Archive for the ‘ಪ್ರಕಟಿತ’ Category

“ಪ್ರೀತಿ-ಪ್ರೇಮ-ಮದುವೆ-ನಂಬಿಕೆ-, ಇತ್ಯಾದಿ ಮತ್ತು ಅವನು-ಅವಳು”

ಜುಲೈ 27, 2013

[ಇದು ಕತೆಯಾಗಬಹುದಾ ಎಂದು ಯೋಚಿಸುತ್ತಲೇ ಕೆಂಡಸಂಪಿಗೆಗೆ ಕಳಿಸಿದ್ದೆ. ಅವರು ಹೌದು ಇದು ಕತೆ ಅಂತ ಪ್ರಕಟಿಸಿದರು ಅದಕ್ಕೆ ಧನ್ಯವಾದ.

ಇದನ್ನು ಇವನಿಗೆ ತೋರಿಸಿ ಉಗಿಸಿಕೊಂಡೆ, ಏನಕೆ ಹೀಗೆಲ್ಲ ಬರೀತೀಯ ಅಂತ ಅವಲತ್ತುಕೊಂಡ. ಇನ್ನು ಮುಂದೆ ನೀ ಬರೆದಿದ್ದ ನನಗೆ ಓದಿ ಹೇಳಬೇಡ ಅಂತ ಅಪ್ಪಣೆ ಹೊರಡಿಸಿದ. ಬರೆದು ಮುಗಿಸಿ ಮಾರನೇ ದಿನ ಆಫೀಸಿನಲ್ಲಿ ನನ್ನ ಟೀ ಗ್ಯಾಂಗ್ ಜೊತೆ ಹಿಂದೀ ಕರಿಸಿ ಓದಿದಾಗ ಇಬ್ಬರಿಗೆ ಸಿಟ್ಟು ಬಂತು, ಮಗದಿಬ್ಬರು ಈ ತರಹ ಕತೆಯಲ್ಲಿ ಅಷ್ಟೇ ಇರಕೆ ಸಾಧ್ಯ ಅಂದರು. ಒಬ್ಬ ಇದು ಮುಂದಿನ ಸೆಂಚುರಿ ಕತೆ ಅಂತ ನಗಾಡಿಕೊಂಡ. ಮತ್ತಿಬ್ಬರಿಗೆ ಇಷ್ಟವಾಯಿತು. ಈ ತರಹ ಎಷ್ಟೋ ಜನ ಇದಾಗಲೇ ಇದ್ದಿರಬಹುದು. ನಮಗೆ ಗೊತ್ತಿಲ್ಲದ ಪ್ರಪಂಚ ಬೇಕಾದಷ್ಟಿದೆ ಅಂದರು.

ಆಮೇಲೆ ಅಮ್ಮನ ಕಾಲ್ ಬಂತು. ತಂಗಿ ಹೇಳಿದಳು, ನೀನು ಹೀಗೆಲ್ಲ ಬರಿ. ಮೊದಲೇ ನಿನ್ನ ಬಗ್ಗೆ ಆಡಿಕೊಳ್ತಾರೆ. ಇನ್ನೂ ಇದು ನಿನ್ನದೇ ಸ್ವಂತ ಕತೆ ಹೇಳಿ ಪ್ರಚಾರ ಮಾಡ್ತಾರೆ ಅಂದರು. ಆಗ ನಾನು ಅಂದುಕೊಂಡೆ. ವಾಹ್! ನಿಜ. ನಾನು ಬರೆದಿದ್ದೆಲ್ಲಾ ಸ್ವಂತ ಕತೆ ಆಗಿ ಮಾರ್ಪಾಡಗುತ್ತಿದ್ದರೆ ನಾನು ಹೀಗೆ ಬರೆದುಕೊಳ್ಳುತ್ತಿದೆ;  “ಮುಂಬಯಿಯ ಸೀ ಫೇಸಿನ್ಗ ಪೆನ್ಟ್ ಹೌಸಿನಲ್ಲಿ ಮನೆ ಇತ್ತು. ಆಕೆ ದಿನಾ ಆಡಿ ಕಾರಿನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದರೆ, ಆತ ಲ್ಯಾಂಡ್ ಕ್ರೂಸರ್ ನಲ್ಲಿ ಆಫೀಸಿಗೆ ಹೋಗಿ ಬರುತ್ತಿದ್ದ. ಇಬ್ಬರು ಸಕಲ ಸಂಪತ್ತು, ಐಶ್ವರ್ಯ, ಸುಖ, ಸಂತೋಷಗಳನ್ನು ಅನುಭವಿಸುತ್ತಾ, ಸ್ವ ಹಿತ ಹಾಗೂ ಪರರ ಹಿತವನ್ನು ಕಾಯ್ದು ಕೊಳ್ಳುತ್ತಾ, ರಾಜ- ರಾಣಿಯರಂತೆ ಜೀವನವನ್ನು ಆಚರಿಸಿಕೊಂಡು ಬದುಕುತ್ತಿದ್ದರು……”  ಅಂತೆಲ್ಲ ಬರೆಯುತ್ತಿದ್ದೆ. ಆಹಾ! ಏನ್ ಚೆನ್ನಾಗಿರುತ್ತಿತ್ತು, ಬರೆದಿದ್ದೆಲ್ಲಾ ಸತ್ಯ ಆಗುವುದಾದಲ್ಲಿ. ಹೋಗಲಿ, ಹೀಗೊಂದು ಕತೆ. ಓದಿಕೊಳ್ಳಿ.]

—–

ಡಬ್ಬಾ ನನ್ ಮಗ, ಹಣ್ಣು ಕಂಡರೆ ತಿನ್ನೋಕೆ ಗೊತ್ತಾಗುತ್ತೆ, ಹಾಗೆ ಖಾಲಿಯಾದಾಗ ತೆಗೆದುಕೊಂಡು ಬರಕೆ ಮಾತ್ರ ಗೊತ್ತಾಗೋಲ್ಲ ಎಂದು ಬಯ್ದು ಕೊಳ್ಳುತ್ತಲೆ ಹಣ್ಣಿನವನತ್ತಿರ ಚೌಕಾಸಿ ಮುಗಿಸಿದಳು. ಮನೆಲಿ ಮಾಡಲಿಕ್ಕೆ ಇರಬಹುದಾದ ಕೆಲಸ ನೆನೆಪಿಸಿಕೊಂಡೇ ತಾನ್ಯಾಕೆ ಆಫೀಸಿನಿಂದ ಬೇಗ ಬಂದಿದ್ದು ಅನ್ನುವುದು ಅವಳಿಗೆ ಮರೆತು ಹೋದಂತಾಗಿ, ಇಲ್ಲಾ, ಇವತ್ತು ಕತೆ ಬರೆದೆ ಬಿಡಬೇಕು ಅಂದುಕೊಳ್ಳುತ್ತ ಮನೆಯತ್ತ ಸಾಗಿದಳು. ಏನಕ್ಕಾರು ನಾಳೆನೇ ಕತೆ ಮುಗಿಸಿ ಕೊಡ್ತೇನೆ ಎಂದು ಅವನಿಗೆ ಹೇಳಿದ್ದೇನೊ ಎಂದು ಪರಿತಪಿಸುತ್ತಾ, ಇತ್ತೀಚಿಗೆ ತನಗೆ ತಾನು ಮಾಡುವ ಕೆಲಸದ ಮೇಲೆ ಆಸಕ್ತಿ ಕಡಿಮೆ ಯಾಗುತ್ತಿದೆಯಾ ಅಂತೆಲ್ಲ ತಲೆಬಿಸಿ ಮಾಡಿಕೊಳ್ಳುತ್ತಾ ಮನೆಬಾಗಿಲು ತೆರೆದಳು.

