ಅಂದರೆ ಯಾರು ಯಾರಿಗೆ ಏನೋ ನನಗೆ ತಿಳಿದಿಲ್ಲ. ನನಗೆ ಮಾತ್ರ ಅದು ಧ್ಯಾನದ ಕೋಣೆ, ಏಕಾಂತದ ಕೋಣೆ. ನನ್ನ ಜೊತೆ ನಾನು ಮಾತ್ರ ಮಾತಾಡಿಕೊಳ್ಳಬಹುದಾದ ಅಮೂಲ್ಯವಾದ ಜಾಗ.
ಮಂಚದ ಒಂದು ಬದಿ ಅವನಿಗೆ, ಇನ್ನೊಂದು ನನಗೆ. ನನಗೆ ನಾನು ನನ್ನ ಜಾಗದಲ್ಲೇ ಮಲಗಬೇಕು. ಆ ಕಡೆ ಈ ಕಡೆ ಆಗುವ ಹಾಗಿಲ್ಲ. ನನ್ನ ಜಾಗ ಅನ್ನೋ ಹುಚ್ಚು ವ್ಯಾಮೋಹ ನನಗೆ. ಅಲ್ಲಿರುವುದೇನಿಲ್ಲ. ಈ ಕಡೆಯ ತರಹದ್ದೇ ಆದ ದಿಂಬು ಮತ್ತು ಅದೇ ಮೆತ್ತನೆಯ ಹಾಸಿಗೆ. ಆದರೆ ನನ್ನ ಜಾಗ, ಈ ಬದಿಯ ಹಾಗಲ್ಲ. ಅದು ನನ್ನೆಲ್ಲ ಹುಚ್ಚಾಟಗಳನ್ನು ತನ್ನೊಡನೆ ಅಡಗಿಸಿ ಇಟ್ಟುಕೊಂಡ ರಹಸ್ಯ ಡಬ್ಬಿ. ನನ್ನ ಜಾಗ ಅಂದರೆ ಅಲ್ಲಿ ಮತ್ತೊಮ್ಮೆ ಮಗಚುವ ತನಕ ನನ್ನ ಗಾತ್ರಕ್ಕೆ ತಕ್ಕಂತೆಯೇ ತಗ್ಗು, ದಿಣ್ಣೆಗಳನ್ನು ಒಳಗೊಂಡಿರುವ ಹಾಸಿಗೆ, ನನ್ನ ಅಸಹನೆ, ಅಸಹಾಯಕತೆ ಕಣ್ಣೀರಾಗಿ ಹರಿದು ಕಲೆಗೆಟ್ಟಿರುವ ದಿಂಬನ್ನು ಹೊದ್ದಿರುವ ಹೊಸ ಚೆಂದದ ಚಿತ್ರದ ಕವರ್ರು. ನನ್ನೆಲ್ಲ ಕನಸುಗಳನ್ನು ಹುಟ್ಟಿಸಿದ್ದು ಇಲ್ಲಿಯೇ. ಇಲ್ಲಿ ಕನಸು ಸತ್ತಿದ್ದಿಲ್ಲ. ಕನಸುಗಳನ್ನು ನನಸಾಗಿಸುವ ಛಲವನ್ನು ಪಡೆಯುವುದು ಇಲ್ಲಿಯೇ. ನನಗಾಗಿ ನಾನು ಬದುಕಿಕೊಳ್ಳುವುದು ಎಂದು ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸುವುದು ಈ ಜಾಗವೇ. ತುಂಬಾ ಖುಷಿಯಾದಾಗ, ಬೇಸರವಾದಾಗ ಬಂದು ಬೀಳುವುದು ಇದರ ತೆಕ್ಕೆಯಲ್ಲಿಯೇ. ಬೇಸರವನ್ನು ಹಿಮ್ಮೆಟ್ಟಿಸಿದಂತೆ, ಖುಷಿಯನ್ನು ಹೆಚ್ಚಿಸುವಂತೆ ಮಾಡುವುದು ಈ ಜಾಗವೇ.
