Archive for the ‘ನನ್ ಡೈರಿ’ Category

ಒಂದು ಕಾಲದಲ್ಲಿ,

ಮೇ 6, 2022

ಸ್ವಲ್ಪ ಹೊತ್ತು ಮೊದಲು ‘ಲೋಕಧ್ವನಿ’ ದಿನಪತ್ರಿಕೆ ವಿಶ್ವವಾಣಿ ಬಳಗಕ್ಕೆ ಸೇರಿದ ಕುರಿತು ವಿಶ್ವೇಶ್ವರ ಭಟ್ಟರು ಹಾಕಿದ ಪೋಸ್ಟ್‌ ನೋಡಿ ಹಳೆಯ ನೆನಪುಗಳು ಒಟ್ಟಾಗಿ ಬಂತು.

ಶಿರಸಿ ಸಮಾಚಾರ
ಶಿರಸಿಯ ಮನೆಗಳಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಯ ಜೊತೆ ಅಲ್ಲಿಯ ಸ್ಥಳೀಯ ಜಿಲ್ಲಾ ಪತ್ರಿಕೆಗಳಾದ ʼಲೋಕ ಧ್ವನಿʼ ಇಲ್ಲಾ ʼಜನಮಾಧ್ಯಮʼ ದಿನನಿತ್ಯ ಬಂದೇ ಬರುತ್ತೆ ಎಂದು ನಾನು ನಂಬಿದ್ದೇನೆ. ಆ ಮಟ್ಟಿಗೆ ಅಲ್ಲಿ ಜನಪ್ರಿಯ. ನಾನು ತುಂಬಾ ಸಣ್ಣವಳಿದ್ದಾಗ ಅಜ್ಜನ ʼಶಿರಸಿ ಸಮಾಚಾರʼ ಜನಪ್ರಿಯವಾಗಿತ್ತು ಅನ್ನುವುದು ಕೇಳಿ ಗೊತ್ತು.

ಬಾಲ್ಯದಲ್ಲಿ 5-7ನೇಯ ವಯಸ್ಸಿನಲ್ಲಿ ಅಜ್ಜನ ʼಶಾರದಾ ಪ್ರೆಸ್‌ʼ ನೋಡಿದ್ದ ನೆನಪಿದೆ. ಅಥವಾ ಶಿವಮೊಗ್ಗ ತೊರೆದು ಅಪ್ಪ- ಅಮ್ಮ ಶಿರಸಿಗೆ ಬಂದ ಕೂಡಲೇ ಅದೇ ಕಟ್ಟಡದಲ್ಲಿ ಕೆಲವು ಕಾಲ ತಂಗಿದ್ದ ಕಾರಣ ಈ ನೆನಪುಗಳು ಇನ್ನೂ ಇರಬಹುದು. ಆಮೇಲೆ ಅಪ್ಪ ಸಿ ಪಿ ಬಜಾರಿನಲ್ಲಿ ʼಉದಯ ಮುದ್ರಣʼ ಶುರು ಮಾಡಿದ ಮೇಲೆ, ಸ್ಕೂಲಿನಿಂದ ಬರುತ್ತಾ ಕೆಲವೊಮ್ಮೆ ಅಜ್ಜನ ಕಛೇರಿಗೆ ಹೋಗುತ್ತಾ ಇದ್ದಿದ್ದು ನೆನಪಿದೆ. ಮೆಟ್ಟಿಲು ಹತ್ತಿ ಒಳ ಹೋಗುತ್ತ ಇದ್ದ ಹಾಗೆ ಉದ್ದವಾದ ಹಾಲ್‌, ಎದುರು ಮರದ ವಿಶಾಲವಾದ ಟೇಬಲ್‌, ಅದರ ಮಧ್ಯ ಗಾಂಧಿ ಟೋಪಿ ಮತ್ತು ಬಿಳಿ ಖಾದಿಧಾರಿ ಅಜ್ಜ ಕುಳಿತಿರುತ್ತಿದ್ದ ನೆನಪು. ಎಡಗಡೆ ವಿಶಾಲವಾದ ಕಿಟಕಿ, ಅದರ ಕೋನಾಕಾರದ ಬಿಳಿ ಬಣ್ಣ ಬಳಿದ ಮರದ ಪಟ್ಟಿಗಳಿಂದ ಕೋಣೆಗೆ ಬೀಳುತ್ತಿದ್ದ ಬೆಳಕು, ಮೇಲೆ ಕಳೆದ ದೀಪಾವಳಿಗೆ ದಾರದಲ್ಲಿ ಕಟ್ಟಿದ ಬಣ್ಣ ಬಣ್ಣದ ಪತಾಕೆಗಳು. ಬಲಗಡೆ ಕಿಟಕಿಗಳಿರಲಿಲ್ಲ. ಪ್ರಿಂಟಿಂಗ್‌ ಇಂಕ್‌ ತುಂಬಿದ ಡಬ್ಬಿಗಳಿರುವ ಮರದ ಕಪಾಟು ಇದ್ದ ನೆನಪು. ಹಾಗೆ ಬಲ ತುದಿಗೆ ಒಳಗಡೆ ಹೋಗುವ ದಾರಿ. ಒಳ ಹೋಗುತ್ತ ಮೊದಲು ಕಾಣುವುದು ಸದ್ದು ಮಾಡುತ್ತಿರುವ ಟ್ರೆಡಲ್‌ ಪ್ರಿಂಟಿಂಗ್‌ ಮೆಶಿನ್‌, ಹಾಗೇ ಮುಂದೆ ಹೋದರೆ ಮರದ ಅಚ್ಚು ಮೊಳೆಗಳ ವಿಭಾಗ, ಇನ್ನೊಂದು ಮೆಶಿನ್‌ ಹಾಗೂ ಅಚ್ಚು ಮೊಳೆಗಳ ಚೌಕಟ್ಟು ಕಟ್ಟುವ ಟೇಬಲ್.‌ ಸೀಮೆ ಎಣ್ಣೆ ಮತ್ತು ಇಂಕ್ ಗಳ ವಾಸನೆ, ಕಪ್ಪು ಬಣ್ಣ ಮೆತ್ತಿಕೊಂಡಿರುವ ಶರ್ಟ್ಗಳನ್ನು ಧರಿಸಿರುವ ಕೆಲಸಗಾರರು ಮತ್ತು ಕಪ್ಪು ಕೈಗಳು,….

ಅಜ್ಜನಿಗೆ ವಯಸ್ಸಾಗುತ್ತ ಬಂದ ಹಾಗೆ ಶಾರದಾ ಪ್ರೆಸ್‌ ಮಾರುವ ನಿರ್ಧಾರ ಮಾಡಿ ಮಾರಿಯೂ ಆಯಿತು. ಅಲ್ಲಿಯ ಕೆಲವು ಕುರ್ಚಿಗಳು, ಟೀಪಾಯಿಗಳು ಅಜ್ಜನ ಮನೆಗೆ ವರ್ಗಾಯಿಸಿದರು. ಅಜ್ಜನ ಮನೆಗೆ ಹೋದಾಗ ಮೆತ್ತಿಯ ರೂಮಿನಲ್ಲಿ ತುಂಬಿಟ್ಟಿದ್ದ ಮರದ ಪೀಠೋಪಕರಣಗಳು ಶಾರದಾ ಪ್ರೆಸ್ಸು ಮತ್ತು ಶಿರಸಿ ಸಮಾಚಾರದ ಗತ ವೈಭವ ಹೇಳುತ್ತಿದ್ದವು.

ನಾನು ಆವೆಮರಿಯಾ ಸ್ಕೂಲಿನಿಂದ ಸಿಪಿ ಬಜಾರಿನ ನಮ್ಮ ಮನೆಗೆ ನಡೆದು ಹೋಗುತ್ತಾ ಎಡಗಡೆ ಬೀಗ ಜಡಿದು ಕುಳಿತ ಆ ಬಿಳಿ ಕಟ್ಟಡ ನನ್ನಲ್ಲಿ ಯಾವ ಭಾವನೆಗಳನ್ನು ಹುಟ್ಟಿಸುತಿತ್ತು ಅನ್ನುವುದು ನಿಖರವಾಗಿ ನನಗೂ ತಿಳಿದಿಲ್ಲ. ಈಗಲೂ ಈ ಕಟ್ಟಡವಿದೆ. ಕೃಷ್ಣಾ ಫೈನ್‌ ಆರ್ಟಿಗೆ ಭೇಟಿ ಕೊಟ್ಟಗಲೆಲ್ಲ ಅಲ್ಲಿ ಹಿರಿಯ ಗುಡಿಗಾರರು ಸಿಕ್ಕಾಗ ಮತ್ತೆ ಹಳೆಯದು ನೆನಪಿಗೆ ಬರುತ್ತದೆ. ಶಿರಸಿ ಸಮಾಚಾರ ಆಮೇಲೆ ವಾರ ಪತ್ರಿಕೆಯಾಗಿ, ಅನೇಕ ಸಂಪಾದಕರು ಆಗಿ ಹೋಗಿ, ಸಧ್ಯ ಪ್ರಕಟನೆಯಲ್ಲಿ ಇದೆಯಾ ಅನ್ನವುದು ನನಗೆ ತಿಳಿದಿಲ್ಲ.

———-

ಜನಮಾಧ್ಯಮ

ಅಪ್ಪನದು ಮುದ್ರಣದ ಕಾರ್ಯ ಕ್ಷೇತ್ರವೇ ಆಗಿದ್ದರಿಂದ ಜನಮಾಧ್ಯಮದ ಜಯರಾಮ ಹೆಗಡೆಯವರ ಪರಿಚಯ ಅವರಿಂದಲೇ ಆಗಿದ್ದು. ಸಿಂಪಿಗಲ್ಲಿ(?)ಯಲ್ಲಿ ಅವರ ಕಛೇರಿ ಇದ್ದ ನೆನಪು. ಅಲ್ಲಿಯೇ ಇದ್ದ ಕೃಷ್ಣಾ ಪ್ರಿಂಟರ್ಸ್‌ ಕಛೇರಿಗೆ ಅಪ್ಪನ ಜೊತೆ ಬಾಲ್ಯದಲ್ಲಿ ಹೋದಾಗ ಜನಮಾಧ್ಯಮ ಕಛೇರಿಗೆ ಹೋಗಿದ್ದ ನೆನಪಿದೆ. ಅದಕ್ಕೂ ಹೆಚ್ಚಾಗಿ ಅಣ್ಣನ ಸ್ನೇಹಿತೆ ಸಿಂಧೂ ಅಕ್ಕಳ ಕಾರಣ ಜನಮಾಧ್ಯಮ ನೆನಪಿದ್ದಿದ್ದು ಹೆಚ್ಚು. ಆಮೇಲೆ ಸಿ ಪಿ ಬಜಾರಿನಿಂದ ಜಿಪಿ ಸೆಂಟರಿಗೆ ʼಉದಯ ಮುದ್ರಣʼ ಸ್ಥಳಾಂತರವಾದ ಮೇಲೆ ನಮ್ಮ ಮನೆಯೂ ಅದರ ಹಿಂದುಗಡೆ ಇದ್ದ ಗುರುನಗರಕ್ಕೆ ಬದಲಾಗಿತ್ತು. ಆಗ ಮೊದಲೇ ಸಿಗುತ್ತಿದ್ದ ಜಯರಾಮ ಹೆಗಡೆಯವರ ಮನೆ ಜನಮಾಧ್ಯಮದವರ ಮನೆಯಂತಲೇ ನೆನಪಿಟ್ಟುಕೊಂಡಿದ್ದಿದೆ.

——

ಧ್ಯೇಯನಿಷ್ಠ ಪರ್ತಕರ್ತ

ಕಾಲೇಜಿನಲ್ಲಿ ಸಚ್ಚಿದಾನಂದ ಹೆಗಡೆಯವರು ನಮ್ಮ ಪತ್ರಿಕೋದ್ಯಮದ ಗೆಸ್ಟ್‌ ಲೆಕ್ಚರ್‌ ಆಗಿ ಬಂದಾಗ ಆಗಲೇ ಡಿಜಿಟಲ್‌ ಕ್ರಾಂತಿ ಶುರುವಾಗಿ ಟ್ರೆಡಲ್‌ ಮಿಶಿನ್‌ ಬಿಟ್ಟು ಆಫ್‌ ಸೆಟ್‌ ಅದೂ ದೊಡ್ಡ ಮೆಶಿನ್‌ ಹಾಕಿದ್ದರು ಅನ್ನುವ ನೆನಪಿದೆ. ಪರ್ತಕರ್ತದ ಅಚ್ಚು ಮೊಳೆಗಳ ಅವರ ಕಛೇರಿಗೂ‌ ಬಾಲ್ಯದಲ್ಲಿ ಅಪ್ಪನ ಜೊತೆ ಹೋದ ನೆನಪಿದೆ. ಆಮೇಲೆ ಅವರ ಆಧುನಿಕ ಆಫ್‌ ಸೆಟ್ ಕಛೇರಿಗೆ ನನ್ನ ಪಜಲ್‌ ಕೊಡುವ ವಿಚಾರವಾಗಿ ಭೇಟಿ ಆಗಿದ್ದೆ. ಅದಕ್ಕೂ ಹೆಚ್ಚಾಗಿ ಪರ್ತಕರ್ತ ನೆನಪಿರುವುದು ಅವರಿಗೆ ಹೆಚ್ಚು ಸಲ ಟಿಎಸ್‌ ಎಸ್‌, ಕೆಡಿಸಿಸಿ,.. ಇನ್ನೀತರ ಮುಖ್ಯವಾದ ಪ್ರಿಂಟಿಂಗ್‌ ಟೆಂಡರ್‌ ಸಿಗ್ತಾ ಇತ್ತು ಅನ್ನುವುದು. ಶಿರಸಿಯಲ್ಲಿ ಎಣಿಸುವಷ್ಟು ಪ್ರಿಂಟಿಂಗ್‌ ಪ್ರೆಸ್ಸುಗಳು ಇದ್ದರೂ ಕಾಂಪಿಟೇಶನ್‌ ಕೂಡ ಹಾಗೆಯೇ ಇತ್ತು. ಈಗ ಡಿಜಿಟಲ್‌ ಪ್ರಿಂಟ್‌ ಬಂದ ಮೇಲಂತೂ ಆಫ್‌ ಸೆಟ್‌ ಮುದ್ರಣವೂ ಕಡಿಮೆಯಾಗಿ, ಅನೇಕ ಹಳೆಯ ಪ್ರೆಸ್ಸುಗಳು ಮುಚ್ಚಿ ಹೋಗಿವೆ.

——

ಲೋಕಧ್ವನಿ
ಅಪ್ಪ- ಅಮ್ಮ ಟ್ರೆಡಲ್‌ ಪ್ರಿಂಟಿಂಗ್‌ ತೆಗೆದು ಆಫ ಸೆಟ್‌ ಪ್ರಿಂಟಿಂಗ್‌ ಯುನಿಟ್ ಹಾಕುವ ಯೋಚನೆ ಮಾಡಿದಾಗ ಲೋಕಧ್ವನಿಯ ಗೋಪಾಲಕೃಷ್ಣ ಆನವಟ್ಟಿಯವರನ್ನು ಭೇಟಿ ಆಗಿದ್ದರು ಅನ್ನುವ ನೆನಪಿದೆ. ಶಿರಸಿಯಲ್ಲಿ ಮೊದಲ ಆಫ್‌ ಸೆಟ್‌ ಮುದ್ರಣ ತಂತ್ರಜ್ಞಾನ ತಂದಿದ್ದು ಇವರೇ ಅನ್ನುವುದು ನನ್ನ ನೆನಪು. ಆಮೇಲೆ ಕಾಲೇಜಿನ ಮೊದಲ ವರ್ಷದಲ್ಲಿ ನನ್ನ ಪಜಲ್‌ ಕೊಡುವ ವಿಚಾರವಾಗಿ ಅವರ ಕಛೇರಿಗೆ ಭೇಟಿ ಕೊಟ್ಟಿದ್ದೆ. ಮಧುವನ ಎದುರುಗಡೆಯ ಕ್ರಾಸಿನಲ್ಲಿ ಸ್ವಲ್ಪ ಮುಂದೆ ಹೋದರೆ ಬಲಗಡೆ ಲೋಕಧ್ವನಿಯ ಆಫೀಸು. ಕೆಳಗಡೆ ಆನವಟ್ಟಿಯವರ ಮನೆ, ಮೆಲುಗಡೆ ಪ್ರೆಸ್ಸು. ಗುಂಗುರು ಕೂದಲಿನ, ಕಪ್ಪು ಕನ್ನಡಕ ಹಾಕಿದ ಮುಖ ನೆನಪಿದೆ. ಒಂದೋ, ಎರಡೋ ಬಾರಿ ಅಷ್ಟೇ ಅವರನ್ನು ನೋಡಿದ ನೆನಪಿದೆ.

1996ರಲ್ಲಿ ಲೋಕಧ್ವನಿಯಲ್ಲಿ ಬರುತ್ತಿದ್ದ ಸಾಹಿತ್ಯ ಧ್ವನಿ ಮರೆಯಲು ಸಾಧ್ಯವೇ ಇಲ್ಲ. ಆಗಷ್ಟೇ ಹತ್ತನೇ ಕ್ಲಾಸು ನವೋದಯ ಮುಗಿಸಿ ಏಪ್ರಿಲ್-ಮೇ ರಜೆಯಲ್ಲಿ ಇದ್ದ ಸಮಯ. ಆಗ ಟ್ರೆಂಡಿನಲ್ಲಿ ಇದ್ದ ಪೆನ್‌ ಫ್ರೆಂಡುಗಳ ಟ್ರೆಂಡ್‌, ಅಜ್ಞಾತವಾಗಿ 15 ಪೈಸೆ ಹಳದಿ ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದ ಪತ್ರಗಳು,.. ಸುಪ್ರಿಯಾ ಅಂತ ಹೆಸರಿಟ್ಟುಕೊಂಡಿದ್ದೆ ಬೇರೆ. ಹೆಚ್ಚಾಗಿ ಇದೇ ಕಾರಣಕ್ಕೇ ಲೋಕಧ್ವನಿ ಜೊತೆ ಭಾವನೆಗಳು ಬೆಸೆದು ಕೊಂಡಿರಬಹುದು.

