ಇದನ್ನು ನಾನು ತುಂಬಾ ಆಸೆ ಪಟ್ಟುಕೊಂಡು ಬರೆದದ್ದು. ಇದನ್ನು ಬರೀತಾ ಇದನ್ನು ಅನಿಮೇಶನ್ ಸಿನೆಮಾ ಮಾಡಿದ್ರೆ ಹೇಗೆ ಅಂತ ಅನ್ನಿಸಿ, ಇವನಿಗೆ ತೋರಿಸಿ, ಅವನೂ ಇಷ್ಟಪಟ್ಟು ಮಾಡಬಹುದು ಚೆನ್ನಾಗಿರುತ್ತೆ ಅಂದಿದ್ದ. ಆಫೀಸಿನಲ್ಲಿ ನಮ್ಮ ಟೀ ಗ್ಯಾಂಗ್ ಗೆ ಹಿಂದೀಕರಿಸಿ ಓದಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವ ತರಹ ಅನಿಮೇಷನಿನಲ್ಲಿ ಮಾಡಬಹುದು ಅಂತೆಲ್ಲಾ ಮಾತಾಡಿಕೊಂಡಿದ್ವಿ. ಆಮೇಲೆ ಅದನ್ನು ನಮ್ಮಲ್ಲಿಯ ಕತೆ ಡಿಪಾರ್ಟ್ ಮೆಂಟ್ ಹೆಡ್ಡಿಗೆ ಕೊಟ್ಟು ಅವರತ್ತಿರನೇ ಬಿದ್ದುಕೊಂಡಿತ್ತು. ಕೊನೆಗೊಂದು ದಿನ ಸಾಪ್ತಾಹಿಕಗಳಿಗೆ ಕಳಿಸಿದ್ದೆ. ಅದು ಅವರಿಗೆ ಮುಟ್ಟಿತೊ ಅಥವಾ ಕತೆ ಅವರಿಗೆ ಬೇಕಾಗಿರುವ ಸಾಹಿತ್ಯಿಕ ದರ್ಜೆಗಳಲ್ಲಿ ಕೂಡದೆಯೋ ಅಥವಾ,…. ಒಟ್ಟಿನಲ್ಲಿ ಎಲ್ಲೂ ಬಂದಿದ್ದು ಗೊತ್ತಾಗಲಿಲ್ಲ. ಏನೇ ಆದರೂ ನಂಗಿಷ್ಟ ಇದು. ಮುಂದೊಂದು ದಿನ ಇದರ ಮೇಲೆ ಅನಿಮೇಶನ್ ಚಿತ್ರ ಮಾಡುವ ಕನಸು ಇನ್ನೂ ಇದೆ. ಸಧ್ಯ ನನ್ನ ಬ್ಲಾಗಿನ ಅಲಂಕಾರಕ್ಕಾಗಿ
——————————–
ಒಂದು ಸುಂದರವಾದ ದಿನ, ಪಿಂಕಿಯ ಅಪ್ಪ-ಅಮ್ಮ ಅವಳು ಸುಮಾರು ದಿನದಿಂದ ದುಂಬಾಲು ಬಿದ್ದಿದ್ದ ಸೈಕಲ್ ತೆಗೆಸಿ ಕೊಡಲು ಪೇಟೆಯ ಆ ದೊಡ್ಡ ಅಂಗಡಿಗೆ ನುಗ್ಗಿದ್ದರು. ಅಲ್ಲಿನ ನಾನಾ ರೀತಿಯ ಬಣ್ಣ ಬಣ್ಣದ ಸೈಕಲ್ಲುಗಳನ್ನು ನೋಡಿ ಪಿಂಕಿ ಕುಣಿದಾಡಿ ಬಿಟ್ಟಳು. ಆಕೆಗೆ ಅಲ್ಲಿದ್ದ ನೀಲಿ-ಕೆಂಪು ಬಣ್ಣದ ಅಡ್ಡಡ್ಡ ಗೆರೆ ಸೈಕಲ್ ತುಂಬಾ ಹಿಡಿಸಿತು. ಅದು ಹುಡುಗರದ್ದು ಎಂದು ಅಂಗಡಿ ಅಂಕಲ್ ಹೇಳಿದಾಗ ಆಕೆ ಪೆಚ್ಚಾದಳು. ಆಮೇಲೆ ಡೊರೆಮ್ಯಾನ್ ಸ್ಟಿಕರ್ ಇದ್ದ ಕಪ್ಪು ಸೈಕಲ್ಲು ಕೂಡ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಅದಕ್ಕೆ ದುಡ್ಡು ಹೆಚ್ಚು ಎಂದು ಅಪ್ಪ ಬಿಟ್ಟೇ ಬಿಟ್ಟರು. ಕೊನೆಗೆ ರೀಟಾ ಹತ್ರ ಇದ್ದ ಸೈಕಲ್ ತರಹದ್ದೇ ಅಲ್ಲೊಂದು ಇತ್ತು. ಅದರ ಮೇಲೂ ಆಕೆಗೆ ಆಸೆಯಾಯಿತು. ಅದಕ್ಕೂ ದೊಡ್ಡ ತಲೆಗಳು ಬೇಡವೆಂದು ಅಲ್ಲಾಡಿಸಿದವು. ಈ ತರಹ ಅಪ್ಪ ಅಮ್ಮನ ಚೌಕಾಸಿ ನೋಡಿ ಇವತ್ತು ತನಗೆ ಸೈಕಲ್ ಸಿಗುವುದೇ ಇಲ್ಲ ಎಂದು ಪಿಂಕಿ ಮೂತಿ ಉದ್ದ ಮಾಡಿ ನಿಂತಳು.
ಆಗಷ್ಟೇ ಅಂಗಡಿಯ ಅಂಕಲ್ ತನ್ನ ಹುಡುಗರಿಗೆ ಕೂಗಿ ಹೇಳಿ ಮೇಲಿನಿಂದ ಗುಲಾಬಿ ಬಣ್ಣದ ಸೈಕಲ್ ಒಂದನ್ನು ಕೆಳಗೆ ಇಳಿಸಿದ. ಅದನ್ನು ನೋಡುತ್ತಲೇ ಪಿಂಕಿಯ ಮುಖ ಇಷ್ಟು ದೊಡ್ಡದಾಗಿ ಅರಳಿತು. ಓಡಿ ಹೋಗಿ ಅದರ ಸೀಟನ್ನು ಅಪ್ಪಿಕೊಂಡಳು. ಬೆಲ್ ನ್ನು ಎರಡೆರಡು ಸಲ ಬಾರಿಸಿದಳು. ಕೊನೆಯಲ್ಲಿ ಸ್ವಲ್ಪ ಸಮಯದ ಚೌಕಾಶಿಯ ನಂತರ ಅವಳ ಅಪ್ಪ-ಅಮ್ಮನಿಗೂ ಅದು ಓಕೆ ಯಾಯಿತು. ಪಿಂಕಿಗಂತೂ ಆ ಸೈಕಲ್ ಮೇಲೆ ಮನಸ್ಸು ಬಿದ್ದು ಬಿಟ್ಟಿತ್ತು, ಏಷ್ಟು ಚೆನ್ನಾಗಿತ್ತು ಅದು! ‘ಮೊನಾಲಿಸಾ’!! ಏನು ಹೆಸರು, ಏನು ಬಣ್ಣ. ಗುಲಾ…ಬಿ. ಸಕತ್ ಖುಷಿ ಆಗಿದ್ದಳು ಪಿಂಕಿ.
