“ಪ್ರೀತಿ-ಪ್ರೇಮ-ಮದುವೆ-ನಂಬಿಕೆ-, ಇತ್ಯಾದಿ ಮತ್ತು ಅವನು-ಅವಳು”

ಜುಲೈ 27, 2013

[ಇದು ಕತೆಯಾಗಬಹುದಾ ಎಂದು ಯೋಚಿಸುತ್ತಲೇ ಕೆಂಡಸಂಪಿಗೆಗೆ ಕಳಿಸಿದ್ದೆ. ಅವರು ಹೌದು ಇದು ಕತೆ ಅಂತ ಪ್ರಕಟಿಸಿದರು ಅದಕ್ಕೆ ಧನ್ಯವಾದ.

ಇದನ್ನು ಇವನಿಗೆ ತೋರಿಸಿ ಉಗಿಸಿಕೊಂಡೆ, ಏನಕೆ ಹೀಗೆಲ್ಲ ಬರೀತೀಯ ಅಂತ ಅವಲತ್ತುಕೊಂಡ. ಇನ್ನು ಮುಂದೆ ನೀ ಬರೆದಿದ್ದ ನನಗೆ ಓದಿ ಹೇಳಬೇಡ ಅಂತ ಅಪ್ಪಣೆ ಹೊರಡಿಸಿದ. ಬರೆದು ಮುಗಿಸಿ ಮಾರನೇ ದಿನ ಆಫೀಸಿನಲ್ಲಿ ನನ್ನ ಟೀ ಗ್ಯಾಂಗ್ ಜೊತೆ ಹಿಂದೀ ಕರಿಸಿ ಓದಿದಾಗ ಇಬ್ಬರಿಗೆ ಸಿಟ್ಟು ಬಂತು, ಮಗದಿಬ್ಬರು ಈ ತರಹ ಕತೆಯಲ್ಲಿ ಅಷ್ಟೇ ಇರಕೆ ಸಾಧ್ಯ ಅಂದರು. ಒಬ್ಬ ಇದು ಮುಂದಿನ ಸೆಂಚುರಿ ಕತೆ ಅಂತ ನಗಾಡಿಕೊಂಡ. ಮತ್ತಿಬ್ಬರಿಗೆ ಇಷ್ಟವಾಯಿತು. ಈ ತರಹ ಎಷ್ಟೋ ಜನ ಇದಾಗಲೇ ಇದ್ದಿರಬಹುದು. ನಮಗೆ ಗೊತ್ತಿಲ್ಲದ ಪ್ರಪಂಚ ಬೇಕಾದಷ್ಟಿದೆ ಅಂದರು.

ಆಮೇಲೆ ಅಮ್ಮನ ಕಾಲ್ ಬಂತು. ತಂಗಿ ಹೇಳಿದಳು, ನೀನು ಹೀಗೆಲ್ಲ ಬರಿ. ಮೊದಲೇ ನಿನ್ನ ಬಗ್ಗೆ ಆಡಿಕೊಳ್ತಾರೆ. ಇನ್ನೂ ಇದು ನಿನ್ನದೇ ಸ್ವಂತ ಕತೆ ಹೇಳಿ ಪ್ರಚಾರ ಮಾಡ್ತಾರೆ ಅಂದರು. ಆಗ ನಾನು ಅಂದುಕೊಂಡೆ. ವಾಹ್! ನಿಜ. ನಾನು ಬರೆದಿದ್ದೆಲ್ಲಾ ಸ್ವಂತ ಕತೆ ಆಗಿ ಮಾರ್ಪಾಡಗುತ್ತಿದ್ದರೆ ನಾನು ಹೀಗೆ ಬರೆದುಕೊಳ್ಳುತ್ತಿದೆ;  “ಮುಂಬಯಿಯ ಸೀ ಫೇಸಿನ್ಗ ಪೆನ್ಟ್ ಹೌಸಿನಲ್ಲಿ ಮನೆ ಇತ್ತು. ಆಕೆ ದಿನಾ ಆಡಿ ಕಾರಿನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದರೆ, ಆತ ಲ್ಯಾಂಡ್ ಕ್ರೂಸರ್ ನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದ. ಇಬ್ಬರು ಸಕಲ ಸಂಪತ್ತು, ಐಶ್ವರ್ಯ, ಸುಖ, ಸಂತೋಷಗಳನ್ನು ಅನುಭವಿಸುತ್ತಾ, ಸ್ವ ಹಿತ ಹಾಗೂ ಪರರ ಹಿತವನ್ನು ಕಾಯ್ದು ಕೊಳ್ಳುತ್ತಾ, ರಾಜ- ರಾಣಿಯರಂತೆ ಜೀವನವನ್ನು ಆಚರಿಸಿಕೊಂಡು ಬದುಕುತ್ತಿದ್ದರು……”  ಅಂತೆಲ್ಲ ಬರೆಯುತ್ತಿದ್ದೆ. ಆಹಾ! ಏನ್ ಚೆನ್ನಾಗಿರುತ್ತಿತ್ತು, ಬರೆದಿದ್ದೆಲ್ಲಾ ಸತ್ಯ ಆಗುವುದಾದಲ್ಲಿ. ಹೋಗಲಿ, ಹೀಗೊಂದು ಕತೆ. ಓದಿಕೊಳ್ಳಿ.]

—–

ಡಬ್ಬಾ ನನ್ ಮಗ, ಹಣ್ಣು ಕಂಡರೆ ತಿನ್ನೋಕೆ ಗೊತ್ತಾಗುತ್ತೆ, ಹಾಗೆ ಖಾಲಿಯಾದಾಗ ತೆಗೆದುಕೊಂಡು ಬರಕೆ ಮಾತ್ರ ಗೊತ್ತಾಗೋಲ್ಲ ಎಂದು ಬಯ್ದು ಕೊಳ್ಳುತ್ತಲೆ ಹಣ್ಣಿನವನತ್ತಿರ ಚೌಕಾಸಿ ಮುಗಿಸಿದಳು. ಮನೆಲಿ ಮಾಡಲಿಕ್ಕೆ ಇರಬಹುದಾದ ಕೆಲಸ ನೆನೆಪಿಸಿಕೊಂಡೇ ತಾನ್ಯಾಕೆ ಆಫೀಸಿನಿಂದ ಬೇಗ ಬಂದಿದ್ದು ಅನ್ನುವುದು ಅವಳಿಗೆ ಮರೆತು ಹೋದಂತಾಗಿ, ಇಲ್ಲಾ, ಇವತ್ತು ಕತೆ ಬರೆದೆ ಬಿಡಬೇಕು ಅಂದುಕೊಳ್ಳುತ್ತ ಮನೆಯತ್ತ ಸಾಗಿದಳು. ಏನಕ್ಕಾರು ನಾಳೆನೇ ಕತೆ ಮುಗಿಸಿ ಕೊಡ್ತೇನೆ ಎಂದು ಅವನಿಗೆ ಹೇಳಿದ್ದೇನೊ ಎಂದು ಪರಿತಪಿಸುತ್ತಾ, ಇತ್ತೀಚಿಗೆ ತನಗೆ ತಾನು ಮಾಡುವ ಕೆಲಸದ ಮೇಲೆ ಆಸಕ್ತಿ ಕಡಿಮೆ ಯಾಗುತ್ತಿದೆಯಾ ಅಂತೆಲ್ಲ ತಲೆಬಿಸಿ ಮಾಡಿಕೊಳ್ಳುತ್ತಾ ಮನೆಬಾಗಿಲು ತೆರೆದಳು.

ಓಹ್ ! ಅವನು ಬಂದಾಗಿದೆ, ಇದೇನು ಹೊಸ ಚಪ್ಪಲ್ಲಿ. ಇವತ್ತುನಾ! ಅಯ್ಯೋ, ಇವನಿಗೆ ಮಾಡಕೆ ಬೇರೆ ಕೆಲಸ ಇಲ್ಲ, ಹೋಗಲಿ ಅವರಿಗೂ ಇಲ್ವಾ, ಇನ್ನೂ  ಇವಳು ಏಷ್ಟು ದಿನವೋ, ಮೊನ್ನೆವರೆಗೂ ಇದ್ದ ಅವಳು ಹೋಗಿ ಇವತ್ತು ಇನ್ನೊಂದು ಹೊಸ ಎಂಟ್ರಿ. ಏಷ್ಟು ಸಲ ಹೇಳಿದ್ದೀನಿ, ಹೋಟೆಲ್‌ಗೆ ಕರ್ಕೊಂಡು ಹೋಗು ಅಂತ, ಮನೆಗೆ ಯಾಕೆ ಕರಕೊಂಡು ಬರಬೇಕು, ಕೇಳಿದ್ರೆ ನಂದೂ ಮನೆಯಲ್ವಾ ಎಂದು ಬಾಯಿ ಮುಚ್ಚಿಸಿಬಿಡುತ್ತಾನೆ, ಇವನನ್ನು ಇನ್ನೂ ಸ್ವಲ್ಪ ಕಡಿಮೆ ಪ್ರೀತಿಸಬೇಕು, ಸಕತ್ ಕೊಬ್ಬು ಬಂದಿದೆ,  ಕರ್ಮ ಅವಂದು ಎಂದು  ಕುದಿಯುತ್ತಲೇ ಚಪ್ಪಲಿ, ಅವನ ಬ್ಯಾಗು, ಆಕೆಯದ್ದು, ತಂದು, ತಂದಿದ್ದ ಹಣ್ಣು, ಹೀಗೆ ಎಲ್ಲವನ್ನೂ ಆದರದ ಜಾಗದಲ್ಲಿ ಇಡ ತೊಡಗಿದಳು. ಜೊತೆಗೆ ಆ ಹೊಸ ಚಪ್ಪಲಿ ತನ್ನ ಕಾಲುಂಗುರದ ಹರಳಿನ ಜೊತೆ ಮ್ಯಾಚ್ ಆಗುತ್ತೆ ಅಂತನೂ ಅಂದುಕೊಂಡಳು. ಕಿಚನ್‌ಗೆ ಹೋದವಳು ಈ ಕೆಲಸದವಳು ತಾನು ಇಲ್ಲ ಅಂದರೆ ಒಂದು ಕೆಲಸವನ್ನು ನೀಟಾಗಿ ಮಾಡಲ್ಲ ಅಂದು ಅವಳಿಗೂ ಬಯ್ದುಕೊಂಡು ಒಂದು ಗ್ಲಾಸ್ ನೀರು ಕುಡಿದು ಇಳಿಸಿದಳು.  ಹೋಗಿ ಫ್ರೆಶಾಗಬೇಕು ಎಂದು ಮೇಲಿನ ರೂಮಿನತ್ತ ಹತ್ತತೊಡಗಿದಳು. ಕೋಣೆಯ ಕದ ಹಾಕಿದ್ದು ಕಂಡು ಸಿಟ್ಟು ತಲೆಗೆ ಏರಿತು.  ಏನಕೆ ತಮ್ಮ ರೂಮಿನಲ್ಲಿ? ಗೆಸ್ಟ್ ರೂಮ್ ಎರಡೆರಡು ಇದೆ, ಏನಕೆ ನಮ್ಮ ಕೊಣೇಯೇ ಬೇಕು, ಅವನತ್ತಿರನೇ ಇವತ್ತು ಎಲ್ಲಾ ಕ್ಲೀನ್ ಮಾಡಿಸ್ತೀನಿ, ನಿನ್ನೆ ಅಷ್ಟೇ ನನ್ನಿಷ್ಟದ ಹೊಸ ಬೆಡ್ ಕವರ್ ಹಾಕಿದ್ದೆ, ಬೆಡ್‌ಶೀಟು ಅವನೇ ವಾಶ್ ಮಾಡಲಿ. ಹೋಗಲೋ, ಡಬ್ಬಾ ನನ್ ಮಗನ್ನು ತಂದು….