ಈಗ ಲೋಕಧ್ವನಿ ಅಂದರೆ ನೆನಪಾಗುವುದು ಅಶೋಕ ಕಾಕ. ಅವರು ಮೊದಲು ಕಾರವಾರದಲ್ಲಿ ʼಕರಾವಳಿ ಮುಂಜಾವುʼ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಆನವಟ್ಟಿಯವರು ಲೋಕಧ್ವನಿ ಮಾಲಿಕತ್ವ ಬೇರೆಯವರಿಗೆ ವಹಿಸಿದ ಮೇಲೆ, ಕಾಕ ಸಂಪಾದಕತ್ವ ವಹಿಸಿಕೊಂಡರು. ಚಿಕ್ಕಿ ಮತ್ತು ಕಾಕ ಶಿರಸಿಗೆ ಸ್ಥಳಾಂತರವಾದರು. ಕಪ್ಪು ಬಿಳುಪಿನ ಲೋಕಧ್ವನಿ ಕಲರ್‌ ಫುಲ್‌ ಆಯಿತು. ಆಮೇಲೆ ಶಿರಸಿಗೆ ಅವರ ಮನೆಗೆ ಹೋದಾಗಲೆಲ್ಲ ಲೋಕಧ್ವನಿಯ ಪ್ರಸ್ತಾಪ ಆಗೇ ಆಗುತಿತ್ತು. ಶಿರಸಿಗೆ ಹೋದಾಗಲೆಲ್ಲ ಲೋಕಧ್ವನಿಯ ಹೊಸ ಆಫೀಸು ಹೊರಗಡೆಯಿಂದ ನೋಡಿದ್ದೇ ಹೊರತು ಯಾವತ್ತೂ ಆಫೀಸಿಗೆ ಹೋಗಿ ಕಾಕನನ್ನು ಭೇಟಿ ಮಾಡುವ ಯೋಚನೆಯೇ ಮಾಡಿರಲಿಲ್ಲ. ಆಥವಾ ಮಧುವನದ ಎದುರಗಡೆ ಇದ್ದ ಲೋಕಧ್ವನಿಯ ಕಛೇರಿಯ ನೆನಪು ಕಳೆದು ಕೊಳ್ಳಲು ಇಷ್ಟವಿರಲಿಲ್ಲವೇನೊ, ತಿಳಿದಿಲ್ಲ.

ಈಗ ಕಾಕನೂ ಲೋಕಧ್ವನಿಯಲ್ಲಿ ಇಲ್ಲ. ಲೋಕಧ್ವನಿ ಮತ್ತೆ ಬದಲಾಗಿದೆ. ವಿಶ್ವವಾಣಿ ಬಳಗಕ್ಕೆ ಸೇರ್ಪಡೆ ಆಗಿದೆ. ಅಪ್ಪ-ಅಮ್ಮನೂ ಈಗ ಶಿರಸಿಯಲ್ಲಿಲ್ಲ. ಸಾಗರಕ್ಕೆ ಸ್ಥಳಾಂತರವಾಗಿದ್ದಾರೆ. ಹಾಗಾಗಿ ಮುಂದೆ ಯಾವಾಗಲೋ ಚಿಕ್ಕಿ-ಕಾಕರನ್ನು ಭೇಟಿಯಾಗಲು ಶಿರಸಿಗೆ ಹೋದಾಗ ಹೊಸದಾದ ʼಲೋಕ ಧ್ವನಿʼಯನ್ನು ಕೈಯಲ್ಲಿ ಹಿಡಿದು ಓದಬಹುದು. ಮತ್ತೆ ಇನ್ನೂ ಹಳೆಯ ನೆನಪುಗಳು ಹೊರ ಬರಬಹುದು.

ಪರಿವರ್ತನೆ ( ಭಾಗ 1)

ಆಗಷ್ಟ್ 24, 2021

ಸ್ವಂತ ಮನೆಯಲ್ಲಿ ಹುಟ್ಟಿದವರಿಗೆ/ ಸ್ವಂತ ಮನೆಯನ್ನೇ ಸೇರಿದವರಿಗೆ ಭಾಡಿಗೆ ಮನೆಯಲ್ಲಿ ಇರುವವರ ತಲ್ಲಣಗಳು ಅರ್ಥವಾಗುತ್ತಾ? ಇದನ್ನು ಯೋಚಿಸುತ್ತಾ ಬೇರೆಯ ವಿಷಯಗಳು ತಲೆಗೆ ಬರುತ್ತಾ ಹೋದವು.

————-

ನಾನೆಂದೂ ಸ್ವಂತ ಮನೆಯನ್ನು ನೋಡಿದವಳಲ್ಲ. ಭಾಡಿಗೆ ಮನೆಯಲ್ಲಿ ಹುಟ್ಟಿ ಬದುಕಿನ ನಲವತ್ತು ವರ್ಷ ಭಾಡಿಗೆ ಮನೆಯಲ್ಲಿ ಕಳೆದಿರುವುದರಿಂದ, ಸ್ವಂತ ಮನೆಯಲ್ಲಿ ಹುಟ್ಟಿ, ಸ್ವಂತ ಆಸ್ತಿ ಇರುವ ಇವನು ಹೇಳುವ ಸ್ವಂತ ಮನೆಯ ಕನಸು ಯಾವತ್ತೂ ನನ್ನದಾಗಲಿಲ್ಲ. ಈಗ ಇಷ್ಟು ದೊಡ್ಡ ಇರುವ ಭಾಡಿಗೆ ಮನೆಯನ್ನು ಬಿಟ್ಟು ಇದರ ಅರ್ಧವಾಗಿರುವ ಸ್ವಂತ ಮನೆಗೆ ಹೋಗುವುದು ನನ್ನಲ್ಲಿ ಯಾವುದೇ ಖುಷಿಯನ್ನು, ಆಸಕ್ತಿಯನ್ನು ಹುಟ್ಟಿಸದೇ ಇರುವುದಕ್ಕೆ ಇದು ಕಾರಣವಾಗಿರಬಹುದು. ಆದರೆ ಮುಂಬಯಿಯಂತಹ ಶಹರದಲ್ಲಿ ಇಷ್ಟು ದೊಡ್ಡ ಮನೆ ಮತ್ತು ಇದಕ್ಕಿಂತ ಆಧುನಿಕ ಸೌಕರ್ಯಗಳು ಬೇಕು ಅಂದರೆ ಲಕ್ಷಗಳನ್ನು ಬಿಟ್ಟು ಕೋಟಿಯತ್ತ ಮುಖ ಮಾಡಬೇಕು. ಹಾಗೇ ಮಾಡಿದರೆ ದೊಡ್ಡ ಮನೆ ಸಿಗುತ್ತದೆ, ಆದರೆ ಈಗಿರುವ ಹಣಕಾಸಿನ ನೆಮ್ಮದಿ ಬಿಟ್ಟು ಹೋಗುತ್ತದೆ. ಇಲ್ಲವೇ, ಮುಂಬಯಿಯ ಪಕ್ಕದ ಊರಾದ ಈ ಥಾಣೆಯನ್ನೂ ಬಿಟ್ಟು ಇನ್ನೂ ದೂರದ ಕಲ್ಯಾಣ, ದೊಂಬಿವಿಲಿ ಕಡೆ ಹೋಗಬೇಕು. ಆದರೆ ಥಾಣೆಯ ಶಹರದ ಸೌಕರ್ಯಗಳೂ ಅಲ್ಲಿ ಸಿಗುವುದಿಲ್ಲ. ಒಳ್ಳೆಯ ಶಾಪಿಂಗ್‌ ಮಾಲ್‌ ಬೇಕು ಅಂದರೂ ಥಾಣೆಗೆ ಬರಬೇಕು. ಅದೂ ಬೇಡ ಅಂದರೆ ಹತ್ತು ಹದಿನೈದು ವರ್ಷ ಹಳೆಯ ಸೌಕರ್ಯಗಳಿಗೆ ಹೋಗಬೇಕು. ನನ್ನ ಸ್ನೇಹಿತ ಹೇಳಿದ ಹಾಗೆ, ನೀವು ದುಡ್ಡು ಕೊಟ್ಟಿದ್ದು ಮನೆಗಲ್ಲ, 2 ಎಕರೆ ಪ್ರೈವೇಟ್ ಕಾಡಿಗೆ, ಐದು ಸ್ವಿಮ್ಮಿಂಗ್‌ ಪೂಲುಗಳಿಗೆ, ಫುಟ್‌ ಬಾಲ್‌ ಸ್ಟೇಡಿಯಂಗೆ, … ( ನಾನು ಅವನ ಹತ್ತಿರ ಕೊಚ್ಚಿಗೊಂಡ ಆಧುನಿಕ ಸೌಲಭ್ಯಗಳು)

——

ಈಗ ಹೊಸ ಮನೆಗೆ ಹೊಸತು ಬೇಕು. ಇಲ್ಲಿ ಮಾಡಿಕೊಂಡಿರುವ ಹೆಚ್ಚಿನ ಪಿಠೋಪಕರಣಗಳನ್ನು ಮಾರುವುದು ಎಂದಾಗಿದೆ. ಇವೆಲ್ಲ ಮಾಡುತ್ತಿರುವಾಗ ನಾನೂ ದುಡಿಯುತ್ತ ಇದ್ದೆ. ನಮ್ಮದು 50:50 ಫಾರ್ಮುಲಾ. ಅರ್ಧ ದುಡ್ಡು ನಾನು ಹಾಕುತ್ತಾ ಇದ್ದೆ. ಪ್ರತಿ ಸಾಮಾನಿನ ಹಿಂದೆ ದುಡ್ಡು ಶೇಖರ ಮಾಡಿ ಹುಡುಕಾಡಿ ತೆಗೆದುಕೊಂಡ ಕತೆಗಳಿವೆ. ಪ್ರತಿ ಸಾಮಾನನ್ನೂ ತೆಗೆದು ಕೊಂಡಾಗಲೂ ಹೆಮ್ಮೆಯಿಂದ ನೋಡಿದ್ದಿದೆ. ಬೆಂಗಳೂರಿನಿಂದಲೂ ಮುಂಬಯಿಗೆ ತಂದುಕೊಂಡ ವಸ್ತುಗಳಿವೆ. ಈಗ ಮೊದಲಿನ ಹಾಗೇ ದುಡ್ಡು ಕೂಡಿಟ್ಟು ಸಾಮಾನು ಮಾಡುವ ಅಗತ್ಯವಿಲ್ಲ. ಆದರೆ ಈ ಮನೆಯಲ್ಲಿ ಬದುಕಿದ ಹನ್ನೊಂದು ವರ್ಷದ ನೆನಪು ಇಲ್ಲಿರುವ ಎಲ್ಲಾ ಸಾಮಾನುಗಳಲ್ಲಿವೆ. ಇದನ್ನೆಲ್ಲಾ ಬಿಟ್ಟು ಅಥವಾ ತೆಗೆದಿಟ್ಟು ಹೊಸದು ಮತ್ತೆ ಬದುಕಿನಲ್ಲಿ ತಂದು ಕೊಳ್ಳುವುದು ನನಗೆ ಕಷ್ಟ. ನಾನೂ ದುಡ್ಡು ಹಾಕುತ್ತಾ ಇದ್ದರೆ ಈ ಕಷ್ಟ ನನಗೆ ಆಗುತ್ತಿರಲಿಲ್ಲವೇನೋ. ಈಗ ಅವನ ಸ್ವಂತ ದುಡಿಮೆಯ ಮನೆ, ಪೂರ್ತಿ ಅವನದೇ. ಅಲ್ಲಿರುವ ಎಲ್ಲಾ ಹೊಸ ಸಾಮಾನುಗಳೂ ಪೂರ್ತಿ ಅವನದ್ದೇ ಆಗಲಿವೆ. ವಿನ್ಯಾಸದ ಐಡಿಯಾ ನನ್ನದೇ ಆದರೂ ನನಗೆ ಸಮಾಧಾನವಿಲ್ಲ. ನಿನ್ನೆ ಮನೆಯ ಬಾಗಿಲಿಗೆ ಬಿಲ್ಡರ್‌ ಅವನ ಹೆಸರಿನ ನಾಮ ಫಲಕ ಅಂಟಿಸಿ ಹೋಗಿದ್ದರು. ನಾನೂ ದುಡಿಯುತ್ತಾ ಅರ್ಧ ದುಡ್ಡು ಹಾಕುವ ಹಾಗಿದ್ದರೆ, ನನ್ನ ಹೆಸರೂ ಇದರಲ್ಲಿ ಬರುತ್ತಾ ಇತ್ತು ಎಂದೆಣಿಸದೇ ಇರಲಿಲ್ಲ. ಆದರೆ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡ ಇವನಿಗೆ, ಅವನ ಹೆಸರು ಇರುವ ಹೊಳೆಯುವ ಫಲಕ ಕೊಡುತ್ತಿರುವ ಖುಷಿಯನ್ನು ಬೇರೆ ಏನೋ ಹೇಳಿ ಹಾಳು ಮಾಡುವ ಮನಸ್ಸಾಗಲಿಲ್ಲ. ನೋಡಿ, ಎಲ್ಲಾ ಭಾವಗಳನ್ನು ಮುಚ್ಚಿಟ್ಟು, ಕಂಗ್ರಾಟ್ಸ್‌ ಅಷ್ಟೇ ಹೇಳಿದೆ.ಹಾಗಂತ ಇವನಷ್ಟು ದುಡಿದು, ಸ್ವಂತ ಮನೆ ನಾನು ಮಾಡುವುದಾದರೆ, ಇನ್ನೂ ಹತ್ತು ವರ್ಷಗಳು ಮಿನಿಮಮ್‌ ಆಗಿ ಬೇಕು. ಕೆಲಸಕ್ಕೆ ವಾಪಾಸ್ಸು ಸೇರಿದರೂ ಸಂಬಳ ಸಿಗುವುದು ಏಳು ವರ್ಷ ಹಿಂದೆ ಮಗುವಿಗಾಗಿ ಬಿಟ್ಟ ಕೆಲಸದ ಮೇಲೆಯೇ. ಏಳು ವರ್ಷದಲ್ಲಿ ಕೆಲಸ ಮಾಡುವ ವಿಧಾನವೇ ಬೇರೆಯಾಗಿದೆ. ಮತ್ತೆ ಹೊಸದನ್ನು ಕಲಿತು, ಅದರಲ್ಲಿ ಪರಿಣತಿ ಗಳಿಸಿ, ಸಂಬಳ ಜಾಸ್ತಿ ಮಾಡಿಕೊಳ್ಳುತ್ತ, ಹಣ ಕೂಡಿಟ್ಟು, … ಕೂದಲೂ ಇನ್ನೂ ಬೆಳ್ಳವಾಗಿ, ….. ಇದೆಲ್ಲಕ್ಕಿಂತ ಒಳ್ಳೆಯ ಕೆಲಸ, ಸ್ವಲ್ಪ ಕಷ್ಟವಾದರೂ ಇವನ ಜೊತೆ ಇವನ ಸ್ವಂತ ಮನೆಯಲ್ಲಿ ಹೆಂಡತಿ ಪಟ್ಟದ ಆಧಾರದ ಮೇಲೆ, ಇದು ತನ್ನದೂ ಮನೆ ಅನ್ನುವ ಸುಳ್ಳು ನಂಬಿಕೆಯನ್ನು ಬೆಳೆಸಿಕೊಂಡು ಆರಾಮಾಗಿ ಈಗ ಮಾಡುತ್ತಿರುವ ಹಣ ಬರದೇ ಇರುವ ಕೆಲಸಗಳನ್ನು ತೃಪ್ತಿಯಿಂದ ಮಾಡುತ್ತ, ಅದಕ್ಕೂ, ಎಲ್ಲದಕ್ಕೂ ಇವನದೇ ಸಂಬಳದ ಹಣವನ್ನು ವಿನಿಯೋಗಿಸುತ್ತಾ ಖುಷಿಯಾಗಿರುವುದು. ಗಂಡನ ಹಣ, ಆಸ್ತಿಯ ಮೇಲೆ ಹೆಂಡತಿಯ ಅಧಿಕಾರ ಇಲ್ಲ ಎಂದು ನಂಬುವ ನಾನು, ಕಾನೂನು ಮತ್ತು ಸಮಾಜ ಕೊಟ್ಟಿರುವ ಈ ಹಕ್ಕನ್ನು ಚಲಾಯಿಸುವುದನ್ನು ಕಲಿತು ಕೊಳ್ಳಬೇಕಿದೆ.

————-

ಇಲ್ಲಿ ಏನೂ ಬರೆದರೂ ಮತ್ತೆ ನಾಳೆ ಬೆಳಿಗ್ಗೆಯಿಂದ ಕಣ್ಣೆದುರು ಕಾಣುತ್ತಿರುವ ಸಾಮಾನುಗಳನ್ನು ಮಾರಲು ಮನಸ್ಸಾಗುತ್ತಿಲ್ಲ. ಮೊನ್ನೆ ಇಲ್ಲಿಯ ಸೊಸೈಟಿಯಲ್ಲಿ ಮಾರುತ್ತೇನೆ ಎಂದು ಫೋಷಿಸಿ, ಬಹಳ ಜನ ಕೇಳಿ, ಇದ್ದಕ್ಕಿದ್ದ ಹಾಗೆ ಮನೆ ಖಾಲಿ ಆಗಿ ಹೋಗುತ್ತೆ, ನನ್ನದು-ನಾನು ಖರೀದಿಸಿದ್ದು ಅನ್ನುವ ಎಲ್ಲದೂ ಬಿಟ್ಟು ಹೋಗುತ್ತದೆ ಅನ್ನುವುದನ್ನು ಅರಗಿಸಿಕೊಳ್ಳಲಾಗದೇ ಸುಮ್ಮನಾಗಿದ್ದೆ. ಇವನಿಗೂ ಕಳೆದ ಒಂದು ತಿಂಗಳಿನಿಂದ ದಿನಾ ನನಗೆ ಹೇಳಿ ಬೇಜಾರು ಬಂದಿದೆ. ನೀನಾಗೇ ಮಾರದಿದ್ದರೆ, ಯಾರಿಗಾದರೂ ಉಚಿತವಾಗಿ ಕೊಟ್ಟು ಹೋಗುತ್ತೇವೆ, ಆಮೇಲೆ ನೀನು ಏನೂ ಹೇಳಬಾರದು ಅನ್ನುವದೂ ಆಗಿದೆ. ಏನೇ ಮಾಡಿದರೂ ಇನ್ನು ಹದಿನೈದು ದಿನಗಳಲ್ಲಿ ಎಲ್ಲವೂ, ಎಲ್ಲಾ ನೆನಪುಗಳೂ ಬಿಟ್ಟು ಹೋಗಲಿವೆ.

