ನನಗೆ ಈ ವಿಷಯ ಗೊತ್ತಾಗಿದ್ದೇ ಫೇಸ್‌ಬುಕ್ ಸ್ಟೇಟಸ್ ನೋಡಿ. ಓದಿ ನಗಾಡಿಕೊಂಡೆ. ಏನೇನು ಐಡಿಯಾ ಮಾಡ್ತರಪಾ ಜನಾ ಅಂತ. ಮೊದಲು ಒಂದು ಸಲ ಪಿಂಕ್ ಚೆಡ್ಡಿ ಕ್ಯಾಂಪೇನ್ ಮಾಡಿದ್ರಲ್ವಾ, ಅದರ ನೆನಪಾಯಿತು ನೋಡಿ. ಆಮೇಲೆ ಗೂಗಲ್ ಮಾಡಿ ಇದು ಏನಪಾ ಅಂತ ತಿಳ್ಕೊಂಡೆ. ವಿಷಯ ಗೊತ್ತಾದ ಮೇಲೆ ಈ ರೀತಿ ಪ್ರೋಟೆಸ್ಟ್ ಮಾಡೋದು ತಪ್ಪು ಅಂತ ಬಿಲ್ಕುಲ್ ಅನ್ನಿಸಲಿಲ್ಲ. ವಿಕಿ ಮಾಹಿತಿ ಪ್ರಕಾರ ಪಬ್ಲಿಕ್‌ನಲ್ಲಿ ಕಿಸ್ ಕೊಡೊದು, ಅಪ್ಪಿ ಹಾಕಿಕೊಳ್ಳುದು ಕಾನೂನು ಪ್ರಕಾರ ‘ಅಪರಾಧ’ ಅಲ್ಲ ಅಂತ ಓದಿ ಸಮಾಧಾನ ಆಯಿತು. ನೀವು ಈ ಎರಡು ಕೊಂಡಿಗಳನ್ನು ಓದಿಕೊಬಹುದು. ಒಂದು, ಎರಡು. ಆದರೂ ಸಂಸ್ಕೃತಿ ರಕ್ಷಿಸೋ ನೆಪದಲ್ಲಿ ಮಾಡೋ ಹಲ್ಲೆಗಳ ಹಿಂದಿನ ಮನಸ್ಥಿತಿ ಬದಲಾಗಲ್ಲ.
ಕೇರಳದಲ್ಲಿ ಆದ ಘಟನೆಗಳನ್ನು ಓದಿ ನೋಡಿ, ಗರ್ಭಿಣಿ ಹೆಂಗಸಿನ ಮೇಲೆ ಆಕೆ ಒಂಟಿಯಾಗಿ ಕೂತಿದ್ದಕ್ಕೇ ಹಲ್ಲೆ ಮಾಡಿದ್ದು, ಗೆಳೆಯನ ಜೊತೆ ಬೈಕಿನಲ್ಲಿ ಹೋಗುತ್ತಿದ್ದಕ್ಕೆ ಕಪಾಳಮೋಕ್ಷ ನೀಡಿದ್ದು, ಹುಡುಗ, ಹುಡುಗಿ ಒಟ್ಟಿಗೆ ಪಯಣಿಸಿದ್ದಕ್ಕೆ ಪೊಲೀಸರು ಹಿಡಿದದ್ದು, ಕೆಫೇನಲ್ಲಿ ಇಬ್ಬರು ಮುತ್ತು ಕೊಟ್ಟು ಹಗ್ ಮಾಡಿದ್ರು ಅನ್ನೋದಕ್ಕೆ ಇಡೀ ಕೆಫೆಯನ್ನೇ ಒಡೆದು ಹಾಕೋದು,…… ಇದು ಯಾವುದು ಸಹ ಸರಿ ಅಲ್ಲ. ಅದಕ್ಕಾಗಿ ಇದನ್ನೆಲ್ಲಾ ವಿರೋಧಿಸುವ ಸಲುವಾಗಿ ಹುಟ್ಟಿದ್ದು ಈ ಕಿಸ್ ಆಫ್ ಲವ್. ನಾವು ಬೀದಿಲೇ ಬಂದು ನಿಂತು ಕಿಸ್ ಕೊಡ್ತೀವಿ, ಹಗ್ ಮಾಡ್ತೀವಿ, ನೀವು ಏನ್ ಮಾಡ್ತಿ ರಪಾ ಅಂತ? ಮೊದಲು ನಿಮ್ಮ ಮನಸ್ಥಿತಿ ಬದಲಾಗಿಸಿಕೊಳ್ಳಿ, ಪ್ರೀತಿ ಮಾಡೊದಕ್ಕೆ ಮತ್ತು ಅದನ್ನು ಅಭಿವ್ಯಕ್ತಿಸೊದಕ್ಕೆ ನಿಮ್ಮ ಹಾಗೆ ನಾಗರೀಕರಾದ ನಮಗೆ ಎಲ್ಲ ಹಕ್ಕುಗಳು ಇವೆ ಅಂತ. ಹಾಗಂತ ಅಶ್ಲೀಲವಾಗಿ ಏನೇನೋ ಬೀದೀಲಿ ಮಾಡೋಕೆ ಅವಕಾಶ ಕೊಡಿ ಅಂತೇನೂ ಆಲ್ವಲ್ಲಾ? ಒಂದು ಮುತ್ತು. ಒಂದು ಅಪ್ಪುಗೆ, ಅಷ್ಟೇ.
——————————
ಅವರಿಬ್ಬರೂ ಲವರ್ಸ್. ಮನೆಯಲ್ಲಿ ಭೇಟಿ ಮಾಡೋಕೆ ಆಗಲ್ಲ ಅಂತ ಪಾರ್ಕಿನಲ್ಲಿ ಸಿಗ್ತಾರೆ. ಕೈ ಕೈ ಹಿಡಿದು ನಡೆದಾಡ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಇರ್ತಾರೆ. ಪ್ರೀತಿ ಜಾಸ್ತಿಯಾಗಿ ಅವಳು ಅವನ ಕೆನ್ನೆಗೊಂದು ಮುತ್ತು ಕೊಡ್ತಾಳೆ. ಅಷ್ಟರಲ್ಲೇ ಹಿಂದಿನಿದ ಕುಟ್ಟುವ ಬೆತ್ತದ ಸದ್ದು ಕೇಳಿಸುತ್ತೆ. ಹೋಗಿ ಹೋಗಿ ಇಲ್ಲಿಂದ, ದೂರ ಆಗಿ! ಏನೋ ತಪ್ಪು ಮಾಡಿದವರ ತರಹ ಕೈ ಕೈ ಬಿಡಿಸಿಕೊಂಡು ಅತ್ತ ಕಡೆ ಸಾಗುತ್ತಾರೆ.
ಎದುರಿಗಿನ ವಿಶಾಲ ಕೆರೆಯನ್ನು ನೋಡುತ್ತಾ ಕುಳಿತುಕೊಳ್ಳುವುದು ಅವರಿಬ್ಬರಿಗೂ ಸಂತಸದ ವಿಷಯ. ತಣ್ಣನೆಯ ಗಾಳಿಗೆ ಹಾರುವ ಅವಳ ಮುಂಗುರುಳು, ಹೊಳೆಯುವ ಕಂಗಳು, ಅವನಿಗೆ ಪ್ರೀತಿ ಬಂದು ಅವಳ ಹೆಗಲಿಗೆ ಕೈ ಹಾಕಿ ಹತ್ತಿರಕ್ಕೆ ಒತ್ತಿಕೊಳ್ಳುತ್ತಾನೆ. ಮತ್ತೆ ಹಿಂದಿನಿಂದ ಬೆತ್ತ ಕುಟ್ಟುವ ಸದ್ದು. ಏಳಿ, ಏಳಿ, ದೂರ ಆಗಿ.
ಇವರಿಬ್ಬರಿಗೂ ಸಂಜೆ ಸಮುದ್ರ ದಂಡೆಯಲ್ಲಿ ಅಡ್ಡಾಡುವುದು ತುಂಬಾ ಪ್ರೀತಿಯ ಸಂಗತಿ. ಅವತ್ತು ಏನಾಗಿತ್ತೋ ಏನೋ, ಪ್ರೀತಿ ಉಕ್ಕಿ ಬಂದು ಅವನು ಇವಳಿಗೆ ಮುತ್ತಿಕ್ಕಿದ. ಆಷ್ಟೇ. ದೂರದಲ್ಲಿದ್ದ ಪೊಲೀಸ್ ಬೈಕ್ ಹತ್ತಿರ ಬರುವರೆಗೂ ಚುಂಬಿಸುತ್ತಲೆ ಇದ್ದ. ಕತೆ ಖಲಾಸ್. ಅವಳು ಅವತ್ತು ಕರಿಮಣಿ ಹಾಕಿರಲಿಲ್ಲ ಜೊತೆಗೆ ಇವರಿಬ್ಬರೂ ಮದುವೆ ಆಗಿದ್ದಕ್ಕೆ ಸಾಕ್ಷಿಯಾದ ಮ್ಯಾರೇಜ್ ಸರ್ಟಿಫಿಕೇಟ್ ಪರ್ಸಿನಲ್ಲಿರಲಿಲ್ಲ!
