Archive for the ‘ಪ್ರಕ್ಷುಬ್ಧ’ Category

ಪಬ್ಲಿಕ್ ಕಿಸ್ಸು ( Kiss of Love)

ನವೆಂಬರ್ 20, 2014

ನನಗೆ ಈ ವಿಷಯ ಗೊತ್ತಾಗಿದ್ದೇ ಫೇಸ್‌ಬುಕ್ ಸ್ಟೇಟಸ್ ನೋಡಿ. ಓದಿ ನಗಾಡಿಕೊಂಡೆ. ಏನೇನು ಐಡಿಯಾ ಮಾಡ್ತರಪಾ ಜನಾ ಅಂತ. ಮೊದಲು ಒಂದು ಸಲ ಪಿಂಕ್ ಚೆಡ್ಡಿ ಕ್ಯಾಂಪೇನ್ ಮಾಡಿದ್ರಲ್ವಾ, ಅದರ ನೆನಪಾಯಿತು ನೋಡಿ. ಆಮೇಲೆ ಗೂಗಲ್ ಮಾಡಿ ಇದು ಏನಪಾ ಅಂತ ತಿಳ್ಕೊಂಡೆ. ವಿಷಯ ಗೊತ್ತಾದ ಮೇಲೆ ಈ ರೀತಿ ಪ್ರೋಟೆಸ್ಟ್ ಮಾಡೋದು ತಪ್ಪು ಅಂತ ಬಿಲ್ಕುಲ್ ಅನ್ನಿಸಲಿಲ್ಲ. ವಿಕಿ ಮಾಹಿತಿ ಪ್ರಕಾರ ಪಬ್ಲಿಕ್‌ನಲ್ಲಿ ಕಿಸ್ ಕೊಡೊದು, ಅಪ್ಪಿ ಹಾಕಿಕೊಳ್ಳುದು ಕಾನೂನು ಪ್ರಕಾರ ‘ಅಪರಾಧ’ ಅಲ್ಲ ಅಂತ ಓದಿ ಸಮಾಧಾನ ಆಯಿತು. ನೀವು ಈ ಎರಡು ಕೊಂಡಿಗಳನ್ನು ಓದಿಕೊಬಹುದು. ಒಂದು, ಎರಡು.  ಆದರೂ ಸಂಸ್ಕೃತಿ ರಕ್ಷಿಸೋ ನೆಪದಲ್ಲಿ ಮಾಡೋ ಹಲ್ಲೆಗಳ ಹಿಂದಿನ ಮನಸ್ಥಿತಿ ಬದಲಾಗಲ್ಲ.

ಕೇರಳದಲ್ಲಿ ಆದ ಘಟನೆಗಳನ್ನು ಓದಿ ನೋಡಿ, ಗರ್ಭಿಣಿ ಹೆಂಗಸಿನ ಮೇಲೆ ಆಕೆ ಒಂಟಿಯಾಗಿ ಕೂತಿದ್ದಕ್ಕೇ ಹಲ್ಲೆ ಮಾಡಿದ್ದು, ಗೆಳೆಯನ ಜೊತೆ ಬೈಕಿನಲ್ಲಿ ಹೋಗುತ್ತಿದ್ದಕ್ಕೆ ಕಪಾಳಮೋಕ್ಷ ನೀಡಿದ್ದು, ಹುಡುಗ, ಹುಡುಗಿ ಒಟ್ಟಿಗೆ ಪಯಣಿಸಿದ್ದಕ್ಕೆ ಪೊಲೀಸರು ಹಿಡಿದದ್ದು, ಕೆಫೇನಲ್ಲಿ ಇಬ್ಬರು ಮುತ್ತು ಕೊಟ್ಟು ಹಗ್ ಮಾಡಿದ್ರು ಅನ್ನೋದಕ್ಕೆ ಇಡೀ ಕೆಫೆಯನ್ನೇ ಒಡೆದು ಹಾಕೋದು,…… ಇದು ಯಾವುದು ಸಹ ಸರಿ ಅಲ್ಲ. ಅದಕ್ಕಾಗಿ ಇದನ್ನೆಲ್ಲಾ ವಿರೋಧಿಸುವ ಸಲುವಾಗಿ ಹುಟ್ಟಿದ್ದು ಈ ಕಿಸ್ ಆಫ್ ಲವ್. ನಾವು ಬೀದಿಲೇ ಬಂದು ನಿಂತು ಕಿಸ್ ಕೊಡ್ತೀವಿ, ಹಗ್ ಮಾಡ್ತೀವಿ, ನೀವು ಏನ್ ಮಾಡ್ತಿ ರಪಾ ಅಂತ? ಮೊದಲು ನಿಮ್ಮ ಮನಸ್ಥಿತಿ ಬದಲಾಗಿಸಿಕೊಳ್ಳಿ, ಪ್ರೀತಿ ಮಾಡೊದಕ್ಕೆ ಮತ್ತು ಅದನ್ನು ಅಭಿವ್ಯಕ್ತಿಸೊದಕ್ಕೆ ನಿಮ್ಮ ಹಾಗೆ ನಾಗರೀಕರಾದ ನಮಗೆ ಎಲ್ಲ ಹಕ್ಕುಗಳು ಇವೆ ಅಂತ. ಹಾಗಂತ ಅಶ್ಲೀಲವಾಗಿ ಏನೇನೋ ಬೀದೀಲಿ ಮಾಡೋಕೆ ಅವಕಾಶ ಕೊಡಿ ಅಂತೇನೂ ಆಲ್ವಲ್ಲಾ? ಒಂದು ಮುತ್ತು. ಒಂದು ಅಪ್ಪುಗೆ, ಅಷ್ಟೇ.

——————————

ಅವರಿಬ್ಬರೂ ಲವರ್ಸ್. ಮನೆಯಲ್ಲಿ ಭೇಟಿ ಮಾಡೋಕೆ ಆಗಲ್ಲ ಅಂತ ಪಾರ್ಕಿನಲ್ಲಿ ಸಿಗ್ತಾರೆ. ಕೈ ಕೈ ಹಿಡಿದು ನಡೆದಾಡ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಇರ್ತಾರೆ. ಪ್ರೀತಿ ಜಾಸ್ತಿಯಾಗಿ ಅವಳು ಅವನ ಕೆನ್ನೆಗೊಂದು ಮುತ್ತು ಕೊಡ್ತಾಳೆ. ಅಷ್ಟರಲ್ಲೇ ಹಿಂದಿನಿದ ಕುಟ್ಟುವ ಬೆತ್ತದ ಸದ್ದು ಕೇಳಿಸುತ್ತೆ. ಹೋಗಿ ಹೋಗಿ ಇಲ್ಲಿಂದ, ದೂರ ಆಗಿ! ಏನೋ ತಪ್ಪು ಮಾಡಿದವರ ತರಹ ಕೈ ಕೈ ಬಿಡಿಸಿಕೊಂಡು ಅತ್ತ ಕಡೆ ಸಾಗುತ್ತಾರೆ.

ಎದುರಿಗಿನ ವಿಶಾಲ ಕೆರೆಯನ್ನು ನೋಡುತ್ತಾ ಕುಳಿತುಕೊಳ್ಳುವುದು ಅವರಿಬ್ಬರಿಗೂ ಸಂತಸದ ವಿಷಯ. ತಣ್ಣನೆಯ ಗಾಳಿಗೆ ಹಾರುವ ಅವಳ ಮುಂಗುರುಳು, ಹೊಳೆಯುವ ಕಂಗಳು, ಅವನಿಗೆ ಪ್ರೀತಿ ಬಂದು ಅವಳ ಹೆಗಲಿಗೆ ಕೈ ಹಾಕಿ ಹತ್ತಿರಕ್ಕೆ ಒತ್ತಿಕೊಳ್ಳುತ್ತಾನೆ. ಮತ್ತೆ ಹಿಂದಿನಿಂದ ಬೆತ್ತ ಕುಟ್ಟುವ ಸದ್ದು. ಏಳಿ, ಏಳಿ, ದೂರ ಆಗಿ.

ಇವರಿಬ್ಬರಿಗೂ ಸಂಜೆ ಸಮುದ್ರ ದಂಡೆಯಲ್ಲಿ ಅಡ್ಡಾಡುವುದು ತುಂಬಾ ಪ್ರೀತಿಯ ಸಂಗತಿ. ಅವತ್ತು ಏನಾಗಿತ್ತೋ ಏನೋ, ಪ್ರೀತಿ ಉಕ್ಕಿ ಬಂದು ಅವನು ಇವಳಿಗೆ ಮುತ್ತಿಕ್ಕಿದ. ಆಷ್ಟೇ. ದೂರದಲ್ಲಿದ್ದ ಪೊಲೀಸ್ ಬೈಕ್ ಹತ್ತಿರ ಬರುವರೆಗೂ ಚುಂಬಿಸುತ್ತಲೆ ಇದ್ದ. ಕತೆ ಖಲಾಸ್. ಅವಳು ಅವತ್ತು ಕರಿಮಣಿ ಹಾಕಿರಲಿಲ್ಲ ಜೊತೆಗೆ ಇವರಿಬ್ಬರೂ ಮದುವೆ ಆಗಿದ್ದಕ್ಕೆ ಸಾಕ್ಷಿಯಾದ ಮ್ಯಾರೇಜ್ ಸರ್ಟಿಫಿಕೇಟ್ ಪರ್ಸಿನಲ್ಲಿರಲಿಲ್ಲ!

ಅವರಿಬ್ಬರೂ ಜೊತೆಯಾಗಿ ಓಡಾಡುವುದು ಇವನಿಗೆ ಇಷ್ಟವಿರಲಿಲ್ಲ. ಸೀದಾ ಹೋಗಿ ‘ಅವರ’ ಬಳಿ ಹೇಳಿದ. ಅವತ್ತು ಅವಳು ಅವನ ಬೆನ್ನ ಏರಿ ಬೈಕಿನಲ್ಲಿ ಹೋಗುತ್ತಿದ್ದಳು. ಸರಿಯಾದ ಸಮಯ. ‘ಅವರು’ ಜೀಪಿನಲ್ಲಿ ಬಂದು ಗಾಡಿಗೆ ಅಡ್ಡ ಹಾಕಿದರು. ಸರಿಯಾಗಿ ಪೂಜೆಯಾಯಿತು. ಆ ರಾತ್ರಿ ಅವರಿಬ್ಬರೂ ಹುಡುಗ, ಹುಡುಗಿ ಸ್ನೇಹಿತರಾಗೊದು ನಮ್ಮ ಸಮಾಜದಲ್ಲಿ ಇಷ್ಟು ದೊಡ್ಡ ತಪ್ಪೇ ಅಂತ ಅರ್ಥವಾಗದೆ ನೊವಿನಿಂದ ಒದ್ದಾಡಿದರು. ಈ ಸಂಸ್ಕೃತಿಯ ಬಗ್ಗೆನೇ ಜಿಗುಪ್ಸೆ ಹುಟ್ಟಿತು.

————————————

ಅವಳಿಗೆ ದೇವರೆಂದರೆ ಆಯಿತು. ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡೇ ಹೊರಡೊದು. ಸಂಕಷ್ಟಿ, ನವರಾತ್ರಿ ಎಲ್ಲ ಉಪವಾಸಗಳನ್ನು ನಿಷ್ಠೆಯಿಂದ ಮಾಡುತ್ತಾಳೆ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಉದ್ದ ಜಡೆ ಬಿಟ್ಟುಕೊಂಡು ಲಂಗ ದಾವಣಿ, ಸೀರೆ ಉಡುವ ಹುಡುಗಿಯಲ್ಲ. ಆಕೆಗೆ ಜೀನ್ಸ್ ಮತ್ತು ಮಿಡಿಗಳೆಂದರೆ ತುಂಬಾ ಇಷ್ಟ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಹುಡುಗರನ್ನು ತಿಂದು ಬಿಡುವಂತೆ ನೋಡುವ, ಆಡುವ ಹುಡುಗಿಯಂತೂ ಖಂಡಿತ ಅಲ್ಲ. ಆಕೆಗೆ ಚೆರ್ರಿ ಫ್ಲೇವರಿನ ಬ್ರಿಜರ್ ತುಂಬಾ ಇಷ್ಟ. ವೋಡ್ಕಾ ಸಹ. ಪಾರ್ಟಿಗೆ ಹೋಗೋದು, ಅಲ್ಲಿ ಸ್ನೇಹಿತರ ಜೊತೆ ಮ್ಯೂಸಿಕ್ ನಲ್ಲಿ  ಕುಣಿಯೋದು ಆಕೆಯ ವೀಕೆಂಡ್ ರಿಲಾಕ್ಸ್ ಮಂತ್ರಗಳು.

ಇವಳಿಗೆ ದೇವರೆಂದರೆ ಭಕ್ತಿ ಇದೆ. ಜಾಸ್ತಿ ಏನೂ ಇಲ್ಲ. ಮನೆ, ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾಳೆ. ಅಫೀಸಿನಲ್ಲಿ ಬಾಸ್. ಆಕೆಯ ಕಾರ್ಯ ಕೌಶಲ್ಯದ ಬಗ್ಗೆ ಮಾತನಾಡುವ ಹಾಗೇನೇ ಇಲ್ಲ.  ಅಷ್ಟು ಜಾಣೆ, ಪಟ ಪಟನೆ ಮಾತನಾಡುತ್ತಾ, ಎಲ್ಲರನ್ನೂ ಹುರಿದುಂಬಿಸುವ ಅವಳು ಆಫೀಸಿನ ಎಲ್ಲರಿಗೂ ಇಷ್ಟ. ತಾಸಿಗೊಮ್ಮೆ ಹೊರಗೆ ಹೋಗಿ ಬರ್ತಾಳೆ. ಸಿಗರೇಟ್ ಸೇದೊಕೆ. ದಿನಾ ಮನೆಗೆ ಹೋದ ಮೇಲೂ ಗಂಡನ ಜೊತೆ ಒಂದು ಪೆಗ್ ಹಾಕೇ ಮಲಗೋದು.

ಈಗ ಇವರಿಬ್ಬರೂ ತಪ್ಪು, ನಮ್ಮ ” ಭಾರತೀಯ ನಾರಿ ” ಕೆಟಗಿರಿಗೆ ಸೇರುವುದಿಲ್ಲ ಎಂದು ಹೇಗೆ ಹೇಳೋದು? ಇವರಿಬ್ಬರೂ ಸುಖವಾಗಿ ತಮ್ಮ ಕುಟುಂಬದ ಜೊತೆ ಚೆನ್ನಾಗೇ ಇದ್ದಾರೆ. ಸಮಾಜದ ಜೊತೆಗೂ ಸಹ.

———————————————

ಕಾಲೇಜಿಗೆ ಹೋಗೋ ಆ ಇಬ್ಬರು ಜೋಡಿಗಳಿಗೆ ಮನಸ್ಸು ತುಂಬಾ ಕಾಮನೆಗಳು. ಕದ್ದು ಓದಿದ ಪುಸ್ತಕ, ನೋಡಿದ ಸಿನೆಮಾ, ಚಿತ್ರಗಳು ಎಲ್ಲ ನೆನಪಿಗೆ ಬರುತ್ತೆ. ಹತ್ತಿರ ಬಂದರೆ ಮೈ ಪುಳಕ. ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಾಗುವುದಿಲ್ಲ. ಮನೆಯಲ್ಲಿ ಯಾರಿಗಾದರೂ ಗೊತ್ತಾದರೆ ಮೈ ಪುಡಿಯಾಗುತ್ತೆ. ಇದೆಲ್ಲ ‘ಪಾಪ’ ಎಂದು ನಂಬಿರುವರಲ್ಲಿ ತಮ್ಮ ಈ ಹೊಸ ಭಾವನೆಗಳನ್ನು ಹೇಗೆ ಹೇಳಿಯಾರು? ಅವತ್ತು ಪಾರ್ಕಿನಲ್ಲಿ ಮೈ ಚಳಿ ಬಿಟ್ಟಿದ್ದಾಯ್ತು. ಏನಾಗುತ್ತಿದೆ ಎಂದು ಗೊತ್ತಾಗುವುದರಲ್ಲೇ ಎಲ್ಲ ಮುಗಿದು ಹೋಗಿತ್ತು.

——————————————

ನಾನು ಕೇಳಿದ್ದಂತೆ ಮೊದಲು ಸೀರೆಯ ಜೊತೆ ಕುಪ್ಪಸವಿರಲಿಲ್ಲವಂತೆ. ಮಲೆನಾಡಿನಲ್ಲಿ ಗಿಡ್ಡವಾಗೇ ಸೀರೆ ಉಡುತ್ತಿದ್ದುದಂತೆ. ಒಳಗೆ ಲಂಗವೆನ್ನುವ ಪರಿಚಯ ದೇಹಕ್ಕೆ ಆಗಿರಲಿಲ್ಲವಂತೆ. ಏಷ್ಟೋ ಜಾತಿಗಳಲ್ಲಿ ಸೊಂಟಕ್ಕಿಂತ ಮೇಲೆ ಯಾವುದೇ ಉಡುಪನ್ನು ಧರಿಸುತ್ತಿರಲಿಲ್ಲವಂತೆ. ಜೊತೆಗೆ,  ಮುಖ್ಯವಾಗಿ ಆಗೆಲ್ಲ ಹುಡುಗರು, ಗಂಡಸರು ಧೋತ್ರವನ್ನೋ, ಕುರ್ತಿಯನ್ನೋ, ಪಂಜೆಯನ್ನೋ ಉಡುತ್ತಿದ್ದರಂತೆ! ಕೂದಲು ಸಹ ಉದ್ದವಾಗಿರುತ್ತಿತ್ತು ಅಲ್ಲವೇ? ಈಗ ಮಾತ್ರ ಅವರೆಲ್ಲ ಪ್ಯಾಂಟು, ಜೀನ್ಸಿಗೆ ಬದಲಾಗಿದ್ದಾರೆ ಹಾಗೂ ಹೆಂಗಸರು ಮಾತ್ರ ಇನ್ನೂ ಸೀರೆ, ಉದ್ದ ಜಡೆ, ಕುಂಕುಮ,,…………..ಪುಣ್ಯ ಯಾರು ಲಂಗ ದಾವಣಿ ಅನ್ನುವುದಿಲ್ಲ!

ಹಳೆಯ ಶಿಲ್ಪಗಳಲ್ಲಿ, ಅಜಂತಾ ಅಥವಾ ಇತರ ಪ್ರಾಚೀನ ಚಿತ್ರಗಳಲ್ಲಿ ಹೆಂಗಸರು ತುಂಬಾ ಚೆನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಹಾಗಂತ ಮೈ ತುಂಬಾ, ಮೇಲಿನಿಂದ ಕೆಳಗಿನ ತನಕ ಮೈ ಮುಚ್ಚಿರುವ ಚಿತ್ರಗಳನ್ನು ನೀವೇನಾದರೂ ನೋಡಿದ್ದೀರಾ?