——————-

ದುಡ್ಡೇ ದೊಡ್ಡಪ್ಪ?!

ಮಾರ್ಚ್ 2, 2021

ಇವನು ನಂಗೆ ಯಾವತ್ತೂ ಹೇಳ್ತಾ ಇರೋದು, ಇಷ್ಟು ಟಾಲೆಂಟ್ ಇದೆ, ಸುಮ್ನೆ ಕೂತು ವೇಸ್ಟ್ ಮಾಡಿಕೊಳ್ತೀಯ, ಏನಾದ್ರೂ ಮಾಡ ಬಾರದ ಅಂತ. ಆದರೆ ನನ್ನ ತಲೆಯಲ್ಲಿ ಹುಟ್ಟುವ ಏಷ್ಟೋ ಯೋಜನೆಗಳಿಗೆ ಜೀವ ಕೊಡೋದು ನಂಗೆ ಕಷ್ಟ. ನಂಗೆ ಕಮಿಟ್ ಮಾಡೋಕೆ ಕಷ್ಟ. ದಿನಾ ಒಂದೇ ತರಹ, ಒಂದೇ ಕೆಲಸ ಮಾಡೋಕೆ ಕಷ್ಟ. ಹೊಸ ಹೊಸದು ಮಾಡಬೇಕು ಅನ್ನಿಸ್ತಾ ಇರುತ್ತೆ. ಸ್ನೇಹಿತರು ಕಾಲ್ ಮಾಡಿದಾಗ ಹೇಳೋದು ಅಷ್ಟೇ, ಏನಕ್ಕೆ ಟ್ಯಾಲೆಂಟ್ ವೇಸ್ಟ್ ಮಾಡ್ಕೊತ್ತಿಯ, ಉಪಯೋಗಿಸು ಅಂತ.

ಹೋಗಲಿ, ಏನಾದರೂ ಮಾಡ್ತೀನಿ ಅಂತ ಅಂದರೆ ಮೊದಲ ಪ್ರಶ್ನೆ, ದುಡ್ಡು ಬರುತ್ತಾ? ಅಂತ. ನೀನು ದುಡ್ಡು ಬರೋದು ಮಾಡಲ್ಲ, ಕೆಲಸಕ್ಕೆ ಬಾರದ್ದು ಮಾಡ್ತಾ ಇರುತ್ತಿಯ ಅಂತ. ಮೊದಲು ಬ್ಲಾಗ್ ಬರೀತಿನಿ ಅಂತ ಹೇಳಿದ್ರೆ, ಅದರಲ್ಲಿ ದುಡ್ಡು ಬರುತ್ತಾ ಅಂತ. ಓನಲೈನ್ ಶಾಪ್ ಮಾಡ್ತೀನಿ ಅಂದರೆ, ಏಷ್ಟು ದುಡಿಯೋ ಪ್ಲಾನ್ ಇದೆ ಅಂತ. ಎಲ್ಲದನ್ನೂ ದುಡ್ಡಿನ ಮೇಲೆ ಅಳೆಯೋಕೆ ಆಗುತ್ತಾ? ನಾನು ಮೊದಲು ಕೆಲಸ ಮಾಡೋ ಕಂಪನಿಯಲ್ಲಿ ಸಹ ಇವರು ಇಷ್ಟೇ ದುಡ್ಡು ಕೊಡೋದು, ಅದಕ್ಕೆ ಇಷ್ಟೇ ಕೆಲಸ ಮಾಡ್ತೀನಿ ಅಂತ ಯೋಚಿಸಿದ್ದೇ ಇಲ್ಲ. ಹಾಗಂತ ಜಾಸ್ತಿ ಏನು ದುಡಿತ ಇರಲಿಲ್ಲ. ಜಾಸ್ತಿ ಸಂಬಳ ತೆಗೆದು ಕೊಳ್ಳುವವರು, ಜಾಸ್ತಿ ಕೆಲಸ ಅಂತ ರಾತ್ರಿ ಹೆಚ್ಚು ಹೊತ್ತು ಆಫೀಸಿನಲ್ಲಿ ನಿಲ್ಲುವಾಗ ಗೊಳಾಡುವುದನ್ನು ನೋಡಿದಾಗ ಮಜಾ ಅನ್ನಿಸ್ತಿತ್ತು. ಆದರೆ ಅದೆಲ್ಲ ಪ್ರೊಫೆಷನಲ್ ಇಸಂ ಅಂತೆ! ದುಡ್ಡಿಲ್ಲದೆಯೂ ಕೆಲಸ ಮಾಡಿದ್ರೆ, ಅದಕ್ಕೆ ಒಂದು ಘನತೆ ಇಲ್ಲ ಅಂತ ಹೇಳ್ತಾರೆ. ಆದರೆ ನಾನು ಯಾವಾಗಲೂ ಈ ಫನತೆ ಬಗ್ಗೆ ತಲೆಯೇ ಕೆಡಿಸಿ ಕೊಂಡಿಲ್ಲ. ಎಲ್ಲರೂ ಎಲ್ಲರ ಬಗ್ಗೆಯೂ ಹಿಂದೆ ಬಿಟ್ಟು ಆಡಿ ಕೊಳ್ಳುವಾಗ, ಪರಸ್ಪರ ಅಸೂಯೆ ಹೋಗೆ ಆಡ್ತಾ ಇರುವಾಗ ಈ ಘನತೆ ತೆಗೆದು ಕೊಂಡು ಏನು ಮಾಡುವುದು. ಸಾದಾ ಸೀದಾ, ಎಲ್ಲರ ಜೊತೆ ಸೇರಿ, ನಮ್ಮ ಕೆಲಸ ಮಾಡುತ್ತಾ, ಆದಷ್ಟು ಉಳಿದವರಿಗೆ ಸಹಾಯ ಮಾಡುತ್ತಾ ನೆಮ್ಮದಿಯಾಗಿ ಇರುವುದು ಒಳ್ಳೆಯದು. ಎಲ್ಲದನ್ನೂ ಲಾಭ ಮತ್ತು ನಷ್ಟ ಇದರಲ್ಲಿ ಅಳೆಯುವ ಅಗತ್ಯವೇ ಇಲ್ಲ.

ಹಾಗಂತ ದುಡ್ಡು ಅವಶ್ಯವೇ. ಜಾಸ್ತಿ ಜಾಸ್ತಿ ಮಾಡಬೇಕು ಅನ್ನುವ ಹಪಾಹಪಿ ಇಲ್ಲ. ಇರೋದರಲ್ಲಿ ಖುಷಿ ಇದೆ. ಈಗ ಮೊನ್ನೆ ಲೋಗೋ ಉಚಿತವಾಗಿ ಮಾಡಿ ಕೊಡ್ತೇನೆ ಅಂದಾಗ ಏನಕ್ಕೆ ದುಡ್ಡು ತೆಗೆದುಕೋ ಅಂತ ಅಂದರು. ನಂಗೆ ದುಡ್ಡು ಬೇಡ. ನಾನು ನನಗೆ ಏನು ಬರುತ್ತೋ ಅದನ್ನು ಮಾಡಿಕೊಟ್ಟೆ. ಹೊಸದು ಏನನ್ನೋ ಕಲಿಯುವ ಅವಕಾಶ ಆಯಿತು. ಹತ್ತು ಹೊಸ ವ್ಯಕ್ತಿಗಳ ಪರಿಚಯ ಆಯಿತು. ನನಗೆ ಯಾರೋ ಯಾವತ್ತೋ ಸಹಾಯ ಮಾಡಿರುತ್ತಾರೆ, ಇವತ್ತು ನಾನು ಬೇರೆ ಯಾರಿಗೂ ಸಹಾಯ ಮಾಡಿರುತ್ತೇನೆ. ಅಷ್ಟೇ. ಅದರ ಜೊತೆಗೆ ಅನೇಕ ಜನ ದುಡ್ಡು ಕೊಟ್ಟು ಲೋಗೋ ಮಾಡಿ ಕೊಡಿ ಅಂತ ಬಂದರು. ಒಂದು ಅವಕಾಶ ಸೃಷ್ಟಿ ಆಯಿತು. ನಾನು ಒಬ್ಬರಿಗೆ ಬಿಟ್ಟು ಉಳಿದವರಿಗೆ ಮಾಡಿ ಕೊಡಲಿಲ್ಲ. ಕೇಳಿದ ಉಳಿದವರನ್ನು ಫಾಲೋ ಅಪ್ ಸಹ ಮಾಡಲಿಲ್ಲ. ಒಟ್ಟಿನಲ್ಲಿ ಆ ಅವಕಾಶ ಉಪಯೋಗಿಸಲು ಮನಸ್ಸು ಬರಲಿಲ್ಲ, ಅದು ಬೇರೆ ವಿಷಯ. ಅದಕ್ಕೆ ಇವನು ದುಡ್ಡು ಬರೋ ಕೆಲಸ ನೀನು ಮಾಡಲ್ಲ ಅನ್ನೋದು.

ಇದೆಲ್ಲ ಏನಕ್ಕೆ ಪೀಠಿಕೆ ಹಾಕ್ತಾ ಇರೋದು ಅಂತ ಅಂದರೆ ದುಡ್ಡು ಇಲ್ಲದೇ ಫೇಸ್ ಬುಕ್ ಮಾರುಕಟ್ಟೆ ಮಾಡೋಕೆ ಆಗುತ್ತಾ ಅಂತ. ಮೊನ್ನೆ ಸ್ಕ್ರೀನ್ ಶಾಟ್ ಫೋಲ್ಡರ್ ನಲ್ಲಿ ನೋಡ್ತಾ , ಹೋದ ವರುಷ ಕನ್ನಡ ಮಹಿಳಾ ಮಾರುಕಟ್ಟೆ ಗ್ರೂಪ್ ನಲ್ಲಿ ನಾನು ಮಾಡಿಕೊಂಡ ಗಲಾಟೆ ಕಾಣ್ತು. ಆದರೆ ಅದರಲ್ಲಿ ನಾನು ಹೇಳಿದ ಹಾಗೆ ಇವತ್ತು ಆಗಿದ್ದು ಬೇರೆ ವಿಷಯ. ಮೆಂಬರ್ ಶಿಪ್ ಸಹ ಬಂತು, ಪ್ರದರ್ಶನ ಮಾರಾಟ ವ್ಯವಸ್ಥೆ ಸಹ ಆಯಿತು. ಇಷ್ಟು ವರ್ಷ ಫೇಸ್ ಬುಕ್ಕಿನಲ್ಲಿ ಏಷ್ಟೆಲ್ಲ ಬೇರೆ ಬೇರೆ ಗ್ರೂಪ್ ಗಳಲ್ಲಿ ಇದ್ದು  ನೋಡಿದ ಅನುಭವ ಅದು. ನಾವು ಆರ್ಕುಟ್ ಬಿಟ್ಟು ಸೀದಾ ಫೇಸ್ ಬುಕ್ ಗೆ ಬಂದವರು. ಹಳೆ ತಲೆಮಾರು. ಜಾಸ್ತಿ ಜಾಸ್ತಿ ಎಲ್ಲಾ ಆಟಗಳನ್ನು ನೋಡಿದ್ದಿವಿ.

ಈ ಆಟ ಹೇಗೆ ಇರುತ್ತೆ ಅಂದರೆ, ಒಂದು ಪೋಸ್ಟ್ ಗೆ ನೂರು ತೆಗೆದುಕೊಂಡರೆ, ದಿನ ಇಪ್ಪತ್ತು ಸೇಲ್ ಪೋಸ್ಟ್ ಬಂದರೆ ಎರಡು ಸಾವಿರ, ವಾರಕ್ಕೆ ಹತ್ತು ಸಾವಿರ. ಇಲ್ಲಾ, ನೂರು ಜನ ಮಾರಾಟಗಾರರನ್ನು ಒಟ್ಟು ಮಾಡಿ ತಲಾ ಐದನೂರು ತೆಗೆದು ಕೊಂಡರೆ ಐವತ್ತು ಸಾವಿರ. ಅದನ್ನು ವರ್ಷಕ್ಕೆ ನಾಲ್ಕು ಬಾರಿ ತೆಗೆದುಕೊಂಡರೆ ಅಥವಾ ಒಂದೇ ಬಾರಿ ಅವರವರ ಲೆಕ್ಕಾಚಾರ. ಇವತ್ತು ಸಮಯಕ್ಕೂ ದುಡ್ಡು ಇದೆ. ಇಲ್ಲಿಂದ ಅಲ್ಲಿ ಸೂಜಿ ಎತ್ತಿ ಇಡೋಕು ದುಡ್ಡು ಕೊಡಬೇಕು. ಇದು ಒಂದು ಸ್ಯಾಂಪಲ್ ಲೆಕ್ಕ. ಈಗ ಈ ದುಡ್ಡು ಮಾಡೋ ಆಟ ಬೇಡ.

ಹಾಗಾಗಿ ಒಂದು ಹೊಸ ಆಟ ಶುರು ಮಾಡಿಕೊಳ್ಳೋಣ ಅಂತ. ಫೇಸ್ ಬುಕ್ ‘ ಉಚಿತ ‘  ಆಗಿರುವಾಗ ಗ್ರೂಪ್ ಏನಕ್ಕೆ ‘ಉಚಿತ ‘ ಆಗಿರಬಾರದು? ಅನ್ನೋದು ನನ್ನ ಥಿಯರಿ. ನಾಳೆ ನಡೆಸೋಕೆ ಟೀಮ್ ಮಾಡಬೇಕಾ, ಅವರಿಗೆ ಸಂಬಳ ಅಂತ ದುಡ್ಡು ಬೇಕಾ, ಆಗ ಸೇಮ್ ಟು ಸೇಮ್ ‘ಫೇಸ್ ಬುಕ್ ಫಾರ್ಮುಲಾ’ ಉಪಯೋಗಿಸಬಹುದಲ್ಲ!  ಹೇಗೆ ಅಂತ ಗೊತ್ತಾಗಬೇಕು ಅಂತಿದ್ರೆ ಗ್ರೂಪ್ ಸೇರಿ, ಹೇಳ್ತೀನಿ.

ಮಹಿಳೆಯರಿಗೆ ಮಾತ್ರ ಎಂಬ ಬೋರ್ಡ್ ಇರೋದರಿಂದ ಇದನ್ನು ಓದುತ್ತ ಇರುವವರು ಪುರುಷ ಮಣಿಗಳಾಗಿದ್ದರೆ, ನಿಮ್ಮ ಮಹಿಳಾ ಮಣಿಗಳಿಗೆ ಹೇಳಿ, ಸೇರಿಸಬಹುದು. ಸೇರುವುದಕ್ಕೆ ಮತ್ತೆ ಮಾರುವುದಕ್ಕೆ ದುಡ್ಡಿಲ್ಲ ಇದರಲ್ಲಿ. ಇವತ್ತಿಗೂ ಹಾಗೂ ಮುಂದೆ ಸಹ. ಇದು ನನ್ನ ಮಾತು. ಅದಕ್ಕೆ ನನ್ನ ಬ್ಲಾಗ್ನಲ್ಲಿ ಬರೆದುಕೊಳ್ತಾ ಇದ್ದೀನಿ.

ಇದೆಲ್ಲ ಹೋಗಲಿ, ನಿಮಗೆ ಏನು ಅನ್ನಿಸುತ್ತೆ ದುಡ್ಡು ತೆಗೆದುಕೊಳ್ಳದೇ ಕೆಲಸ ಮಾಡಿದ್ರೆ ಅದಕ್ಕೆ ಘನತೆ ಇರುವುದಿಲ್ಲವೇ? ಸೇವೆ ಅಂತ ಮಾಡಿದರೆ, ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಆಗಲಿ ಅಂತ ಮಾಡಿದರೆ? ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡಬೇಕು ಅಂತ ಮಾಡಿದರೆ? ಅದರಲ್ಲಿ ಸಹ ದುಡ್ಡೇ ದೊಡ್ಡಪ್ಪ ಆಗಬೇಕಾ? ಹೇಳಿ.

ಆಶ್ರಮ

ಸೆಪ್ಟೆಂಬರ್ 5, 2015

ಅವಳು ಅವತ್ತು ಹೇಳಿದ್ದು ಕೇಳಿಸಿಕೊಳ್ಳೋಕೆ ಕೆಟ್ಟದಾಗಿ ಇದ್ದರೂ ಸತ್ಯವಾಗೇ ಇತ್ತು. “ನಿಂಗೇನು? ಆಫೀಸಿನಿಂದ ಏಷ್ಟು ತಡ ಆಗಿ ಹೊರಟರೂ ಆಗುತ್ತೆ. ಮನೆಲಿ ಹೇಳಕೆ ಕೇಳೊಕೆ ಯಾರು ಇಲ್ಲ, ಮಕ್ಕಳೂ ಇಲ್ಲ, ಕಾಯ್ತಾ ಕುತಿರೋ ಗಂಡನೂ ಇಲ್ಲ. ನಮಗೆ ಹಾಗಲ್ಲವಲ್ಲ. ಬರೋದು ಸ್ವಲ್ಪ ತಡ ಆದರೂ ಗಾಬರಿಯಿಂದ ಹತ್ತು ಸಲ ಕಾಲ್ ಮಾಡಿ ಕೇಳ್ತಾರೆ. ನಾವು ಹೋಗೋ ತನಕ ಊಟನೂ ಮಾಡಿರಲ್ಲ. ನಾಳೆಯಿಂದ ನಿನ್ನ ಸಲುವಾಗಿ ಕಾಯಕೆ ಆಗಲ್ಲ” ಅಂತ ಕ್ಯಾಬಿನಿಂದ ಗುಬುಕ್ಕನೇ ಇಳಿದು ಹೋಗಿದ್ದಳು. ಅವಳ ಮಾತಿಗೆ ಸಾಕ್ಷಿ ಎಂಬಂತೆ ಅವಳ ಗಂಡ ಗೇಟಿನ ಬಳಿಯೇ ಕಾಯುತ್ತಾ ಇದ್ದ.

