ಹೇಯ್ ನನಗೂ ಇಣಚಿ ಸಾಕಬೇಕು ಅಂತ ಒಬ್ಬಳು ಅಂದರೆ ಇನ್ನೊಬ್ಬ ನಾನು ಹೇಳಿಟ್ಟಿದ್ದೇನೆ, ಮೂರು ತಿಂಗಳೊಳಗೆ ಸಿಗುತ್ತದೆ, ಕೊಂಡುಕೊಳ್ಳುತ್ತೀನಿ ಅಂದ ! ಇವರಿಗೆಲ್ಲ ಏನು ಹೇಳುವುದೆಂದು ತಿಳಿಯುವುದಿಲ್ಲ. ಹೇಳಿದರು ಅರ್ಥವಾದಿತೆಂಬ ಭರವಸೆ ನನಗಿಲ್ಲ. ನನ್ನ ಮತ್ತು ಇಣಚಿಯ ಕತೆ ಕೇಳಿದವರೆಲ್ಲ ಪೇಪರ್ ಗೆ ಕೊಡು ಅಂದಿದ್ದರು. ಆದರೆ ನನಗೆ ಹೆದರಿಕೆ. ನಾ ಬರೆದದ್ದು ಓದಿ, ಇಣಚಿಯನ್ನು ಸಾಕುವ ಹಂಬಲ ಜನರಲ್ಲಿ ಹುಟ್ಟಿ, ಇಣಚಿಗಳು ಪಂಜರ ಸೇರಿದರೆ ? ಅಯ್ಯೋ……..!!
ನನಗೊ ಇಣಚಿ ದೊರೆತದ್ದು ಆಕಸ್ಮಿಕವಾಗಿ. ಹೊರಗೆ ಒಗೆದು ಸಾಯಿಸಲು ಮನಸ್ಸಾಗದೇ ಇಂಟರ್ ನೆಟ್ ಓದಿ ಅದರ ಬಗ್ಗೆ ತಿಳಿದುಕೊಂಡು ಬೆಳೆಸಿದ್ದು. ಇಣಚಿಯ ಸಲುವಾಗೇ ಮನೆಯಲ್ಲಿ ಮಹಾಭಾರತವೇ ನಡೆದು ಹೋಗಿದ್ದು ಇನ್ನೊಂದು ದೊಡ್ಡ ಕತೆ. ಅದೀಗ ಇಲ್ಲಿ ಬೇಡ.
ಇಲ್ಲಿ ಆವಾಗಾವಾಗ ಹಕ್ಕಿಯೊಂದು ಕಿರುಚುವುದು ಕೇಳುತ್ತದೆ. ಏನೂಂತ ನೋಡಿದರೆ ಎದುರು ಮನೆಯ ಭೂಪರು ಇಷ್ಟು ಚಿಕ್ಕ ಗೂಡಿನಲ್ಲಿ ಅಷ್ಟು ದೊಡ್ಡ ಹಕ್ಕಿಯೊಂದನ್ನು ಕೂಡಿ ಹಾಕಿದ್ದಾರೆ. ಆಗಾಗೊಮ್ಮೆ ಬಂದು ಮಾತಾಡಿಸಲೆಂದು ಗೂಡನ್ನು ಅಲುಗಾಡಿಸುತ್ತಾರೆ. ಅದು ಭಯದಿಂದ ಕೂಗುತ್ತದೆ. ಇವರಿಗೆ ಹಕ್ಕಿ ತನ್ನ ಜೊಡಿ ಮಾತಾಡುತ್ತಿದೆಯೆಂಬ ಖುಷಿ. ಇನ್ನಷ್ಟು ಮಾತನಾಡಿಸುತ್ತಾರೆ. ಮತ್ತೆ ಅದು…….. ಏನು ಜನರೋ! ನನಗಂತೂ ಎಲಿಯನ್ ಬಂದು ಇವರ ಕುತ್ತಿಗೆಗೊಂದು ಸರಪಳಿ ಹಾಕಿ, ಬಾಯಿಯಲ್ಲಿ ಮೊಗುದಾರ ಹಾಕಿ ಎಳಕೊಂಡು ಹೋಗಲಿ ಅನ್ನಿಸುತ್ತಿದೆ.