ಇವನು ಮನೆಯಲ್ಲಿದ್ದರೆ ಕೋಪಗೊಳ್ಳುವುದು, ನಾನು ಇಲ್ಲಿ ಬಿದ್ದುಕೊಂಡಿದ್ದಾಗ. ಅವನಿಗೆ ಇದು ನಾನು ಕನಸಿಸುವ ಜಾಗ ಎಂದು ಗೊತ್ತು. ನಾನು ಯಾವ ಯಾವುದೇ ಲೋಕದಲ್ಲಿ ತಿರುಗುತ್ತಿರುವುದು ಅವನಿಗೆ ಇಷ್ಟವಿಲ್ಲ. ಹಾಗೆ ಕನಸಿಸದೇ ವಾಪಾಸ್ಸು ಇಹಲೋಕಕ್ಕೆ ನಾನು ಬರುವಳಲ್ಲ. ಪದೇ ಪದೇ ಎಬ್ಬಿಸುವುದು ಅವನ ಜಾಯಮಾನ.
ಹಾಗಂತ ಈ ಕೋಣೆ ಕೇವಲ ನನಗೆ ಮಾತ್ರ ಸೀಮಿತವಾದದ್ದಲ್ಲ. ಇಬ್ಬರಿಗೂ ಸೇರಿದ್ದು. ಕನಸುಗಳು, ಆಸೆಗಳು, ಬಯಕೆಗಳು, ಕತೆಗಳು, ಎಲ್ಲವೂ ಢಾಳಾಗಿ ಬಿದ್ದುಕೊಂಡಿವೆ. ಸಿಟ್ಟು, ಮುನಿಸು ಇಲ್ಲಿ ತುಂಬಾನೇ ಕಮ್ಮಿ. ದೇಹಕ್ಕೆ ಬೇಕಾಗುವ ಅಲಂಕಾರಿಕ ವಸ್ತುಗಳು ಮತ್ತು ಆಂತರಿಕವಾಗಿ ಬೇಕಿರುವ ಒಲುಮೆ, ಸಂತಸ ಮತ್ತು ನೆಮ್ಮದಿ ಇಲ್ಲಿದೆ. ಇದು ನನ್ನ ನಿದ್ದೆಗೆ, ಧ್ಯಾನಕ್ಕೆ ಮತ್ತು ಅಲಂಕಾರಕ್ಕೆ ಮಾತ್ರ ಮೀಸಲಿಟ್ಟಿರುವ ಜಾಗ. ನಾನಿಲ್ಲಿ ಪುಸ್ತಕ ಓದುವುದಿಲ್ಲ. ಕೆಲಸ ಮಾಡುವುದಿಲ್ಲ. ಬದಲಿಗೆ ಕನಸ ಕಾಣುತ್ತೇನೆ.
ಯಾಕೋ ನನಗೆ ನನ್ನದೇ ಆದ ಒಂದು ಕೋಣೆ ಅಂತ ಯಾವತ್ತೂ ಇದ್ದಿರಲಿಲ್ಲ. ಬಾಲ್ಯದಲ್ಲಿ ವಾಸಿಸಿದ್ದ ಮನೆಯಲ್ಲಿ ಬೆಡ್ ರೂಮ್ ಇತ್ತು. ಅದು ಅಪ್ಪ-ಅಮ್ಮನದ್ದು. ಬೇಕಾದಾಗ ಅವರೊಡನೆ ನನ್ನ ಬೆಡ್ ರೂಮ್ ಸಹ ಆಗುತ್ತಿತ್ತು. ಚಿಕ್ಕ ಮನೆಯಾದ್ದರಿಂದ ಅದು ಎಲ್ಲದಕ್ಕೂ ಬಳಕೆಯಾಗುತ್ತಿತ್ತು. ಮಂಚದ ಪಕ್ಕದಲ್ಲೇ ಟಿವಿಯೂ ಇತ್ತು. ಅದು ಲಕ್ಸುರಿ ಎಂದು ಇಟ್ಟಿದ್ದಲ್ಲ. ಹೊರಗೆ ಹಾಲಿನಲ್ಲಿ ಜಾಗವಿರಲಿಲ್ಲ. ಒಂದು ಮೂಲೆಯಲ್ಲಿ ಮರದ ಮೇಜಿನ ಮೇಲೆ ಕಪ್ಪು-ಬಿಳುಪು ಟಿವಿ ಮಿಂಚುತ್ತಿದ್ದರೆ, ಅದಕ್ಕೆ ತಾಗಿ ಅಮ್ಮನ ಸಿತಾರ ಮತ್ತು ಆಲ್ಮೆರಾ ಇತ್ತು. ಆ ಕಡೆ ನೇತು ಹಾಕಿದ ಅಪ್ಪನ ಶರ್ಟುಗಳು. ಈ ಕಡೆ ಮೂಲೆಯಲ್ಲಿ ಮಂಚ ಇಡೀ ರೂಮ್ ಅನ್ನೇ ಆವರಿಸಿಕೊಂಡಿತ್ತು. ಅದರ ಮೇಲೆ ಅನೇಕ ನ್ಯಾಲೆಗಳಲ್ಲಿ ಇಟ್ಟಿದ್ದ ನಮ್ಮೆಲ್ಲರ ಬಟ್ಟೆಗಳು. ನಮ್ಮಮ್ಮನಿಗೆ ನ್ಯಾಲೆಗಳು ಅಂದರೆ ಏನಕೆ ಪ್ರೀತಿಯೋ ನಾ ಕಾಣೆ. ಆದರೆ ಅದನ್ನು ಸರಿಪಡಿಸಿ ಇಡುವುದು ನನಗಿಷ್ಟದ ಕೆಲಸಗಳಲ್ಲಿ ಒಂದಾಗಿತ್ತು. ಒಂದೇ ರೀತಿಯ ಬಣ್ಣಗಳನ್ನು, ನಮೂನೆಗಳನ್ನು ಒಂದು ಕಡೆ ಇಡುವುದು, ಎಲ್ಲದನ್ನೂ ನೀಟಾಗಿ ಭಾಗಗಳಾಗಿ ಸೇರ್ಪಡಿಸಿ, ನನ್ನದು, ತಂಗಿದು, ಅಮ್ಮಂದು, ಅಪ್ಪಂದು ಅಂತ ಜೋಡಿಸಿಡೊದು. ಹಾಗೆಲ್ಲ ಇಡಬೇಕಾದರೆ ಕನಸುಗಳು ಬೀಳ್ತಾ ಇದ್ದವು. ಹೀಗೆನೆ ಪುರವಣಿಗಳಲ್ಲಿ ನೋಡಿದ ಚೆಂದದ ವಾರ್ಡ್ ರೋಬಿನಲ್ಲಿ ಇಡಬೇಕು ಎಂದು. ಅದಕ್ಕಾಗಿ ಇನ್ನೂ ಇಪ್ಪತ್ತೈದು ವರ್ಷ ಖಾಯಬೇಕೆಂದು ಆಗ ಗೊತ್ತಿರಲಿಲ್ಲ. ಗೊತ್ತಾಗಿದ್ದರೂ ಕನಸ ಕಾಣುವುದ ಬಿಡುತ್ತಿರಲಿಲ್ಲ.
ಏಕೋ, ಆಗಿನಿಂದಲೂ ನನಗೆ ಈ ಗೋದ್ರೇಜ್ ಅಂದರೆ ಕಬ್ಬಿಣದ ಬೀರುವನ್ನು ಕಂಡರೇ ಆಗುವುದಿಲ್ಲ. ಅದರಲ್ಲಿ ಬಟ್ಟೆ ಜೋಡಿಸಿಡುವುದು ನನಗೆ ಕಷ್ಟದ ಕೆಲಸ. ಮದುವೆ ಆದ ಮೇಲೂ ನಮ್ಮ ಜೊತೆ ಮೊದಲಿದ್ದದ್ದು ಬೆತ್ತದ ಸ್ಟಾಂಡ್, ನನಗೆ ಕಬ್ಬಿಣದ ಬೀರು ಬೇಕಿರಲಿಲ್ಲ. ಮನೆಗೆ ಮರದ ವಾರ್ಡ್ ರೋಬ್ ಬಂದಾಗ ಏಷ್ಟೋ ದಿನಗಳ ತನಕ ಅದನ್ನು ನೋಡುವುದೇ ದೊಡ್ಡ ಖುಷಿಯ ಕೆಲಸ ನನಗೆ. ಈಗ ಎಲ್ಲಿ ಯಾವ ರೀತಿಯ ಹೊಸ ಹೊಸ ಡಿಸೈನ್ ನೋಡಿದಾಗಲೂ ಆಸೆ ಆಗುವುದಿಲ್ಲ. ಸುಮ್ಮನೆ ಏಷ್ಟು ಚೆಂದಾಗಿ ಮಾಡಿದ್ದಾರೆ ಎಂದು ಖುಷಿ ಪಟ್ಟಿಕೊಳ್ಳುತ್ತೇನೆ.
ಮರಳಿ ನನ್ನ ಕತೆಗೆ. ಆ ಮನೆಯಿಂದ ಹೋಗಿದ್ದು ನವೋದಯಕ್ಕೆ. ಅಲ್ಲಿ ನಮ್ಮದೇ ಅಂತ ಕೊಣೆಯಿರುತ್ತಿತ್ತು. ನನ್ನದೇ ಅಂತ ಹಾಸಿಗೆ ಇರುತ್ತಿತ್ತು. ಆ ಹಾಸಿಗೆಯೇ ಮನೆ. ಪರಿಚಯ. ಓದುವ, ತಿನ್ನುವ, ಹರಟುವ, ನಗುವ, ಆಳುವ, ವಿರಮಿಸುವ ನನ್ನದು ಅನ್ನುವ ವಸ್ತುಗಳನ್ನು ಭಾವಗಳನ್ನು ಇಟ್ಟುಕೊಳ್ಳುವ ಜಾಗ. ಹೆಚ್ಚಾಗಿ ನವೋದಯದ ವಾತಾವರಣದಿಂದಲೇ ನನಗೆ ಹಾಸಿಗೆ ಅಂದರೆ ನನ್ನ ಜಾಗ ಅಂತ ಅನಿಸುವುದೋ ಗೊತ್ತಿಲ್ಲ.
ಮರಳಿ ಮನೆಗೆ ಬಂದಾಗ ಹೊರಗೆ ಇದ್ದ ಚಿಕ್ಕ ಹಾಲ್ ನನ್ನ ಬೆಡ್ ರೂಮ್ ಆಯಿತು. ಆ ಚಿಕ್ಕ ಮಂಚವೇ ಯಾರಾದರೂ ಬಂದಾಗ ವಿಶ್ರಮಿಸುವ ಜಾಗ. ಆ ಹಾಲಿನಲ್ಲಿ ಇದ್ದದ್ದು ಕಡಿಮೆ ಜಾಗವೇ. ಈ ಕಡೆ ದಿವಾನ್ ತರಹದ ಚಿಕ್ಕ ಮಂಚ, ಎದುರಿಗೆ ಹಳೆಯ ಕಾಲದ ವೃತ್ತಾಕಾರದ ಕಬ್ಬಿಣದ ಎರಡು ಛೇರುಗಳು. ಮಧ್ಯ ಓಡಾಡಲು ಜಾಗ. ಮಂಚದ ತಲೆಯ ಹತ್ತಿರ ನಾವು ಓದಿಗೆ ಬಳಸುವ ಕಬ್ಬಿಣದ ಸಣ್ಣ ಟೇಬಲ್ ಇದ್ದರೇ, ಇನ್ನೊಂದು ಕಾಲಿನ ಹತ್ತಿರ ಅಮ್ಮನ ರಾಘವೇಂದ್ರ ಸ್ವಾಮಿಯ ಚಿತ್ರದ ಕೆಳಗೆ ಮರದ ಟೀಪಾಯಿ. ಅದರ ಮೇಲೆ ನಾನು, ಅಪ್ಪ, ಮನೆ ಓನರ್ ಭಿಕ್ಕು ರಾಯರು ಸೇರಿಕೊಂಡು ಅಪ್ಪನೇ ಮಾಡಿಕೊಟ್ಟ ಚದುರಂಗ, ಧಾಳ ಆಡುತ್ತಿದ್ದದ್ದು ನೆನಪಿದೆ.
