Archive for the ‘ರಮ್ಯ /Fantasy’ Category

ಪರಾವೃತ್ತ (ಅಭಿಸಾರಿಕೆಯ ಕತೆಗಳು-8)

ಜುಲೈ 13, 2013

ಅಭಿಸಾರಿಕೆ ಇತ್ತೀಚಿಗೆ ನನ್ನ ಬಳಿ ಮಾತನಾಡುತ್ತಿಲ್ಲ. ತನ್ನದೇ ಧ್ಯಾನದಲ್ಲಿರುತ್ತಾಳೆ. ಯಾವಾಗಲಾದರೂ ಬರುತ್ತಾಳೆ, ಯಾವಾಗಲೋ ಹೊರಡುತ್ತಾಳೆ. ಆಕೆಯಾಗಿಯೇ ನನ್ನ ಬಳಿ ಹೇಳದ ಹೊರತು ನಾನೆಂದೂ ಏನೆಂದು ಆಕೆಯನ್ನು ಕಾಡಿದವನಲ್ಲ. ಆಕೆ ಪಡಸಾಲೆಯ ಕಂಬಕ್ಕೆ ಒರಗಿ ನಿಂತು ಆಗಸವನ್ನು ದಿಟ್ಟಿಸುತ್ತಾ ಕೂತಿದ್ದರೆ, ಆಕೆಯ ಆ ಮೌನಭಾವದಲ್ಲೂ ಅರ್ಧ ಕತೆಗಳು ಚಿಮ್ಮಿ ಚೆಲ್ಲಿ ತಣ್ಣಗಾಗುತ್ತವೆ.

ಅವರಿಬ್ಬರಲ್ಲಿ ಮಾತಾಗಿತ್ತು. ಪ್ರತಿ ಹುಣ್ಣಿಮೆಯ ದಿನ ಗುಡ್ಡದ ತುದಿಯ ಮರದ ಕೆಳಗೆ ಮಿಲನವೆಂದು. ಅಲ್ಲಿ ಇಬ್ಬರು ಮಾಡುತ್ತಿದ್ದಿದ್ದೆನಿಲ್ಲ, ಮುತ್ತುಗಳು, ಮುತ್ತುಗಳು, ಮುತ್ತುಗಳು. ರಾತ್ರಿ ಚೆಲ್ಲಿದ ಅವೆಲ್ಲ ಬೆಳಗಿನ ಸೂರ್ಯಕಿರಣ ತಾಗಿ ಇಬ್ಬನಿಯ ಹನಿಗಳಾಗಿ ಮಾರ್ಪಾಡಗುತ್ತಿದ್ದವು. ತದನಂತರ ಇಬ್ಬರೂ  ಒಬ್ಬರನ್ನೊಬ್ಬರನ್ನು ಆಗಲಿ ಮತ್ತೆ ಸೇರಲೆಂದೇ ತಂ ತಂ ಜಾಗಗಳಿಗೆ ಮರಳುತ್ತಿದ್ದರು. ಅವರಿಬ್ಬರ ಮೊಗದ ಹೊಳಪಿನಿಂದ ಸೂರ್ಯನ ಬೆಳಕು ಇನ್ನೂ ಶುಭ್ರವಾಗಿ ಎಲ್ಲವನ್ನೂ ಹೊಳೆಯುಸುತ್ತಿತ್ತು.

ಒಂದು ಪೂರ್ಣ ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರಗಳನ್ನು ಏಣಿಸತೊಡಗಿದವನಿಗೆ ತಾನೇನೊ ಸಾಧಿಸಬೇಕೆಂದು ಅನ್ನಿಸಿತು. ಯಶಸ್ಸು, ಕೀರ್ತಿ, ಸಂಪತ್ತು ಹೀಗೆ ಏನೇನೋ ಹಲುಬಿದ. ತಂಪು ಚಂದ್ರನಲ್ಲಿ ಕಳೆದು ಹೋಗಿದ್ದ ಅವಳು ಅವನ ಮಾತಿನ ಲಯಕ್ಕೆ ತಾಳ ಹಾಕುತ್ತಾ ಹೊರಬಂದಳು. ಅಹುದು, ಜ಼ೀವನ ಅಂದರೆ ಇದೇನೆ ಅಂದುಕೊಂಡಳು. ಆಮೇಲೆ ಒಂದು ಇರುಳು ಅವನು ಅಲ್ಲಿ ಬಂದರೆ, ಅವಳು ಬರಲಿಲ್ಲ. ಆಕೆ ಬಂದಾಗ ಅವನಿರಲಿಲ್ಲ. ಕ್ರಮೇಣ ಇಬ್ಬರು ಬಾರದೆ ಆ ಮರ ಒಣಗಿ ಹೋಗಲಿಲ್ಲ. ಬದಲಿಗೆ ಇನ್ನೂ ಹರಡಿಕೊಂಡು ವಿಶಾಲವಾಯಿತು.

ಏಷ್ಟೋ ಕಾಲದ ಮೇಲೆ ಹೆಲಿಕ್ಯಾಪ್ಟರ್ ನಿಂದ ಅವನು ಇಳಿದು ಬಂದ. ಆಕೆ ದೊಡ್ಡ ಉದ್ದ ಕಾರಿನಲ್ಲಿ ಬಂದಿಳಿದಳು. ಇಬ್ಬರೂ ಸೇರಿ ಜೊತೆಗೆ ಗುಡ್ಡ ಹತ್ತಿದರು. ಅಲ್ಲಿ ಮರದ ಕೆಳಗೆ ಕೂತು ಅಂದು ಅವಳು ನಕ್ಷತ್ರಗಳನ್ನು ಏಣಿಸತೊಡಗಿದಳು. ಆತ ಚಂದ್ರನಲ್ಲಿ ಕಳೆದು ಹೋದ. ಅವತ್ತಿನ ಮಿಲನದಲ್ಲಿ ಬರೀ ಮುತ್ತಿರಲಿಲ್ಲ, ಮತ್ತೆಲ್ಲವೂ ಇತ್ತು. ಪ್ರಾಯಶಃ ಅದಕ್ಕೆ ಮಾರನೇ ದಿನ ಕೆಂಪು ಸೂರ್ಯ ಜನಿಸಿದ್ದ.

ಮೀರಾ (ಅಭಿಸಾರಿಕೆಯ ಕತೆಗಳು-7)

ಮಾರ್ಚ್ 29, 2013

ಆವತ್ತಿನ ಪ್ರೋಸೇಷನ್ ನಂತರ ಇಷ್ಟು ದಿನ ಆಕೆ ಸಿಕ್ಕಿದ್ದೇ ಇಲ್ಲ. ಇವತ್ತು ಬೆಳಗಿನ ಜಾವವೇ ಬಂದು ನಿಂತು ಬಿಟ್ಟಿದ್ದಾಳೆ. ನಿದ್ದೆ ಆರುವ ಮೊದಲೇ ಮತ್ತೆ ಕಣ್ಮರೆಯಾಗಿಬಿಟ್ಟಳು. ನಾ ಮತ್ತೆ ಹಾಸಿಗೆಗೆ ಜಾರಿದೆ. ಆಮೇಲೆ ನನ್ನ ಎಚ್ಚರಿಸಿದ್ದು ಮಧುರ ಸ್ವರ. ಇದೆಲ್ಲಿಂದ ಇವತ್ತು ಎಂದು ಆಕಳಿಸುತ್ತಾ ಹೊರ ಬಂದರೆ ಆಕೆ ಸೂರ್ಯ ರಶ್ಮೀಯಲ್ಲಿ ಮಿಂದು ಗುನುಗುತ್ತಿದ್ದಾಳೆ. ಆಕೆಯೀಗ ರಾಧಾಮಣಿಯೋ ಮಿರಾಮಯಿಯೋ ನನಗಂತೂ ತಿಳಿಯಲಿಲ್ಲ. ಅಂದುಕೊಳ್ಳುತ್ತೇನೆ, ಬಹುಶಃ ಎಲ್ಲ ಇದ್ದು ಏನೂ ಇಲ್ಲದ ತರಹ ಮತ್ತು ಏನೂ ಇಲ್ಲದೇ ಎಲ್ಲ ಇರುವ ತರಹ ಇದ್ದು ಬಿಡುವ ಆಕೆಯ ಇಹಕ್ಕೆ ಬೆರಗಾಗಿ ನಿಂತಿದ್ದೇನೆ.