ನಾನು ಚಿಂಚಿಯನ್ನು ಸಾಕಲು ಕಾರಣವಾಗಿದ್ದು ನನ್ನ ಕಸೀನ್ ಕಲೀಗ್ ನ ಒತ್ತಾಸೆಯಿಂದ. ಚಿಂಚಿ ಸಿಕ್ಕಾಗ ಅದಕ್ಕೆ ಏಳು ವಾರಗಳಷ್ಟೇ ಆಗಿದ್ದರಿಂದ ನಾಲ್ಕು ತಾಸಿಗೊಮ್ಮೆ ಇಂಜೇಕ್ಷನ್ ಟ್ಯೂಬಿನಿಂದ ಫೀಡ್ ಮಾಡಬೇಕಿತ್ತು. ಆತ ಆಫೀಸಿಗೆ ಹೋಗುತ್ತಿದ್ದರಿಂದ ಚಿಂಚಿಯನ್ನು ಸಾಕಲು ಆಸಕ್ತಿಯಿದ್ದರು ಪುರಸೊತ್ತು ಇರಲಿಲ್ಲ . ನಾನಾಗ ಈಗೀನ ತರಹವೇ ಕೆಲಸ ಬಿಟ್ಟು ಮನೆಯಲ್ಲಿದ್ದೆ. ಆದರೆ ನನಗೆ ಇದರಲ್ಲಿ ಅಂತಹ ಆಸಕ್ತಿಯಿರಲಿಲ್ಲ. PETA ಗೆ ಕೊಟ್ಟು ಬಿಡೋಣ, ಅವರು ನೋಡಿಕೊಳ್ಳುತ್ತಾರೆ ಎಂದಿದ್ದೆ. ಆತ PETAದಲ್ಲಿ ನಮ್ಮಷ್ಟು ಮುತುವರ್ಜಿಯಿಂದ ನೋಡಿಕೊಳ್ಳೊಲ್ಲ. ನಾನೊಂದು ಗಾಯವಾದ ಗೂಬೆಯನ್ನು ತೆಗೆದು ಕೊಂಡು ಹೋಗಿದ್ದೆ. ನನಗೆ ಅಲ್ಲಿ ಹೇಗೆ ಎಂದು ಗೊತ್ತು ಎಂದೆಲ್ಲ ಹೇಳಿ ಇಣಚಿಯ ಮೇಲೆ ಕನಿಕರ ಹುಟ್ಟುವ ಹಾಗೆ ಮಾಡಿಬಿಟ್ಟಿದ್ದ. ಚಿಂಚಿಗೆ ಬೇಕಾಗುವ ಇಂಜೇಕ್ಷನ್ ಟ್ಯೂಬ್ , ಸಿರಿಲಾಕ್ , ವಿಟಮಿನ್ ಸಿರೆಪ್ ಎಲ್ಲ ತಂದು ಕೊಟ್ಟು ನೀವಿಗ ಮನೆಯಲ್ಲಿರುವುದರಿಂದ ಸಧ್ಯ ನೋಡಿಕೊಳ್ಳಿ, ಆಮೇಲೆ ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದ.
