Archive for ಸೆಪ್ಟೆಂಬರ್, 2015

ಆಶ್ರಮ

ಸೆಪ್ಟೆಂಬರ್ 5, 2015

ಅವಳು ಅವತ್ತು ಹೇಳಿದ್ದು ಕೇಳಿಸಿಕೊಳ್ಳೋಕೆ ಕೆಟ್ಟದಾಗಿ ಇದ್ದರೂ ಸತ್ಯವಾಗೇ ಇತ್ತು. “ನಿಂಗೇನು? ಆಫೀಸಿನಿಂದ ಏಷ್ಟು ತಡ ಆಗಿ ಹೊರಟರೂ ಆಗುತ್ತೆ. ಮನೆಲಿ ಹೇಳಕೆ ಕೇಳೊಕೆ ಯಾರು ಇಲ್ಲ, ಮಕ್ಕಳೂ ಇಲ್ಲ, ಕಾಯ್ತಾ ಕುತಿರೋ ಗಂಡನೂ ಇಲ್ಲ. ನಮಗೆ ಹಾಗಲ್ಲವಲ್ಲ. ಬರೋದು ಸ್ವಲ್ಪ ತಡ ಆದರೂ ಗಾಬರಿಯಿಂದ ಹತ್ತು ಸಲ ಕಾಲ್ ಮಾಡಿ ಕೇಳ್ತಾರೆ. ನಾವು ಹೋಗೋ ತನಕ ಊಟನೂ ಮಾಡಿರಲ್ಲ. ನಾಳೆಯಿಂದ ನಿನ್ನ ಸಲುವಾಗಿ ಕಾಯಕೆ ಆಗಲ್ಲ” ಅಂತ ಕ್ಯಾಬಿನಿಂದ ಗುಬುಕ್ಕನೇ ಇಳಿದು ಹೋಗಿದ್ದಳು. ಅವಳ ಮಾತಿಗೆ ಸಾಕ್ಷಿ ಎಂಬಂತೆ ಅವಳ ಗಂಡ ಗೇಟಿನ ಬಳಿಯೇ ಕಾಯುತ್ತಾ ಇದ್ದ.

ಹಾಗಂತ ಅವಳು ಹಾಗೆ ಹೇಳುವುದಕ್ಕೆ ನಾನು ಕಾರಣವಾಗಿದ್ದೆ. ಮೊದಲೊಂದು ರಾತ್ರಿ ಕ್ಯಾಬಿನಲ್ಲಿ ನಾನೇ ಅವಳಿಗೆ  ” ನೋಡು, ನಿನಗೆ ಮನೆಗೆ ಹೋದ ಕೂಡಲೇ ಏಷ್ಟು ಜನ ಇರ್ತಾರೆ, ಊಟ ರೆಡಿ ಇರುತ್ತೆ. ನಾನು ಹೋದ ಕೂಡಲೇ ಬೆಳಿಗ್ಗೆ ನಾನು ಬಿಟ್ಟು ಬಂದ ಹಾಗೆ ಮನೆ ನನ್ನ ಕಾಯುತ್ತಾ ಇರುತ್ತೆ. ಎಲ್ಲ ನನಗೆ ನಾನೇ ಮಾಡಿಕೊ ಬೇಕು ಅಂತ ಹೇಳಿ ನಗಾಡಿ ಕೊಂಡಿದ್ದೆ. ಅದನ್ನೇ ತಿರುಗಿಸಿ ನನ್ನ ತಲೆ ಮೇಲೆ ಕುಕ್ಕಿ ಇಳಿದು ಹೋಗಿದ್ದಳು.