ನನಗೆ ಅದಕ್ಕೆ “ಭಾರತೀಯ ಸಂಸ್ಕೃತಿ ” ಅಂದರೇ ಏನು ಎಂದು ಯಾವಾಗಲೂ ಕನ್‌ಫ್ಯೋಷನ್.  ದೇವರೆಂದರೆ ಯಾರು, ನನಗೂ ಈ ಜಗತ್ತಿಗೂ ಏನು ಸಂಬಂಧ, ಬದುಕೆಂದರೆ ಏನು? ಬದುಕನ್ನು ಸುಖವಾಗಿ, ಸಂತೋಷವಾಗಿ ಕಳೆಯುವುದು ಹೇಗೆ, ಸಾಧಿಸುವುದು ಹೇಗೆ, ಜೀವನ ಕ್ರಮ ಹೇಗೆ,  ಧರ್ಮ, ಕಾಮ, ಅರ್ಥ, ಯೋಗ, ಧ್ಯಾನ ಇತ್ಯಾದಿಗಳೋ ಅಥವಾ ………………………….?

ನಮ್ಮ ಸಂಸ್ಕೃತಿ ಹಾಳಾಯಿತು ಎಂದು ಕೂಗುವ ಮಂದಿ, ತಮ್ಮ ಮಕ್ಕಳಿಗೆ ಈ ಯೋಗ, ಧ್ಯಾನದ ಬಗ್ಗೆ ತರಭೇತಿ ಕೊಟ್ಟಿರುತ್ತಾರಾ? ದೇವರೆಂದರೆ ಎದುರಿಗಿರುವ ಮೂರ್ತಿಯೋ, ಚಿತ್ರ ಮಾತ್ರ ಅಲ್ಲಪ್ಪಾ ಎಂದು ತಿಳಿ ಹೇಳಿರುತ್ತಾರಾ? ಸತ್ವ, ತಮಸ್, ರಜಸ್ ಎಂಬ ಗುಣಗಳ ಬಗ್ಗೆ ಹೇಳಿರುತ್ತಾರಾ? ನಮ್ಮ ಚರಿತ್ರೆಯ ಕತೆಗಳನ್ನು ಹೇಳಿರುತ್ತಾರಾ? ಪುರಾಣದ ರಾಮಾಯಣ, ಮಹಾಭಾರತಗಳನ್ನು ಕೇವಲ ಕತೆಯಾಗಿ (ದೇವರ ಅವತಾರ ಎಂದಲ್ಲದೆ) ಹೇಳಿರುತ್ತಾರಾ? ಬದುಕೆಂದರೆ ಏನು ಎಂದು ತಿಳಿ ಹೇಳಿರುತ್ತಾರಾ? ಇನ್ನೂ ಜನ್ಮ, ಕರ್ಮದ ಬಗ್ಗೆ ನಾನು ಕೇಳುವುದಿಲ್ಲ.

————————————————-

ಮುತ್ತು ಒಂದು ಸುಂದರ ಅನುಭೂತಿ. ಅದು ಎರಡು ಮನಸ್ಸುಗಳ ನಡುವಿನ ಸೇತುವೆ. ಅಮ್ಮ ಮಗುವಿಗೆ ಕೊಡುವ ಮುತ್ತು, ಮಗಳು ಅಪ್ಪನಿಗೆ ಕೊಡುವ ಮುತ್ತು, ಹೆಂಡತಿ ಗಂಡನಿಗೆ, ಅಜ್ಜ, ಅಜ್ಜಿಗೆ,….. ಒಂದು ಅಪ್ಪುಗೆಗೆ, ಒಂದು ಮುತ್ತಿಗೆ ಈ ತರಹದ್ದೇ ಜಾಗ, ಈ ತರಹದ್ದೇ ಸಮಯ ಎಂದು ನಿಗದಿ ಮಾಡಲು ಸಾಧ್ಯಾನಾ? ಅದು ಎಲ್ಲೂ , ಹೇಗೋ ಹುಟ್ಟಬಹುದು. ಅದನ್ನು ನಾಲ್ಕು ಗೋಡೆಯ ಮಧ್ಯ ಮಾತ್ರ ಇರಬೇಕೆಂದು ತೀರ್ಮಾನಿಸಲು ನಾವ್ಯಾರು? ಎಲ್ಲರಿಗೂ ಜನರ ಎದುರು ಮುದ್ದಿಸುವುದು, ಮುದ್ದಿಸಿಕೊಳ್ಳುವುದು ಇಷ್ಟವಾಗುವ ಸಂಗತಿ ಆಗಬೇಕೆಂದಿಲ್ಲ. ಅದು ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಹಾಗಂತ ಎಲ್ಲರೆದುರೇ ಮುದ್ದಿಸುವ, ಮುದ್ದಿಸ್ಕೊಳ್ಳುವ ಸಂಗಾತಿಗಳನ್ನು ದೂಷಿಸಬಹುದೆ? ನಮಗೆ ಕಾಣುವ ತಪ್ಪು ಇನ್ನೊಬ್ಬನಿಗೆ ಸರಿಯಾಗಿರಬಹುದು. ಮುತ್ತು ಎಂದರೇ ಅಸಹ್ಯವೆಂದರೆ ಮತ್ತೇನೋ ಅಂದರೆ ಏನನ್ನುವರೋ!

ನನಗೊಂದು ಕನಸಿದೆ. ಸಮುದ್ರ ದಂಡೆಯಲ್ಲಿ ಜೋಡಿ ಹಕ್ಕಿಗಳು ಹಾರಾಡಿಕೊಂಡಿರುತ್ತವೆ. ಪರಸ್ಪರ ಮುದ್ದಿಸುತ್ತ ಸುಖವಾಗಿ ನಲಿಯುತ್ತಿರುತ್ತವೆ. ಅಲ್ಲಿ ಪ್ರೀತಿಯಿದೆ, ಬಿಸಿ ಬಿಸಿ ಮೈಯಿಲ್ಲ. ಸಿಹಿ ಸಿಹಿ ಅಪ್ಪುಗೆಯಿದೆ. ಕೆಂಪು ಕೆಂಪು ಬೆಂಕಿಯ ಕಣ್ಣುಗಳಿಲ್ಲ. ಆ ಕಡೆ ಮಕ್ಕಳ ಜೊತೆ ಕೂತಿರುವ ಕುಟುಂಬಗಳು. ಅವನು ಮಗುವಿಗೊಂದು ಮುತ್ತಿಕ್ಕಿ  ಅವಳೊಡನೆ ಚುಂಬಿಸಿಕೊಳ್ಳುತ್ತಾನೆ. ಇಬ್ಬರು ಒಬ್ಬರೊಬ್ಬರನ್ನು ನೋಡಿ ಖುಷಿಯಿಂದ ನಗುತ್ತಾರೆ.  ಆನಂದ ಎಲ್ಲ ಕಡೆ ತೇಲುತ್ತಿರುತ್ತೆ.

ಹಾಗೇನೇ ನನಗೊಂದು ಆಸೆಯೂ ಇದೆ. ಪ್ರತಿದಿನ ನೀವು ಆಫೀಸಿನಿಂದ ಮನೆಗೆ ಹೋದಾಗ ನಿಮ್ಮವಳು / ನು ಹತ್ತಿರ ಬಂದು ತಬ್ಬಿ ಮುತ್ತಿಡಲಿ, ಮಗು ಬಂದು ತಬ್ಬಿಕೊಂಡು ಮುತ್ತಿಡಲಿ. ಲವ್ ಯೂ ಅನ್ನಲಿ.  ಕೆಲಸಕ್ಕೆ ಹೊರಟಾಗ ಅಪ್ಪನೋ, ಅಮ್ಮನೋ ಬಂದು ಮುತ್ತಿಡಲಿ, ಲವ್ ಯೂ ಅನ್ನಲಿ. ಸ್ನೇಹಿತರು ಸಿಕ್ಕಾಗ ಅಪ್ಪಿಕೊಂಡು ತುಂಬಾ ಖುಷಿಯಾಯಿತು ಅನ್ನಲಿ, ಸಾಧಿಸಿದಾಗ ಹೆಮ್ಮೆಯಾಯಿತು ಅನ್ನಲಿ, ಬೇಸರವಾದಾಗ ಏನು ಹೇಳದೆ ಲವ್ ಯೂ ಅನ್ನಲಿ. ಎಲ್ಲರಿಗೂ ಜಾಸ್ತಿ ಜಾಸ್ತಿ ಸಿಹಿ ಮುತ್ತು ದಕ್ಕಲಿ.

ಏನಕಂದ್ರೆ ನೀವು ಇನ್ನೊಂದು ಜೀವವನ್ನು ಮುದ್ದಿಸಿದ್ದರೆ, ಮುದ್ದಿಸಿಕೊಂಡಿದ್ದರೆ ಈ ‘ಮಧುರ ಮುತ್ತು’ ಅನ್ನೋದು ಏಷ್ಟು ಅಮೂಲ್ಯವಾದದ್ದು ಅನ್ನೋದು ಗೊತ್ತಿರುತ್ತೆ. ಅದು ಸಿಗಲು ಮತ್ತು ಕೊಡಲು ಇಬ್ಬರ ಮಧ್ಯ ಅನುಬಂಧವೂ ಬೇಕು.  ಮಗುವನ್ನು ಮುದ್ದು ಗೊಂಬೆ ಎಂದು ಮುದ್ದಿಸುವ ಮನಸ್ಥಿತಿ, ನಮ್ಮಷ್ಟೇ ದೊಡ್ಡವರನ್ನು ಮುದ್ದಿಸುವಾಗಲು ಬೇಕು. ಆ ತರಹದ ಎನರ್ಜಿ ಬೂಸ್ಟರ್ ಮುತ್ತುಗಳು ನಿಮ್ಮ ಪ್ರೀತಿ ಪಾತ್ರರಿಂದ ಸದಾ ದೊರೆಯುತ್ತಲೇ ಇರಲಿ.

————————-

ಮತ್ತು ಮುತ್ತಿನ ದಿನ ಯಶಸ್ವಿಯಾಗಲಿ.

ಚಿII ಸೌII ಕರಿಮಣಿ ಸರ

ಡಿಸೆಂಬರ್ 21, 2013

ಗೊತ್ತಾ, ಇವತ್ತು ಚಾನೆಲ್ ಬದಲಿಸ್ತಾ ಇದ್ದಾಗ ಒಂದು ಸೀರಿಯಲಿನಲ್ಲಿ ಕರಿಮಣಿ ಸರ ಮುರಿದು ಹೋಗಿದ್ದು, ಅದರಿಂದ ಗಂಡನಿಗೆ ಏನೋ ಅನಾಹುತ ಆಗುತ್ತೆ ಅಂತ ಅಳ್ತಾ ಇದ್ದದ್ದು ನನ್ನ ಕಣ್ಣಿಗೆ ಬಿತ್ತು. ಅಯ್ಯೋ ಕರ್ಮವೇ! ಅದು ಹೇಗೆ ಹರಿಯಿತು ಅನ್ನೋದನ್ನು ನೋಡಿರಲಿಲ್ಲ, ಹಾಗಾಗಿ ಮತ್ತೊಂದು ಚಾನೆಲ್ಲಿನ ಗುಂಡಿ ಒತ್ತಿದೆ. ನನಗೆ ಯಾವತ್ತೂ ಇದನ್ನೆಲ್ಲ ಬರಿಯೋರು ಗಂಡಸರೇ ಅಂತಲೇ ಡೌಟು. ನಮಗೆ ಗೊತ್ತಿಲ್ಲದ ಹಾಗೆ ನಮ್ಮ ತಲೆ ತಿರುಗಿಸಿ ಬಿಟ್ಟಿರುತ್ತಾರೆ. ಜೊತೆಗೆ ಮೊನ್ನೆ ಇನ್ನೊಂದು ನ್ಯೂಸ್ ಚಾನೆಲ್ಲಿನಲ್ಲಿ ಮಾಂಗಲ್ಯದ ಮಹಿಮೆ ಅಂದರೆ ಮಾಂಗಲ್ಯ ಧಾರಣೆ ನಿಜವಾಗಿಯೂ ನಮ್ಮ ಸಂಸ್ಕ್ರತಿಯೇ? ಅಂತೆಲ್ಲ ಚರ್ಚೆ ಮಾಡ್ತಾ ಇದ್ದಿದ್ದು ನೆನಪಾಯಿತು.

ಬಾಲ್ಯ ಕಾಲದಿಂದಲೂ ನನಗೆ ಈ ಮಾಂಗಲ್ಯದ ಬಗ್ಗೆ ಒಂದು ದೊಡ್ಡ ಡೌಟೇ ಇದೆ. ನಮ್ಮ ಮನೆಗೆ ಸ್ಥಳೀಯ ಮಠದ ಪತ್ರಿಕೆಯೊಂದು ಬರುತ್ತಾ ಇತ್ತು. ಅದರಲ್ಲಿ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದಿತ್ತು. ಹಾಗಾಗಿ ಅವರನ್ನು ಪ್ರಶ್ನಿಸಿ, ಏನಕೆ ಚಿತ್ರದ ದೇವರುಗಳು, ವಿಗ್ರಹದ ದೇವರುಗಳು ಕರಿಮಣಿ ಸರ ಹಾಕುವುದಿಲ್ಲವೆಂದು ಪತ್ರ ಬರೆದಿದ್ದೆ. ಹಲವು ತಿಂಗಳ ನಂತರ ಅವರು ಕೊಟ್ಟ ಉತ್ತರ ನನ್ನಲ್ಲಿನ ಪ್ರಶ್ನೆಯನ್ನು ಅಳಿಸಿಹಾಕಿರಲಿಲ್ಲ. ಇನ್ನೂ ಆ ಪ್ರಶ್ನೆ ಹಾಗೆ ಉಳಿದುಕೊಂಡಿದೆ. ಕೊನೆಗೆ ಕಾಲೇಜಿನ ದಿನಗಳಲ್ಲಿ ಉಪನ್ಯಾಸಕ್ಕೆ ಅಂತ ಬಂದವರೊಬ್ಬರು ಮೊದಲು ಕರಿಮಣಿ ಸರ ಅನ್ನುವುದು ಇರಲೇ ಇಲ್ಲವೆಂದು, ಆಗ  ಈಕೆ ತನ್ನ ಹೆಣ್ಣೆಂದು ಪಂಗಡದ ಇನ್ನುಳಿದವರಿಗೆ ತಿಳಿಸಲು ಕಿವಿಗೆ ಸಣ್ಣ ಮಣಿಗಳನ್ನು ಪೋಣಿಸಿ ಹಾಕಿಸುತ್ತಿದ್ದದ್ದು ಈಗ ಕರಿಮಣಿ ಸರವಾಗಿದೆ ಎಂದು ಹೇಳಿದ್ದು ನನ್ನ ಮನದಲ್ಲಿ ಇಂದಿಗೂ ನಿಂತು ಬಿಟ್ಟಿದೆ. (ಏನಕೆ ಅಂದರೆ ನನಗೂ ಹೀಗಿದ್ದೆ ಒಂದು ವಾದ ಬೇಕಾಗಿದ್ದುದು.)

ಹೆಚ್ಚಾಗಿ ಅದು ‘ರಾಮಾಚಾರಿ’ ಚಿತ್ರವಿರಬೇಕು, ಅದರಲ್ಲಿ ತಾಳಿಯೂ ಕತೆಯ ಮುಖ್ಯ ಪಾತ್ರವಾಗಿತ್ತು. ಹಾಗೆ ಮೊನ್ನೆ ನೋಡಿದ ರಮ್ಯಾ ಮತ್ತು ವಿಜಯ್ ಇದ್ದ ‘ಸೇವಂತಿ ಸೇವಂತಿ’ ಯಲ್ಲೂ ತಾಳಿ ಅನ್ನೋದು ಮುಖ್ಯ ಪಾತ್ರ.  ಇನ್ನೂ ಅನೇಕ ಹೆಸರು ನೆನಪಿರದ ಚಿತ್ರಗಳಲ್ಲಿ ಈ ತಾಳಿ ಮಾಡುವ ಅನಾಹುತಗಳನ್ನು ನೋಡಿದ್ದೇನೆ. ಯಾರೋ ಒಬ್ಬವನು ಬಂದು ತಾಳಿ ಕಟ್ಟಿಬಿಡುತ್ತಾನೆ, ಹಾಗಾಗಿ ಬೇರೆ ದಾರಿಯಿಲ್ಲದೆ ಆಕೆ ಆತನೇ ತನ್ನ ಗಂಡನೆಂದು ಅವನ ಹಿಂದೆ ಓಡುತ್ತಾಳೆ.  ಇಲ್ಲಾ , ವಿಲನ್ ವಿಧವೆಗೆ ತಾಳಿ ಕಟ್ಟು ಬಿಡ್ತಿನಿ ಅಂತ ಬರೋದು, ಮಗ ಎದ್ದು ಬಂದು ಹೊಡೆಯೊದು, ಹೀಗೆ. ಮತ್ತೆ ಅಳೋ ಅಥವಾ ಸೆಂಟಿ ಸೀನುಗಳಲ್ಲಂತೂ ಈ ಮಾಂಗಲ್ಯದ ಮೇಲೆ ಆಣೆ ಅಂತಲೂ, ಮಾಂಗಲ್ಯ ಭಾಗ್ಯ ಅಂತಲೂ ಕಣ್ಣೀರು ಇಟ್ಟು ಬಿಡ್ತಾರೆ ಅನ್ನೋಕ್ಕಿಂತ ಇಡಿಸಿ ಬಿಡ್ತಾರೆ. ನೋಡಿದೊರಿಗೆಲ್ಲ ಹೌದೋದು, ಈ  ಮಾಂಗಲ್ಯಕ್ಕೆ ಏನು ಮಹಿಮೆಯಿದೆ ಅಂತ ಅದರ ಹಿಂದೆ ಇನ್ನೂ ಬಿದ್ದಿರುತ್ತಾರೆ. ಇದನ್ನೆಲ್ಲ ಬರಿಯೋರು, ಚಿತ್ರ ಮಾಡೊರಲ್ಲಿ ಹೆಚ್ಚಿನವರು ಗಂಡಸರೇ ತಾನೇ. ನಮಗೇ ಗೊತ್ತಿಲ್ಲದ ಹಾಗೆ ನಮ್ಮ ತಲೆಯಲ್ಲಿ ಗಂಡ ಅಂದರೆ ದೇವರು ಅಂತ ಒಂದು ಇಮೇಜ್ ಕ್ರಿಯೇಟ್ ಮಾಡಿ ಬಿಡ್ತಾರೆ.