ಆಕೆ ದೊರೆಸಾನಿ, ದೊರೆಯ ಏಕೈಕ ಮುದ್ದಿನ ಪತ್ನಿ. ಆಕೆಯೆಂದರೆ ದೊರೆಗೆ ಜೀವ. ಆದರೆ ಆಕೆಗೋ ‘ಅವನ’ಲ್ಲಿ ಒಲವು. ಅದೇನು ಈಗೀಗಿನಿಂದ ಹುಟ್ಟಿದ್ದಲ್ಲ. ‘ಅವನ’ಲ್ಲಿ ಆಕೆಯ ಜೀವ ಬಿದ್ದು ವರುಷಗಳೇ ಸಂದಿದ್ದವು. ಬಾಲ್ಯ ಕಾಲದಲ್ಲಿ ನದಿಯಲ್ಲಿ ದೊರೆತ ‘ಅವನ’ ಮೂರ್ತಿಗೆ ಆಕೆಗಿಂತ ಸ್ವಲ್ಪ ಸಣ್ಣ ಆಯು. ಅಂದಿನಿಂದ ಇಂದಿನವರೆಗೆ ಅದು ಆಕೆಯ ಜೊತೆಗೆ ಇದೆ.

ಮೊದಲು ಆಕೆಗೊಂದು ಗೊಂಬೆಯಾಯಿತೆಂದು ಸುಮ್ಮನಿದ್ದವರು ಆಕೆ ಬೆಳೆಯುತ್ತಿದ್ದಂತೆ ಏರುತ್ತಿದ್ದ ಹುಚ್ಚು ಅವರುಗಳ ನಿದ್ದೆಗೆಡಿಸಿತ್ತು. ಏನು ಮಾಡಿದರು ‘ಅವನ’ ಬಿಡಲೊಲ್ಲೆ ಎನ್ನುವ ಅವಳು. ಒಂದು ದಿನ  ‘ಅವನ’ ಏತ್ತಿ ಹೊರ ಹಾಕಿದಾಗ ಮಾಡಿದ ರಂಪಾಟ, ಹಠ, ಜಿದ್ದಿಗೆ ಸೋತು ‘ಅವನ’ನ್ನು ಮರಳಿ ತಂದು ಅವಳ ಮಡಿಲ ಸೇರಿಸಿದ್ದರು.

ಸೊಬಗಿನ ಸಿರಿಯಾದ ಅವಳನ್ನು ಉತ್ಸವದಲ್ಲಿ ನೋಡಿದ ದೊರೆಯು ಆಕೆಯೇ ತನ್ನವಳೆಂದು ಒಪ್ಪಿಕೊಂಡು ವಿವಾಹವಾಗಿ ಅರಮನೆಗೆ ಕಳುಹಿಸಿಕೊಂಡ. ತದನಂತರ ಆಕೆ ತನ್ನವಳೆಂದೂ ಆಗುವುದಿಲ್ಲವೆಂದು ಅರಿತುಕೊಂಡ. ಆಕೆಯನ್ನು ಮುದ್ದಿಸಿದ, ಬೇಡಿಕೊಂಡ, ಅತ್ತುಕೊಂಡ, ಸಿಟ್ಟು ಮಾಡಿಕೊಂಡ. ಆಕೆ ಏನೂ ಹೇಳುತ್ತಿರಲಿಲ್ಲ. ಮುಗುಳ್ನಕ್ಕು ಆತನ ತಲೆ ಸವರಿ ಅವನ್ನೆತ್ತಿಕೊಂಡು ಹೊರಟು ಬಿಡುತ್ತಿದ್ದಳು. ಆಕೆಯ ಸಖಿ ಏನಾರು ಹೇಳಬಂದರೆ, ಅಯ್ಯೋ ಹುಚ್ಚಿ, ನೀನೆಂದಾದರೂ ನನ್ನ ‘ಅವನ’ನ್ನು ಪ್ರೀತಿಸಿದ್ದೀಯಾ? ಒಮ್ಮೆ ಪ್ರೀತಿಸಿ ನೋಡು ಎಂದು ಅವಳ ಗಲ್ಲ ನೇವರಿಸಿ ಅಲ್ಲಿಂದೆದ್ದು ಬಿಡುತ್ತಿದ್ದಳು.

ಹೀಗಿರಲು ಒಂದು ದಿನ ‘ಅವನು ‘ ಇರಲಿಲ್ಲ. ಆಕೆ ಎಲ್ಲ ಕಡೆ ಹುಡುಕಿದಳು. ಅತ್ತಳು, ಬೇಡಿಕೊಂಡಳು, ಗೋಳಾಡಿಕೊಂಡಳು. ಏನು ಪ್ರಯೋಜನವಾಗಲಿಲ್ಲ. ‘ಅವನು’ ಮರಳಿ ಸಿಗಲಿಲ್ಲ. ಆಕೆಗೆ ಯಾರೋ ಹೇಳಿದರು ಈಗಾತ ಬ್ರಹ್ಮಪುರದಲ್ಲಿದ್ದನೆಂದು. ಕೇಳಿದವಳೇ ಸೀದಾ ಎದ್ದು ಹೊರಟು ಬಿಟ್ಟಳು. ದೊರೆ ಈ ಸಲ ಆಕೆಯನ್ನು ತಡೆಯಲಿಲ್ಲ.

ಕಲ್ಲು ಮೆಟ್ಟಿದಳು, ಗುಡ್ಡ ದಾಟಿದಳು, ಮುಳ್ಳನ್ನು ತುಳಿದಳು, ಅಲೆದಾಡಿದಳು. ಇನ್ನೇನು ಜೀವ ನಿಲ್ಲಬೇಕು ಅಂದಾಗ ‘ಅವನು’  ಎದುರಿಗೆ ಬಂದು ನಿಂತ. ಬರಸೆಳೆದುಕೊಂಡ. ಬಳಲಿದ್ದ ಆಕೆಯೆನ್ನೆತ್ತಿ  ಬ್ರಹ್ಮಪುರಕ್ಕೆ ಕರೆದೊಯ್ದ.

ಈಗ ಆಕೆಗೆ ಎಲ್ಲವೂ ‘ಅವನು’. ‘ಅವನ’ ಹಾಡಲ್ಲಿ ಭಜಿಸುತ್ತಾಳೆ, ಕುಣಿಯುತ್ತಾಳೆ, ಮೈ-ಮನ ಮರೆಯುತ್ತಾಳೆ. ದೊರೆಯು ಆಕೆಗಾಗಿ ಎಲ್ಲ ವ್ಯವಸ್ಥೆಯನ್ನು ಅವಳಿದ್ದಲ್ಲೇ ಮಾಡಿಕೊಟ್ಟು ತೃಪ್ತನಾಗಿದ್ದಾನೆ. ಆಕೆಯೀಗ ತನ್ನ ಉಸಿರನ್ನು ‘ಅವನ’ಲ್ಲಿ ನಿಲ್ಲಿಸಿಬಿಟ್ಟಿದ್ದಾಳೆ.

ರಾಧಿಕೆ (ಅಭಿಸಾರಿಕೆಯ ಕತೆಗಳು-6)

ಜನವರಿ 26, 2013

ಮೇಲೆ ಆಟ್ಟಣಿಗೆಯಲ್ಲಿ ಚಳಿಗೆ ಮೈ ಕೊರೆಯುತ್ತಿತ್ತು . ಕೆಳಗೆ ರಾಧೇಮಾ  ಪ್ರೊಸೆಷನ್ ಸಾಗುತ್ತಿತ್ತು. ಏನೂಂತ ತಿಳಿಯದೇ ಜನರನ್ನೇ ದಿಟ್ಟಿಸುತ್ತ  ಸಣ್ಣಗೆ ನಡುಗುತ್ತ ನಿಂತಿದ್ದೆ. ಅರೇ! ಅದೋ ಅವಳು , ಬಿಳಿ ಸೀರೆಯಲ್ಲಿ ತಂಬೂರಿ ಮೀಟುತ್ತ ಮೈ ಮರೆತವಳು! ಹೌದು ಆಕೆಯೇ. ಕಳೆದು ಹೋಗಿದ್ದ ಅಭಿಸಾರಿಕೆ!!  ಮೈ ಚಳಿಯೆಲ್ಲ ಆರಿ ಹೋಯಿತು. ನಾ ಕೂಗಿದ್ದು ಆಕೆಗೆ ಕೇಳಿಸಿತೆ!? ತಲೆಯೆತ್ತಿ ನನ್ನ ನೋಡಿದವಳೇ ತುಸು ನಾಚಿ ತುಟಿ ಅರಳಿಸಿದಳು. ಆ ತುಟಿ ಅಂಚಿನಿಂದ ಬಿದ್ದ ಮುತ್ತುಗಳು ಬೆಳದಿಂಗಳನ್ನು ಮತ್ತಷ್ಟು ಪ್ರಖರವಾಗಿಸಿದವು.