ಈ ನನ್ನ ಬೆಡ್ ರೂಮ್ ಕಮ್ ಹಾಲ್ ನೆನಪಿದ್ದದ್ದು ಇನ್ನೊಂದು ಕಾರಣಕ್ಕೆ. ಈ ಚಿಕ್ಕ ಮಂಚಕ್ಕೆ ತಾಗಿಕೊಂಡಂತೆ ಗೋಡೆಯಲ್ಲೇ ಕುಳಿತಿರುವ ಶೋ ಕೇಸ್ ಇತ್ತು. ಅದಕ್ಕೆ ಮರದ ಫ್ರೇಮು, ಕಾಜು ಅಂತೆಲ್ಲ ಅಂದುಕೊಳ್ಳಬೇಡಿ. ಸಣ್ಣ ಮನೆಯ ಪುಟ್ಟ ಶೋಕೇಸ್ ಅದು. ನಾಲ್ಕು ಮರದ ಬೋರ್ಡ್ ಗಳನ್ನು ಅಡ್ಡಕ್ಕೆ ಹಾಕಿ ಉದ್ದದ ಸಣ್ಣ ಸಣ್ಣ ಖಾಣೆಗಳನ್ನಾಗಿ ಮಾಡಿದ್ದರು. ಅದರ ಮೇಲೆಲ್ಲಾ ನಮ್ಮ ಗೊಂಬೆಗಳು ವಿರಾಜಮಾನವಾಗಿದ್ದರೆ, ಕೆಳಗೊಂದು ಟೇಪ್ ರಿಕಾರ್ಡರ್ ಮತ್ತು ನನ್ನ ಕಾಲೇಜಿನ ಪುಸ್ತಕಗಳು. ಮತ್ತು ಅದರ ಮಧ್ಯ ತಂಗಿಯಿಂದ ಅಡಗಿಡಿಸುತ್ತಿದ್ದ ನನ್ನ ಡೈರಿ ಮತ್ತು ಅವನಿಗೆ ಬರೆದ ಪತ್ರಗಳು. ನವೋದಯದಲ್ಲಿ ಪತ್ರಿಸುವ ಗೀಳಿದ್ದ ನನಗೆ ಮತ್ತು ಪೆನ್ ಫ್ರೆಂಡ್ಸ್ ಚಾಲ್ತಿಯಲ್ಲಿದ್ದ ಆ ದಿನಗಳಲ್ಲಿ ಅವನಿಗೆ ಪತ್ರಿಸುವುದು ತಪ್ಪು ಏಕೆಂದು ಅರ್ಥವಾಗುತ್ತಿರಲಿಲ್ಲ. ಅದೇನು ಲವ್ ಗಿವ್ ಆಗಿರಲಿಲ್ಲ. ಆಗಿದ್ದರೂ ಹಾಗಂತ ನಾನು ಒಪ್ಪುತ್ತಿರಲಿಲ್ಲ. ಏಕೆಂದರೆ ಅಂದಿನಿಂದ ಇಂದಿಗೂ ಪ್ರೀತಿ ಅನ್ನೋದನ್ನು ಒಂದು ಭಾವದಲ್ಲಿ, ಮಾತಿನಲ್ಲಿ, ಸಂಬಂಧದಲ್ಲಿ ಕಟ್ಟಿ ಇಡೊದು ನನಗೆ ಆಗದ ಕೆಲಸ. ಜೀವನಕ್ಕೆ, ಜೀವಕ್ಕೆ ಮತ್ತು ಪ್ರೀತಿಗೆ ವ್ಯತ್ಯಾಸ ಅರ್ಥವಾಗುವುದಿಲ್ಲ ನನಗೆ.
