ಈ ಚೌತಿ ಒಂಥರಾ ಹಳೇ ನೆನಪುಗಳನ್ನು ಎತ್ತಿಹಾಕಿ ಬಿಡುತ್ತೆ. ಬಹುಶಃ ಬದುಕಿನ ಮೊದಲ ಇಪ್ಪತ್ತಾರು ವರ್ಷ ಗಳಲ್ಲಿ ಕಂಡ ಅಬ್ಬರದ ಹಬ್ಬ ಇದಾಗಿತ್ತು. ಆಗ ವರ್ಷದ ದೊಡ್ಡ ಹಬ್ಬ ಅಂದರೆ ಚೌತಿ. ಅದೂ ಅಜ್ಜನಮನೆಯ ಚೌತಿ. ಹೊಸ ಅಂಗಿ, ಎಲ್ಲರಿಗೆ ಕೊಡಲು ಬಳೆ, ಅದಕ್ಕಿಂತ ಜಾಸ್ತಿ ನಾವೆಲ್ಲ ಸೇರಿ ರಾತ್ರಿ ಇಡೀ ಮಾಡುತ್ತಿದ್ದ ಗಣಪತಿ ಮಂಟಪ. ಮೊದಲು ಮಾವ ಅವನ ಸ್ನೇಹಿತರ ಜೊತೆ ಸೇರಿ ಪ್ರತಿ ವರ್ಷ ಹೊಸತೇನಾದರೂ ಮಾಡುತ್ತಿದ್ದ. ಅವರು ಫ್ಯಾನ್ ಉಪಯೋಗಿಸಿ ಮಾಡಿದ್ದ ರೊಬೊಟ್ ಇನ್ನೂ ನೆನಪಿದೆ. ತದನಂತರ ನಾವು ಬೆಳೆದ ಹಾಗೇ ಅಣ್ಣಂದಿರ ಜೊತೆ ಸೇರಿ ನಾವೆಲ್ಲ ಮಾಡುತ್ತಿದ್ದದ್ದು. ಮರುದಿನ ಊರೆಲ್ಲ ತಿರುಗಿ ಯಾರ ಮನೆಯ ಗಣಪತಿ ಅಲಂಕಾರ ಹೊಸದಾಗಿದೆ, ಚೆನ್ನಾಗಿದೆ ಎಂದು ಚರ್ಚಿಸುತ್ತಿದ್ದದ್ದು.
ಆಮೇಲೆ ಊರವರೆಲ್ಲ ಗಣಪತಿ ದೇವಸ್ಥಾನದಲ್ಲಿ ಸೇರಿ, ಊರ ಗಡಿಯಾದ ಚೌಡಿ ಕಟ್ಟೆಯ ಜೊತೆ ನಡೆದುಹೋಗುತ್ತಿದ್ದು. ಅಲ್ಲಿ ಈಡುಗಾಯಿ ಒಡೆಯುವ ಚಿಕ್ಕ ಸ್ಪರ್ಧೆಯೂ ಇರುತಿತ್ತು. ಇದು ದೀಪಾವಳಿಗಾಗಿತ್ತಾ, ನೆನಪಾಗುತ್ತಿಲ್ಲ. ಒಂದು ವರ್ಷ ಅಲ್ಲಿ ಎಲ್ಲರನ್ನೂ ಸೇರಿಸಿ ದುಡ್ಡು ಕಲೆ ಹಾಕಿ ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮವೂ ನೆನಪಿದೆ.
ನನಗೆ ಏನು ಹುಚ್ಚೊ ಗೊತ್ತಿಲ್ಲ. ಎಲ್ಲರನ್ನೂ ಸೇರಿಸಿ ಈ ತರಹದ ಕಾರ್ಯಗಳನ್ನು ಮಾಡುವುದು. ಮದುವೆಯ ನಂತರ ಇವನ ಮನೆಯಲ್ಲಿ ಮಾಡುವ ನವರಾತ್ರಿಯ ಮಕ್ಕಳ ಕಾರ್ಯಕ್ರಮಗಳು ಇದರ ಮುಂದುವರೆದ ಭಾಗವಾಗಿರಬಹುದು.