ಹಾಗಂತ ಅವಳು ಹಾಗೆ ಹೇಳುವುದಕ್ಕೆ ನಾನು ಕಾರಣವಾಗಿದ್ದೆ. ಮೊದಲೊಂದು ರಾತ್ರಿ ಕ್ಯಾಬಿನಲ್ಲಿ ನಾನೇ ಅವಳಿಗೆ  ” ನೋಡು, ನಿನಗೆ ಮನೆಗೆ ಹೋದ ಕೂಡಲೇ ಏಷ್ಟು ಜನ ಇರ್ತಾರೆ, ಊಟ ರೆಡಿ ಇರುತ್ತೆ. ನಾನು ಹೋದ ಕೂಡಲೇ ಬೆಳಿಗ್ಗೆ ನಾನು ಬಿಟ್ಟು ಬಂದ ಹಾಗೆ ಮನೆ ನನ್ನ ಕಾಯುತ್ತಾ ಇರುತ್ತೆ. ಎಲ್ಲ ನನಗೆ ನಾನೇ ಮಾಡಿಕೊ ಬೇಕು ಅಂತ ಹೇಳಿ ನಗಾಡಿ ಕೊಂಡಿದ್ದೆ. ಅದನ್ನೇ ತಿರುಗಿಸಿ ನನ್ನ ತಲೆ ಮೇಲೆ ಕುಕ್ಕಿ ಇಳಿದು ಹೋಗಿದ್ದಳು.

ಈಗ ಕೆಲಸ ಬಿಟ್ಟು ಮನೆಯಲ್ಲಿ ಇರುತ್ತಿರಬೇಕಾದರೆ ನನಗೊಂದು ವಿಷಯ ಅರ್ಥವಾಗತೊಡಗಿದೆ. ನಿಜಕ್ಕೂ ಇದು ನಾನು ಬಯಸಿದ್ದ ಬದುಕೇ ಅಲ್ಲವೇ ಅಂತ. ಕಾಲೇಜಿನ ದಿನಗಳಲ್ಲಿ ಎಲ್ಲವನ್ನೂ ಬಿಟ್ಟು ದೂರ ಹಿಮಾಲಯಕ್ಕೆ ಹೋಗಿ ಒಂಟಿಯಾಗಿ ಇರಬೇಕು ಅನ್ನಿಸುತಿತ್ತು. ಓದುವುದು ಮುಗಿಸಿ ಕಳೆದ ಹನ್ನೆರಡು ವರ್ಷಗಳು ಹೇಗಿದ್ದವು ? ಹೆಚ್ಚಿನ ಸಮಯ ನನ್ನ ಜೊತೆ ನಾನೊಂದೆ ಇದ್ದೆ. ನನ್ನ ಸಲುವಾಗಿ ಬದುಕುತ್ತಾ, ನನ್ನ ಜೊತೆ ಬದುಕುತ್ತ. ಇದಕ್ಕಾಗಿ ಹಿಮಾಲಯಕ್ಕೆ ಸಂಸಾರ ಬಿಟ್ಟು ಹೋಗುವ ಅವಶ್ಯಕತೆಯೇ ನನಗೆ ಬಂದಿರಲಿಲ್ಲ. ಈಗ ಜೊತೆಗೆ ಇನ್ನೊಂದು ಜೀವ ಇದ್ದರೂ, ಅದು ಸಹ ತನ್ನಷ್ಟಕೆ ತಾನು ಇರುವುದರಿಂದ ಮಧ್ಯದ ಕೆಲವು ಗಂಟೆಗಳ ವಿನಿಮಯ ಬಿಟ್ಟರೇ ಇಡೀ ದಿನ ನನ್ನ ಜೊತೆ ನಾನೇ.

———————–

ಗರ್ಭಿಣಿಯರಿಗೆ ಏನೇನೋ ಆಸೆಗಳು ಅರ್ಥಾತ್ ಬಯಕೆಗಳು ಆಗುತ್ತವೆಯಂತೆ. ಈ ತಾಯ್ತನ ಅನ್ನುವುದು ಮಧುರ, ಅಮರ, ಅಚಲ….. ಇತ್ಯಾದಿ ಮಣ್ಣಾಂಗಟ್ಟಿ ನನಗೆ ಇಲ್ಲ. ನನಗೆ ಹಾಗೇನೂ ಅನ್ನಿಸಲಿಲ್ಲ. ಅದರ ಬಗ್ಗೆ ಇನ್ನೊಮ್ಮೆ. ನನಗೆ ಆಸೆ ಆಗಿದ್ದು ಒಂದೇ. ಆಶ್ರಮಕ್ಕೆ ಹೋಗಬೇಕು ಎಂದು. ಹೆರಿಗೆ ಆಶ್ರಮಗಳಿದ್ದರೇ ಏಷ್ಟು ಚೆನ್ನಾಗಿರುತಿತ್ತು ಅಂತ ಗೂಗಲಿಸಿದರೆ ಆ ತರಹ ಯಾವ ಅಶ್ರಮವೂ ಇರಲಿಲ್ಲ. ಹೋಗಲಿ ಫಾರ್ಮ್ ಹೌಸ್ ಆದರೂ ಇರಬೇಕಿತ್ತು ಅಂತ ಆಸೆ ಆದರೂ ಆ ತರಹ ಏನು ಸ್ವಂತಕ್ಕೆ ನಾವಿನ್ನೂ ಮಾಡಿಕೊಂಡಿಲ್ಲ. ಊರಲ್ಲಿ ಹಳ್ಳಿಮನೆಗಳು ಇರುವವರಿಗೆ ತೊಂದರೆಯಿಲ್ಲ. ನನಗೆ ಹಾಗಿಲ್ಲವಲ್ಲ. ಹಸಿರು, ನೀರು, ಗದ್ದೆ, ತೋಟ,…

ಹಾಗೆ ಏನಕೋ ಕವಡಿಕೆರೆ ನೆನಪಾಗಿತ್ತು. ಕಾಲೇಜಿನ ದಿನಗಳಲ್ಲಿ ಮಠವೊಂದು ನಡೆಸುತಿದ್ದ ಕನ್ಯಾ ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಒಂದತ್ತು ದಿನ ಪಾಲ್ಗೊಂಡಿದ್ದೆ. ಅನುಭವ ತುಂಬಾ ಸುಂದರವಾಗಿತ್ತು. ಕವಡಿಕೆರೆ ನಾನು ನೋಡಿದ ಮೊದಲ ದೊಡ್ಡ ಕೆರೆ. ಬೆಳಿಗ್ಗೆ ಎದ್ದು ಧ್ಯಾನ ಮಂಟಪದಲ್ಲಿ ಕೂತು ಆ ಮಂಜು ಮತ್ತು ಆ ನೀರನ್ನು ನೋಡುವುದೇ ಒಂದು ಚೆಂದದ ಅನುಭವ. ಅದಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆ ಒಂಟಿ ದೇವಸ್ಥಾನದಲ್ಲಿ ಮಕ್ಕಳೊಂದಿಗೆ ಬೆಳಿಗ್ಗೆ ಎದ್ದು ವ್ಯಾಯಾಮ. ನಂತರದ ಚಟುವಟಿಕೆಗಳು. ಹಾಡು, ಶ್ಲೋಕ, ಕತೆ, ನಗು. ಮಧ್ಯಾಹ್ನ, ಸಂಜೆ, ರಾತ್ರಿ ಮತ್ತೆ ಬೆಳಗು.

ಕೊನೆಗೆ ಇಲ್ಲಿ ನೂರು ಕಿಲೋಮೀಟರು ಹತ್ತಿರವಿರುವ ಗೋವರ್ಧನ ಆಶ್ರಮಕ್ಕೆ ಒಂದು ದಿನದ ಮಟ್ಟಿಗೆ ಹೋಗಿ ಬಂದೆ. ವಿದೇಶಿ ಇಸ್ಕಾನ್ ಗುರುವೊಬ್ಬನ ಕನಸು ನನಸಾಗುತ್ತಿರುವ ಸ್ಥಳವದು. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳು, ಸಾವಯವ ಕೃಷಿ, ನೂರಾರು ತಳಿಯ ಭತ್ತ ಗಳು, ಅನೇಕ ಬಗೆಯ ತರಕಾರಿ, ಹೂ ಗಿಡಗಳು, ಮಳೆ ನೀರ ಹೊಂಡ, ನೀರಿನ ಪುನರ್ ಬಳಕೆ, ಕೊಳಚೆ ನೀರಿನ ಸಂಸ್ಕರಣ ಉಧ್ಯಾನ ಘಟಕ,.. ಇತ್ಯಾದಿಗಳ ಜೊತೆಗೆಗೆ ಯೋಗ ಮತ್ತು ಆಧ್ಯಾತ್ಮ.

————————–

ಈಗ ಮನೆಯಲ್ಲಿ ಕೊನೆಗೂ ಟೊಮೆಟೊ ಬೀಜ ಬಿತ್ತಿ ಅದು ಚಿಕ್ಕ ಸಸ್ಯವಾಗಿ, ಅದಕ್ಕಾಗೇ ತಯಾರಾಗುತ್ತಿರುವ ತರಕಾರಿ ತಾಜ್ಯಗಳಿಂದ ಮಾಡುತ್ತಿರುವ ಗೊಬ್ಬರದ ಮಣ್ಣು. ಈ ಫಾರ್ಮು, ಹಳ್ಳಿ ಮನೆ, ಆಶ್ರಮ ಎಂದು ಕನವರಿಸುವುದರ ಬಿಟ್ಟು ಇದ್ದಲ್ಲಿಯೇ ಚಿಕ್ಕ ಬಾಲ್ಕನಿ ತರಕಾರಿ ತೋಟವಾದರೂ ಮಾಡುತ್ತೇನೆ ಎಂದು ಹೊರಟಿದ್ದೇನೆ. ಆಸೆಗಳಿಗೆಲ್ಲ ಇನ್ನೂ ಸಮಯವಾಗುತ್ತದೆ ಮತ್ತು ತುಂಬಾನೇ ದುಡ್ಡು ಬೇಕು. ಈಗ ಇರೋದರಲ್ಲಿ ನಾಲ್ಕು ಟೋಮೆಟೊ, ಎರಡು ಮೆಣಸು, ಬದನೆಕಾಯಿ ಗಿಡವನ್ನಾದರೂ ಮಾಡಿ ಬೆಳೆ ಬಂದ ಮೇಲೆ ಮುಂದಿನ ದೊಡ್ಡ ದೊಡ್ಡ ಮಾತು.

( To know more about Govardhan eco village, Click on  http://ecovillage.org.in/)

ನಿಮಗೂ ಹೀಗೆ ಅನ್ನಿಸುತ್ತದೆಯಾ?

ನವೆಂಬರ್ 14, 2014

ನಿನ್ನೆ ಮೊನ್ನೆಯಿಂದ ಜಿಮ್ಮಿನ ಕಿಟಕಿಯಲ್ಲಿ ನಿಂತು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗುವ-ಬರುವ ಗಾಡಿಗಳನ್ನು ನೋಡುತ್ತಾ ನಿಲ್ಲುತ್ತಿದ್ದೇನೆ. ಸೀದಾ ಕೆಳಗೆ ಹೋಗಿ ಆ ಮರದ ಕೆಳಗೆ ಸುಮ್ಮನೆ ಕುಳಿತುಕೊಳ್ಳುವ ಮನಸ್ಸಾಗುತ್ತೆ. ಅದೆಷ್ಟೋ ಸಲ ಹೀಗೆ ಏನೇನೋ ಅನ್ನಿಸಿದಾಗಲೆಲ್ಲ ಸುಮ್ಮನೆ ಎದ್ದು ಅಡ್ಡಾಡಿದ್ದಿದೆ. ಆದರೆ ಅದೂ ಮತ್ತೆ ಏನನ್ನು ಹುಟ್ಟಿಸುವುದಿಲ್ಲ. ಇನ್ನೊಂದಿಷ್ಟು ಓಡಾಡುವ ಚಿತ್ರಗಳನ್ನು ಮತ್ತು ಗೊತ್ತಿಲ್ಲದೇ ಊಹಿಸುವ ಕತೆಗಳನ್ನು ತಂದು ಎದುರಿಗೆ ಇಡುತ್ತದೆ.

ಈ ತರಹದ ಸಂಜೆಗಳಲ್ಲಿ ಏನೂ ಗೊತ್ತಾಗದೆ ಆ ಗೋಡೆಯಿಂದ ಈ ಗೋಡೆಯವರೆಗೆ ಓಡಾಡುತ್ತೇನೆ. ಕೊನೆಗೆ ಕಾಲು ಸೋತು ಹೋಗಿ ಜೋಕಾಲಿಯಲ್ಲಿ ಜೀಕುತ್ತೇನೆ. ಎದುರಿಗೆ ಗಾಳಿಗೆ ಓಲಾಡುವ ಎಲೆಗಳನ್ನು ನೋಡುತ್ತಾ ಸುಮ್ಮನಿರುತ್ತೇನೆ. ಬರುವ ಪಾರಿವಾಳಗಳು  ನನ್ನನ್ನು ಗಮನಿಸಿ ಆ ಎಡೆಯಿಂದ ನೀರು ಕುಡಿದು ‘ಪರ್’ ಎಂದು ಹಾರಿ ಹೋಗುತ್ತವೆ. ದೃಷ್ಟಿ ಕೇಬಲ್ ತಂತಿಗಳ ಮಧ್ಯೆ ತೊಯ್ದಾಡುತ್ತಿರುವ ಪಾರಿವಾಳಗತ್ತ. ಅದಕ್ಕೊ ಮೇಲೆ ಹಾರಡುವ ಜೋಡಿ ಬಾನಾಡಿಗಳು. ಅವು ಬಂಗಾರದ ಬೆಳಕಿನಲ್ಲಿ ಕಪ್ಪಗೆ ಸುಮ್ಮನೆ ಹಾರಾಡುತ್ತಿವೆಯಾ?

ಚಹಾ, ಹೂಂ, ಈ ಹೊತ್ತಿಗೆ ಬೇಕೇ ಬೇಕು, ಡಾರ್ಜಿಲಿಂಗ್ ಚಹಾದಲ್ಲಿ ಬ್ರಿಟಾನಿಯಾ ರಸ್ಕ್ ಗಳನ್ನು ಅದ್ದುತ್ತ ‘ಕರ್’ ಎಂದು ಆಗಿಯುತ್ತೇನೆ. ಆ ಶಬ್ಧದ ಜೊತೆ ‘ಗುಯ್’ ಎಂದು ತಿರುಗುತ್ತಿರುವ ಫ್ಯಾನು ಮತ್ತು ಕೆಳಗೆಲ್ಲೋ ನೀರಿನ ಟಾಕಿಯ ಮುಚ್ಚಳದ ಮೇಲೆ ಸಾಗುತ್ತಿರುವ ಕಾರಿನ ಚಕ್ರಗಳು ಜೊತೆಯಾಗುತ್ತವೆ. ಮತ್ತೇನಾದರೂ ಕೇಳಿಸುತ್ತಿದೆಯಾ? ಉಹುಂ, ಏನು ಇಲ್ಲ. ಮಳೆ ಬಂದಿದಕ್ಕೇನೋ, ಮಕ್ಕಳು ಆಡುವ ಸದ್ದು ಕೇಳಿಸುತ್ತಿಲ್ಲ.

ಆ ರಾತ್ರಿ ಉದಯಪುರದ ಕೆರೆಯಲ್ಲಿ ಹೊಳೆಯುತ್ತಿದ್ದ ಬಣ್ಣ ಬಣ್ಣದ ಬಲ್ಬುಗಳು ಮತ್ತು ಕತ್ತಲನ್ನು ದಿಟ್ಟಿಸುತ್ತಾ ಕೂತಿದ್ದ ಕಿಟಕಿ,  ದೂರದೆಲ್ಲೋ ಮೋಡದ ಮಧ್ಯೆ ಮರೆಯಾಗಿರುವ ಹಿಮಾಲಯವನ್ನು ದಿಟ್ಟಿಸುತ್ತಾ ನಿಂತಿದ್ದ ಮಸ್ಸೂರಿಯ ಆ ತಾರಸಿ, ರೇಲ್ವೆಯಲ್ಲಿ ಬರುತ್ತ ಸಿಕ್ಕ ಆ ನದಿ, ಮುಂಬಯಿ ಕ್ವೀನ್ ನೆಕಲೇಸಿನಲ್ಲಿ ಕೂತು ನೋಡಿದ ಮುಳುಗುತ್ತಿದ್ದ ಸೂರ್ಯ, ಆ ಕಪ್ಪು ಕಲ್ಲುಗಳ, ತೊರೆ ತೊರೆಯಾಗಿ ಹತ್ತಿರ ಬರುತ್ತಿದ್ದ ಮನೋರಿಯ ಸಮುದ್ರ, ……………

ಎಲ್ಲ ಕಡೆ ಅದೇನು ಎಂದು ಗೊತ್ತಾಗದೆ ಕುಳಿತಿದ್ದ, ನಿಂತಿದ್ದ, ಅಡ್ಡಾಡುತ್ತಿರುವ ನಾನು. ಕುಶಿಯಲ್ಲದ, ದುಃಖವಲ್ಲದ ಭಾವ. ಈ ದಾರಿ ಸರಿಯಾ? ಅಥವಾ ತಪ್ಪಿ ಇಲ್ಲಿ ಬಂದು ಕೂತಿದ್ದೆನಾ ಎಂಬ ಅನುಮಾನ. ಏನಿಲ್ಲ? ಇವತ್ತಿನ ದಿನ ಎಲ್ಲ ಇದೆ. ಪ್ರಿಯತಮ-ಸ್ನೇಹಿತರು-ಅಪ್ಪ-ಅಮ್ಮ ಇತ್ಯಾದಿ ಸಂಬಂಧಗಳು, ಇಚ್ಛೆ ಪಟ್ಟ ಮನೆ-ಪರಿಕರಗಳು, ಆಸೆ ಪಟ್ಟ ಉದ್ಯೋಗ, ಜೊತೆಗೆ ಆಡುವ-ಮಾಡುವ ಮಂಗಾಟಗಳನ್ನು ಸಹಿಸುವ ಸನಿಹದಲ್ಲಿರುವ ಜೀವ ….. ಮತ್ತೇಕೆ ಹೀಗೆ?