ರಾಧಿಕೆ ನಗದೇ ವರುಷಗಳೇ ಸಂದಿದ್ದವು. ಕೇಶವನಿಲ್ಲದೆ ಆಕೆಯೆಲ್ಲಿ? ಆತನನ್ನೊಮ್ಮೆ ನೋಡಬೇಕು ಎಂದೆಣಿಸಿದ್ದೇ  ತಡ ಲಕನಿಗೂ ಹೇಳದೇ  ಎದ್ದು ಬಂದಿದ್ದಳು.  ಈ ವರುಷಗಳಲ್ಲಿ ಒಮ್ಮೆಯೂ ತನ್ನನ್ನು ನೋಡಬೇಕೆಂದು ಆತನಿಗನಿಸಿರಲಿಲ್ಲ. ಈಕೆಯೋ ಮತ್ತೊಮ್ಮೆ ಆತನ ಮೊಗ ನೋಡನೆಂದವಳು ಅವತ್ತು ತಡೆಯಲಾಗದೇ ಊರವರೊಟ್ಟಿಗೆ ಹೊರಟು ಬಿಟ್ಟಿದ್ದಳು. ಹಾಗಂತ ಈಗಾತ ರಾಜ ಕುವರ, ಎರಡೆರಡು ಹೆಂಡಿರು. ತನ್ನ ಮರೆತು ಬಿಟ್ಟಿರುವನೆ? ಹಾಗಾಗಲಾರದು ಎಂದುಕೊಳ್ಳುತ್ತಲೇ ನಗರದ ಪ್ರವೇಶ  ದ್ವಾರದೊಳಗೆ ಬಂದು ನಿಂತಿದ್ದಳು.

ಅಲ್ಲಿ ಆತ  ಎಲ್ಲರೊಡನೆ ನಗುತ್ತ ನಿಂತಿದ್ದ. ಇವರೆಲ್ಲರನ್ನು ನೋಡಿದವನೇ ಇತ್ತ ಕಡೆಯೇ ಬಂದ. ಎಲ್ಲರನ್ನು ಮಾತನಾಡಿಸಿದರೂ ಈಕೆಯತ್ತ ತಿರುಗಲಿಲ್ಲ. ಗೋಪನೊಟ್ಟಿಗೆ ಹರಟತೊಡಗಿದ. ಈಕೆ ಏನೂ ಹೇಳಲಿಲ್ಲ. ಅಲ್ಲಿಂದ ಹೊರಳಿ ದೀವಾನರಲ್ಲಿ ಏನೋ ಹೇಳಿ ಬಳಿ ಬಂದ. ಬಾ ಎಂದು ಕರೆದು ಹೋದ. ಈಕೆ ಏನೂ ಕೇಳಲಿಲ್ಲ. ಆತನ ಬೆನ್ನಲ್ಲೇ ನಡೆದಳು.

ಭವನದ ಒಂದು ಸುತ್ತು ಹೊಡೆದರು. ಆತ  ಅಲ್ಲಿನ ಪ್ರತಿಯೊಂದು ಇಂಚಿಂಚಿನ  ನೆನಪ ಒಡೆಯತೊಡಗಿದ. ಅಪ್ಪನ ಬಗ್ಗೆ, ಅಮ್ಮನ ಬಗ್ಗೆ, ಮಾವನ ಬಗ್ಗೆ, ………  ಆಕೆ ಕೇಳಿಸಿಕೊಳ್ಳುತ್ತಲೇ ಇದ್ದಳು. ಆತನನ್ನು ಕಣ್ತುಂಬಿಸಿಕೊಳ್ಳುತ್ತಲೇ ಇದ್ದಳು. ಕೊನೆಗೆ ಉಧ್ಯಾನಕ್ಕೆ ಬಂದರು. ಅಲ್ಲಿ ಆಕೆಯ ಬಹು ಪ್ರಿಯ ಪಾರಿಜಾತ.  ಜೊತೆಗೆ ಹೂ  ಬಳ್ಳಿಯ ಉಯ್ಯಾಲೆ. ಆಕೆಯ ಕಣ್ಣು ಮಿಂಚಿತು. ಅಲ್ಲಿ ಆತ ಇನ್ನೂ ಹಗುರಾದ. ಭಾಮೆಯ ಜೊತೆಗಿನ ಮೊದಲ ಕ್ಷಣಗಳ ಬಗ್ಗೆ ಹೇಳಿ ಸಂಭ್ರಮಿಸಿದ. ಆಕೆ ಕೇಳುತ್ತಲೇ ಇದ್ದಳು. ಕಣ್ಣುಗಳು ಭಾರವಾದವು.

ಆತ ಕಾರ್ಯ ನಿಮಿತ್ತ ಅತ್ತ ಹೋದೊಡನೆ ಇತ್ತ ಸಿಹಿ ಹಂಚುತ್ತಿದ್ದ ಸೇವಕನಲ್ಲಿ ದೊಡ್ಡ ಪೊಟ್ಟಣವನ್ನೇ ಕಟ್ಟಿಸಿಕೊಂಡು ಹೊರಟು ಬಿಟ್ಟಳು. ಮಾರನೇ ದಿನ ಪುರಕ್ಕೆ ಮರಳಿದವಳೇ ಊರ ಬಾಲಕರನ್ನೆಲ್ಲ ಕರೆದು ಸಿಹಿ ಹಂಚಿದಳು. ಅವರ್ಯಾರು ಏಕೆಂದು ಕೇಳಲಿಲ್ಲ. ಈಕೆಯೂ ಹೇಳಲಿಲ್ಲ. ಮತ್ತೊಂದು ದಿನ ಪ್ರತಿ ದಿನ ದೀಪ ಹಚ್ಚಿ ಇಡುತ್ತಿದ್ದ ಗೂಡಿನಿಂದ ಕೆತ್ತನೆಯ ಮರದ ಪೆಟ್ಟಿಗೆ ತೆರೆದು, ಅದರೊಳಗಿನ ಗರಿ ಮತ್ತು ಕೊಳಲನ್ನು,  ಸುತ್ತಿದ್ದ ರೇಷ್ಮೆ ದಾರದಿಂದ ಭೇರ್ಪಡಿಸಿದಳು. ಬಾಲನನ್ನು  ಕರೆದು ಅವನ ಮುಡಿಗೆ ಆ ಗರಿ ಸಿಕ್ಕಿಸಿ, ಆತ  ತುಂಬಾ ದಿನಗಳಿಂದ ದುಂಬಾಲು ಬಿದ್ದಿದ್ದ ಕೊಳಲನ್ನು ನೀಡಿದಳು. ಆತನೊ  ಕುಣಿದಾಡಿಬಿಟ್ಟ . ಒಳಗೆ ಬಂದಷ್ಟೇ ವೇಗವಾಗಿ ಹೊರಗೆ ಓಡಿಬಿಟ್ಟ .

ಬಾಲನ ಕೊಳಲ ಇಂಪಿನ ಜೊತೆ ಪುರದಲ್ಲಿ ಮತ್ತೆ ಬೆಳಗಾಗತೊಡಗಿತು, ಸಂಜೆಯಾಗತೊಡಗಿತು. ಅದರಲ್ಲಿ ಹಕ್ಕಿ-ಪಕ್ಕಿ, ಹೂಗಳು ನಲಿಯತೊಡಗಿದವು, ರಾಸುಗಳು ಮಿಂದೆದ್ದವು, ರಾಧಿಕೆಯ ತುಟಿಯಂಚಿನಲ್ಲೂ ನಗು ಉಕ್ಕಿ ಹರಿಯತೊಡಗಿತು.