ಈಗ ಕೆಲಸ ಬಿಟ್ಟು ಮನೆಯಲ್ಲಿ ಇರುತ್ತಿರಬೇಕಾದರೆ ನನಗೊಂದು ವಿಷಯ ಅರ್ಥವಾಗತೊಡಗಿದೆ. ನಿಜಕ್ಕೂ ಇದು ನಾನು ಬಯಸಿದ್ದ ಬದುಕೇ ಅಲ್ಲವೇ ಅಂತ. ಕಾಲೇಜಿನ ದಿನಗಳಲ್ಲಿ ಎಲ್ಲವನ್ನೂ ಬಿಟ್ಟು ದೂರ ಹಿಮಾಲಯಕ್ಕೆ ಹೋಗಿ ಒಂಟಿಯಾಗಿ ಇರಬೇಕು ಅನ್ನಿಸುತಿತ್ತು. ಓದುವುದು ಮುಗಿಸಿ ಕಳೆದ ಹನ್ನೆರಡು ವರ್ಷಗಳು ಹೇಗಿದ್ದವು ? ಹೆಚ್ಚಿನ ಸಮಯ ನನ್ನ ಜೊತೆ ನಾನೊಂದೆ ಇದ್ದೆ. ನನ್ನ ಸಲುವಾಗಿ ಬದುಕುತ್ತಾ, ನನ್ನ ಜೊತೆ ಬದುಕುತ್ತ. ಇದಕ್ಕಾಗಿ ಹಿಮಾಲಯಕ್ಕೆ ಸಂಸಾರ ಬಿಟ್ಟು ಹೋಗುವ ಅವಶ್ಯಕತೆಯೇ ನನಗೆ ಬಂದಿರಲಿಲ್ಲ. ಈಗ ಜೊತೆಗೆ ಇನ್ನೊಂದು ಜೀವ ಇದ್ದರೂ, ಅದು ಸಹ ತನ್ನಷ್ಟಕೆ ತಾನು ಇರುವುದರಿಂದ ಮಧ್ಯದ ಕೆಲವು ಗಂಟೆಗಳ ವಿನಿಮಯ ಬಿಟ್ಟರೇ ಇಡೀ ದಿನ ನನ್ನ ಜೊತೆ ನಾನೇ.

———————–

ಗರ್ಭಿಣಿಯರಿಗೆ ಏನೇನೋ ಆಸೆಗಳು ಅರ್ಥಾತ್ ಬಯಕೆಗಳು ಆಗುತ್ತವೆಯಂತೆ. ಈ ತಾಯ್ತನ ಅನ್ನುವುದು ಮಧುರ, ಅಮರ, ಅಚಲ….. ಇತ್ಯಾದಿ ಮಣ್ಣಾಂಗಟ್ಟಿ ನನಗೆ ಇಲ್ಲ. ನನಗೆ ಹಾಗೇನೂ ಅನ್ನಿಸಲಿಲ್ಲ. ಅದರ ಬಗ್ಗೆ ಇನ್ನೊಮ್ಮೆ. ನನಗೆ ಆಸೆ ಆಗಿದ್ದು ಒಂದೇ. ಆಶ್ರಮಕ್ಕೆ ಹೋಗಬೇಕು ಎಂದು. ಹೆರಿಗೆ ಆಶ್ರಮಗಳಿದ್ದರೇ ಏಷ್ಟು ಚೆನ್ನಾಗಿರುತಿತ್ತು ಅಂತ ಗೂಗಲಿಸಿದರೆ ಆ ತರಹ ಯಾವ ಅಶ್ರಮವೂ ಇರಲಿಲ್ಲ. ಹೋಗಲಿ ಫಾರ್ಮ್ ಹೌಸ್ ಆದರೂ ಇರಬೇಕಿತ್ತು ಅಂತ ಆಸೆ ಆದರೂ ಆ ತರಹ ಏನು ಸ್ವಂತಕ್ಕೆ ನಾವಿನ್ನೂ ಮಾಡಿಕೊಂಡಿಲ್ಲ. ಊರಲ್ಲಿ ಹಳ್ಳಿಮನೆಗಳು ಇರುವವರಿಗೆ ತೊಂದರೆಯಿಲ್ಲ. ನನಗೆ ಹಾಗಿಲ್ಲವಲ್ಲ. ಹಸಿರು, ನೀರು, ಗದ್ದೆ, ತೋಟ,…