ಆದರೆ ಚಿಂಚಿ ದೊಡ್ಡದಾದ ಮೇಲೆ ನಾನೇ ಅವನಿಗೆ ಕೊಡಲಿಲ್ಲ. ಈ ವಿಷಯ ಬಂದ ಕೂಡಲೇ ಮಾತನ್ನು ಬೇರೆ ಕಡೆ ತಿರುಗಿಸುತ್ತಿದ್ದೆ. ಯಾಕೆಂದರೆ ಆತ ಬಂದು ತಾನೊಂದು ದೊಡ್ಡ ಗೂಡು ಕಟ್ಟಿಸುತ್ತೇನೆ, ದಿನಕ್ಕೊಮ್ಮೆ ಹೊರಗೆ ಬಿಡ್ತೆನೆ, ಗೂಡು ಇಷ್ಟು ದೊಡ್ಡದಿರಲೋ ಅಥವಾ ಅಷ್ಟು ದೊಡ್ಡದಿರಲೋ ಎಂದೆಲ್ಲಾ ಕೇಳುತ್ತಿದ್ದ. ಆಗೆಲ್ಲ ನನಗೆ ವಿಚಿತ್ರ ಸಂಕಟವಾಗುತಿತ್ತು. ಆತ ಚಿಂಚಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಾನೆ. ಪ್ರೀತಿಯಿಂದಲೂ ನೋಡಿಕೊಳ್ಳುತ್ತಾನೆ. ಆದರೆ…………ಇಷ್ಟು ದಿನ ಇಡೀ ಮನೆಯಲೆಲ್ಲ ಓಡಾಡಿಕೊಂಡಿದ್ದ ಚಿಂಚಿಯನ್ನು ಹೇಗೆ ಮೂರಡಿ ಆರಡಿ ಒಳಗೆ ತಳ್ಳುವುದು ಎಂದು ಚಿಂತೆಯಾಗುತಿತ್ತು. ಹಾಗಂತ ಇದನ್ನು ಆರೈಕೆ ಮಾಡುತ್ತಾ ಕೂತರೆ ನನ್ನ ಕೆಲಸದ ಗತಿಯೇನು? ಆಗಾಗಲೇ ಚಿಂಚಿ ಮನೆಯಲ್ಲಿದ್ದರೆ ತಾನು ಇರುವುದಿಲ್ಲವೆಂದು ನನ್ನ ಮನೆಮೇಟ್ ಹೊಸ ಮನೆಗೆ ಹಾರಿದ್ದಳು. ಒಂದೇ ಸಲ ಇಡೀ ಬಾಡಿಗೆ ನನ್ನ ತಲೆ ಮೇಲೆ ಬಿದ್ದಿತ್ತು. ಇಟ್ಟ ಹಣ ಆಗಾಗಲೇ ಕರಗುತ್ತ ಬಂದಿತ್ತು. ಮತ್ತೊಮ್ಮೆ ಕೆಲಸ ಸೇರುವ ಜರೂರತ್ತಿತ್ತು. ಮನೆಯಿಂದ, ಪಕ್ಕದ ಮನೆಯಿಂದ ಒಂದೇ ಸಮನೆ ಕಿರಿಕಿರಿ, ಫಸ್ಟ್ ಅದನ್ನು ತೆಗೆದು ಹೊರಗೆ ಬೀಸಾಡು ಎಂದು…………….. ಕೊನೆಗೆ ಏನಾದರಾಗಲಿ ನಾನೇ ಇದನ್ನು ಉಳಿಸಿಕೊಳ್ಳುವುದು ಎಂದು ನಿರ್ಧಾರ ಮಾಡಿಬಿಟ್ಟೆ.
ಚಿಂಚಿ, ಉಳಿದವರ ಕಣ್ಣಿನಲ್ಲಿ ಒಂದು ಕ್ಷುಲ್ಲಕ ಜೀವಿ. ನನಗೆ ಅದು ಸ್ವಾತಂತ್ರದ ನೈಸರ್ಗಿಕ ಪ್ರತೀಕ. ನಾನು ಎಲ್ಲ ರೀತಿಯ ಬಂಧನಗಳನ್ನು ಧಿಕ್ಕರಿಸುವುದರಿಂದ, ಇದನ್ನು ಹೇಗೆ ಆ ಪಂಜರಕ್ಕೆ ಒಪ್ಪಿಸುತ್ತಿದ್ದೆ ?