ಹೋಗಲಿ, ಈಗಿನ ಕಾಲದ ಸೀರಿಯಲ್ಲುಗಳು ಅಥವಾ ಸಿನೆಮಾಗಳಲ್ಲಿ ಇದು ಬದಲಾಗಿದೆಯಾ ಅಂದರೆ ಇನ್ನೂ ಆಗಿಲ್ಲ. ಈಗಲೂ ಮದುವೆ ಅನ್ನೋದು ಪವಿತ್ರ, ಮಾಂಗಲ್ಯ ಅನ್ನೋದು ಬಿಡಿಸಲಾಗದ ಗಂಟು ಅಂತೆಲ್ಲ ಊರು ಹೊಡೆಸಿ ಹೇಳಿಸಿ ಹೇಳಿಸಿ, ಅದನ್ನು ನೋಡಿದ ಹೆಂಗಳೆಯರು ಅದನ್ನು ಒಪ್ಪಿಕೊಂಡು ಬಿಟ್ಟಿರುತ್ತಾರೆ. ಹಾಗೆ ಮೊನ್ನೆ ಒಂದು ಧಾರಾವಾಹಿಯಲ್ಲಿ  ‘ಅಡುಗೆಮನೆ ಹೆಂಗಸಿನ ಹಕ್ಕು’ ಅಂತೆಲ್ಲ ಬರ್ತಾ ಇತ್ತು, ಅಯ್ಯೋ ರಾಮ! ಇನ್ನೂ ಹಿಂದಿ ಕಡೆ ಹೋಗಲ್ಲ. ಅವರಿಗೆ ಈ ಮಾಂಗಲ್ಯಕ್ಕಿಂತ ಸಿಂಧೂರ ಜಾಸ್ತಿ ಪವಿತ್ರ.  ‘ಏಕ್ ಚುಟುಕಿ ಸಿಂಧೂರ್ …’ ಅನ್ನೋ ಡೈಲಾಗು ಎಲ್ಲರಿಗೂ ಗೊತ್ತೇ ಇದೆ. ಮೊನ್ನೆ ನೋಡಿದ ‘ರಾಮಲೀಲಾ’ದಲ್ಲೂ ರಾಮ್ ಲೀಲಾಳಿಗೆ ಎರಡು ಸೆಂಟಿಮೆಂಟಿ ಕ್ಷಣಗಳಲ್ಲಿ, ಆಕೆ ಮಾರ್ಕೆಟಿನಿಂದ ಖರೀದಿಸಿದ್ದ ಸಿಂಧೂರದಿಂದ ಮಾಂಗ್ ಭರಾಯಿ ಮಾಡಿ ಮದುವೆ ಆಗಿ ಬಿಟ್ಟಿದ್ದ.

ಹಾಗಂತ ನನಗೆ ಕರಿಮಣಿಸರ ಹಾಕಿಕೊಳ್ಳೊರ ಬಗ್ಗೆ ಅಥವಾ ಮಾಂಗಲ್ಯ ವನ್ನು ಕಣ್ಣಿಗೆ ಒತ್ತಿಕೊಳ್ಳೊರ ಬಗ್ಗೆ ಅಗೌರವೇನು ಇಲ್ಲ. ಮೇಲೆ ಹೇಗೆಲ್ಲಾ ಹೇಳಿ, ಈಗ ಬೇರೆ ತರಹ ಷರಾ ಬರೀತಾಳಲ್ಲಪ್ಪೋ ಅಂದು ಕೊಳ್ಳಬೇಡಿ. ಅದು ಅವರವರ ನಂಬಿಕೆ, ಶ್ರಧ್ಧೆಗೆ ಬಿಟ್ಟಿದ್ದು.  ಆದರೆ ಮಾಂಗಲ್ಯದ ಹೆಸರಲ್ಲಿ ಗಂಡನ ದಬ್ಬಾಳಿಕೆಯನ್ನು, ಆತನ ಗರ್ವವನ್ನು ಸಹಿಸಿಕೊಳ್ಳುವವರ ಬಗ್ಗೆ ಅಸಹನೆ ಇದೆ. ಗಂಡ ಏನು ಮಾಡಿದರೂ ಅದನ್ನು ಹೆಂಡತಿ ಸಹಿಸಿಕೊಳ್ಳಬೇಕು ಅನ್ನುವ ಸಮಾಜದ ಅಲಿಖಿತ ನಡಾವಳಿಕೆಗೆ ನನ್ನ ಅಸಮ್ಮತಿಯಿದೆ. ಮೊನ್ನೆ ಒಂದು ಸೀರಿಯಲ್ಲಿನಲ್ಲಿ ಗೋಳೆಂದು ಆಳುತ್ತಿದ್ದ ಹೆಂಡತಿಯ ಬಳಿ, ಕೆಟ್ಟ ಗಂಡನ ಜೊತೆ ಸಹನೆಯಿಂದ ಇರು, ಆತನನ್ನು ತಿದ್ದಲು ಪ್ರೀತಿಯಿಂದ ಪ್ರಯತ್ನಿಸು, ಭಗವಂತ ಕೈ ಬಿಡಲ್ಲ ಅಂತೆಲ್ಲ ಹೇಳಿಸ್ತಾ ಇದ್ದರು. ಅದರ ಬದಲು ಆಕೆಗೆ ಮನೆಯವರ ಬಿಸಿನೆಸ್ಸಿನಲ್ಲಿ ನೀನು ಕೈ ಜೋಡಿಸು, ಕೆಲಸಕ್ಕೆ ಹೋಗು, ನಿನ್ನದೇ ಜೀವನ ಮಾಡಿಕೊಳ್ಳಲು ಕಲಿ ಅಂತೆಲ್ಲ ಬುದ್ಧಿ ಹೇಳಿಸಲೇ ಇಲ್ಲ. ಆ ಸೀನೆಲ್ಲ ಬರೆದದ್ದು ಗಂಡಸರೇ ಅಂತ ನನಗೆ ಸಿರಿಯೆಸ್ ಆಗಿ ಅನ್ನಿಸ್ತಾ ಇತ್ತು..

ಹೋಗಲಿ, ಇತ್ತೀಚಿಗೆ ಬರುವ ಒಂದು ಜಾಹೀರಾತಿನಲ್ಲೂ ಹೀಗೆ ಇದೆ. ಗಂಡನಾದವನು ಅಪರಾತ್ರಿಯಲ್ಲಿ ಹೆಂಡತಿಯನ್ನು ಎಬ್ಬಿಸಿ, ಬೆಳಿಗ್ಗೆ ತನಗೆ ಓಟ್ಸ್ ಮಾಡಿಕೊಡೆನ್ದು ಆಸೆಯಿಂದ ಕೇಳುತ್ತಾನೆ. ಕೈ ಕಾಲು ಗಟ್ಟಿ ಇರುವ ಅವನು, ಸ್ವತಃ ಎದ್ದು ಮಾಡಿ ತಿನ್ನಬಾರದಿತ್ತೆ? ಇದರ ಜೊತೆಗೆ ಬರುವ ಸೋಪು, ಡಿಟರ್ಜೆಂಟ್ ಜಾಹೀರಾತುಗಳಲ್ಲೂ ಹೀಗೇನೇ. ಎಲ್ಲದರಲ್ಲೂ ಹೆಂಗಸರೇ ಬಟ್ಟೆ ತೊಳೆಯುವವರು, ಪಾತ್ರೆ ತೊಳೆಯುವವರು, ಕೊನೆಗೆ ಟಾಯ್ಲೆಟ್ ಕ್ಲೀನ್ ಮಾಡುವವರು. ನಮಗೆ ಗೊತ್ತಿಲ್ಲದೆ ಹೆಂಗಸು ಅಂದರೆ ಹೀಗೆ, ಗಂಡಸು ಅಂದರೆ ಹೀಗೆ ಎಂದು ತಲೆಯಲ್ಲಿ ಚಿತ್ರಿತವಾಗಿ ಹೋಗಿರುತ್ತೆ.

ಅದಕ್ಕೇನೇ ಈ ಚಲಿಸುವ ಚಿತ್ರಗಳಲ್ಲಿ ಮಾಂಗಲ್ಯದ ಆಣೆ ಹಾಕಿಸುವ ಬದಲು ಎರಡು ಜೀವಗಳ ಮಧ್ಯದ ಸಂಭಂದದ ಬಗ್ಗೆ, ಗಂಡ ಮತ್ತು ಹೆಂಡತಿ ಅನ್ನೋ ಪರಿಧಿ ಮೀರಿ,  ಒಂದು ಸಂಬಂಧವನ್ನು  ಜೀವನ ಪರ್ಯಂತ ಕಾದುಕೊಂಡು, ಬೆಳೆಸಿಕೊಂಡು ಹೋಗುವುದರ ಬಗ್ಗೆ ಹೇಳಬಹುದಾಗಿತ್ತು. ನನ್ನ ಪ್ರಕಾರ ಹೆಣ್ಣೊಬ್ಬಳು ತಾನು ಒಬ್ಬನಿಗೆ ಮಾತ್ರ ಮೀಸಲು ಅನ್ನೋದನ್ನು ಮಾಗಲ್ಯ ಧರಿಸುವ ಮೂಲಕ ಹೇಳಬೇಕಾದದ್ದಿಲ್ಲ. ಅದೊಂದು ಮಾನಸಿಕ ಬದ್ಧತೆ. ಹೇಗೆ ಗಂಡಸರು ಏನನ್ನೂ ಧರಿಸದೆ ಒಬ್ಬಳಿಗೆ ಮಾತ್ರ ನಿಷ್ಟರಾಗಿರ ಬಲ್ಲರೋ ಹಾಗೆ ಹೆಂಗಸರೂ ಸಹ ಈ ತಾಳಿ, ಕರಿಮಣಿ ಸರ ಇಲ್ಲದೆಯೂ ನಂಬಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬಲ್ಲಂತವರು.

ಮತ್ತೊಂದು ವಿಷಯ ಹೇಳ್ತೇನೆ, ಕೇಳಿ. ಮೊನ್ನೆ ನನ್ನ ಕರಿಮಣಿ ಸರ ಹರಿದು ಹೋದಾಗ ನಾನು ಸಕತ್ ಖುಷಿ ಪಟ್ಟು ಬಿಟ್ಟಿದ್ದೆ. ಏನಕೆ ಗೊತ್ತಾ? ನನಗೆ ಆಗಿದ್ದ ತಾಳಿಯ ಮಧ್ಯ ಸೋನೆಗಾರ ಹಾಕಿದ್ದ ಹವಳ ಕಂಡರೇ ಇಷ್ಟವೇ ಇರಲಿಲ್ಲ. ಅದನ್ನು ತೆಗೆಸಿ, ಬೇರೆ ಡಿಸೈನ್ ಮಾಡಿಸುವ ಅಂತ ನಾನು. ಆದರೆ ಕರಿಮಣಿ ಸರಕ್ಕೆ ಏನಾದರೂ ಆದರೆ ಗಂಡನಿಗೆ ಏನೋ ಆಪತ್ತು ಬರುತ್ತೆ ಅಂತ ನಂಬಿರುವ ಮನೆಯಲ್ಲಿ ನನ್ನ ಮಾತು ನಡೆಯಲೇ ಇಲ್ಲ. ಮಂತ್ರಗಳಿಂದ ಧರಿಸಿರುವ ಅದನ್ನು ಭಂಗ ಮಾಡಬಾರದೆಂದು, ಬೇಕಾದರೆ ಹೊಸತು ಮಾಡಿಸಿಕೋ ಎಂದು ಪುಕ್ಕಟೆ ಸಲಹೆ ಕೊಟ್ಟಿದ್ದರು. ಈಗ ತಾಳಿಯ ಭಾಗವೇ ಕಿತ್ತು ಹೋಗಿ, ನಾನು ತುಂಬಾ ಖುಷಿ ಪಟ್ಟು, ಆ ಹವಳವನ್ನು ಬೀಸಾಕಿ ನನಗೆ ಬೇಕಾದ ಹಾಗೆ ಮಾಡಿಸಿ ಕೊಂಡು ಸಂತ್ರಪ್ತ ಳಾಗಿದ್ದೇನೆ. ಮನೆಲಿ ಮಾತ್ರ ಈ ವಿಷಯ ಹೇಳಿಲ್ಲ. ಓದಿದ ನೀವು ಕೇಳಕೇ ಹೋಗಬೇಡಿ. ಗೊತ್ತಾದರೆ ಆವಾಗಾಗದ ಭೂಕಂಪ ಈಗ ಆಗಿ ಬಿಡುತ್ತಷ್ಟೇ .

ಹಾಗೇನೇ ಮೊದಲೆಲ್ಲ ಪತಿಯಿಂದ ಧರಿಸಿರುವ ಕರಿಮಣಿಸರ ತೆಗೆಯಬಾರದೆಂದು ಕಟ್ಟು ನಿಟ್ಟು ಇತ್ತಂತೆ. ನನಗೆ ನೆನಪಿದ್ದಂತೆ, ಬಾಲ್ಯದಲ್ಲಿ ಅತ್ತೆಯೊಬ್ಬರು ಮಲಗುವಾಗ ಮತ್ತು ಸ್ನಾನಕ್ಕೆ ಹೋಗುವಾಗ ಮಾಂಗಲ್ಯ ತೆಗೆದಿಡುತ್ತಾರೆಂದು ಅವರನ್ನು ಮಾಡ್ ಎಂದು ತೀರ್ಮಾನಿಸಿ ಬಿಟ್ಟಿದ್ದರು. ಈಗ ಪಾರ್ಲರ್ ಮತ್ತು ಮಸಾಜ್ ಸೆಂಟರುಗಳಿಗೆ ಹೋಗುವ ಪ್ರತಿ ಹೆಂಡತಿಯರು ಕರಿಮಣಿ ಸರ ತೆಗೆದಿಟ್ಟೆ ಹೋಗುತ್ತಾರಲ್ಲವೇ? ಆ ಹೊತ್ತಲ್ಲಿ ತಮ್ಮ ಗಂಡನನ್ನು ಕಾಯ್ದುಕೊಳ್ಳೆಂದು ಯಾವ ದೇವರಿಗೆ ಹರಕೆ ಹೇಳುತ್ತಾರೋ, ನಾನು ಕಾಣೆ.

ಹೋಗಲಿ, ನೀವೇನು ಧರಿಸಿದ್ದೀರಾ? ಮದುವೆಯಾದಾಗ ಸಮಾಜದ ಸಮಕ್ಷಮದಲ್ಲಿ ಗಂಡ ಕಟ್ಟಿದ್ದ ಮಾಂಗಲ್ಯವೆ ಅಥವಾ ಅದನ್ನು ತೆಗೆದಿಟ್ಟು ನೀವೇ ಮಾಡಿಸಿಕೊಂಡ ಚಿಕ್ಕ, ತೆಳುವಿನ ಸರವೇ? ಬದ್ದತೆಗೆ ನಿಜಕ್ಕೂ ಹೀಗೊಂದು ಸರವೇ ಬೇಕಾ ? ಹೆಣ್ಣಿನ ಪ್ರತಿ ತೋರಿಸುವ ಗೌರವಕ್ಕೆ, ಆದರಕ್ಕೆ ಕುತ್ತಿಗೆಗೊಂದು ಕರಿಮಣಿ ಸರದ ಆವಶ್ಯಕತೆ ನಿಜಕ್ಕೂ ಇದೆಯಾ? ಅದಿಲ್ಲದೆ ಸಮಾಜದಲ್ಲಿ ಹೆಣ್ಣಿಗೆ ಗೌರವವೇ ಇಲ್ಲವಾಗುವ ಮನಸ್ಥಿತಿ ಬೇಕಾ ನಮಗೆ? ಹೇಳಿ.

ಹಲ್ಲಾಬೋಲ್

ಜನವರಿ 3, 2010

ಈಗಷ್ಟೆ ಈ ಸಿನೆಮಾ ನೋಡಿ ಮುಗಿಸಿದೆ. ಸುಮಾರು ತಿಂಗಳುಗಳಿಂದ ಇದ್ದ ಗೊಂದಲಗಳಿಗೆ ಅಕ್ಷರಗಳು ಸಿಕ್ಕಿತು. ನಿಜ, “ಎಂಟಿ ಟೆರರಿಸ್ಟ್” ಎಲ್ಲಿ ಹೋಯಿತು? ಅದನ್ನು ಇಲ್ಲೇ ಮುಂದುವರಿಸದೇ ಇನ್ನೊಂದು ಬ್ಲಾಗಿಗೆ ಏಕೆ ಸ್ಥಳಾಂತರಿಸಲಾಯಿತು? ಆಮೇಲೆ ಆ ಬ್ಲಾಗಿನಲ್ಲಿ ಒಂದೇ ಒಂದು ಬರಹ ಏಕೆ ಬರೆಯಲಾಗಲಿಲ್ಲ?…….ಅಸಂಖ್ಯ ಪ್ರಶ್ನೆಗಳು ನನ್ನೊಳಗೆ.

ಅದನ್ನು ಪ್ರಾರಂಭಿಸಿದಾಗ, ಇನ್ನೊಂದು ವರ್ಷದಲ್ಲಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಪಟ್ಟಿ ತಯಾರಿಸಿದ್ದೇ ಬಂತು ಹೊರತು ಏನನ್ನೂ ಕಾರ್ಯರೂಪಕ್ಕಿಳಿಸಲಾಗಲಿಲ್ಲ. ಏಕೆಂದರೆ ಹೆದರಿಕೆ. ಬಾಗಿಲು ತೆರೆದಾಗ ಪಿಸ್ತೂಲ್ ಹಿಡಿದ ಮುಸುಕುದಾರಿಗಳ ಕನಸು ಅಥವಾ ಅಂತರಜಾಲದ ಮೂಲಕ ನನ್ನ ಪಿಸಿಯನ್ನು ಜೊಂಬಿಯನ್ನಾಗಿ ಮಾಡಿ ನನ್ನೇ ಟಾರ್ಗೇಟ್ ಮಾಡಬಲ್ಲ ಅತಿರೇಕದ ಯೋಚನೆ,……

ಬೆಂಕಿ ಹತ್ತೊಕೆ ಕಿಡಿ ಸಾಕು. ಆದರೆ ಕಿಡಿ ಬೆಂಕಿ ಆಗೋಕೆ ಪೂರಕ ವಾತಾವರಣವೂ ಇರಬೇಕೆ! ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಅದೂ ಸಮಂಜಸವಾದ ನೆಲಗಟ್ಟಿನಲ್ಲಿ, ಇದು ಕಷ್ಟಸಾಧ್ಯ. ಈ ಸಂಘಟಿಸೊ ಕ್ರಿಯೆ ಇದೆಯಲ್ಲ, ಅದೂ ಇನ್ನೂ ದೊಡ್ಡದು. ನಮ್ಮದೆಲ್ಲವನ್ನೂ ದಾವೆ ಹೂಡಿ ಮುಂದುವರೆಯಬೇಕು. ಕೊನೆಗೆ ಏನೂ ಉಳಿಯತ್ತೋ ಅದನ್ನು ದಕ್ಕಿಸಿಕೊಂಡೂ ಕಳೆದದ್ದನ್ನು ’ಆಹುತಿ’ ಎಂದು ಪರಿಭಾವಿಸಿಕೊಳ್ಳಬೇಕು.

