ್ಣನೆ ಗಾಳೀನೂ? ಎಕೆಂದ್ರೆ, ಇಂದಿನಿಂದ ನಾನು ನಿಮ್ಮ ಹೊಸ ಫ಼್ಯಾನ್.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: