ಶಮ್ಮಿ ಅವರ ಕವಿತೆಗೆ ಉತ್ತರಿಸುತ್ತಾ ಹೀಗೆ ಯೋಚಿಸ್ತಾ ಇದ್ದೆ, ನನ್ನ ಜೊತೆ ಹೀಗೆ ಯಾವಾಗಾವಾಗ ಆಗಿತ್ತು ಅಂತ. ಆಹ್ ! ಆಗ ನೆನಪಿಗೆ ಬಂಗಿದ್ದು ಲಾವಾಸಾ ಕತೆ. ನಾನು ಯಾವಾಗಲೂ ಊರು ಸುತ್ತೋಕೆ ಹೋಗುವಾಗ ನೆಟ್ಟಗೆ ಡ್ರೆಸ್ ಮಾಡಿಕೊಳ್ತೇನೆ. ಅಂದರೆ ಜಾಸ್ತಿ ಉದ್ದನೆಯ ತೋಳಿನ ಅಂಗಿಗಳು, ಇಲ್ಲವೇ ಜೀನ್ಸ್ ಮತ್ತು ಕುರ್ತಾಗಳು. ಎದೆ, ಹಿಂಬಾಗ, ತೋಳು, ಕಾಲುಗಳನ್ನು ಮುಚ್ಚಿರುವಂತದ್ದು. ಏನಕ್ಕಂದ್ರೆ ಹೋದ ಕಡೆ ದಿಟ್ಟಿಸಿ ನೋಡುವ ಕಣ್ಣುಗಳು ನನಗೆ ಬೇಕಾಗಿಲ್ಲ. ಬಗ್ಗಿದಾಗ, ಹೇಗೆಂದರೆ ಹಾಗೆ ಕ್ಯಾಮೆರಾ ಹಿಡಿದು ಕ್ಲಿಕ್ಕಿಸುತ್ತಿರುವಾಗ ನನ್ನ ಅಂಗಿಯ ಬಗ್ಗೆ ಗಮನ ಹರಿಸಲು ನನಗೆ ತಾಳ್ಮೆಯಿರುವುದಿಲ್ಲ. ಆದರೆ ಅವತ್ತು ಉಮೇದು ಬಂದು ಬಿಟ್ಟಿತ್ತು. ಏನಂದರೆ ಚಿಕ್ಕ ಲಂಗ ಹಾಕಿಕೊಂಡು ಹೋಗಬೇಕೆಂದು. ಇವನು ನಾವಿಬ್ಬರೇ ಹೋಗುತ್ತಿರುವುದು, ಡ್ರೆಸ್ ಹಾಕ್ಕೊಳಬಹುದಿತ್ತು ಅಂದರೆ ನಾ ಕೇಳಲಿಲ್ಲ. ಆಸೆ ಪಟ್ಟು ತೆಗೆದುಕೊಂಡಿರೊ ಲಂಗ ಹಾಕಿಕೊಳ್ಳಲೇಬೇಕು ಅಂತ ತೀರ್ಮಾನಿಸಿ ಆಗಿತ್ತು. ಆಯಿತು, ಹಾಗೆ ಹೋದೆವು. ಕಾರಲ್ಲಿ ಜಾಸ್ತಿ ಹೊತ್ತು ಕೂತಿರೋದರಿಂದ ಏನೂ ಅನ್ನಿಸ್ತಾ ಇರಲಿಲ್ಲ. ಲಾವಾಸಾ ಬಂತು. ಅಲ್ಲಿ ಒಂದು ತಿರುವಿನಲ್ಲಿ ತುಂಬಾ ಚೆನ್ನಾಗಿ ಸೀನ್ಸ್ ಕಾಣ್ತಾ ಇದ್ದಿದ್ದರಿಂದ ಯಾವತ್ತಿನ ಹಾಗೆ ಕಾರಿನಿಂದ ಐಳಿದು ಇಬ್ಬರು ನಮ್ಮ ಪಾಡಿಗೆ ನಾವು ಕ್ಲಿಕ್ಕಿಸುತ್ತಿದ್ದೆವು. ಅವನು ಆ ಕಡೆ ಹೋದರೆ, ನಾನು ಈ ಕಡೆ ಕ್ಲಿಕ್ಕಿಸುತ್ತಾ ನಿಂತಿದ್ದೆ. ಅವನು ಯಾರೋ, ಅವನ ಕರ್ಮ. ಬೈಕಲ್ಲಿ ಗಾಡಿ ಓಡಿಸುತ್ತಾ ಹೋಗುತ್ತಿದ್ದವನು ನನ್ನ ನೋಡಿ ಇಳಿದದ್ದು ಆಯಿತು, ಬರ್ತೀಯಾ ಅಂತ ಕೇಳಿದ್ದು ಆಯಿತು. ಏನೇನೋ ಹೇಳಿದ್ದು ಆಯಿತು. ನಾನು ಷಾಕ್. ಅವನು ಇದ್ದಕಿದ್ದ ಹಾಗೆ ಎದುರಿಗೆ ಬಂದಾಗ ನನಗೆ ಒಂದು ಸಲ ಚಿಕ್ಕದಾಗಿ ಭಯದಿಂದ ಮೈ ನಡುಗಿದ್ದು ನಿಜ. ಮೊದಲ ಬಾರಿ ನನ್ನ ಜೊತೆ ಹೀಗಾದದ್ದು. ಏಷ್ಟೋ ಕಡೆ ಸುತ್ತಿದ್ದೇವೆ, ದಟ್ಟ ಕಾಡುಗಳ ನಡುವೆ, ಹೊಲ, ತೊರೆಗಳ ನಡುವೆ, ಎಲ್ಲೂ ಆಗದದ್ದು ಇವತ್ತು! ಅವನಿಗೆ ನೀಟಾಗಿ ಮತ್ತೇರಿತ್ತು. ಅಷ್ಟರಲ್ಲೇ ಇವನು ಬಂದ, ಅವನು ಮತ್ತೆ ಬೈಕೇರಿ ಮುಂದೆ ಹೋದ. ಆ ಬೈಕೀನವನ ಕರ್ಮ ಅಂತ ನಾನು ಬಯ್ದುಕೊಳ್ಳುತ್ತಾ ಸುಮ್ಮನೆ ಕಾರೇರಿದೆ. ಇವನು ನನಗೆ ಬಯ್ತಾ ಇದ್ದ. ನೋಡು, ಸರಿ ಆಯ್ತಾ, ಈ ತರಹ ಹೊಸ ಜಾಗಗಳಿಗೆ ಬರ್ತಾ ಸ್ವಲ್ಪ ಎಚ್ಚರಿಕೆಲಿ ಇರಬೇಕು. ಈಗ ಅವನು ಹೋಗಿ ಸ್ನೇಹಿತರನ್ನು ಕರೆದು ತಂದರೆ ಏನು ಮಾಡೋದು ಅಂತ ಇನ್ನಷ್ಟು ಹೆದರಿಸಿ, ಏನಕೆ ನಾನು ಲಂಗ ಹಾಕಿಕೊಂಡು ಬಂದೆನೋ ಅನ್ನುವಂತೆ ಮಾಡಿ ಬಿಟ್ಟಿದ್ದ. ಅವನು ಹೇಳಿದ್ದು ನಿಜ. ನಾವು ಯಾವತ್ತೂ ಹೊಸ ಜಾಗಗಳಿಗೆ ಹೋಗ್ತಾ ಒಂದಿಷ್ಟು ಸಿದ್ಧ ಸೂತ್ರಗಳನ್ನು ಪಾಲಿಸ್ತೀವಿ. ತುಂಬಾ ಒಳಗೊಳಗೇ ಜನ ನಿಭಿಡ ಜಾಗಗಳನ್ನು ಹುಡುಕಿಕೊಂಡು ಹೋಗಲ್ಲ. ಕೆಲವೊಂದು ಕಡೆ ನಾನು ಕಾರಿನಿಂದ ಇಳಿಯೊಲ್ಲ. ….. ತದನಂತರ ಲಾವಾಸಾದ ಸುಮಾರು ಜಾಗದಲ್ಲಿ ನಾನು ಕಾರಿನಿಂದ ಇಳಿಯೋಕೆ ಹೋಗಿಲ್ಲ. ಸಿಟಿಲಿ ಇಳಿದ್ರೂ ಎಲ್ಲಾ ನನ್ನ ಕಾಲನ್ನೇ ನೋಡ್ತಾ ಇದ್ರೆ ಅಂತ ತಲೆಬಿಸಿಯಾಗಿತ್ತು. ಹಾಗೇನೂ ಇರಲ್ಲ ಅಂತ ನನ್ನೇ ನಾನು ಸಮಾಧಾನ ಮಾಡಿಕೊಂಡು ಸುತ್ತಾಡಿದ್ದೆ. ಆಮೇಲೆ ಮಾತ್ರ ಈ ತರಹ ಡ್ರೆಸ್ ನನಗೆ ನಿಭಾಯಿಸೋಕೆ ಸಾಧ್ಯವಿಲ್ಲದ್ದು ಅಂತ ಹಾಕಿಕೊಳ್ಳೊಕೆ ಹೋಗಿಲ್ಲ.