ಅದನ್ನು ಮುಂದುವರೆಸುವ ಬಗ್ಗೆ ಕೆಲವರ ಬರಿ ಮಾತನಾಡುತ್ತಿದ್ದಾಗ ಅರಿವಾಗಿದ್ದು, ನಾವೀರೊದು ಕಾರ್ಪೊರೇಟ್ ಜಗತ್ತಿನಲ್ಲಿ ಎಂದು. ಇಲ್ಲಿ ಯಾರೂ ಸುಮ್ಮನೇ ತಮ್ಮ ಜೊತೆ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿ ಫಾಯಿದೆ ಇದ್ದರೆ ಮಾತ್ರ. ಬಾಯಲ್ಲಿ ಬಣ್ಣದ ಮಾತುಗಳನ್ನು ಉಲಿಯಬಲ್ಲರು. ಏಕೆಂದರೆ ಅದು ಅವರ ಮತ್ತು ನಮ್ಮೆಲ್ಲರ ಹೊಟ್ಟೆಪಾಡು ಅಥವಾ ಪ್ರಾಕ್ಟಿಕಲ್ ರಿಯಾಲಿಟಿ.

ನಾ ಇದರ ಬಗ್ಗೆ ಬರೆಯಬಾರದು ಅಂದುಕೊಂಡಿದ್ದೆ, ಇದಕ್ಕೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಊಹಿಸಿ. ಕೆಲವೊಬ್ಬರು ಹ್ಹ ಹ್ಹಾ ನಾ ಮೊದಲೇ ಹೇಳಿದ್ದೆ ಎನ್ನುವವರು, ಇನ್ನೂ ಕೆಲವರು ಇದರಿಂದೆಲ್ಲಾ ಏನೂ ಪ್ರಯೋಜನವಿಲ್ಲ, ಬೇರೆ ಕೆಲಸ ಮಾಡಿ ಅನ್ನುವವರು,……ಅಥವಾ ಉಢಾಫೆ ಮಾಡಬಹುದು ಎಂದು.

ಮತ್ತ್ಯಾಕೆ ಬರೆದೆ. ಗೊತ್ತಿಲ್ಲ. ಅನ್ನಿಸಿದ್ದನ್ನು ಅಕ್ಷರಗಳನ್ನಾಗಿ ಹೆಣೆದು ಮನಸ್ಸಿನ ಕೂಪದಿಂದ ಮೇಲೇರಿ ಬರಲೆಂದೆ? ನಿಧಾನವಾದರೂ ಸರಿಯೇ ಸಾಧಿಸಬಲ್ಲೆವು ಎಂದ ಆ ಆಮೆಯ ಮೇಲಿನ ಪ್ರೀತಿಗೆ? ಹ್ಹ್!!

ರಕ್ತಗತ

ಮಾರ್ಚ್ 13, 2009

ಈಗಷ್ಟೇ ಪೇಪರಿನಲ್ಲಿ ಮುಂಬಯಿ ಉದ್ಯಮದ ಪ್ರಭಾವಶಾಲಿ, ಶ್ರೀಮಂತ ಕಛ್ಚಿ ವಾಗಡ್ ಸಮಾಜದವರು ಅಂತರಜಾತಿ ವಿವಾಹಕ್ಕೆ ನಿರ್ಭಂದನೆ ಹೇರಿದ್ದರ ಕುರಿತು ಓದುತ್ತಿದ್ದೆ. ತಮ್ಮ ಸಮಾಜದ ರೀತಿ-ನೀತಿ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕಾರಣ ಮುಂದಿಟ್ಟು ಜಾತಿ ಬಿಟ್ಟು ಮದುವೆಯಾಗುವವರನ್ನು ತಮ್ಮ ಸಮಾಜದಿಂದ ಹೊರಹಾಕುವುದಾಗಿ ನಿಯಮ ರೂಪಿಸಿದ್ದಾರೆ. ಅದಕ್ಕೆ ಅವರ ಸಮಾಜದ ಯುವಕರಿಂದಲೇ ವಿರೋಧಗಳು ವ್ಯಕ್ತವಾಗಿವೆ. ಇದನ್ನೆಲ್ಲ ಓದುತ್ತಿದ್ದಂತೆ ನನ್ನ ತಲೆಯಲ್ಲಿ ಅನೇಕ ವಿಚಾರಗಳು ಹಾದು ಹೋದವು.

ಇವರು ಕೊಟ್ಟ ಕಾರಣ ತಕ್ಕ ಮಟ್ಟಿಗೆ ಸರಿಯೆಂದು ನನಗೆ ಕಾಣಿಸಿತು. ನನ್ನ ಸ್ವಂತದ ಉದಾಹರಣೆ ಕೊಡುವುದಾದರೆ ನಾನು ಹವ್ಯಕ ಮತ್ತು ಮನೆಯವರು ಕೋಟಾ ಬ್ರಾಹ್ಮಣರು. ನಾವಿಬ್ಬರೂ ಬ್ರಾಹ್ಮಣರಾದರೂ ನಮ್ಮಿಬ್ಬರ ಕುಟುಂಬಗಳ ರೀತಿ-ನೀತಿ, ಸಂಸ್ಕೃತಿ, ಆಚರಣೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮಿಬ್ಬರ ವೇದಗಳು ಹಾಗೂ ಪ್ರದೇಶ (ಜಿಲ್ಲೆ) ಬದಲಾಗಿದ್ದೂ ಕಾರಣವಿರಬಹುದು. ಉದಾಹರಣೆಗೆ ನಮ್ಮ ಮದುವೆಯ ಮೊದಲಾರ್ಧ ಸಾಗರದ ಹವ್ಯಕರಂತೆ (ಸಾಗರ ಮತ್ತು ಶಿರಸಿ ಹವ್ಯಕರ ಆಚರಣೆಗಳಲ್ಲೂ ಸಾಕಷ್ಟು ಅಂತರವಿದೆ), ಉಳಿದಾರ್ಧ ಕೋಟಾದವರಂತೆ. ಸಾಗರದ(ದಶ ಸೀಮೆ) ಕಡೆಗಳಲ್ಲಿ ಕಾಲುಂಗುರವನ್ನು ವರನ ಕಡೆಯವರು ಕೊಡಬೇಕು, ಕೋಟಾದವರಲ್ಲಿ ವಧುವಿನ ಕಡೆಯವರು. ಹೀಗಾಗಿ ನನಗೆ ಕಾಲುಂಗುರ ಯಾರೂ ತೊಡಿಸಲಿಲ್ಲ. ಶಿರಸಿಯಿಂದ ಮಂಗಳೂರಿಗೆ ವಧು ಪ್ರವೇಶಕ್ಕೆ ಹೋಗುವಾಗ ಮುಂದಿನ ಕಾರ್ಯದಲ್ಲಿ ಆಡಿಕೊಳ್ಳುವರ ಬಾಯಿಗೆ ಆಹಾರವಾಗಬಾರದೆಂದು ನಾನು ಇವರ ಗಮನಕ್ಕೆ ತಂದೆ. ತದನಂತರ ಇಬ್ಬರೂ ಸಿಕ್ರೇಟಾಗಿ ಪಕ್ಕದ ಬೆಳ್ಳಿಯಂಗಡಿಯಲ್ಲಿ ಕಾಲುಂಗುರ ಕೊಂಡೆವು. ಇನ್ನೂ ಎರಡು ಕಡೆಯ ಹಿರಿಯರಿಗೆ ಹೀಗಾಗಿತ್ತೆಂದು ವಿಷಯ ತಿಳಿಸಿಲ್ಲ:)

ನನಗೆ ನೆನಪಿದ್ದಂತೆ ನಾನು ಇಷ್ಟಪಟ್ಟಿದ್ದು ಕೋಟಾದವರು ಎಂದು ಗೊತ್ತಾದಾಗ ಅಮ್ಮನ ಮುಖ ಗಂಭೀರವಾಗಿತ್ತು. ಗುರುಗಳು ಒಪ್ಪುವರೋ ಇಲ್ಲವೋ ಎಂಬ ದುಗುಡ. ಎಂಟು ವರ್ಷದ ಕೆಳಗೆ ನಮ್ಮ ಮನೆಯಲ್ಲಿನ ಅಂತಿಮ ನಿರ್ಧಾರಗಳು  ಈಗಿನಷ್ಟು ಸಂಸ್ಥಾನದ ಮೇಲೆ ನಿರ್ಭರವಾಗಿರಲಿಲ್ಲ. ನಾವು ಬಹು ಮುಂಚಿನಿಂದಲೇ ಶಿರಸಿಯಲ್ಲಿ ಸೆಟಲ್ ಆಗಿದ್ದರಿಂದ ಅಮ್ಮನ ತವರಿನ ಮಠವಾಗಿದ್ದ ಸ್ವರ್ಣವಳ್ಳಿಗೆ ನಡೆದುಕೊಳ್ಳುತ್ತಿದ್ದೆವು. ಅದೂ ವರ್ಷಕ್ಕೆರಡು ಭೇಟಿಯೊಂದಿಗೆ ಮುಗಿಯುತ್ತಿತ್ತು. ಆಗ ಸಾಗರದ ಮಠದ ಬಗ್ಗೆ  ಅಲ್ಲಿನ ಬಹುತೇಕ ಜನಕ್ಕೇ ಪ್ರೀತಿಯಿರಲಿಲ್ಲ. ನಾನಾಗ ಹವ್ಯಕರ ಮಠವೆಂದರೆ ಸ್ವರ್ಣವಳ್ಳಿ ಎಂದೇ ಭಾವಿಸಿದ್ದೆ. ತದನಂತರದ ವರ್ಷಗಳಲ್ಲಿ ರಾಘವೇಶ್ವರ ಸ್ವಾಮಿಗಳು ಅಧಿಕಾರ ವಹಿಸಿದ ನಂತರ ಆ ಮಠದ ಖದಿರೇ ಬದಲಾಯಿತು. ಹೊಸ ಸ್ವಾಮಿಗಳು ಜನರೊಡನೆ ಬೆರೆತು ಬಹುಬೇಗ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದರು. ನನ್ನ ಅಪ್ಪ-ಅಮ್ಮ ಸಹ ನಿಯಮಿತವಾಗಿ ರಾಮಚಂದ್ರಾಪುರ ಮಠಕ್ಕೆ ಹೋಗಲಾರಂಭಿಸಿದರು. ಹೀಗಾಗಿ ಕುಟುಂಬದ ಪ್ರಮುಖ ನಿರ್ಧಾರಗಳನ್ನು ಸ್ವಾಮಿಗಳ ಬಳಿ ಹೇಳಿಕೊಂಡು ಆಶೀರ್ವಾದಪೂರ್ವಕವಾಗಿ ಮಂತ್ರಾಕ್ಷತೆ ಪಡೆಯುವುದು ವಾಡಿಕೆಯಾಗಿ ಹೋಯಿತು. ಈಗ ಇದೇ ಸಮಸ್ಯೆಯಾಗಿತ್ತು.

ನಾವು ಕೇಳಿದ್ದ ಪ್ರಕಾರ ಸಗೋತ್ರ ವಿವಾಹಕ್ಕೆ ಸಂಸ್ಥಾನದ ಅನುಮತಿಯಿರಲಿಲ್ಲ ( ಪೀಠ, ಸಂಸ್ಥಾನ, ಸ್ವಾಮಿಗಳು, ಮಠ ಇವುಗಳ ಮಧ್ಯ ಬೇಧಗಳಿದೆ). ಸಗೋತ್ರ ಮದುವೆಗಳಿಗೆ ಗುರುಗಳ ಆಶೀರ್ವಾದ ಕೇಳಿಬಂದರೆ ಅವರು ಅಸಮ್ಮತಿ ಸೂಚಿಸುವುದಿಲ್ಲ. ಆದರೆ ಮಂತ್ರಾಕ್ಷತೆ ನೀಡುವುದಿಲ್ಲ. ಮಂತ್ರಾಕ್ಷತೆ ದೊರಕದ ಹೊರತು ಕಾರ್ಯ ಮುಂದುವರಿಸುವಂತಿಲ್ಲ. ಇಕ್ಕಟ್ಟಿನ ಸ್ಥಿತಿ. ನಮ್ಮದು ಸಗೋತ್ರವಲ್ಲದಿದ್ದರೂ, ಹವ್ಯಕರಾದ ನಾವು ಕೋಟಾದವರಿಗೆ ಹೆಣ್ಣು ನೀಡುವುದಕ್ಕೆ ಹೀಗೆ ಏನಾದರೂ ಆದರೆ ಎಂದು ಅಮ್ಮನ ಚಿಂತೆಯಾಗಿತ್ತು. ಕೊನೆಗೆ ಸ್ವಾಮಿಗಳಿಗೆ ತ್ರಿಮತಸ್ಥ ಬ್ರಾಹ್ಮಣರ ನಡುವಿನ ಕೊಟ್ಟು-ಕೊಳ್ಳುವಿಕೆಗೆ ಸಮ್ಮತಿಯಿದೆ ಎಂದು ತಿಳಿದುಬಂದು ಅಮ್ಮ ನಿರಾಳವಾದರು.

ಮದುವೆ ಆದ ಮೇಲೆ ಅತ್ತೆಯಿಂದ ಗೊತ್ತಾದ ವಿಷಯವೆಂದರೆ ನನ್ನ ಗಂಡನ ಮನೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದವಂತೆ. ಕೋಟಾದವರು ಯಾವುದೇ ಮಠಕ್ಕೆ ಬಂಧಿತರಾಗದಿದ್ದರಿಂದ ಹಿರಿಯ ಪಂಡಿತರ ಬಳಿ ಈ ವಿಷಯ ಪ್ರಸ್ತಾಪಿಸಿದ್ದರಂತೆ. ಅವರು ಅನುಮತಿ ನೀಡಿದ ಬಳಿಕವೇ ಮಾತು ಮುಂದುವರೆದಿದ್ದು. ನಮ್ಮದು ಲವ್ ಮ್ಯಾರೇಜ್ ಆದರೂ ವಿವಾಹ ಅನ್ನೊದು ವಧು-ವರರನ್ನು ಮೀರಿ ಎರಡು ಕುಟುಂಬಗಳ ನಡುವಿನ ಸಂಬಂಧವಾಗಿಬಿಡುತ್ತದೆ.

ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಭಾರತೀಯ ಸಮಾಜ ಪದ್ಧತಿ ತುಂಬಾ ಸಂಕೀರ್ಣವಾದದ್ದು ಎಂದು ನನಗೆ ಅನ್ನಿಸುವುದರಿಂದ. ಯಾವುದನ್ನೂ ತಪ್ಪು-ಸರಿ ಎಂದು ವರ್ಗೀಕರಿಸಿ ತುಲನೆ ಮಾಡಲು ಸಾಧ್ಯವಿಲ್ಲ. ಈ ಸಂಪ್ರದಾಯ ನಮ್ಮ ರಕ್ತದಲ್ಲಿ ನಮಗರಿವಿಲ್ಲದೆ ಬೆರೆತುಕೊಂಡು ಬಿಟ್ಟಿದೆ. ಅದನ್ನು ಶೋಧಿಸಿ  ಬೇರೆ ಮಾಡುವುದು ಡಯಾಲಿಸಸ್ ಮಾಡಿದಷ್ಟೇ ಯಾತನಾಮಯ. ಪೆನ್ನಲ್ಲಿ, ಮೈಕಿನಲ್ಲಿ ಅಂತರಜಾತಿ ವಿವಾಹಗಳ ಬಗ್ಗೆ ಕುಟ್ಟಬಹುದು, ಕೂಗಾಡಬಹುದು. ಆದರೆ ಈ ತರಹದ ವಿವಾಹಗಳನ್ನು ನಿಭಾಯಿಸುತ್ತಿರುವರಿಗೆ ಇದರ ಕಷ್ಟಗಳು ಗೊತ್ತು.

ಹಾಗಂತ ನಾನು ಈ ವಿವಾಹಗಳ ವಿರೋಧಿಯೇನಲ್ಲ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಮತ್ತು ಸಾಯುವ ತನಕ ಸಂಬಂಧಗಳನ್ನು ನಿಭಾಯಿಸಿಕೊಂಡು ಹೋಗುವ ಎದೆಗಾರಿಕೆಗೆ ಬಿಟ್ಟದ್ದು. ನಮ್ಮದು ಅಂತರಜಾತಿ ವಿವಾಹ ಅಲ್ಲದಿದ್ದರೂ ಅಂತರ ಒಳಜಾತಿ ವಿವಾಹ. ಎರಡು ಕುಟುಂಬಗಳ ಸಹಕಾರ, ಬೆಂಬಲವಿದ್ದರೂ ಬದಲಾಗುವ ರೀತಿ-ನೀತಿ, ಸಂಪ್ರದಾಯ, ಆಚರಣೆಗಳಿಗೆ ನಾನಿನ್ನೂ ಒಗ್ಗಿಕೊಂಡಿಲ್ಲ. ಇನ್ನು ಕುಟುಂಬದ ವಿರೋಧ ಕಟ್ಟಿಕೊಂಡವರ ಕತೆಯೇನು? ಹಾಗೇನೆ ಬೇರೆ ದೇವರ, ಬೇರೆ ತತ್ವಗಳನ್ನೇ ಉಸಿರಾಡುವ ಪರಕೀಯ ಕುಟುಂಬಕ್ಕೆ ಹೋಗಿ ಅನುಭವಿಸುವ ಹೆಣ್ಣಿನ ಹೇಳಿಕೊಳ್ಳಲಾಗದಂತಹ ಸಂಕಟಗಳಿಗೆ ನನ್ನ ಸಹಾನುಭೂತಿಯಿದೆ.

ನಾಳೆಯಿಂದ ಎಲ್ಲ ಹೊಸದಾಗುತ್ತಾ ?