ಮಲ್ಲಿಕಾವಲ್ಲಭ (ಅಭಿಸಾರಿಕೆಯ ಕತೆಗಳು-೫)

ನವೆಂಬರ್ 23, 2009

ಅಭಿಸಾರಿಕೆ ಕಾಲ್ಬೆರಳಿನಿಂದ ಜೀಕುತ್ತ ಮಲ್ಲಿಗೆಯ ಬಳ್ಳಿಯಲ್ಲಿ ಜೋಕಾಲಿಯಾಡುತ್ತಿದ್ದಳು. ಜಾಜಿ ಮಲ್ಲಿಗೆಯು ಪಾರಿಜಾತದ ಕಂಪಿನಲ್ಲಿ ಮಿಳಿತಗೊಂಡು ಇಡೀ ವಾತವರಣ ಮತ್ತೇರಿದಂತಿತ್ತು. ನನ್ನ ನೋಡಿದವಳೇ ನಾಚಿಕೊಂಡು ಅಲ್ಲಿಂದೆದ್ದು ಓಡಿ ನೈದಿಲೆಯ ಕೊಳದಲ್ಲಿ ಧುಮುಕಿ ಅಲೆಗಳನ್ನೆಬ್ಬಿಸಿದಳು. ಅಲ್ಲಿಂದ ಎದ್ದು ಬಂದವಳ ಮೈಬಿಸಿಗೆ ನೀರೆಲ್ಲ ಆರಿತ್ತು. ಕಣ್ಗಳಲ್ಲಿ ವಿಚಿತ್ರ ಮಿಂಚಿತ್ತು.

ಪ್ರಭಾವತಿಯ ರಾಜ ಜಕ್ಕಣ್ಣನ ಮಗಳು ಮಲ್ಲಿಕೆ ಇನ್ನೂ ಕನ್ಯೆಯೇ. ಆಕೆಯ ಕನ್ಯಾಸೆರೆ ಕಳೆಯುವವರಿಗೆ ರಾಜ ಇಡೀ ರಾಜ್ಯ ಘೋಷಿಸಿದ್ದ. ಸುದ್ದಿ ತಿಳಿದವರಾರು ಅತ್ತ ಸುಳಿದಿರಲಿಲ್ಲ. ಅತೀ ಬುದ್ಧಿವಂತರಿಬ್ಬರು ಬಂದವರು ಮಾರನೇಯ ದಿನ ಹೆಣವಾಗಿ ಮರಳಿದ್ದರು. ರಾತ್ರಿ ಏನಾಯಿತೆಂದು ಯಾರಿಗೂ ತಿಳಿದಿರಲಿಲ್ಲ.

ಆಕೆಗಿದ್ದಷ್ಟು ಲಾವಣ್ಯ, ಸೌಂದರ್ಯ ಯಾರೂ ನೋಡಿರಲಿಕ್ಕಿಲ್ಲ, ಮುಂದೆಯೂ ಹುಟ್ಟಲಿಕ್ಕಿಲ್ಲ. ಹೀಗಿರಲು ದಂಡೆತ್ತಿ ಬಂದ ಮಾಯಾಪುರಿಯ ರಾಜ ಪ್ರಭೇಂದ್ರ ಪ್ರಭಾವತಿಯನ್ನು ಗೆದ್ದು ಮಲ್ಲಿಕೆಯನ್ನು ಕೊಲ್ಲಲಾಗದೇ ತನ್ನೊಂದಿಗೆ ಕರೆದೊಯ್ದ. ಆಕೆ ಆತನ ಪಾಲಿಗೆ ಭಾಗ್ಯ ದೇವತೆಯಾದಳು. ನೆರೆಹೊರೆಯ ರಾಜರನ್ನೆಲ್ಲ ಮಣಿಸುತ್ತ ಮಹಾರಾಜನಾದ. ಈಗ ಆತನ ಮಗ ಯುವರಾಜ ಕಾಂತರಾಜನಿಗೆ ಮಲ್ಲಿಕೆಯ ಮೇಲೆ ಪ್ರೇಮ. ಆದರೆ ಪ್ರಭೇಂದ್ರ ಬಿಡಬೇಕಲ್ಲ. ಆಕೆಯನ್ನು ಮುಗಿಸಲು ಕತ್ತಿ ಎತ್ತಿದ. ಆದರೆ ಅದೇ ಕತ್ತಿಯನ್ನು ಮಗ ಅಪ್ಪನ ಕುತ್ತಿಗೆಗೆ ಇಟ್ಟು ಮಗದೊಂದನ್ನು ತನ್ನ ಕುತ್ತಿಗೆಗೆ ಇಟ್ಟುಕೊಂಡು ಆಕೆಯನ್ನು ತನ್ನವಳಾಗಿಸಿಕೊಂಡ.

ಆ ರಾತ್ರಿ ಕಾಂತ ತನ್ನ ಕಾಂತೆಯ ಬಳಿ ತೆರಳಿದರೆ ಪ್ರಭೇಂದ್ರ ತನ್ನನ್ನು ಸ್ವರ್ಗಕ್ಕೆ ಏರಿಸಲು ಇನ್ನೊಂದು ಮಗನಿಲ್ಲದಿದ್ದುದ್ದಕ್ಕೆ ದುಃಖಿಸುತ್ತಾ ರಾಜ್ಯಕ್ಕೆ ವಾರಸುದಾರ ಬೇಕೆಂದು ಕಿರಿರಾಣಿಯ ಅಂತಃಪುರಕ್ಕೆ ತೆರಳಿದ.

ಇತ್ತ ತಾರಸಿಯ ಮೇಲೆ ಕಾಂತರಾಜ ಹುಣ್ಣಿಮೆಯ ಬೆಳಕನ್ನು ಉಟ್ಟು ದಿಗಂತವಾಗಿ ನಿಂತಿದ್ದ. ಮಲ್ಲಿಕೆ ಬಳ್ಳಿಯಾಗಿ ಆತನ ಮೈತುಂಬ ಹಬ್ಬುತ್ತಿದ್ದಳು. ಬೇರುಗಳು ಮೇಲ್ಪದರ ಸೀಳಿ ಅವನಾಳಕ್ಕೆ ಇಳಿಯುತ್ತಿದ್ದವು. ಇನ್ನೇನು ಹಿಡಿತ ಬಿಗಿಯಾಗಬೇಕು, ಜೀವ ಹೀರಬೇಕು ಅನ್ನುವಷ್ಟರಲ್ಲಿ ಏನಾಯಿತೋ ಕಾಣೆ ಬಂಧ ಕಳಚಿ ಸುರುಳಿ ಸುರುಳಿಯಾಗಿ ಕೆಳಗೆ ಉರುಳಿದಳು. ಚೆಲ್ಲಿದ ಶರೀರರದ ತುಂಬೆಲ್ಲ ಹೂವು ಬಿರಿಯತೊಡಗಿತು. ಅರಳಿದ ಹೂವುಗಳು ನಾಚಿ ಕೆಂಪಾಗತೊಡಗಿದವು. ಕಾಂತ ಮೆಲ್ಲಗೆ ಬಾಗಿ ಒಂದೊಂದೆ ಹೂವನ್ನು ಆರಿಸಿ ತನ್ನ ಮುಡಿಗೇರಿಸಿಕೊಳ್ಳತೊಡಗಿದ.

ಆ ರಾತ್ರಿ ಚಂದಿರ ನಿದ್ದೆ ಮಾಡಲಿಲ್ಲ. ರೋಹಿಣಿಯ ನೆನಪಲ್ಲಿ ಕುದ್ದುಹೋದ.