ಆಗಲೇ ಕದ ಬಡಿದು ಡಿಸ್ಟರ್ಬ್ ಮಾಡಬೇಕು ಅಂದುಕೊಂಡವಳು ಪಾಪ, ಏನು ನಡೆಸಿದ್ದಾನೋ ಎಂದು ಪ್ರೀತಿ ಬಂದು, ಇಣುಕಿ ನೋಡಲಾ ಅಂತಾನೂ ಅನ್ನಿಸಿ ಕಷ್ಟಪಟ್ಟು ಎಲ್ಲ ಭಾವವನ್ನೂ ತಡೆಹಿಡಿದು ಕೆಳಗೆ ಇಳಿದು ಬಂದಳು. ಆದರೆ ಇಳಿಯುತ್ತಾ ಮೆಟ್ಟಿಲಿನ ತುದಿಯಲ್ಲಿ ಇಟ್ಟಿದ್ದ ಹೂದಾನಿಗೆ ಕಾಲು ತಾಗಿ ಅದು ದೊಡ್ಡದಾಗಿ ಸದ್ದು ಮಾಡುತ್ತಾ ಕೆಳಗೆ ಉರುಳಿತು. ಆಕೆಗೆ ಇವತ್ತು ಅವಳ ಪ್ರೀತಿಯ ಹೂದಾನಿ ಬಿದ್ದಿದ್ದಕ್ಕೆ ಬೇಸರವಾಗದೆ ಖುಷಿಯಾದಳು. ಮುಖದ ಮೇಲೆ ತುಂಟ ಹೂನಗೆ ಅರಳಿತು. ಮುಖವೆತ್ತಿ ಕೊಣೆಯತ್ತ ನೋಡಿದಳು. ಇನ್ನೂ ಒಂದು ತಾಸು ಸಿಟ್ಟು ಮಾಡಿಕೊಂಡು ಹೇಳಿದಕ್ಕೆಲ್ಲ ಕೂಗುತ್ತಾ ಇರುತ್ತಾನೆ ಎಂದುಕೊಂಡಳು. ಏನಕೊ ಇದ್ದಕಿದ್ದ ಹಾಗೆ ನೆಮ್ಮದಿ ಅನ್ನಿಸಿ, ಕೆಳಗಿನ ಬಾತ್ ರೂಮಿನಲ್ಲೇ  ಕೈ ಕಾಲು ಮುಖ ತೊಳೆದುಕೊಂಡು ಬರಲು ಹೋದಳು.

—-

ಥತ್, ಏನಕೆ ಸರಿಯಾದ ಹೊತ್ತಲ್ಲೇ ಬರಬೇಕು, ಇನ್ನೂ ಒಂದೈದು ನಿಮಿಷ ತಡವಾಗಿ ಬಂದಿದ್ರೆ ನಡೆತಿರಲಿಲ್ವೆ? ಮೂಡ್ ಆಫ್. ಇನ್ನು ಯಾಕೆ ಹಾಗೆ ಮಾಡ್ತೀಯಾ ಹೇಳಿದ್ರೆ ಹತ್ತು ಸಲ ಸ್ಸಾರಿ ಕೇಳಿಬಿಡ್ತಾಳೆ, ಷೆ!….. ಹಾಗೆ ಅವಳನ್ನು ಕಷ್ಟಪಟ್ಟು ಬೇರ್ಪಡಿಸಿಕೊಂಡು ಅಲ್ಲಿಂದೆದ್ದ. ಏನಾಯ್ತು ಎಂದು ಗೊಂದಲದಲ್ಲಿದ್ದ ಅವಳ ಸುಂದರ ಮುಖದಲ್ಲಿ ‘ನನ್ನ ಹೆಂಡ್ತಿ’  ಎಂದು ಗಾಭರಿ ಹುಟ್ಟಿಸಿದ. ಸಿಕ್ಕ ಚಡ್ಡಿ ಏರಿಸಿಕೊಂಡು ಅಲ್ಲೆಲ್ಲೋ ಬಿಸಾಕಿದ್ದ ಸಿಗರೇಟಿನ ಪ್ಯಾಕ್ ಗೆ ಹುಡುಕಾಡಿದ. ಸಿಕ್ಕ ಪ್ಯಾಕ್ ಖಾಲಿಯಾಗಿದ್ದು ನೋಡಿ ಅವನ ಅಸಹನೆ ಇನ್ನೂ ಜಾಸ್ತಿಯಾಗಿ , ಏನು ಮಾಡಬೇಕೆನ್ದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದ ಅವಳನ್ನು ಕನಿಕರದಿಂದ ನೋಡಿ,  ‘ ಇನ್ನೊಂದು ದಿನ ಸ್ವೀಟಿ, ಕಮಾನ್, ಬಾತ್ ರೂಮ್ ಅಲ್ಲಿದೆ’ ಎಂದು ಹೇಳಿ, ಹಾಲ್‌ನಲ್ಲಿ ಇದ್ದಿರಬಹುದಾದ ಪ್ಯಾಕ್ ಗಾಗಿ ಕೆಳಗೆ ಇಳಿದು ಬಂದ.

ಮನೆಯ ಸುಸ್ಥಿತಿ ನೋಡಿ ಹೊ!, ಅವಳು ಬಂದಾಗಿದೆ. ಎಲ್ಲಿದ್ದಾಳೋ, ಇನ್ನೂ ಮೇಲಿನ ರೂಮಿನಲ್ಲಿ ಇದ್ದಿದ್ದಕ್ಕೆ ದೊಡ್ಡ ಲೆಕ್ಚರ್ ಕೇಳಬೆಕಾಗುತ್ತೆ ಎಂದು ಅವಸರವಸರವಾಗಿ ಪ್ಯಾಕ್ ಹುಡುಕ ತೊಡಗಿದ. ಒಂದು ಐದು ನಿಮಿಷ, ಎಲ್ಲ ಭಂಗ ಮಾಡಿದಳು. ಇವತ್ತೇ ಏನಕೆ ಬೇಗ ಬರಬೇಕು ಎಂದು ಮತ್ತೆ ಸಿಟ್ಟು ಏರತೊಡಗಿತ್ತು. ಎದುರಿಗೆ ಬಂದು ಆಕೆ ನಿಂತರೂ ಮುಖ ನೋಡಲಿಲ್ಲ. ನೋಡಿದರೆ ಗೊತ್ತು ಅವಳಲ್ಲಿ ಕರಗಿ ಹೋಗುತ್ತೇನೆ.  ಮತ್ತವಳ ರಗಳೆಗಳಿಗೆ ಯಾರು ಉತ್ತರಿಸುತ್ತಾರೆ ಎಂದು ಸಿಗರೇಟನ್ನು ಸುಟ್ಟಿಸುತ್ತಾ ಬಾಲ್ಕನಿಗೆ ತೆರಳಿದ.  ಆಕೆ ಎಸೆದ ದಿಂಬು ಅವನಿಗೆ ತಾಗಲಿಲ್ಲ. ಆ ಹೊತ್ತಲ್ಲಿ ದಿಂಬಾಟ ಆಡುವ ಮನಸ್ಥಿತಿಯಲ್ಲಿ ಅವನಿರಲಿಲ್ಲ.

