ಯಾರಾದರೂ ಇನ್ನು ಮುಂದೆ ಫೆಮನಿಸಂ ಅಂದ್ರೆ ಏನೂ ಅಂತ ಕೇಳಿದ್ರೆ ಫೈರ್ ಸಿನೆಮಾ ನೋಡಿ ಅನ್ನುತ್ತೇನೆ. ಈ ಸಿನೆಮಾದ ನಿರ್ದೇಶಕಿ ದೀಪಾ ಮೆಹ್ತಾ ಅಪ್ಪಟ ಫೆಮಿನಿಸ್ಟ. ಫೈರ್ ಹೊರನೋಟಕ್ಕೆ ಸಲಿಂಗ ಕಾಮಿಗಳ ಕತೆಯಂತೆ ತೊರುತ್ತದೆ. ನಿಜಕ್ಕೂ ಅದು ನಮ್ಮ ಪುರಾಣದ ಸೀತೆಯಂತಹ ಮತ್ತು ರಾಧೆಯಂತವರ ಕತೆ. ಧರ್ಮ, ಕಟ್ಟು ಪಾಡು, ರೀತಿ ನೀತಿಗಳು, ಪುರುಷ ಸಮಾಜ ಇವುಗಳೆಲ್ಲದರ ತತ್ವವನ್ನೇ ಪ್ರಶ್ನಿಸುವ ಇಬ್ಬರು ಹೆಣ್ಮಕ್ಕಳ ಕತೆ. ಪ್ರತಿಯೊಬ್ಬರಲ್ಲಿ ಅಡಗಿರುವ ಬೆಂಕಿಯ ಕತೆ.
ಇಲ್ಲಿನ ಅಜ್ಜಿಯೂ ನಮ್ಮ ಸನಾತನ ನಂಬಿಕೆ, ಮೌಲ್ಯಗಳಂತೆ ಜಡ್ಡು ಗಟ್ಟಿದ್ದಾಳೆ. ಮಾತೂ ಬಿದ್ದು ಹೋಗಿದೆ. ಏನಿದ್ದರೂ ಕೈಯಲ್ಲಿರುವ ಚಿಕ್ಕ ಗಂಟೆಯನ್ನು ಅಲುಗಾಡಿಸಿ ತನ್ನ ಭಾವಗಳನ್ನು ವ್ಯಕ್ತಪಡಿಸುತ್ತಾಳೆ. ಆಕೆಯ ಮಕ್ಕಳಾದ ಬಿಜಿಯ ಗಂಡ ಅಶೋಕ ಮತ್ತು ಸೀತಾಳ ಗಂಡ ಜತೀನ್ ಪುರುಷ ಸಮಾಜದ ಪ್ರತೀಕಗಳು. ಕತೆಯ ವಿಲನ್ ಮುಂಡು ಎನ್ನುವ ಮನೆಕೆಲಸದವ.
ರಾಧಾಳ ಗಂಡ ಅಶೋಕ ತನ್ನ ಹೆಂಡತಿ ಬಂಜೆಯೆಂದು ತಿಳಿದ ದಿನದಿಂದ ಮನಸ್ಸನ್ನು ಸನ್ಯಾಸದತ್ತ ಹೊರಳಿಸುತ್ತಾನೆ. ತನ್ನ ಕಾಮನೆಗಳನ್ನು ನಿಯಂತ್ರಿಸಿ ಸತ್ಯದ ಅರಿವು ಪಡೆಯಲು ಹೊರಡುತ್ತಾನೆ. ಬ್ರಹ್ಮಚರ್ಯ ಪಾಲಿಸುವ ಆತನಿಗೆ ತನ್ನ ಇಂದ್ರೀಯ ನಿಗ್ರಹ ಪರೀಕ್ಷಿಸಲು ರಾಧಾಳ ಸಹಾಯ ಬೇಕು. ಒಮ್ಮೆ ರಾಧಾ ಆತನಲ್ಲಿ ಕೇಳುತ್ತಾಳೆ, ನಿನಗೆ ಇದರಿಂದ ಸತ್ಯದ ದರ್ಶನವಾಗುತ್ತದೆ, ಆದರೆ ನನಗೆ ಏನು ಸಿಗುತ್ತದೆ ಎಂದು. ಅದಕ್ಕೆ ಅಶೋಕ ನೀನು ನನ್ನ ಪತ್ನಿಯಾಗಿ ನಿನ್ನ ಕರ್ತವ್ಯ ಮಾಡುತ್ತಿದ್ದಿಯಾ. ಅಷ್ಟೆ ಎಂದು