ಹೋಗಲಿ ಬಿಡಿ. ಅಲ್ಲಿಂದ ಮತ್ತೆ ಹೋಗಿದ್ದ ಇನ್ನೊಂದು ಮನೆಯಲ್ಲಿ ಬೆಡ್ ರೂಮ್ ಅಂತೆಲ್ಲ ಇರಲಿಲ್ಲ. ದೊಡ್ಡ ಹಾಲು ಮತ್ತು ಒಳಗೆ ಅಡಿಗೆ ಮನೆ ಹಾಗೂ ಇನ್ನೊಂದು ಕೋಣೆಯ ನಡುವೆ ಪಾರ್ಟಿಶನ್ ಮಾಡಿದ್ದರು. ಅಷ್ಟೇ. ಆ ರೂಮ್ ನೆನಪಿದ್ದದ್ದು ಎರಡು ಕಾರಣಗಳಿಗೆ. ಒಂದು ಅಲ್ಲಿದ್ದ ದೊಡ್ಡ ಮರದ ಗೋಡೆಯ ಒಳಗಿನ ಕಪಾಟು. ಅದರ ಒಳಗಡೆ ಇದ್ದ ಸಿಕ್ರೇಟ್ ಕಂಪಾರ್ಟ್ಮೆಂಟ್ ಮತ್ತು ಅದರಲ್ಲಿ ದೊರೆತ ಕೀಲಿ ಕೈ. ಆ ಮನೆಯು ಅಮ್ಮನ ಕಾಲೇಜಿನ ಲೆಕ್ಚರಿಗೆ ಸೇರಿದ್ದಾದ್ದರಿಂದ, ಅವರ ಬಗೆಗೆ ಕೇಳಿದ್ದ ಕತೆಗಳಿಗೆ ಈ ಕೀಲಿ ಕೈ ನಿಲುಕದ ಕಲ್ಪನೆಯ ಪೆಟ್ಟಿಗೆಯಾಗಿತ್ತು. ಗೊತ್ತಾ, ಆ ಕೀಲಿ ಕೈ ಏನಾದರೂ ಆಗಬಹುದಿತ್ತು. ಅನೇಕ ಉಹಾ ಕತೆಗಳನ್ನು ನನ್ನಲ್ಲಿ ಹುಟ್ಟಿಸುತ್ತಿತ್ತು. ಮತ್ತೊಂದು, ಅಲ್ಲಿ ಇಟ್ಟಿದ್ದ ದೇವರಪೀಠ. ನಾನು ದೇವರಿಗೆ ಕೈ ಮುಗಿಯದಿದ್ದರೂ ಅಲಂಕಾರ ಮಾಡುವುದು ನನ್ನ ಪ್ರೀತಿಯ ಕೆಲಸ. ಅಪ್ಪ-ಅಮ್ಮನ ಇಪ್ಪತ್ತನೇಯ ಮದುವೆ ಆನಿವರ್ಸರಿಯೆಂದು ನಾನು ಮತ್ತು ನನ್ನ ತಂಗಿ ಸೇರಿ ಕೊಟ್ಟ ಉಡುಗೊರೆ ಅದು. ದುಡ್ಡು ಪಜಲ್ ಗೆಂದು ಪೇಪರಿನವರು ಕೊಟ್ಟ ಸೇರಿಸಿಟ್ಟ ಗೌರವ ಧನ.