ಹಾಗೇ ಗಣಪತಿಯ ಅಲಂಕಾರದ ವಿಷಯಕ್ಕೆ ಬಂದರೆ ಅಪ್ಪನ ಮನೆ, ಊರಲ್ಲಿ ಮಾಡಿದ ಒಂದೇ ಗಣಪತಿ ನೆನಪಿದೆ. ಆಗ ಚಿಕ್ಕಪ್ಪ ಮತ್ತು ದೊಡ್ಡಪ್ಪ ಜೊತೆಗೆ ಇದ್ದರು ಮತ್ತು ಚಿಕ್ಕಪ್ಪನಿಗೆ ಮದುವೆಯಾಗಿರಲಿಲ್ಲ. ಮನೆಯೂ ಒಡೆದಿರಲಿಲ್ಲ. ಆಗ ಬಣ್ಣ ಬಣ್ಣದ ಕಾಗದಗಳಲ್ಲಿ ಮಾಡಿದ್ದ ಅಲಂಕಾರ ನೆನಪಿದೆ. ಜಾಸ್ತಿ ಹಬ್ಬದ ಹಿಂದಿನ ದಿನ ಸಾಗರಕ್ಕೆ ಹೋಗುತ್ತಿರಲಿಲ್ಲವಾಗಿದ್ದಕ್ಕೆ, ಒಂದೇ ಹಬ್ಬ ನೆನಪಿರುವುದು ಸಹಜ ಅನ್ನಿಸುತ್ತದೆ. ಹಬ್ಬದ ಮಾರನೇ ದಿನ ಹೋಗುತ್ತಿದ್ದದ್ದು, ಅಲ್ಲಿಯ ಕೆರೆಯ ಕಟ್ಟೆಯಲ್ಲಿ ಎಲ್ಲರೂ ಸಾಲಾಗಿ ಕೆಂಪು ಗಣಪತಿ ನಿಲ್ಲಿಸುತ್ತಿದ್ದದ್ದು ನೆನಪಿದೆ.
ಅಲ್ಲಿಯ ಅಂದರೆ ಸಾಗರದ ಗಣಪತಿಗೆ ಮತ್ತು ಶಿರಸಿಯ ಗಣಪತಿಗೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ಬಣ್ಣ ಮತ್ತು ಆಕಾರದಲ್ಲಿ. ಇಲ್ಲಿ ಮುಂಬಯಿಗೆ ಬಂದ ಮೇಲೆ ಶಿರಸಿಯ ಗಣಪತಿಗೆ ಮತ್ತು ಇಲ್ಲಿ ಮಾಡುವ ಗಣಪತಿಯ ಮೂರ್ತಿಗಳಿಗೆ ಸಾಮ್ಯವಿದೆಯೆಂದು ಅನ್ನಿಸುವುದು. ಹೆಚ್ಚಾಗಿ ಇವೆರಡೂ ಮುಂಬಯಿ ಪ್ರಾಂತ್ಯವಾಗಿದ್ದಕ್ಕಾ, ಈ ಕೊಂಕಣ್ ಸೀಮೆ ನಮ್ಮವರೆಗೂ ಬಂದಿರಬಹುದು. ಅದೇ ಸಾಗರವು ಕೆಳದಿ, ಮೈಸೂರಿಗೆ ಸೇರಿದ್ದಕ್ಕೆ ಎರಡೂ ಊರಲ್ಲೂ ಇಷ್ಟು ವ್ಯತ್ಯಾಸ ಬೆಳೆದಿರಬಹುದು, ಗೊತ್ತಿಲ್ಲ.
ಆದರೆ ಶಿರಸಿಯ ಅಜ್ಜನ ಮನೆಯ ಗಣಪತಿಯ ವಿಜ್ರಂಭಣೆ ಅಲ್ಲಿ ಇರುತ್ತಿದ್ದಿಲ್ಲ. ಸಾಗರದ ಅಜ್ಜಿ ಮಾಡುತ್ತಿದ್ದ ಮೊದಕ ಅದೂ ಹಿಟ್ಟಿನ ಗಂಟು ಹಾಕಿ ಮತ್ತು ಬೇಯಿಸಿದ ಕಾಯಿ ಕಡುಬಿನ ರುಚಿ ಮಾತ್ರ ಈಗಲೂ ನೆನಪಿದೆ.
