ಇವನು ನಂಗೆ ಯಾವತ್ತೂ ಹೇಳ್ತಾ ಇರೋದು, ಇಷ್ಟು ಟಾಲೆಂಟ್ ಇದೆ, ಸುಮ್ನೆ ಕೂತು ವೇಸ್ಟ್ ಮಾಡಿಕೊಳ್ತೀಯ, ಏನಾದ್ರೂ ಮಾಡ ಬಾರದ ಅಂತ. ಆದರೆ ನನ್ನ ತಲೆಯಲ್ಲಿ ಹುಟ್ಟುವ ಏಷ್ಟೋ ಯೋಜನೆಗಳಿಗೆ ಜೀವ ಕೊಡೋದು ನಂಗೆ ಕಷ್ಟ. ನಂಗೆ ಕಮಿಟ್ ಮಾಡೋಕೆ ಕಷ್ಟ. ದಿನಾ ಒಂದೇ ತರಹ, ಒಂದೇ ಕೆಲಸ ಮಾಡೋಕೆ ಕಷ್ಟ. ಹೊಸ ಹೊಸದು ಮಾಡಬೇಕು ಅನ್ನಿಸ್ತಾ ಇರುತ್ತೆ. ಸ್ನೇಹಿತರು ಕಾಲ್ ಮಾಡಿದಾಗ ಹೇಳೋದು ಅಷ್ಟೇ, ಏನಕ್ಕೆ ಟ್ಯಾಲೆಂಟ್ ವೇಸ್ಟ್ ಮಾಡ್ಕೊತ್ತಿಯ, ಉಪಯೋಗಿಸು ಅಂತ.
ಹೋಗಲಿ, ಏನಾದರೂ ಮಾಡ್ತೀನಿ ಅಂತ ಅಂದರೆ ಮೊದಲ ಪ್ರಶ್ನೆ, ದುಡ್ಡು ಬರುತ್ತಾ? ಅಂತ. ನೀನು ದುಡ್ಡು ಬರೋದು ಮಾಡಲ್ಲ, ಕೆಲಸಕ್ಕೆ ಬಾರದ್ದು ಮಾಡ್ತಾ ಇರುತ್ತಿಯ ಅಂತ. ಮೊದಲು ಬ್ಲಾಗ್ ಬರೀತಿನಿ ಅಂತ ಹೇಳಿದ್ರೆ, ಅದರಲ್ಲಿ ದುಡ್ಡು ಬರುತ್ತಾ ಅಂತ. ಓನಲೈನ್ ಶಾಪ್ ಮಾಡ್ತೀನಿ ಅಂದರೆ, ಏಷ್ಟು ದುಡಿಯೋ ಪ್ಲಾನ್ ಇದೆ ಅಂತ. ಎಲ್ಲದನ್ನೂ ದುಡ್ಡಿನ ಮೇಲೆ ಅಳೆಯೋಕೆ ಆಗುತ್ತಾ? ನಾನು ಮೊದಲು ಕೆಲಸ ಮಾಡೋ ಕಂಪನಿಯಲ್ಲಿ ಸಹ ಇವರು ಇಷ್ಟೇ ದುಡ್ಡು ಕೊಡೋದು, ಅದಕ್ಕೆ ಇಷ್ಟೇ ಕೆಲಸ ಮಾಡ್ತೀನಿ ಅಂತ ಯೋಚಿಸಿದ್ದೇ ಇಲ್ಲ. ಹಾಗಂತ ಜಾಸ್ತಿ ಏನು ದುಡಿತ ಇರಲಿಲ್ಲ. ಜಾಸ್ತಿ ಸಂಬಳ ತೆಗೆದು ಕೊಳ್ಳುವವರು, ಜಾಸ್ತಿ ಕೆಲಸ ಅಂತ ರಾತ್ರಿ ಹೆಚ್ಚು ಹೊತ್ತು ಆಫೀಸಿನಲ್ಲಿ ನಿಲ್ಲುವಾಗ ಗೊಳಾಡುವುದನ್ನು ನೋಡಿದಾಗ ಮಜಾ ಅನ್ನಿಸ್ತಿತ್ತು. ಆದರೆ ಅದೆಲ್ಲ ಪ್ರೊಫೆಷನಲ್ ಇಸಂ ಅಂತೆ! ದುಡ್ಡಿಲ್ಲದೆಯೂ ಕೆಲಸ ಮಾಡಿದ್ರೆ, ಅದಕ್ಕೆ ಒಂದು ಘನತೆ ಇಲ್ಲ ಅಂತ ಹೇಳ್ತಾರೆ. ಆದರೆ ನಾನು ಯಾವಾಗಲೂ ಈ ಫನತೆ ಬಗ್ಗೆ ತಲೆಯೇ ಕೆಡಿಸಿ ಕೊಂಡಿಲ್ಲ. ಎಲ್ಲರೂ ಎಲ್ಲರ ಬಗ್ಗೆಯೂ ಹಿಂದೆ ಬಿಟ್ಟು ಆಡಿ ಕೊಳ್ಳುವಾಗ, ಪರಸ್ಪರ ಅಸೂಯೆ ಹೋಗೆ ಆಡ್ತಾ ಇರುವಾಗ ಈ ಘನತೆ ತೆಗೆದು ಕೊಂಡು ಏನು ಮಾಡುವುದು. ಸಾದಾ ಸೀದಾ, ಎಲ್ಲರ ಜೊತೆ ಸೇರಿ, ನಮ್ಮ ಕೆಲಸ ಮಾಡುತ್ತಾ, ಆದಷ್ಟು ಉಳಿದವರಿಗೆ ಸಹಾಯ ಮಾಡುತ್ತಾ ನೆಮ್ಮದಿಯಾಗಿ ಇರುವುದು ಒಳ್ಳೆಯದು. ಎಲ್ಲದನ್ನೂ ಲಾಭ ಮತ್ತು ನಷ್ಟ ಇದರಲ್ಲಿ ಅಳೆಯುವ ಅಗತ್ಯವೇ ಇಲ್ಲ.
ಹಾಗಂತ ದುಡ್ಡು ಅವಶ್ಯವೇ. ಜಾಸ್ತಿ ಜಾಸ್ತಿ ಮಾಡಬೇಕು ಅನ್ನುವ ಹಪಾಹಪಿ ಇಲ್ಲ. ಇರೋದರಲ್ಲಿ ಖುಷಿ ಇದೆ. ಈಗ ಮೊನ್ನೆ ಲೋಗೋ ಉಚಿತವಾಗಿ ಮಾಡಿ ಕೊಡ್ತೇನೆ ಅಂದಾಗ ಏನಕ್ಕೆ ದುಡ್ಡು ತೆಗೆದುಕೋ ಅಂತ ಅಂದರು. ನಂಗೆ ದುಡ್ಡು ಬೇಡ. ನಾನು ನನಗೆ ಏನು ಬರುತ್ತೋ ಅದನ್ನು ಮಾಡಿಕೊಟ್ಟೆ. ಹೊಸದು ಏನನ್ನೋ ಕಲಿಯುವ ಅವಕಾಶ ಆಯಿತು. ಹತ್ತು ಹೊಸ ವ್ಯಕ್ತಿಗಳ ಪರಿಚಯ ಆಯಿತು. ನನಗೆ ಯಾರೋ ಯಾವತ್ತೋ ಸಹಾಯ ಮಾಡಿರುತ್ತಾರೆ, ಇವತ್ತು ನಾನು ಬೇರೆ ಯಾರಿಗೂ ಸಹಾಯ ಮಾಡಿರುತ್ತೇನೆ. ಅಷ್ಟೇ. ಅದರ ಜೊತೆಗೆ ಅನೇಕ ಜನ ದುಡ್ಡು ಕೊಟ್ಟು ಲೋಗೋ ಮಾಡಿ ಕೊಡಿ ಅಂತ ಬಂದರು. ಒಂದು ಅವಕಾಶ ಸೃಷ್ಟಿ ಆಯಿತು. ನಾನು ಒಬ್ಬರಿಗೆ ಬಿಟ್ಟು ಉಳಿದವರಿಗೆ ಮಾಡಿ ಕೊಡಲಿಲ್ಲ. ಕೇಳಿದ ಉಳಿದವರನ್ನು ಫಾಲೋ ಅಪ್ ಸಹ ಮಾಡಲಿಲ್ಲ. ಒಟ್ಟಿನಲ್ಲಿ ಆ ಅವಕಾಶ ಉಪಯೋಗಿಸಲು ಮನಸ್ಸು ಬರಲಿಲ್ಲ, ಅದು ಬೇರೆ ವಿಷಯ. ಅದಕ್ಕೆ ಇವನು ದುಡ್ಡು ಬರೋ ಕೆಲಸ ನೀನು ಮಾಡಲ್ಲ ಅನ್ನೋದು.