ಬಿಡುತ್ತಾನೆ. ಗಂಡನಿಗೆ ಒಳಿತಾದರೆ ಹೆಂಡತಿಗೂ ಒಳಿತು ಎಂಬ ಸನಾತನ ನಂಬಿಕೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಾನೆ. ಹೀಗೆ ತನ್ನ ಕಾಮನೆಗಳನ್ನು ಸುಡಲು ಯತ್ನಿಸುತ್ತ, ವಯಸ್ಸಾದ ಅತ್ತೆಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತ ಇರುತ್ತಾಳೆ. ನನ್ನ ಲೆಕ್ಕದಲ್ಲಿ ಇದು ಆಕೆ ಗಂಡನ ತಾಯಿ ಅಂದರೆ ಸನಾತನ ಮೌಲ್ಯಗಳನ್ನು ಒಪ್ಪಿಕೊಳ್ಳುತ್ತಿರುವುದಾಗಿದೆ. ಹೀಗೆ ಸಾಗುತ್ತಿದ್ದ ಆಕೆಯ ಬದುಕಲ್ಲಿ ಆಕೆಯ ಮೈದುನನ ನವ ವಧು ಸೀತಾಳ ಪ್ರವೇಶವಾಗುತ್ತದೆ.
ಸೀತಾ ಕ್ರಾಂತಿಕಾರಿ ಮನೋಭಾವದವಳು. ಜರಿ ಸೀರೆ ಬೀಸಾಕಿ ಗಂಡನ ಪ್ಯಾಂಟ್ ಧರಿಸಿ ಹಾಡು ಹಾಕಿ ಕನ್ನಡಿಯ ಎದುರಿಗೆ ನರ್ತಿಸುವಳು. ತನ್ನ ಸಲುವಾಗಿ ಬದುಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಂಬಿರುವಳು. ಎಲ್ಲ ಕಟ್ಟುಪಾಡುಗಳು, ಆಚರಣೆಗಳು ಹೆಣ್ಣಿಗೆ ಮಾತ್ರ ಏಕೆ ಎಂದು ಪ್ರಶ್ನಿಸುವಳು. ಆಕೆಯ ಗಂಡ ಜತೀನನಿಗೆ ಇದು ಒತ್ತಾಯದ ಮದುವೆ. ಆತ ತನ್ನ ಪ್ರೇಯಸಿ ಚೀನಿ ಹುಡುಗಿಯ ಜೊತೆಗಿರುತ್ತಾನೆ. ಈ ಸತ್ಯವನ್ನು ಸೀತಾ ಬಹುಬೇಗ ಜೀರ್ಣಿಸಿಕೊಂಡು ಬಿಡುತ್ತಾಳೆ. ಮೊದಲು ಹೆಂಡತಿಯನ್ನು ಮುಟ್ಟದ ಜತೀನ ನಂತರ ಅಣ್ಣ ಅಶೋಕನ ಮಾತಿನ ಮೇರೆಗೆ ಸೀತಾಳನ್ನು ಒಪ್ಪುತ್ತಾನೆ. ಆದರೆ ಸೀತಾಳನ್ನು ದೈಹಿಕವಾಗಿ, ಮಾನಸಿಕವಾಗಿ ತೃಪ್ತಿ ಪಡಿಸುವ ಗೊಡೆಗೆ ಹೋಗದೆ ಆಕೆಗೆ ಮಗು ಮಾಡಿಕೊಡುವುದಷ್ಟೆ ಗಂಡನಾದ ತನ್ನ ಕರ್ತವ್ಯ ಎಂದು ತಿಳಿದಿರುತ್ತಾನೆ. ಅದು ತಾನು ಆಕೆಗೆ ಮಾಡುತ್ತಿರುವ ಉಪಕಾರ ಎಂದುಕೊಂಡಿರುತ್ತಾನೆ.