ಎಲ್ಲ ಇರುವಾಗ ಕಳೆದು ಹೋಗಿದ್ದು ಏನು? ನಿಜಕ್ಕೂ ಬೇಕಾಗಿದ್ದು ಏನು? ಅಪರಿಮಿತ ಆಕಾಶವೋ, ಸೀಮೆಯಿಲ್ಲದ ಬಯಲೋ?

ಹೇಳಿ, ನಿಮಗೂ ಹೀಗೆ ಅನ್ನಿಸುತ್ತದೆಯಾ?

ಪ್ರಶ್ನೆ ಕೇಳುತ್ತಿರುವುದು,
ಇದು ಮಾಡುವ, ಆಮೇಲೆ ಅದು ಮಾಡುವ ಎಂದು ಒಂದರ ಬೆನ್ನು ಒಂದನ್ನು ಏರುತ್ತಾ, ಈ ರೀತಿ ಯೋಚಿಸಲು ಪುರಸೊತ್ತು ಸಿಗಲೇಬಾರೆಂಬ ಜಿದ್ದಿಗೆ ಬಿದ್ದಿರುವ ನಾನು.

ನಾಟಕ

ಸೆಪ್ಟೆಂಬರ್ 20, 2014

01ಇವತ್ತು ಸಿಟಿನಲ್ಲಿ ‘ಮಾಯಲೋಕ’ ನಾಟಕ ಇತ್ತು. ಹಿಂದಿನವಾರ ಇವನ ಸ್ನೇಹಿತರ ಚಿತ್ರ ಪ್ರದರ್ಶನ ಇದ್ದಿದ್ದಕ್ಕೆ ನೆಹರೂ ಅಡಿಟೋರಿಯೆಂಗೆ ಹೋಗಿದ್ದೆ. ಅಲ್ಲಿ ಹೋರ್ಡರ್ ನೋಡಿ ಈ ನಾಟಕದ ಬಗ್ಗೆ ಗೊತ್ತಾಗಿದ್ದು. ಟಿಕೆಟ್ ತೆಗೆಯೋಕೆ ಹೋದರೆ, ‘ಮುಂದಿನ ವಾರನೇ ಬನ್ನಿ ಮೇಡಂ, ಇಲ್ಲಿ ಕನ್ನಡ ನಾಟಕಕ್ಕೆ ಜಾಸ್ತಿ ಜನ ಬರೋಲ್ಲ. ಆರಾಮ ಆಗಿ ಟಿಕೇಟ್ ಸಿಗುತ್ತೆ ‘ ಅಂದರು. ಏನಕೆ ಹಾಗೆ ಕೇಳಿದ್ದಕ್ಕೆ, ‘ನಿಮ್ಮದೇ ಕನ್ನಡ ಸಂಘ ಇದೆಯೆಲ್ಲ, ಮಾಟುಂಗದಲ್ಲಿ. ಅಲ್ಲಿ ಹೋಗ್ತಾರೆ’ ಅಂದರು. ಜೊತೆಗೆ ‘ಇವತ್ತು ಆಟ ಇದೆ ಅಲ್ಲಿ, ಹೋಗಿ ನೋಡಬಹುದು’ ಎಂದೂ ಸೇರಿಸಿದರು. ನಾನು ನಕ್ಕೆ. ಅಷ್ಟೇ.

ನಾನು ನಾಟಕ ನೋಡದೆ ಯಾವುದೋ ಕಾಲವಾಯ್ತು. ಶಿರಸಿ ಬಿಟ್ಟ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋದದ್ದು ಭಾರೀ ಕಮ್ಮಿಯೇ. ನಮ್ಮದು ಪ್ರೆಸ್ ಇದ್ದಿದ್ದಕ್ಕೆ ಟಿಕೆಟ್, ಕರೆಯೋಲೆ ಅಥವಾ ಪಾಂಪ್ಲೆಟ್ ಪ್ರಿಂಟ್ ಮಾಡಿಸೊಕೆ ಸಂಘದವರು ಬರ್ತಾ ಇದ್ರು. ಜೊತೆಗೆ ಚಿಕ್ಕ ಊರಾದ್ದರಿಂದ ಯಾವ ಕಾರ್ಯಕ್ರಮ ಯಾವಾಗ ಅಂತ ಮೊದಲೇ ಗೊತ್ತಾಗಿ, ಅಪ್ಪ-ಅಮ್ಮನ ಜೊತೆ ಹೋಗಿ ಬರ್ತಾ ಇದ್ದೆ.  ಜೊತೆಗೆ ಪಕ್ಕದಲ್ಲೇ ‘ತೋಟಗಾರ್ಸ್ ಸಭಾಭವನ’ ಇದ್ದಿದ್ದಕ್ಕೆ ಸುಮಾರು ಕಾರ್ಯಕ್ರಮಗಳಿಗೆ ಒಬ್ಬಳೇ ಹೋಗಿ ಕೂತು ನೋಡಿದ್ದು ಇದೆ.

ಬೆಂಗಳೂರಿಗೆ ಬಂದು ಹೊಂದಿ ಕೊಂಡಾದ ಮೇಲೆ ಯಾವಾಗ್ಲೂ ಆಸೆ ಆಗ್ತಾ ಇದ್ದಿದ್ದು ನಾಟಕ ನೋಡಬೇಕು ಅಂತ. ಅದೂ ನಮ್ಮ ಅರೆನಾ ಕ್ಲಾಸಿನ ಎದುರಿನ ಇಂಡಿಯನ್ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ  ಯಾವತ್ತೂ ಇಂಗ್ಲೀಷ್ ನಾಟಕಗಳ ವಿವರ ಇರೋ ಬ್ಯಾನರ್ ನೇತಾಡ್ತಾ ಇತ್ತು. ಅದನ್ನು ನೋಡಿದಾಗ ಮತ್ತೆ ಆಸೆ ಆಗ್ತಾ ಇತ್ತು. ಪೇಪರಿನಲ್ಲಿ ಟಿಕೆಟ್ ರೇಟ್ ನೋಡಿ, ಮುಂದೊಂದು ದಿನ ಹೋಗ್ತೇನೆ ಅಂತ ಸುಮ್ಮನಾಗ್ತಾ ಇದ್ದೆ. ಜೊತೆಗೆ ಆಗ ಇದ್ದದ್ದು ಯಲಹಂಕದಲ್ಲಿ.

ಆಮೇಲೆ ಗಿರಿನಗರಕ್ಕೆ ಬಂದಾದ ಮೇಲೆ ಸ್ವಲ್ಪ ಚೆನ್ನಾಗಾಯಿತು. ಅಲ್ಲಿ ಸುಮಾರು ದೇವಸ್ಥಾನಗಳು ಇರೋದರಿಂದ ರಸ್ತೆಯ ಮೇಲೆ ವೇದಿಕೆ ಮಾಡಿ ಕಾರ್ಯಕ್ರಮಗಳನ್ನು ನಡೆಸ್ತಾ ಇದ್ರು. ರಾತ್ರಿ ಅರೆನಾದಿಂದ ಬರುವಾಗ, ಆಮೇಲೆ ಕೆಲಸದಿಂದ ಬರುವಾಗ ಸ್ವಲ್ಪ ಹೊತ್ತು ಕೂತು ಎದ್ದು ಬರ್ತಾ ಇದ್ದೆ. ಮದುವೆ ಆದಮೇಲೆ ಹೋದದ್ದು ಸಹಕಾರ ನಗರಕ್ಕೆ. ಅಲ್ಲಿಂದ ಸಿಟಿಗೆ ಸಕತ್ ದೂರ. ಎರಡೇ ಚಿತ್ರ ಶಿಬಿರ ಹೋಗಕೆ ಆದದ್ದು. ಏನಕಂದ್ರೆ ಸಿಗೋ ಒಂದು ದಿನದ ವೀಕೆನ್ಡಿನಲ್ಲಿ ಅಷ್ಟು ದೂರ ಬೈಕ್ ಓಡಿಸೋ ಮನಸ್ಸು ಅವನಿಗೆ ಇರ್ತಾ ಇರಲಿಲ್ಲ. ಜಾಸ್ತಿ ಒತ್ತಾಯ ಮಾಡಕೆ ನನಗೆ ಆಗಲ್ಲ. ಅಫೀಸಿಗೆ ಅಂತ ಬಸ್ಸಿನಲ್ಲಿ ಓಡಾಡುವಾಗ ಪುರಭವನ ನೋಡಿದಾಗಲೆಲ್ಲ, ಒಂದಿನ ಅಲ್ಲಿ ಹೋಗಿ ಕಾರ್ಯಕ್ರಮ ನೋಡಬೇಕು ಅಂತ. ಕೊನೆಗೂ ನೋಡಲಿಲ್ಲ.

ಮುಂಬಯಿಗೆ ಬಂದಾದ ಮೇಲೆ ಪೃಥ್ವಿ ಯಲ್ಲಿ ನಾಟಕ ನೋಡಬೇಕು ಅಂತ ಆಸೆ. ಇನ್ನೂನು ನೋಡಿಲ್ಲ. ನಾನಿರೋ ಥಾಣೆಯಿಂದ ಸಿಟಿಗೆ 55ಕಿಮಿ ದೂರ. ಹೋಗೋದು ಬರೋದು ಸ್ವಲ್ಪ ಕಷ್ಟನೇ. ಊರಲ್ಲಿ ಹೋಗಿ ನೋಡ್ತಾ ಇದ್ದ ಹಾಗೆ ಒಬ್ಬಳೇ ಹೋಗೋಕೆ ಧೈರ್ಯ ಮಾಡಿಕೊಂಡರೆ ಈಗಲೂ ಹೋಗಬಹುದೇನೊ. ಗೊತ್ತಿಲ್ಲ. ಜೊತೆಯಲ್ಲಿ ನಾಟಕ ಇಷ್ಟ ಪಡೋ ಜನ ಇದ್ರೆ ನೋಡೋಕೆ, ಆಮೇಲೆ ಅದರ ಬಗ್ಗೆ ಹಂಚಿಕೊಳ್ಳೋಕೆ ಚೆನ್ನಾಗಾಗುತ್ತೆ. ಇವನಿಗೆ ನಾಟಕ ನೋಡೋಕೆ ಹೋಗುವ ಅಂದರೆ, ಅಷ್ಟು ದೂರ ಹೋಗೋ ಬದಲು ಸಿನೆಮಾ ನೋಡಬಹುದಲ್ಲ ಅಂತಾನೆ.

ನನಗೆ ಯಾಕೋ ಆ ನಾಟಕ ಅನ್ನೋಕಿಂತ ಸ್ಟೇಜು, ಬೆಳಕು, ಬಣ್ಣ, ವಿನ್ಯಾಸ, ಕಲಾವಿದರು, ಎಲ್ಲಾ ಸೇರಿ ರೂಪಿಸೋ ಹೊಸತೊಂದು ಜಗತ್ತು ತುಂಬಾನೇ ಆಕರ್ಷಣೆ ಹುಟ್ಟಿಸುತ್ತೆ. ಒಂದು ವರ್ಷ ಹಿಂದಿನ ಕಾಲಾ ಘೋಡದಲ್ಲಿ ಮಾಲಾ ಜೊತೆ ನೋಡಿದ ಕತಕ್ ನಿರೂಪಣೆಯೇ ನಾನು ನೋಡಿದ ಕೊನೆಯ ಸ್ಟೇಜ್ ಪರ್ಫಾರ್ಮೆನ್ಸ್. ಅದೂ ಏಷ್ಟೋ ವರ್ಷಗಳ ನಂತರ.

ಮೊನ್ನೆ ಮಾತ್ರ ಈ ಸಲ ನಾನು ನಾಟಕ ನೊಡೇ ಬಿಡ್ತೇನೆ ಅಂದು ಕೊಂಡಿದ್ದೆ. ಆದರೆ ಈ ಸಲನೂ ಇಲ್ಲ. ಇವನ ಆಫೀಸಿನಲ್ಲಿ ಫುಟ್ ಬಾಲ್ ಮ್ಯಾಚ್ ಇವತ್ತೇ ಇಟ್ಟಿರೊದರಿಂದ ಅದನ್ನು ಬಿಟ್ಟು ನಾಟಕಕ್ಕೆ ಹೋಗೋಣ ಅನ್ನಲು ಆಗುವುದಿಲ್ಲ. ಮೊನ್ನೆ ಸಿಕ್ಕ ಹೊಸ ಗೆಳತಿ ಮತ್ತೆ ಆಸೆ ಹುಟ್ಟಿಸಿದ್ದಾಳೆ, ನಾನು ಕರೆದು ಕೊಂಡು ಹೋಗ್ತೀನಿ ಅಂತ. ನೋಡಬೇಕು.

ಮೊಲಕ್ಕೆ ಮೂರೇ ಕಾಲು

ಆಗಷ್ಟ್ 18, 2014

ಭಕ್ತಿ ಅನ್ನೋದು ನನಗೆ ಏಕೆ ಬಂದಿಲ್ಲ ಅಂತ ಯೋಚಿಸಿ ನಗು ಬರ್ತಿದೆ. ಈಗಷ್ಟೇ ಟಿವಿ ಯಲ್ಲಿ, ಮೂರ್ತಿಗಳ ಮೇಲೆ ಸಹಸ್ರಧಾರ ಸೇವೆ ನಡೀತಾ ಇತ್ತು. ಅಯ್ಯೋ ಕರ್ಮವೇ ಅಂದುಕೊಂಡೆ. ಜೊತೆಗೆ ಅಮ್ಮನ ನೆನಪು ಬಂತು. ಪಾಪ ನನ್ನಮ್ಮ. ನಾನು ಹೊಟ್ಟೆಯಲ್ಲಿ ಇರಬೇಕಾದಾಗ ರಾಮಾಯಣ, ಮಹಾಭಾರತ, ಸಹಸ್ರನಾಮ, ಮತ್ತೆನ್ತೋ ಎಲ್ಲವನ್ನೂ ಶ್ರಧ್ಧೆಯಿಂದ ಮಾಡುತ್ತಿದ್ದರಂತೆ. ಮಾಡಿದ್ದು ಸ್ವಲ್ಪ ಜಾಸ್ತಿಯಾಗಿ ದೇವರು ಎಂದರೆ ಯಾರು ಎಂದು ಕೇಳುವ ನಾನು ಹುಟ್ಟಿಬಿಟ್ಟೆ.

ಅಯ್ಯೋ, ಬಾಲ್ಯದಲ್ಲಿ ಈ ದೇವರು ಯಾರು ಅಂತ ಮಾಡಿದ ವಾಗ್ಯುದ್ಧಗಳ ಲೆಕ್ಕ ಕೇಳಬೇಡಿ. ಹೊಡೆಸಿಕೊಂಡಿದ್ದು ಇದೆ. ಬುದ್ಧಿ ಸ್ವಲ್ಪ ಜಾಸ್ತಿನೇ ಬೆಳೆದು, ದೇವರಿಗೆ ದೀಪ ಹಚ್ಚೋದು, ನಮಸ್ಕಾರ ಮಾಡೋದು ಈ ತರಹ ಸಣ್ಣ ಸಣ್ಣ ಚಟುವಟಿಕೆಗಳಿಗೂ ರಂಪಾಟ ವಾಗುತ್ತಿತ್ತು. ಒಂದು ಸಲ ಮಠಕ್ಕೆ ಹೋಗಿ ಕ್ಯೂನಲ್ಲಿ ನಿಂತು ಸ್ವಾಮಿಗಳು ಕೊಟ್ಟ ತೀರ್ಥವನ್ನು ತೆಗೆದುಕೊಂಡು ಬಂದು ಸ್ವಲ್ಪ ದೂರ ಹೋಗಿ ಚೆಲ್ಲಿ ಸರಿಯಾಗಿ ಬಿದ್ದಿತ್ತು. ಸುಮಾರು ದಿನಗಳವರೆಗೆ ಮನೆಯಲ್ಲಿ ಕೋಪ ಇಳಿದಿರಲಿಲ್ಲ.

ನವೋದಯದಲ್ಲೂ ದೇವರು ಇಲ್ಲ ಅನ್ನೋ ಚರ್ಚೆ ಜೋರಾಗೇ ನಡಿತಿತ್ತು. ಒಂದು ಮೇಡಂ ನನಗೆ ದೇವರು ಇದ್ದಾನೆ ಅಂತ ತಿಳಿಸಲೇಬೇಕು ಎಂದು ಹಟಕ್ಕೆ ಬಿದ್ದಿದ್ದರು. ಬರೀ ತರ್ಕಗಳೇ. ಪ್ರಪಂಚದಲ್ಲಿ ಎಲ್ಲದಕ್ಕೊ ಮೂಲ ಅಂತ ಇದೆ ಅಂದರೆ, ಈ ದೇವರು ಅನ್ನೊದಕ್ಕೋ ಮೂಲ ಇರಬೇಕಲ್ಲ ಅಂತ ನಾನು, ಹಾಗೆಲ್ಲ ಕೇಳಬಾರದು ನಂಬಬೇಕು ಅಂತ ಅವರು. ಇನ್ನೂ ನೆನಪಿದೆ, ಹತ್ತನೇ ಕ್ಲಾಸ್ ಅದಮೇಲೆ ನವೋದಯ ಬಿಡಿಸಿ ಮನೆಗೆ ತಂದಿಟ್ಟುಕೊಂಡಿದ್ದರು. ಕಾಲೇಜು ಊರಲ್ಲೇ ಆಗಲಿ ಅಂತ. ಅಥವಾ ನನ್ನ ಯೋಚನೆ ಬದಲಾಗಬಹುದು ಎಂಬ ಆಸೆ ಇತ್ತೇನೋ.  ಹನ್ನೊಂದು ಮತ್ತು ಹನ್ನೇರಡನೇ ಕ್ಲಾಸಿನಲ್ಲಿ ಮನೆಯಲ್ಲಿ ಸಕತ್ ರಂಪ ಮಾಡಿದ್ದೇನೆ. ನಾನು ಹೇಳೋದು ಅವರಿಗೆ ಅರ್ಥ ಆಗಲ್ಲ, ಅವರು ಹೇಳಿದ್ದು ನಾನು ಪಾಲಿಸಲ್ಲ. ಆ ಹೊತ್ತಲ್ಲಿ ಬರೀಯೋ ಹುಚ್ಚು ಹತ್ತಿಕೊಂಡಿತ್ತು. ಈ ದೇವರು ಅನ್ನೋದು ಎಷ್ಟು ದೊಡ್ಡ ಸುಳ್ಳು ಅಂತ ಒಂದತ್ತು ಪುಟದ ಪ್ರಬಂಧ ಬರೆದಿದ್ದೆ. ಅದನ್ನು ನನ್ನಮ್ಮ ಯಾವಾಗ ಓದಿದರೋ, ಏನೋ, ಮರಳಿ ನನ್ನ ಕೈ ಸೇರಲಿಲ್ಲ.