ಅವರಿಬ್ಬರೂ ಜೊತೆಯಾಗಿ ಓಡಾಡುವುದು ಇವನಿಗೆ ಇಷ್ಟವಿರಲಿಲ್ಲ. ಸೀದಾ ಹೋಗಿ ‘ಅವರ’ ಬಳಿ ಹೇಳಿದ. ಅವತ್ತು ಅವಳು ಅವನ ಬೆನ್ನ ಏರಿ ಬೈಕಿನಲ್ಲಿ ಹೋಗುತ್ತಿದ್ದಳು. ಸರಿಯಾದ ಸಮಯ. ‘ಅವರು’ ಜೀಪಿನಲ್ಲಿ ಬಂದು ಗಾಡಿಗೆ ಅಡ್ಡ ಹಾಕಿದರು. ಸರಿಯಾಗಿ ಪೂಜೆಯಾಯಿತು. ಆ ರಾತ್ರಿ ಅವರಿಬ್ಬರೂ ಹುಡುಗ, ಹುಡುಗಿ ಸ್ನೇಹಿತರಾಗೊದು ನಮ್ಮ ಸಮಾಜದಲ್ಲಿ ಇಷ್ಟು ದೊಡ್ಡ ತಪ್ಪೇ ಅಂತ ಅರ್ಥವಾಗದೆ ನೊವಿನಿಂದ ಒದ್ದಾಡಿದರು. ಈ ಸಂಸ್ಕೃತಿಯ ಬಗ್ಗೆನೇ ಜಿಗುಪ್ಸೆ ಹುಟ್ಟಿತು.
————————————
ಅವಳಿಗೆ ದೇವರೆಂದರೆ ಆಯಿತು. ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡೇ ಹೊರಡೊದು. ಸಂಕಷ್ಟಿ, ನವರಾತ್ರಿ ಎಲ್ಲ ಉಪವಾಸಗಳನ್ನು ನಿಷ್ಠೆಯಿಂದ ಮಾಡುತ್ತಾಳೆ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಉದ್ದ ಜಡೆ ಬಿಟ್ಟುಕೊಂಡು ಲಂಗ ದಾವಣಿ, ಸೀರೆ ಉಡುವ ಹುಡುಗಿಯಲ್ಲ. ಆಕೆಗೆ ಜೀನ್ಸ್ ಮತ್ತು ಮಿಡಿಗಳೆಂದರೆ ತುಂಬಾ ಇಷ್ಟ. ಹಾಗಂತ ಸಿನೆಮಾ, ಟಿವಿಯಲ್ಲಿ ತೋರಿಸುವ ಹಾಗೆ ಹುಡುಗರನ್ನು ತಿಂದು ಬಿಡುವಂತೆ ನೋಡುವ, ಆಡುವ ಹುಡುಗಿಯಂತೂ ಖಂಡಿತ ಅಲ್ಲ. ಆಕೆಗೆ ಚೆರ್ರಿ ಫ್ಲೇವರಿನ ಬ್ರಿಜರ್ ತುಂಬಾ ಇಷ್ಟ. ವೋಡ್ಕಾ ಸಹ. ಪಾರ್ಟಿಗೆ ಹೋಗೋದು, ಅಲ್ಲಿ ಸ್ನೇಹಿತರ ಜೊತೆ ಮ್ಯೂಸಿಕ್ ನಲ್ಲಿ ಕುಣಿಯೋದು ಆಕೆಯ ವೀಕೆಂಡ್ ರಿಲಾಕ್ಸ್ ಮಂತ್ರಗಳು.