ಹೊರಗೆ ಬಂದವಳಿಗೆ ಏನೋ ಹುಡುಕುತ್ತಿದ್ದ ಅವನು ಕಂಡ. ಅಯ್ಯೋ ಎಂದುಕೊಳ್ಳುತ್ತಾ ಅವನಿಗೆ ಕಾಣಿಸದ ಸಿಗರೇಟ್ ಪ್ಯಾಕೆಟ್ ಎತ್ತಿ ನೀಡಿದಳು. ಸ್ಸಾರಿ, ನಾನೇನು ಬೇಕು ಎಂದು ಮಾಡಲಿಲ್ಲ, ಅದು ಆಗಿ ಹೋಯಿತು. ಪ್ಲೀಸ್ ಸ್ಸಾರಿ, ಸ್ಸಾರಿ, ಸ್ಸಾರಿ ಎಂದು ಹತ್ತು ಸಲ ಹೇಳಿದಳು. ಅವನು ಅವಳು ಹೇಳಿದ್ದನ್ನು ಕೇಳಿಸಿಕೊಂಡು ಕೇಳಿಸಿಕೊಳ್ಳದೆ ತನ್ನ ಪಾಡಿಗೆ ತಾನು ಸಿಗರೇಟನ್ನು ಹಚ್ಚಿಕೊಂಡು ಬಾಲ್ಕನೀಯತ್ತ ಹೊರಟ. ತಾನು ಇಷ್ಟು ಹೇಳಿದರೂ ಏನು ಹೇಳದ ಅವನ ಮೇಲೆ ಸಿಟ್ಟು ಬಂದು ಅಲ್ಲಿದ್ದ ದಿಂಬನ್ನು ಎತ್ತಿ ಒಗೆದಳು. ನಿನ್ನ ಅಜ್ಜಿ, ಹೋಗಲೋ ಎಂದು ಹೇಳಿಕೊಳ್ಳುತ್ತಾ ಚಾ ಮಾಡಲು ಕಿಚನಿಗೆ ಹೋದಳು.

ಅಲ್ಲಿಂದಲೇ ‘ನಿನಗೂ ಬೇಕಾ?’ ಎಂದು ಹೊರಗಿದ್ದ ಅವನತ್ತ ಕೂಗಿ ಕೇಳಿದ್ದು ಆಯಿತು, ಎರಡು ಕಪ್‌ಗೆ ಚಾ ಬಸಿಯುತ್ತಿರುವಾಗ ‘ನನಗೂ ಒಂದು ಕಪ್’ ಎಂದು ಅವನು ಹೇಳಿದ್ದು ಆಯಿತು. ಇಬ್ಬರು ತಮ್ಮ ತಮ್ಮ ಮೂಲೆಯಲ್ಲಿ ಕೂತು ಚಾ ಕುಡಿಯುತ್ತಿರುವಾಗ ಮೇಲಿನಿಂದ ಅವಳು ಇಳಿದು ಬಂದು ಅವನಿಗೆ ‘… …’ ಎಂದು ಕೂಗಿ, ಆಮೇಲೆ ಬಾಗಿಲು ತೆರೆಯಲು ಬರದೇ ಇವಳು ಹೋಗಿ ತೆಗೆದು ಕೊಟ್ಟು, ಅವಳು ಇವಳಿಗೆ ಥ್ಯಾಂಕ್ಸ್ ಸಹ ಹೇಳದೆ ಲಿಫ್ಟ್ ಗುಂಡಿ ಒತ್ತಿದ್ದು ಆಯಿತು. ವಾಪಾಸ್ಸು  ತನ್ನ ಜಾಗಕ್ಕೆ ಮರಳಿದ ಅವಳು ‘ ನೀ ಇದೀಯಲ್ಲಾ, ಕರ್ಮ ನಿಂದು ಕಣೋ ‘ ಎಂದಳು.  ಅದಕ್ಕೆ ಅವನು ‘ ಅದರಲ್ಲಿ ಏನು, ಅವಳಿಗೆ ನನ್ನತ್ತಿರ ಕೆಲಸ ಆಗಕೆ ಇತ್ತು, ಅವಳೇನು ಸುಮ್ನೆ ಬಂದಿದ್ಲಾ , ಇವಳು ಒಬ್ಬಳೇ ಏನು ಇರೋದಾ, ನನ್ನತ್ತಿರಾ ಇದೆಲ್ಲ ನಡೆಯಲ್ಲ, ಹೋಗ್ಲಿ “.  ಅದಕ್ಕೆ ಅವಳು ‘ ಏನು ಚೆನ್ನಾಗಿಡ್ಳು ಮಾತ್ರ, ನಿನಗೆ ಲಕ್ ಇರಲಿಲ್ಲ ಬಿಡು, ಏನ್ ಮಾಡೋದು, ನೀ ಹೀಗಂತ ಅವಳಿಗೇನು ಗೊತ್ತು, ‘ ಎಂದು ನಗಾಡಿಕೊಂಡಳು. ಅದಕ್ಕೆ ಅವನು, ‘ ನನಗೇನು ಗೊತ್ತು ನೀ ಬೇಗ ಬರ್ತೀಯಾ ಅಂತಾ, ಹೋಗಲಿ ನಿನ್ನ ಹ್ಯಾಂಡ್ ಸಮ್ ಏನಾದ ‘ ಎಂದು ಕೇಳಿದ. ‘ ಅವನಾ, ದೊಡ್ಡ ಜಂಕ್ ಕಣೋ, ನನಗೆ ನಿನ್ನ ತರಹ ಎಲ್ಲ ಇರಕಾಗಲ್ಲ. ನೀ ಒಬ್ನೇ ಸಾಕು ಬಿಡು. ‘ ಎಂದು ಹೇಳಿ ಚಾ ಲಾಸ್ಟ್ ಸಿಪ್ ಕುಡಿದು ‘ ನೋಡೋಣ, ಯಾರಿಗೆ ಗೊತ್ತು, ಮೊನ್ನೆ ಅಷ್ಟೇ ಫಿಲ್ಮ್ ಮೀಟ್ ಲ್ಲಿ ಒಬ್ಬ ಅಂಗ್ರೇಜಿ ಇಷ್ಟ ಆಗಿದ್ದಾನೆ ‘ ಎಂದು ಕಣ್ಣು ಹೊಡೆದಳು. ಅದಕ್ಕೆ ಅವನು ‘ ನೀ ಬಿಡು’ ಎಂದು ದೊಡ್ಡದಾಗಿ ನಕ್ಕು ಕೊಂಡ.

ಸ್ವಲ್ಪ ಹೊತ್ತಲ್ಲಿ ಚಾ ಕುಡಿದು ಅಲ್ಲೇ ನೆಲದಲ್ಲಿ  ಒಬ್ಬರತ್ತಿರ ಒಬ್ಬರು ಬಿದ್ದು ಕೊಂಡಿದ್ದ ಅವರು,  ಸಂಜೆ ‘ಮಲೆಗಳಲ್ಲಿ ಮದು ಮಗಳು’ ನಾಟಕಕ್ಕೆ ಹೋಗುವುದಾಗಿ ತೀರ್ಮಾನಿಸಿದರು. ಅದಲ್ಲದೆ ಅವನು ನೀನಲ್ಲದೇ ಬೇರೆ ಯಾರನ್ನ ನಾಟಕಕ್ಕೆ ಕರೆದುಕೊಂಡು ಹೋಗಲಿ ಎಂದು ಡೈಲಾಗ್  ಹೊಡೆದು  ಅವಳತ್ತಿರ ಗುದ್ದಿಸಿಕೊಂಡ. ಇಬ್ಬರು ಒಬ್ಬರೊಬ್ಬರನ್ನು ಮುದ್ದಿಸ್ಕೊಂಡು ಎದ್ದರು. ಅವನು ಫ್ರೆಶ್ ಆಗಲು ಮೇಲಿನ ಕೊಣೆಗೆ ತೆರಳಿದರೆ ಈಕೆ ಕಿಚನಿಗೆ ಹೋಗಿ ಕುಕರ್ ಇಟ್ಟಳು. ಅದು ಸಿಟಿ ಹೊಡೆದು ಆರಿದ ಮೇಲೆ ಅವನು ಬಂದು ಸಕತ್ತಾಗಿರೋ ರಸಂ ಮಾಡಿದ. ಅದರ ಮೇಲೆ ಅವಳು ಹೊಯ್ದ  ಒಗ್ಗರಣೆಯ ಇಂಗಿನ ಪರಿಮಳ ಮನೆಯೆಲ್ಲ ತುಂಬಿಕೊಂಡು ಎಲ್ಲವನ್ನೂ ಘಮ ಘಮವಾಗಿಸಿತು.

(ಕೆಂಡಸಂಪಿಗೆಯಲ್ಲಿ ಪ್ರಕಟಿತ)

ಒಂದಿಷ್ಟು ಚಿಕ್ಕ ಹನಿಗಳು

ಜುಲೈ 24, 2013

ಗೊತ್ತಾ, ಮೊನ್ನೆ ಕರೆಂಟು ಹೋಗಿತ್ತು. ಟಾರ್ಚ್ ಹಚ್ಚಿ ಸೀಲಿಂಗಿಗೆ ಮುಖ ಮಾಡಿ ಇಟ್ಟಿದ್ದೆ. ಆ ಬೌನ್ಸ್ ಬೆಳಕಲ್ಲಿ ಬೀನ್ ಬ್ಯಾಗಿನಲ್ಲಿ ಬಾಲ್ಕನಿ ನೋಡುತ್ತಾ ಹಾಗೆ ಬಿದ್ದುಕೊಂಡಿದ್ದಾಗ ಏನೋ ಅಂದುಕೊಂಡೆ. ಆಯ್ ಇದನ್ನ ಬರೆದರೆ ಹೇಗೆ ಅಂತ ಅನ್ನಿಸಿ ಗೀಚಿದ್ದು ಆಯಿತು, ಈಗ ನಿಮ್ಮೊಟ್ಟಿಗೆ ಹೇಳಿದ್ದು ಆಯಿತು.