ಓಹ್ ! ಅವನು ಬಂದಾಗಿದೆ, ಇದೇನು ಹೊಸ ಚಪ್ಪಲ್ಲಿ. ಇವತ್ತುನಾ! ಅಯ್ಯೋ, ಇವನಿಗೆ ಮಾಡಕೆ ಬೇರೆ ಕೆಲಸ ಇಲ್ಲ, ಹೋಗಲಿ ಅವರಿಗೂ ಇಲ್ವಾ, ಇನ್ನೂ  ಇವಳು ಏಷ್ಟು ದಿನವೋ, ಮೊನ್ನೆವರೆಗೂ ಇದ್ದ ಅವಳು ಹೋಗಿ ಇವತ್ತು ಇನ್ನೊಂದು ಹೊಸ ಎಂಟ್ರಿ. ಏಷ್ಟು ಸಲ ಹೇಳಿದ್ದೀನಿ, ಹೋಟೆಲ್‌ಗೆ ಕರ್ಕೊಂಡು ಹೋಗು ಅಂತ, ಮನೆಗೆ ಯಾಕೆ ಕರಕೊಂಡು ಬರಬೇಕು, ಕೇಳಿದ್ರೆ ನಂದೂ ಮನೆಯಲ್ವಾ ಎಂದು ಬಾಯಿ ಮುಚ್ಚಿಸಿಬಿಡುತ್ತಾನೆ, ಇವನನ್ನು ಇನ್ನೂ ಸ್ವಲ್ಪ ಕಡಿಮೆ ಪ್ರೀತಿಸಬೇಕು, ಸಕತ್ ಕೊಬ್ಬು ಬಂದಿದೆ,  ಕರ್ಮ ಅವಂದು ಎಂದು  ಕುದಿಯುತ್ತಲೇ ಚಪ್ಪಲಿ, ಅವನ ಬ್ಯಾಗು, ಆಕೆಯದ್ದು, ತಂದು, ತಂದಿದ್ದ ಹಣ್ಣು, ಹೀಗೆ ಎಲ್ಲವನ್ನೂ ಆದರದ ಜಾಗದಲ್ಲಿ ಇಡ ತೊಡಗಿದಳು. ಜೊತೆಗೆ ಆ ಹೊಸ ಚಪ್ಪಲಿ ತನ್ನ ಕಾಲುಂಗುರದ ಹರಳಿನ ಜೊತೆ ಮ್ಯಾಚ್ ಆಗುತ್ತೆ ಅಂತನೂ ಅಂದುಕೊಂಡಳು. ಕಿಚನ್‌ಗೆ ಹೋದವಳು ಈ ಕೆಲಸದವಳು ತಾನು ಇಲ್ಲ ಅಂದರೆ ಒಂದು ಕೆಲಸವನ್ನು ನೀಟಾಗಿ ಮಾಡಲ್ಲ ಅಂದು ಅವಳಿಗೂ ಬಯ್ದುಕೊಂಡು ಒಂದು ಗ್ಲಾಸ್ ನೀರು ಕುಡಿದು ಇಳಿಸಿದಳು.  ಹೋಗಿ ಫ್ರೆಶಾಗಬೇಕು ಎಂದು ಮೇಲಿನ ರೂಮಿನತ್ತ ಹತ್ತತೊಡಗಿದಳು. ಕೋಣೆಯ ಕದ ಹಾಕಿದ್ದು ಕಂಡು ಸಿಟ್ಟು ತಲೆಗೆ ಏರಿತು.  ಏನಕೆ ತಮ್ಮ ರೂಮಿನಲ್ಲಿ? ಗೆಸ್ಟ್ ರೂಮ್ ಎರಡೆರಡು ಇದೆ, ಏನಕೆ ನಮ್ಮ ಕೊಣೇಯೇ ಬೇಕು, ಅವನತ್ತಿರನೇ ಇವತ್ತು ಎಲ್ಲಾ ಕ್ಲೀನ್ ಮಾಡಿಸ್ತೀನಿ, ನಿನ್ನೆ ಅಷ್ಟೇ ನನ್ನಿಷ್ಟದ ಹೊಸ ಬೆಡ್ ಕವರ್ ಹಾಕಿದ್ದೆ, ಬೆಡ್‌ಶೀಟು ಅವನೇ ವಾಶ್ ಮಾಡಲಿ. ಹೋಗಲೋ, ಡಬ್ಬಾ ನನ್ ಮಗನ್ನು ತಂದು….

ಆಗಲೇ ಕದ ಬಡಿದು ಡಿಸ್ಟರ್ಬ್ ಮಾಡಬೇಕು ಅಂದುಕೊಂಡವಳು ಪಾಪ, ಏನು ನಡೆಸಿದ್ದಾನೋ ಎಂದು ಪ್ರೀತಿ ಬಂದು, ಇಣುಕಿ ನೋಡಲಾ ಅಂತಾನೂ ಅನ್ನಿಸಿ ಕಷ್ಟಪಟ್ಟು ಎಲ್ಲ ಭಾವವನ್ನೂ ತಡೆಹಿಡಿದು ಕೆಳಗೆ ಇಳಿದು ಬಂದಳು. ಆದರೆ ಇಳಿಯುತ್ತಾ ಮೆಟ್ಟಿಲಿನ ತುದಿಯಲ್ಲಿ ಇಟ್ಟಿದ್ದ ಹೂದಾನಿಗೆ ಕಾಲು ತಾಗಿ ಅದು ದೊಡ್ಡದಾಗಿ ಸದ್ದು ಮಾಡುತ್ತಾ ಕೆಳಗೆ ಉರುಳಿತು. ಆಕೆಗೆ ಇವತ್ತು ಅವಳ ಪ್ರೀತಿಯ ಹೂದಾನಿ ಬಿದ್ದಿದ್ದಕ್ಕೆ ಬೇಸರವಾಗದೆ ಖುಷಿಯಾದಳು. ಮುಖದ ಮೇಲೆ ತುಂಟ ಹೂನಗೆ ಅರಳಿತು. ಮುಖವೆತ್ತಿ ಕೊಣೆಯತ್ತ ನೋಡಿದಳು. ಇನ್ನೂ ಒಂದು ತಾಸು ಸಿಟ್ಟು ಮಾಡಿಕೊಂಡು ಹೇಳಿದಕ್ಕೆಲ್ಲ ಕೂಗುತ್ತಾ ಇರುತ್ತಾನೆ ಎಂದುಕೊಂಡಳು. ಏನಕೊ ಇದ್ದಕಿದ್ದ ಹಾಗೆ ನೆಮ್ಮದಿ ಅನ್ನಿಸಿ, ಕೆಳಗಿನ ಬಾತ್ ರೂಮಿನಲ್ಲೇ  ಕೈ ಕಾಲು ಮುಖ ತೊಳೆದುಕೊಂಡು ಬರಲು ಹೋದಳು.

—-

ಥತ್, ಏನಕೆ ಸರಿಯಾದ ಹೊತ್ತಲ್ಲೇ ಬರಬೇಕು, ಇನ್ನೂ ಒಂದೈದು ನಿಮಿಷ ತಡವಾಗಿ ಬಂದಿದ್ರೆ ನಡೆತಿರಲಿಲ್ವೆ? ಮೂಡ್ ಆಫ್. ಇನ್ನು ಯಾಕೆ ಹಾಗೆ ಮಾಡ್ತೀಯಾ ಹೇಳಿದ್ರೆ ಹತ್ತು ಸಲ ಸ್ಸಾರಿ ಕೇಳಿಬಿಡ್ತಾಳೆ, ಷೆ!….. ಹಾಗೆ ಅವಳನ್ನು ಕಷ್ಟಪಟ್ಟು ಬೇರ್ಪಡಿಸಿಕೊಂಡು ಅಲ್ಲಿಂದೆದ್ದ. ಏನಾಯ್ತು ಎಂದು ಗೊಂದಲದಲ್ಲಿದ್ದ ಅವಳ ಸುಂದರ ಮುಖದಲ್ಲಿ ‘ನನ್ನ ಹೆಂಡ್ತಿ’  ಎಂದು ಗಾಭರಿ ಹುಟ್ಟಿಸಿದ. ಸಿಕ್ಕ ಚಡ್ಡಿ ಏರಿಸಿಕೊಂಡು ಅಲ್ಲೆಲ್ಲೋ ಬಿಸಾಕಿದ್ದ ಸಿಗರೇಟಿನ ಪ್ಯಾಕ್ ಗೆ ಹುಡುಕಾಡಿದ. ಸಿಕ್ಕ ಪ್ಯಾಕ್ ಖಾಲಿಯಾಗಿದ್ದು ನೋಡಿ ಅವನ ಅಸಹನೆ ಇನ್ನೂ ಜಾಸ್ತಿಯಾಗಿ , ಏನು ಮಾಡಬೇಕೆನ್ದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದ ಅವಳನ್ನು ಕನಿಕರದಿಂದ ನೋಡಿ,  ‘ ಇನ್ನೊಂದು ದಿನ ಸ್ವೀಟಿ, ಕಮಾನ್, ಬಾತ್ ರೂಮ್ ಅಲ್ಲಿದೆ’ ಎಂದು ಹೇಳಿ, ಹಾಲ್‌ನಲ್ಲಿ ಇದ್ದಿರಬಹುದಾದ ಪ್ಯಾಕ್ ಗಾಗಿ ಕೆಳಗೆ ಇಳಿದು ಬಂದ.

