ನಿನ್ನೆ ಮೊನ್ನೆಯಿಂದ ಜಿಮ್ಮಿನ ಕಿಟಕಿಯಲ್ಲಿ ನಿಂತು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೋಗುವ-ಬರುವ ಗಾಡಿಗಳನ್ನು ನೋಡುತ್ತಾ ನಿಲ್ಲುತ್ತಿದ್ದೇನೆ. ಸೀದಾ ಕೆಳಗೆ ಹೋಗಿ ಆ ಮರದ ಕೆಳಗೆ ಸುಮ್ಮನೆ ಕುಳಿತುಕೊಳ್ಳುವ ಮನಸ್ಸಾಗುತ್ತೆ. ಅದೆಷ್ಟೋ ಸಲ ಹೀಗೆ ಏನೇನೋ ಅನ್ನಿಸಿದಾಗಲೆಲ್ಲ ಸುಮ್ಮನೆ ಎದ್ದು ಅಡ್ಡಾಡಿದ್ದಿದೆ. ಆದರೆ ಅದೂ ಮತ್ತೆ ಏನನ್ನು ಹುಟ್ಟಿಸುವುದಿಲ್ಲ. ಇನ್ನೊಂದಿಷ್ಟು ಓಡಾಡುವ ಚಿತ್ರಗಳನ್ನು ಮತ್ತು ಗೊತ್ತಿಲ್ಲದೇ ಊಹಿಸುವ ಕತೆಗಳನ್ನು ತಂದು ಎದುರಿಗೆ ಇಡುತ್ತದೆ.
ಈ ತರಹದ ಸಂಜೆಗಳಲ್ಲಿ ಏನೂ ಗೊತ್ತಾಗದೆ ಆ ಗೋಡೆಯಿಂದ ಈ ಗೋಡೆಯವರೆಗೆ ಓಡಾಡುತ್ತೇನೆ. ಕೊನೆಗೆ ಕಾಲು ಸೋತು ಹೋಗಿ ಜೋಕಾಲಿಯಲ್ಲಿ ಜೀಕುತ್ತೇನೆ. ಎದುರಿಗೆ ಗಾಳಿಗೆ ಓಲಾಡುವ ಎಲೆಗಳನ್ನು ನೋಡುತ್ತಾ ಸುಮ್ಮನಿರುತ್ತೇನೆ. ಬರುವ ಪಾರಿವಾಳಗಳು ನನ್ನನ್ನು ಗಮನಿಸಿ ಆ ಎಡೆಯಿಂದ ನೀರು ಕುಡಿದು ‘ಪರ್’ ಎಂದು ಹಾರಿ ಹೋಗುತ್ತವೆ. ದೃಷ್ಟಿ ಕೇಬಲ್ ತಂತಿಗಳ ಮಧ್ಯೆ ತೊಯ್ದಾಡುತ್ತಿರುವ ಪಾರಿವಾಳಗತ್ತ. ಅದಕ್ಕೊ ಮೇಲೆ ಹಾರಡುವ ಜೋಡಿ ಬಾನಾಡಿಗಳು. ಅವು ಬಂಗಾರದ ಬೆಳಕಿನಲ್ಲಿ ಕಪ್ಪಗೆ ಸುಮ್ಮನೆ ಹಾರಾಡುತ್ತಿವೆಯಾ?
ಚಹಾ, ಹೂಂ, ಈ ಹೊತ್ತಿಗೆ ಬೇಕೇ ಬೇಕು, ಡಾರ್ಜಿಲಿಂಗ್ ಚಹಾದಲ್ಲಿ ಬ್ರಿಟಾನಿಯಾ ರಸ್ಕ್ ಗಳನ್ನು ಅದ್ದುತ್ತ ‘ಕರ್’ ಎಂದು ಆಗಿಯುತ್ತೇನೆ. ಆ ಶಬ್ಧದ ಜೊತೆ ‘ಗುಯ್’ ಎಂದು ತಿರುಗುತ್ತಿರುವ ಫ್ಯಾನು ಮತ್ತು ಕೆಳಗೆಲ್ಲೋ ನೀರಿನ ಟಾಕಿಯ ಮುಚ್ಚಳದ ಮೇಲೆ ಸಾಗುತ್ತಿರುವ ಕಾರಿನ ಚಕ್ರಗಳು ಜೊತೆಯಾಗುತ್ತವೆ. ಮತ್ತೇನಾದರೂ ಕೇಳಿಸುತ್ತಿದೆಯಾ? ಉಹುಂ, ಏನು ಇಲ್ಲ. ಮಳೆ ಬಂದಿದಕ್ಕೇನೋ, ಮಕ್ಕಳು ಆಡುವ ಸದ್ದು ಕೇಳಿಸುತ್ತಿಲ್ಲ.