ಹೆಚ್ಚಾಗಿ ಕಾಲೇಜಿಗೆ ಬಂದಮೇಲೆ ಈ ತರ್ಕಗಳಿಂದ ಹೊರಬಂದು ಸುಮ್ಮನಾಗಿಬಿಟ್ಟೆ. ಏಕೆಂದರೆ ನಾನು ಹೇಳಿದ್ದು ಅವರು ಕೇಳೋಲ್ಲ, ಅವರು ಹೇಳಿದ್ದನ್ನು ನಾನು ನಂಬಲ್ಲ. ಜಾಸ್ತಿ ಸ್ನೇಹಿತರ ಹತ್ತಿರ ಮಾತಾಡಿದರೆ ಮತ್ತದೇ ಕೊನೆಯ ಸಾಲು, ‘ಹೌದು, ನಿನ್ನ ಮೊಲಕ್ಕೆ ಮೂರೇ ಕಾಲು’ ಅಂತ. ಸುಮ್ಮನೆ ಇರೊದೇ ಬೆಸ್ಟ್.

ಎಲ್ಲಕ್ಕಿಂತ ಮಜಾ ಇರೋದು ನನ್ನ ಹುಡುಗನದ್ದು. ಮದುವೆ ಆದ ಮೇಲೆ ಗೊತ್ತಾಗಿದ್ದು, ಅವರ ಮನೆಲಿ ಪೂಜೆ-ಪುನರ್ಸ್ಕಾರ ಜಾಸ್ತಿ ಅಂತ. ಹಾಗಂತ ನನ್ನ ಅಮ್ಮನ ಮನೆಲಿ ಕಡಿಮೆ ಏನು ಇರಲಿಲ್ಲ. ಆದರೆ ಬರೋ ಪುರೋಹಿತರ ಜೊತೆ ಇದು ಏಕೆ ಹೀಗೆ, ಅದು ಯಾಕೆ ಹಾಗೆ ಅನ್ನೋದನ್ನೆಲ್ಲ ಕೇಳಬಹುದಿತ್ತು. ಇಲ್ಲಿ ಹಾಗಲ್ಲ. ಚುಪ್. ಇವನು ಪಕ್ಕಕ್ಕೆ ನಿಂತರೆ ಅಷ್ಟೇ ದೇವರಿಗೊಂದು ನಮಸ್ಕಾರ ಸಿಗುತ್ತೆ. ಅವನು ಕಂಡರೆ ನನಗೆ ಇಷ್ಟ. ನಾನು ಇದಕ್ಕೆಲ್ಲ ವಿರೋಧಿಸಿದರೆ ಅವನ ಕಣ್ಣಲ್ಲಿ ನೀರು ಬರುತ್ತೆ. ಕೋಪ, ಮಾತು ಎಲ್ಲ ತಡೆದುಕೊಳ್ಳ ಬಹುದು, ಆದರೆ ಈ ಮೌನ, ಕಣ್ಣೀರು, ಸಾಧ್ಯವಿಲ್ಲ. ಅದಕ್ಕೆ ಚುಪ್. ಈ ದೇವರು ಏನಾದರೂ ಆಗಿ ಹೋಗಲಿ ಅಂತ.

ಒಳ್ಳೆ ವಿಷಯ ಅಂದ್ರೆ ಇಲ್ಲಿ ಮನೆಲಿ ಏನು ನಿರ್ಬಂಧವಿಲ್ಲ. ದೇವರು ಚಿತ್ರ ಇಟ್ಟು ಅದಕ್ಕೆ, ಊದಿನಕಡ್ಡಿ, ದೀಪ ಬೆಳಗೋ ಕಾರ್ಯಕ್ರಮವೇ ಇಲ್ಲ. ರಂಗೋಲಿನೂ ಹಾಕಲ್ಲ. ನನ್ನ ಜೊತೆ ಇದ್ದ ಇಣಚಿ ಕಳಿಸಿದ ಪಾಠ ಇದು. ಮನಸ್ಸಲ್ಲಿ ಸಕಲ ಜೀವ ಜಂತುಗಳ ಮೇಲೆ ಪ್ರೀತಿ ಇಲ್ಲದೇ ಹೋದರೆ, ಯಾವ ರಂಗೋಲಿ, ಯಾವ ಹೀಲಿಂಗೂ, ಯಾವ ರೇಖಿಯೂ, ಯಾವ ಧ್ಯಾನವೂ ಏನು ಪ್ರಯೋಜನ? ಜಗತ್ತು ಮತ್ತು ನಾನು ಇವುಗಳ ಸಂಬಂಧ ಅರಿಯದೇ ಯಾವುದೋ ಚಿತ್ರ, ವಿಗ್ರಹ, ಬಣ್ಣ, ಯಾವುದೋ ಒಂದರ ಹಿಂದೆ ಬಿದ್ದು ಏನು ಪ್ರಯೋಜನ? ನನಗೆ ತಿಳಿಯದು. ಅದು ಹೇಗೆ ಅಂದರೆ, ನನ್ನ ಕೈಯಲ್ಲಿ ನಡುಗುತ್ತ ಇದ್ದ ಅಳಿಲಿನ ಬೆನ್ನನ್ನು ಹುಚ್ಚು ನಂಬಿಕೆಯಿಂದ ಗಟ್ಟಿಯಾಗಿ ಮೂರು ಸಲ ಒತ್ತಿ ಓಡಿ ಹೋದ ಆ ಹುಡುಗಿಯ ತರಹ. ಆಕೆ ನನ್ನಲ್ಲಿದ್ದ ಅಳಿಲನ್ನು ‘ಮುಟ್ಟಲಾ’ ಅಂದಾಗ ಅದು ಪ್ರೀತಿಯಿಂದ, ಕುತೂಹಲದಿಂದ ಅಂದು ಕೊಂಡಿದ್ದು ನನ್ನ ಮೂರ್ಖತನವಾಗಿತ್ತು.

ನನಗೆ ಬಸವರನ್ನು, ಗಾಂಧೀಜಿಯನ್ನು, ಅಂಬೇಡ್ಕರರನ್ನು, ವಿವೇಕಾನಂದರನ್ನು, ಬುದ್ಧನನ್ನು ಮೂರ್ತಿ ರೂಪವಾಗಿ ಪೂಜಿಸುವ ಮಂದಿಗಳನ್ನು ಕಂಡಾಗ ಮತ್ತೆ ಮತ್ತೆ ಈ ಪ್ರಶ್ನೆ ಕಾಡುತ್ತದೆ. ಕೇವಲ ದೇಹವಲ್ಲದೆ, ಆತ್ಮದ ಬಗ್ಗೆ ಚರ್ಚಿಸುತ್ತಿದ್ದ, ಸಿದ್ಧಾಂತ ಬರೆಯುತ್ತಿದ್ದ ನನ್ನ ಜನರೆಲ್ಲಿ ಎಂದು. ಹಾಗೇಯೆ ಈಗ ಕಟ್ಟುವ ದೇಗುಲಗಳ ಬಗ್ಗೆಯೂ. ಈ ಮೂರ್ತಿಯನ್ನು ಬಿಟ್ಟು ಹೊರಗೆ ಯಾವಾಗ ಬರ್ತೀವಿ ನಾವು?

ದೇವರು ಯಾರು ಎಂದು ಕೇಳುವ ಹಾಗೆಯೇ ಇಲ್ಲ. ನನ್ನ ದೇವರು ಅಂದರೆ ಹೀಗೆ ಎಂದು ಹೇಳಿದರೆ ಮೊಲಕ್ಕೆ ಮೂರೇ ಕಾಲು.

ಜನ್ಮ ಜನ್ಮಾಂತರ

ಜೂನ್ 22, 2014

ನಾನು ಒಂಥರಾ ಎಡಬಿಡಂಗಿ. ಈ ಕಡೆ ನಾಸ್ತಿಕಳೂ ಅಲ್ಲ, ಆ ಕಡೆ ಆಸ್ತಿಕಳೂ ಅಲ್ಲ. ದೇವರು ಅನ್ನುವುದಕ್ಕೆ ನನ್ನದೇ ಆದ ಪರಿಕಲ್ಪನೆ, ಪರಿಭಾಷೆಗಳನ್ನು ಕಟ್ಟಿಕೊಂಡಿದ್ದರೂ ಈ ಪುನರ್ ಜನ್ಮದ ಬಗ್ಗೆ ನಿಖರವಾದ ನಿಲುವಿಲ್ಲ. ಆತ್ಮ, ಪರಮಾತ್ಮ ಅನ್ನುವುದನ್ನು ಒಪ್ಪಿಕೊಂಡರೂ ಈ ಜನ್ಮ ಜನ್ಮಾಂತರದ ಲೆಕ್ಕಾಚಾರವನ್ನು ಅಪ್ಪಿಕೊಳ್ಳುವುದು ಕಷ್ಟ.

ನಾನು ಮೊದಲ ಬಾರಿಗೆ ಈ ಜನ್ಮಾಂತರದ ಪ್ರಯೋಗಕ್ಕೆ ಒಳಗಾಗಿದ್ದು ಹತ್ತು ವರುಷಗಳ ಹಿಂದೆ. ಆಗ ನನ್ನ ಮನೆ ಗೆಳತಿ ಇದರ ತರಭೇತಿ ಪಡೆಯುತ್ತಾ ಇದ್ದು, ನನ್ನ ಮೇಲೆ ಕಲಿಕಾ ಪ್ರಯೋಗ ಮಾಡಿದ್ದಳು. ಭಯಂಕರವಾಗಿತ್ತು ಅದು. ಅವಳು ಹೇಳಿದ್ದನ್ನು ಕೇಳುತ್ತಾ ಮೆಟ್ಟಿಲು ಇಳಿಯುತ್ತಾ ಸಾಗಿದ್ದು ಲಾರ್ಡ್ ಆಫ್ ದಿ ರಿಂಗಿನ ಕೋಣೆಯ ಕಡೆ. ನೆಲ ತಲುಪಿದ್ದು ದಟ್ಟ ಕಾಡಿನಲ್ಲಿ ಮತ್ತು ಸುತ್ತುವರೆದದ್ದು ಹ್ಯಾರೀಪೋಟರಿನ ಭೂತಗಳು, ಡೆತ್ ಈಟರ್ಸ್. ಅವರು ನನ್ನ ಉಸಿರ ಸೆಳೆಯುತ್ತಿದೆ ಅಂತನಿಸಿ ಭಯವಾಗಿ ಹೊರಬಿದ್ದಿದ್ದೆ. ಏನಕೆ ನನಗೆ ಹಾಗಾಯಿತು ಎಂದು ಅವಳು ಕೇಳಿ ತಿಳಿಸಲಿಲ್ಲ, ನಾನು ಅದೆಲ್ಲ ಮೆದುಳಿನ ಮಾಯೆ ಎಂದು ಬಿಟ್ಟು ಬಿಟ್ಟೆ.

ಅಮ್ಮನ ಬಳಕೆಯ ಹೆಚ್ಚಿನ ಜನ ಆಧ್ಯಾತ್ಮಿಕ ಪ್ರವೃತ್ತಿ ಉಳ್ಳವರು. ಅವರು ಮನೆಗೆ ಬಂದಾಗ ಹಂಚಿ ಕೊಳ್ಳುವ ಅನುಭವ, ಗ್ರಹಿಕೆಗಳಿಂದ ನನ್ನದೇ ನಿಲುವನ್ನು ಹೆಣೆದು ಕೊಳ್ಳುತ್ತಾ ಸಾಗಿದ್ದೇನೆ. ನನ್ನ ಪ್ರಶ್ನೆಗಳಿಗೆ, ಕುತೂಹಲಗಳಿಗೆ ದೊರಕುವ ಉತ್ತರಗಳಿಂದ ಹಳೆಯದನ್ನು ಬಿಚ್ಚಿ ಹೊಸದಾಗಿಯೂ ಹೆಣೆದು ಕೊಂಡಿದ್ದೇನೆ. ಪರಿಚಿತರು ಹಿಂದಿನ ಜನ್ಮಕ್ಕೆ ಹೋಗಿ ಬಂದದ್ದು, ದೇಹವನ್ನು ಬಿಟ್ಟು ಒಂದು ಕಾಲ ಘಟ್ಟಕ್ಕೆ ಹೋಗಿ ಬರಬಲ್ಲವರನ್ನು ಕೇಳಿದ್ದೇನೆ, ಮಾತನಾಡಿಸಿದ್ದೇನೆ. ಆದರೆ ಮುಂದೊಂದು ದಿನ ನನ್ನನ್ನು ನಾನು ಈ ರೀತಿಯ ಪ್ರಯೋಗಗಳಿಗೆ ಈಡು ಮಾಡಿಕೊಳ್ಳುತ್ತೇನೆ ಎಂದು ಮಾತ್ರ ಅಂದುಕೊಂಡಿರಲಿಲ್ಲ.

ದೌಲತಾಬಾದಿಗೆ ಹೋಗಿ ಬಂದಾಗಿನಿಂದ ಹೆಚ್ಚಾದ ತುಮುಲ ನನ್ನನ್ನು ಹಲವು ವರ್ಷಗಳಿಂದ ಅಭ್ಯಯಿಸುತ್ತಿರುವ ಸುರೇಖಾ ಅವರನ್ನು ಪರಿಚಯಿಸಿತು. ನಾನು ಈ ತುಮುಲಗಳನ್ನು ಹತ್ತಿಕ್ಕಲು ಮಾನಸಿಕ ತಜ್ಞರನ್ನು ಅಥವಾ ಆತ್ಮ ಸಂಗಾತ ಪ್ರಯೋಗ ತಜ್ಞರನ್ನು ಭೇಟಿ ಮಾಡಲೋ ಎಂಬ ದ್ವಂದಲ್ಲಿರುವಾಗ ನನ್ನ ಕಚೇರಿಯ ಗೆಳತಿಯಿಂದ ಇವರ ಬಗ್ಗೆ ಕೇಳಲ್ಪಟ್ಟೆ. ಆಕೆಯ ಅನುಭವಗಳು, ಈ ಪ್ರಯೋಗಾವಧಿಯಿಂದ ಆಕೆಗೆ ದೊರೆತ ಉತ್ತರಗಳು ನನ್ನನ್ನು ಈ ತಜ್ಞರಲ್ಲಿ ಭೇಟಿ ನಿಗದಿ ಮಾಡಲು ಪ್ರೇರೇಪಿಸಿತು. ಆದರೆ ಇದನ್ನೆಲ್ಲ ನಂಬಬೇಕೋ ಬೇಡವೋ ಅನ್ನುವ ದ್ವಂದದಿಂದ ಹೊರಬರಲಾಗಲಿಲ್ಲ. ನಾನು ರೇಖಿ ಅನ್ನು ಇವನ್ನೊಟ್ಟಿಗೆ ಹೋಗಿ ಕಲಿತದ್ದು ನಿಜ. ಆದರೆ ನನಗಾವತ್ತು ಈ ಬಣ್ಣಗಳು, ಪ್ರಭಾವಳಿಗಳು ಕಂಡೂ ಇಲ್ಲ, ಸ್ಪರ್ಶ ಜ್ಞಾನಕ್ಕೆ ದೊರಕು ಇಲ್ಲ. ಹೀಗಿರುವಾಗ ಈ ಆತ್ಮದ ಚರಿತ್ರೆ ನನಗೆ ಅನುಭವವಾಗುತ್ತಾ ಎಂಬ ಶಂಕೆ ಹಾಗೂ ಮೊದಲೊಮ್ಮೆ ಎದುರಿಸಿದ್ದ ಜೀವ ಭಯ.

ನನ್ನನು ಟ್ರಾನ್ಸ್ ಗೆ ಕಳಿಸಲು ಅವರಿಗೆ ಕಷ್ಟವೇ ಆಯಿತು. ನನಗೆ ಅವರು ಹೇಳುವ ರೀತಿಯ ಚಿತ್ರಗಳನ್ನು ಮನಸ್ಸಿನಲ್ಲಿ ಮೂಡಿಸಲು ಕಷ್ಟವಾಗುತಿತ್ತು. ನನಗೆ ಮೊದಲೇ ಹಾರುವುದು ಇಷ್ಟ. ಆ ಕಡು ನೀಲಿ ಹಳದಿಯ ಆಗಸದಲ್ಲಿ ಹಾರುತ್ತಿದ್ದ ನನಗೆ ಸೇತುವೆಯನ್ನು ತಲುಪುವ ಆಸೆಯಾಗಲೀ, ಸುರಂಗದ ಒಳಗೆ ಇಳಿಯುವ ಇಚ್ಛೆಯೇ ಆಗುತ್ತಿರಲಿಲ್ಲ. ಆ ಜಂಜಡಗಳ ಹಿಂದೆ ಮತ್ತ್ಯಾಕೆ ಹೋಗಲಿ ಎಂದು ಹಾರುತ್ತಲೇ ಇರುತ್ತಿದ್ದೆ. ಸತ್ತ ನಂತರ ದೇಹಕ್ಕೇನಾಯಿತು ಎಂದು ಕೇಳಿದರೆ ಹಿಂತಿರುಗಿ ನೋಡುವ ಕುತೂಹಲವೂ ಇರುತ್ತಿರಲಿಲ್ಲ. ಮತ್ತೆ ಹಾರಬೇಕು ಅಷ್ಟೆ. ತೇಲುತ್ತಿರಬೇಕು ಗಮ್ಯವಿಲ್ಲದೆ.