ಮನೆಯ ಸುಸ್ಥಿತಿ ನೋಡಿ ಹೊ!, ಅವಳು ಬಂದಾಗಿದೆ. ಎಲ್ಲಿದ್ದಾಳೋ, ಇನ್ನೂ ಮೇಲಿನ ರೂಮಿನಲ್ಲಿ ಇದ್ದಿದ್ದಕ್ಕೆ ದೊಡ್ಡ ಲೆಕ್ಚರ್ ಕೇಳಬೆಕಾಗುತ್ತೆ ಎಂದು ಅವಸರವಸರವಾಗಿ ಪ್ಯಾಕ್ ಹುಡುಕ ತೊಡಗಿದ. ಒಂದು ಐದು ನಿಮಿಷ, ಎಲ್ಲ ಭಂಗ ಮಾಡಿದಳು. ಇವತ್ತೇ ಏನಕೆ ಬೇಗ ಬರಬೇಕು ಎಂದು ಮತ್ತೆ ಸಿಟ್ಟು ಏರತೊಡಗಿತ್ತು. ಎದುರಿಗೆ ಬಂದು ಆಕೆ ನಿಂತರೂ ಮುಖ ನೋಡಲಿಲ್ಲ. ನೋಡಿದರೆ ಗೊತ್ತು ಅವಳಲ್ಲಿ ಕರಗಿ ಹೋಗುತ್ತೇನೆ.  ಮತ್ತವಳ ರಗಳೆಗಳಿಗೆ ಯಾರು ಉತ್ತರಿಸುತ್ತಾರೆ ಎಂದು ಸಿಗರೇಟನ್ನು ಸುಟ್ಟಿಸುತ್ತಾ ಬಾಲ್ಕನಿಗೆ ತೆರಳಿದ.  ಆಕೆ ಎಸೆದ ದಿಂಬು ಅವನಿಗೆ ತಾಗಲಿಲ್ಲ. ಆ ಹೊತ್ತಲ್ಲಿ ದಿಂಬಾಟ ಆಡುವ ಮನಸ್ಥಿತಿಯಲ್ಲಿ ಅವನಿರಲಿಲ್ಲ.

ಹೊರಗೆ ಬಂದವಳಿಗೆ ಏನೋ ಹುಡುಕುತ್ತಿದ್ದ ಅವನು ಕಂಡ. ಅಯ್ಯೋ ಎಂದುಕೊಳ್ಳುತ್ತಾ ಅವನಿಗೆ ಕಾಣಿಸದ ಸಿಗರೇಟ್ ಪ್ಯಾಕೆಟ್ ಎತ್ತಿ ನೀಡಿದಳು. ಸ್ಸಾರಿ, ನಾನೇನು ಬೇಕು ಎಂದು ಮಾಡಲಿಲ್ಲ, ಅದು ಆಗಿ ಹೋಯಿತು. ಪ್ಲೀಸ್ ಸ್ಸಾರಿ, ಸ್ಸಾರಿ, ಸ್ಸಾರಿ ಎಂದು ಹತ್ತು ಸಲ ಹೇಳಿದಳು. ಅವನು ಅವಳು ಹೇಳಿದ್ದನ್ನು ಕೇಳಿಸಿಕೊಂಡು ಕೇಳಿಸಿಕೊಳ್ಳದೆ ತನ್ನ ಪಾಡಿಗೆ ತಾನು ಸಿಗರೇಟನ್ನು ಹಚ್ಚಿಕೊಂಡು ಬಾಲ್ಕನೀಯತ್ತ ಹೊರಟ. ತಾನು ಇಷ್ಟು ಹೇಳಿದರೂ ಏನು ಹೇಳದ ಅವನ ಮೇಲೆ ಸಿಟ್ಟು ಬಂದು ಅಲ್ಲಿದ್ದ ದಿಂಬನ್ನು ಎತ್ತಿ ಒಗೆದಳು. ನಿನ್ನ ಅಜ್ಜಿ, ಹೋಗಲೋ ಎಂದು ಹೇಳಿಕೊಳ್ಳುತ್ತಾ ಚಾ ಮಾಡಲು ಕಿಚನಿಗೆ ಹೋದಳು.

ಅಲ್ಲಿಂದಲೇ ‘ನಿನಗೂ ಬೇಕಾ?’ ಎಂದು ಹೊರಗಿದ್ದ ಅವನತ್ತ ಕೂಗಿ ಕೇಳಿದ್ದು ಆಯಿತು, ಎರಡು ಕಪ್‌ಗೆ ಚಾ ಬಸಿಯುತ್ತಿರುವಾಗ ‘ನನಗೂ ಒಂದು ಕಪ್’ ಎಂದು ಅವನು ಹೇಳಿದ್ದು ಆಯಿತು. ಇಬ್ಬರು ತಮ್ಮ ತಮ್ಮ ಮೂಲೆಯಲ್ಲಿ ಕೂತು ಚಾ ಕುಡಿಯುತ್ತಿರುವಾಗ ಮೇಲಿನಿಂದ ಅವಳು ಇಳಿದು ಬಂದು ಅವನಿಗೆ ‘… …’ ಎಂದು ಕೂಗಿ, ಆಮೇಲೆ ಬಾಗಿಲು ತೆರೆಯಲು ಬರದೇ ಇವಳು ಹೋಗಿ ತೆಗೆದು ಕೊಟ್ಟು, ಅವಳು ಇವಳಿಗೆ ಥ್ಯಾಂಕ್ಸ್ ಸಹ ಹೇಳದೆ ಲಿಫ್ಟ್ ಗುಂಡಿ ಒತ್ತಿದ್ದು ಆಯಿತು. ವಾಪಾಸ್ಸು  ತನ್ನ ಜಾಗಕ್ಕೆ ಮರಳಿದ ಅವಳು ‘ ನೀ ಇದೀಯಲ್ಲಾ, ಕರ್ಮ ನಿಂದು ಕಣೋ ‘ ಎಂದಳು.  ಅದಕ್ಕೆ ಅವನು ‘ ಅದರಲ್ಲಿ ಏನು, ಅವಳಿಗೆ ನನ್ನತ್ತಿರ ಕೆಲಸ ಆಗಕೆ ಇತ್ತು, ಅವಳೇನು ಸುಮ್ನೆ ಬಂದಿದ್ಲಾ , ಇವಳು ಒಬ್ಬಳೇ ಏನು ಇರೋದಾ, ನನ್ನತ್ತಿರಾ ಇದೆಲ್ಲ ನಡೆಯಲ್ಲ, ಹೋಗ್ಲಿ “.  ಅದಕ್ಕೆ ಅವಳು ‘ ಏನು ಚೆನ್ನಾಗಿಡ್ಳು ಮಾತ್ರ, ನಿನಗೆ ಲಕ್ ಇರಲಿಲ್ಲ ಬಿಡು, ಏನ್ ಮಾಡೋದು, ನೀ ಹೀಗಂತ ಅವಳಿಗೇನು ಗೊತ್ತು, ‘ ಎಂದು ನಗಾಡಿಕೊಂಡಳು. ಅದಕ್ಕೆ ಅವನು, ‘ ನನಗೇನು ಗೊತ್ತು ನೀ ಬೇಗ ಬರ್ತೀಯಾ ಅಂತಾ, ಹೋಗಲಿ ನಿನ್ನ ಹ್ಯಾಂಡ್ ಸಮ್ ಏನಾದ ‘ ಎಂದು ಕೇಳಿದ. ‘ ಅವನಾ, ದೊಡ್ಡ ಜಂಕ್ ಕಣೋ, ನನಗೆ ನಿನ್ನ ತರಹ ಎಲ್ಲ ಇರಕಾಗಲ್ಲ. ನೀ ಒಬ್ನೇ ಸಾಕು ಬಿಡು. ‘ ಎಂದು ಹೇಳಿ ಚಾ ಲಾಸ್ಟ್ ಸಿಪ್ ಕುಡಿದು ‘ ನೋಡೋಣ, ಯಾರಿಗೆ ಗೊತ್ತು, ಮೊನ್ನೆ ಅಷ್ಟೇ ಫಿಲ್ಮ್ ಮೀಟ್ ಲ್ಲಿ ಒಬ್ಬ ಅಂಗ್ರೇಜಿ ಇಷ್ಟ ಆಗಿದ್ದಾನೆ ‘ ಎಂದು ಕಣ್ಣು ಹೊಡೆದಳು. ಅದಕ್ಕೆ ಅವನು ‘ ನೀ ಬಿಡು’ ಎಂದು ದೊಡ್ಡದಾಗಿ ನಕ್ಕು ಕೊಂಡ.