ಇವಳಿಗೆ ದೇವರೆಂದರೆ ಭಕ್ತಿ ಇದೆ. ಜಾಸ್ತಿ ಏನೂ ಇಲ್ಲ. ಮನೆ, ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾಳೆ. ಅಫೀಸಿನಲ್ಲಿ ಬಾಸ್. ಆಕೆಯ ಕಾರ್ಯ ಕೌಶಲ್ಯದ ಬಗ್ಗೆ ಮಾತನಾಡುವ ಹಾಗೇನೇ ಇಲ್ಲ. ಅಷ್ಟು ಜಾಣೆ, ಪಟ ಪಟನೆ ಮಾತನಾಡುತ್ತಾ, ಎಲ್ಲರನ್ನೂ ಹುರಿದುಂಬಿಸುವ ಅವಳು ಆಫೀಸಿನ ಎಲ್ಲರಿಗೂ ಇಷ್ಟ. ತಾಸಿಗೊಮ್ಮೆ ಹೊರಗೆ ಹೋಗಿ ಬರ್ತಾಳೆ. ಸಿಗರೇಟ್ ಸೇದೊಕೆ. ದಿನಾ ಮನೆಗೆ ಹೋದ ಮೇಲೂ ಗಂಡನ ಜೊತೆ ಒಂದು ಪೆಗ್ ಹಾಕೇ ಮಲಗೋದು.
ಈಗ ಇವರಿಬ್ಬರೂ ತಪ್ಪು, ನಮ್ಮ ” ಭಾರತೀಯ ನಾರಿ ” ಕೆಟಗಿರಿಗೆ ಸೇರುವುದಿಲ್ಲ ಎಂದು ಹೇಗೆ ಹೇಳೋದು? ಇವರಿಬ್ಬರೂ ಸುಖವಾಗಿ ತಮ್ಮ ಕುಟುಂಬದ ಜೊತೆ ಚೆನ್ನಾಗೇ ಇದ್ದಾರೆ. ಸಮಾಜದ ಜೊತೆಗೂ ಸಹ.
———————————————
ಕಾಲೇಜಿಗೆ ಹೋಗೋ ಆ ಇಬ್ಬರು ಜೋಡಿಗಳಿಗೆ ಮನಸ್ಸು ತುಂಬಾ ಕಾಮನೆಗಳು. ಕದ್ದು ಓದಿದ ಪುಸ್ತಕ, ನೋಡಿದ ಸಿನೆಮಾ, ಚಿತ್ರಗಳು ಎಲ್ಲ ನೆನಪಿಗೆ ಬರುತ್ತೆ. ಹತ್ತಿರ ಬಂದರೆ ಮೈ ಪುಳಕ. ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಾಗುವುದಿಲ್ಲ. ಮನೆಯಲ್ಲಿ ಯಾರಿಗಾದರೂ ಗೊತ್ತಾದರೆ ಮೈ ಪುಡಿಯಾಗುತ್ತೆ. ಇದೆಲ್ಲ ‘ಪಾಪ’ ಎಂದು ನಂಬಿರುವರಲ್ಲಿ ತಮ್ಮ ಈ ಹೊಸ ಭಾವನೆಗಳನ್ನು ಹೇಗೆ ಹೇಳಿಯಾರು? ಅವತ್ತು ಪಾರ್ಕಿನಲ್ಲಿ ಮೈ ಚಳಿ ಬಿಟ್ಟಿದ್ದಾಯ್ತು. ಏನಾಗುತ್ತಿದೆ ಎಂದು ಗೊತ್ತಾಗುವುದರಲ್ಲೇ ಎಲ್ಲ ಮುಗಿದು ಹೋಗಿತ್ತು.