ಡಿಸೆಂಬರ್ 31, 2008

ನಾನು ಸಕತ್ ಕನ್ ಫ್ಯೂಸ್ ನಲ್ಲಿ ಇದ್ದೇನೆ. ಏನು ಮಾಡುವುದು ಅಂತ ತಿಳಿಯುತ್ತಿಲ್ಲ. ಇವತ್ತು ನಾನು ಸರ್ಕಾರ್ ಮತ್ತು ಗಾಡ್ ಫಾದರ್ ಚಿತ್ರದ ಬಗ್ಗೆ ಬರೆಯಬೇಕು ಎಂದು ಕೊಂಡಿದ್ದೆ. ಆದ್ರೆ ಈಗ ಸಾಧ್ಯವಿಲ್ಲ. ನಾನೇನು ಮಾಡಬಲ್ಲೆ ಎಂದು ತಿಳಿಯುತ್ತಿಲ್ಲ. ಬಾಯಲ್ಲಿ ಹೇಳುವುದಕ್ಕೂ, ಕೃತಿಯಲ್ಲಿ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಕೂತು ಪುಟಗಟ್ಟಳೇ ಅನ್ಯಾಯದ ವಿರುದ್ಧ ಮಾತನಾಡಬಹುದು. ಹಾಗೆ ಮಾಡಬೇಕುಹೀಗೆ ಮಾಡಬೇಕು ಎಂದು ಹೇಳಬಹುದು. ಆದರೆ ಮಾಡುವರು ಯಾರು? ಇನ್ನೂ ಲೋಗೊಕ್ಕಾಗಲಿ,ಪ್ರಬಂಕ್ಕಾಗಲಿ ಯಾರೂ ಬಂದಿಲ್ಲ. ಒಬ್ಬರಾದರು ಬರುತ್ತಾರೆ ಎಂಬ ನೀರಿಕ್ಷೆ ಯಾವಾಗ ಮುರಿಯುವುದೋ ಗೊತ್ತಿಲ್ಲ. ಹೊಸ ವರ್ಷಕ್ಕೆ ಅಂತ ಕೇಕ್ ತಿನ್ನುವುದೋ ಇಲ್ಲವೋ ಅದೂ ಗೊತ್ತಿಲ್ಲ.

ಈಗಷ್ಟೇ ನನ್ನ ಮನೆಯ ಕೆಲಸದವಳು ಸಣ್ಣ ನಿದ್ದೆ ಮಾಡಿ ಹೋದಳು. ನಿನ್ನೆಯಿಂದ ಆಕೆ ಏನು ತಿಂದಿಲ್ಲ, ನಿದ್ದೆಯನ್ನು ಮಾಡಿಲ್ಲ. ಈಗಲೂ ನಿದ್ದೆ ಬಂದಿಲ್ಲವಂತೆ. ಒಂದೇ ಸಮನೆ ಅಳುತ್ತಿದ್ದಾಳೆನಿನ್ನೆ ರಾತ್ರಿ ಕೆಯ ಮನೆಯಲ್ಲಿ ಜಗಳ. ಗಂಡ ಒಂದು ವರ್ಷದಿಂದ ಕಾಲು ಮುರಿದುಕೊಂಡು ಬಿದ್ದಿದ್ದಾನೆ. ಕಳೆದ ಒಂದು ವಾರದಿಂದ ಈಕೆಯ ಅಮ್ಮನ ಮನೆಗೆ ಹೋಗಿ ಕೂತಿದ್ದಾನೆ. ಈಕೆ ಗಂಡನ ಆಸ್ಪತ್ರೆ ಖರ್ಚಿಗೆ ದುಡ್ಡು ಹೊಂದಿಸಲು ಕಳೆದ ಎಂಟು ತಿಂಗಳಿಂದ ಕೆಲಸಕ್ಕೆ ಬರ್ತಿದ್ದಾಳೆಕೆ ಆತನನ್ನು ಅಷ್ಟು ಚೆನ್ನಾಗಿ ಆರೈಕೆ ಮಾಡಿ, ಆತನ ಮಲಮೂತ್ರಗಳನ್ನೆಲ್ಲ ತೆಗೆದಿದ್ದರೂ ಸಹ ಮೊನ್ನೆ ಊರಿಗೆ ಹೋಗುವ ಮುನ್ನ ಈಕೆಗೆ ಕೋಲಲ್ಲಿ ಬಾಸುಂಡೆ ಬರುವ ಹಾಗೆ ಬಾರಿಸಿದ್ದಾನೆ. ಹೊಟ್ಟೆಯ ಮೇಲೆ,ಕಾಲ ಮೇಲೆ ಕೆಂಪಗೆ ಬರೆ ಬಿದ್ದಿತ್ತು. ಉಳಿದವರ ಜೊತೆ ತನ್ನ ಪೌರುಷ ಕೊಚ್ಚುತ್ತಾ ಹೊಟ್ಟೆಯ ಬದಲು ಸ್ವಲ್ಪ ಮೇಲೆ ಹೊಡೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಬೇಸರ ಪಡುತ್ತಿದ್ದನಂತೆ! ಈಕೆಗೆ ತಾನು ಆತನಿಗಾಗಿ ಇಷ್ಟು ಮಾಡಿದರು ಸಹ ತನ್ನ ಬಗ್ಗೆ ಕನಿಕರ ಸಹ ತೋರಿಸದೆ ಬಾರಿಸಿದ್ದು ಆತನ ಮೇಲೆ ಜಿಗುಪ್ಸೆ ತರಿಸಿದೆ. ಜೊತೆಗೆ ಒಂದು ತಿಂಗಳಿಂದ ಕೆಯ ಅತ್ತೆ ದೂರದ ಸಂಬಂಧಿ ಮಗಳೊಬ್ಬಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಆಕೆಯೂ ಸಹ ಮನೆಯವರ ಜೊತೆ ಈಕೆಗೆ ಬಯ್ಯುತ್ತಾಳನ್ತೆನಿನ್ನೆ ಜಗಳ ಜಾಸ್ತಿಯಾಗಿ ಆಕೆ ಈಕೆಗೆ ಕೆಟ್ಟದಾಗಿ ಬಯ್ದಿದ್ದಾಳೆ. ಪರಕೀಯಳೊಬ್ಬಳಿನ್ದ ತನ್ನ ಮನೆಯಲ್ಲೇ ಹೇಳಿಸಿಕೊಳ್ಳೊ ದುಸ್ಥಿತಿ ಬಂದಿದ್ದು ಈಕೆಯನ್ನು ಮತ್ತಷ್ಟು ಕಂಗೆಡಿಸಿದೆ. ತಾನು ಸತ್ತರಷ್ಟೆ ತನ್ನ ಸಂಕಟಗಳಿಗೆ ಶಾಶ್ವತ ಪರಿಹಾರ ಅಂತ ಹೇಳುತ್ತಿದ್ದಾಳೆ.

ಬೆಳಿಗ್ಗೆ ಯೆಲ್ಲೊ ಪೇಜಸ್ ತೆಗೆದು ಅಲ್ಲಿದ್ದ ವುಮೆನ್ ಇನ್ ಡಿಸ್ಟ್ರೆಸ್ ಕಾಲಂನಲ್ಲಿದ್ದ ಮಹಿಳಾ ಸಹಾಯ ವಾಣಿಗೆ ಫೋನ್ ಮಾಡಿದ್ವಿ. ಈಕೆ ಆಕೆಯ ಹತ್ತಿರ ಮರಾಠಿಯಲ್ಲಿ ತನ್ನ ಕತೆ ಹೇಳಿಕೊಂಡಳು. ಆಮೇಲೆ ಆಕೆ ಇಲ್ಲೇ ಸಮೀಪವಿರುವ ಪೋಲಿಸ್ ಸ್ಟೇಷನಿನಲ್ಲಿ ಇರುವ ಮಹಿಳಾ ಸಹಾಯ್ ಕಕ್ಷಾಕ್ಕೆ ಹೋಗಲು ತಿಳಿಸಿದಳು. ಅಲ್ಲಿ ಕೆಲಸ ಮಾಡುವ ಇಬ್ಬರು ಸಮಾಜ ಸೇವಕರ ದೂರವಾಣಿ ನಂಬರ ಕೊಟ್ಟು ಅವರು ತರಹದ ಕೌಟಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಸೂಚಿಸಿದಳು. ನಾವು ಸಮಾಜ ಸೇವಕಿಗೂ ಫೋನ್ ಮಾಡಿ ನಾಳೆ ೧೧ಕ್ಕೆ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿದ್ದಾಯಿತು.

ಮೊದಲು ಒಂದು ಸಲ ಇದೇ ರೀತಿ ಜಗಳವಾಗಿ, ಮನೆಯವರೆಲ್ಲ ಸೇರಿ ಹೊಡೆದಾಗ ಈಕೆ ರಾತ್ರೋ ರಾತ್ರಿ ಪೋಲಿಸ್ ಸ್ಟೇಷನ್ ಗೆ ಹೋಗಿದ್ದಳಂತೆ. ಪೋಲಿಸರು ಮನೆಗೆ ಬಂದು ಈಕೆಯ ಗಂಡನಿಗೆ ಎರಡು ಬಾರಿಸಿ ವಾಪಸ್ಸು ಹೋಗಿದ್ದರಂತೆಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನವೇನು ಆಗಿರಲಿಲ್ಲವಂತೆ. ಈಗ ಗಲಾಟೆ ಆದ ಮೇಲೆ ಮತ್ತೆ ಅವರು ಬಂದು ಹೋಗುವುದರಿಂದ ಏನು ಪ್ರಯೋಜನವಿಲ್ಲ. ಇನ್ನೊಮ್ಮೆ ಜಗಳವಾದಾಗ ಪೋಲಿಸರು ಬಂದುಇಲ್ಲಾ ಯಾರದರೂ ಬಂದು ತನ್ನ ಪರ ನಿಲ್ಲಬೇಕು ಎಂಬುದು ಆಕೆಯ ಬೇಡಿಕೆ.

ಎದುರಿಗಿನ ಮನೆಯ ಕೆಲಸದವಳು ಈಕೆಗೆ ನೀನು ಗಂಡನನ್ನು ಬಿಟ್ಟು ಅಮ್ಮನ ಮನೆಗೆ ಹೋಗು ಎನ್ನುತ್ತಿದ್ದಾಳೆಊರಿಗೆ ಹೋಗಿ ಹೊಲದಲ್ಲಿ ಕೂಲಿ ಮಾಡಿ ಸ್ವತಂತ್ರವಾಗಿ ಬದುಕು ಅನ್ನುತ್ತಿದ್ದಾಳೆ. ಜನ ಏನು ಮಾಡಿದರು ಹೆಸರು ಹಚ್ಚುತ್ತಾರೆ. ಕಾರಣ ಅದನ್ನೆಲ್ಲ ತಲೆಯಿಂದ ತೆಗೆದು ಹಾಕಿ ಕೂಪದಿಂದ ಹೊರಹೋಗು ಅನ್ನುತ್ತಿದ್ದಾಳೆ. ಈಕೆಯ ಜಾತಿಯಲ್ಲಿ ಹೆಣ್ಮಕ್ಕಳಿಗೆ ನಾಲ್ಕು ಸಲ ಮದುವೆಯಾಗಬಹುದಂತೆನಾಲ್ಕು ವರ್ಷದ ಕೆಳಗೆ ಈಕೆ ಹೀಗೆ ಹಿಂಸೆ ತಡೆಯಲಾಗದೇ ಅಮ್ಮನ ಮನೆಗೆ ಓಡಿ ಹೋಗಿದ್ದಳಂತೆ. ಮರು ಮದುವೆಗೆ ಪ್ರಸ್ತಾಪವೂ ಬಂದು ಹುಡುಗನಿಗೂ ಈಕೆ ಒಪ್ಪಿಗೆಯಾಗಿದ್ದಳಂತೆಆದರೆ ಈಕೆಗೆ ಮತ್ತೊಬ್ಬನ ಬಳಿ ಮತ್ತೆ ಮನಸ್ಸು ಮತ್ತು ದೇಹ ಹಂಚಿಕೊಳ್ಳುವ ಮನಸ್ಸಾಗದೇ ಹಳೆಯ ಗಂಡನ ಬಳಿ ವಾಪಸ್ಸು ಬಂದಿದ್ದಳಂತೆ. ಈಕೆಗೆ ಮತ್ತು ಈಕೆಯ ಗಂಡನಿಗೆ ೧೫ ವರುಷ ಅಂತರವಿದೆ. ಆತನ ಒರಟುತನ, ಕೋಪ, ಹುಂಬ, ಕೆಟ್ಟ ವಿಚಾರ ಮತ್ತು ಮಾತುಗಳು ಮದುವೆಯ ಬಗ್ಗೆ ಈಕೆ ಕಟ್ಟಿಕೊಂಡಿದ್ದ ಎಲ್ಲ ಕನಸುಗಳನ್ನು, ಕೋಮಲ ಭಾವನೆಗಳನ್ನು ಹೊಸಕಿ ಹಾಕಿದೆ. ಮೊದಲ ಗಂಡನೇ ಸರಿ ಇಲ್ಲ. ಇನ್ನೂ ಈತನನ್ನು ಬಿಟ್ಟು ಬೇರೆಯವನನ್ನು ಕಟ್ಟಿಕೊಂಡರೆ ಆತನು ಇವನಿಗಿಂತ ಕೆಟ್ಟವನಾಗಿದ್ದರೆ ಏನು ಮಾಡಲಿ ಎಂದು ಮರು ಮದುವೆಗೆ ಹೆದರುತ್ತಿದ್ದಾಳೆ.

ಆಕೆ ತರಹದ ಗಂಡಂದಿರು, ಅತ್ತೆಯರು ಕೇವಲ ಜೋಪಡಿಯಲ್ಲಿ ಮಾತ್ರ ಇರುತ್ತಾರೆ ಎಂದುಕೊಂಡಿದ್ದಾಳೆ! ಬಿಲ್ಡಿಂಗನಲ್ಲಿ ಇರುವರೆಲ್ಲ ಸಂತೋಷದಿಂದ ಇರುತ್ತಾರೆ ಎಂದು ಚಿತ್ರಿಸಿಕೊಂಡಿದ್ದಾಳೆ. ದುಡ್ಡಿದ್ದವರು, ಓದಿರುವ ಗಂಡಂದಿರೆಲ್ಲ ಹೆಂಡತಿಯರಿಗೆ ಸುಖ ಕೊಡುತ್ತಾರೆ ಅಂದುಕೊಂಡಿದ್ದಾಳೆಅವಳ ಪ್ರಕಾರ ಬಿಲ್ಡಿಂಗನಲ್ಲಿ ಇರುವ ಓದಿರುವ ಗಂಡಂದಿರೆಲ್ಲ ಒಳ್ಳೆಯವರು, ಸಂಶಯ ಮಾಡದಿರುವರು, ನೀತಿವಂತರು! ನಾನು ಸಮಸ್ಯೆ ಎಲ್ಲ ಕಡೇನೂ ಇರುತ್ತೆ ಎಂದು ಅವಳಿಗೆ ತಿಳಿಸಲು ಹೋಗಿದ್ದು ಉಪಯೋಗವಾಗಲಿಲ್ಲ. ಆಕೆ ಬೇರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ ಬಿಡಿ. ನನಗೆ ಮೊನ್ನೆ ನೋಡಿದ ಲೈಫ್ ಇನ್ ಮೆಟ್ರೊ ನೆನಪಾಯಿತು.

ಹೋಗಲಿ ಬಿಡಿ. ನಾಳೆಯಿಂದ ಹೊಸ ವರುಷ. ಇವತ್ತು ರಾತ್ರಿ ನಮ್ಮ ಸೊಸೈಟಿಯಲ್ಲಿ ರಾತ್ರಿ ೧೦ಕ್ಕೆ ಶೋಕ ಸಭೆ ಮತ್ತು ಶೃದ್ಧಾನ್ಜಲಿ ಸಭೆ ಇದೆ. ಹೋಗಬೇಕು. ಇಲ್ಲಿ ಸಿಟಿ ಕಲೆಕ್ಟರ್ ಹೊಸವರ್ಷವನ್ನು ಆಚರಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರಂತೆಯಾಕಂದ್ರೆ ಸಲ ಜನ ಸೆಲೆಬ್ರೇಟ್ ಮಾಡದಿದ್ದಲ್ಲಿ ಅವರಿಗೆ . ಕೋಟಿ ರೆವಿನ್ಯೂ ನಷ್ಟವಾಗುತ್ತಂತೆ !

ಎಲ್ಲ ಗೊಂದಲಗಳ ನಡುವೆ ಮುಂದೆ ನಾನು ಏನು ಮಾಡೊದು ಎಂದು ಗೊತ್ತಾಗದೆ ನಿಂತಿದ್ದೇನೆ. ಕಪ್ಪು ಹಣೆ ಪಟ್ಟಿ, ಲೋಗೊ ಸ್ಪರ್ಧೆ, ಎಂಟಿ-ಟೆರರಿಸ್ಟ್ ಬ್ಲಾಗು, ಮತ್ತೆ ಸೇರಿಕೊಬೇಕು ಎಂದುಕೊಂಡಿರುವ ಲೇ ಆಫ್ ಕಾರಣದಿಂದ ಇಲ್ದೇ ಇರೋ ಹೊಸ ಖಾಲಿ ಜಾಬು, ಹಳೆ ಸ್ಟಾಕುಗಳನ್ನು ತುಂಬಿಸಿಕೊಂಡಿರುವ ಅಂಗಡಿಗಳು ( ಮತ್ತೊಮ್ಮೆ ನಿನ್ನೆ ಅಷ್ಟು ದುಡ್ಡು ತೆತ್ತು ತಂದ ಅಕ್ಕಿಯಿಂದ ಮಾಡಿದ ಅನ್ನ ಕೆಟ್ಟ ವಾಸನೆ ಹೊಡೆತಿದೆ, ರಿಟನ್ ಮಾಡಬೇಕು)……………

ಬದುಕ್ಕಿದ್ದೀನಿ

ಡಿಸೆಂಬರ್ 1, 2008

ನಿಜಕ್ಕೂ ಮಾತಿಗಿಂತ ಕೃತಿ ಲೇಸೇ ?!!