ನಾನು ಕಾಲೇಜು ಓದುವ ಸಮಯದಲ್ಲಿ ಒಂದೇ ಕಾಲಿಗೆ ಖಡಗ ಹಾಕ್ತಾ ಇದ್ದೆ. ಅದು ಯಾವತ್ತೂ ಹೊಸ ಚಪ್ಪಲ್ ತಗೊಬೇಕಾದ್ರೆ ಕಷ್ಟ ಕೊಡೋದು. ಏಷ್ಟೋ ಸಲ ಚಪ್ಪಲ್ ಅಂಗಡೀಲಿ ಅಲ್ಲಿನ ಕೆಲಸದ ಹುಡುಗರು ಚಪ್ಪಲ್ ಹಾಕಿಕೊಡುವಾಗ ಖಡಗ ಹಾಕಿದ ಕಾಲನ್ನು ಮುಂದೆ ಮಾಡಿದರೆ ಅಷ್ಟೇ, ಕ್ಷಣಾರ್ಧದಲ್ಲಿ ಅವರ ಒಂದು ಬೆರಳು ಮೀನಖಂಡ ತನಕ ಎಳೆದಿರುತ್ತಿತ್ತು. ನನಗೆ ಮೈಯಲ್ಲಾ ಉರಿ, ಅವರಿಗೆ ತಾನು ಮಾಡಿದ್ದು ಗೊತ್ತಿದ್ದೂ, ಗೊತ್ತೇ ಇಲ್ಲವರಂತೆ ಕಣ್ಣು ತಪ್ಪಿಸುತ್ತಿದ್ದದ್ದು. ಅವರಿಗೆ ಬಯ್ಯೊಕೂ ಆಗಲ್ಲ, ಚಪ್ಪಲ್ ಹಾಕಕೇ ಕಾಲು ನೀಡಿದ್ದು ನಾನೇ ತಾನೇ. ಅದಾದ ಮೇಲೆ ಸಭ್ಯಸ್ಥರಂತೆ ಮಾತಾಡೊ ಅವರಿಗೆ ಏನಂತ ಹೇಳಿದರೂ ಉಪಯೋಗವಿಲ್ಲ.