ಪ್ರತಿ ರಾತ್ರಿ ಅಶೋಕ ಸ್ವಾಮಿಜಿಯಲ್ಲಿ ತೆರಳಿದರೆ ಜತೀನ ತನ್ನ ಪ್ರೇಯಸಿಯ ಬಳಿ. ಮನೆಯಲ್ಲಿ ಉಳಿಯುವ ಈ ಇಬ್ಬರೂ ಒಂಟಿ ಜೀವಿಗಳು ತಮ್ಮ ಸಹಜವಾದ ದೈಹಿಕ ಬಯಕೆಗಳಿಂದ ಪಾರಾಗಲು ಒಬ್ಬರನ್ನೊಬ್ಬರು ಆಶ್ರಯಿಸತೊಡಗುತ್ತಾರೆ. ಮಾನಸಿಕವಾಗಿ, ದೈಹಿಕವಾಗಿ ಹತ್ತಿರವಾಗುತ್ತ ಸಾಗುತ್ತಾರೆ. ಇಬ್ಬರಿಗೂ ತಾವು ಮಾಡುತ್ತಿರುವುದು ತಪ್ಪೆನಿಸುವುದಿಲ್ಲ. ಅತ್ತ ರಾಧಾ ಅಶೋಕನ ಸಂಯಮ ಪರೀಕ್ಷೆಯಲ್ಲಿ ಭಾಗಿಯಾಗುವುದನ್ನು ನಿಲ್ಲಿಸುತ್ತಾಳೆ. ಅತ್ತೆಗೆ ತಿಂಡಿ ತಿನ್ನಿಸುವುದನ್ನು ಅಶೋಕನಿಗೆ ಒಪ್ಪಿಸುತ್ತಾಳೆ. ಇತ್ತ ಸೀತೆ ಜತೀನನ ಉಪಕಾರವನ್ನು ಬೇಡವೆನ್ನುತ್ತಾಳೆ. ಗಂಡಂದಿರಿಗೆ ಇವರಿಬ್ಬರ ಸಂಬಂಧ ಅರಿವಾಗದಿದ್ದರೂ ಆ ಮನೆಯಲ್ಲಿ ಇಬ್ಬರು ಮೂಕ ಸಾಕ್ಷಿಗಳು; ಮಾತು ಬರದ ಅಜ್ಜಿ ಮತ್ತು ಈ ಬಗ್ಗೆ ಮಾತಾಡಲಾರದ ಇಕ್ಕಟ್ಟಿಗೆ ಸಿಲುಕಿರುವ ಮುಂಡು.
ಮನೆಗೆ ಕೆಳಗೆ ಇವರ ಹೋಟೆಲ್ ಇರುತ್ತದೆ. ಸೀತಾ, ರಾಧಾ, ಮುಂಡು ಸೇರಿ ಅಡುಗೆ ಮಾಡಿದರೆ, ಅಶೋಕಂದು ಕ್ಯಾಶಿಯರ್ + ಸಪ್ಲೆಯರ್ ಕೆಲಸ. ಅದಕ್ಕೆ ತಾಗಿ ಜತಿನನ ಸಿಡಿ ಲೈಬ್ರರಿ ಇರುತ್ತದೆ. ಜತಿನ ಪೊರ್ನ್ ವಿಡಿಯೊಗಳನ್ನು ಮನೆಯವರಿಗೆ ಗೊತ್ತಾಗದಂತೆ ಸಪ್ಲೆಯ್ ಮಾಡುತ್ತಿರುತ್ತಾನೆ. ಅಜ್ಜಿಗೆ ರಾಮಾಯಣ ನೋಡಲು ಇಷ್ಟ. ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿಗೆ ರಾಮಾಯಣ ತೋರಿಸುವ ನೆಪದಲ್ಲಿ ಮುಂಡು ಪೋರ್ನ್ ವಿಡಿಯೊ ನೋಡುತ್ತಾನೆ. ಅಜ್ಜಿಗೆ ಮಾತು ಬರದಿದ್ದರಿಂದ ಆಕೆ ಅಸಾಹಯಕಳಾಗಿ ಅವನ ಆಟಗಳನ್ನು ನೋಡುತ್ತಾಳೆ. ಒಂದು ದಿನ ಮುಂಡು ರಾಧಾಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಗುತ್ತಾನೆ. ಸಿಟ್ಟಿನಲ್ಲಿ ಆತನ ಕೆನ್ನೆಗೆ ಹೊಡೆಯುತ್ತಾಳೆ. ಆಗ ಆತ ಕೇಳುತ್ತಾನೆ, ಇಡೀ ದಿನ ಕೆಲಸ ಮಾಡುವ ನಾನು ಈ ಸಣ್ಣ ಖುಷಿ ಪಟ್ಟರೆ ತಪ್ಪು ಅನ್ನುತ್ತೀರಾ, ಆದರೆ ನೀವಿಬ್ಬರೂ ನಡೆಸುತ್ತಿರುವುದು ಸರಿಯಾ ಎಂದು. ರಾಧಾ ದಂಗಾಗುತ್ತಾಳೆ. ನೈತಿಕ/ಅನೈತಿಕತೆಯ ಪ್ರಶ್ನೆ ಇದು. ಈ ಸಮಾಜದಲ್ಲಿ ಕೇವಲ ಸ್ವಂತದ ಬಗ್ಗೆ ಯೋಚಿಸುವುದು ಹೇಗೆ ತಪ್ಪಾಗಿಬಿಡುತ್ತದೆ ಎಂದು ಕೊರಗುತ್ತಾಳೆ. ಎಲ್ಲರಿಗೂ ವಿಷಯ ಗೊತ್ತಾಗಿ ಕೊನೆಯಲ್ಲಿ ಅಶೋಕ ತಪ್ಪು ಒಪ್ಪಿಕೊಂಡವರನ್ನು ಮುನ್ನಿಸಬೇಕೆಂದು ಧರ್ಮದಲ್ಲಿ ಹೇಳಿದೆ ಎಂದು ಆತನನ್ನು ಕ್ಷಮಿಸಿ ಬಿಡುತ್ತಾನೆ.