ಮಾತಿಲ್ಲ ಕತೆಯಿಲ್ಲ
ನಾನು ಮತ್ತು ನೀನು
ಹಾಗೂ ಮುತ್ತುಗಳು
————-

ಕೇಳಿದ್ದೆನಿಲ್ಲ
ಒಂದು ಮುತ್ತು
ಅಷ್ಟೇ
ಹುಡುಗನಿಗೂ
ಇಷ್ಟು ನಖರಾವಾ?
———————

ನನ್ನ ಹುಡುಗ
ಒಂದು ಹೂವು
ಸ್ವಲ್ಪ ಕೊಂಕಿದರೂ
ನಲುಗಿ ಹೋಗುವನು
——————–

ಜೀವ ನೀನು,
ಮುದ್ದು, ಚಿನ್ನ ನೀನು
ಏನಂದರೇನು? ಕೇಳುವುದಿಲ್ಲ
ಮಗುವಿನೊಡೆ
ನಿದ್ದೆಗೆ ಜಾರಿರುವನು
———-

ನನ್ನವನು
ಕಣ್ಣ ಗೊಂಬೆ
ಮುದ್ದಿಸಿಕೊಳ್ಳುವವನು
ಮುದ್ದಾಡುವವನಲ್ಲ
———————

ಪರಾವೃತ್ತ (ಅಭಿಸಾರಿಕೆಯ ಕತೆಗಳು-8)

ಜುಲೈ 13, 2013

ಅಭಿಸಾರಿಕೆ ಇತ್ತೀಚಿಗೆ ನನ್ನ ಬಳಿ ಮಾತನಾಡುತ್ತಿಲ್ಲ. ತನ್ನದೇ ಧ್ಯಾನದಲ್ಲಿರುತ್ತಾಳೆ. ಯಾವಾಗಲಾದರೂ ಬರುತ್ತಾಳೆ, ಯಾವಾಗಲೋ ಹೊರಡುತ್ತಾಳೆ. ಆಕೆಯಾಗಿಯೇ ನನ್ನ ಬಳಿ ಹೇಳದ ಹೊರತು ನಾನೆಂದೂ ಏನೆಂದು ಆಕೆಯನ್ನು ಕಾಡಿದವನಲ್ಲ. ಆಕೆ ಪಡಸಾಲೆಯ ಕಂಬಕ್ಕೆ ಒರಗಿ ನಿಂತು ಆಗಸವನ್ನು ದಿಟ್ಟಿಸುತ್ತಾ ಕೂತಿದ್ದರೆ, ಆಕೆಯ ಆ ಮೌನಭಾವದಲ್ಲೂ ಅರ್ಧ ಕತೆಗಳು ಚಿಮ್ಮಿ ಚೆಲ್ಲಿ ತಣ್ಣಗಾಗುತ್ತವೆ.

ಅವರಿಬ್ಬರಲ್ಲಿ ಮಾತಾಗಿತ್ತು. ಪ್ರತಿ ಹುಣ್ಣಿಮೆಯ ದಿನ ಗುಡ್ಡದ ತುದಿಯ ಮರದ ಕೆಳಗೆ ಮಿಲನವೆಂದು. ಅಲ್ಲಿ ಇಬ್ಬರು ಮಾಡುತ್ತಿದ್ದಿದ್ದೆನಿಲ್ಲ, ಮುತ್ತುಗಳು, ಮುತ್ತುಗಳು, ಮುತ್ತುಗಳು. ರಾತ್ರಿ ಚೆಲ್ಲಿದ ಅವೆಲ್ಲ ಬೆಳಗಿನ ಸೂರ್ಯಕಿರಣ ತಾಗಿ ಇಬ್ಬನಿಯ ಹನಿಗಳಾಗಿ ಮಾರ್ಪಾಡಗುತ್ತಿದ್ದವು. ತದನಂತರ ಇಬ್ಬರೂ  ಒಬ್ಬರನ್ನೊಬ್ಬರನ್ನು ಆಗಲಿ ಮತ್ತೆ ಸೇರಲೆಂದೇ ತಂ ತಂ ಜಾಗಗಳಿಗೆ ಮರಳುತ್ತಿದ್ದರು. ಅವರಿಬ್ಬರ ಮೊಗದ ಹೊಳಪಿನಿಂದ ಸೂರ್ಯನ ಬೆಳಕು ಇನ್ನೂ ಶುಭ್ರವಾಗಿ ಎಲ್ಲವನ್ನೂ ಹೊಳೆಯುಸುತ್ತಿತ್ತು.

ಒಂದು ಪೂರ್ಣ ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರಗಳನ್ನು ಏಣಿಸತೊಡಗಿದವನಿಗೆ ತಾನೇನೊ ಸಾಧಿಸಬೇಕೆಂದು ಅನ್ನಿಸಿತು. ಯಶಸ್ಸು, ಕೀರ್ತಿ, ಸಂಪತ್ತು ಹೀಗೆ ಏನೇನೋ ಹಲುಬಿದ. ತಂಪು ಚಂದ್ರನಲ್ಲಿ ಕಳೆದು ಹೋಗಿದ್ದ ಅವಳು ಅವನ ಮಾತಿನ ಲಯಕ್ಕೆ ತಾಳ ಹಾಕುತ್ತಾ ಹೊರಬಂದಳು. ಅಹುದು, ಜ಼ೀವನ ಅಂದರೆ ಇದೇನೆ ಅಂದುಕೊಂಡಳು. ಆಮೇಲೆ ಒಂದು ಇರುಳು ಅವನು ಅಲ್ಲಿ ಬಂದರೆ, ಅವಳು ಬರಲಿಲ್ಲ. ಆಕೆ ಬಂದಾಗ ಅವನಿರಲಿಲ್ಲ. ಕ್ರಮೇಣ ಇಬ್ಬರು ಬಾರದೆ ಆ ಮರ ಒಣಗಿ ಹೋಗಲಿಲ್ಲ. ಬದಲಿಗೆ ಇನ್ನೂ ಹರಡಿಕೊಂಡು ವಿಶಾಲವಾಯಿತು.

ಏಷ್ಟೋ ಕಾಲದ ಮೇಲೆ ಹೆಲಿಕ್ಯಾಪ್ಟರ್ ನಿಂದ ಅವನು ಇಳಿದು ಬಂದ. ಆಕೆ ದೊಡ್ಡ ಉದ್ದ ಕಾರಿನಲ್ಲಿ ಬಂದಿಳಿದಳು. ಇಬ್ಬರೂ ಸೇರಿ ಜೊತೆಗೆ ಗುಡ್ಡ ಹತ್ತಿದರು. ಅಲ್ಲಿ ಮರದ ಕೆಳಗೆ ಕೂತು ಅಂದು ಅವಳು ನಕ್ಷತ್ರಗಳನ್ನು ಏಣಿಸತೊಡಗಿದಳು. ಆತ ಚಂದ್ರನಲ್ಲಿ ಕಳೆದು ಹೋದ. ಅವತ್ತಿನ ಮಿಲನದಲ್ಲಿ ಬರೀ ಮುತ್ತಿರಲಿಲ್ಲ, ಮತ್ತೆಲ್ಲವೂ ಇತ್ತು. ಪ್ರಾಯಶಃ ಅದಕ್ಕೆ ಮಾರನೇ ದಿನ ಕೆಂಪು ಸೂರ್ಯ ಜನಿಸಿದ್ದ.

ಪ್ರೇಮಿ

ಜುಲೈ 7, 2013

ಪ್ರೀತಿಯಲ್ಲ ಇದು, ನಶೆ.
ಮದ್ಯವೇ ಬೇಕೆಂದಿಲ್ಲ ಅಮಲೇರಲು

ಇದರಿಂದ ದೂರವೇ ಇರಿ
ನಿಮಗೆ ಬೇಡ ಈ ಉಸಾಬರಿ
ಸುಮ್ಮನೆ ಹೋಗಿ ಬದುಕಿಕೊಳ್ಳಿ
ಕ್ಷಣ ಕ್ಷಣಕ್ಕೂ ಸಾಯುವವನಿಗೆ ಗೊತ್ತು
ಬದುಕು ಏಷ್ಟು ಅಮೂಲ್ಯ ಎಂದು

ಇದೊಂದು ಬೆಂಕಿ
ಒಮ್ಮೆಲೆ ಸುಡುವುದಿಲ್ಲ
ಇಂಚಿಂಚೂ ಬಗೆದು ಕೊಲ್ಲುತ್ತೆ
ಏನಕೆ ಬೇಕು ಇದು?
ಒಮ್ಮೇಲೆ ಸಾಯಿಸುವುದೂ ಇಲ್ಲ
ಇನ್ನೊಂದೆಡೆ ಬತ್ತುವುದೂ ಇಲ್ಲ

ಹರಿಯುತ್ತಿರುತ್ತೆ, ಸೆಳೆಯುತ್ತಿರುತ್ತೆ
ತನ್ನ ಕಬಂಧ ಬಾಹುಗಳ ಚಾಚಿ
ಜನ್ಮ ಜನ್ಮಾಂತರಕ್ಕೂ

ಕೇಳಿದ್ದು ಸತ್ಯವೇ,
ಒಬ್ಬನನ್ನು ಪ್ರೀತಿಸಬೇಡ
ಸಕಲ ಜೀವಿಗಳನ್ನು ಪ್ರೀತಿಸು ಎಂದು
ಆದರೇಕೆ, ಇಲ್ಲಿ, ಎದೆಯಲ್ಲಿ, ತಿವಿದ ನೋವು?
ಹೆಚ್ಚಾಗಿ ಇನ್ನೂ ಕಣ್ಣು ಬಿಡಬೇಕಷ್ಟೇ.

ಮಾತಾಡ್ ಮಾತಾಡ್ ಮಲ್ಲಿಗೆ (!)

ಜೂನ್ 12, 2013

ಹೌದು, ನಾನು ಚಾಟರ್ ಬಾಕ್ಸ್. ನನ್ನ ಹಿಂದಿ ಮೇಷ್ಟ್ರು ಇಟ್ಟ ಹೆಸರು ಅದು. ಕ್ಲಾಸಲ್ಲಿ ಸುಮ್ಮನೆ ಕುಳಿತುಕೊಳ್ಳೋಕೆ ಆಗ್ತಾ ಇರಲಿಲ್ಲ ನನಗೆ. ಏನಾದ್ರೂ ಮಾಡ್ತಾ, ಯಾರನ್ನಾದರೂ ಗೋಳು ಹೊಯ್ಕೊಳ್ತಾ, ಡಿಸ್ಟರ್ಬ್ ಮಾಡ್ತಾ ಇರ್ತಿದ್ದೆ. ಹೆಚ್ಚಾಗಿ ಮೇಷ್ಟ್ರು ಗಲಾಟೇನೇ ಮಾಡು ಅಂದ್ರೆ ಸುಮ್ಮನೆ ಕೂತಿರ್ತಿದ್ನೆನೋ. ಆದ್ರೆ ಅವರು ಗಪಚುಪ್ ಅಂತಿದ್ರು. ಅದಕ್ಕೆ, ನನಗೆ ತಡೆಯಕೆ ಆಗ್ತಾ ಇರಲಿಲ್ಲ.