——————————————
ನಾನು ಕೇಳಿದ್ದಂತೆ ಮೊದಲು ಸೀರೆಯ ಜೊತೆ ಕುಪ್ಪಸವಿರಲಿಲ್ಲವಂತೆ. ಮಲೆನಾಡಿನಲ್ಲಿ ಗಿಡ್ಡವಾಗೇ ಸೀರೆ ಉಡುತ್ತಿದ್ದುದಂತೆ. ಒಳಗೆ ಲಂಗವೆನ್ನುವ ಪರಿಚಯ ದೇಹಕ್ಕೆ ಆಗಿರಲಿಲ್ಲವಂತೆ. ಏಷ್ಟೋ ಜಾತಿಗಳಲ್ಲಿ ಸೊಂಟಕ್ಕಿಂತ ಮೇಲೆ ಯಾವುದೇ ಉಡುಪನ್ನು ಧರಿಸುತ್ತಿರಲಿಲ್ಲವಂತೆ. ಜೊತೆಗೆ, ಮುಖ್ಯವಾಗಿ ಆಗೆಲ್ಲ ಹುಡುಗರು, ಗಂಡಸರು ಧೋತ್ರವನ್ನೋ, ಕುರ್ತಿಯನ್ನೋ, ಪಂಜೆಯನ್ನೋ ಉಡುತ್ತಿದ್ದರಂತೆ! ಕೂದಲು ಸಹ ಉದ್ದವಾಗಿರುತ್ತಿತ್ತು ಅಲ್ಲವೇ? ಈಗ ಮಾತ್ರ ಅವರೆಲ್ಲ ಪ್ಯಾಂಟು, ಜೀನ್ಸಿಗೆ ಬದಲಾಗಿದ್ದಾರೆ ಹಾಗೂ ಹೆಂಗಸರು ಮಾತ್ರ ಇನ್ನೂ ಸೀರೆ, ಉದ್ದ ಜಡೆ, ಕುಂಕುಮ,,…………..ಪುಣ್ಯ ಯಾರು ಲಂಗ ದಾವಣಿ ಅನ್ನುವುದಿಲ್ಲ!
ಹಳೆಯ ಶಿಲ್ಪಗಳಲ್ಲಿ, ಅಜಂತಾ ಅಥವಾ ಇತರ ಪ್ರಾಚೀನ ಚಿತ್ರಗಳಲ್ಲಿ ಹೆಂಗಸರು ತುಂಬಾ ಚೆನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಹಾಗಂತ ಮೈ ತುಂಬಾ, ಮೇಲಿನಿಂದ ಕೆಳಗಿನ ತನಕ ಮೈ ಮುಚ್ಚಿರುವ ಚಿತ್ರಗಳನ್ನು ನೀವೇನಾದರೂ ನೋಡಿದ್ದೀರಾ?
ನನಗೆ ಅದಕ್ಕೆ “ಭಾರತೀಯ ಸಂಸ್ಕೃತಿ ” ಅಂದರೇ ಏನು ಎಂದು ಯಾವಾಗಲೂ ಕನ್‌ಫ್ಯೋಷನ್. ದೇವರೆಂದರೆ ಯಾರು, ನನಗೂ ಈ ಜಗತ್ತಿಗೂ ಏನು ಸಂಬಂಧ, ಬದುಕೆಂದರೆ ಏನು? ಬದುಕನ್ನು ಸುಖವಾಗಿ, ಸಂತೋಷವಾಗಿ ಕಳೆಯುವುದು ಹೇಗೆ, ಸಾಧಿಸುವುದು ಹೇಗೆ, ಜೀವನ ಕ್ರಮ ಹೇಗೆ, ಧರ್ಮ, ಕಾಮ, ಅರ್ಥ, ಯೋಗ, ಧ್ಯಾನ ಇತ್ಯಾದಿಗಳೋ ಅಥವಾ ………………………….?
ನಮ್ಮ ಸಂಸ್ಕೃತಿ ಹಾಳಾಯಿತು ಎಂದು ಕೂಗುವ ಮಂದಿ, ತಮ್ಮ ಮಕ್ಕಳಿಗೆ ಈ ಯೋಗ, ಧ್ಯಾನದ ಬಗ್ಗೆ ತರಭೇತಿ ಕೊಟ್ಟಿರುತ್ತಾರಾ? ದೇವರೆಂದರೆ ಎದುರಿಗಿರುವ ಮೂರ್ತಿಯೋ, ಚಿತ್ರ ಮಾತ್ರ ಅಲ್ಲಪ್ಪಾ ಎಂದು ತಿಳಿ ಹೇಳಿರುತ್ತಾರಾ? ಸತ್ವ, ತಮಸ್, ರಜಸ್ ಎಂಬ ಗುಣಗಳ ಬಗ್ಗೆ ಹೇಳಿರುತ್ತಾರಾ? ನಮ್ಮ ಚರಿತ್ರೆಯ ಕತೆಗಳನ್ನು ಹೇಳಿರುತ್ತಾರಾ? ಪುರಾಣದ ರಾಮಾಯಣ, ಮಹಾಭಾರತಗಳನ್ನು ಕೇವಲ ಕತೆಯಾಗಿ (ದೇವರ ಅವತಾರ ಎಂದಲ್ಲದೆ) ಹೇಳಿರುತ್ತಾರಾ? ಬದುಕೆಂದರೆ ಏನು ಎಂದು ತಿಳಿ ಹೇಳಿರುತ್ತಾರಾ? ಇನ್ನೂ ಜನ್ಮ, ಕರ್ಮದ ಬಗ್ಗೆ ನಾನು ಕೇಳುವುದಿಲ್ಲ.