ಶಿರಸಿಯ ಅಜ್ಜನಮನೆಯಲ್ಲಿ ( ಮುಂಡಿಗೇಸರ) ದಿನಾ ಏಷ್ಟು ಜನ ಊಟಕ್ಕೆ ಆಗುತ್ತಿದ್ದರು. ಈಗ ದೊಡ್ಡವರಾದ ಮೇಲೆ ಆ ಅಜ್ಜ, ಆಮೇಲೆ ಮಾವ ಬರೀ ಅಡಿಕೆ ತೋಟದ ಕಮಾಯಿಯಲ್ಲಿ ಅಷ್ಟೆಲ್ಲಾ ಮಾಡತ್ತಿದ್ದದ್ದು ಈಗ ಗ್ರೇಟ್ ಅನ್ನಿಸುತ್ತದೆ. ಅಮ್ಮಮ್ಮ ಮತ್ತು ಅತ್ತೆ ಸಹ. ಬಂದ ಅಷ್ಟೂ ಜನಕ್ಕೆ ಊಟೋಪಚಾರದಿಂದ ಹಿಡಿದು, ಹಬ್ಬದ ಅಷ್ಟೂ ಬಗೆ ಬಗೆಯ ನೈವೇದ್ಯ ಗಳನ್ನು ಮಡಿ ಬಟ್ಟೆ ಯಲ್ಲಿ ಮಾಡುತ್ತಿದ್ದದ್ದು!
ಅಲ್ಲಿ ಎಲ್ಲರ ಮನೆಯಲ್ಲೂ ಡಬ್ಬಿಗಟ್ಟಲೇ ಚಕ್ಕಲಿ ಮತ್ತು ಹಬ್ಬದ ಹಿಂದಿನ ದಿನಗಳಲ್ಲಿ ಆಗುವ ಚಕ್ಕಲಿ ಕಂಬಳ. ಎಲ್ಲದಕ್ಕೂ ಮಿಗಿಲಾಗಿ ಮಜಾ ಅನ್ನಿಸುವುದು, ಅಲ್ಲಿ ಗಣಪತಿಯಲ್ಲಿ ಒಡೆ ಏನಕ್ಕೆ ಮಾಡುತ್ತಿದ್ದರು ಎಂದು. ಮೂಲತಃ ಶ್ರಾದ್ಧಕ್ಕೆ ಮಾಡುವ ತಿನಿಸೊಂದನ್ನು ಹಬ್ಬಕ್ಕೆ ಮಾಡುವುದು. ಇದೂ ಗೊತ್ತಿಲ್ಲ.
ಈ ಗಂಗೂ ಬಾಯಿ, ಭೀಮ್ ಸೇನ್ ಜೋಶಿ ಎಲ್ಲ ಜಾಸ್ತಿ ಕೇಳಿದ್ದೆ ಅಜ್ಜನ ಮನೆಯಲ್ಲಿರಬಹುದು. ಆಗ ಎಲ್ಲರಿಗೂ ಕ್ಯಾಸೆಟ್ ಕಲೆಹಾಕುವ ಹವ್ಯಾಸ. ಮನೆಯಲ್ಲಿ ಎಲ್ಲ ಸಂಗೀತಾಸಕ್ತರೂ ಹಾಗೂ ಅಭ್ಯಾಸ ಮಾಡಿದವರೂ ಇದ್ದಿದ್ದಕ್ಕೆ ಹೆಚ್ಚಾಗಿ ಕ್ಲಾಸಿಕಲ್ ಸಂಗೀತ ಗಣಪತಿಯ ನಾಲ್ಕು ದಿನ ಚಾಲೂ ಇರುತ್ತಿತ್ತು. ಆಮೇಲೆ ಅಣ್ಣನ ಜಮಾನೆಯಲ್ಲಿ ಅದೂ ಹಿಂದೀ ಚಿತ್ರಗೀತೆಗಳಿಗೆ ತಿರುಗಿತ್ತು.