ಹಾಗೆ ಏನಕೋ ಕವಡಿಕೆರೆ ನೆನಪಾಗಿತ್ತು. ಕಾಲೇಜಿನ ದಿನಗಳಲ್ಲಿ ಮಠವೊಂದು ನಡೆಸುತಿದ್ದ ಕನ್ಯಾ ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಒಂದತ್ತು ದಿನ ಪಾಲ್ಗೊಂಡಿದ್ದೆ. ಅನುಭವ ತುಂಬಾ ಸುಂದರವಾಗಿತ್ತು. ಕವಡಿಕೆರೆ ನಾನು ನೋಡಿದ ಮೊದಲ ದೊಡ್ಡ ಕೆರೆ. ಬೆಳಿಗ್ಗೆ ಎದ್ದು ಧ್ಯಾನ ಮಂಟಪದಲ್ಲಿ ಕೂತು ಆ ಮಂಜು ಮತ್ತು ಆ ನೀರನ್ನು ನೋಡುವುದೇ ಒಂದು ಚೆಂದದ ಅನುಭವ. ಅದಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆ ಒಂಟಿ ದೇವಸ್ಥಾನದಲ್ಲಿ ಮಕ್ಕಳೊಂದಿಗೆ ಬೆಳಿಗ್ಗೆ ಎದ್ದು ವ್ಯಾಯಾಮ. ನಂತರದ ಚಟುವಟಿಕೆಗಳು. ಹಾಡು, ಶ್ಲೋಕ, ಕತೆ, ನಗು. ಮಧ್ಯಾಹ್ನ, ಸಂಜೆ, ರಾತ್ರಿ ಮತ್ತೆ ಬೆಳಗು.

ಕೊನೆಗೆ ಇಲ್ಲಿ ನೂರು ಕಿಲೋಮೀಟರು ಹತ್ತಿರವಿರುವ ಗೋವರ್ಧನ ಆಶ್ರಮಕ್ಕೆ ಒಂದು ದಿನದ ಮಟ್ಟಿಗೆ ಹೋಗಿ ಬಂದೆ. ವಿದೇಶಿ ಇಸ್ಕಾನ್ ಗುರುವೊಬ್ಬನ ಕನಸು ನನಸಾಗುತ್ತಿರುವ ಸ್ಥಳವದು. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳು, ಸಾವಯವ ಕೃಷಿ, ನೂರಾರು ತಳಿಯ ಭತ್ತ ಗಳು, ಅನೇಕ ಬಗೆಯ ತರಕಾರಿ, ಹೂ ಗಿಡಗಳು, ಮಳೆ ನೀರ ಹೊಂಡ, ನೀರಿನ ಪುನರ್ ಬಳಕೆ, ಕೊಳಚೆ ನೀರಿನ ಸಂಸ್ಕರಣ ಉಧ್ಯಾನ ಘಟಕ,.. ಇತ್ಯಾದಿಗಳ ಜೊತೆಗೆಗೆ ಯೋಗ ಮತ್ತು ಆಧ್ಯಾತ್ಮ.

————————–

ಈಗ ಮನೆಯಲ್ಲಿ ಕೊನೆಗೂ ಟೊಮೆಟೊ ಬೀಜ ಬಿತ್ತಿ ಅದು ಚಿಕ್ಕ ಸಸ್ಯವಾಗಿ, ಅದಕ್ಕಾಗೇ ತಯಾರಾಗುತ್ತಿರುವ ತರಕಾರಿ ತಾಜ್ಯಗಳಿಂದ ಮಾಡುತ್ತಿರುವ ಗೊಬ್ಬರದ ಮಣ್ಣು. ಈ ಫಾರ್ಮು, ಹಳ್ಳಿ ಮನೆ, ಆಶ್ರಮ ಎಂದು ಕನವರಿಸುವುದರ ಬಿಟ್ಟು ಇದ್ದಲ್ಲಿಯೇ ಚಿಕ್ಕ ಬಾಲ್ಕನಿ ತರಕಾರಿ ತೋಟವಾದರೂ ಮಾಡುತ್ತೇನೆ ಎಂದು ಹೊರಟಿದ್ದೇನೆ. ಆಸೆಗಳಿಗೆಲ್ಲ ಇನ್ನೂ ಸಮಯವಾಗುತ್ತದೆ ಮತ್ತು ತುಂಬಾನೇ ದುಡ್ಡು ಬೇಕು. ಈಗ ಇರೋದರಲ್ಲಿ ನಾಲ್ಕು ಟೋಮೆಟೊ, ಎರಡು ಮೆಣಸು, ಬದನೆಕಾಯಿ ಗಿಡವನ್ನಾದರೂ ಮಾಡಿ ಬೆಳೆ ಬಂದ ಮೇಲೆ ಮುಂದಿನ ದೊಡ್ಡ ದೊಡ್ಡ ಮಾತು.

( To know more about Govardhan eco village, Click on  http://ecovillage.org.in/)