————————————————-
ಮುತ್ತು ಒಂದು ಸುಂದರ ಅನುಭೂತಿ. ಅದು ಎರಡು ಮನಸ್ಸುಗಳ ನಡುವಿನ ಸೇತುವೆ. ಅಮ್ಮ ಮಗುವಿಗೆ ಕೊಡುವ ಮುತ್ತು, ಮಗಳು ಅಪ್ಪನಿಗೆ ಕೊಡುವ ಮುತ್ತು, ಹೆಂಡತಿ ಗಂಡನಿಗೆ, ಅಜ್ಜ, ಅಜ್ಜಿಗೆ,….. ಒಂದು ಅಪ್ಪುಗೆಗೆ, ಒಂದು ಮುತ್ತಿಗೆ ಈ ತರಹದ್ದೇ ಜಾಗ, ಈ ತರಹದ್ದೇ ಸಮಯ ಎಂದು ನಿಗದಿ ಮಾಡಲು ಸಾಧ್ಯಾನಾ? ಅದು ಎಲ್ಲೂ , ಹೇಗೋ ಹುಟ್ಟಬಹುದು. ಅದನ್ನು ನಾಲ್ಕು ಗೋಡೆಯ ಮಧ್ಯ ಮಾತ್ರ ಇರಬೇಕೆಂದು ತೀರ್ಮಾನಿಸಲು ನಾವ್ಯಾರು? ಎಲ್ಲರಿಗೂ ಜನರ ಎದುರು ಮುದ್ದಿಸುವುದು, ಮುದ್ದಿಸಿಕೊಳ್ಳುವುದು ಇಷ್ಟವಾಗುವ ಸಂಗತಿ ಆಗಬೇಕೆಂದಿಲ್ಲ. ಅದು ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಹಾಗಂತ ಎಲ್ಲರೆದುರೇ ಮುದ್ದಿಸುವ, ಮುದ್ದಿಸ್ಕೊಳ್ಳುವ ಸಂಗಾತಿಗಳನ್ನು ದೂಷಿಸಬಹುದೆ? ನಮಗೆ ಕಾಣುವ ತಪ್ಪು ಇನ್ನೊಬ್ಬನಿಗೆ ಸರಿಯಾಗಿರಬಹುದು. ಮುತ್ತು ಎಂದರೇ ಅಸಹ್ಯವೆಂದರೆ ಮತ್ತೇನೋ ಅಂದರೆ ಏನನ್ನುವರೋ!
ನನಗೊಂದು ಕನಸಿದೆ. ಸಮುದ್ರ ದಂಡೆಯಲ್ಲಿ ಜೋಡಿ ಹಕ್ಕಿಗಳು ಹಾರಾಡಿಕೊಂಡಿರುತ್ತವೆ. ಪರಸ್ಪರ ಮುದ್ದಿಸುತ್ತ ಸುಖವಾಗಿ ನಲಿಯುತ್ತಿರುತ್ತವೆ. ಅಲ್ಲಿ ಪ್ರೀತಿಯಿದೆ, ಬಿಸಿ ಬಿಸಿ ಮೈಯಿಲ್ಲ. ಸಿಹಿ ಸಿಹಿ ಅಪ್ಪುಗೆಯಿದೆ. ಕೆಂಪು ಕೆಂಪು ಬೆಂಕಿಯ ಕಣ್ಣುಗಳಿಲ್ಲ. ಆ ಕಡೆ ಮಕ್ಕಳ ಜೊತೆ ಕೂತಿರುವ ಕುಟುಂಬಗಳು. ಅವನು ಮಗುವಿಗೊಂದು ಮುತ್ತಿಕ್ಕಿ ಅವಳೊಡನೆ ಚುಂಬಿಸಿಕೊಳ್ಳುತ್ತಾನೆ. ಇಬ್ಬರು ಒಬ್ಬರೊಬ್ಬರನ್ನು ನೋಡಿ ಖುಷಿಯಿಂದ ನಗುತ್ತಾರೆ. ಆನಂದ ಎಲ್ಲ ಕಡೆ ತೇಲುತ್ತಿರುತ್ತೆ.