ಹಬ್ಬದ ಕೊನೆಯ ದಿನ ಪಟಾಕಿಯ ಗೌಜು. ಅಂದಿಗೂ ಇಂದಿಗೂ ಪಟಾಕಿಯ ಅಲರ್ಜಿ ಯಿರುವ ನಾನೂ ಸಹ ಆ ತಿರುಗುವ ನೆಲಚಕ್ರ, ಹಾವು, ಹೂವು ಎಲ್ಲ ಆಸಕ್ತಿಯಿಂದ ನೋಡುತ್ತಿದ್ದೆ. ಎಲ್ಲ ಸಡಗರವೂ ನಿಲ್ಲುತ್ತಿದ್ದು ಮನೆಯ ಎದುರಿಗಿನ ಹೊಂಡದಲ್ಲಿ ಗಣಪತಿ, ಬಪ್ಪಾ ಮೊರೆಯಾ ಎಂಬ ಕೂಗಿನಲ್ಲಿ ಮರೆಯಾದಾಗ. ಈಗಲೂ ಸಂಭ್ರಮದ ಕೊನೆಯ ಸಾಲಿಗೆ ಎದೆ ಕಟ್ಟಿ, ಕಣ್ಣಂಚು ಒದ್ದೆಯಾಗುತ್ತದೆ. ಹಮ್.
ಹಾಗಂತ ಎಲ್ಲವಯ ಮುಗಿಯತ್ತಿರಲಿಲ್ಲ. ಶಿರಸಿಯ ಪೇಟೆ ಗಣಪತಿ ನೋಡುವ ಸಂಭ್ರಮ ಶುರುವಾಗುತ್ತಿತ್ತು. ದೇವಿಕೆರೆಯ ಚಡ್ಡಿ ಗಣಪತಿ, ಅದರ ಹಿಂದಿನ ಶಬರಿ ಮಲೈ ಗಣಪತಿ, ಜ್ಯೂ ಸರ್ಕಲ್ ಗಣಪತಿ, ಕೆಇಬಿ ಗಣಪತಿ, ಬಸ್ ಸ್ಟ್ಯಾಂಡ್ ಗಣಪತಿ, ನಟರಾಜ ಗಲ್ಲಿ ಗಣಪತಿಗಳು, ರಾಯರ ಪೇಟೆ ಗಣಪತಿ, ನೀಲೆಕಣಿ ಗಣಪತಿ,… ಕೊನೆಯ ದಿನದಲ್ಲಿ ಮೆರವಣಿಗೆಯ ಜೊತೆ ಸಾಗುವ ದೊಡ್ಡ ದೊಡ್ಡ ಗಣಪತಿಗಳು. ಮುಂಬಯಿಗೆ ಬಂದ ಮೇಲೆ ದೊಡ್ಡ ಗಣಪತಿ ಹೇಗಿರುತ್ತದೆ ಎಂದು ಗೊತ್ತಾದರೂ, ಬಾಲ್ಯ ಮತ್ತು ಯೌವನದಲ್ಲಿ ಶಿರಸಿಯದ್ದೇ ದೊಡ್ಡ ಗಣಪತಿಯಾಗಿತ್ತು. ಅಲ್ಲಿ ಇಲ್ಲಿಯ ತರಹ ಎಲ್ಲ ಸೇರಿ ಕುಣಿಯುತ್ತಿರಲಿಲ್ಲ. ಅದೂ ಹೆಂಗಸರೂ ರಸ್ತೆಯಲ್ಲಿ ಮನಸ್ಸು ಬಿಚ್ಚಿ ಕುಣಿಯುವುದು ಇನ್ನೂ ನಾನು ಅರಗಿಸಿಕೊಂಡಿಲ್ಲ. ಅಲ್ಲಿ ಮುಖ್ಯ ರಸ್ತೆಯಾದ ಸಿ.ಪಿ. ಬಝಾರಿನಲ್ಲೇ ಜಾಸ್ತಿ ಕಾಲ ಮನೆ ಇದ್ದಿದ್ದಕ್ಕಾಗಿ ಎಲ್ಲ ಗಣಪತಿಗಳ ಪ್ರೊಸೆಷನ್ ನೋಡಲು ಸಿಗುತ್ತಿತ್ತು. ಅನೇಕ ಜಾನಪದ ತಂಡದವರನ್ನು ಪರಿಚಯಿಸಿದ್ದು ಸಹ ಇದೇ ಗಣಪತಿಯೇ.