ಗೌತಮಿ(ಅಭಿಸಾರಿಕೆಯ ಕತೆಗಳು-೪)

ನವೆಂಬರ್ 20, 2009

ಮಧ್ಯರಾತ್ರಿ ಮನೆಗೆ ಮರಳಿದ ಮೇಲೆ ಅಭಿಸಾರಿಕೆ ಎಲ್ಲೆಂದು ಹುಡುಕುತ್ತೇನೆ. ಎಲ್ಲೂ ಕಾಣಿಸುವುದಿಲ್ಲ. ಎಲ್ಲಿ ಹೋದಳಿವಳು ಎಂದು ಅಂಕಣದ ಮಧ್ಯ ಇಣುಕಿದರೆ ಅದೋ ಅಲ್ಲಿ ಚಂದ್ರನ ಕೆಳಗೆ ಕೌಪಿನ ತೊಟ್ಟು ಪದ್ಮಾಸನದಲ್ಲಿ ಕುಳಿತಿದ್ದಾಳೆ. ಎದುರಿಗೆ ಹೊಚ್ಚ ಹೊಸ ಕುಂಡದಲ್ಲಿ ನೆಟ್ಟ ಆಲದ ಮರದ ಸಸಿ ! ನನಗೆ ನಗು ತಡೆಯಲಾಗಲಿಲ್ಲ.

ಇದೇ ಸಂಜೆ ನಾವಿಬ್ಬರೂ ದೀಪಾಲಂಕೃತ ಊರನ್ನು ನೋಡಲೆಂದು ಆಕಾಶಯಾನ ಕೈಗೊಂಡಿದ್ದೆವು. ಮೇಲಿನಿಂದ ಇಡೀ ಊರಿಗೆ ಊರೇ ಹೊಳೆಯುತಿತ್ತು. ಹಣತೆಯ ದೀಪಗಳು ನಕ್ಷತ್ರದಂತೆ ಮಿಣುಗುತ್ತಿದ್ದವು. ಹೀಗೆ ಸೊಗಸಾದ ಮನೆ-ಮಠಗಳನ್ನು ನೋಡಿ ತಣಿಯುತ್ತ ಊರ ಹಿಂದಿನ ಬೀದಿಯಲ್ಲಿ ಇಳಿದೆವು.

ನಾವು ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾಗ ಹಿಂದಿನಿಂದ ಬಿದ್ದ ಧಪ್ ಎಂಬ ಶಬ್ದಕ್ಕೆ ಅತ್ತ ತಿರುಗಿದೆವು. ಕರಚ ದುಮುಗುಡುತ್ತ ಬಿದ್ದ ಬಾಗಿಲಿಗೆ ಇನ್ನೆರಡು ಸಲ ಒದ್ದು ನಮ್ಮ ಮುಂದಿನಿಂದ ಸರಿದುಹೋದ. ಕಟ್ಟೆಯ ಬದಿಯಲ್ಲಿ ನಾಗಿ ಗೋಳೊ ಎಂದು ಅಳುತ್ತಿದ್ದ ಕೆಂಚಿಯನ್ನು ಸಮಾಧಾನಿಸುತ್ತಿದ್ದಳು. ಒಳಗೆ ಕೆಂಚ ತನ್ನರ್ಧ ವಯಸ್ಸಿನ ಮಾವನ ಮಗಳು ರತಿಯೆದುರು ಮನ್ಮಥನಾಗ ಹೊರಟಿದ್ದ. ಸ್ವಲ್ಪ ಹೊತ್ತಿನ ಮುಂಚೆ ಗಂಜಿಗೆಂದು ಹಚ್ಚಿದ್ದ ಒಲೆಯಲ್ಲಿ ಈಗ ಕೆಂಡ ನಿಗಿನಿಗಿಸುತ್ತಿತು.

ನಾಗಿಯೂ ಏನಂತ ಸಮಾಧಾನ ಹೇಳಿಯಾಳು? ಅವಳ ಗಂಡ ಅಕ್ಕನ ಮಾತಿಗೆ ಕಟ್ಟು ಬಿದ್ದು ಈಕೆಯನ್ನು ಕಟ್ಟಿಕೊಂಡಿದ್ದ. ಇದ್ದೊಬ್ಬ ಮಗನಿಗೂ ತಲೆಮಂದ. ಸ್ವಲ್ಪ ವರುಷದ ಕೆಳಗೆ ಮದುವೆಗೆ ಮುನ್ನ ಇಟ್ಟುಕೊಂಡವಳನ್ನು ಇವಳಿಗೆ ಸವತಿಯಾಗಿ ಮನೆಗೆ ತಂದಿದ್ದ. ಇತ್ತೀಚಿಗೆ ಹೊಸದೊಂದು ಹುಡುಗಿಯ ಮನೆಯಲ್ಲಿ ರಾತ್ರಿ ಮನೆ ಮಾಡಿಕೊಂಡಿರುತ್ತಾನೆ.

ಎಲ್ಲಿಂದಲೊ ಓಡಿ ಬಂದ ಭಾಗಿ ಇವರಿಬ್ಬರಲ್ಲಿ ಏನೋ ಹೇಳಿದಳು. ಮೂರು ಜನ ಒಂದೇ ಉಸಿರಿಗೆ ಮತ್ತೆಲ್ಲೋ ಓಡಿದರು. ಈಗ ಬಂದಿದ್ದ ಭಾಗಿಯದು ಇನ್ನೊಂದು ಕತೆ. ಮದುವೆಯಾಗಿ ಕೈಗೊಂದು ಮಗು ನೀಡಿ ಭಾಗ ದೇಶಾಂತರ ಹೋಗಿದ್ದ. ಬದುಕಿದ್ದಾನೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಈಕೆ ತವರಲ್ಲಿ ಕಸ-ಮುಸುರೆ ಮಾಡಿಕೊಂಡು ಮಗುವನ್ನು ಸಾಕಿಕೊಂಡು ಇದ್ದಾಳೆ.

ಅಷ್ಟರಲ್ಲಿ ರಾಮ ನಾಮ ಸತ್ಯ ಹೈ ಕೇಳಿ ಬಂತು. ಹಿಂತಿರುಗಿ ನೋಡಿದರೆ ಮುನಿಯನ ಹೆಣದ ಮೆರವಣಿಗೆ. ಅಲ್ಲೆ ದೂರದಲ್ಲಿ ಕೆಲಸಕ್ಕೆ ಬಾರದ ಗಂಡನನ್ನು ಕಳೆದುಕೊಂಡಿದ್ದಕ್ಕೆ ಮುನಿಯಮ್ಮ ಎದೆ ಬಡಿದುಕೊಳ್ಳುತ್ತ ರೋಧಿಸುತ್ತಿದ್ದಾಳೆ. ನಾಗಿ, ಕೆಂಚಿ, ಭಾಗಿ…. ಆಕೆಯ ಜೊತೆ ಕೂತು ತಾವು ಅಳುತ್ತಿದ್ದಾರೆ. ನಾನು ಪಾಪ ಅಂದುಕೊಳ್ಳುತ್ತಿರುವಾಗ ಈಕೆ ಕೇಳಿದಳು ’ಏನಾಯಿತು?’ ನಾನಂದೆ ’ಅವನು ಮೇಲೆ ಹೋಗಿದ್ದಾನೆ’. ’ಮೇಲೆ ಎಂದರೆ ಎಲ್ಲಿ?’ ’ಅಯ್ಯೋ, ಮೇಲೆ ಎಂದರೆ ಸತ್ತು ಹೋಗಿದ್ದಾನೆ’. ’ಓಹೊ ಸತ್ತು ಹೋಗುವುದಾ, …..’ ನಾನು ದುರುಗುಟ್ಟಿ ನೋಡಿದೆ. ಸುಮ್ಮನಾದಳು. ಸೀದಾ ಮನೆಗೆ ಬಂದಿಳಿದೆವು. ಬಾಗಿಲ ಒಳಗೆ ಹೆಜ್ಜೆಯಿಡುತ್ತಿದ್ದಂತೆ ಮತ್ತೆ ಕೇಳಿದಳು ’ಅವನೆಲ್ಲಿ ಹೋದ?’ ನನಗೆ ತಡೆಯಲಾಗಲಿಲ್ಲ. ಅವಳಿಗೊಂದು ಉದ್ದಂಡ ನಮಸ್ಕರಿಸಿ ನಾನು ಹೊರ ಹೊರಟೆ.