ಮುಂಡುಗೆ ರಾಧಾಳ ಮೇಲೆ ಆಸೆಯಿರುವುದರಿಂದ ಆತನಿಗೆ ಸೀತಾ ಮತ್ತು ರಾಧಾಳ ನಡುವಿನ ಬೆಳೆಯುತ್ತಿರುವ ಸಂಬಂಧ ಇಷ್ಟವಾಗುವುದಿಲ್ಲ. ಒಂದು ದಿನ ತಡೆಯಲಾಗದೆ ಆಶ್ರಮದಲ್ಲಿದ್ದ ಅಶೋಕನ ಬಳಿ ಹೋಗಿ ಸತ್ಯ ಹೇಳಿಬಿಡುತ್ತಾನೆ. ಮೊದಲು ನಂಬದ ಅಶೋಕ ಮನೆಗೆ ತೆರಳಿ ತನ್ನ ಕಣ್ಣಿನಿಂದಲೇ ನೋಡಿ ಶಾಕ್ ಆಗುತ್ತಾನೆ. ಮನೆಯಿಂದ ಹೊರ ಬಂದು ಬೀದಿಯಲ್ಲಿ ಕುಕ್ಕರಿಸುತ್ತಾನೆ. ಪದೇ ಪದೇ ತಾನು ಕಂಡದ್ದು ನೆನಪಾಗಿ ಮೈ ಬಿಸಿಯಾಗುತ್ತದೆ, ತನ್ನ ಸಂಯಮ ಮೀರುತ್ತಿರುವುದು ಅರಿತು ಬಿಕ್ಕುತ್ತಾನೆ. ಇತ್ತ ಸತ್ಯ ಬಯಲಾಗುತ್ತಿದ್ದಂತೆ ಸೀತಾ ಮತ್ತು ರಾಧಾ ಮೊದಲು ನಿಶ್ಚಯ ಮಾಡಿಕೊಂಡಂತೆ ಮನೆಯಿಂದ ಹೊರ ಬೀಳಲು ತೀರ್ಮಾನಿಸುತ್ತಾರೆ. ರಾಧಾ ತಾನು ಅಶೋಕನ ಬಳಿ ಹೇಳಿ ಬರುತ್ತೇನೆ ಎಂದು ಸೀತೆಯನ್ನು ಮುಂದೆ ಕಳಿಸುತ್ತಾಳೆ. ವಾಪಸ್ಸು ಬಂದ ಅಶೋಕ ರಾಧಾಳ ಬಳಿ ಕೋಣೆಗೆ ಬರ ಹೇಳುತ್ತಾನೆ. ಮತ್ತೊಮ್ಮೆ ಪರೀಕ್ಷೆಗೆ ಸಹಾಯ ಬೇಕೆನ್ನುತ್ತಾನೆ. ರಾಧಾ ಬರುವುದಿಲ್ಲ. ತಾನು ಹೋಗುತ್ತಿರುವುದಾಗಿ ತಿಳಿಸುತ್ತಾಳೆ. ಅಶೋಕ ಆಕೆ ಮಾಡಿದ್ದು ಪಾಪ. ಇದರಿಂದ ಹೊರಬರಲು ಸ್ವಾಮೀಜಿಯ ಬಳಿ ಹೋಗೋಣ ಎನ್ನುತ್ತಾನೆ. ಕಾಮನೆಗಳು ತಪ್ಪು ದಾರಿಗೆ ಏಳೆಯುತ್ತವೆ ಎಂದು ತಿಳಿ ಹೇಳುತ್ತಾನೆ. ಅವನ ಮಾತು ಒಪ್ಪದ ರಾಧೆ ಕಾಮನೆಗಳೇ ಇಲ್ಲದೆ ತಾನು ಮೊದಲು ಸತ್ತು ಹೋಗಿದ್ದೆ. ಈಗ ಸೀತೆ ತನ್ನಲ್ಲಿ ಅವುಗಳನ್ನು ಹುಟ್ಟಿಸಿದ್ದಾಳೆ. ಕಾಮನೆಗಳನ್ನು ಹೊಸಕಿ ಬದುಕುವುದನ್ನೇ ಜೀವನ ಎಂದು ತಿಳಿದಿದ್ದರೆ ನೀನೆ ಸ್ವಾಮಿಜಿಯ ಸಹಾಯ ತೆಗೆದುಕೊ, ತನಗೆ ಬೇಡ ಅನ್ನುತ್ತಾಳೆ. ಕೋಪದಲ್ಲಿ ಸಂಯಮ ಕಳೆದುಕೊಂಡ ಅಶೋಕ ಆಕೆಗೆ ಮುತ್ತಿಕ್ಕುತ್ತಾನೆ. ಇದೇ ಅಲ್ಲವೇ ನಿನಗೆ ಬೇಕಿದ್ದು ಎನ್ನುತ್ತಾನೆ. ತಕ್ಷಣ ಆದ ಘಟನೆ ನೆನಪಿಗೆ ಬಂದು ಏಂತಹ ಹೆಣ್ಣಾಗಿದ್ದಿಯಾ ನೀನು, ತಪ್ಪು ಮಾಡಿದ್ದಿಯಾ, ನನ್ನ ಕಾಲು ಹಿಡಿದು ಕ್ಷಮಾಪಣೆ ಕೇಳು ಎಂದು ಕೂಗುತ್ತಾನೆ. ಮೊದಲ ಬಾರಿ ಮಾತು ಕೇಳದ ಹೆಂಡತಿಯ ಮೇಲೆ ಅಸಹನೆ, ಅಸಮಾಧಾನ. ರಾಧಾ ನಿರುತ್ತಳಾಗಿರುತ್ತಾಳೆ. ಅದೇ ಹೊತ್ತಿಗೆ ಸೆರಗು ಗ್ಯಾಸಿನ ಮೇಲೆ ಬಿದ್ದು ಬೆಂಕಿ ಹತ್ತಿಕೊಳ್ಳುತ್ತದೆ.
ಈ ಸಿನೆಮಾದಲ್ಲಿ ಬೆಂಕಿಯನ್ನು ಪ್ರತಿಮೆಯಂತೆ ಬಳಸಿಕೊಳ್ಳಲಾಗಿದೆ. ಕತೆಯಲ್ಲಿ ರಾಮಾಯಣ ಮಧ್ಯ ಮಧ್ಯ ಬರುತ್ತದೆ. ಒಂದು ಸನ್ನಿವೇಶ ಹೀಗಿದೆ. ಅಶೋಕನ ಸ್ವಾಮಿಜಿಯ ಆಶ್ರಮದಲ್ಲಿ ರಾಮಾಯಣ ನಾಟಕ ನಡೆದಿರುತ್ತದೆ. ಸೀತೆಯ ಅಗ್ನಿಪರೀಕ್ಷೆಯ ಪ್ರಸಂಗ. ಪುಟ್ಟ ಮಗು ಹಿಡಿದ ಹೆಂಗಸಿನ ಕಣ್ಣಲ್ಲೂ ನೀರು. ಅಶೋಕನ ಕಣ್ಣಲ್ಲಿ, ಎಲ್ಲರ ಕಣ್ಣಲ್ಲೂ ನೀರು. ಅಗ್ನಿಪರೀಕ್ಷೆಯನ್ನು ಗೆದ್ದು ಬಂದ ಸೀತೆಯಲ್ಲಿ ರಾಮ, ನೀನು ಶುದ್ಧಳಿರುವುದು ನನಗೆ ತಿಳಿದಿದೆ. ಆದರೂ ಸಹ ನಾನು ನಿನ್ನನ್ನು ಕಾಡಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಾನೆ. ಸೀತೆ ವಿಷಾದದಿಂದ ಲಕ್ಷ್ಮಣನ ಜೊತೆ ಕಾಡಿಗೆ ತೆರಳುತ್ತಾಳೆ. ಆಗ ಅಲ್ಲಿದ್ದ ಸ್ವಾಮೀಜಿ “ಪಾಪ ರಾಮ” ಅನ್ನುತ್ತಾನೆ! ಚಿತ್ರದ ಕ್ಲೈಮಾಕ್ಸನಲ್ಲಿ ರಾಧಾ ಸಹ ಅಗ್ನಿ ಪರೀಕ್ಷೆ ಕೊಡುತ್ತಾಳೆ.