ಇದೆಲ್ಲ ಏನಕ್ಕೆ ಪೀಠಿಕೆ ಹಾಕ್ತಾ ಇರೋದು ಅಂತ ಅಂದರೆ ದುಡ್ಡು ಇಲ್ಲದೇ ಫೇಸ್ ಬುಕ್ ಮಾರುಕಟ್ಟೆ ಮಾಡೋಕೆ ಆಗುತ್ತಾ ಅಂತ. ಮೊನ್ನೆ ಸ್ಕ್ರೀನ್ ಶಾಟ್ ಫೋಲ್ಡರ್ ನಲ್ಲಿ ನೋಡ್ತಾ , ಹೋದ ವರುಷ ಕನ್ನಡ ಮಹಿಳಾ ಮಾರುಕಟ್ಟೆ ಗ್ರೂಪ್ ನಲ್ಲಿ ನಾನು ಮಾಡಿಕೊಂಡ ಗಲಾಟೆ ಕಾಣ್ತು. ಆದರೆ ಅದರಲ್ಲಿ ನಾನು ಹೇಳಿದ ಹಾಗೆ ಇವತ್ತು ಆಗಿದ್ದು ಬೇರೆ ವಿಷಯ. ಮೆಂಬರ್ ಶಿಪ್ ಸಹ ಬಂತು, ಪ್ರದರ್ಶನ ಮಾರಾಟ ವ್ಯವಸ್ಥೆ ಸಹ ಆಯಿತು. ಇಷ್ಟು ವರ್ಷ ಫೇಸ್ ಬುಕ್ಕಿನಲ್ಲಿ ಏಷ್ಟೆಲ್ಲ ಬೇರೆ ಬೇರೆ ಗ್ರೂಪ್ ಗಳಲ್ಲಿ ಇದ್ದು ನೋಡಿದ ಅನುಭವ ಅದು. ನಾವು ಆರ್ಕುಟ್ ಬಿಟ್ಟು ಸೀದಾ ಫೇಸ್ ಬುಕ್ ಗೆ ಬಂದವರು. ಹಳೆ ತಲೆಮಾರು. ಜಾಸ್ತಿ ಜಾಸ್ತಿ ಎಲ್ಲಾ ಆಟಗಳನ್ನು ನೋಡಿದ್ದಿವಿ.
ಈ ಆಟ ಹೇಗೆ ಇರುತ್ತೆ ಅಂದರೆ, ಒಂದು ಪೋಸ್ಟ್ ಗೆ ನೂರು ತೆಗೆದುಕೊಂಡರೆ, ದಿನ ಇಪ್ಪತ್ತು ಸೇಲ್ ಪೋಸ್ಟ್ ಬಂದರೆ ಎರಡು ಸಾವಿರ, ವಾರಕ್ಕೆ ಹತ್ತು ಸಾವಿರ. ಇಲ್ಲಾ, ನೂರು ಜನ ಮಾರಾಟಗಾರರನ್ನು ಒಟ್ಟು ಮಾಡಿ ತಲಾ ಐದನೂರು ತೆಗೆದು ಕೊಂಡರೆ ಐವತ್ತು ಸಾವಿರ. ಅದನ್ನು ವರ್ಷಕ್ಕೆ ನಾಲ್ಕು ಬಾರಿ ತೆಗೆದುಕೊಂಡರೆ ಅಥವಾ ಒಂದೇ ಬಾರಿ ಅವರವರ ಲೆಕ್ಕಾಚಾರ. ಇವತ್ತು ಸಮಯಕ್ಕೂ ದುಡ್ಡು ಇದೆ. ಇಲ್ಲಿಂದ ಅಲ್ಲಿ ಸೂಜಿ ಎತ್ತಿ ಇಡೋಕು ದುಡ್ಡು ಕೊಡಬೇಕು. ಇದು ಒಂದು ಸ್ಯಾಂಪಲ್ ಲೆಕ್ಕ. ಈಗ ಈ ದುಡ್ಡು ಮಾಡೋ ಆಟ ಬೇಡ.
ಹಾಗಾಗಿ ಒಂದು ಹೊಸ ಆಟ ಶುರು ಮಾಡಿಕೊಳ್ಳೋಣ ಅಂತ. ಫೇಸ್ ಬುಕ್ ‘ ಉಚಿತ ‘ ಆಗಿರುವಾಗ ಗ್ರೂಪ್ ಏನಕ್ಕೆ ‘ಉಚಿತ ‘ ಆಗಿರಬಾರದು? ಅನ್ನೋದು ನನ್ನ ಥಿಯರಿ. ನಾಳೆ ನಡೆಸೋಕೆ ಟೀಮ್ ಮಾಡಬೇಕಾ, ಅವರಿಗೆ ಸಂಬಳ ಅಂತ ದುಡ್ಡು ಬೇಕಾ, ಆಗ ಸೇಮ್ ಟು ಸೇಮ್ ‘ಫೇಸ್ ಬುಕ್ ಫಾರ್ಮುಲಾ’ ಉಪಯೋಗಿಸಬಹುದಲ್ಲ! ಹೇಗೆ ಅಂತ ಗೊತ್ತಾಗಬೇಕು ಅಂತಿದ್ರೆ ಗ್ರೂಪ್ ಸೇರಿ, ಹೇಳ್ತೀನಿ.
ಮಹಿಳೆಯರಿಗೆ ಮಾತ್ರ ಎಂಬ ಬೋರ್ಡ್ ಇರೋದರಿಂದ ಇದನ್ನು ಓದುತ್ತ ಇರುವವರು ಪುರುಷ ಮಣಿಗಳಾಗಿದ್ದರೆ, ನಿಮ್ಮ ಮಹಿಳಾ ಮಣಿಗಳಿಗೆ ಹೇಳಿ, ಸೇರಿಸಬಹುದು. ಸೇರುವುದಕ್ಕೆ ಮತ್ತೆ ಮಾರುವುದಕ್ಕೆ ದುಡ್ಡಿಲ್ಲ ಇದರಲ್ಲಿ. ಇವತ್ತಿಗೂ ಹಾಗೂ ಮುಂದೆ ಸಹ. ಇದು ನನ್ನ ಮಾತು. ಅದಕ್ಕೆ ನನ್ನ ಬ್ಲಾಗ್ನಲ್ಲಿ ಬರೆದುಕೊಳ್ತಾ ಇದ್ದೀನಿ.
ಇದೆಲ್ಲ ಹೋಗಲಿ, ನಿಮಗೆ ಏನು ಅನ್ನಿಸುತ್ತೆ ದುಡ್ಡು ತೆಗೆದುಕೊಳ್ಳದೇ ಕೆಲಸ ಮಾಡಿದ್ರೆ ಅದಕ್ಕೆ ಘನತೆ ಇರುವುದಿಲ್ಲವೇ? ಸೇವೆ ಅಂತ ಮಾಡಿದರೆ, ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಆಗಲಿ ಅಂತ ಮಾಡಿದರೆ? ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡಬೇಕು ಅಂತ ಮಾಡಿದರೆ? ಅದರಲ್ಲಿ ಸಹ ದುಡ್ಡೇ ದೊಡ್ಡಪ್ಪ ಆಗಬೇಕಾ? ಹೇಳಿ.
ನಿಮ್ಮದೊಂದು ಉತ್ತರ