ಗೊತ್ತಿಲ್ಲ, ನಾನು ಜಾಸ್ತಿ ಈ ಕೈ, ಕಾಲುಗಳನ್ನು ಅಂದವಾಗಿ ಇಟ್ಟುಕೊಳ್ಳೊದು ಕಡಿಮೇನೆ. ಆವತ್ತು ನೀಟಾಗಿ ಬೆರಳಿಗೆ ಬಣ್ಣ ಹಚ್ಚಿಕೊಂಡು ಚೆಂದ ಚೆಂದ ಮಾಡಿಕೊಂಡು ಕ್ಲಾಸಿಗೆ ಹೋಗಿದ್ದೆ. ದಿನಾ ಚೆನ್ನಾಗಿ ಮಾತಾಡ್ತಾ ಇದ್ದ ಸ್ನೇಹಿತ ಇದ್ದಕಿದ್ದ ಹಾಗೆ ಬೆರಳುಗಳನ್ನು ಹಿಡಿದುಕೊಂಡು ತುಂಬಾ ಚೆನ್ನಾಗಿದೆ ಅಂತ ಹೇಳಕೆ ಪ್ರಾರಂಭಿಸಿದ. ನಾನು ಸೀದಾ ಕೈ ಕೊಡವಿ ಅಲ್ಲಿಂದ ಎದ್ದೆ. ಅವನಿಗೆ ತಾನು ಮಾಡಿದ್ದು ಗೊತ್ತಾದ್ರೂ ಏರಿದ್ದು ಕೆಳಗೆ ಇಳಿದಿರಲಿಲ್ಲ. ಮನೆಗೆ ವಾಪಸ್ ಆದಮೇಲೆ ಬಣ್ಣಗಳನ್ನು ತೆಗೆದು ಹಾಕಿದ್ದೆ. ಸೀದಾ ಸಾದಾ ಕೈಗಳೇ ಚೆಂದ. ಕೈ ನೋಡಿ ಯಾರು ಯಾರಿಗೋ ಮೈ ಬಿಸಿ ಏರೋ ಕತೆಯೇ ಬೇಡ. ಆಮೇಲೆ ಅವನೊಡನೆ ನಾನು ಮಾತಾಡಿದ್ದು ಕಡಿಮೆನೆ.
ಆ ದೊಡ್ಡ ಕಂಪನಿಯಲ್ಲಿ ಸಣ್ಣ ಪ್ರಾಜೆಕ್ಟ್ ಕೊಡಿಸಿದ ಆ ಮನುಷ್ಯ ಚೆನ್ನಾಗೇ ಇದ್ದ. ನಾನೇನು ಅವನ ಜೊತೆ ಕೆಲಸ ಮಾಡ್ತಾನೂ ಇರಲಿಲ್ಲ. ತುಂಬಾ ಚೆನ್ನಾಗಿ ವರ್ತಿಸುತ್ತಿದ್ದ ಆತ, ಅವತ್ತು ಅವನ ಛೇಂಬರಿಗೆ ಏನೋ ಕೇಳಲು ಹೋದಾಗ ಶೇಕ್ ಹ್ಯಾಂಡ್ ಮಾಡಿದ್ದ. ಅವನ ಮಧ್ಯ ಬೆರಳು ನನ್ನ ಹಸ್ತಕ್ಕೆ ತಾಗಿತ್ತು. ನನಗೆ ವಿಚಿತ್ರ ಅನ್ನಿಸಿ ಏನನ್ನು ಹೇಳದೆ ಸುಮ್ಮನೆ ಬಂದಿದ್ದೆ. ಅವನು ನನ್ನ ಹತ್ರ ಬೇರೆ ತರಹದ ಫೇವರ್ ಕೇಳಿದ್ನಾ ಗೊತ್ತಿಲ್ಲ. ಸುಮ ಸುಮ್ಮನೆ ಡಿಕೋಡ್ ಮಾಡಬೇಡ ಅಂತ ನನಗೆ ನಾನೇ ಹೇಳಿಕೊಂಡು ಸುಮ್ಮನಾಗಿದ್ದೆ. ಆಮೇಲೆ ಮೇಸೇಜಿನಲ್ಲಿ ನಿಮಗೆ ಮುಂದೆವರಿಯುವ ಇಷ್ಟವಿದ್ದಲ್ಲಿ ಮೇಸೇಜ್ ಹಾಕಿ ಅಂತ ಬರೆದುಕೊಂಡಿದ್ದು ನೋಡಿ ಕನ್ಫರ್ಮ್ ಆಗಿತ್ತು. ನಾನು ದೊಡ್ಡದಾಗಿ ನಕ್ಕು, ಈ ಹುಡುಗರ ಕರ್ಮ ಅಂತ ಇಗ್ನೋರ್ ಮಾಡಿದ್ದೆ. ನನಗೆ ಏನು ಗೊತ್ತಾಗಿಲ್ಲ ಅನ್ನೋ ತರಹ ನಾನು ಇದ್ದಿದ್ದಕ್ಕೆ ಅಥವಾ ಬೇರೆ ಇನ್ಯಾವ ಕಾರಣಕ್ಕೊ ಆಮೇಲೆ ಸರಿಯಾಗೇ ವರ್ತಿಸುತ್ತಿದ್ದ.