ಮಾರನೇ ದಿನ ಸ್ಕೂಲಿಗೆ ಹೋದವಳೇ ಎಲ್ಲರತ್ತಿರ ಡಿಕ್ಲೇರ್ ಮಾಡಿಬಿಟ್ಟಿದ್ದಳು. ಈಗಾಗಲೇ ಸೈಕಲ್ ಇದ್ದ ಪಮ್ಮಿ ಹತ್ರ ಅಂತೂ ಇನ್ನೂ ಮನೆಗೆ ಬಂದಿರದ ಸೈಕಲ್ ಬಗ್ಗೆ ಹೇಳಿದ್ದೆ ಹೇಳಿದ್ದು. ಈಗಾಗಲೇ ಆ ಪಿಂಕ್ ಸೈಕಲ್ ಮನೆಗೆ ಬಂದು ಬಿಟ್ಟಿದೆಯೆಂದು, ಅದಕ್ಕಾಗಿ ತಾನು ಮತ್ತು ತನ್ನ ತಂಗಿ ಜಗಳ ಆಡಿದ್ದು, ಆಮೇಲೆ ತಾನೇ ಗೆದ್ದು ಹಳದಿ ಹೂಗಳ ಮನೆ ಮುಂದಿನ ಗಾರ್ಡನ್ ನಲ್ಲಿ ಪಾತರಗಿತ್ತಿ ಬೆನ್ನೆಟ್ಟಿ ಸೈಕಲ್ ಹೊಡೆದದ್ದು, ಅದಕ್ಕೆ ಅಂತ ಮೊನ್ನೆ ಜಾತ್ರೆಯಲ್ಲಿ ತೆಗೆದುಕೊಂಡ ಆ ಚೆಂದದ ಗೆಜ್ಜೆಯ ಸರದ ಕೀ ಚೈನ್ ಹಾಕಿದ್ದು,….. ಹೀಗೆ ಏನೇನೋ ಕತೆ ಕಟ್ಟಿ ಹೇಳಿದ್ದು ಆಯಿತು. ಅದಕ್ಕೆ ಅವರೆಲ್ಲಾ ಅಷ್ಟು ಸುಂದರ ಇರುವಂತಹ ಸೈಕಲ್ ಯಾವಾಗ ಬರುತ್ತೆ? ತಮಗೂ ಒಂದೆರಡು ರೌಂಡ್ ಹೊಡೆಯೋಕೆ ಕೊಡ್ತಿಯಾ? ಅಂತೆಲ್ಲ ಕೇಳಿದ್ದು ಆಯಿತು. ಅದಕ್ಕೆಲ್ಲ ತನ್ನಷ್ಟಕ್ಕೆ ಬೀಗಿ, ಓಹೋ, ನನ್ನ ಸೈಕಲ್ಲು ತಾನೇ, ಕೊಡ್ತೀನಿ ಬಿಡ್ರೆ ಅಂತ ಡೈಲಾಗ್ ಹೇಳಿದ್ದು ಆಯಿತು.
ಅವತ್ತು ಸಂಜೆ ಮನೆಗೆ ಹೋಗಿ ಬಿಳಿಶೂಸ್ ತೆಗೆದಿಡುತ್ತಿರುವ ಹಾಗೇ ಒಳಗಡೆಯ ಗಲಾಟೆ ಕೇಳಿಸಿತು. ಎಂದಿನಂತೆ ಅಪ್ಪ-ಅಮ್ಮನ ತಗಾದೆ ಜೋರಾಗೇ ನಡೆಯುತ್ತಾ ಇತ್ತು. ಹೀಗಾದಾಗಲೆಲ್ಲ ಪಿಂಕಿಗೆ ಅವರುಗಳ ವರ್ತನೆ ನೋಡಿ, ಕಷ್ಟ ಆಗಿ, ಏನು ಮಾಡಬೇಕು ಅಂತ ತೋಚದೆ ಕಣ್ಣ್ ತುಂಬಿ ನಿಂತು ಬಿಡುವಳು. ಇವರೇಕೆ ಹೀಗಾಡುತ್ತಾರೆ ಅನ್ನೋದು ಅವಳೆಗೆಂದೂ ಅರ್ಥ ಆಗಿದ್ದಿಲ್ಲ. ಇವತ್ತು ಸಂಜೆ ತಿಂಡಿ ಸಿಗೋ ತರಹ ಇಲ್ಲ ಅನ್ನೋದೊಂದು ಮಾತ್ರ ಗೊತ್ತಾಗಿ, ಸ್ಕೂಲ್ ಬ್ಯಾಗ್ ನಿಧಾನವಾಗಿ ಕಳಚಿ ಇಟ್ಟಳು. ಆಮೇಲೆ ಹಾಲಿನಲ್ಲೇ ಇದ್ದ ತನ್ನ ಕಪಾಟಿನಿಂದ, ಈಗಾಗಲೇ ಓದಿದ್ದ-ಓದಲಿದ್ದ ಚಂದಮಾಮಾಗಳನ್ನೆಲ್ಲ ಎತ್ತಿಕೊಂಡು ನೆಲದ ಮೇಲೆ ಗುಡ್ಡೆ ಹಾಕಿ ಅದರಲ್ಲಿನ ರಾಜಕುಮಾರ ಮತ್ತು ರಾಜಕುಮಾರಿ ಕತೆಗಳಲ್ಲಿ ಕರಗಿ ಹೋದಳು.