ರಾಗಿಣಿ (ಅಭಿಸಾರಿಕೆಯ ಕತೆಗಳು-೩)

ಸೆಪ್ಟೆಂಬರ್ 8, 2009

ಹತ್ತಿರದೆಲ್ಲೊ ಬಿದ್ದ ಮಿಂಚಿನ ಸದ್ದಿನೊಂದಿಗೆ ನನ್ನ ನಿದ್ದೆ ಹಾರಿಹೋಯಿತು. ಕಣ್ತೆರೆದಾಗ  ಎದುರಿಗೆ ಕಂಡ ಕಪ್ಪು ಆಕೃತಿ ಇನ್ನಷ್ಟು ಬೆಚ್ಚಿ ಬೀಳಿಸಿತು. ಹಣತೆಯ ಬೆಳಕು ಸ್ವಲ್ಪ ಪ್ರಖರವಾದಾಗ, ಅರೆ! ಇದೆನಿದು? ಅಭಿಸಾರಿಕೆ. ಅದೂ ಹೊತ್ತಲ್ಲದ ಹೊತ್ತಲ್ಲಿ. ಮಂಚದ ಆ ತುದಿಯಲ್ಲಿ ಕಂಭಕ್ಕೊರಗಿ ಮುದುರಿ ಕುಳಿತಿದ್ದಾಳೆ.  ನಿಧಾನವಾಗಿ ಹೆಗಲ ಮೇಲೆ ಕೈಯನ್ನಿಟ್ಟೆ. ತಿರುಗಿ ನೋಡಿದವಳೇ  ನನ್ನ ಎದೆಯಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕಣ್ಣಿನಿಂದ ಒಂದೇ ಸಮನೆ ಅಶ್ರುಧಾರೆ. ಹೊರಗಿನ ಮಳೆಯೊಡನೆ ಸ್ಪರ್ಧಿಸುವಂತಿದೆ. ಓಹ್! ನಿಧಾನವಾಗಿ ಅಕೆಯನ್ನು ಬಳಸಿಕೊಂಡು ದಿಂಬಿಗೆ ಒರಗಿದೆ. ಮಳೆ ಇನ್ನೆನು ನಿಲ್ಲುತ್ತೆ ಅಂದುಕೊಳ್ಳುತ್ತಿರುವಾಗ ಈಕೆ ಅತ್ತು ಅತ್ತು ಕೆಂಪಾಗಿ ಸೋತಿದ್ದಳು. ಗಾಳಿಗೆ ಹಾರುತ್ತಿದ್ದ ಮುಂದಲೆಗಳನ್ನು ಹಾಗೆ ಹಿಂದೆ ತಳ್ಳಿ ಹರಡಿ ಹೋಗಿದ್ದ ಮೇಲು ವಸ್ತ್ರವನ್ನು ಸರಿಪಡಿಸಿದೆ. ಅಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಎದುರಿಗಿನ ದೀಪ ನಂದಿಹೋಯಿತು.

ಕೆರೆಯ ಪಕ್ಕದ ಆ ಕಲ್ಲು ಬಂಡೆಯನ್ನು ಏರಿ ಕುಳಿತಿರುವ ಆಕೆ ಚಂದ್ರಿಕೆ. ಆ ಕಾಲದ ಪ್ರಖ್ಯಾತ ವೈಶ್ಯೆ. ಅರವತ್ತನಾಲ್ಕು ವಿದ್ಯೆಗಳಲ್ಲಿ ಅಗ್ರಪ್ರವೀಣೆ. ಆಕೆಯ ಒಂದು ದರ್ಶನಕ್ಕಾಗಿ ದೂರದ ಪ್ರಾಂತ್ಯಗಳಿಂದ ಬರುವ ಜನರಿದ್ದರು. ಆದರೆ ಆಕೆಯೋ ಅದೇ ಊರಿನ ಮೋಹನಾಂಗನಿಗೆ ಮನಸೋತಿದ್ದಳು. ವಸಂತ ಹಬ್ಬದಲ್ಲಿ ಊರ ಪ್ರಮುಖನೇ ಅಂಗದನನ್ನು ಪರಿಚಯಿಸಿದ್ದ. ಅದಕ್ಕೂ ಮುಂದಿನ ಮಿಲನೋತ್ಸವದಲ್ಲಿ ಅಂಗದನೇ ಈಕೆಯನ್ನು ಕಾಡಿ, ಬೇಡಿ ಒಲಿಸಿಕೊಂಡಿದ್ದ. ಅಷ್ಟು ಸುಲಭವಾಗಿ ಒಲಿಯದ ಈಕೆ ಇವನಲ್ಲಿ ಅನುರಕ್ತಳಾಗಿದ್ದು ಉಳಿದ ರಸಿಕೋತ್ತಮರ ಹುಬ್ಬೇರಿಸಿತ್ತು. ದಿನಕಳೆದಂತೆ ಏರುತ್ತಿರುವ ಇವರಿಬ್ಬರ ಪ್ರೇಮ ನೋಡಿ ಚಕೋರವೇ ತಲೆ ಬಾಗಿ ನಾಚಿತು. ಬೆಳದಿಂಗಳೇ ಬೆಳಗಾಯಿತು. ಸೂರ್ಯನೂ ಚಂದ್ರನಾದ. ಆ ಒಂದು ದುರಳ ದಿನ ಆಸ್ಥಾನದಿಂದ ಕರೆ ಬಂತು. ಮಗದೊಂದು ದೇಶದ ಪಂಡಿತನ ಎದುರು ಈಕೆಯ ವಿದ್ವತ್ತನ್ನು ಒರೆ ಹಚ್ಚುವ ಶುಭ ಘಳಿಗೆ. ಅಲ್ಲಿಂದ ಮರಳಿ ವಿಜಯೋತ್ಸವದಿಂದ ಬಂದವಳನ್ನು ಎದುರುಗೊಂಡವರಲ್ಲಿ ಅಂಗದನಿರಲಿಲ್ಲ. ಕರೆ ಕಳಿಸಿದ್ದಕ್ಕೆ ಪ್ರತ್ತ್ಯುತ್ತರವಾಗಿ ಮದುವೆಯ ಕರೆಯೋಲೆ ಬಂತು. ತನ್ನವನು ಎನ್ನುವ ಅಭಿಮಾನಕ್ಕೆ ಕಡಿವಾಣ ಬಿತ್ತು. ಅತ್ತೂ ಕರೆದು ಎಲ್ಲವೂ ಮುಗಿದು ಎಲ್ಲರೊಟ್ಟಿಗೆ ಈಕೆಯೂ ಆತನ ವಿವಾಹಕ್ಕೆ ತೆರಳಿದಳು. ಎಲ್ಲರಿಗಿಂತ ಜಾಸ್ತಿ ನರ್ತಿಸಿದಳು. ಕೊನೆಗೆ ಸುಸ್ತಾಗಿ ಮಂಟಪದ ಪಕ್ಕದಲ್ಲಿದ್ದ ಕೆರೆಬಂಡೆ ಏರಿ ಕುಳಿತಳು. ಬೆಳದಿಂಗಳ ಉತ್ಕಟ ಪ್ರೇಮರಾತ್ರಿಯೊಂದರಲ್ಲಿ ಆತ ತೊಡಿಸಿದ್ದ ಕೆಂಪು ಹವಳದ ಬಳೆ ಬಿಸಿಲಿಗೆ ಇನ್ನೂ ಕೆಂಪಾಗಿ ಹೊಳೆಯುತ್ತಿತ್ತು. ನಿಧಾನಕ್ಕೆ ಕಳಚಿ ಕೈಯಲ್ಲಿ ಹಿಡಿದಳು. ಅದನ್ನು ನೋಡುತ್ತ ತಡೆಯಲಾಗದೇ ಎದ್ದು ಕೆರೆಯ ಒಂದೊಂದೆ ಮೆಟ್ಟಳಿಳಿಯತೊಡಗಿದಳು.