ಇಡೀ ಸೀರೆಗೆ ಬೆಂಕಿ ಹಬ್ಬಲಾರಂಬಿಸುತ್ತದೆ. ಆಕೆ ಆರಿಸುವ ಪ್ರಯತ್ನ ಮಾಡುತ್ತಾಳೆ. ಎದುರಿಗೆ ಇದ್ದ ಅಶೋಕ ಆಕೆಗೆ ಸಹಾಯ ಮಾಡದೆ ಕೆಳಗೆ ಬಿದ್ದ ತನ್ನ ತಾಯಿಯನ್ನು ಹೊತ್ತು ತೆರಳುತ್ತಾನೆ. ನನ್ನ ಲೆಕ್ಕದಲ್ಲಿ ತನ್ನ ಸನಾತನ ನಂಬಿಕೆಗಳನ್ನು ಎತ್ತಿ ಅದನ್ನು ಒಪ್ಪದ ರಾಧಾಳನ್ನು ಬೆಂಕಿಯಲ್ಲಿ ಸಾಯಲು ಬಿಟ್ಟು ಹೋಗುವುದು. ಆಗ ರಾಧಾ ಆತನನ್ನು ನೋಡುವ ಭಾವ ನೋಡಬೇಕು. ಕೊನೆಯಲ್ಲಿ ರಾಧಾ ಸಹ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ತನಗಾಗಿ ದರ್ಗಾದ ಹತ್ತಿರ ಕಾಯುತ್ತಿದ್ದ ಸೀತಾಳ ಬಳಿಗೆ ಬರುತ್ತಾಳೆ. ಅವರಿಬ್ಬರೂ ಒಬ್ಬರನ್ನೊಬ್ಬರನ್ನು ಸಂತೈಸಿಕೊಳ್ಳುವ ದೃಶ್ಯದೊಂದಿಗೆ ಚಿತ್ರ ಮುಗಿಯುತ್ತದೆ.
ನಾನು ಎಲ್ಲ ಹಿಂದಿ ಮೂವಿಯ ತರಹ ಕೊನೆಯಲ್ಲಿ ಸೀತಾ-ಜತೀನ್, ಅಶೋಕ-ರಾಧಾ ಒಂದಾಗಿ ಬಿಡುತ್ತಾರೆನೋ ಅಂತ ಕುತೂಹಲದಿಂದ ಕೂತಿದ್ದೆ. ಬಚಾವ್, ಹಾಂಗಾಗಲಿಲ್ಲ. ಇದು ದೀಪಾ ಮೆಹ್ತಾ ಮೂವಿ ಅಂತ ನೆನಪಿಗೆ ಬಂತು.
ಮೆಹ್ತಾಳ ವಾಟರ್ ನನಗೆ ಅಷ್ಟು ಹಿಡಿಸಿರಲಿಲ್ಲ. ಅದರಲ್ಲಿನ ಜಾನ್ ಅಬ್ರಹಾಂ ಮತ್ತು ಲಿಸಾ ರೈಯ ನಟನೆಗಳಿಂದ. ಫೈರ್ ನಲ್ಲಿ ಇರುವುದು ಕಾಡಿಗೆ ಕಣ್ಣಿನ ಶಬಾನ ಆಜ್ಮಿ ಮತ್ತು ನಂದಿತಾ ದಾಸ್. ಆ ಕಾರಣಕ್ಕೆ ಸಿನೆಮಾ ವೀಕ್ಷಕನಿಗೆ ಹೊಸ ಆಯಾಮಗಳನ್ನು ಕೊಡುತ್ತ ಹೋಗುತ್ತದೆ.
( ಸಿನೆಮಾದಲ್ಲಿ ಸೀತೆಯ ಹೆಸರನ್ನು ಸೆನ್ಸಾರ್ ಬೋರ್ಡ ಆದೇಶದಂತೆ ನೀತಾ ಎಂದು ತಿದ್ದಲಾಗಿದೆ)