ನಾನು ಗುರುವಾರ ಬೆಳಿಗ್ಗೆಯಿಂದ ಭಯೋತ್ಪಾದನೆಗೆ ವಿರೋಧ ಸೂಚಕವಾಗಿ ಕಪ್ಪು ಹಣೆ ಪಟ್ಟಿ ಮಾಡಿದ್ದೆ. ಆದರೆ ಯಾರಿಗೂ ಏನು ಗೊತ್ತಾಗಲೇ ಇಲ್ಲ. ಮುಂಬಯಿ ಸ್ಪೋಟಕ್ಕೆ ಬ್ಲಾಗಿಗರ ಸ್ಪಂದನದ ಲಿಸ್ಟ್ ನಲ್ಲಿ ನನ್ನ ಹೆಸರೇ ಇಲ್ಲ 😦 ಷೇ ! ನಾನು ಹಾಗಾಗಿ ಹೀಗೆ ಮಾಡಿದ್ದು ಎಂದೆಲ್ಲ ಭಾಷಣ ಕೊಟ್ಟು ಮಾಡಬೇಕಿತ್ತು. ಕಾರಣ ವಿವರಿಸದೇ ಮಾಡಿಬಿಟ್ಟಿದ್ದೆ. ನಾನೇನೋ ಇದು ಮೌನದ ಸಮಯ ಎಂದು ಮಾತಾಡದೇ ವಿರೋಧ ಸೂಚಿಸಿದ್ದೆ. ಆದರೆ ಮಾತನಾಡದೇ ಮಾಡುವ ಮೌನಕ್ಕೆ ಯಾವುದೇ ಬೆಲೆ ಇಲ್ಲ ಎಂದು ಇವತ್ತು ಗೊತ್ತಾಯಿತು. ಇನ್ನೂ ಮುಂದೆ ಮೌನದ ಬಗ್ಗೆ ಮಾತನಾಡಿ ಮೌನವಾಗುತ್ತೇನೆಆದರೂ ಅಚ್ಚರಿಯಾಗುತ್ತೆ. ಎಲ್ಲ ಕಡೆ ಮಾತಿಗಿಂತ ಕೃತಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ!!

ಹಾಗಂತ ನಿಮ್ಮದೇನೂ ತಪ್ಪಿಲ್ಲ ಬಿಡಿ. ಏನೋ ಟೆಕ್ನಿಕಲ್ ಏರರ್ ಅಂದು ಕೊಂಡಿರುತ್ತೀರಾ. ಹೆಡ್ಡಿಂಗ್ ಫೋಟೋ ಅನ್ದವಾಗಿದೆ ಅನ್ನುವವರು ಸಲ ಕಪ್ಪು ಯಾಕಾಗಿದೆ ಎಂದು ಕೇಳಲಿಲ್ಲ. ! ನೀವು ಮೌನದಲ್ಲಿದ್ದೀರಾ ? (ವೈಶಾಲಿ ಒಬ್ಬರಿಗೆ ಕಾರಣ ಹೊಳೆದದ್ದು ನನ್ನ ಪುಣ್ಯ!)

ಹೋಗಲಿ ಯಾರೊಬ್ಬರೂ ನನ್ನ ಸುರಕ್ಷಿತ ವಾಗಿದ್ದೀರಾ ಎಂದು ಕೇಳಲಿಲ್ಲ (ಮೌನಗಾಳ, ಕೆನೆಕಾಫಿ ಬಿಟ್ಟು). ಸಹ ಬ್ಲಾಗೀಗ ಬದುಕಿದ್ದಾನಾ ಸತ್ತಿದ್ದಾನಾ ಅಂತಲೂ ವಿಚಾರಿಸಲಿಲ್ಲ. ಅಕ್ಕ ಪಕ್ಕದವರ ಬಗ್ಗೆ ವಿಚಾರಿಸಿಕೊಳ್ಳದ ನಾವು ನಮ್ಮಂತಾ ನರಸತ್ತವರಿಂದಲೇ ಆರಿಸಲ್ಪಟ್ಟವನಿಂದ ಪ್ರತಿಸ್ಪಂದನೆ ಬಯಸ್ತಿದ್ದೀವಿ. ನಮ್ಮೆಲ್ಲರ ಪ್ರತಿನಿಧಿಯಲ್ಲವೇ ಅವನುನಮಗಿಲ್ಲದ ಸ್ಪಂದನೆ ಅವನಿಗೆಲ್ಲಿನ್ದ ಬರುತ್ತದೆ?. ಆದರೂ ಇದಕ್ಕೆಲ್ಲ ಅವನೇ ಕಾರಣ ಎಂದು ಬೊಬ್ಬೆ ಹಾಕುತ್ತಿದ್ದೀವಿ.

ಹಾಗಂತ ನಿಮ್ಮ ಬಗ್ಗೆ ನಂಗೆ ಖಂಡಿತ ಬೇಸರವಿಲ್ಲ. ( ನಾನು ಸಹ ಶೆಟ್ಟರನ್ನು ವಿಚಾರಿಸಿಲ್ಲ ). ನಾನು ಮುಂಬಯಿವಾಸಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ನಾನೇನು ಪ್ರತಿದಿನ ನಿಮ್ಮ ಬ್ಲಾಗ್ ನೋಡಿದರು ಸಹಿತ ಕಮೆನ್ಟಿಸುತ್ತೇನೆಯೇ? ನಾನು ನಿಮ್ಮನ್ನು ವಿಚಾರಿಸಿಲ್ಲ. ಅದಕ್ಕೆ ನೀವು ನನ್ನ ವಿಚಾರಿಸಿಲ್ಲ. ಸರಿಯಿದೆ. ನಮ್ಮಲ್ಲಿ ಎಷ್ಟೋ ಜನ ಟೈಮ್ ಪಾಸ್ ಎಂದೋ, ಬೋರ್ ಆಗುತ್ತೆ ಎಂದೋ ಆಫೀಸಿನ ದುಡ್ಡಲ್ಲೇ, ಅಲ್ಲೇ ಕೂತು ಬ್ಲಾಗ್ ಓದಿ ನಮ್ಮ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿಸುತ್ತೀವಲ್ಲ. ನಮಗ್ಯಾಕೆ ಸ್ವಾಮಿ ಬೇರೆಯವರ ಉಸಾಬರಿ. ಬರೆದ್ರೆ ನೋಡೋದು, ಇಲ್ಲ ಅಂದ್ರೆ ಬೇರೆ ಬ್ಲಾಗ್ ಓದುತ್ತಾ ಇರೋದು.

ಹೋಗಲಿ ಬಿಡಿಎಲ್ಲ ಕಾಲದ ಮಹಿಮೆಈಗ ಯಾರ ಹತ್ರನೂ ಪಕ್ಕದಲ್ಲೇ ಏನಾಗ್ತಿದೆ ಎಂದು ನೋಡೋ ಪುರುಸೊತ್ತು ಇಲ್ಲಇನ್ಟರೆಸ್ಟು ಇಲ್ಲನಮ್ಮ ಬದುಕೇ ನಮ್ಮ ಮುಂದೆ ಹರಕೊಂಡು ಬಿದ್ದಿದೆಅದನ್ನು ಸರಿ ಮಾಡೋದೆ ಆಗ್ತಾ ಇಲ್ಲಇನ್ನು ಬೀದಿಲಿ ಹೋಗೋ ಮಾರಿನ ತಲೆ ಮೇಲೆ ಏಳ್ಕೊಳಕ್ಕೆ ಆಗುತ್ತಾ?
ನಾವೆಲ್ಲ ಸಾಮಾನ್ಯ ಪ್ರಜೆಗಳು. ಬುದ್ಧಿ ಇಲ್ಲದವರು, ಕೈಲಾಗದವರು. ಎರಡು ಜನ ಭಯೋತ್ಪಾದಕರನ್ನ ಅಲ್ಲಿದ್ದವರೇ ಸಾಯಿಸೋದಾ! ಜನರೆಲ್ಲ ಸೇರಿ ವಿಲನ್ ನನ್ನು ತದುಕೋದು ಬರೀ ಸಿನೆಮಾಕ್ಕೆ, ಕತೆಗೆ ಸೈ. ನಿಜ ಜೀವನದಲ್ಲಿ ಮಾಡೊಕಾಗೊಲ್ಲ. ಪೋಲಿಸ್ ಎಲ್ಲ ಡೈ ಹಾರ್ಡ್ ತರಹ ಸ್ಟನ್ಟ್ ಮಾಡೋಲ್ಲ.
ನಮ್ಮನ್ನು ನೋಡಿಕೊಳ್ಳೊಕೆ ಅನ್ತಾನೇ ಸರಕಾರ ಇರೋದಲ್ವಾ, ಅದು ಮಾಡಬೇಕಿರೊ ಕೆಲಸ ನಾವ್ಯಾಕೆ ಮಾಡಬೇಕುಜನರಿಂದ ಜನರಿಗಾಗಿ ಜನರಿಂದಲೇ ನಡೆಯೋ ಸರಕಾರನಾ, ಹೋಗಿ ಸ್ವಾಮಿ. ಸರಕಾರನೇ ಬೇರೆ, ಜನರೇ ಬೇರೆ. ಹಾಗೆಲ್ಲಾ ರಾಜಕಾರಣಿಯ ಸಾಮರ್ಥ್ಯದ ಬಗ್ಗೆ ಕೇಳೊದು ಜಾಹೀರಾತಲ್ಲಿ ಮಾತ್ರ……………………..

ಹೀಗೊಂದು ತಪ್ಪು-ಸರಿ

ನವೆಂಬರ್ 12, 2008

ಎದುರುಗಡೆ ಮನೆ ಅಜ್ಜಿಯದು ಯಾವತ್ತೂ ಒಂದೇ ತಕರಾರು. ನೂಂದ್ರೆ ನಾನು ಅವರ ಮನೆಗೆ ಹೋಗಲ್ಲ ಅಂತ. ದಿನಕ್ಕೆ ಒಂದೈದೇ ನಿಮಿಷ ಆದ್ರೂ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರಬೇಕಂತೆ. ನಂಗ್ಯಾಕೋ ………….. ಗೊತ್ತಿಲ್ಲ. ಅವರು ತಮಿಳು ಅಂತನಾ? ಎಂಬ ಗುಮಾನಿ ನನ್ನ ಬಗ್ಗೆನೇ ಇದೆ.

ಇವತ್ತು ಕೆಲಸದ ಭಾಯಿ ಹೇಳ್ತಾ ಇದ್ಲು, ಭಯ್ಯಾ ಲೋಗ್ ಖಾಲಿ ಲೋಟ ತಗೊಂಡು ಬರ್ತಾರೆ, ತುಂಬಿದ ಲೋಟ ತಗೊಂಡು ಹೋಗ್ತಾರೆ ಅಂತ. ಅವಳದ್ದು ಠಾಕರೆ ಪರ ವಕಾಲತ್ತು ನಡೆತಾ ಇತ್ತುಮುಂಬಯಿಯಲ್ಲಿ ಈಗ ಎಲ್ಲೊದ್ರೂ ಭಯ್ಯಾ ಲೋಗ್ ; ದೂದ್, ವಡಾಪಾವ್, ಪಾನಿ ಪುರಿ, ಬರ್ಫಿ, ರಿಕ್ಷಾ, ಟಾಕ್ಸಿ, ಕೂಲಿ,…….. ನಾವು (ಮರಾಠಿಗಳು) ದಿನಕ್ಕೆ ಎಂಟು ಗಂಟಾ ಕೆಲಸ ಮಾಡ್ತಿವಿ ಅಂದ್ರೆ ಇವರು ೧೨ ಗಂಟಾ ಮಾಡಿಕೊಡ್ತಿವಿ ಅಂತಾರೆ. ನಮಗಿಂತ ಪಚಾಸ್ ರೂಪೈ ಕಡಿಮೆಗೆ ಕೆಲಸ ಮಾಡಿಕೊಡ್ತಾರೆ. ನಮ್ಮ ಹೊಟ್ಟೆಗೆ ಹೊಡಿತಾರೆ…..

ನಂಗೆ ಅವಳ ಅಸಹನೆ ಅರ್ಥ ಆಗುತ್ತೆ. ಯಾಕಂದ್ರೆ ಬೆಂಗಳೂರಿನಲ್ಲಿ ಇರಬೇಕಾದರೆ ನಂಗೂ ಹೀಗೆ ಆಗ್ತಿತ್ತು. ಅಲ್ಲಿ ರಸ್ತೆಲಿ ಎದುರು ಹೋದರೆ ಒಬ್ಬ ತಮಿಳು, ಬಲಕ್ಕೆ ತೆಲುಗು, ಎಡಕ್ಕೆ ಚಿಂಕಿಸ್, ಹಿಂದೆ ಮಳೆಯಾಳಿಗಳು. ಹಳೆ ಆಫೀಸಿನಲ್ಲಿ ತಮಿಳು ಹಾಡು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇನ್ನೊಂದು ಹೊಸ ಆಫೀಸಿನಲ್ಲಿ ತಮಿಳು ಆಫೀಶೀಯಲ್ ಲಾಂಗ್ವೇಜುಟಿಎಲ್ಲೂಪಿಎಮ್ಮುಎಚ್ಚಾರ್ರೂ ಎಲ್ಲ ಜಯಲಲಿತಾಗಳೇ.

ಆಯಾಂ ಮಳೆಯಾಳಿ,….. ಹಾಡು ನಂಗೆ ತುಂಬಾ ಇಷ್ಟವಾಗಿತ್ತುಕ್ಯೂಬಿಕಲ್ ನಲ್ಲಿ ನನ್ನ ಹಿಂದೆ ಕೂತಿರುತ್ತಿದ್ದ ಮಳೆಯಾಳಿಗೆ ಹಾಡನ್ನು ಫಾರ್ ವರ್ಡ್ ಮಾಡಿ ವಿಚಿತ್ರ ಖುಷಿ ಪಟ್ಟಿದ್ದೆ. ಕ್ಯಾಬಿನಲ್ಲಿ ಜೊತೆಗೆ ಬರುತ್ತಿದ್ದ ಹೈದರಾಬಾದಿ ಜೊತೆ ಮಾಮೂಲು ವಾದ ನಡೆತಾನೆ ಇರುತ್ತಿತ್ತು. ಆತ ನಮ್ಮೂರ ಮುಂದೆ ನಿಮ್ಮೂರು ಏನೂ ಇಲ್ಲ ಅಂದಾಗಲೆಲ್ಲ ರೇಗಿ ಹೋಗುತ್ತಿತ್ತು. ನಿಮ್ಮ ಊರು ಅಷ್ಟು ಚೆಂದ ಇದ್ರೆ ನಿಮ್ಮ ಊರಿಗೆ ವಾಪಸ್ಸಾಗಿ, ನಿಮ್ಮಿಂಲೇ ಬೆಂಗಳೂರು ಹಾಳಾಗಿದ್ದು ಅಂತ ನಾನು, ನಮ್ಮಿಂಲೇ ಇದುಬ್ಯಾಂಗಲೂರ್ಆಗಿದ್ದು ಅಂತ ಅವನು.

ಹಾಗಂತ ಅವರ ಮೇಲೆ ನಂಗೆ ನಿಜವಾಗಿ ತಿರಸ್ಕಾರ ಇದೆ ಅಂತ ಅಲ್ಲ. ಅನ್ನ ಕೊಡೊ ಮಣ್ಣಿನ ಬಗ್ಗೆ ಅವರಿಗಿರೊ ಅಸಡ್ಡೆ ನಂಗೆ ಸಿಟ್ಟು ತರಿಸುತ್ತದೆ. ಬೆಂಗಳೂರೇ ಕರ್ನಾಟಕ ಅಂದುಕೊಂಡು ನಮ್ಮ ಬಗ್ಗೆ ಹಗುರವಾಗಿ ಮಾತನಾಡುವವರನ್ನ, ಕನ್ನಕ್ಕಿಂತ ತಮ್ಮ ಭಾಷೆನೆ ಮೇಲು ಎಂದು ಸಾಧಿಸೋರನ್ನೆಲ್ಲಾ ಕಟ್ಟಿ ಹಾಕಿ ಕಾವೇರಿ ಮಡೀಲಲ್ಲಿ ಎಸಿಬೇಕು ಅನ್ನಿಸ್ತಿತ್ತು.

ಅದಕ್ಕೆ ಏನೋ, ಇಲ್ಲಿ ಎಂಎನ್ಎಸ್ ರಾಜ್ ಠಾಕ್ರೆ ಮಾಡಿದ್ದು ತಪ್ಪು ಎಂದು ಬುದ್ಧಿ ಒಪ್ಪಿಕೊಂಡರೂ ಮನಸ್ಸು ಒಪ್ಪಿಕೊಳ್ಳುವುದಿಲ್ಲ.

ಮಣ್ಣ ರಕ್ತದಾಹ-೨

ಸೆಪ್ಟೆಂಬರ್ 24, 2008

click

(……………….ಮುಂದುವರೆದಿದ್ದು)

ನೀನು ಹೀಗೆ ಮತ್ತೆ ಮತ್ತೆ ಅಮಾಯಕರ ರಕ್ತ ಹರಿಸಿದರೆ ದಾರಿಯಲ್ಲಿ ಹೋಗುವ ಬೂರ್ಖ ಹೆಂಗಸು ರಕ್ತ ಪೀಪಾಸು ತರಹ  ತೋರಿ ನಾನೇ ಕೈಯಲ್ಲಿ ಕಲ್ಲೆತ್ತಿ ಕೊಳ್ಳುತ್ತೇನೆ. ಅದೇ ನಿನಗೆ ಬೇಕೊ ಏನೋ. ನಾವು ನಮ್ಮ ನಮ್ಮ ಒಳಗೆ ಜಗಳವಾಡುವುದು, ಹೊಡೆದಾಡುವುದು, ಒಬ್ಬರನ್ನೊಬ್ಬರು ಬಡಿದು ಸಾಯುವುದು. ಅಮೇಲೆ ಸತ್ತವರ ರಾಜ್ಯಕ್ಕೆ ನೀನೇ ಅರಸ. ಪ್ರಪಂಚ ಗೆಲ್ಲುವ ಅತಿಆಸೆಯನ್ನು ಯಾವತ್ತೂ ಪೂರೈಸೋಲ್ಲ ಎಂದು ಇತಿಹಾಸ ಕೂಗಿ ಕೂಗಿ ಹೇಳಿದೆ.

