ಗಾಂಧಿ ಅಜ್ಜನ ಬಗ್ಗೆ ಬರೆಯುವುದು ಇಷ್ಟು ಕಷ್ಟ ಎಂಬುದರ ಅರಿವೆ ಇರಲಿಲ್ಲ. ನನ್ನ ಪಾಪದ ಅಜ್ಜ. ಇಷ್ಟು ದಿನ ತನ್ನ ಹಿಂದೆ ಇದ್ದು ಪ್ರಚಾರ ಗಿಟ್ಟಿಸಿ ಈಗ ಅಧಿಕಾರಕ್ಕಾಗಿ ಮಾಡುತ್ತಿರುವ ಹಪಾಹಪಿಯನ್ನು ಹೇಗೆ ಸಹಿಸಿದನೊ. ಇಡೀ ದೇಶದ ಜನತೆ ತನ್ನನ್ನು ನಂಬಿದೆ. ನಾಳೆ ಹೆಚ್ಚು ಕಡಿಮೆಯಾದಲ್ಲಿ ದೂಷಿಸುವುದು ತನ್ನನ್ನೆ, ತನ್ನ ಸಿದ್ದಾಂತಗಳನ್ನೇ. ಆದರೆ ತನ್ನ ತತ್ವಗಳನ್ನೆಲ್ಲ ಗಾಳಿಗೆ ತೂರಿ ಆಡಳಿತ ಮಾಡಲು ಬಯಸಿದ ಮೇಲಿನ ಜನರನ್ನು ಹೇಗೆ ಕ್ಷಮಿಸಿದನೊ.
” ಕೇವಲ ಹಿಂದಿನ ದಿನ ಒಂದೇ ರಾಷ್ಟ್ರವಾಗಿದ್ದಂತಹ ಭಾರತವನ್ನು ‘ಎರಡು ರಾಷ್ಟ್ರ‘ಗಳನ್ನಾಗಿ ವಿಭಜಿಸುವ ಪೂರ್ಣ ಸಂಭ್ರಮ ಲಂಡ್ನನ್ನಿನಲ್ಲಿ ನೆರವೇರುವ ವಿಷಯವಾಗಿ ಇಂದು ಪತ್ರಿಕೆಗಳು ಪ್ರಸ್ತಾಪಿಸುತ್ತಿವೆ. ದುರಂತದಲ್ಲಿ ಹಿಗ್ಗುವಂಥದ್ದೇನಿದೆ ? ನಾವು ಬೇರೆ ಬೇರೆಯಾದರೂ ಒಂದೇ ಕುಟುಂಬಕ್ಕೆ ಸೇರಿದ ಸ್ನೇಹಿತರಂತೆ, ಸೋದರರಂತೆ ಹಾಗೆ ಮಾಡುವುದೆಂಬ ನಂಬಿಕೆಗೆ ಅಂಟಿಕೊಂಡಿದ್ದೆವು. ಈಗ, ಪತ್ರಿಕಾ ವರದಿ ನಿಜವಾಗಿದ್ದಾರೆ, ನಮ್ಮನ್ನು ‘ದ್ವಿರಾಷ್ಟ್ರ‘ವನ್ನಾಗಿ, ಅದೂ ವಾದ್ಯ ಘೋಷ ಸಮೇತ, ಆಂಗ್ಲರು ಮಾಡುವರು. ಇದು ನಿರ್ಗಮನದ ಕೊಡುಗೆಯಾಗಬೇಕೆ? ಹಾಗಾಗದಿರಲೆಂದು ನನ್ನ ಹಾರೈಕೆ.” – ಗಾಂಧಿ ಅಜ್ಜ
“…..ಹಾಗಾದರೆ ಇಲ್ಲಿ ನಡೆಯುತ್ತಿರುವ ವರ್ಣರಂಜಿತ ಮಾತುಗಳಿಗೆ ಬೆಲೆಯೇನು? ನೀವು ಅದಕ್ಕೆ ಸಮ್ಮತಿಯನ್ನು ಕೊಡದಿದ್ದರೆ ಈ ಪಾಪವನ್ನು ತಡೆಗಟ್ಟಬಹುದು. ಮಸೂದೆಯ ಕಾನೂನಿಗೆ ಅನುಮೋದನೆ ದೊರಕಿದ ಮೇಲೆ ಯಾರೂ ನಿಮ್ಮ ಮಾತಿಗೆ ಕೆವಿಗೊಡುವುದಿಲ್ಲ” – ಗಾಂಧಿ ಅಜ್ಜ
ಪುಸ್ತಕದ ಒಂದೊಂದು ಪುಟದಲ್ಲಿರುವ ಅದೆಷ್ಟೋ ಘಟನೆಗಳು, 61 ವರ್ಷಗಳ ಹಿಂದೆ ನಡೆದು ಹೋದ ರಾಜಕೀಯ ಸುಳಿಗಳು, ಗಾಂಧಿ–ಕಾಂಗ್ರೇಸ್ಸು–ಆಂಗ್ಲರು–ಜಿನ್ನಾ ಪಂಗಡ. ಅಬ್ಬಾಬ್ಬಾ! ಇಷ್ಟೆಲ್ಲಾ ನಡೆದಿತ್ತೆ ? ಎಂದೆನಿಸಿಬಿಡ್ತು. ಈ ಪುಸ್ತಕದಲ್ಲಿ ದಾಖಲಾಗದ ಇನ್ನೂ ಅದೇಷ್ಟೋ ಘಟನೆಗಳು ನಡೆದಿರಬಹುದು!