ಹೊರಗಿನ ನಾನು ಮಲಗುತ್ತಿದ್ದ ಜಾಗದಲ್ಲಿ ಇನ್ನೂ ಅನೇಕ ಕತೆಗಳಿವೆ. ಮಲಗುತ್ತಿದ್ದ ಮಂಚದ ಪಕ್ಕದಲ್ಲೇ ಒಂದು ಕಿಟಕಿ ಇತ್ತು. ಅಲ್ಲಿಂದ ಚಂದ್ರ ಕಾಣುತ್ತಿದ್ದ. ಮೊದಲ ಪ್ರೀತಿ ಹಂಚಿಕೊಂಡಿದ್ದು ಅವನಲ್ಲೇ, ಕಳೆದದ್ದು ಹೇಳಿ ಭಿಕ್ಕಳಿಸಿದ್ದು ಅವನಲ್ಲೇ. ಮೊದಲ ಬಾರಿ ಆತನೊಡನೆ ಮಾತಾಡಿದ್ದು ಅಲ್ಲಿಟ್ಟಿದ್ದ ಫೋನಿನಲ್ಲೇ ಮತ್ತು ಎಂದಿಗೂ ಸಿಗುವುದಿಲ್ಲ ಎಂದು ಅತ್ತಿದ್ದೂ ಅದೇ ಫೋನಿನಲ್ಲೇ. ಮತ್ತೆ ಬದುಕಲು ಕಲಿತದ್ದು ಅದೇ ರೂಮಿನಲ್ಲೇ. ಅಲ್ಲೇ ಹುಟ್ಟಿದ್ದು ಹೊಚ್ಚ ಹೊಸ ಕನಸುಗಳು. ಕೈಯಾರೆ ಮಾಡಿದ ಚಿತ್ರ, ವಿಚಿತ್ರಗಳು, ಚೆನ್ನಾಗಿರುವ ಫ್ರೇಮ್ ಹಾಕಿಸಲು ದುಡ್ಡು ಸಾಕಾಗದೇ ಮರದ ಚೌಕಟ್ಟು ಹೊದ್ದ ಕೆಲಸಗಳು. ಇವನ್ನೇ ಇಟ್ಟುಕೊಂಡು ಮಾಡಿದ ಪ್ರದರ್ಶನ, ಸ್ನೇಹಿತರೊಡನೆ ಆಚರಿಸಿಕೊಂಡ ಬರ್ತ್ ಡೇಗಳು, ಪಾನಿಪೂರಿ ಪಾರ್ಟಿಗಳು, ಎ ಬಿ ವಿ ಪಿ ಸೇರಿದ್ದು, ಬಿಟ್ಟಿದ್ದು, ಕಾಲೇಜು ಇಲೆಕ್ಷನ್ನಿಗೆ ನಿಂತಿದ್ದು, ಬಿಟ್ಟಿದ್ದು, ಎಲ್ಲ ಸೇರಿ ಸೃಜನ ಕಟ್ಟಿದ್ದು, ಪ್ರೆಸ್ ಇಂಟೀರಿಯರ್ ರಾತ್ರಿ ನಿದ್ದೆ ಗೆಟ್ಟು ಮಾಡಿದ್ದು, …. ಎಲ್ಲಾ ಈ ರೂಮಿನಲ್ಲೇ. ಅಂದರೆ ಹಾಲಿನಲ್ಲೇ.
ಅದಾದ ಮೇಲೆ ಹೋದ ಮನೆಯಲ್ಲೂ ನನಗೆ ಅಂತ ಬೆಡ್ ರೂಮಿರಲಿಲ್ಲ. ಅಲ್ಲೂ ಹಾಲೇ ಎಲ್ಲ. ಅದೊಂದು ಚೆಂದದ ಮನೆ. ಸ್ವಂತಕ್ಕೆ ಬೇಕು ಎಂದು ಹೋಗಿದ್ದು. ಅಲ್ಲಿನ ಹಾಲು ದೊಡ್ಡದಾಗಿದ್ದುದಕ್ಕೆ ಅದು ನನ್ನ ಬೆಡ್ ರೂಮ್ ಅಂತ ಕರೆಯುವ ಹಾಗಿಲ್ಲ. ರಾತ್ರಿ ಹಾಲಿನ ನಡುವೆ ಹಾಸಿಗೆ ಹಾಕಿ ಮಲಗುತ್ತಿದ್ದದ್ದು. ತಂಗಿಗೆ ಆ ಮಂಚ ಸೇರಿತ್ತು. ನನಗಾವಾಗ ಚಾಪೆಯ ಮೇಲೆ ಮಲಗುವ ಹುಚ್ಚು ಜೋರಾಗಿತ್ತು. ಹಾಸಿಗೆ ಉಪಯೋಗಿಸ್ತಾ ಇರಲಿಲ್ಲ. ಈಗ ನೆನಸಿಕೊಂಡರೆ ನಗು ಬರುತ್ತೆ. ಆದರೆ ಮಾಡಿದ ಮಂಗಾಟಗಳಿಂದಲೇ ಇಂದಿನ ನಾನು ಮತ್ತೂ ಗಟ್ಟಿಯಾಗುವುದಕ್ಕೆ, ಹಳೆಯದನ್ನು ಕತೆಯ ತರಹ ಬರೆಯಲು ಸಾಧ್ಯವಾಗಿರುವುದು. ಆ ಹಾಲ್ ನೆನಪಿರುವುದು ಎರಡು ಕಾರಣಗಳಿಗೆ. ಒಂದು ನನ್ನ ಅನಿಮೇಶನ್ ಕನಸು ಹುಟ್ಟಿದ್ದೇ ಅಲ್ಲಿ ಮತ್ತು ಆ ಕನಸಿನೊಂದಿಗೆ ಹುಟ್ಟೂರು ಬಿಟ್ಟು ಮೊದಲ ಬಾರಿಗೆ ದೊಡ್ಡ ಊರಿಗೆ ಕಾಲಿಟ್ಟಿದ್ದು ಅದೇ ಹಾಲಿನಿಂದಲೇ.