ಹಾಗೇನೇ ನನಗೊಂದು ಆಸೆಯೂ ಇದೆ. ಪ್ರತಿದಿನ ನೀವು ಆಫೀಸಿನಿಂದ ಮನೆಗೆ ಹೋದಾಗ ನಿಮ್ಮವಳು / ನು ಹತ್ತಿರ ಬಂದು ತಬ್ಬಿ ಮುತ್ತಿಡಲಿ, ಮಗು ಬಂದು ತಬ್ಬಿಕೊಂಡು ಮುತ್ತಿಡಲಿ. ಲವ್ ಯೂ ಅನ್ನಲಿ. ಕೆಲಸಕ್ಕೆ ಹೊರಟಾಗ ಅಪ್ಪನೋ, ಅಮ್ಮನೋ ಬಂದು ಮುತ್ತಿಡಲಿ, ಲವ್ ಯೂ ಅನ್ನಲಿ. ಸ್ನೇಹಿತರು ಸಿಕ್ಕಾಗ ಅಪ್ಪಿಕೊಂಡು ತುಂಬಾ ಖುಷಿಯಾಯಿತು ಅನ್ನಲಿ, ಸಾಧಿಸಿದಾಗ ಹೆಮ್ಮೆಯಾಯಿತು ಅನ್ನಲಿ, ಬೇಸರವಾದಾಗ ಏನು ಹೇಳದೆ ಲವ್ ಯೂ ಅನ್ನಲಿ. ಎಲ್ಲರಿಗೂ ಜಾಸ್ತಿ ಜಾಸ್ತಿ ಸಿಹಿ ಮುತ್ತು ದಕ್ಕಲಿ.
ಏನಕಂದ್ರೆ ನೀವು ಇನ್ನೊಂದು ಜೀವವನ್ನು ಮುದ್ದಿಸಿದ್ದರೆ, ಮುದ್ದಿಸಿಕೊಂಡಿದ್ದರೆ ಈ ‘ಮಧುರ ಮುತ್ತು’ ಅನ್ನೋದು ಏಷ್ಟು ಅಮೂಲ್ಯವಾದದ್ದು ಅನ್ನೋದು ಗೊತ್ತಿರುತ್ತೆ. ಅದು ಸಿಗಲು ಮತ್ತು ಕೊಡಲು ಇಬ್ಬರ ಮಧ್ಯ ಅನುಬಂಧವೂ ಬೇಕು. ಮಗುವನ್ನು ಮುದ್ದು ಗೊಂಬೆ ಎಂದು ಮುದ್ದಿಸುವ ಮನಸ್ಥಿತಿ, ನಮ್ಮಷ್ಟೇ ದೊಡ್ಡವರನ್ನು ಮುದ್ದಿಸುವಾಗಲು ಬೇಕು. ಆ ತರಹದ ಎನರ್ಜಿ ಬೂಸ್ಟರ್ ಮುತ್ತುಗಳು ನಿಮ್ಮ ಪ್ರೀತಿ ಪಾತ್ರರಿಂದ ಸದಾ ದೊರೆಯುತ್ತಲೇ ಇರಲಿ.
————————-
ಮತ್ತು ಮುತ್ತಿನ ದಿನ ಯಶಸ್ವಿಯಾಗಲಿ.
ನವೆಂಬರ್ 23, 2014 ರಲ್ಲಿ 2:43 ಅಪರಾಹ್ನ |
ವಂಡರ್ಫುಲ್ ರೈಟಪ್, ಬಹಳ ಇಷ್ಟ ಆಯ್ತು.. 🙂
LikeLike
ನವೆಂಬರ್ 24, 2014 ರಲ್ಲಿ 2:14 ಅಪರಾಹ್ನ |
ಧನ್ಯವಾದಗಳು ಪ್ರಸಾದ 🙂
LikeLike