ರಾಜಕುಮಾರನು ರಾಜಕುಮಾರಿಯನ್ನು ಕುದುರೆಯಲ್ಲಿ ಕೂರಿಸಿಕೊಂಡು ನದಿಯತ್ತ ಓಡುತ್ತಾ ಇದ್ದ, ಹಿಂದೆ ಶತ್ರುಗಳು ಬೆನ್ನಟ್ಟಿ ಬರುತ್ತಿದ್ದರು. ಇನ್ನೇನು ನದಿ ದಾಟಬೇಕು ಅನ್ನುವಷ್ಟರಲ್ಲಿ, ಅಮ್ಮ ಬಂದು ಆಕೆಯ ತಲೆ ಸವರಿ ಕೊಂಡು ಅತ್ತುಬಿಟ್ಟಳು. ಚಂದಮಾಮಾದಿಂದ ಇನ್ನೂ ಹೊರಗೆ ಬರದಿದ್ದ ಅವಳಿಗಿಷ್ಟೆ ಗೊತ್ತಾಗಿದ್ದು, ತನ್ನ ಪಿಂಕ್ ಸೈಕಲ್ಲು ಬರಲ್ಲ ಅಂತ. ನಿನ್ನೆ ಅವಳ ಅಪ್ಪ ಸೈಕಲ್ಲಿಗೆ ಎಂದು ಸೇರಿಸಿ ಇಟ್ಟಿದ್ದ ಹಣವನ್ನು ಅಮ್ಮನ ಕೈಯಿಂದ ಅಂಗಡಿಗೆ ಕೊಡುತ್ತೇನೆ ಎಂದು ತೆಗೆದುಕೊಂಡು ಹೋದವನು, ರಾತ್ರಿ ಇಡೀ ಇಸ್ಪೀಡಾಡಿ ಕಳೆದು ಬಂದಿದ್ದ. ಅದಕ್ಕೆ ಅವರಿಬ್ಬರೂ ಒಳಗೆ ಕಚ್ಚಾಡುತ್ತಿದ್ದದ್ದು. ಈಗ ಅಪ್ಪ, ಮೂಲೆಯಲ್ಲಿ ತಿಂಡಿ ತಿನ್ನುತ್ತಾ ಚಾ ಕುಡಿಯುತ್ತಾ ಕುಳಿತಿದ್ದ. ಈಕೆಯ ಜೋಲು ಮುಖ ನೋಡಿದವನೇ ಉಳಿದ ಚಾ ತಂದಿಟ್ಟು ಚೆನ್ನಾಗಿದೆ ಕುಡಿ ಎಂದು ಹೇಳಿ ಮತ್ತೆ ಹೊರ ಹೊರಟು ಹೋದ. ಪಿಂಕಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಚಾ ಕುಡಿದು, ಮುಂದೆ ಏನಾಯ್ತು ಎಂದು ಪರಿತಪಿಸುತ್ತಾ , ಮತ್ತೆ ವಿಕ್ರಮ-ಬೇತಾಲದ ಕತೆಯಲ್ಲಿ ಮುಳುಗಿ ಹೋದಳು.