ಆ ಹೊತ್ತಿನಲ್ಲಿ ಕಂಡ ಚಿತ್ರಗಳು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಹೊರಬಂದ ಮೇಲೆ ಆದ, ಆಗಲಿರುವ ವಿಷಯಗಳು ಹೊಂದುತ್ತಿರುವಂತೆ ತೋರಿತು. ಕಾಕತಾಳೀಯವೋ, ಗೊತ್ತಿಲ್ಲ. ದೇವಗಿರಿ, ರಾಮದೇವರಾಯ, ಹೇಮ ಪಂಡಿತ್, ಅಲ್ಲಾವುದ್ದೀನ್ ಖಿಲ್ಜಿ, ನಿಜಕ್ಕೂ ಏನೂ ಅರ್ಥವಾಗಲಿಲ್ಲ ಅಥವಾ ಇವರ್ಯಾರು ಅಲ್ಲದೆ ಅದು ವಾರಾಣಾಸಿಗೆ ಅಥವಾ ಒರಿಸ್ಸಾಗೆ ಸಂಭಂದ ಪಟ್ಟಿತ್ತಾ, ಗೊತ್ತಿಲ್ಲ. ಇದು ಸಾವಿರದ ಮುನ್ನೂರಕ್ಕೆ ಸಂಭಂದಿಸಿದ ಚಿತ್ರಗಳಾಗಿದ್ದರಿಂದ ದೌಲತಾಬಾದಿಗೆ ಅದನ್ನು ಕೊಂಡಿ ಹಚ್ಚಿ ಸುಮ್ಮನೆ ಕುಳಿತು ಕೊಂಡಿದ್ದೇನೆ. ಯುದ್ಧಕ್ಕೆ ಸಂಬಧಿಸಿದ ಚಿತ್ರಗಳು ಇನ್ನೂ ಮನದಲ್ಲಿ ಹಾಗೆ ಉಳಿದುಕೊಂಡಿವೆ. ಒಳ್ಳೆ ಹಿಸ್ಟರಿ ಸಿನೆಮಾ ನೋಡಿದ ಹಾಗಿತ್ತು. ಅದಕ್ಕೂ ಮೊದಲು ನೋಡಿದ್ದ ಚಿತ್ರ ನಿಜಕ್ಕೂ ಗಾಜಿಯಾಬಾದ್ ನದ್ದಾ , ಅಲ್ಲಿ ಸಾವಿರಾರು ವರ್ಷಗಳ ಹಿಂದೆ ಒಂಟೆಗೆ ಮನುಷ್ಯರನ್ನು ಕಟ್ಟಿ ಸಾಯಿಸುವ ಶಿಕ್ಷೆ ಇತ್ತಾ, ಅದು ಗೊತ್ತಾಗಲಿಲ್ಲ. ಮಧ್ಯ ನೋಡಿದ ದೇವ ಮಾನವ ಚಿತ್ರಗಳೂ ಚೆನ್ನಾಗಿತ್ತು. ಒಟ್ಟಿನಲ್ಲಿ ಅರ್ಧ ನೋಡಿದ ಚಿತ್ರಗಳು, ಮತ್ತೆ ನೋಡಲು ಒಲ್ಲೆ ಎನ್ನುವ ಮನಸ್ಸು ಮತ್ತು ದೇಹ ಹೀಗೆ ನಿಗದಿತ ಅವಧಿ ಮುಗಿದು ಹೋಗಿತ್ತು.

ಹಾಗಂತ ನನಗೆ ಆದದ್ದೇನಿಲ್ಲ. ಎಲ್ಲದಕ್ಕೂ ಕಾರಣ, ತರ್ಕಗಳನ್ನು ಕೇಳುವ ಮನಸ್ಸಿಗೆ ಆಹಾರ ಬೇಕಾಗಿತ್ತು. ಏನಕೆ ಹೀಗೆ ಅನ್ನುವುದಕ್ಕೆ ಜನ್ಮಾಂತರದ ಕರ್ಮ ಸಿದ್ಧಾಂತದ ಹಿಂದೆ ಬಿದ್ದಿದ್ದೆ. ಜೀವನವನ್ನು ಜೋಡಿಸಿ ತರ್ಕದಲ್ಲಿ ಅಳೆದರೆ ಸಾವಿರ ವರ್ಷಗಳಿಗೆ ಮತ್ತು ಇಂದಿನದಕ್ಕೆ ಅನೇಕ ಸಾಮ್ಯಗಳಿದ್ದವು. ಅರಿತದ್ದನ್ನು ಅರಗಿಸಿ ಕೊಳ್ಳಲು ಅನೇಕ ತಿಂಗಳುಗಳೇ ಬೇಕಾದವು. ದರ್ಪ, ಕೌರ್ಯ, ಸಾವು, ಅಧಿಕಾರ, ನೀತಿ, ಕೊಲೆ, ವೈರಾಗ್ಯ, ಪ್ರೇಮ, ಸಂಚು, ಯುದ್ಧ, ಶಿಕ್ಷೆ, ….

ಈಗೀಗ ನಾನು ಸಾವಿರಾರು ವರ್ಷಗಳಿಂದ ಓಡಾಡಿಕೊಂಡಿದ್ದೇನೆ ಅಂತಾನೂ ಅನ್ನಿಸಿ, ಶೇ, ಸುಮ್ಮನೆ ಈ ತರಹ ಯೋಚಿಸುವುದನ್ನು ಬಿಟ್ಟು ಬಿಡು ಅಂದುಕೊಳ್ಳುತ್ತೇನೆ. ಸಾವು ಹೇಗಿರುತ್ತೆ ಅನ್ನುವ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ದೇಹ, ಮನಸ್ಸು, ಜೀವಾತ್ಮ ಈ ಮೂರು ವಿಂಗಡಣೆ ಸುಲಭವಾಗಿ ಅರಿವಾಗುತ್ತದೆ. ಮನಸ್ಸಿಗಾಗುವ, ದೇಹಕ್ಕಾಗುವ, ಜೀವಾತ್ಮಕ್ಕಾಗುವ,  ನೋವು ಮತ್ತು ಖುಷಿ ಬೇರೆ ಬೇರೆ ವಿಧಗಳಲ್ಲಿ ಇರುತ್ತದೆ ಎಂದು ಸಹ ಅನುಭವವಾಗುತ್ತದೆ.

ಕೆಲವೊಮ್ಮೆ ನನಗೆಲ್ಲೋ ಹುಚ್ಚು ಅನ್ನಿಸಿದ್ದಿದೆ. ಸುಮ್ಮನೆ ಮಾಡುವ ಕೆಲಸಗಳನ್ನು ಮಾಡಿಕೊಂಡು ಇರಬಾರದಾ ಅಂದನಿಸಿದ್ದಿದೆ. ಉಳಿದವರ ತರಹ ಒಂದು ಗೋಲ್ ಸೆಟ್ ಮಾಡಿಕೊಂಡು ಕೇವಲ ಅದನ್ನೇ ಲಕ್ಷದಲ್ಲಿಟ್ಟುಕೊಂಡು ಅದರ ಹಿಂದೆ ಬಿದ್ದಿರ ಬೇಕಲ್ಲವಾ ಅಂತಾನೂ ಹೇಳಿಕೊಂಡಿದ್ದಿದೆ. ಇದೆಲ್ಲ ಕೇವಲ ಮಾಯೆಯೊಳಗಿನ ಅನೇಕ ಮಾಯೆಯೋ ಅಂತಾನೂ ಅನಿಸಿದ್ದಿದೆ. ಬದುಕು ಮತ್ತೂ ಬಿಚ್ಚಿಕೊಳ್ಳ ಬೇಕಷ್ಟೆ. ಅನಿಸಿದ್ದೂ, ಅನುಭವಿಸಿದ್ದೂ, ಕಂಡಿದ್ದು, ಅರಿವಾಗಿದ್ದು ಇವೆಲ್ಲದರಲ್ಲಿ ಏಷ್ಟು ಮಿಥ್ಯೆಯಿದೆ ಎಂಬುದನ್ನು ಜೀವನವೇ ಹೇಳಬೇಕಷ್ಟೆ.

ಹೀಗೆ …..

ಮಾರ್ಚ್ 20, 2014

ಸುಮಾರು ಸಲ ನನಗೆ ನಾನು ‘social handicapped’  ಎಂದು ಅನ್ನಿಸುವುದುಂಟು. ಹೆಣ್ ಮಕ್ಕಳು ತನಗೆ ಮದುವೆ ಆಗಲಿಲ್ಲ ಎಂದು ಕೊರಗುವುದು ಕೇಳಿದರೆ ಅದೊಂದು ದೊಡ್ಡ ತಮಾಷೆ ನನಗೆ. ಶೇ! ಇವರಿಗೆ ಏನಾಗಿದೆ ಅಂತ. ಮದುವೆಯೇ ಹೆಣ್ಣಿನ ಬಾಳಿನ ಪರಮೊದ್ದೇಶ, ಸಂತಾನವೇ ಸ್ತ್ರೀ ಅನ್ನುವ ಪದಕ್ಕೆ ಬೆಲೆ ತಂದುಕೊಡುವುದು ವಗೈರೆಗಳು ನನಗೇನಕೆ ಅರ್ಥವಾಗುವುದಿಲ್ಲ! ಈ ಗಂಡ-ಹೆಂಡತಿ-ಮಕ್ಕಳು, ತನ್ನ ಸಂಸಾರ ಇದೆಲ್ಲ ನನಗೆ ಒಗ್ಗದ ಪದಗಳು. ನನ್ನ ಅರ್ಥೈಸಿಕೊಳ್ಳುವ ಪರೀಧಿಗೆ ಮೀರಿದ್ದು.

ಈಗೀಗ ನನಗೆ ಸಮಯಕ್ಕೆ ಸರಿಯಾಗಿ ಮದುವೆ ಆಗಬೇಕು ಅಂತನಿಸಿದಿದ್ರೆ ಚೆನ್ನಾಗಿರುತ್ತಿತ್ತೇನೋ ಅನ್ನಿಸುವುದುಂಟು. ಆದರೆ ಪ್ರೀತಿಸುವುದು ಅಂದರೆ ಮದುವೆ, ಮಕ್ಕಳು, ಸಂಸಾರ ಎಂದು ನಾನು ಭಾವಿಸಿಯೇ ಇರಲಿಲ್ಲ. ಹಾಗಾಗಿದ್ದಲ್ಲಿ ಇಷ್ಟಪಟ್ಟವನಲ್ಲಿ ನಾನೇ ಪ್ರಪೋಸ್ ಮಾಡಬಹುದಿತ್ತು. ತುಂಬಾ ಒಳ್ಳೆಯದಾಗಿದ್ದೇನಂದರೆ ಇವನೇ ನನ್ನ ಕೇಳಿದ್ದು. ಇಲ್ಲದಿದ್ದರೆ ನನಗೆ ಅವನೆಂದರೆ ಇಷ್ಟ ಅಂತ ಸುಮ್ಮನಿದ್ದು ಬಿಡುತ್ತಿದ್ದೆ.  ಹುಟ್ಟುವ ಭಾವನೆಗಳನ್ನು ಇನ್ನೊಬ್ಬನಲ್ಲಿಯೂ ಹೇಳಿಕೊಳ್ಳಬೇಕು, ನಾವೆಷ್ಟು ಪ್ರೀತಿಸುತ್ತೇವೆ ಎಂದು ಮಾತಿನಲ್ಲಿ ಬಿಚ್ಚಿ ಹೇಳಬೇಕು ಎಂದೆಲ್ಲ ಕಲಿತದ್ದು ಬಹಳ ತಡವಾಗಿ.

ಒಬ್ಬನ ಜೊತೆ ಇರಬೇಕು ಎಂದಾದಲ್ಲಿ ಅದಕ್ಕೆ ಮದುವೆ ಅಗತ್ಯ ಅನ್ನೋದು ಈಗಲೂ ನನಗೆ ಸರಿ ಕಾಣುವುದಿಲ್ಲ  ಮದುವೆ ಅಂತಾದಲ್ಲಿ ಮಾತ್ರ ಸಂಭಂಧ ಪವಿತ್ರವಾದದ್ದು, ನೈತಿಕವಾದದ್ದು ಅನ್ನೋದು ನನಗೆ ಅರ್ಥವೇ ಆಗದ ವಿಚಾರಗಳು.  ಅಧಿಕಾರ, ಹಕ್ಕು ಇವನ್ನೆಲ್ಲ ಒಳಗೊಳ್ಳುವ ಈ ದೈಹಿಕ ಸುಖ ಮತ್ತು ಸಂತಾನೋತ್ಪತ್ತಿ ನಿಜಕ್ಕೂ ಮನುಷ್ಯನಿಗೆ ಅಗತ್ಯವೇ ?

ನಾನು ಕಂಡಿರುವ ಹಲವು ಪತಿ-ಪತ್ನಿಯರು ಒಬ್ಬರನೊಬ್ಬರು ನೋಯಿಸುತ್ತಾ, ಬಯ್ದುಕೊಳ್ಳುತ್ತಾ, ಏಷ್ಟೇ ಕಷ್ಟವಾದರೂ ಈ ಮದುವೆಯೆಂಬ ಚೌಕಟ್ಟನ್ನು ದಾಟುವುದಿಲ್ಲ. ಕೇವಲ ‘ಗಂಡ’ ಎಂಬ ಮಾತ್ರಕ್ಕೆ ದುರ್ಬಲ ಮನುಷ್ಯನನ್ನು ಆರಾಧಿಸುವುದು, ಆತನ ತಪ್ಪುಗಳನ್ನು ಸಹಿಸಿಕೊಳ್ಳುವುದು ನನಗೆ ಸರಿಕಾಣದು. ಅದೇ ರೀತಿ ‘ಹೆಂಡತಿ’ ಅನ್ನುವ ಒಂದೇ ಕಾರಣಕ್ಕೆ ಆಕೆ ತನ್ನ ಜವಾಬ್ದಾರಿ, ಮರ್ಯಾದೆ ಎಂದೆಲ್ಲ ಸಹಿಕೊಳ್ಳುವುದು ಸಹಿತ.

‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಇದು ನಾನು ಕೇಳಿದ ಕೆಟ್ಟ ಗಾದೆ.  ಕ್ಷಣಿಕ ದೈಹಿಕ ಸುಖ ಎಲ್ಲದನ್ನೂ ಮೀರಿಸುತ್ತದೆಯಾ? ಹೀನಾಯವಾಗಿ ಬಯ್ದ ಬಾಯಿಗೆ ಮುದ್ದು ಕೊಡುವುದಾ? ಮದುವೆ ಇಬ್ಬರು ಮನುಷ್ಯರನ್ನು ಇಷ್ಟು ನೀಚ ಸ್ಥಿತಿಗೆ ಇಳಿಸಬಾರದಷ್ಟೆ. ನಮ್ಮ ಮಾನಸಿಕ ದೌರ್ಬಲ್ಯಕ್ಕೆ ‘ ಸಮಾಜದ ಹೆದರಿಕೆ’ ಎಂಬ ತಲೆಪಟ್ಟಿ ಬರೆದು ಸುಮ್ಮನಿರುವುದಾ? ಅಥವಾ ಹೆಣ್ಣು ಹುಟಿದ್ದೇ ಸಹಿಸಿಕೊಳ್ಳಲು ಅನ್ನುವ ಪುರುಷ ಸಮಾಜದ ಮೌಲ್ಯವನ್ನು ಅಪ್ಪಿಕೊಳ್ಳಬೇಕಾ?

ಎರಡು ಮನುಷ್ಯರಲ್ಲಿಯ ಸಂಭಂಧ ಈ ಗಂಡ-ಹೆಂಡಿರು ಅನ್ನುವುದನ್ನು ಮೀರಿ ಇರಬಾರದಾ? ಏನಕೆ ಈ ಒಂದು ಪರಿಧಿಯಲ್ಲೇ ನಮ್ಮನ್ನು ನಾವು ಕೊನೆಗಾಣಿಸಿಕೊಳ್ಳಬೇಕು? ಈ ಮೋಹ, ಬಂಧನಗಳನ್ನು ಕಳಚಿ ಹೊರನಡೆಯಬಾರದೆ ಮನುಜ?

ಈ ಜೊತೆ ಜೊತೆ ನಡೆಯುವ ಜೊಡಿಗಳು ಮದುವೆ ಅಂತ ಆಗದಿರಲಿ, ಆಗಿರಲಿ ನನಗೆ ಅದು ಮುಖ್ಯವಾಗುವುದಿಲ್ಲ. ಒಬ್ಬರನ್ನೊಬ್ಬರ ಜೊತೆ ಹೇಗೆ ನಿಭಾಯಿಸುತ್ತಾರೆ ಅನ್ನುವುದು ಮುಖ್ಯವಾಗುತ್ತದೆ. ವರ್ಷಗಳು ಕಳೆದಂತೆ, ಭಿನ್ನವಾಗುವ ಪರಿಸ್ಥಿತಿ ಮತ್ತು ಮನೋಸ್ಥಿತಿಗಳು ಜೊತೆಯಲ್ಲಿ ನಡೆಯುವವರ ಸಾಮರ್ಥ್ಯವನ್ನು ಪ್ರಶ್ನಿಸುತ್ತದೆ. ಅದು ದಿನ ಕಳೆದಂತೆ ವೃದ್ಧಿಯಾಗಬೇಕೆ ವಿನಹ ಕೋಪ, ಅಸೂಯೆ, ಸೆಡವುಗಳಲ್ಲಿ ಶಿಥಿಲವಾಗಬಾರದು. ಇದು ಎಲ್ಲ ರೀತಿಯ ಮನುಷ್ಯ ಸಂಭಂಧಗಳಿಗೂ ಅನ್ವಯವಾಯಿಸುತ್ತದೆ ಅನ್ನುವುದು ನನ್ನ ನಂಬಿಕೆ. ಅದಕ್ಕಾಗಿ ಮನುಷ್ಯ ಅಂತರಂಗಿಕವಾಗಿಯೂ, ಬೌದ್ಧಿಕವಾಗಿಯೂ ಬೆಳೆಯುವುದು ಅವಶ್ಯವಾಗುತ್ತದೆ.