ಇನ್ನೂ ನೆನಪಿದೆ. ಕಾಲೇಜಿನ ದಿನಗಳಲ್ಲಿ ನಾನು ಮತ್ತು ಅಶ್ವಿನಿ ಬಸ್ಸಲ್ಲಿ ಕೂತು ಬಕ್ವಾಸ್ ಮಾತಾಡಿ ಹೊಟ್ಟೆತುಂಬಾ ನಗಾಡುತ್ತಿದ್ದದ್ದು. ಏನೇನೋ ಹೇಳೋದು, ನಗಾಡೊದು. ಯಾರಾದ್ರೂ ಕೇಳ್ತಾ ಇದ್ರೆ ಅವರಿಗೆ ತಲೆಬುಡ ಅರ್ಥಾ ಆಗ್ತಾ ಇರಲಿಲ್ಲ ಅನ್ನೋದಂತೂ ಗ್ಯಾರ್ಂಟಿ. ಒಂದಿನ ನಾನು ಮತ್ತು ನನ್ನ ಕಸಿನ್ ಗೀತಿ ರಾತ್ರಿ ಯಾವುದೋ ಫಂಕ್ಷನ್ ಅಟೆಂಡ್ ಮಾಡಿ ರಿಕ್ಷಾದಲ್ಲಿ ಮನೆಗೆ ವಾಪಸ್ಸು ಹೋಗ್ತಾ ಇದ್ವು. ಅಲ್ಲಿಂದ ನಮ್ಮ ಮನೆಗೆ ಒಂದು ತಾಸಿನ ದಾರಿ ಇದ್ದಿರಬಹುದು. ಮಾತು ಸ್ಟಾರ್ಟ್ ಆಯಿತು. ಏನೇನೋ ಹೇಳದು, ನಗದು. ಕೈಯಲ್ಲಿ ನೀರಿನ ಬಾಟಲ್ ಬೇರೆ ಇತ್ತು. ಮಧ್ಯ ಮಧ್ಯ ನೀರನ್ನು ಎತ್ತಿ ಕುಡಿದು ಗಂಟಲು ಸರಿ ಪಡಿಸಿಕೊಂಡು ಮತ್ತೆ ನಗದು. ಪಾಪ! ರಿಕ್ಷಾ ಡೈವರ್ ನಿಗೆ ಏಷ್ಟು ಕಷ್ಟ ಆಯಿತು ಅಂದ್ರೆ ಅವನು ಹೇಳೆ ಬಿಟ್ಟ, ನೀವೇನು ನೀರ್ ಕುಡಿತಿದ್ದಿರೋ ಅಥವಾ ಅದರಲ್ಲಿ ಏನಾದರೂ ಇದೆಯಾ ಅಂತ. ನನ್ನ ಲೈಫ್‌ನಲ್ಲಿ ಫಸ್ಟ್ ಟೈಂ ಈ ತರಹ ನೋಡಿದ್ದು. ಏನು ಮಾತಾಡ್ತಿರಪ್ಪಾ, ನಾವು ಏಷ್ಟು ಪೆಗ್ ಹಾಕಿದ್ರು ಈ ತರಹ ಏರಲ್ಲ ಅಂತ.

ಇಲ್ಲಿ ಆಫೀಸ್ ಬಸ್ಸಿನಲ್ಲಿ ನನ್ನ ಪಕ್ಕ ದೀಪಿಕಾ ಕುಳಿತುಕೊಳ್ತಾ ಇದ್ಲು. ತುಂಬಾ ಸೈಲೆಂಟ್ ಅವಳು. ಆದ್ರೆ ಪಕ್ಕ ಕೂತವಳು ನಾನಲ್ವೆ. ನಾನು ಅವಳನ್ನು ಕರೆದು ಕರೆದು ಮಾತಾಡೊದು, ಅದೇನು, ಇದು ಹೇಂಗೆ, ನಿಮ್ಮಲ್ಲಿ ಹೇಂಗೆ, . . ಅಂತೆಲ್ಲ ಕೇಳೋದು. ಆಕೆ ಒಂದಿನ ತಡೆದುಕೊಳ್ಳೋಕಾಗದೆ ಹೇಳೆ ಬಿಟ್ಲು, ಎಲ್ಲರಿಗೂ ಮಾತು ಇಷ್ಟವಾಗಲ್ಲ, ನಾನು ಸ್ವಲ್ಪ ಇನ್ಟರಾವರ್ಟ್. ನನಗೆ ತಣ್ಣಗೆ ಕೂತು ಕಿಟಕಿಯ ಹೊರಗೆ ಸುಮ್ಮನೆ ನೋಡುವುದೇ ಇಷ್ಟ ಅಂತ. ನಾನು ಅವಳು ಹೇಳಿದ್ದನ್ನು ತುಂಬಾ ಆಸ್ತೆಯಿಂದ ಕೇಳಿಸಿಕೊಂಡು ಒಂದು ಹತ್ತು ನಿಮಿಷ ಸುಮ್ಮನಿದ್ದೆ. ಅವಳು ಮುಖ ಹೊರಳಿಸಿ ಕಿಟಕಿಯ ಸರಳುಗಳಲ್ಲಿ ತೂರಿಸಿದ್ಲು. ಆಮೇಲೆ ಕೇಳಿದೆ, ನಿಮ್ಮನ್ನು ನೋಡಿದರೆ ಆ ತರಹ ಕಾಣೋಲ್ಲ, ತುಂಬಾ ಮಾತೋಡೋರ ತರಹ ಅನ್ನಿಸುತ್ತೆ, ಅವಳಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಹೌದು, ನಾನು ತುಂಬಾ ಕ್ಲೋಸ್ ಇದ್ದವರ ಹತ್ತಿರ ಮಾತ್ರ ಮಾತಾಡೋದು ಅಂದಳು. ಅದನ್ನು ಹೇಳಿಸಿಕೊಂಡು ನಾನು ಸುಮ್ಮನಾಗಲಿಲ್ಲ. ಅದು ನನ್ನ ಜಾಯಮಾನವೇ ಅಲ್ಲ. ಈ ಕಡೆ ಕಿವಿಯಿಂದ ಕೇಳಿ ಆ ಕಡೆ ಕಿವಿಯಿಂದ ಬಿಟ್ಟು ಬಿಡೋದು. ಅವಳತ್ತಿರ ಮಾತಾಡಿ ಮಾತಾಡಿ ಈಗ ಅವಳು ನನ್ನ ಕ್ಲೋಸ್ ಫ್ರೆಂಡ್.  ಈಗ ಬಸ್ಸಲ್ಲಿ ಬರಲ್ಲ. ಮದುವೆಯಾಗಿದೆ. ಮೊನ್ನೆ ಒಮ್ಮೆ ಬಸ್ಸಲ್ಲಿ ಬಂದಾಗ ಹೇಳ್ತಾ ಇದ್ದಳು, ಆಕೆಯ ಗಂಡ ನನ್ನ ತರಹವೇ ಬಕ್ ಬಕ್. ಅದಕ್ಕೆ ಮುಂದೆ ಕಷ್ಟ ಆಗದೆ ಇರಲಿ ಅಂತ ಮದುವೆಗೆ ಮುಂಚೆನೇ ಆ ಭಗವಂತ ನನ್ನ ಭೇಟಿ ಮಾಡಿಸಿಬಿಟ್ಟಿದ್ದ ಅಂತ.

ಇವನ ಸ್ನೇಹಿತ ಒಬ್ಬ ಇದ್ದಾನೆ, ನಾವು ಹೊರಗೆ ತಿರುಗೋಕೆ ಹೋದಾಗೆಲ್ಲ ಅವನು ಬರ್ತಾ ಇದ್ದ. ಅವನಿಗೊಂದು ಚಟ. ನನ್ನ ಮಾತಿಗೆಳೆದು ಬಿಡೋದು. ಆಮೇಲೆ ನನ್ನ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ಸಾಕಾಗಿ, ಮೇಡಂ, ಸ್ವಲ್ಪ ಹೊತ್ತು ಸುಮ್ಮನಿರಿ. ಏಕೆ ಮೆದುಳಿಗೆ ಕೈಹಾಕಿ ತಿರುಗಿಸ್ತಿರಾ ಅಂತ. ಅವನು ನಾನು ಮಾತಾಡೊ ಮೂಡಲ್ಲಿ ಇದ್ರೆ ಕೈ ಮುಗಿದು ಹೇಳೋ  ಖಾಯಂ ಡೈಲಾಗ್, ನೀವು ಸುಮ್ಮನಿದ್ರೆ ಚೆಂದ, ಮೆದುಳಿಗೆ ಕೈ ಹಾಕಾಕೆ ಮಾತ್ರ ಬರಬೇಡಿ, ನಮ್ಮ ಪಾಡಿಗೆ ನಮ್ಮ ಬಿಟ್ಟು ಬಿಡಿ. ಬದುಕೋತಿವೆ ಅಂತ.

ಮೊನ್ನೆ ಒಂದು ಜೋಕ್ ನಮ್ಮಲ್ಲಿ ಪಾಸ್ ಆಗ್ತಾ ಇತ್ತು, ಮಾವಿನ ಮರದ ಕೆಳಗೆ ಇಬ್ಬರು ಮಾತಾಡ್ತಾ ಕೂತಿರ್ತಾರೆ. ಮೇಲಿನಿಂದ ಮಾವಿನ ಹಣ್ಣು ಕೆಳಗೆ ಬೀಳುತ್ತೆ. ಅದನ್ನು ನೋಡಿ ಈ ಕಾಲದಲ್ಲಿ ಮಾವಿನ ಹಣ್ಣು ಅಂತ ಆಶ್ಚರ್ಯ ಪಡ್ತಾರೆ, ಆಗ ಮಾವು ಸಿಟ್ಟಲ್ಲಿ ಕೂಗುತ್ತೆ, ತೊಡಾ ಚುಪ್ ರಹೆನಾ, ಮೈ ಸುನಕೆ ಸುನಕೆ ಪಕ್ ಗಯಾ ಅಂತ. ಆವತ್ತಿನಿಂದ ನಮ್ಮ ಚೇತನ್ ನಾನು ಮಾತಾಡ್ತಾ ಇದ್ರೆ ಬಂದು ಅಭೆ ದೇಖ್ನಾ, ಕ್ಯಾಂಟೀನ್ ಮೇ ಅಭಿ ಪಪಾಯಾ ಪಕ್ ಗಯಾ ಹೋಗಾ ಅಂತಿರ್ತಾನೆ.