ಸ್ವಲ್ಪ ಹೊತ್ತಲ್ಲಿ ಚಾ ಕುಡಿದು ಅಲ್ಲೇ ನೆಲದಲ್ಲಿ  ಒಬ್ಬರತ್ತಿರ ಒಬ್ಬರು ಬಿದ್ದು ಕೊಂಡಿದ್ದ ಅವರು,  ಸಂಜೆ ‘ಮಲೆಗಳಲ್ಲಿ ಮದು ಮಗಳು’ ನಾಟಕಕ್ಕೆ ಹೋಗುವುದಾಗಿ ತೀರ್ಮಾನಿಸಿದರು. ಅದಲ್ಲದೆ ಅವನು ನೀನಲ್ಲದೇ ಬೇರೆ ಯಾರನ್ನ ನಾಟಕಕ್ಕೆ ಕರೆದುಕೊಂಡು ಹೋಗಲಿ ಎಂದು ಡೈಲಾಗ್  ಹೊಡೆದು  ಅವಳತ್ತಿರ ಗುದ್ದಿಸಿಕೊಂಡ. ಇಬ್ಬರು ಒಬ್ಬರೊಬ್ಬರನ್ನು ಮುದ್ದಿಸ್ಕೊಂಡು ಎದ್ದರು. ಅವನು ಫ್ರೆಶ್ ಆಗಲು ಮೇಲಿನ ಕೊಣೆಗೆ ತೆರಳಿದರೆ ಈಕೆ ಕಿಚನಿಗೆ ಹೋಗಿ ಕುಕರ್ ಇಟ್ಟಳು. ಅದು ಸಿಟಿ ಹೊಡೆದು ಆರಿದ ಮೇಲೆ ಅವನು ಬಂದು ಸಕತ್ತಾಗಿರೋ ರಸಂ ಮಾಡಿದ. ಅದರ ಮೇಲೆ ಅವಳು ಹೊಯ್ದ  ಒಗ್ಗರಣೆಯ ಇಂಗಿನ ಪರಿಮಳ ಮನೆಯೆಲ್ಲ ತುಂಬಿಕೊಂಡು ಎಲ್ಲವನ್ನೂ ಘಮ ಘಮವಾಗಿಸಿತು.

(ಕೆಂಡಸಂಪಿಗೆಯಲ್ಲಿ ಪ್ರಕಟಿತ)

ಹೀಗೊಂದು ಪ್ರವರ

ಮಾರ್ಚ್ 30, 2010

ಬೆಳ್ಳಂಬೆಳಗ್ಗೆ ಎದ್ದು ತಿಂಡಿಯೇನು ಮಾಡುವುದೆಂದು ಯೋಚಿಸುತ್ತಿರುವಾಗ ಬೆಲ್ ಆಯಿತು. ತೆರೆದರೆ ಕೆಳಗಡೆ ಮನೆ ಪುಟ್ಟು ಗೆಳೆಯರೊಡನೆ ಇಣಚಿ ನೋಡಲು ಬಂದಿದ್ದ. ಇವನಿಗೆ ಬೇರೆ ಕೆಲಸವಿಲ್ಲ ಎಂದು ಬೈಯ್ದುಕೊಳ್ಳುತ್ತಾ ಇಣಚಿಯನ್ನು ಎತ್ತಿ ತೋರಿಸುತ್ತಿದ್ದೆ. ಅಷ್ಟರಲ್ಲಿ ಬಾಗಿಲ ಎದುರಿಗೆ ’ದುತ್’ ಎಂದು ಪ್ರತ್ಯಕ್ಷನಾಗಿದ್ದ ಅವನು. ಅಯ್ ಇವನೇನು ಇಲ್ಲಿ ಎಂದು ಅಚ್ಚರಿ ಪಡುತ್ತಿರುವಾಗಲೇ ಸೀದಾ ಮನೆಯೊಳಗೆ ನುಗ್ಗಿ ಬಿಡಬೇಕೆ. ನೀವು ಇಣಚಿ ಸಾಕ್ಕೊಂಡಿದಿರಂತಲ್ಲ, ನೋಡೊಣ ಅಂತ ಬಂದೆ ಎಂದು ಇಣಚಿ ನೋಡದೆ ಮನೆಯಲ್ಲಿ ಎಲ್ಲಿ ಏನೇನಿದೆ ಎಂದು ಇಣುಕಿದ. ಆ ಮಕ್ಕಳೆದುರು ಅವನಿಗೆ ಬಯ್ಯಲು ತೋಚುತ್ತಿರಲಿಲ್ಲ. ಹೇಗೊ ಮಾಡಿ ಸಾಗ ಹಾಕಿದೆ. ಆದರೆ ಹೋಗೊ ಮೊದಲು ಇನ್ನೊಬ್ರಿದ್ದ್ರಲ್ಲಾ, ನಿನ್ನೆ ಸಂಜೆ ಆಕಿ ಮನೆ ಖಾಲಿ ಮಾಡಿಕೊಂಡು ಹೋದ್ರಲಾ, ನಾ ಅಲ್ಲೆ ಕೆಳಗೆ ಇದ್ದೆ. ಇನ್ನೂ ನೀ ಒಬ್ಬಾಕಿನಾ ಎಂದು ಕೆಣಕಿ ಹೋಗಿದ್ದ. ಥತ್! ನಿನ್ನೆ ತನಕ ಸಾಂಬಾವೀತನಾಗಿದ್ದ ಎದುರುಗಡೆ ಮನೆ ಗಾರೆಕೆಲಸದ ಅಜ್ಜನಿಗೆ ಇದ್ದಕಿದ್ದ ಹಾಗೇ ಏನ್ ಆಯಿತಪಾ ಅಂದುಕೊಂಡೆ. ಒಬ್ಬಳೇ ಹೆಣ್ಣು ಅಂದ ಕೂಡಲೇ ಎಲ್ಲ ಗಂಡಸರಿಗೂ ಅದೇನು ಭಂಡ ಧೈರ್ಯ ಬಂದು ಬಿಡುತ್ತದೆ! ಕರ್ಮ.