ಈಗ ಇವೆಲ್ಲ ನೋಡದೇ ವರ್ಷಗಳಾಗಿವೆ. ಅಜ್ಜನಮನೆಯಲ್ಲಿ ಮೊದಲಿದ್ದ ಸಂಭ್ರಮ ಈಗಿಲ್ಲ. ಮದುವೆಯಾಗಿ ಹನ್ನೆರಡು ವರ್ಷ ಗಳಲ್ಲಿ ಒಂದೊ ಎರಡೊ ಬಾರಿಯೇ ಶಿರಸಿಗೆ ಹೋಗಿದ್ದೇನೊ. ಈ ನವರಾತ್ರಿಯ ಕಾಲಕ್ಕೆ ಎಲ್ಲವೂ ನಿಂತು ಹೋಯಿತು. ಇವನ ಮನೆಯಲ್ಲಿ ವರ್ಷ ಕ್ಕೊಂದೇ ದೊಡ್ಡ ಹಬ್ಬ, ಅದೂ ನವರಾತ್ರಿ. ಗಣಪತಿಯ ಬೆನ್ನಿಗೆ ಅದೂ ಬರುವುದರಿಂದ ಗಣಪತಿಗೆ ರಜೆ ಹಾಕಿ ಮತ್ತೆ ನವರಾತ್ರಿ ಗೆ ಹದಿನೈದು ದಿನ ರಜೆ ಹಾಕುವುದು ಸಾಧ್ಯವಿರಲಿಲ್ಲ. ಜೊತೆಗೆ ಇವನ ಮನೆಯಲ್ಲಿ ಮುಖ್ಯ ದೇವರು ಗಣಪತಿ ಯಾಗಿದ್ದರಿಂದ ನಾನು ಗಣಪತಿಗೆ ನನ್ನ ಮನೆಗೆ, ಅಜ್ಜನ ಮನೆಗೆ ಹೋಗುವುದು ಇವನಿಗೆ ಸರಿ ಕಾಣುತ್ತಿರಲಿಲ್ಲ. ಆಮೇಲೆ ಗಣಪತಿಯ ರಜೆಯಲ್ಲಿ ಊರೂರು ತಿರುಗುವುದಕ್ಕೆ ಶುರುವಾಗಿ, ಒಂದು ಸಲ ಬಾದಾಮಿ , ಇನ್ನೊದು ಸಲ ಬಿಜಾಪುರ, ಮಗದೊಂದು ಸಲ ಹರಿದ್ವಾರ ಅಂತೆಲ್ಲ ಆಗಿ ಇಲ್ಲಿನ ಮುಂಬಯಿ ಮನೆಯಲ್ಲಿ ಗಣಪತಿ ಆಚರಿಸಿದ್ದು ಕಡಿಮೆಯೆ.
ಹೋಗಲಿ, ಈ ಸಲನೂ ಎಲ್ಲೂ ಹೋಗುತ್ತಿಲ್ಲ. ಹೊಸ ಊರು ಅಲೆಯಲು ಹೋಗಬಹುದು. ಮಗಳು ಗೋತಮಿಗೆ ದೇವರೆಂದರೆ ಗೊತ್ತಿಲ್ಲ. ದೊಡ್ಡವಳಾಗುತ್ತ ಇವಳು ಈ ದೇವರನ್ನು ( ಮೂರ್ತಿ ಪೂಜೆ) ಹೇಗೆ ಸ್ವೀಕರಿಸುತ್ತಾಳೆ ಎಂಬ ಕುತೂಹಲ ನನಗಿದೆ. ಮನೆಯಲ್ಲಿ ನಿತ್ಯ ಪೂಜಾ ಕ್ರಮ ನಾನು ಮಾಡುವುದಿಲ್ಲ. ಇವನು ತನ್ನ ನಿತ್ಯ ಕರ್ಮ ಮಾಡುತ್ತಾನೆ. ಹಿಂದಿನ ಸಲ ಭೂತ ಕೋಲದ ಪರಿಣಾಮದಿಂದ ಗಣಪತಿಯಲ್ಲಿ ಗೋತಮಿಗೆ ಭೂತ ಕಾಣುತ್ತಿತ್ತು. ಈ ಸಲ ನೋಡಬೇಕು.