ಅವತ್ತ್ಯಾವುದೋ ಒಂದಿನ ಫ಼್ಲೀಕರಿನಲ್ಲಿ ಎಲ್ಲರೂ ಪಾದಗಳ ಫೋಟೋ ಹಾಕ್ಕೊಳ್ತಾರೆ ಅಂತ ನೋಡಿ ನನಗೂ ಆಸೆಯಾಗಿ ಚೆನ್ನಾಗಿ ಕ್ಲಿಕ್ಕಿಸಿಕೊಂಡು ಹಾಕಿದ್ದೆ. ಮಾರನೇ ದಿನ ಇನ್ನೊಬ್ಬ ಎಡವಟ್ಟು ತಲೆಏರಿ ಮಾಡಿದ ಕಮೆನ್ಟ್ ಓದಿ ಆ ಚಿತ್ರನೇ ತೆಗೆದು ಹಾಕಿದ್ದೆ. ಅದು ಹೇಗೆ ಮುದ್ದು ಮುದ್ದಾಗಿ ಕೈ, ಪಾದಗಳ ಚಿತ್ರಗಳನ್ನು ಹಾಕಿಕೊಳ್ತಾರೆ ಅಂತ ನನಗೆ ಗೊತ್ತಾಗಿಲ್ಲ. ಅದಕ್ಕೆ ‘ಸೆಕ್ಸಿ’ ‘ಹಾಟ್’ ಅಂದರೆ ಮೈ ಉರಿಯುವ ನನಗೆ, ಈ ತರಹದ ನನ್ನದಲ್ಲದ ಜಗತ್ತು ಬೇಡ, ಹೋಗಿ ಸಿಕ್ಕಿ ಹಾಕಿಕೊಳ್ಳಬಾರದೆಂದು ಸುಮ್ಮನಿರುತ್ತೇನೆ.
ನಾನು ಯಾವತ್ತೂ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಹುಡುಗಿಯರನ್ನು ನೋಡಿದಾಗ ಯೋಚಿಸ್ತಾ ಇರ್ತೇನೆ. ಇವರಿಗೆ ಈ ತರಹದ ಅನುಭವಗಳು ಆಗಿರಬೇಕಲ್ಲವಾ ಅಂತ. ಅದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೋ ಅಂತ. ಈ ಚಿಕ್ಕ ಫ್ರಾಕುಗಳನ್ನು ಹಾಕಿಕೊಂಡು ಓಡಾಡುವ ಹುಡುಗಿಯರ ದಿಟ್ಟತನಕ್ಕೆ ನನ್ನದೊಂದು ಸಲಾಂ ಇದ್ದೇ ಇರುತ್ತೆ. ಅವರಿಗೂ ಗೊತ್ತು, ಸುತ್ತಲಿನ ಹುಡುಗರು ಅವರನ್ನು ಕಣ್ಣಲ್ಲೇ ತಿಂದು ಹಾಕಿರುತ್ತಾರೆ ಅಂತ. ಆದರೂ ತಮ್ಮನ್ನು ಯಾರು ನೋಡುತ್ತಿಲ್ಲ ಅಂತ ಓಡಾಡುತ್ತಿರುತ್ತಾರೆ. ಹಾಗೇನೇ ಸುಮಾರು ಹುಡುಗಿಯರಿಗೂ ತಾನು ಮಾಡ್ ಮತ್ತು ಸೆಕ್ಸಿ ಅನ್ನಿಸಿಕೊಳ್ಳುವುದು ತುಂಬಾ ಇಷ್ಟದ ವಿಷಯವು ಹೌದು. (ಇದು ಹುಡುಗರಿಗೂ ಅನ್ವಯವಾಗುತ್ತೆ) ಹಾಗಂತ ಮನೆಗೆ ಹೋಗ್ತಾ ಕಾರಿನಲ್ಲಿ, ಆಟೋಗಳಲ್ಲಿ ಕಾಲುಗಳ ಮೇಲೊಂದು ಸ್ಕಾರ್ಫ್ ಹಾಕಿ ಕೊಳ್ಳುವುದನ್ನು ಮರೆಯುವುದಿಲ್ಲ. ಸಂಜೆಯಾದ ಮೇಲೆ ಜೊತೆಗೆ ಇಲ್ಲದೆ ಇಬ್ಬರೇ ಮಾಡ್ ಡ್ರೆಸ್ ಗಳಲ್ಲಿ ತಿರುಗಾಡುವುದಿಲ್ಲ.