ಏನಕೊ, ಈ ತಂದೆ ದೇವರು, ತಾಯಿ ದೇವರು, ಗಂಡ ದೇವರು, ಮಗು ದೇವರು,……. ಅರ್ಥವೇ ಆಗದು. ಯಾರನ್ನಾದರೂ ‘ದೇವರು’ ಎಂದು ಕರೆಯಬೇಕಾದರೆ ಆತನಿಗೆ ಅದಕ್ಕೆ ತಕ್ಕ ದೈವೀ ಗುಣಗಳಿರಬೇಕಾಗುತ್ತದೆ. ಕೇವಲ ಹುಟ್ಟಿಸಿದ ಮಾತ್ರಕ್ಕೆ ಆ ಮಗುವಿಗೆ ನಾವು ದೇವರಾಗುತ್ತೇವೆಯೇ? ‘ತನ್ನದು’ ಎಂದು ಕಾಪಿಡುವ ಜತನಕ್ಕೆ, ಬೆಳೆಸುವ ಜವಾಬ್ದಾರಿಗೆ ‘ದೇವರು’ ತನ ಹೇಗೆ ಸರಿ? ಪ್ರಪಂಚದ ಪ್ರತಿಯೊಂದು ಜೀವಿಯು ಬದುಕುವ ಪರಿ ಇದು. ಅದೇ ರೀತಿ ನಾನು ನನ್ನ ಗಂಡ / ಹೆಂಡತಿ/ ಮಗು / ….. ಪ್ರೀತಿಸುತ್ತೇನೆ ಅನ್ನುವವರನ್ನು ಕಂಡಾಗಲೂ ಅಷ್ಟೆ. ನನಗೆ ನಗು ಬರುತ್ತದೆ. ಅದು ‘ನಿನ್ನದು’ ಅದಕ್ಕಾಗಿ ಪ್ರೀತಿಸುತ್ತೀಯಾ. ಈ ‘ನನ್ನದು’ ಎಂಬ ಹಂಗಿಲ್ಲದ, ಕೊಡು-ಕೊಳ್ಳುವಿಕೆಯ ಹೊರತಾದ, ಸಂಭಂಧಗಳ ಹೊರತಾದ ಜೀವಿಯನ್ನು ಇದೇ ರೀತಿ ಪ್ರೀತಿಸಬಲ್ಲೆಯಾ? ಹೊರಗೆ ಬೀದಿಯಲ್ಲಿ ಆಡುವ ಮಗುವನ್ನು ಅಷ್ಟೇ ಅಕ್ಕರೆಯಿಂದ ಸಂತೈಸ ಬಲ್ಲೆಯಾ? ದಾರಿಯಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯ ಬಳಿ ಅಷ್ಟೇ ಪ್ರೀತಿಯಿಂದ ಎರಡು ಮಾತನಾಡ ಬಲ್ಲೆಯಾ? ಇದೆಲ್ಲ ಸಾಧ್ಯವಿಲ್ಲ ಎಂದಾದಲ್ಲಿ ನಾವು ಪ್ರೀತಿಸುವುದು ಏನನ್ನು? ಕೇವಲ ‘ನಮ್ಮದು’, ‘ನಮ್ಮತನ’ ವನ್ನು. ಅಷ್ಟೇ. ಪ್ರೀತಿ ಬೆಳೆಯಲು ಇಲ್ಲ, ಹರಡಲು ಇಲ್ಲ. ಇಂತಹ ಪ್ರೀತಿಗೆ ‘ದೈವಿಕತೆ’ ಹೇಗೆ ಪ್ರಾಪ್ತವಾದೀತು?

ನಾನು ನಿನ್ನನ್ನು ಪ್ರೀತಿಸುತ್ತೇನೆ. ಅದು ಅವನು / ಳು / ಅದು  ಆಗಿರಬಹುದು. ಹಾಗೆ ಕೆಂದ್ರೀಕೃತಗೊಳ್ಳುವ ಮನಸ್ಸು,  ಜೀವವನ್ನು ಆ ಭಾವದಲ್ಲಿ ಮಿಲನಗೊಳಿಸಿದಾಗ ನು / ಳು / ದು ಕರಗಿ ಹೋಗುತ್ತದೆ. ಆಗ ಉಳಿಯುವುದು ನಾನು ಪ್ರೀತಿಸುತ್ತೇನೆ; ನಿನ್ನನ್ನು, ಅವನನ್ನು, ಅದನ್ನು, ಎಲ್ಲವನ್ನೂ. ಅಷ್ಟೇ. ಇಲ್ಲಿ ನಾನು ಪ್ರೀತಿಸುವುದರಿಂದ ನೀನೂ ನನ್ನನ್ನು ಪ್ರೀತಿಸಬೇಕು, ಕೇವಲ ನನ್ನನ್ನು ಮಾತ್ರ ಪ್ರೀತಿಸಬೇಕು, ಆ ಸಂಭಂಧಕ್ಕೊಂದು ಹೆಸರು ಬೇಕು, ಸಂಸಾರ ಬೇಕು, ಅದು ಬೇಕು, ಇದು ಬೇಕು ಅನ್ನುವ ಮಾತುಗಳೇ ಇಲ್ಲ. ಈ ಎಲ್ಲವನ್ನೂ ಮೀರಿ ನಾನು ಪ್ರೀತಿಸುತ್ತೇನೆ. ಆಗ ಗಾಳಿಯೂ ಮಾತನಾಡುತ್ತದೆ, ಜೀವವು ಕುಣಿಯುತ್ತದೆ. ನಿಶ್ಚಲ ಆನಂದದಿಂದ. ಮನುಷ್ಯನಿಗೆ ಬೇಕಾದದ್ದು ಅದೇ ಅಲ್ಲವಾ?

ಮಾತಾಡ್ ಮಾತಾಡ್ ಮಲ್ಲಿಗೆ (!)

ಜೂನ್ 12, 2013

ಹೌದು, ನಾನು ಚಾಟರ್ ಬಾಕ್ಸ್. ನನ್ನ ಹಿಂದಿ ಮೇಷ್ಟ್ರು ಇಟ್ಟ ಹೆಸರು ಅದು. ಕ್ಲಾಸಲ್ಲಿ ಸುಮ್ಮನೆ ಕುಳಿತುಕೊಳ್ಳೋಕೆ ಆಗ್ತಾ ಇರಲಿಲ್ಲ ನನಗೆ. ಏನಾದ್ರೂ ಮಾಡ್ತಾ, ಯಾರನ್ನಾದರೂ ಗೋಳು ಹೊಯ್ಕೊಳ್ತಾ, ಡಿಸ್ಟರ್ಬ್ ಮಾಡ್ತಾ ಇರ್ತಿದ್ದೆ. ಹೆಚ್ಚಾಗಿ ಮೇಷ್ಟ್ರು ಗಲಾಟೇನೇ ಮಾಡು ಅಂದ್ರೆ ಸುಮ್ಮನೆ ಕೂತಿರ್ತಿದ್ನೆನೋ. ಆದ್ರೆ ಅವರು ಗಪಚುಪ್ ಅಂತಿದ್ರು. ಅದಕ್ಕೆ, ನನಗೆ ತಡೆಯಕೆ ಆಗ್ತಾ ಇರಲಿಲ್ಲ.

ಇನ್ನೂ ನೆನಪಿದೆ. ಕಾಲೇಜಿನ ದಿನಗಳಲ್ಲಿ ನಾನು ಮತ್ತು ಅಶ್ವಿನಿ ಬಸ್ಸಲ್ಲಿ ಕೂತು ಬಕ್ವಾಸ್ ಮಾತಾಡಿ ಹೊಟ್ಟೆತುಂಬಾ ನಗಾಡುತ್ತಿದ್ದದ್ದು. ಏನೇನೋ ಹೇಳೋದು, ನಗಾಡೊದು. ಯಾರಾದ್ರೂ ಕೇಳ್ತಾ ಇದ್ರೆ ಅವರಿಗೆ ತಲೆಬುಡ ಅರ್ಥಾ ಆಗ್ತಾ ಇರಲಿಲ್ಲ ಅನ್ನೋದಂತೂ ಗ್ಯಾರ್ಂಟಿ. ಒಂದಿನ ನಾನು ಮತ್ತು ನನ್ನ ಕಸಿನ್ ಗೀತಿ ರಾತ್ರಿ ಯಾವುದೋ ಫಂಕ್ಷನ್ ಅಟೆಂಡ್ ಮಾಡಿ ರಿಕ್ಷಾದಲ್ಲಿ ಮನೆಗೆ ವಾಪಸ್ಸು ಹೋಗ್ತಾ ಇದ್ವು. ಅಲ್ಲಿಂದ ನಮ್ಮ ಮನೆಗೆ ಒಂದು ತಾಸಿನ ದಾರಿ ಇದ್ದಿರಬಹುದು. ಮಾತು ಸ್ಟಾರ್ಟ್ ಆಯಿತು. ಏನೇನೋ ಹೇಳದು, ನಗದು. ಕೈಯಲ್ಲಿ ನೀರಿನ ಬಾಟಲ್ ಬೇರೆ ಇತ್ತು. ಮಧ್ಯ ಮಧ್ಯ ನೀರನ್ನು ಎತ್ತಿ ಕುಡಿದು ಗಂಟಲು ಸರಿ ಪಡಿಸಿಕೊಂಡು ಮತ್ತೆ ನಗದು. ಪಾಪ! ರಿಕ್ಷಾ ಡೈವರ್ ನಿಗೆ ಏಷ್ಟು ಕಷ್ಟ ಆಯಿತು ಅಂದ್ರೆ ಅವನು ಹೇಳೆ ಬಿಟ್ಟ, ನೀವೇನು ನೀರ್ ಕುಡಿತಿದ್ದಿರೋ ಅಥವಾ ಅದರಲ್ಲಿ ಏನಾದರೂ ಇದೆಯಾ ಅಂತ. ನನ್ನ ಲೈಫ್‌ನಲ್ಲಿ ಫಸ್ಟ್ ಟೈಂ ಈ ತರಹ ನೋಡಿದ್ದು. ಏನು ಮಾತಾಡ್ತಿರಪ್ಪಾ, ನಾವು ಏಷ್ಟು ಪೆಗ್ ಹಾಕಿದ್ರು ಈ ತರಹ ಏರಲ್ಲ ಅಂತ.

ಇಲ್ಲಿ ಆಫೀಸ್ ಬಸ್ಸಿನಲ್ಲಿ ನನ್ನ ಪಕ್ಕ ದೀಪಿಕಾ ಕುಳಿತುಕೊಳ್ತಾ ಇದ್ಲು. ತುಂಬಾ ಸೈಲೆಂಟ್ ಅವಳು. ಆದ್ರೆ ಪಕ್ಕ ಕೂತವಳು ನಾನಲ್ವೆ. ನಾನು ಅವಳನ್ನು ಕರೆದು ಕರೆದು ಮಾತಾಡೊದು, ಅದೇನು, ಇದು ಹೇಂಗೆ, ನಿಮ್ಮಲ್ಲಿ ಹೇಂಗೆ, . . ಅಂತೆಲ್ಲ ಕೇಳೋದು. ಆಕೆ ಒಂದಿನ ತಡೆದುಕೊಳ್ಳೋಕಾಗದೆ ಹೇಳೆ ಬಿಟ್ಲು, ಎಲ್ಲರಿಗೂ ಮಾತು ಇಷ್ಟವಾಗಲ್ಲ, ನಾನು ಸ್ವಲ್ಪ ಇನ್ಟರಾವರ್ಟ್. ನನಗೆ ತಣ್ಣಗೆ ಕೂತು ಕಿಟಕಿಯ ಹೊರಗೆ ಸುಮ್ಮನೆ ನೋಡುವುದೇ ಇಷ್ಟ ಅಂತ. ನಾನು ಅವಳು ಹೇಳಿದ್ದನ್ನು ತುಂಬಾ ಆಸ್ತೆಯಿಂದ ಕೇಳಿಸಿಕೊಂಡು ಒಂದು ಹತ್ತು ನಿಮಿಷ ಸುಮ್ಮನಿದ್ದೆ. ಅವಳು ಮುಖ ಹೊರಳಿಸಿ ಕಿಟಕಿಯ ಸರಳುಗಳಲ್ಲಿ ತೂರಿಸಿದ್ಲು. ಆಮೇಲೆ ಕೇಳಿದೆ, ನಿಮ್ಮನ್ನು ನೋಡಿದರೆ ಆ ತರಹ ಕಾಣೋಲ್ಲ, ತುಂಬಾ ಮಾತೋಡೋರ ತರಹ ಅನ್ನಿಸುತ್ತೆ, ಅವಳಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಹೌದು, ನಾನು ತುಂಬಾ ಕ್ಲೋಸ್ ಇದ್ದವರ ಹತ್ತಿರ ಮಾತ್ರ ಮಾತಾಡೋದು ಅಂದಳು. ಅದನ್ನು ಹೇಳಿಸಿಕೊಂಡು ನಾನು ಸುಮ್ಮನಾಗಲಿಲ್ಲ. ಅದು ನನ್ನ ಜಾಯಮಾನವೇ ಅಲ್ಲ. ಈ ಕಡೆ ಕಿವಿಯಿಂದ ಕೇಳಿ ಆ ಕಡೆ ಕಿವಿಯಿಂದ ಬಿಟ್ಟು ಬಿಡೋದು. ಅವಳತ್ತಿರ ಮಾತಾಡಿ ಮಾತಾಡಿ ಈಗ ಅವಳು ನನ್ನ ಕ್ಲೋಸ್ ಫ್ರೆಂಡ್.  ಈಗ ಬಸ್ಸಲ್ಲಿ ಬರಲ್ಲ. ಮದುವೆಯಾಗಿದೆ. ಮೊನ್ನೆ ಒಮ್ಮೆ ಬಸ್ಸಲ್ಲಿ ಬಂದಾಗ ಹೇಳ್ತಾ ಇದ್ದಳು, ಆಕೆಯ ಗಂಡ ನನ್ನ ತರಹವೇ ಬಕ್ ಬಕ್. ಅದಕ್ಕೆ ಮುಂದೆ ಕಷ್ಟ ಆಗದೆ ಇರಲಿ ಅಂತ ಮದುವೆಗೆ ಮುಂಚೆನೇ ಆ ಭಗವಂತ ನನ್ನ ಭೇಟಿ ಮಾಡಿಸಿಬಿಟ್ಟಿದ್ದ ಅಂತ.

ಇವನ ಸ್ನೇಹಿತ ಒಬ್ಬ ಇದ್ದಾನೆ, ನಾವು ಹೊರಗೆ ತಿರುಗೋಕೆ ಹೋದಾಗೆಲ್ಲ ಅವನು ಬರ್ತಾ ಇದ್ದ. ಅವನಿಗೊಂದು ಚಟ. ನನ್ನ ಮಾತಿಗೆಳೆದು ಬಿಡೋದು. ಆಮೇಲೆ ನನ್ನ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ಸಾಕಾಗಿ, ಮೇಡಂ, ಸ್ವಲ್ಪ ಹೊತ್ತು ಸುಮ್ಮನಿರಿ. ಏಕೆ ಮೆದುಳಿಗೆ ಕೈಹಾಕಿ ತಿರುಗಿಸ್ತಿರಾ ಅಂತ. ಅವನು ನಾನು ಮಾತಾಡೊ ಮೂಡಲ್ಲಿ ಇದ್ರೆ ಕೈ ಮುಗಿದು ಹೇಳೋ  ಖಾಯಂ ಡೈಲಾಗ್, ನೀವು ಸುಮ್ಮನಿದ್ರೆ ಚೆಂದ, ಮೆದುಳಿಗೆ ಕೈ ಹಾಕಾಕೆ ಮಾತ್ರ ಬರಬೇಡಿ, ನಮ್ಮ ಪಾಡಿಗೆ ನಮ್ಮ ಬಿಟ್ಟು ಬಿಡಿ. ಬದುಕೋತಿವೆ ಅಂತ.

ಮೊನ್ನೆ ಒಂದು ಜೋಕ್ ನಮ್ಮಲ್ಲಿ ಪಾಸ್ ಆಗ್ತಾ ಇತ್ತು, ಮಾವಿನ ಮರದ ಕೆಳಗೆ ಇಬ್ಬರು ಮಾತಾಡ್ತಾ ಕೂತಿರ್ತಾರೆ. ಮೇಲಿನಿಂದ ಮಾವಿನ ಹಣ್ಣು ಕೆಳಗೆ ಬೀಳುತ್ತೆ. ಅದನ್ನು ನೋಡಿ ಈ ಕಾಲದಲ್ಲಿ ಮಾವಿನ ಹಣ್ಣು ಅಂತ ಆಶ್ಚರ್ಯ ಪಡ್ತಾರೆ, ಆಗ ಮಾವು ಸಿಟ್ಟಲ್ಲಿ ಕೂಗುತ್ತೆ, ತೊಡಾ ಚುಪ್ ರಹೆನಾ, ಮೈ ಸುನಕೆ ಸುನಕೆ ಪಕ್ ಗಯಾ ಅಂತ. ಆವತ್ತಿನಿಂದ ನಮ್ಮ ಚೇತನ್ ನಾನು ಮಾತಾಡ್ತಾ ಇದ್ರೆ ಬಂದು ಅಭೆ ದೇಖ್ನಾ, ಕ್ಯಾಂಟೀನ್ ಮೇ ಅಭಿ ಪಪಾಯಾ ಪಕ್ ಗಯಾ ಹೋಗಾ ಅಂತಿರ್ತಾನೆ.

ಏನ್ ಮಾಡೋದು, ನನಗೆ ಮಾತಾಡಕೆ ಇಷ್ಟ. ಜನರು ಇಷ್ಟ. ಅವರು ಹೇಳೋ ಅವರ ಕತೆಗಳು ಇಷ್ಟ. ಏಷ್ಟು ಅಪರಿಚಿತರು ಪರಿಚಿತರಾಗಿ ಬಿಡ್ತಾರೆ. ಆದರೆ ಜಾಸ್ತಿ ಮಾತಾಡೊದ್ದಕ್ಕೇನೆ ಯಾರು ಅತಿ ಪರ್ಸನಲ್ ಮಾತ್ರ ಹೇಳಿಕೊಳ್ಳೊಲ್ಲ. ಬೇಜಾರಿಲ್ಲ. ಆ ಆ ಕ್ಷಣಕ್ಕೆ ಜೊತೆಗಿದ್ದವರ ಜೊತೆ ಖುಷಿಯಿಂದ ಒಂದು ನಗು, ಒಂಚೂರು ಹೃದಯದಿಂದ ಆಡೋ ಮಾತು ನಮ್ಮ ಸುತ್ತಮುತ್ತ ಪರಿಸರವನ್ನೇ ಜೀವಿಸೊ ತರಹ ಮಾಡಿ ಬಿಟ್ಟಿರುತ್ತೆ. ಎಲ್ಲ ನೋವು ಖಾಲಿ ಖಾಲಿಯಾಗಿ ಅರ್ಥವಿಲ್ಲದ್ದು ಆಗಿ ಹೋಗಿರುತ್ತೆ.

ಶುಭ ರಾತ್ರಿ.