ಪ್ರತಿ ಬಾರಿ ಬಾಂಬ್ ಸ್ಪೋಟವಾದಾಗಲೆಲ್ಲ ಆಕೆ ಪಾಪ ಪ್ರಜ್ಞೆಯಲ್ಲಿ ನರಳುತ್ತಾಳೆ. ಇವರು ಮಾಡುವ ಕರ್ಮಕ್ಕೆ ನಾವೆಲ್ಲ ಯಾಕೆ ಜನರ ಕ್ರೂರ ದೃಷ್ಟಿ ಎದುರಿಸಬೇಕು ಎಂದು. ಒಂದು ಇರುವೆಯನ್ನು ಕೊಲ್ಲಲಿಕ್ಕಾಗದ ಅವಳು ಕೇವಲ ಕುರಾನ್ ಓದುವುದಕ್ಕಾಗಿ ಅನ್ಯ ಜನರಿಂದ ತಿಸ್ಕಾರಕ್ಕೆ ಒಳಗಾಗಬೇಕಾ ? ನೀ ಮಾಡುವ ಕೃತ್ಯದಿಂದ ನಿನ್ನ ಜನಾಂಗಕ್ಕೆ ಸೇರಿದವನೆಂದು ಕೆಲಸದ ಅಗತ್ಯವಿರುವ ಆತನಿಗೆ ಕೆಲಸದಿಂದಲೆ ಮುಕ್ತಿ ದೊರೆಯುತ್ತದೆಯಲ್ಲ. ನಿನ್ನ ಪ್ರತಿಕಾರದ ಮನೋಭಾವದಿಂದ ಉಂಟಾಗಿರುವ ಅಡ್ಡ ಪರಿಣಾಮಗಳನ್ನು ಎಂದಾದರು ಯೋಚಿಸಿದ್ದಿಯಾ ? ನೀನೇನೋ ಧರ್ಮದ ಹಿಂದೆ ಹೋಗಿ ಹುತಾತ್ಮ ಪಟ್ಟಕ್ಕೆ ಸೇರಿ ಸ್ವರ್ಗ ಸೇರುತ್ತಿಯಾ. ಆದರೆ ನಿನ್ನಿಂದಾಗಿ ಜನ ಬದುಕ್ಕಿದ್ದಾಗಲೇ ನರಕ ಅನುಭವಿಸುವಂತಾಗುತ್ತದೆಯಲ್ಲ. ದ್ವೇಷದ ಬೀಜದಿಂದ ಎಂದೂ ಪ್ರೀತಿ ಹುಟ್ಟಲ್ಲ ಕಣೊ !

ಇಲಾ ನಿಂಗೆ ಅಷ್ಟು ಸಿಟ್ಟಿದ್ರೆ ಎದುರು ಬದುರು ನಿಲ್ಲುವ. ನಾ ನಿಂಗೆ ಹಾಗೆ ಅನ್ಯಾಯ ಮಾಡಿದೆ ಎಂದು ನೀ ನನ್ನ ಕಾಲು ಕಡಿ. ಅದರ ಸಿಟ್ಟಿಗೆ ಪ್ರತೀಕಾರವಾಗಿ ನಾ ನಿನ್ನ ಒಂದು ಕೈ ಕಡಿಯುವೆ. ನೀ ಮತ್ತೆ ಸಿಟ್ಟಲ್ಲಿ ನನ್ನ ಒಂದು ಕಿವಿ, ಕಣ್ಣು…. ಇದೆಲ್ಲ ಬೇಡ ಬಿಡು. ಇಬ್ಬರು ಆವೇಶದಲ್ಲಿ ಒಬ್ಬರೊಬ್ಬರ ರುಂಡಗಳನ್ನು ಒಂದೇ ಹೊಡೆತಕ್ಕೆ ಕತ್ತರಿಸಿಕೊಂಡು ಬಿಡೋಣ. ಆಗ ನೀನು ಇಲ್ಲ. ನಾನು ಇಲ್ಲಅಮೇಲೆ ಸ್ವರ್ಗಕ್ಕೋ ನರಕಕ್ಕೋ ಹೋದರೂ ಚಿಂತೆಯಿಲ್ಲ. ಆಗಲಾದರೂ ಭೂಮಿ ಶಾಂತವಾದೀತು.

ನಾನು ಮಾರಾಯ ಉರ್ದು ಕಲಿಯಬೇಕೆಂದಿದ್ದೆ. ಸಲವಾದ್ರೂ ಕುರಾನ್ ಕನ್ನಡ ಆವೃತ್ತಿ ಹುಡುಕಿ ಖರೀದಿಸಬೇಕೆಂದು ಮಾಡಿದ್ದೆ. ನೀ ಹೀಗೆ ಮುಂದುವರೆಸಿದರೆ ನನ್ನಿಚ್ಛೆ ಎಂದೂ ಪೂರೈಸುವುದಿಲ್ಲ . ನನ್ನನ್ನೇ ಮನೆಯಿಂದ ಹೊರ ಹಾಕಿ ಬಿಡುತ್ತಾರೆ. ನಾನೆಂದೂ ನಿಮ್ಮ ಆಚಾರವಿಚಾರಗಳನ್ನು ಸರಿಯಾಗಿ ಅರಿಯುವುದಕ್ಕೆ ಆಗುವುದಿಲ್ಲ. ನನಗೇಕೆ ನಿಮ್ಮ ಬಗ್ಗೆ ಜಿಜ್ಞಾಸೆ ಎಂದು ನೀನು ಕೇಳಬಹುದು. ಏಕೆಂದರೆ ನಾನೋರ್ವ ಹಿಂದೂ. ಒಳ್ಳೆಯದು ಎಲ್ಲ ಕಡೆಯಿಂದ ಹರಿದು ಬರಲಿ ಎನ್ನುವವ. ಆದರೆ ನಿನಗೆಂದೂ ಇದು ಅರ್ಥವಾಗುವಂತೆ ನನಗೆ ಅನ್ನಿಸುವುದಿಲ್ಲ. Hindu belongs to all cast and community (Universe) . But all cast and community (universe) does not belongs to  Hindu.

ನನಗೆ ಅನ್ನಿಸಿದ್ದು, ನೀನು ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಬದಲು ನಿನ್ನ ಜನರ ಜೀವನ ಸ್ಥಿತಿಯನ್ನು ಬದಲಾಯಿಸಬಹುದಿತ್ತೇನೊ ಅಂತ. ಭಾರತದಲ್ಲಿನ ಏಷ್ಟೋ ಮುಸ್ಲಿಂ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲ, ಸ್ವಚ್ಛತೆಯ ಅರಿವಿಲ್ಲ. ಕಾಲಾಂಶ ಹೋಗಲಿ ಒಂದಾಂಶ ಹಣವಾದರೂ ನಿಮ್ಮ ಸಮಾಜದ ಏಳ್ಗೆಗೆ ಉಪಯೋಗಿಸಿದ್ದರೆ ಹೇಗಿರುತ್ತಿತ್ತುನಿಮ್ಮ ಮಕ್ಕಳ ಜೊತೆ ಅನ್ಯರು ಕಲಿಯುವಂತಹ ಶಾಲೆಗಳಿದ್ದಿದ್ದರೆಭಾರತ ಸರಕಾರವನ್ನು ವಿರೋಧಿಸುವ ನೀನು ಇದೆಲ್ಲ ಸರಕಾರದ ಕೆಲಸ ಎಂದು ನುಣುಚಿಕೊಳ್ಳುವ ಹಾಗಿಲ್ಲ. ನಾವು ಹೇಗೆ ಕಾನ್ವೆಂಟಿನಲ್ಲಿ ಸೀಟ್ ಗಿಟ್ಟಿಸಿಕೊಳ್ಳಲು ಒದ್ದಾಡುತ್ತೇವೆಯೋ ಅದೇ ರೀತಿ ನೀನು ತೆರೆವ ಶಿಕ್ಷಣ ಸಂಸ್ಥೆಗಳಿಗೂ ಜನ ಕ್ಯೂ ನಿಲ್ಲುವಂತಾದರೆ. ಇಂತಹ ಶಾಲೆಗಳಲ್ಲಿ ಕಲಿಸುವವರಿಗೆ ಎಲ್ಲ ಮಕ್ಕಳೂ ತಲೆ ಬಾಗುತ್ತಾರೆ, ಗೌರವದಿಂದ.

ನೀನೀಗ terrorನಿಂದ ಎಲ್ಲರನ್ನೂ ಅನುನಾಯಿಗಳನ್ನಾಗಿ ಮಾಡಬೇಕೆಂದು ಹೊರಟಿದ್ದೀಯಾ. ನಿನ್ನ terrorಗೆ ಹೆದರಿ ಹೇಡಿಯಂತೆ ನಿನ್ನ ಹಿಂದೆ ತಿರುಗುವರು ನಿನಗೆ ಖುಷೀ ಕೊಡುತ್ತಾರೆಯೇ ? ಅದರ ಬದಲು ಎಲ್ಲರೂ ಸ್ವ ಇಚ್ಛೆಯಿಂದ ನಿನ್ನಲ್ಲಿ ಬಂದರೆಪ್ರತಿಯೊಬ್ಬನು ನಿನ್ನನ್ನು ನೋಡಿ ಗೌರವದಿಂದ ತಲೆಬಾಗುವಂತಾದರೆಹಾಗಾಗಲು ನೀನು ನಮ್ಮೊಟ್ಟಿಗೆ ಬೇರೆಯಬೇಕು. ನಮ್ಮ ಜೊತೆ ಪ್ರಗತಿ ಹೊಂದಬೇಕು. ಮುಚ್ಚಿಟ್ಟಿರುವ ಕೆಟಕಿ ಬಾಗಿಲನ್ನು ತೆರೆಯಬೇಕು. ಹೊಸ ಗಾಳಿಗೆ ಮೈಯೊಡ್ಡಬೇಕು.

ಕೊಲ್ಲುವುದು ಬದುಕಿಸುವಿಕೆಗಿಂತ ಸುಲಭವಾದದ್ದುಕೊಂದವರನ್ನು ಮತ್ತೆ ಹುಟ್ಟಿಸಲಾಗುವುದಿಲ್ಲ. Distructive ideaಗಳಿಂದ constructive ideaಗಳಿಗೆ ಬಂದರೆ ಏಷ್ಟು ಒಳ್ಳೆಯದಿತ್ತು. ನಿಮಗೇನೂ ದುಡ್ಡಿನ ತೊಂದರೆಯೇ ? ಕೇಳಿದರೆ ಹಣದ ಹೊಳೆಯೆ ಹರಿಬಲ್ಲರುನನ್ನ ಜೊತೆಗೆ ಕಾಲೇಜಿನಲ್ಲಿ 120 ಮಂದಿಗೆ ಇದ್ದಿದ್ದು ಎರಡು ಮುಸ್ಲಿಮ್ಸ್. ಆಮೇಲೆ 20 ಜನರ ಪ್ರೊಫೇಷನಲ್ ಕೋರ್ಸ್ ನಲ್ಲಿ ಒಬ್ಬಳೇ ಮುಸ್ಲಿಂ. ನನ್ನ ಪ್ರೊಫೆಷನಲ್ಲಿ ಯಾರು ಇಲ್ಲ. ಅದರ ಬದಲು ನನ್ನ ಪಕ್ಕ ಹತ್ತು ಯೋಗ್ಯ ಮುಸ್ಲಿಂ ಯುವತಿಯರನ್ನು ತಂದು ಕೂಡ್ರಿಸು ನೋಡುವ. ಒಬ್ಬ ಹಿಂದೂ ಮಗುವಿನ ಬದಲು ಹತ್ತು ಮಕ್ಕಳನ್ನು ಹೇರಿ ಅನ್ನುತ್ತಿಲ್ಲಹಾಗೆನಾದರೂ ಆದಲ್ಲಿ ಮೈನಾರಿಟಿ ಹಕ್ಕೂ ನಿಮ್ಮಿಂದ ತಪ್ಪಿ ಹೋಗುತ್ತೆ. Quantityಗಿಂತ quality ಮುಖ್ಯ.

ಭಾರತದ ಪ್ರಗತಿಯಲ್ಲಿ ನಿನ್ನದೆಷ್ಟು ಪಾಲಿದೆ ನೋಡಿಕೊ. ಯಾವ ಕ್ಷೇತ್ರದಲ್ಲಿ ನೀನು ಹಿಂದೆ ಬಿದ್ದಿದ್ದಿಯಾ ಎಂದು ಗುರುತಿಸಿಕೊ. ಎಲ್ಲ ಕಡೆ ನಿನ್ನ ಛಾಪಿರಲಿ. ನಿನ್ನ ಶಕ್ತಿ ಸರಿಯಾದ ಹಾದಿಗೆ ಹರಿದಲ್ಲಿ ಇಡೀ ಮಾಜಕ್ಕೆ ಹೆಮ್ಮೆಯನ್ನು ತರುವಂತಹ ಸಂಘಟನೆ ನಿನ್ನಿಂದ ಸಾಧ್ಯವಿದೆ. ಕಾಲ ಮಿಂಚುವ ಮೊದಲು ನಿನಗಿದು ತಿಳಿದಿದ್ದರೆ ಚೆನ್ನಾಗಿತ್ತುಶಾರುಖ್ ಖಾನ ಜೊತೆ ಹೆಚ್ಚಿನವರು ಗುರುತಿಸಿ ಕೊಳ್ಳುತ್ತಾರೆ. ಅವನು ಒಬ್ಬ ಮುಸ್ಲಿಂ ಎಂದು ಎಂದೋ ಮರೆತಿದ್ದಾರೆ. ಅದೇ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಷ್ಟು ಮಹನೀಯರಿಲ್ಲ. ಅವರಿಗೆ ಸಾಧ್ಯವಾದದ್ದು ನಿನ್ನ ಕೈನಲ್ಲಿ ಯಾಕೆ ಆಗುವುದಿಲ್ಲ. ಎಲ್ಲಿ ಇಲ್ಲವೋ ಅಸಮಾನತೆ, ಭ್ರಷ್ಟತೆ, ಅನ್ಯಾಯ, ಅಕ್ರಮ. ಮುಸ್ಲಿಂಗಳ ಒಳಗೆ ಇಲ್ಲವಾ? ಮುಸ್ಲಿಂ ದೇಶವಾದ ಕೂಡಲೇ ಎಲ್ಲ ಕಡೆ ಬಂಗಾರದ ಮಳೆ ಬೀಳುತ್ತಾ. ಅಲ್ಲೂ ಮನುಷ್ಯನ ಮೃಗೀ ಭಾವನೆಗಳು ಹೊರ ಚೆಲ್ಲುತ್ತಿರುತ್ತವೆ.

ನಿನಗೆ ನೆನಪಿದೆಯಾ. ಎಲ್ಲರೂ ಸೇರಿ ಸ್ವಾತಂತ್ರದ ಸಲುವಾಗಿ ಹೋರಾಟ ನಡೆಸಿದ್ದೆವು. ಎಲ್ಲರೂ ಒಂದೇ, ದೇಶವೂ ಒಂದೇ ಎಂದು ಎಲ್ಲೆಡೆ ಮೊಳಗುತ್ತಿದ್ದ ಸಮಯವದು. ಇದ್ದಕ್ಕಿದ್ದ ಹಾಗೆ ನಮ್ಮಿಬ್ಬರ ಮಧ್ಯೆ ದಾಟಕ್ಕಾಗದಂತಹ ಮುಳ್ಳಿನ ಬೇಲಿ ಸೃಷ್ಟಿಯಾಯಿತು. ಹಿಂದೂ ಬೇರೆ, ಮುಸ್ಲಿಂ ಬೇರೆ ಎಂದು. ಪಾಕಿಸ್ತಾನವನ್ನೇನೊ ಮುಸ್ಲಿಂ ದೇಶವನ್ನಾಗಿ ಮಾಡಿ ಅಲ್ಲಿದ್ದ ಹಿಂದೂಗಳನ್ನು ಹೊರ ಹಾಕಿದಿದರು. ಆದರೆ ನಾವೆಂದು ಮುಸ್ಲಿಮರನ್ನು ಹೊರಹಾಕಲಿಲ್ಲ. ಬದಲು ಇದು ಎಲ್ಲ ಧರ್ಮಗಳ ರಾಷ್ಟ್ರ ಎಂದು ಘೋಷಿಸೆದೆವು. ಸ್ವಾತಂತ್ರ ಎಲ್ಲರೂ ಕೂಡಿ ಸೇರಿ ನಡೆಸಿದ್ದ ಹೋರಾಟಕ್ಕೆ ಸಂದ ವಿಜಯವೆಂದು ಭಾವಿಸಿದೆವು. ಆದರೆ ನಿಮ್ಮಂತವರು ನಮ್ಮ ಜೊತೆ ಯಾವಾಗಲೂ ಬೇರೆಯಲೇ ಇಲ್ಲ. ನಮಗೂ ನಿಮ್ಮ ಜೊತೆ ಬೆರೆಯುವ ಅವಕಾಶ ಒದಗಿಸಲೇ ಇಲ್ಲ. ಮಸುಕಾಗುವ ಗೆರೆಯನ್ನು ಮತ್ತೆ ಮತ್ತೆ ತೀಡಿ ಎದ್ದು ಕಾಣುವ ಹಾಗೆ ಮಾಡಿದಿರಿ. ‘The battle has now begun and the dust will never settle down’ ಎನ್ನುತ್ತೀಯಲ್ಲ, ನಿನ್ನ ಬಗ್ಗೆ ನನಗೆ ಮತ್ತು ಇತಿಹಾಸಕ್ಕೆ ಯಾವಾಗಲೂ ವಿಷಾದವಿರುತ್ತದೆ.

ಇದನ್ನೆಲ್ಲ ಬರೆದಿದ್ದಕ್ಕೆ ನಾನು ಕಾಫಿರನಾಗಿ ಕಂಡು ನನ್ನ ಮೇಲೆ ಫತ್ವ ಹೋರಡಿಸುತ್ತಿಯ. ಇನ್ನಿಲ್ಲದ ದೈಹಿಕ/ಮಾನಸಿಕ ಬಾಧೆ ಕೊಡುತ್ತಿಯಾ. ನೀನು ಧರ್ಮದ ಅನುನಾಯಿಯಾಗಿದ್ದರಿಂದ ನನ್ನ ಮಾತಿಗೆ ಮುನ್ನಣೆ ಕೊಡುತ್ತಿಯ ಅಂದು ಕೊಂಡಿದ್ದೀನಿ. ಸರ್ವಶಕ್ತನಾದ ಅಲ್ಲಾಹು ಇದ್ದಾನೆ. ಎಲ್ಲವೂ ಅವನಿಗೆ ಸೇರಿದ್ದು. ಅನ್ಯ ಧರ್ಮೀಯ ಹಿರಿಯರೊಬ್ಬರು ಹೇಳಿದ್ದು, ಕ್ರಾಸ್ಸ್ವಸ್ತಿಕ್ಅಲ್ಲಾಹು ಎಲ್ಲದರ ಅರ್ಥ ಒಂದೇ ಎಂದು. ನಾನು ಇಲ್ಲ ಎಂದು. ನಾನು ಇದ್ದು ಇಲ್ಲದಂತಿರುವೆ, ಇಲ್ಲದೆಯೋ ಇದ್ದಿರುವೆ ಎಂದುಮನು ಧರ್ಮದ ಪ್ರಕಾರ ಒಬ್ಬ ಬ್ರಾಹ್ಮಣನಾಗಿ ಸಮಾಜಕ್ಕೆ ತಿಳಿ ಹೇಳುವ ಕರ್ತವ್ಯವನ್ನು ನಾನು ಮಾಡಿದ್ದೆನೆ. ಇಲ್ಲವೆಂದರೆ ಉಳಿದವರಿಗಿಂತ ನೂರು ಚಡಿಯೇಟುಗಳು ನನಗೆ ಜಾಸ್ತಿ ಬೀಳುತ್ತವೆ.