ಏನ್ ಮಾಡೋದು, ನನಗೆ ಮಾತಾಡಕೆ ಇಷ್ಟ. ಜನರು ಇಷ್ಟ. ಅವರು ಹೇಳೋ ಅವರ ಕತೆಗಳು ಇಷ್ಟ. ಏಷ್ಟು ಅಪರಿಚಿತರು ಪರಿಚಿತರಾಗಿ ಬಿಡ್ತಾರೆ. ಆದರೆ ಜಾಸ್ತಿ ಮಾತಾಡೊದ್ದಕ್ಕೇನೆ ಯಾರು ಅತಿ ಪರ್ಸನಲ್ ಮಾತ್ರ ಹೇಳಿಕೊಳ್ಳೊಲ್ಲ. ಬೇಜಾರಿಲ್ಲ. ಆ ಆ ಕ್ಷಣಕ್ಕೆ ಜೊತೆಗಿದ್ದವರ ಜೊತೆ ಖುಷಿಯಿಂದ ಒಂದು ನಗು, ಒಂಚೂರು ಹೃದಯದಿಂದ ಆಡೋ ಮಾತು ನಮ್ಮ ಸುತ್ತಮುತ್ತ ಪರಿಸರವನ್ನೇ ಜೀವಿಸೊ ತರಹ ಮಾಡಿ ಬಿಟ್ಟಿರುತ್ತೆ. ಎಲ್ಲ ನೋವು ಖಾಲಿ ಖಾಲಿಯಾಗಿ ಅರ್ಥವಿಲ್ಲದ್ದು ಆಗಿ ಹೋಗಿರುತ್ತೆ.

ಶುಭ ರಾತ್ರಿ.

ಪ್ರೀತಿ

ಜೂನ್ 2, 2013

ಅವನ ಕಣ್ಣಂಚಲ್ಲಿ ಮಿಂಚಿ
ಮೀಸೆಯಂಚಿನ ನಗುವಲ್ಲಿ ಅರಳಿ
ಮಾತಿನ ಘಮದಲ್ಲಿ ಮಿಂದು
ಹೂಮುತ್ತುಗಳಿಗೆ ಕಂಪಿಸಿ
ಸ್ಪರ್ಷಕ್ಕೆ ಕರಗಿ
ಸಾನಿಧ್ಯದಲ್ಲಿ ಆವಿಯಾದೆ

ಮೀರಾ (ಅಭಿಸಾರಿಕೆಯ ಕತೆಗಳು-7)

ಮಾರ್ಚ್ 29, 2013

ಆವತ್ತಿನ ಪ್ರೋಸೇಷನ್ ನಂತರ ಇಷ್ಟು ದಿನ ಆಕೆ ಸಿಕ್ಕಿದ್ದೇ ಇಲ್ಲ. ಇವತ್ತು ಬೆಳಗಿನ ಜಾವವೇ ಬಂದು ನಿಂತು ಬಿಟ್ಟಿದ್ದಾಳೆ. ನಿದ್ದೆ ಆರುವ ಮೊದಲೇ ಮತ್ತೆ ಕಣ್ಮರೆಯಾಗಿಬಿಟ್ಟಳು. ನಾ ಮತ್ತೆ ಹಾಸಿಗೆಗೆ ಜಾರಿದೆ. ಆಮೇಲೆ ನನ್ನ ಎಚ್ಚರಿಸಿದ್ದು ಮಧುರ ಸ್ವರ. ಇದೆಲ್ಲಿಂದ ಇವತ್ತು ಎಂದು ಆಕಳಿಸುತ್ತಾ ಹೊರ ಬಂದರೆ ಆಕೆ ಸೂರ್ಯ ರಶ್ಮೀಯಲ್ಲಿ ಮಿಂದು ಗುನುಗುತ್ತಿದ್ದಾಳೆ. ಆಕೆಯೀಗ ರಾಧಾಮಣಿಯೋ ಮಿರಾಮಯಿಯೋ ನನಗಂತೂ ತಿಳಿಯಲಿಲ್ಲ. ಅಂದುಕೊಳ್ಳುತ್ತೇನೆ, ಬಹುಶಃ ಎಲ್ಲ ಇದ್ದು ಏನೂ ಇಲ್ಲದ ತರಹ ಮತ್ತು ಏನೂ ಇಲ್ಲದೇ ಎಲ್ಲ ಇರುವ ತರಹ ಇದ್ದು ಬಿಡುವ ಆಕೆಯ ಇಹಕ್ಕೆ ಬೆರಗಾಗಿ ನಿಂತಿದ್ದೇನೆ.

ಆಕೆ ದೊರೆಸಾನಿ, ದೊರೆಯ ಏಕೈಕ ಮುದ್ದಿನ ಪತ್ನಿ. ಆಕೆಯೆಂದರೆ ದೊರೆಗೆ ಜೀವ. ಆದರೆ ಆಕೆಗೋ ‘ಅವನ’ಲ್ಲಿ ಒಲವು. ಅದೇನು ಈಗೀಗಿನಿಂದ ಹುಟ್ಟಿದ್ದಲ್ಲ. ‘ಅವನ’ಲ್ಲಿ ಆಕೆಯ ಜೀವ ಬಿದ್ದು ವರುಷಗಳೇ ಸಂದಿದ್ದವು. ಬಾಲ್ಯ ಕಾಲದಲ್ಲಿ ನದಿಯಲ್ಲಿ ದೊರೆತ ‘ಅವನ’ ಮೂರ್ತಿಗೆ ಆಕೆಗಿಂತ ಸ್ವಲ್ಪ ಸಣ್ಣ ಆಯು. ಅಂದಿನಿಂದ ಇಂದಿನವರೆಗೆ ಅದು ಆಕೆಯ ಜೊತೆಗೆ ಇದೆ.

ಮೊದಲು ಆಕೆಗೊಂದು ಗೊಂಬೆಯಾಯಿತೆಂದು ಸುಮ್ಮನಿದ್ದವರು ಆಕೆ ಬೆಳೆಯುತ್ತಿದ್ದಂತೆ ಏರುತ್ತಿದ್ದ ಹುಚ್ಚು ಅವರುಗಳ ನಿದ್ದೆಗೆಡಿಸಿತ್ತು. ಏನು ಮಾಡಿದರು ‘ಅವನ’ ಬಿಡಲೊಲ್ಲೆ ಎನ್ನುವ ಅವಳು. ಒಂದು ದಿನ  ‘ಅವನ’ ಏತ್ತಿ ಹೊರ ಹಾಕಿದಾಗ ಮಾಡಿದ ರಂಪಾಟ, ಹಠ, ಜಿದ್ದಿಗೆ ಸೋತು ‘ಅವನ’ನ್ನು ಮರಳಿ ತಂದು ಅವಳ ಮಡಿಲ ಸೇರಿಸಿದ್ದರು.

ಸೊಬಗಿನ ಸಿರಿಯಾದ ಅವಳನ್ನು ಉತ್ಸವದಲ್ಲಿ ನೋಡಿದ ದೊರೆಯು ಆಕೆಯೇ ತನ್ನವಳೆಂದು ಒಪ್ಪಿಕೊಂಡು ವಿವಾಹವಾಗಿ ಅರಮನೆಗೆ ಕಳುಹಿಸಿಕೊಂಡ. ತದನಂತರ ಆಕೆ ತನ್ನವಳೆಂದೂ ಆಗುವುದಿಲ್ಲವೆಂದು ಅರಿತುಕೊಂಡ. ಆಕೆಯನ್ನು ಮುದ್ದಿಸಿದ, ಬೇಡಿಕೊಂಡ, ಅತ್ತುಕೊಂಡ, ಸಿಟ್ಟು ಮಾಡಿಕೊಂಡ. ಆಕೆ ಏನೂ ಹೇಳುತ್ತಿರಲಿಲ್ಲ. ಮುಗುಳ್ನಕ್ಕು ಆತನ ತಲೆ ಸವರಿ ಅವನ್ನೆತ್ತಿಕೊಂಡು ಹೊರಟು ಬಿಡುತ್ತಿದ್ದಳು. ಆಕೆಯ ಸಖಿ ಏನಾರು ಹೇಳಬಂದರೆ, ಅಯ್ಯೋ ಹುಚ್ಚಿ, ನೀನೆಂದಾದರೂ ನನ್ನ ‘ಅವನ’ನ್ನು ಪ್ರೀತಿಸಿದ್ದೀಯಾ? ಒಮ್ಮೆ ಪ್ರೀತಿಸಿ ನೋಡು ಎಂದು ಅವಳ ಗಲ್ಲ ನೇವರಿಸಿ ಅಲ್ಲಿಂದೆದ್ದು ಬಿಡುತ್ತಿದ್ದಳು.

ಹೀಗಿರಲು ಒಂದು ದಿನ ‘ಅವನು ‘ ಇರಲಿಲ್ಲ. ಆಕೆ ಎಲ್ಲ ಕಡೆ ಹುಡುಕಿದಳು. ಅತ್ತಳು, ಬೇಡಿಕೊಂಡಳು, ಗೋಳಾಡಿಕೊಂಡಳು. ಏನು ಪ್ರಯೋಜನವಾಗಲಿಲ್ಲ. ‘ಅವನು’ ಮರಳಿ ಸಿಗಲಿಲ್ಲ. ಆಕೆಗೆ ಯಾರೋ ಹೇಳಿದರು ಈಗಾತ ಬ್ರಹ್ಮಪುರದಲ್ಲಿದ್ದನೆಂದು. ಕೇಳಿದವಳೇ ಸೀದಾ ಎದ್ದು ಹೊರಟು ಬಿಟ್ಟಳು. ದೊರೆ ಈ ಸಲ ಆಕೆಯನ್ನು ತಡೆಯಲಿಲ್ಲ.