ಹೌದು, ಹಿಂದಿನ ದಿನ ಆಕೆ ಮನೆ ಬಿಟ್ಟು ಹೋಗಿದ್ದಳು. ಬಾಗಿಲಿಗೆ ರಂಗೋಲಿ ಇಡುವ ವಿಷಯದಿಂದ ಹುಟ್ಟಿದ ಜಗಳ ಇಣಚಿಯವರೆಗೆ ಬೆಳೆದಿತ್ತು. ಸಿಂಪಲ್ಲಾಗಿ ಹೇಳುವುದಿದ್ದರೆ ಇಗೋ ಕ್ಲಾಶ್. ಇವತ್ತಿನಿಂದ ನಾನು ಒಬ್ಬಳೇ. ಪಕ್ಕದಲ್ಲೇ ದೊಡ್ಡಮ್ಮನ ಮಕ್ಕಳ ಸಂಸಾರ ಇರುವದರಿಂದ ನನ್ನ ಮನೆಯಲ್ಲಿ ಯಾರೂ ಕಿರಿಕಿರಿ ಮಾಡಿರಲಿಲ್ಲ. ಮನೆ ಓನರ್ ವಿಷಯ ಗೊತ್ತಾದ ಮೇಲೆ ಇಲ್ಲೇನೂ ಅಂತಾ ಹೆದರಿಕೆಯೇನಿಲ್ಲ, ಸ್ವಲ್ಪ ಹುಶಾರಿ ಎಂದರಷ್ಟೆ. ಜೊತೆಗೆ ಮನೆ ಭಾಡಿಗೆ ಏರಿಸಬೇಕಿತ್ತು ಎಂದು ಸಣ್ಣದಾಗಿ ಹೆದರಿಸಿದರು. ಅಮ್ಮನಿಗೆ ಸ್ವಲ್ಪ ಚಿಂತೆ ಇತ್ತು. ಅದೂ ಅಮ್ಮನಾದವರಿಗೆ ಬೆಳೆದ ಹುಡುಗಿಯರತ್ತ ಇರಬೇಕಾದ ಸಹಜ ಕಾಳಜಿ ಎನ್ನಿ.

ಈ ಮನೆಯನ್ನು ಹುಡುಕಬೇಕಾದರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಗ ವಿದ್ಯಾರ್ಥಿನಿಯರ ಹಾಸ್ಟೇಲಿನಲ್ಲಿ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ಕೆಲಸ ಬೇರೆ ಸಿಗ್ತಾ ಇರಲಿಲ್ಲ. ಬೆಂಗಳೂರಿನ ಸುಮಾರು ಪಿಜಿಗಳನ್ನು ಅಲೆದು ಮುಗಿದಿತ್ತು. ಆ ಕೊಂಪೆಗಳಲ್ಲಿ ಸತ್ತರೂ ಸೇರುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಆಗ ಉಳಿದಿದ್ದು ಒಂದೇ ಮಾರ್ಗ. ಸ್ವಂತ ಮನೆ ಬಾಡಿಗೆಗೆ ಹಿಡಿಯುವುದು. ಅದೂ ಅಷ್ಟು ಸುಲಭವಾಗಿರಲಿಲ್ಲ. ಮೊದಲು ಅದಕ್ಕೊಂದು ಪಾರ್ಟನರ್ ಹುಡುಕಿಕೊಳ್ಳಬೇಕಿತ್ತು. ಅಂತೂ ಹಾಸ್ಟೇಲಿನ ಸ್ನೇಹಿತೆಯೊಬ್ಬಳು ನನಗೆ ಸಾಥ್ ಕೊಟ್ಟಳು. ಇಬ್ಬರೂ ನಮ್ಮ ಹಾಸ್ಟೇಲಿಗೆ ತರಕಾರಿ ಸಪ್ಲೈ ಮಾಡುತ್ತಿದ್ದವನು ಮನೆ ಬಾಡಿಗೆ ಏಜೆಂಟ್ ಎಂದು ಗೊತ್ತಾಗಿ ಅವನ ಬಳಿ ಹೋದೆವು. ಅವನು ಸುಮಾರು ಮನೆ ತೋರಿಸಿದ. ಫುಲ್ ಡಬ್ಬಾ ಮನೆಗಳು. ಓಡಾಡೊ ದಾರಿ ಸುರಂಗದಂತೆ ಕತ್ತಲಿರುವುದು, ಇಡೀ ಬಿಲ್ಡಿಂಗ್ ಸುತ್ತು ಹಾಕಿ ಮೂಲೆಯಲ್ಲಿದ್ದ ಔಟ್‌ಹೌಸುಗಳು, ಟೆರೆಸ್ಸಿನ ಮೂಲೆಯಲ್ಲಿರುವ ಒಬ್ಬಂಟಿ ಸಿಂಗಲ್ ರೂಂಗಳು, ನೆಲದ ಗಾರೆ ಕಿತ್ತು ಹೋದ ಮನೆಗಳು, ಸ್ನಾನ-ಶೌಚಾಲಯ ದೂರವಿದ್ದ ಅಥವಾ ಶೇರಿಂಗ್ ಸೌಲಭ್ಯದ ಮನೆಗಳು…. ನಾವು ಹುಡುಗಿಯರಾದ್ದರಿಂದ ನಮಗೆ ನಮ್ಮ ಸೇಫ್ಟಿಯ ಸಲುವಾಗಿ ಓನರ್, ಅಕ್ಕ-ಪಕ್ಕದವರು, ಏರಿಯಾ ಅಂತೆಲ್ಲಾ ಗಣನೆಗೆ ತೆಗೆದು ಕೊಳ್ಳಬೇಕಿತ್ತು. ಕೊನೆಗೆ ಒಂದು ದಿನ ಸಾಕಾಗಿ ನನ್ನ ಸ್ನೇಹಿತೆ ಇನ್ನು ತನ್ನ ಕೈಯಲಾಗುವುದಿಲ್ಲ ಎಂದು ’ಸ್ಸಾರಿ’ ಹೇಳಿ ಹೊರಟು ಹೋದಳು.

ಮತ್ತೆ ನಾನು ಒಬ್ಬಂಟಿ. ಪ್ರೊಸೆಸ್ಸನ್ನು ಮತ್ತೆ ಶುರುವಿನಿಂದ ಪ್ರಾರಂಭಿಸಬೇಕಿತ್ತು. ನಮ್ಮ ಹಾಸ್ಟೆಲ್ ಬಿಟ್ಟ ಅನೇಕರು ಸುತ್ತಮುತ್ತ ಗುಂಪಾಗಿ ಮನೆ ಮಾಡಿಕೊಂಡಿದ್ದರೂ ನನಗೆ ಅಲ್ಲಿ ಜಾಗ ಇರಲಿಲ್ಲ. ಹೌಸ್‌ಫುಲ್! ಅಯ್ಯೋ ರಾಮ, ಆ ಕೊಂಪೆ ಪಿಜಿಗಳಿಗೆ ಹೋಗಬೇಕಾ ಎಂದು ಅನ್ನಿಸಿ ಅಳುವುದೊಂದೆ ಬಾಕಿ. ಆ ಹೊತ್ತಿನಲ್ಲಿ ಬೆಂಗಳೂರಿನ ಮೂಲೆ ಮೂಲೆ ಸುತ್ತಿ ಅನೇಕ ಸಸ್ಯಾಹಾರಿ ಪಿಜಿಗಳನ್ನು ನೋಡಿದ್ದೇನೆ. ಆ ಹರಡಿಕೊಂಡಿರುವ ರೂಂಗಳು, ಕಂಡ ಕಂಡಲ್ಲಿ ಹಾರ್ಡಬೊರ್ಡ್ ನೆಟ್ಟು ಮಾಡಿದ ಚಿಕ್ಕ ಚಿಕ್ಕ ಉಸಿರುಗಟ್ಟಿಸುವ ರೂಮುಗಳು… ಈಗಲೂ ನೆನಪಿದೆ. ಓನರುಗಳು ದುಡ್ಡಿನ ಹಿಂದೆ ಬಿದ್ದು ಏಷ್ಟಾಗುತ್ತೊ ಅಷ್ಟು ಜನರನ್ನು ಒಳಗೆ ದಬ್ಬಿದ್ದರು. ಟಾಯ್ಲೆಟ್, ಬಾತ್ ರೂಂಗಳು ಆ ದೇವರಿಗೆ ಪ್ರೀತಿ. ಹಾಗಂತ ಎಲ್ಲ ಪಿಜಿಗಳೂ, ಹಾಸ್ಟೆಲ್‌ಗಳೂ ಕೆಟ್ಟವಿರಲಿಲ್ಲ. ವಿಜಯನಗರದ ಬಂಟ್ಸ್ ಇರಬಹುದು, ಸಂಪಿಗೆ ರೋಡಿನ ಮತ್ತು ಗಿರಿನಗರದ ಆ ಅಮ್ಮಂದಿರ ಪಿಜಿಗಳು ಇರಬಹುದು, ಬಿಟಿಎಂ ಲೇಔಟಿನ ಮಂಗಳೂರಿನವರ ಆ ಪಿಜಿಯಿರಬಹುದು. ಆದರೆ ಅವೆಲ್ಲ ಪೋಶ್ ಕೆಟಗೆರಿಯವು. ಅವುಗಳ ತಿಂಗಳ ಭಾಡಿಗೆ ಆಗತಾನೇ ಸಿಕ್ಕ ಚಿಕ್ಕ ಕೆಲಸದ ಸಂಬಳದಷ್ಟೇ ಇತ್ತು.