ಬರೆದು ನಿಲ್ಲಿಸಿದ ಮೇಲೆ ನನಗೀಗ ಎದೆಯಲ್ಲಿ ಉರಿ ಹತ್ತಿದೆ. ಜೋರಾಗಿ ಚೀರಬೇಕೆನ್ನಿಸುತ್ತಿದೆ. ಬಿಕ್ಕಳಿಸಿ ಅಳಬೇಕೆನಿಸುತ್ತಿದೆ. ಯಾರಿಗೆ ಏನು ಹೇಳಿದ್ರು ಉಪಯೋಗವಿಲ್ಲ. …………….ನನ್ನಂಥ ಬಿಳಿ ಪಾರಿವಾಳಗಳನ್ನು ಹಾರಿ ಬಿಡುತ್ತಿರ. ಆಮೇಲೆ ಹಿಡಿದು ರೆಕ್ಕೆ ಕತ್ತರಿಸಿ ಪಂಜರದಲ್ಲಿ ಕೂಡಿ ಹಾಕುತ್ತೀರ. ಇಲ್ಲಾ ಗುಂಡಿಕ್ಕಿ ಕೊಲ್ತೀರ. ಬದುಕ್ಕಂತೂ ಬಿಡುವುದಿಲ್ಲ…………….. ನನ್ನ ಕೈಗೆ ರಕ್ತ ತಾಕುತ್ತಿದೆ. ಸುತ್ತ ನರ ರಾಕ್ಷಸರು ನರ್ತಿಸುತ್ತಿದ್ದಾರೆ. ಎಲ್ಲ ಕಡೆ ಬೆಂಕಿ, ರಕ್ತ, ಚೀರಾಟ…………..

ಹೇಳಿ, ಭೂಮಿಯ ರಕ್ತದ ಹಸಿವು ಎಂದು ಇಂಗೀತು ??

ಮಣ್ಣ ರಕ್ತದಾಹ

-ಮತ್ತೆಂದೂ ಇಷ್ಟು ಉದ್ದ ನಾನು ಬರೆಯುವುದಿಲ್ಲ ! ಅಬ್ಬಾ!!

(ನೀಲಾಂಜಲ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ವಿನಾಕಾರಣ ಮಾಡುವ ಧರ್ಮ ನಿಂದನೆ, ಆರೋಪಗಳು ಇಲ್ಲಿ ಪ್ರಕಟವಾಗುವುದಿಲ್ಲ. ಉತ್ತರಗಳೂ ಕನ್ನಡದಲ್ಲಿ ಕಡ್ಡಾಯ. ನಾನು ಮೊದಲುಮಣ್ಣ ರಕ್ತದಾಹಎಂದು ಬರೆಯುವ ಬದಲುಹೇ ಮುಜಾಹೀದ್ದಿನ್ಎಂದು ಬರೆಯುವ ಅಂತಿದ್ದೆ. ಕೊನೆ ಗಳಿಗೆಯಲ್ಲಿ ರಕ್ತದಾಹವೇ ಹಿಡಿಸಿತು ! )

ಮಣ್ಣ ರಕ್ತದಾಹ -೧

ಸೆಪ್ಟೆಂಬರ್ 24, 2008

click

ನನ್ನ ಕಲೀಗ್ ಒಬ್ಬನಿಗೆ ಮುಸ್ಲಿಂ ಎಂದರೆ ಆಗುವುದಿಲ್ಲ. ಚಿಕ್ಕಂದಿನಲ್ಲಿ ಶಾಲೆಗೆ ಹೋಗುವ ದಾರಿಯಲ್ಲಿ ಕಿಡಿಗೇಡಿ ಮುಸ್ಲಿಂ ಮಕ್ಕಳು ಅವನ ಜುಟ್ಟು ಹಿಡಿದು ಚುಡಾಯಿಸುತ್ತಿದ್ದರಂತೆ. ಒಂದು ದಿನ ಕಲ್ಲೂ ಹೊಡೆದರಂತೆ. ಘಟನೆ ಅವನ ಮನಸ್ಸಲ್ಲಿ ಅಚ್ಚೊತ್ತು ಆಗಿನ ಅಸಾಹಯತೆ ಅಸಹನೆಯಾಗಿ, ತೀರಸ್ಕಾರವಾಗಿ, ದ್ವೇಷವಾಗಿ ಮಾರ್ಪಟ್ಟಿದೆ.

ಇನ್ನೊಬ್ಬ ಹಾಸ್ಟೇಲ್ ಮೇಟ್ ಸಹ ಮುಸ್ಲಿಂ ಎಂದರೆ ಉರಿದು ಬೀಳುತ್ತಾಳೆ. ಕಾರಣ ಈಕೆಯ ಹಳೆಯ ರೂಮ್ ಮೇಟ್. ಅವಳಿಗೆ ಬರುತ್ತಿದ್ದ ಸರಬರಾಜು ಆಗುತ್ತಿದ್ದ ಉರ್ದು ನಿಯತಕಾಲಿಕಗಳು ಮತ್ತು ಇತರ ಧರ್ಮದ ಮೇಲಿನ ಅಸಡ್ಡೆ .

ಆದರೆ ನನಗೆ ರೀತಿಯ ಯಾವುದೇ ಕಹಿ ಅನುಭವಗಳಿಲ್ಲ. ಸ್ಕೂಲಿಂದ ಹಿಡಿದು ಕಾಲೇಜಿನವರೆಗೆ ಮುಸ್ಲಿಂ ಸಹಪಾಠಿಗಳಿದ್ದರು. ಮೊದಲು ಕಲಿತದ್ದು ಕಾನ್ವೆನ್ಟಿನಲ್ಲಿ, ಆಮೇಲೆ ನವೋದಯದಲ್ಲಿ. ನವೋದಯದಲ್ಲಿ ನನ್ನ ಹಚ್ಚಿಕೊಂಡಿದ್ದ ರೂಮ್ ಮೇಟ್ , ತುಂಬಾ ಅಕ್ಕರೆ ತೋರಿಸುತ್ತಿದ್ದ ಸೀನಿಯರ್ ಅಕ್ಕ ಎಂದೂ ನನಗೆ ಮುಸ್ಲಿಂ ಅನಿಸಿರಲಿಲ್ಲ. ಅವರು ಸಹ ನನ್ನ ಹಿಂದೂ ಎಂದು ನೋಡಿರಲಿಕ್ಕಿಲ್ಲ. ಅವರಿಗೆ ನಾನು ಕೇವಲ ಸೌಪಿ, ನನಗೂ ಸಹ ಅವರು ಹಾಗೆ. ದಿನಾ ರಿಬ್ಬನ್ ಕಟ್ಟಿ ಕೊಡುತ್ತಿದ್ದದ್ದು , ರಜಾ ದಿನಗಳಲ್ಲಿ ವಿವಿಧ ಕೇಶ ವಿನ್ಯಾಸ ಮಾಡಿ ಕೊಡುತ್ತಿದ್ದದ್ದು ಒಬ್ಬ ಕ್ರಿಶ್ಚಿಯನ್ . ಈಗ ನೋಡಿದರೆ ಅಲ್ಲಿ ನೀರಿಲ್ಲದಾಗ, ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಲ್ಲಿ ಹೆಚ್ಚಿನವರು ಮುಸ್ಲಿಂ, ಕ್ರಿಶ್ಚಿಯನ್ ಅಥವಾ ದಲಿತರೆ ಆಗಿದ್ದರು. ಹಾಗಂತ ಹಿಂದೂ ಸ್ನೇಹಿತರು ಇದ್ದರು.

ಪ್ರೊಫೇಷನಲ್ ಕೋರ್ಸ್ ಮಾಡೊ ಹೊತ್ತಲ್ಲಿ, ಯಾರು ಹೇಳಿದರು ಕೇಳದೆ ಬಾಂಗ್ಲಾದೇಶಿಯ ಕ್ಲಾಸ್ ಮೇಟಗೆ ಪರಿಚಯವಿದ್ದ ಮುಸ್ಲಿಂ ಹತ್ತಿರವೇ pc ತೆಗೆದುಕೊನ್ಡಿದ್ದುಅವರು ಉಳಿದವರಿಗಿಂತ competative rate ಕೊಟ್ಟಿದ್ದಕ್ಕೆಅವರ ಅಂಗಡಿಗೆ ಹೋದಾಗಲೆಲ್ಲ ನಾವೆಂದು ನಮ್ಮ ಜಾತಿಗಳ ಬಗ್ಗೆ ಕೇಳಿಕೊಂಡೆ ಇಲ್ಲ. ಅದು ಅಗತ್ಯವೂ ಇರಲಿಲ್ಲ. ಗ್ಯಾರಂಟಿ ಮುಗಿದ ಮೇಲೂ ಸರ್ವೀಸ್ ಕಡಿಮೆ ಬೆಲೆಗೆ ಚೆನ್ನಾಗೇ ಮಾಡಿ ಕೊಟ್ಟರು.

ಇಲ್ಲಿ ಮೊನ್ನೆ ಚೋರ್ ಬಜಾರಿಗೆ ಹೋದಾಗಲೂ ಅಷ್ಟೇ. ಆತ ಏಷ್ಟು ಪ್ರೀತಿಯಿಂದ , ಕಳಕಳಿಯಿಂದ ವಿಚಾರಿಸಿದ. ಅವನ ನಡತೆಯಿಂದ ಮುಸ್ಲಿಂ ಕಂಡರೆ ದೂರವೇ ಇರುವ ನನ್ನ ಹುಡುಗ ಬದಲಾಗಿ ಬಿಟ್ಟ. ಕೆಲಕ್ಷಣಗಳ ನಂತರ ಇವರಿಬ್ಬರೂ ಪರಿಚಯದವರಾಗಿ ಹೋದರು. ಮಧ್ಯೆ ಜಾತಿಯ ಗೋಡೆ ಏಳಲೇ ಇಲ್ಲ.

————

ಮೊನ್ನೆ ಯಾರೋ ಹೇಳುತ್ತಿದ್ದರು, ಇವರನ್ನೆಲ್ಲಾ ಆವಾಗಲೇ ಒದ್ದೊಡಿಸಬೇಕಾಗಿತ್ತು ಎಂದು ! ಇತಿಹಾಸದ ಪರಿಚಯವಿಲ್ಲದೇ ದೊಡ್ಡ ದೊಡ್ಡ ಡೈಲೋಗ್ ಹೊಡೆಯುವವರು. ರಾಜಕೀಯ ಸ್ಥಿತ್ಯನ್ತರಗಳು, ಒಳಸುಳಿಗಳು, ಪವರ್ ಗೇಮ್ ಅಷ್ಟು ಬೇಗ ಎಲ್ಲರಿಗೂ ಅರ್ಥವಾಗುವುದಿಲ್ಲ. ಇಂಥವರೇ ಹತ್ತು ಮಂದಿ ಸೇರಿ ಕೈ ಮಿಲಾಯಿಸಿದರೆ ಅಲ್ಲೊಂದು ಧಂಗೆ ಆರಂಭವಾಗುತ್ತದೆ. ಸಿಟ್ಟು ಹಾಗೂ ರೋಷ ಒಳಗಿನ ಕಣ್ಣನ್ನು ಹೊಸಕಿ ಹಾಕುತ್ತದೆ.

ನಾನು ಕೆಲವೊಮ್ಮೆ ಯೋಚಿಸುತ್ತೇನೆಕೇವಲ ಅನ್ಯ ಧರ್ಮೀಯರು ಎಂದು ಚಿಕ್ಕ ಎಳಸು ಮಕ್ಕಳ ಮೇಲೆ ಮಾತಾಂಧತೆಯಲ್ಲಿ ಅತ್ಯಾಚಾರ ಎಸಗುತ್ತಾರಲ್ಲಕೊಯ್ದು ಹಾಕುತ್ತಾರಲ್ಲ, ಸುಟ್ಟು ಹಾಕುತ್ತಾರಲ್ಲಸಾಮಾನ್ಯ ಮನುಷ್ಯನಲ್ಲೂ ಅದೆಷ್ಟು ಕೌರ್ಯಅಥವಾ ಅವರೆಲ್ಲ ದುಡ್ಡಿಗಾಗಿ ಹೆತ್ತವರ ಕತ್ತು ಹಿಚುಕಲೂ ಹೇಸದ ಗೂನ್ಡಾಗಳೇ ?

ಮೈ ನಡುಗುತ್ತಿದೆ. ನಾನು ನಿಂತ ನೆಲ ಭದ್ರವಾಗಿಲ್ಲ. ಇದು ಯಾವತ್ತೋ ಕುಸಿಯಬಹುದು. ನನ್ನ ಮನೆಯ ಒಳಗೂ ಕೈ ಬಾಂಬ್ ಸಿಡಿಯಬಹುದು. ನಾನು ದಾರಿಯಲ್ಲಿ ಹೋಗುವಾಗ ಇಂತಹ ದೊಂಬಿಗಳಿಗೆ ಆಹಾರವಾಗಬಹುದು. ಎಷ್ಟು ಭಯಾನಕ ! ನನ್ನ ಆಕ್ರಂದನ, ಚೀರಾಟ ಕೆಪ್ಪರನ್ನು ತಲುಪಲಾಗದು. ಅವರು ಧರ್ಮದ ಹೆಸರಲ್ಲಿ ಕೇಕೆ ಹಾಕುತ್ತಾ ತಮ್ಮ ಅಟ್ಟಹಾಸ ಮುಂದುವರೆಸುತ್ತಾರೆ. ರೀತಿ ನಾನು ಮತೀಯ ಗಲಭೆಗಳಿಗೆ ಸಂಭದಿಸಿದ ಚಿತ್ರಗಳನ್ನು ನೋಡಿದಾಗಲೆಲ್ಲ ವಿಹ್ವಲಗೊಂಡಿದ್ದೇನೆ, ಎದೆ ಸುಟ್ಟು ಕೊಂಡಿದ್ದೇನೆ. ಪೀಡಿತರು ಯಾವ ಧರ್ಮದವರೇ ಆಗಿರಲಿ. ಅವರು ನಮ್ಮಂತೆಯೇ ಮನುಷ್ಯರು ತಾನೇ.

ನಾನು ಮೊದಲು ಕಿಟಕಿ ಹೊರಗಿನ ಖಾಲಿ ಗದ್ದೆಗಳನ್ನು ನೋಡಿ ಅಂದುಕೊಳ್ಳುತ್ತಿದ್ದೆ. ಇಲ್ಲಿ ಮೊದಾಲೊಂದು ದಿನ ಕಾಡಿತ್ತೇನೋ. ಇದೆ ದಾರಿಯಲ್ಲಿ ಸೈನಿಕರು, ರಾಜರು, ಅವರ ಕುದುರೆಗಳು ಕ್ರಮಿಸುತ್ತಿದ್ದವೇನೋ. ಇಲ್ಲೇ ಷ್ಟು ಯುದ್ದಗಳಾಗಿವೆಯೋಅಧಿಕಾರಶೌರ್ಯಸಂಪತ್ತು ಇವುಗಳ ಹೆಸರಲ್ಲಿ ಷ್ಟು ಅತಿಕ್ರಮಣ, ಅತ್ಯಾಚಾರಗಳು ನಡೆದಿದೆಯೊ. ಆಗೆಲ್ಲ ಪದೇ ಪದೇ ಭೂಮಿಯ ಮೇಲೆ ರಕ್ತ ಚೆಲ್ಲುತ್ತಿತ್ತು. ಈಗ ಹೆಚ್ಚಿನೆಡೆ ಜನರ ರಾಜ್ಯ. ಪ್ರಜಾಪ್ರಭುತ್ವ, ಅಹಿಂಸೆ. ಕೇವಲ ಸರಹದ್ದುಗಳಲ್ಲಿ ಮಾತ್ರ physical ಯುದ್ಧಬೇರೆಡೇ virtual ಯುದ್ಧಅಚ್ಚರಿಯಾಗುತ್ತಿತ್ತು ಭೂಮಿಯ ಹಸಿವು ಅಷ್ಟು ಬೇಗ ಆರಿ ಹೋಯಿತೆ ಎಂದು. ಈಗ ಉತ್ತರ ಸಿಕ್ಕಿದೆ. ಇಲ್ಲ, ಅದರ ರಕ್ತದ ಹಸಿವು ಇನ್ನೂ ಜೀವಂತವಾಗೇ ಇದೆ. ನಮ್ಮ ಅಜ್ಞಾನದಲ್ಲಿ, ಮೌಡ್ಯದಲ್ಲಿ, ಹುಂನದಲ್ಲಿ, ರಾಗದ್ವೇಷಗಳಲ್ಲಿ, ಮಾತಾಂಧತೆಯಲ್ಲಿ.

(ಮುಂದುವರೆಯುವುದು………..)

ಮಣ್ಣ ರಕ್ತದಾಹ

(ನೀಲಾಂಜಲ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ವಿನಾಕಾರಣ ಮಾಡುವ ಧರ್ಮ ನಿಂದನೆ, ಆರೋಪಗಳು ಇಲ್ಲಿ ಪ್ರಕಟವಾಗುವುದಿಲ್ಲ. ಉತ್ತರಗಳೂ ಕನ್ನಡದಲ್ಲಿ ಕಡ್ಡಾಯ. ಕೆಲ ಒಬ್ಬರು ಬಾಂಬ್ ಸ್ಪೋಟದ ಬಗ್ಗೆ ಬರೆಯುವಾಗ englishನಲ್ಲಿ ಬರೆದಿದ್ದು ಗಮನಿಸಿದ್ದೇನೆನಮ್ಮಲ್ಲೂ terrorist(?) ಇದ್ದಾರಂತಲ್ಲಾ; ಹುಬ್ಬಳ್ಳಿ, ಬೆಂಗಳೂರು…  )

ಇಂದಿನ ಚಹಾ ಎಂದಿನಂತಿಲ್ಲ

ಆಗಷ್ಟ್ 7, 2008

ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು.

ದಿನವೂ ಕಿಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಚಹಾ ಹೀರುತ್ತಿದ್ದೆ.

ಇಂದಿನ ಚಹಾ ಕೆಟ್ಟು ಹೋಗಿದೆ.

[” Spirit of the heart, quietness and tranquility — this is what links together the concepts of Zen and Tea” ]