ಕಲ್ಲು ಮೆಟ್ಟಿದಳು, ಗುಡ್ಡ ದಾಟಿದಳು, ಮುಳ್ಳನ್ನು ತುಳಿದಳು, ಅಲೆದಾಡಿದಳು. ಇನ್ನೇನು ಜೀವ ನಿಲ್ಲಬೇಕು ಅಂದಾಗ ‘ಅವನು’  ಎದುರಿಗೆ ಬಂದು ನಿಂತ. ಬರಸೆಳೆದುಕೊಂಡ. ಬಳಲಿದ್ದ ಆಕೆಯೆನ್ನೆತ್ತಿ  ಬ್ರಹ್ಮಪುರಕ್ಕೆ ಕರೆದೊಯ್ದ.

ಈಗ ಆಕೆಗೆ ಎಲ್ಲವೂ ‘ಅವನು’. ‘ಅವನ’ ಹಾಡಲ್ಲಿ ಭಜಿಸುತ್ತಾಳೆ, ಕುಣಿಯುತ್ತಾಳೆ, ಮೈ-ಮನ ಮರೆಯುತ್ತಾಳೆ. ದೊರೆಯು ಆಕೆಗಾಗಿ ಎಲ್ಲ ವ್ಯವಸ್ಥೆಯನ್ನು ಅವಳಿದ್ದಲ್ಲೇ ಮಾಡಿಕೊಟ್ಟು ತೃಪ್ತನಾಗಿದ್ದಾನೆ. ಆಕೆಯೀಗ ತನ್ನ ಉಸಿರನ್ನು ‘ಅವನ’ಲ್ಲಿ ನಿಲ್ಲಿಸಿಬಿಟ್ಟಿದ್ದಾಳೆ.

ರಾಧಿಕೆ (ಅಭಿಸಾರಿಕೆಯ ಕತೆಗಳು-6)

ಜನವರಿ 26, 2013

ಮೇಲೆ ಆಟ್ಟಣಿಗೆಯಲ್ಲಿ ಚಳಿಗೆ ಮೈ ಕೊರೆಯುತ್ತಿತ್ತು . ಕೆಳಗೆ ರಾಧೇಮಾ  ಪ್ರೊಸೆಷನ್ ಸಾಗುತ್ತಿತ್ತು. ಏನೂಂತ ತಿಳಿಯದೇ ಜನರನ್ನೇ ದಿಟ್ಟಿಸುತ್ತ  ಸಣ್ಣಗೆ ನಡುಗುತ್ತ ನಿಂತಿದ್ದೆ. ಅರೇ! ಅದೋ ಅವಳು , ಬಿಳಿ ಸೀರೆಯಲ್ಲಿ ತಂಬೂರಿ ಮೀಟುತ್ತ ಮೈ ಮರೆತವಳು! ಹೌದು ಆಕೆಯೇ. ಕಳೆದು ಹೋಗಿದ್ದ ಅಭಿಸಾರಿಕೆ!!  ಮೈ ಚಳಿಯೆಲ್ಲ ಆರಿ ಹೋಯಿತು. ನಾ ಕೂಗಿದ್ದು ಆಕೆಗೆ ಕೇಳಿಸಿತೆ!? ತಲೆಯೆತ್ತಿ ನನ್ನ ನೋಡಿದವಳೇ ತುಸು ನಾಚಿ ತುಟಿ ಅರಳಿಸಿದಳು. ಆ ತುಟಿ ಅಂಚಿನಿಂದ ಬಿದ್ದ ಮುತ್ತುಗಳು ಬೆಳದಿಂಗಳನ್ನು ಮತ್ತಷ್ಟು ಪ್ರಖರವಾಗಿಸಿದವು.

ರಾಧಿಕೆ ನಗದೇ ವರುಷಗಳೇ ಸಂದಿದ್ದವು. ಕೇಶವನಿಲ್ಲದೆ ಆಕೆಯೆಲ್ಲಿ? ಆತನನ್ನೊಮ್ಮೆ ನೋಡಬೇಕು ಎಂದೆಣಿಸಿದ್ದೇ  ತಡ ಲಕನಿಗೂ ಹೇಳದೇ  ಎದ್ದು ಬಂದಿದ್ದಳು.  ಈ ವರುಷಗಳಲ್ಲಿ ಒಮ್ಮೆಯೂ ತನ್ನನ್ನು ನೋಡಬೇಕೆಂದು ಆತನಿಗನಿಸಿರಲಿಲ್ಲ. ಈಕೆಯೋ ಮತ್ತೊಮ್ಮೆ ಆತನ ಮೊಗ ನೋಡನೆಂದವಳು ಅವತ್ತು ತಡೆಯಲಾಗದೇ ಊರವರೊಟ್ಟಿಗೆ ಹೊರಟು ಬಿಟ್ಟಿದ್ದಳು. ಹಾಗಂತ ಈಗಾತ ರಾಜ ಕುವರ, ಎರಡೆರಡು ಹೆಂಡಿರು. ತನ್ನ ಮರೆತು ಬಿಟ್ಟಿರುವನೆ? ಹಾಗಾಗಲಾರದು ಎಂದುಕೊಳ್ಳುತ್ತಲೇ ನಗರದ ಪ್ರವೇಶ  ದ್ವಾರದೊಳಗೆ ಬಂದು ನಿಂತಿದ್ದಳು.

ಅಲ್ಲಿ ಆತ  ಎಲ್ಲರೊಡನೆ ನಗುತ್ತ ನಿಂತಿದ್ದ. ಇವರೆಲ್ಲರನ್ನು ನೋಡಿದವನೇ ಇತ್ತ ಕಡೆಯೇ ಬಂದ. ಎಲ್ಲರನ್ನು ಮಾತನಾಡಿಸಿದರೂ ಈಕೆಯತ್ತ ತಿರುಗಲಿಲ್ಲ. ಗೋಪನೊಟ್ಟಿಗೆ ಹರಟತೊಡಗಿದ. ಈಕೆ ಏನೂ ಹೇಳಲಿಲ್ಲ. ಅಲ್ಲಿಂದ ಹೊರಳಿ ದೀವಾನರಲ್ಲಿ ಏನೋ ಹೇಳಿ ಬಳಿ ಬಂದ. ಬಾ ಎಂದು ಕರೆದು ಹೋದ. ಈಕೆ ಏನೂ ಕೇಳಲಿಲ್ಲ. ಆತನ ಬೆನ್ನಲ್ಲೇ ನಡೆದಳು.

ಭವನದ ಒಂದು ಸುತ್ತು ಹೊಡೆದರು. ಆತ  ಅಲ್ಲಿನ ಪ್ರತಿಯೊಂದು ಇಂಚಿಂಚಿನ  ನೆನಪ ಒಡೆಯತೊಡಗಿದ. ಅಪ್ಪನ ಬಗ್ಗೆ, ಅಮ್ಮನ ಬಗ್ಗೆ, ಮಾವನ ಬಗ್ಗೆ, ………  ಆಕೆ ಕೇಳಿಸಿಕೊಳ್ಳುತ್ತಲೇ ಇದ್ದಳು. ಆತನನ್ನು ಕಣ್ತುಂಬಿಸಿಕೊಳ್ಳುತ್ತಲೇ ಇದ್ದಳು. ಕೊನೆಗೆ ಉಧ್ಯಾನಕ್ಕೆ ಬಂದರು. ಅಲ್ಲಿ ಆಕೆಯ ಬಹು ಪ್ರಿಯ ಪಾರಿಜಾತ.  ಜೊತೆಗೆ ಹೂ  ಬಳ್ಳಿಯ ಉಯ್ಯಾಲೆ. ಆಕೆಯ ಕಣ್ಣು ಮಿಂಚಿತು. ಅಲ್ಲಿ ಆತ ಇನ್ನೂ ಹಗುರಾದ. ಭಾಮೆಯ ಜೊತೆಗಿನ ಮೊದಲ ಕ್ಷಣಗಳ ಬಗ್ಗೆ ಹೇಳಿ ಸಂಭ್ರಮಿಸಿದ. ಆಕೆ ಕೇಳುತ್ತಲೇ ಇದ್ದಳು. ಕಣ್ಣುಗಳು ಭಾರವಾದವು.

ಆತ ಕಾರ್ಯ ನಿಮಿತ್ತ ಅತ್ತ ಹೋದೊಡನೆ ಇತ್ತ ಸಿಹಿ ಹಂಚುತ್ತಿದ್ದ ಸೇವಕನಲ್ಲಿ ದೊಡ್ಡ ಪೊಟ್ಟಣವನ್ನೇ ಕಟ್ಟಿಸಿಕೊಂಡು ಹೊರಟು ಬಿಟ್ಟಳು. ಮಾರನೇ ದಿನ ಪುರಕ್ಕೆ ಮರಳಿದವಳೇ ಊರ ಬಾಲಕರನ್ನೆಲ್ಲ ಕರೆದು ಸಿಹಿ ಹಂಚಿದಳು. ಅವರ್ಯಾರು ಏಕೆಂದು ಕೇಳಲಿಲ್ಲ. ಈಕೆಯೂ ಹೇಳಲಿಲ್ಲ. ಮತ್ತೊಂದು ದಿನ ಪ್ರತಿ ದಿನ ದೀಪ ಹಚ್ಚಿ ಇಡುತ್ತಿದ್ದ ಗೂಡಿನಿಂದ ಕೆತ್ತನೆಯ ಮರದ ಪೆಟ್ಟಿಗೆ ತೆರೆದು, ಅದರೊಳಗಿನ ಗರಿ ಮತ್ತು ಕೊಳಲನ್ನು,  ಸುತ್ತಿದ್ದ ರೇಷ್ಮೆ ದಾರದಿಂದ ಭೇರ್ಪಡಿಸಿದಳು. ಬಾಲನನ್ನು  ಕರೆದು ಅವನ ಮುಡಿಗೆ ಆ ಗರಿ ಸಿಕ್ಕಿಸಿ, ಆತ  ತುಂಬಾ ದಿನಗಳಿಂದ ದುಂಬಾಲು ಬಿದ್ದಿದ್ದ ಕೊಳಲನ್ನು ನೀಡಿದಳು. ಆತನೊ  ಕುಣಿದಾಡಿಬಿಟ್ಟ . ಒಳಗೆ ಬಂದಷ್ಟೇ ವೇಗವಾಗಿ ಹೊರಗೆ ಓಡಿಬಿಟ್ಟ .