ಹಾಸ್ಟೇಲಿನ ಅಂತಿಮ ಅವಧಿಯ ದಿನ ಹತ್ತಿರ ಬರುತ್ತಿರುವಾಗ ನನ್ನ ಪುಣ್ಯಕ್ಕೆ ಸ್ಕೂಲಿನ ಸ್ನೇಹಿತೆಯ ಜೊತೆಗೆ ಬಾಡಿಗೆಮನೆ ಹಿಡಿಯುವ ಅವಕಾಶ ಲಭಿಸಿತು. ಆಕೆ ನಾನ್ ವೆಜ್ ಮತ್ತು ಬೇರೆ ಜಾತಿ ಎಂದು ಮನೆಯಲ್ಲಿ ಚಿಕ್ಕ ಅಸಮಾಧಾನವಿದ್ದರೂ ಆವತ್ತು ಬೇರೆ ದಾರಿ ಇರಲಿಲ್ಲ. ಆ ಓನರಿನ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ಇದ್ದ ಇನ್ನೊಬ್ಬ ಸ್ಕೂಲ್ ಸ್ನೇಹಿತೆಯಿಂದ ಆ ಅವಕಾಶ ಪ್ರಾಪ್ತವಾಗಿತ್ತು. ಮಾತಾಡಲು ಹೋದಾಗ ಓನರ್ ಆಂಟಿ ಅರಿಶಿನ-ಕುಂಕುಮ, ಮಲ್ಲಿಗೆ ಹೂವನ್ನೆಲ್ಲಾ ಕೊಟ್ಟು ಬಾಯ್ತುಂಬಾ ಮಾತಾಡಿಸಿ ಏನೂ ಟೆನ್ಶನ್ ಮಾಡಿಕೊ ಬೇಡಮ್ಮ, ಈ ಮನೆ ನಿಮಗೇನೆ ಅಂತ ಪಕ್ಕಾ ಮಾಡಿಕೊ ಎಂದು ಹೇಳಿ ಕಳಿಸಿದರು. ನನಗೆ ಆ ಮಾರನೇ ದಿನವೇ ದೊಡ್ಡಮ್ಮನ ಮಗನ ಮದುವೆಗೆ ಊರಿಗೆ ಹೋಗಬೇಕಾದ್ದರಿಂದ ಮುಂದಿನ ವಾರ ಬಂದು ಹಾಲು ಉಕ್ಕಿಸುತ್ತೇವೆ ಎಂದು ಹೇಳಿ ಬಂದಿದ್ದೆ. ಖುಷಿಯಿಂದ ಹಾಸ್ಟೆಲ್ಲಿನಲ್ಲಿನ ಎಲ್ಲ ಸಾಮಾನುಗಳನ್ನು ಪ್ಯಾಕ್ ಮಾಡಿ ಹೊರಗಡೆ ಕೋಣೆಯಲ್ಲಿ ಇಟ್ಟು ಎಲ್ಲರಿಗೂ ಬೈ ಹೇಳಿ ಊರಿಗೆ ಹೊರಟಿದ್ದೆ.

ಆದರೆ ಆ ಖುಷಿ ಜಾಸ್ತಿ ದಿನ ಇರಲಿಲ್ಲ. ಮದುವೆ ಅಟೆಂಡ್ ಮಾಡಲು ಊರಿಗೆ ಹೋದ ನನಗೆ ಫೋನ್ ಬಂತು. ಆ ಓನರ್ ಅಂಕಲ್ ಹತ್ತಿರ ಮನೆ ರೀಪೇಟಿಂಗ್ ಬಗ್ಗೆ ನಾ(ಯಕಃಶ್ಚಿತ ಹೆಣ್ಣಾಗಿ) ಮಾತಾಡಿದ್ದು ಸ್ವಲ್ಪ ಓವರ್ ಆಗಿ ಅವರು ಅದೇ ನೆವ ಹೇಳಿ ಮನೆಯನ್ನು ಬೇರೆಯವರಿಗೆ ಕೊಟ್ಟಿದ್ದರು. ನನ್ನ ಸ್ನೇಹಿತೆಗೆ ಚೆನ್ನಾಗಿ ಬೈದು ಆಕೆ ನನ್ನ ಮುಖ ನೋಡದ ಹಾಗೆ ಮಾಡಿದ್ದರು. ಬೆಂಗಳೂರಿಗೆ ವಾಪಾಸ್ಸಾದ ಮೇಲೆ ಉಳಿಯಲು ನನಗೆ ಜಾಗ ಇರಲಿಲ್ಲ. ಪುಣ್ಯಕ್ಕೆ ನನ್ನ ಮನೆಯಲ್ಲಿ ಗಟ್ಟಿ ಇದ್ದರು, ಬೆಂಗಳೂರಿನಲ್ಲಿ ಕೆಲವು ತಿಂಗಳು ಉಳಿಯಲು ಅವಕಾಶ ಮಾಡಿಕೊಡಬಲ್ಲ ಸಂಬಂಧಿಕರು ಇದ್ದರು. ಆ ಪ್ರಶ್ನೆ ಬಿಡಿ. ನನಗೆ ಆ ಹೊತ್ತಲ್ಲಿ ನಗು ನಗುತ್ತಾ ಮಾತಾಡಿಸಿದ್ದ ಆ ಆಂಟಿಯ ಮುಖ ಕಣ್ಮುಂದೆ ಹಾದು ಹೋಯಿತು.

ಅಮ್ಮ ನಮ್ಮ ಮಾವನಿಗೆ ಊರಿನಿಂದಲೇ ಫೋನ್ ಮಾಡಿ ಪರಿಸ್ಥಿತಿ ವಿವರಿಸಿ, ಅವರ ವಶೀಲಿಯಿಂದ ಹಾಸ್ಟೇಲಿನಲ್ಲಿ ಒಂದು ತಿಂಗಳ ಹೆಚ್ಚುವರಿ ಗಡವು ತೆಗೆದುಕೊಂಡರು. ಈಗ ಮದುವೆಯಾಗುತ್ತಿದ್ದ ಅಣ್ಣನಿಗೆ ಅವನು ಹೊಸದಾಗಿ ಭಾಡಿಗೆ ಹಿಡಿದಿದ್ದ ಮನೆಯ ಬಗ್ಗೆ, ನನ್ನ ಇನ್ನೊಬ್ಬ ಹಾಸ್ಟೇಲ್ ಮೇಟಿನಿಂದ ವಿಷಯ ತಿಳಿದು ಆತನಿಗೆ ನಾನೇ ಹೇಳಿದ್ದೆ. ಆ ಮನೆಯೂ ಚೆನ್ನಾಗಿದ್ದರಿಂದ ಆತ ನೋಡಿದ ತಕ್ಷಣ ಒಪ್ಪಿಕೊಂಡಿದ್ದ. ಜೊತೆಗೆ ಆ ಮನೆಯ ಓನರ್ ನಮ್ಮ ಊರಿನವರೇ ಆಗಿದ್ದರು. ಹಾಗಾಗಿ ಆ ಮನೆಯ ಓನರ್ ಸಹ ಮದುವೆಗೆ ಬಂದಿದ್ದರು. ಮದುವೆಯ ದಿನ ಅಣ್ಣನ ಪಕ್ಕದ ಮನೆ ಖಾಲಿ ಇದ್ದದ್ದು ಅವರಿಂದ ತಿಳಿದು ಬಂದು ಮದುವೆ ಮಂಟಪದ ಪಕ್ಕವೇ ಅಪ್ಪ-ಅಮ್ಮ ಸೇರಿ ನನಗೆ ಮನೆ ಪಕ್ಕಾ ಮಾಡಿದರು. ಪಾರ್ಟನರ್ ಹುಡುಕಿ ಕೊಳ್ಳುವ ಒಂದು ಕೆಲಸವನ್ನು ನನಗೆ ಬಿಟ್ಟರು. ಏಕೆಂದರೆ ಒಬ್ಬಳೇ ಹುಡುಗಿ ಮನೆ ಮಾಡಿಕೊಂಡಿರುವುದು ಅವರಿಗೆ ಒಪ್ಪಿಗೆ ಇರಲಿಲ್ಲ, ಓನರ್ರು ಸಹ ಮನೆ ಕೊಡುವುದಕ್ಕೆ ಒಪ್ಪುವುದಿಲ್ಲ ಬಿಡಿ.