ಆ ಕೆರೆಯ ಇನ್ನೊಂದು ಬದಿ ಬಟ್ಟೆ ಒಗೆಯುತ್ತಿದ್ದ ಅಗಸ ರಾವೂತನ ಮರಿ ಮಿಮ್ಮಗನ ಪ್ರಕಾರ ಚಂದ್ರಿಕೆ ನೀರಿನಿಂದ ಎದ್ದು ಬರುತ್ತಿದ್ದನ್ನು ಮುತ್ತಾತ ನೋಡಿದ್ದನಂತೆ, ಆ ಊರಿನಲ್ಲೇ ಆಗ ಪೂಜೆ ಮಾಡುತ್ತಿದ್ದ ಅರ್ಚಕ ಕೇಶವಾಚಾರ್ಯನ ಮಿಮ್ಮಗನ ಪ್ರಕಾರ ದೇವಿಕೆರೆ(ಈಗಿನ ಹೆಸರು) ಸ್ವಚ್ಛಗೊಳಿಸಿದಾಗ ಸಿಕ್ಕ ಅಸ್ಥಿ ಪಂಜರದ ಕೈಯಲ್ಲಿ ಕೆಂಪು ಹವಳದ ಬಳೆ ಹಾಗೆ ಇತ್ತಂತೆ, ಈಗ ಮೋಟಾರ್ ಇಟ್ಟುಕೊಂಡಿರುವ ಪಲನ ಮಿಮ್ಮಗನ ಪ್ರಕಾರ ಆಕೆ ಹಾಗೇ ಈಚೆ ದಡದಿಂದ ಎದ್ದು ಬಂದವಲೇ ಅವಳ ಮೈ ಮೇಲಿದ್ದ ಎಲ್ಲ ಆಭರಣಗಳನ್ನು ಪಲನಿಗೆ ವಹಿಸಿ ಹೆಳಹೆಸರಿಲ್ಲದ ಊರಿಗೆ ಹೊರಟು ಹೋದಳಂತೆ, ಆ ಕೆಂಪು ಬಳೆ ಇನ್ನೂ ಆತನ ತಾತನ ತಿಜೋರಿಯಲ್ಲಿದೆಯಂತೆ,

ಲವ್ ಗುರು (ಅಭಿಸಾರಿಕೆಯ ಕತೆಗಳು-2)

ಫೆಬ್ರವರಿ 9, 2009

ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಅಭಿಸಾರಿಕೆ ಮಂಚದ ಕಂಭಕ್ಕೆ ಜೋತು ಬಿದ್ದು ಗುನುಗುತ್ತಾಳೆ, ಗೊಣಗುತ್ತಾಳೆ. ರಾತ್ರಿಯಾಗುತ್ತಿದ್ದಂತೆಯೇ ಆಗಷ್ಟೇ ಬಿರಿದ ಪಾರಿಜಾತದ ಕಂಪಿನಲ್ಲಿ ತಂಪಾಗುತ್ತಾಳೆ. ನವಿಲುಗರಿಗಳನ್ನು ವೀಣೆಯಂತೆ ತನ್ನ ಕಿರುಬೆರಳಲ್ಲಿ ನುಡಿಸುತ್ತಾ ತನ್ಮಯಳಾಗುತ್ತಾಳೆ. ಚಂದಿರ ಮೂಡಿಸುವ ಸೊಗೆಯ ನೆರಳು ಆಕೆಯ ಮುಖದ ಮೇಲೆ ಸುಳಿಯತೊಡಗುತ್ತದೆ. ಚೆಂದುಟಿಯ ಅಂಚಿನಲ್ಲಿ ತಾರೆಗಳು ಮೂಡುತ್ತವೆ. ಅಲ್ಲೊಂದು ಹೊಸ ಕತೆ ಹುಟ್ಟುತ್ತದೆ.

ಅಲ್ಲೊಂದು ಊರಿನಲ್ಲಿ ಲವ್ ಗುರು ಇದ್ದ. ಅವನ ಖ್ಯಾತಿ ದೂರದೂರಿಗೆ ಹಬ್ಬಿತ್ತು. ಪ್ರೇಮಿಗಳು ತಮ್ಮ ಸಮಸ್ಯೆ ನೀಗಿಸಲು ಇವನಲ್ಲಿ ಪತ್ರಿಸುತ್ತಿದ್ದರು. ಯಾವುದೇ ಗಂಭೀರ ಸಮಸ್ಯೆ ಇದ್ದರೂ ಥಟ್ ಎಂದು ಪರಿಹರಿಸುತ್ತಿದ್ದ.

ಹೀಗಿರಲು ಒಂದು ದಿನ ಪ್ರಿಯಾಳ ಪತ್ರ ಬಂತು. ಅದರಲ್ಲಿ ತಾನು ರಮೇಶನನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಆತನ ಮನೆಯವರು ಆತನಿಗೆ ಬೇರೆ ಹೆಣ್ಣೊಂದನ್ನು ಗೊತ್ತು ಪಡಿಸಿ ತನ್ನನ್ನು ದೂರ ಮಾಡಲು ಯತ್ನಿಸುತ್ತಿದಾರೆಂದು, ಆ ಕಾರಣ ಸಮಸ್ಯೆ ಬಗೆಹರಿಸಿಕೊಡಲು ಉಪಾಯ ತಿಳಿಸಲು ಕೋರಿ ಬರೆದಿದ್ದಳು. ಆ ಪತ್ರದ ಕೆಳಗೆ ರಮೇಶನ ಪತ್ರವಿತ್ತು. ತಾನು ಪ್ರಿಯಾ ಎಂಬ ಹುಡುಗಿಯನ್ನು ಪ್ರೇಮಿಸುತ್ತಿದ್ದಾಗಿ, ತನ್ನ ತಂದೆ-ತಾಯಿ ಬೇರೆ ಹುಡುಗಿಯನ್ನು ತನಗೆ ಗಂಟು ಹಾಕಲು ಯೋಚಿಸುತ್ತಿರುವುದಾಗಿ, ಇದರಿಂದ ಹೊರ ಬರಲು ದಾರಿ ತೋರಿಸಲು ಕೋರಿ ಬರೆದಿತ್ತು. ಲವ್ ಗುರು ಥಟ್ ಎಂದು ಉತ್ತರಿಸಿದ. ಪ್ಯಾರ್ ಕಿಯಾ ತೋ ಡರನಾ ಕ್ಯಾ ಎಂದು ಮುಗಲ್-ಎ-ಆಜಮ್ ಚಿತ್ರದ ಜೊತೆ ವಿವರಿಸಿ, ಪ್ರೇಮ ಅಮರವೆಂದು, ಆ ಕಾರಣ ಯಾವ ತ್ಯಾಗಕ್ಕೂ ಸಿದ್ಧವಿರಬೇಕೆಂದು, ತಂದೆ-ತಾಯಿಗಳನ್ನು ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡು ಸುಖವಾಗಿರಲು ಸೂಚಿಸಿ ಇಬ್ಬರಿಗೂ ಬರೆದ.

ಇನ್ನೊಂದು ದಿನ ಸ್ವಾತಿ ಅನ್ನುವಳ ಪತ್ರ ಬಂತು. ಅದರಲ್ಲಿ ತಾನು ರವಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಆತನ ಮನೆಯವರು ಆತನಿಗೆ ಬೇರೆ ಹೆಣ್ಣೊಂದನ್ನು ಗೊತ್ತು ಪಡಿಸಿ ತನ್ನನ್ನು ದೂರ ಮಾಡಲು ಯತ್ನಿಸುತ್ತಿದಾರೆಂದು, ಆ ಕಾರಣ ಸಮಸ್ಯೆ ಬಗೆಹರಿಸಿಕೊಡಲು ಉಪಾಯ ತಿಳಿಸಲು ಕೋರಿ ಬರೆದಿದ್ದಳು. ಆ ಪತ್ರದ ಕೆಳಗೆ ರವಿಯ ಪತ್ರವಿತ್ತು.  ಲವ್ ಗುರು ಥಟ್ ಎಂದು ಉತ್ತರಿಸಿದ. ಪ್ಯಾರ್ ಕಿಯಾ ತೋ ಡರನಾ ಕ್ಯಾ ಎಂದು ಮುಗಲ್-ಎ-ಆಜಮ್ ಚಿತ್ರದ ಜೊತೆ ವಿವರಿಸಿ, ಆ ಕಾರಣ ತಂದೆ-ತಾಯಿಗಳ ವಿರುದ್ಧ ಪ್ರೇಮದ ಸಲುವಾಗಿ ನಿಲ್ಲದ  ನಾಮರ್ಧ ಗಂಡನ್ನು ಬಿಟ್ಟು ಬಿಡಲು, ಪ್ರೇಮ ಅಮರ ಎಂದು ಸಾಯುವುದು ಹೇಗೆ ಮೂರ್ಖತನವೆಂದು,  ಆ ಕಾರಣ ತಮ್ಮ ಬದುಕನ್ನೇ ಮುಡುಪಿಟ್ಟು ತ್ಯಾಗ ಮಾಡಿದ ತಂದೆ-ತಾಯಿಗಳನ್ನು ಬಿಟ್ಟು ಓಡಿ ಹೋಗಬಾರದೆಂದು, ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತದೆಯೆಂದು, ಪರಿವರ್ತನೆಯೇ ಜಗದ ನಿಯಮವೆಂದು,  ಬೇರೆ ಮದುವೆ ಮಾಡಿಕೊಂಡು ಸುಖವಾಗಿರಲು ಸೂಚಿಸಿ ಅಕೆಗೆ ಬರೆದ.