ಬಾಲನ ಕೊಳಲ ಇಂಪಿನ ಜೊತೆ ಪುರದಲ್ಲಿ ಮತ್ತೆ ಬೆಳಗಾಗತೊಡಗಿತು, ಸಂಜೆಯಾಗತೊಡಗಿತು. ಅದರಲ್ಲಿ ಹಕ್ಕಿ-ಪಕ್ಕಿ, ಹೂಗಳು ನಲಿಯತೊಡಗಿದವು, ರಾಸುಗಳು ಮಿಂದೆದ್ದವು, ರಾಧಿಕೆಯ ತುಟಿಯಂಚಿನಲ್ಲೂ ನಗು ಉಕ್ಕಿ ಹರಿಯತೊಡಗಿತು.

ಬುದ್ಧ ನಕ್ಕಾಗ

ನವೆಂಬರ್ 26, 2011

ಹೊಸ ಮನೆಕೆಲಸದವರು ಸೇರಾದ ಮೇಲೆ ಕೇಳುವ ಮಾಮೂಲು ಪ್ರಶ್ನೆ ಬುದ್ಧನ್ನ ಏಕೆ ಇಟ್ಕೊಂಡಿದ್ದಿರಾ!? ನಿಮ್ಮ ದೇವರಾ? ಹ್ಹ ಹ್ಹ. ಇದೊಳ್ಳೆ ಕತೆ ಆಯ್ತಲ್ವಾ, ನಂಗೆ ಬುದ್ಧ ಇಷ್ಟ. ಅದಕ್ಕೆ ಇಟ್ಕೊಂಡಿದ್ದೇನೆ. ಆದರೆ ಅದು ಅವರಿಗೆ ಅರ್ಥ ಆಗೋಲ್ವೆ.

ವಿಷಯ ಏನು ಅಂದ್ರೆ ಮೊದಲಿದ್ದ ಸುನೀತಾಳಿಗೆ ಬುದ್ಧ ಅವರ ದೇವರು. ಅವರು ಅಂಬೇಡ್ಕರ್ ’ಜಾತಿ’ಯವರಂತೆ. ಅಂದರೆ ನೌಬುದ್ಧಕ್ಕೆ ಸೇರಿದವರು. ಅದಕ್ಕೆ ಮನೇಲಿ ಅಂಬೇಡ್ಕರ್ ಮತ್ತು ಬುದ್ಧನ್ನ ಇಟ್ಕೊಂಡು ಪೂಜಿಸ್ತಾರಂತೆ. ಅದಕ್ಕೆ ನಾನೂ ಆಕೆಯ ಜಾತಿಯವಳಾ ಅಂತ ಗುಮಾನಿ. ಈಗೀರುವ ಮಂಗಲಾಗೆ ಬುದ್ಧನ್ನ ಕಂಡರೇ ಆಗೊಲ್ಲವಂತೆ. ಏಕೆಂದರೆ ಅವಳ ಜಾತಿಯವರು ಬೆಳಿಗ್ಗೆ ಎದ್ದು ಇವರ (ನೌಬುದ್ಧ) ಮುಖ ನೋಡಿದರೆ ಅಪಶಕುನವಂತೆ. ರಾತ್ರಿಯವರೆಗೂ ಅಗೋ ಕೆಲಸವು ಆಗೊಲ್ಲವಂತೆ. ಅದಕ್ಕೆ ತಾನು ಎಲ್ಲಿ ಆ ಜಾತಿಯವರ ಮನೆಯಲ್ಲಿ ಕೆಲಸ ಮಾಡ್ತಾಇದ್ದಿನೊ ಅಂತ ಗುಮಾನಿ!

ಈ ಇಬ್ಬರೂ ನಾನೊಬ್ಬ ಬ್ರಾಹ್ಮಣ ಅಂದ್ರೆ ನಂಬೊದೇ ಇಲ್ವೆ. ದೇವರಗೂಡೇ ಇಲ್ಲ, ಹೋಗಲಿ ದೇವರ ಚಿತ್ರನೂ ಇಲ್ಲ, ದಿನಾ ದೇವರ ಹಿಂದೆ ಸುತ್ತೊದು ಇಲ್ಲ, ….ನೀನು ಕುಂಕುಮನೂ ಇಟ್ಕೊಳಲ್ಲ,… ಪಂಡಿತ್ ಲೋಗ್ ಐಸೆ ನಹಿ ಹೋತೆ! ಏನಪ್ಪಾ ಮಾಡೊದು? 🙂

ಯಾಕೋ ನಮ್ಮನೆ ಬುದ್ಧನ್ನ ನೋಡಿದಾಗ ಆ ಹೋಮ್ ಡೆಕೊರ್ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರೊ ಹಳದಿ, ಕಪ್ಪು, ಬೆಳ್ಳಿ,… ಬಣ್ಣಗಳ ಚೆಂದಚೆಂದದ ಬುದ್ಧನ ಮೂರ್ತಿಗಳು ಜೋರಾಗಿ ನಗುತ್ತಿವೆಯೇನೊ ಅನ್ನಿಸ್ತಿದೆ.

ಸಂಜೆ ಏಳು

ಏಪ್ರಿಲ್ 27, 2011

ನಿರ್ಧರಿಸಿದ ಕೆಲಸ ಮುಗಿಸಿ, ನಾಳಿನ ಕೆಲಸದ ರೂಪುರೇಷೆ ರಚಿಸಿ,
ತೃಪ್ತಿಯಿಂದ ಲಾಗೌಟ್ ಆಗುವ ಹೊತ್ತು
ಕ್ಲಯಂಟ್ ಅಪ್‌ಲೌಡ್ ಇದ್ದಲ್ಲಿ ತಡರಾತ್ರಿಯ ಗಾಡಿಗೆ
ಫೆಸಿಲಿಟಿ ವಿಭಾಗಕ್ಕೆ ಮೇಲ್ ಅರ್ಜಿಸುವ ಹೊತ್ತು
ಇಲ್ಲದಿದ್ದಲ್ಲಿ ಮೂರು ನಿಮಿಷದ ಒಳಗೆ ನಿರ್ಧರಿತ ಸಮಯಕ್ಕೆ ತಪ್ಪದೇ ಚಾಲೂ ಆಗುವ
ಬಸ್ಸಿನ ಒಳಗೆ ಗಡಿಬಿಡಿಯಿಂದ ನುಗ್ಗಿ ಸೀಟಿನಲ್ಲಿ ನಿರಾಳವಾಗುವ ಹೊತ್ತು
ಮುಗಿಲ ಬಂಗಾರ ಕರಗಿ ನೀರಾಗಿ
ರೋಡು, ಫ್ಲೈಓವರು, ಮಾಲು, ಬಜಾರುಗಳ ಮೇಲೆ ಹರಡಿಕೊಳ್ಳುವ ಹೊತ್ತು
ಕೆಂಪು-ಹಸಿರು-ಹಳದಿ ಲೈಟುಗಳ ಮಧ್ಯೆ
ಹಾರ್ನು ಪೊಂಪೊಗಳ, ಗಾಡಿ ಚಕ್ರಗಳ ಸದ್ದಿನ ಹೊತ್ತು
ಮರಳಿ ಮನೆಗೆ ವಿಶ್ರಮಿಸಿ ಹಗುರಾಗಿ
ನಾಳೆ ಹೊಸ ಹುಮ್ಮಸ್ಸಿನಿಂದ ಬರುವ ಆಯಾಮದ ಹೊತ್ತು

ಏಕಾಂತ ಸಂಜೆಗಳಲ್ಲಿ,
ಬಾಲ್ಕನಿಯಿಂದ ಬೀಸುವ ತಣ್ಣಗಿನ ಗಾಳಿ
ಅನುಭವಿಸುತ್ತ ಕಳೆಯುವ ಹೊತ್ತು
ಬೆಳ್ಳಿ ಬೆಳಕು ಕಂದಿ ನಿಯಾನ್ ಬೆಳಕು
ಹೊತ್ತಿಕೊಳ್ಳುವ ಹೊತ್ತು
ಇರುವ ಚಿಕ್ಕ ಚಿಕ್ಕ ಏಲೆಗಳ ನಡುವಿನಿಂದ ಇಣುಕುವ ದೊಡ್ಡ ದೊಡ್ಡ ಏಲೆಗಳ ಪಾರ್ಕು
ತುಂಬಿ ತುಳುಕಾಡುವ ಹೊತ್ತು
ಚಂದ್ರನಿಲ್ಲದ ಬಾನಿಗಾಗಿ ಪಾರ್ಕಿನ ಸಾಲು ಸಾಲು ಬಿಳಿ ಗೋಲ ಬಲ್ಬುಗಳು
ಹೊತ್ತಿ ಚೆಲ್ಲುವ ಹೊತ್ತು
ಹಾಗೇನೆ ಇನ್ನೊಂದು ದಿನ ಮುಗಿಯಿತಲ್ಲ ಎಂದು ಹಪಹಪಿಸುತ್ತ
ಮತ್ತೆ ಬರೆಯದ ಪೆನ್ನೆತ್ತಿಕೊಂಡ ಹೊತ್ತು