ಒಟ್ಟಿನಲ್ಲಿ ಎಲ್ಲ ಸುಖಾಂತವಾಗಿ ನನ್ನ ಹಾಸ್ಟೇಲಿನಲ್ಲಿ ಸೀನಿಯರ್ ಆಗಿದ್ದ ಆಕೆಯನ್ನು ಒಪ್ಪಿಸಿ ಈ ಮನೆಯನ್ನು ಮಾಡಿದ್ದಾಗಿತ್ತು. ಮಧ್ಯದಲ್ಲಿ ಮೊದಲೊಮ್ಮೆ ನನಗೆ ಕೈ ಕೊಟ್ಟ ಹಾಸ್ಟೆಲ್ ಸ್ನೇಹಿತೆಯು ಬಂದು ಒಂದು ವರ್ಷ ನಮ್ಮ ಜೊತೆ ಉಳಿದು ಹೋಗಿದ್ದಳು. ಮೂರು ವರ್ಷದ ನನ್ನ ಆಕೆಯ ಸ್ನೇಹಕ್ಕೆ ನಿನ್ನೆ ಕೊನೆಯ ದಿನವಾಗಿತ್ತು. ಮನದಲ್ಲಿ ಕಹಿ ತುಂಬಿಕೊಂಡು ಆಕೆ ಮತ್ತು ನಾನು ಬೇರೆಯಾಗಿದ್ದೆವು. ಇವತ್ತಿನಿಂದ ನಾನು ಒಬ್ಬಳೇ. ನನ್ನದೇ ದುಡ್ಡು, ನನ್ನದೇ ಮನೆ, ನನ್ನದೇ ಅನ್ನ.

ನನ್ನ ಮನೆ ಮೇಟ್ ತಾನು ಬೇರೆ ಹೋಗುತ್ತೇನೆ ಎಂದಾಗ ನಾನು ಕೆಲಸದಲ್ಲಿರಲಿಲ್ಲ. ಇದ್ದ ಕೆಲಸ ಬಿಟ್ಟು ಮನೆಯಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಹೊತ್ತಲ್ಲಿ ಸಿಕ್ಕ ಇಣಚಿ ಮರಿಯನ್ನು ಸಾಕಿಕೊಂಡಿದ್ದೆ. ಆಕೆ ಇಣಚಿಯನ್ನು ಮನೆಯಿಂದ ಹೊರ ಹಾಕಿದರೆ ತಾನು ಇರುವುದಾಗಿ ಹೇಳಿದರೆ ನಾನು ಕೇಳಬೇಕಲ್ಲ. ಇಣಚಿಯನ್ನು ಸಾಯಿಸುವುದು ನನ್ನಿಂದಾಗದ ಮಾತಾಗಿತ್ತು. ಅದು ಬೆಳೆದು ತನ್ನಷ್ಟಕ್ಕೆ ನಿಸರ್ಗಕ್ಕೆ ಮರಳಿ ಹೋಗುವ ತನಕ ನಾ ಅದನ್ನು ನೋಡಿಕೊಳ್ಳುತ್ತೇನೆ ಎಂದು ಆಣೆ ಮಾಡಿಕೊಂಡಿದ್ದೆ. ಅದೆಲ್ಲಿಂದ ಧೈರ್ಯ ಉಕ್ಕಿತ್ತೊ. ಆಯಿತು, ನಾನು ಒಬ್ಬಳೇ ಇರುತ್ತೇನೆ ಎಂದು ಹಟ ತೊಟ್ಟಿದ್ದೆ. ಆ ಹೊತ್ತಲ್ಲಿ ಆಕೆ ಶೇರ್ ಮಾಡಿದ್ದ ಅಡ್ವಾನ್ಸ್ ವಾಪಸ್ಸು ಕೊಡಲು ಹಣವಿರಲಿಲ್ಲ. ಆಕಾರಣ ಮೂರು ತಿಂಗಳ ಗಡವು ತೆಗೆದುಕೊಂಡೆ. ಇದ್ದ ಹಣ ಆಕೆಗೆ ಕೊಟ್ಟರೆ ಹೊಸ ಕೆಲಸ ಸಿಗುವವರೆಗೆ ಹಣಕ್ಕೇನು ಮಾಡುವುದು ಎಂಬ ಚಿಂತೆಯಿತ್ತು. ಮನೆಯಿಂದ ದುಡ್ಡು ತೆಗೆದುಕೊಳ್ಳುವುದು ಆಗದ ಮಾತು. (ಯಾರಿಗೂ ಕಡೆಘಳಿಗೆಯ ತನಕ ವಿಷಯ ಹೇಳಿದ್ದರೆ ತಾನೆ). ಆಗ ಸಹಾಯಕ್ಕೆ ಬಂದಿದ್ದು ನನ್ನ ಕಂಪ್ಯೂಟರ್. ಅದನ್ನು ’e-bay’ ಮೂಲಕ ಗಿರಾಕಿ ಹುಡುಕಿ ಮಾರಿ ಜೊತೆಗೆ ಸಿಕ್ಕ ಹೊಸ ಕೆಲಸದ ಮೊದಲ ಸಂಬಳದ ಸ್ವಲ್ಪ ದುಡ್ಡು ಸೇರಿಸಿ ವಾಪಾಸ್ಸು ಕೊಟ್ಟೆ. ಉಫ್! ಕೆಟ್ಟ ಹಟ.

ಪ್ರಾರಂಭದಲ್ಲಿ ಅಡಿಗೆ ಮನೆ ವ್ಯವಸ್ಥೆಗೆ ಸ್ವಲ್ಪ ಕಷ್ಟವಾಯಿತು. ಅಲ್ಲಿಯವರೆಗೂ ಆಕೆ ತಂದಿದ್ದ ಗ್ಯಾಸ್ ಸ್ಟೋವ್ ಇತ್ತು. ಹೊಸ ಕನೆಕ್ಷನ್ ನನಗೊಬ್ಬಳಿಗೆ ದುಬಾರಿ. ಕೊನೆಗೆ ಒಂದೇ ಒಲೆಯ ಚಿಕ್ಕ ಸಿಲೆಂಡರಿನ ಗ್ಯಾಸ್ ಒಲೆ ತಂದಿಟ್ಟುಕೊಂಡೆ. ಜೊತೆಗೆ ಒಬ್ಬಳಿಗೆ ಸಾಕಾಗುವಷ್ಟು ಚಿಕ್ಕ ಕುಕ್ಕರ್ ಮತ್ತು ಪಾತ್ರೆಗಳು ಬಂತು. ಮೊದಲೇ ನಾನು ಮಿಕ್ಸರ್ ಖರೀದಿಸಿದ್ದು ಆವತ್ತು ಉಪಯೋಗಕ್ಕೆ ಬಂತು. ಹೀಗೆ ನನ್ನ ಮತ್ತು ಇಣಚಿಯ ಪುಟ್ಟ ಸಂಸಾರ(!) ಪ್ರಾರಂಭವಾಗಿತ್ತು.