ನಾನು ಮಾತ್ರ ನಾಳೆ ನಮಗೆ ‘ಸ್ವಾತಂತ್ರ ಸಿಕ್ಕ ದಿನ‘ ಎಂದು ಸರಳವಾಗಿ ವ್ಯಾಖ್ಯಾನಿಸಿಬಿಡುತ್ತೇನೆ.
” ಪವಿತ್ರವೆಂದು ಆಹ್ಲಾದಪಟ್ಟಿದ್ದ ಹೋರಾಟ. ಇದರಲ್ಲಿ ಅಂದರೆ ಸಂಭವಿಸಲಿರುವ ಅಪವಿತ್ರ ಅಂತ್ಯದಲ್ಲಿ ಪರ್ಯವಸನವಾಗಬೇಕೆ? ಅತೀವ ವೇದನೆಯಿಂದ ವೇದಗಳ ಋಷಿಗಳ ವಾಣಿಯ ಜೊತೆಗೆ ನನ್ನ ವಾಣಿಯನ್ನೂ ಸೇರಿಸಿ, ‘ಹೇ ಭಗವಾನ್, ಕತ್ತಲನ್ನು ಅಳಿಸು, ಬೆಳಕನ್ನು ಹರಿಸು‘, ಎಂದು ಕೂಗುತ್ತೇನೆ“. – ಗಾಂಧಿ ಅಜ್ಜ
“ನನ್ನ ದೃಷ್ಟಿಯಲ್ಲಿ ಅಗಸ್ಟ್ 15ಕ್ಕೆ ಯಾವ ಬೆಲೆಯೂ ಇಲ್ಲ. ಇಲ್ಲಿ ಯಾರ ಮುಖದ ಮೇಲೂ ಉತ್ಸಾಹ ಕಂಡುಬರುತ್ತಿಲ್ಲ.” – ಗಾಂಧಿ ಅಜ್ಜ
ನಾನು ಇಂದು ದೇಶ ಇಬ್ಬಾಗ ಆದ ಕರಾಳ ದಿನವೂ ಹೌದು ಎಂದು ಯಾವಾಗಲೋ ಮರೆತಿದ್ದೇನೆ. ‘ಉಗ್ರರು‘ ಎಂಬ ಹೊಸಪದ ಹುಟ್ಟಿದ ಕಾರಣವೂ( ನನ್ನ ಮಟ್ಟಿಗೆ) ಮರೆತು ಹೋಗಿದೆ. ನಾಳೆ ಪಾಕ್ ಮತ್ತು ಚೀನಾದ ಅತಿಕ್ರಮಣ(?)ದಿಂದಾದ ಮುಂಡವಿಲ್ಲದ ಭಾರತ ಮಾತೆಗೆ ಜೈಕಾರ ಕೂಗುತ್ತೇನೆ.
ಈ ದಿನದ ಕಾರಣ ಪರಸ್ಪರ ಹಗೆಯಲ್ಲಿ ಬೆಂದು ನೊಂದ ಅದೆಷ್ಟೋ ಅಮಾಯಕರಿಗೆ ಹಾಗೂ ಮುಂದೂ ಸಾಯಾಲಿರುವ ಎಲ್ಲರಿಗೂ ಇದೋ ನನ್ನ ರಕ್ತ ಕಣ್ಣೀರು.