ಇದಾದ ನಂತರದಲ್ಲಿ, ವಿಷಯ ಗೊತ್ತಾದ ಪಕ್ಕದ ಮನೆಯ ಆಂಟಿ , ಸ್ಕೂಲಿಗೆ ಹೋಗುವ ಮುನ್ನ ‘ಪುಟ್ಟಿ, ನಿನ್ನ ಸೈಕಲ್ ಬಂತಾ?’ ಎಂದು ಅಣಗಿಸಿ ಕೇಳತೊಡಗಿದರು. ಸ್ಕೂಲಿನಲ್ಲಿ ಎಲ್ಲರೂ ಪಿಂಕಿಯ ಪಿಂಕ್ ಸೈಕಲ್ ಹೀಗಿದೆ, ಹಾಗಿದೆ ಎಂದು ತಮ್ಮದೇ ಕತೆ ಹೇಳಿ ಜೋರಾಗಿ ನಗತೊಡಗಿದರು. ಪಿಂಕಿ ಮಾತ್ರ ಏನೂ ಹೇಳುತ್ತಿರಲಿಲ್ಲ. ಸ್ಕರ್ಟೀನ ಕಿಸೆಯಲ್ಲಿ ಅಡಗಿಸಿಟ್ಟ ಕೀಚೈನನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದಳು. ಯಾರು ಇಲ್ಲದಾಗ, ಆ ಕೀ ಚೈನನ್ನು ತೆಗೆದು ಜಲ್ಲೆಣಿಸುತ್ತಾ , ಕಿಟಕಿಯ ಹೊರಗೆ ನೋಡುತ್ತಾ ಕುಳಿತು ಬಿಡುತ್ತಿದ್ದಳು. ಅಲ್ಲಿಂದ ದೂರದ ಬೆಟ್ಟಗಳ ಮೇಲೆ ಹರಿಯುತ್ತಿರುವ ಮೋಡಗಳ ಹತ್ತಿರ ಹಾರಿ ಹೋಗಿ, ಅವುಗಳ ಹಿಂದಿನ ಲೋಕವನ್ನು ಪ್ರವೇಶಿಸಿ ಇವೆಲ್ಲದರಿಂದ ಮರೆಯಾಗಿ ಬಿಡುತ್ತಿದ್ದಳು.
ಈಗ ಪಿಂಕಿ ದೊಡ್ಡವಳಾಗಿದ್ದಾಳೆ. ಆ ಕೀ ಚೈನ್ ಇನ್ನೂ ಅವಳ ಬಟ್ಟೆ ಗೂಡಿನಲ್ಲಿ ಬೆಚ್ಚಗೆ ಮಲಗಿಕೊಂಡಿದೆ. ಇವತ್ತು ಹೋಗಿ ಅದನ್ನು ಹೊರ ತೆಗೆದು ಕೈಯಲ್ಲಿ ಹಿಡಿದು ಮತ್ತೆ ಜಲ್ಲೆಣಿಸುತ್ತಾಳೆ. ಅಲ್ಲಿಂದ ಮನೆಯ ಹೊರಗೆ ಕಣ್ಣನ್ನು ಪಿಳಿ ಪಿಳಿಸುತ್ತ ಓಡುತ್ತಾಳೆ. ಅಲ್ಲಿ ನಿಂತ ಪುಟ್ಟ ಸೈಕಲ್ಲಿಗೆ ಖುಷಿಯಿಂದ ಸಿಕ್ಕಿಸುತ್ತಾಳೆ. ಆಮೇಲೆ ಮಗಳ ಜೊತೆ ಸೇರಿ ಅದರ ಪೇಪರ್ ರಾಪರ್ ಗಳನ್ನು, ಪ್ಲಾಸ್ಟಿಕ ಕವರ್ ಗಳನ್ನು ಆಸ್ತೆಯಿಂದ ಬಿಡಿಸುತ್ತಾಳೆ. ಬಿಡಿಸಿಟ್ಟ ಆ ಸೈಕಲ್ಲು ಮತ್ತು ಅದರ ಮೇಲಿನ ‘ಮೊನಾಲಿಸಾ’ ಸ್ಟಿಕರ್ರು ಬಿಸಿಲಿಗೆ ಫಳ್ ಎಂದು ಹೊಳೆಯುತ್ತದೆ. ಮಗಳು ಒಂದು ರೌಂಡ್ ಹೊಡೆದು ಬಂದ ಮೇಲೆ ಆಕೆ ಬೇಡ ಬೇಡ ಎಂದರೂ ಕೇಳದೆ, ಹೊದ್ದಿದ್ದ ದುಪ್ಪಟ್ಟಾ ತೆಗೆದು ಬಿಸಾಕಿ, ನಮ್ಮ ಪಿಂಕಿ ಅವಳ ಪಿಂಕ್ ಸೈಕಲ್ ಹತ್ತಿ , ಹಳದಿ ಹೂಗಳ ಆ ಗಾರ್ಡನಿನಲ್ಲಿ ಪಾತರಗಿತ್ತಿ ಬೆನ್ನೆಟ್ಟಿ ಹಾರ ತೊಡಗುತ್ತಾಳೆ.