ಬೆಂಗಳೂರಿನಲ್ಲಿ ಮದುವೆಗೆ ಮುನ್ನ ಕಳೆದ ಆ ದಿನಗಳು ಇನ್ನೂ ನನಗೆ ನೆನಪಿವೆ. ನನಗೆ ಊಟ ಮಾಡಲು, ಶಾಪಿಂಗ್ ಹೋಗಲು ಜೊತೆ ಬೇಕೆನ್ನುವ ಆವಶ್ಯಕತೆ ಇಲ್ಲದ್ದರಿಂದ ಅಥವಾ ನನ್ನ ಜೊತೆ ನನಗೆ ಬದುಕಲು ಬೇಸರವಿಲ್ಲದ ಕಾರಣ ದಿನಗಳು ಬೇಗ ಖಾಲಿಯಾದವು. ಒಬ್ಬಳೇ ತಿಂದ ನೆರಳೆ ಹಣ್ಣಿನ ರುಚಿ ಇನ್ನೂ ನೆನಪಿದೆ. ದಿನಾ ಸಂಜೆ ಟೀ ಜೊತೆ ಈರುಳ್ಳಿ ಬಜೆ ಮಾಡಿಕೊಂಡು ಇಣಚಿ ಜೊತೆಗೆ ಸೇರಿ ಕಿಟಕಿಯ ಬಳಿ ತಿನ್ನುತ್ತಾ ಕುಳಿತುಕೊಳುತ್ತಿದ್ದೆ. ರಜಾ ದಿನಗಳಲ್ಲಿ ರಾತ್ರಿ ಎಷ್ಟು ಹೊತ್ತು ಬೇಕಾದರೂ ಕಂಪ್ಯೂಟರ್(ಭಾಡೀಗೆದು)ನಲ್ಲಿ ಕುಟ್ಟುತ್ತಾ ಅಥವಾ ದೊಡ್ಡದಾಗಿ ವಾಲ್ಯೂಮ್ ಹಾಕಿ ಸಿನೆಮಾ ನೋಡಬಹುದಿತ್ತು. ಇಣಚಿಗೂ ಇಡೀ ಮನೆ ಓಡಾಡುವ ಪರ್ಮಿಟ್ ಸಿಕ್ಕಿತ್ತು. ಅದಕ್ಕೆ ಬಯ್ಯುವರಾರು ಇರಲಿಲ್ಲ. ಬೇಕೆಂದಾಗ ಅಡಿಗೆ ಮಾಡಿಕೊಳ್ಳಬಹುದಿತ್ತು. ಪಾತ್ರೆ ತೊಳೆಯದೇ ಹಾಗೆ ಇಟ್ಟರೂ ಕೇಳುವರ್ಯಾರಿರಲಿಲ್ಲ. ಸುಮಾರು ಆರು ತಿಂಗಳ ಆ ಸಮಯದಲ್ಲಿ ಕೆಲವೊಂದು ಘಟನೆಗಳನ್ನು ಬಿಟ್ಟರೇ ಉಳಿದಿದ್ದೆಲ್ಲ ಸಕತ್ ಚೆನ್ನಾಗಿತ್ತು. ನಾನು ಒಬ್ಬಳೇ ಇರುವ ವಿಷಯ ಗೊತ್ತಾಗಿ ಭೂಪನೊಬ್ಬ ರಸ್ತೆಯಲ್ಲಿ ಹಿಂದೆ ಬಿದ್ದಿದ್ದು, ಆತನಿಗೆ ನಾ ಹೊಡೆಯಲು ಹೋಗಿದ್ದು,… ವಗೈರೆಗಳು. ಮೊದಲಿನಿಂದಲೂ ಮನೆಗೆ ಹುಡುಗರನ್ನು ಸ್ನೇಹಿತ ಅಥವಾ ದೂರದ ಅಣ್ಣ ಎಂದು ಕರೆತರುವ ಹಾಗಿರಲಿಲ್ಲ. ಆದು ನಮ್ಮ ಅಲಿಖಿತ ಒಪ್ಪಂದವಾಗಿತ್ತು. ಆಗ ಮಾಡಿಕೊಂಡಿದ್ದ ರೂಲ್ಸು ನಾನು ಒಬ್ಬನೇ ಇರಬೇಕಾದರೆ ತುಂಬಾ ಚೆನ್ನಾಗಿ ಸಹಾಯ ಮಾಡಿದವು. ಅಕ್ಕ-ಪಕ್ಕದ ಮನೆಯವರಿಗೆ, ಓನರಿಗೆ ಒಳ್ಳೆಯ ಅಭಿಪ್ರಾಯ ಇದ್ದುದರಿಂದ ಏನೂ ರಗಳೆಯಾಗಲಿಲ್ಲ. ಎಲ್ಲಕ್ಕಿಂತ ಜಾಸ್ತಿ ಪಕ್ಕವೇ ಅಣ್ಣನವರು ಇದ್ದುದು ನನಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಕೊನೆಗೊಂದು ದಿನ ನಾನು ಒಬ್ಬನೇ ಇರಲು ಕಾರಣವಾದ ಇಣಚಿ ಮನೆ ಬಿಟ್ಟು ಸಂಗಾತಿಯ ಬೆನ್ನು ಹತ್ತಿ ಹೋಯಿತು. ಮೊದಲು ಸ್ವಲ್ಪ ದಿನ ಅದರ ನೆನಪಲ್ಲಿ ಬೇಸರವಾದರೂ ನಂತರ ಹೊಸ ಕೆಲಸ ಮತ್ತು ನನ್ನ ಮದುವೆಯ ತಯಾರಿಯಲ್ಲಿ ನಾನು ಕಳೆದು ಹೋಗಿದ್ದೆ.

(ಕೆಲ ಬದಲಾವಣೆಗಳೊಂದಿಗೆ ‘ಸಖಿ’ಯ ಜನವರಿ೧೬-೩೦ರ ಸಂಚಿಕೆಯಲ್ಲಿ, ‘ಸಂತೆಯಲ್ಲಿ ಏಕಾಂತೆ’ ತಲೆಬರಹದಡಿ ಪ್ರಕಟವಾಗಿತ್ತು)

ಸುಂದರಿ

ಫೆಬ್ರವರಿ 28, 2008

ಎಳೆಬಿಸಿಲೆಗೆ ಮೈಚಾಚಿ ಮಲಗಿದಾಗ
ಕಂಡಲಾ ಚೆಲುವೆ, ಎನ್ನ ಸ್ವಪ್ನ ಸುಂದರಿ
ಕೆಂಪನೆ ರವಿ ಅವಳ ಹಣೆ ಮಧ್ಯದಲ್ಲಿ
ಸ್ವಚ್ಛ ಮೋಡ ಅವಳ ತುಟಿಯಂಚಿನ ನಗೆಯಲ್ಲಿ
ಆಕಾಶತಾರೆಗಳು ಅವಳ ಹುಬ್ಬಿನಲ್ಲಿ
ನೀಲಾಗಸವೇ ಅವಳ ಬಾಹುಗಳಲ್ಲಿ
ನನ್ನಡೆಗೆ ಇಳಿದ ನಡೆ ಮಂದಾರದಲ್ಲಿ
ಆಹಾಹಾಎಂದೆನ್ನುತ್ತಿರುವಾಗಲೇ
ಕೆನ್ನೆಗೆ ಬಿದ್ದ ಹೊಡೆತ ಸಿಡಿಲಿನಂತೆ
ಬೈದ ಬೈಗುಳ ಗುಡುಗಿನಂತೆ
ಸ್ವಪ್ನ ತುಣುಕುಗಳು ಭುವಿಗೆ
ಬಿದ್ದ ನೀರ ಹನಿಯಂತೆ
ಶೋಭಿಸುತಿದ್ದಾಗ ಆಗಿದ್ದಳಾಕೆ
ಎನ್ನ ಸ್ವಪ್ನ ಸುಂದರಿ
ಪ್ರಿಯ ಚೆಲುವೆ, ಇದೀಗ ಭಗ್ನ ಸುಂದರಿ

-written and published on 1996