ಸ್ವಲ್ಪ ದಿನಗಳ ನಂತರ ಲವ್ ಗುರು ಖುಷಿಯಿಂದ ಊರೆಲ್ಲ ತನ್ನ ಮಗ ರವಿ ಮತ್ತು ಚಿತ್ರಾಳ ಮದುವೆ ಕರೆಯೋಲೆ ಹಂಚುತ್ತಿದ್ದ.

ಮಾಣಿಕ್ಯ (ಅಭಿಸಾರಿಕೆಯ ಕತೆಗಳು-1)

ಫೆಬ್ರವರಿ 9, 2009

ಇದು ಪ್ರೇಮಿಗಳ ತಿಂಗಳು. ಮಂಚದ ಕೊನೆಯಲ್ಲಿ ಸಿಕ್ಕಿಸಿರುವ ನವಿಲುಗರಿಗಳ ಬಣ್ಣಗಳಲ್ಲಿ ಕಳೆದು ಹೋಗಿದ್ದೇನೆ. ಅವುಗಳ ಗಾಡ ನವಿರಾದ ಹೊಳಪು ನನ್ನ ಕಣ್ಣುಗಳಲ್ಲಿ ಮೂಡಿದೆ. ಆ ಹೊಂಬಣ್ಣದ ಲೋಕದಿಂದ ಬಂದಿಳಿದ ಅಭಿಸಾರಿಕೆ ನನ್ನ ಮುಂದೆ ನಿಂತಿದ್ದಾಳೆ. ಆಕೆಯ ಕತೆಗಳು ನಿಮಗಾಗಿ.

ಅದೊಂದು ವಜ್ರದ ಕತೆ. ದಾರಿಯ ಬದಿಯ ಈ ವಜ್ರವೊಂದಕ್ಕೆ ಅದೇ ದಾರಿಯನ್ನು ಬಳಸುತ್ತಿದ್ದ ಸೊಗಸುಗಾರ ಪಯಣಿಗನಲ್ಲಿ ಮನಸ್ಸಾಯಿತು. ಪ್ರತಿ ರಾತ್ರಿ ಅವನ ಕನಸುಗಳಲ್ಲಿ ಹೊಕ್ಕು ನರ್ತಿಸತೊಡಗಿತು. ದಿನಾ ಬೆಳಿಗ್ಗೆ ಆತ ಆ ಕನಸುಗಳನ್ನು ಮಾರತೊಡಗಿದ. ಗಿರಾಕಿಗಳು ಮುಗಿದುಬಿದ್ದು ಕನಸ ಕೊಳ್ಳತೊಡಗಿದರು. ಕಾಲ ಉರುಳಿತು.

ಪಯಣಿಗ ಈಗ ಕನಸುವಂತನಾಗಿದ್ದ. ಹಳೆ ದಾರಿಯನ್ನು ಬಿಟ್ಟು ಹೊಸ ದಾರಿಯಲ್ಲಿ ಪಯಣಿಸತೊಡಗಿದ. ಇತ್ತ  ವಜ್ರ ಕನಸುಗಳನ್ನು ಕೊಟ್ಟು ತನ್ನ ಕನಸುಗಳನ್ನು ಕಳೆದುಕೊಳ್ಳತೊಡಗಿತು. ಹೊಳಪು ಕಳೆದುಕೊಳ್ಳುತ್ತ ಆತ ಹೋದ ದಾರಿಯನ್ನೇ ದಿಟ್ಟಿಸುತ್ತಾ ಕುಳಿತು ಕೊಂಡಿತು. ಅತ್ತ ಸೊಗಸುಗಾರನ ಕನಸುಗಳು ಖಾಲಿಯಾಗತೊಡಗಿದವು. ಎಚ್ಚೆತ್ತ ಆತ ಕನಸುಗಳ ಬೆಂಬೆತ್ತಿ ವಾಪಾಸ್ಸು ಹಳೆ ದಾರಿಗೆ ಬಂದ. ಈ ಸಲ ಕನಸುಕೊಡುವ ವಜ್ರವನ್ನು ತನ್ನ ಜೊತೆ ಕರೆದೊಯ್ಯುತ್ತೇನೆ ಎಂದು ನಿಶ್ಚಯಿಸಿದ್ದ. ಸೀದಾ ಬಂದವನಿಗೆ ದಾರಿಯಲ್ಲಿ ಬಿದ್ದಿದ್ದ ಕಣ್ಣ ಕೊರೈಸುತಿದ್ದ ಆ ವಜ್ರ ಕಾಣಿಸಿತು. ಇಷ್ಟು ದಿನ ಅದು ತನ್ನ ಕಣ್ಣಿಗೆ ಬೀಳದೆ ಇದ್ದಿದಕ್ಕಾಗಿ ಪರಿತಪಿಸಿದ. ಎತ್ತಿ ಖುಷಿಯಿಂದ ತನ್ನ ಹೃದಯದಲ್ಲಿಟ್ಟು ಕೊಂಡು ಹೋದ. ಆ ವಜ್ರದ ಪಕ್ಕದಲ್ಲೇ ಈ ವಜ್ರ ಸೊರಗಿ ಮಲಗಿತ್ತು. ಕಾಲ ಉರುಳಿತು.

ಆ ದಾರಿಯಲ್ಲಿ ಹೊಸ ಪಯಣಿಗ ಬಂದ. ದಾರಿಯಲ್ಲಿ ಬಿದ್ದಿದ್ದ ಕಲ್ಲನ್ನು ತದೇಕ ಚಿತ್ತದಿಂದ ನೋಡಿದ. ಎತ್ತಿ ಹಿಡಿದು ಕಲ್ಲನ್ನು ಕತ್ತರಿಸಿ ಈ ವಜ್ರವನ್ನು ಹೊರಗೆಳೆದ. ಖುಷಿಯಿಂದ ಹೃದಯದಲ್ಲಿಟ್ಟುಕೊಂಡು ಹೋದ. ಈಗ ಈ ವಜ್ರಕ್ಕೆ ಹೊಸ ಕನಸುಗಳು. ಅದು ಹೊಸ ಪಯಣಿಗನ ಕನಸುಗಳಲ್ಲಿ ಹೋಗಿ ನರ್ತಿಸುತ್ತದೆ. ಆದರೆ ಈತ ಕನಸ ಮಾರುವುದಿಲ್ಲ. ಕಾಲ ಉರುಳಿತು.

ಕೆಲವೊಮ್ಮೆ ಈ ವಜ್ರಕ್ಕೆ  ಹಳೆ ದಾರಿಯ ನೆನಪಾಗುತ್ತದೆ. ಸೊಗಸುಗಾರನ ಕನಸಲ್ಲಿ ಹೋಗಿ ಕಳೆ ಕುಂದುತ್ತದೆ. ಆಗೆಲ್ಲ ಈತ ಬೆಳದಿಂಗಳ ರಾತ್ರಿಯಲ್ಲಿ ಮಲಗುತ್ತಾನೆ. ಈ ವಜ್ರ ರಾತ್ರಿ ಇಡೀ ಚಂದ್ರನ ಬೆಳಕ ಕುಡಿದು ಮತ್ತೆ ಬೆಳಗುತ್ತದೆ. ಇನ್ನೊಂದು ಯುಗ ಉರಳುತ್ತದೆ.