ಆಮೇಲೆ ಹೊಸ ಊರು ಸೇರಿ ಮತ್ತೆ ಹಾಸ್ಟೆಲಿನಲ್ಲಿ ಹಾಸಿಗೆಯನ್ನೇ ಮತ್ತೆ ಮನೆಯನ್ನಾಗಿಸಿ, ಆಮೇಲೆ ಒಂದು ಮನೆಯನ್ನೇ ನನ್ನ ರೂಮಾಗಿಸಿ, ತದನಂತರ ಮದುವೆಯಾಗಿ ನನಗೆ ಅಂತ ಒಂದು ಬೆಡ್ ರೂಮ್ ಗಿಟ್ಟಿಸಿಕೊಂಡೆ. ಹಳೆಯ ಎಲ್ಲ ಬೆಡ್ ರೂಮ್ಗಳಲ್ಲಿ , ಹಾಲುಗಳಲ್ಲಿ ಕಂಡ ಮನೆಯ ಕನಸುಗಳು ನಿಧಾನವಾಗಿ ಒಂದೊಂದಾಗಿ ನೇರವೇರತೊಡಗಿತು. ಈಗಲೂ ಭಾಡಿಗೆ ಮನೆಯಲ್ಲೇ ಇದ್ದರೂ ನಾನು ಅಂದು ಕೊಂಡ ಹಾಗೆ ಮನೆಯಿದೆ. ಹಾಗಂತ ಎಲ್ಲವೂ ಅವನಿಂದಲೇ ಅಂತೇನೂ ಇಲ್ಲ. ಕೆಲವು ಅವನು, ಕೆಲವು ಇಬ್ಬರೂ. ಮತ್ತೆ ಹಲವು ನನ್ನ ಕನಸಿಗಾಗಿ ನಾನೇ ಮಾಡಿದ ಅನೇಕ ವಸ್ತುಗಳು. ನನ್ನ ಕನಸನ್ನು ನಾನೇ ಕಾಣಬೇಕು ಮತ್ತು ಅದನ್ನು ಸಾಧಿಸುವುದು ನನ್ನಿಂದ ಮಾತ್ರ ಸಾಧ್ಯ. ಅದನ್ನು ಇನ್ನೊಬ್ಬನ ಮೇಲೆ ಹೇರಿದರೆ ಅವರಿಗೆ ಅದು ಹೊರೆಯೇ ಆಗುತ್ತೆ ಅನ್ನೋದು ನಾನು ಕಂಡು ಕೊಂಡ ಸತ್ಯ. ಆ ಕಾರಣಕ್ಕೆ ಏನೋ ನನ್ನ ಬೆಡ್ ರೂಮಿನಲ್ಲಿ ಕನಸು ಕಾಣುವ ಧೈರ್ಯ ಮತ್ತು ಸಾಧಿಸುವ ನೆಮ್ಮದಿ ಮನೆ ಮಾಡಿದೆ.