ಆ ರಾತ್ರಿ ಉದಯಪುರದ ಕೆರೆಯಲ್ಲಿ ಹೊಳೆಯುತ್ತಿದ್ದ ಬಣ್ಣ ಬಣ್ಣದ ಬಲ್ಬುಗಳು ಮತ್ತು ಕತ್ತಲನ್ನು ದಿಟ್ಟಿಸುತ್ತಾ ಕೂತಿದ್ದ ಕಿಟಕಿ, ದೂರದೆಲ್ಲೋ ಮೋಡದ ಮಧ್ಯೆ ಮರೆಯಾಗಿರುವ ಹಿಮಾಲಯವನ್ನು ದಿಟ್ಟಿಸುತ್ತಾ ನಿಂತಿದ್ದ ಮಸ್ಸೂರಿಯ ಆ ತಾರಸಿ, ರೇಲ್ವೆಯಲ್ಲಿ ಬರುತ್ತ ಸಿಕ್ಕ ಆ ನದಿ, ಮುಂಬಯಿ ಕ್ವೀನ್ ನೆಕಲೇಸಿನಲ್ಲಿ ಕೂತು ನೋಡಿದ ಮುಳುಗುತ್ತಿದ್ದ ಸೂರ್ಯ, ಆ ಕಪ್ಪು ಕಲ್ಲುಗಳ, ತೊರೆ ತೊರೆಯಾಗಿ ಹತ್ತಿರ ಬರುತ್ತಿದ್ದ ಮನೋರಿಯ ಸಮುದ್ರ, ……………
ಎಲ್ಲ ಕಡೆ ಅದೇನು ಎಂದು ಗೊತ್ತಾಗದೆ ಕುಳಿತಿದ್ದ, ನಿಂತಿದ್ದ, ಅಡ್ಡಾಡುತ್ತಿರುವ ನಾನು. ಕುಶಿಯಲ್ಲದ, ದುಃಖವಲ್ಲದ ಭಾವ. ಈ ದಾರಿ ಸರಿಯಾ? ಅಥವಾ ತಪ್ಪಿ ಇಲ್ಲಿ ಬಂದು ಕೂತಿದ್ದೆನಾ ಎಂಬ ಅನುಮಾನ. ಏನಿಲ್ಲ? ಇವತ್ತಿನ ದಿನ ಎಲ್ಲ ಇದೆ. ಪ್ರಿಯತಮ-ಸ್ನೇಹಿತರು-ಅಪ್ಪ-ಅಮ್ಮ ಇತ್ಯಾದಿ ಸಂಬಂಧಗಳು, ಇಚ್ಛೆ ಪಟ್ಟ ಮನೆ-ಪರಿಕರಗಳು, ಆಸೆ ಪಟ್ಟ ಉದ್ಯೋಗ, ಜೊತೆಗೆ ಆಡುವ-ಮಾಡುವ ಮಂಗಾಟಗಳನ್ನು ಸಹಿಸುವ ಸನಿಹದಲ್ಲಿರುವ ಜೀವ ….. ಮತ್ತೇಕೆ ಹೀಗೆ?
ಎಲ್ಲ ಇರುವಾಗ ಕಳೆದು ಹೋಗಿದ್ದು ಏನು? ನಿಜಕ್ಕೂ ಬೇಕಾಗಿದ್ದು ಏನು? ಅಪರಿಮಿತ ಆಕಾಶವೋ, ಸೀಮೆಯಿಲ್ಲದ ಬಯಲೋ?
ಹೇಳಿ, ನಿಮಗೂ ಹೀಗೆ ಅನ್ನಿಸುತ್ತದೆಯಾ?
ಪ್ರಶ್ನೆ ಕೇಳುತ್ತಿರುವುದು,
ಇದು ಮಾಡುವ, ಆಮೇಲೆ ಅದು ಮಾಡುವ ಎಂದು ಒಂದರ ಬೆನ್ನು ಒಂದನ್ನು ಏರುತ್ತಾ, ಈ ರೀತಿ ಯೋಚಿಸಲು ಪುರಸೊತ್ತು ಸಿಗಲೇಬಾರೆಂಬ ಜಿದ್ದಿಗೆ ಬಿದ್ದಿರುವ ನಾನು.
ನಿಮ್ಮದೊಂದು ಉತ್ತರ