ನನಗೆ ಮಾತ್ರ ನನ್ನ ಕಡೆ ಮೈ ಬಿಸಿ ಏರಿಕೊಂಡು ನೋಡುವ ಕಣ್ಣುಗಳು ಇಷ್ಟವಾಗೊಲ್ಲ. ಆಫೀಸಿನಲ್ಲಿ ಟೀಂ ನಲ್ಲಿ ಒಬ್ಬಳೇ ಹುಡುಗಿಯಾಗಿರುವುದರಿಂದ ಡ್ರೆಸ್ ಬಗ್ಗೆ ಸ್ವಲ್ಪ ಕಾಳಜಿಯಿರುತ್ತೆ. ಜಾಸ್ತಿ ಉದ್ದ ಕೈಯನ ಡ್ರೆಸ್ಗಳು, ನೋ ಡೀಪ್ ನೆಕ್ ಅಂಗಿಗಳು. ತುಟಿಗೂ ಗಾಢವಾದ ರಂಗು ಬಳಿಯುವುದಿಲ್ಲ. ಮಾತಾಡುವಾಗ ದೇಹದ ಯಾವುದೇ ಅಂಗದ ಮೇಲೂ ದೃಷ್ಟಿ ಹೋಗಬಾರದು. ನನಗೆ ನೀಟಾಗಿ ಚೆನ್ನಾಗಿ ಕಾನ್ಫಿಡೆನ್ಸ್ ಕಾಣಬೇಕೇ ಹೊರತು ‘ಆ ತರಹ’ ಚೆನ್ನಾಗಿ ಕಾಣುವುದು ಬೇಕಿಲ್ಲ. ಯಾವತ್ತೋ ಹೊಸ ಅಂಗಿ ಹಾಕಿ ಕೊಂಡು ಹೋದಾಗ, ಸ್ನೇಹಿತರು ‘ಚೆನ್ನಾಗಿ ಕಾಣ್ತಿಯಾ’ ಅಂದಾಗ ಸಣ್ಣಗೆ ನಕ್ಕು, ಅವರ ಕಣ್ಣಲ್ಲಿ ಇಣುಕಿ ‘ ಸೆಕ್ಸಿ ಮತ್ತು ಹಾಟ್ ಅಲ್ಲ’ ಅಂತ ಕನ್ಫರ್ಮ್ ಮಾಡಿಕೊಳ್ತೇನೆ. ನನಗೆ ಯಾವತ್ತೂ ನಾನು ಇಂಪಾರ್ಟೆಂಟ್, ನನ್ನ ಕೆಲಸ ಮತ್ತು ವಿಚಾರಗಳು. ನಾನು ಅಂದರೆ ದೇಹದ ಭಾಗಗಳು ಅಥವಾ ಹೊರಗಿನ ಅಂಗಿಯಿಂದ ಕೂಡಿದ ರೂಪವಲ್ಲ.
ಮತ್ತೊಂದು ಮಜಾ ವಿಷ್ಯ ಅಂದರೆ, ನಾನು ಮುಂಬಯಿ ಬರೋ ತನಕ ಈ ಅಲಂಕಾರಕ್ಕೂ ನನಗೂ ಸಂಭಂಧವೇ ಇರಲ್ಲಿಲ್ಲ. ಮಧ್ಯ ಮಧ್ಯ ತಲೆ ಬಾಚುವುದು, ಬಸ್ಸಿನಲ್ಲಿ ಅಫೀಸಿಗೆ ಬಂದಾದ ಮೇಲೆ ಫ್ರೆಶ್ ಅಪ್ ಆಗುವುದು, ಈ ಕಾಡಿಗೆ, ಕ್ರೀಮುಗಳು ಇದನ್ನೆಲ್ಲಾ ಉಪಯೋಗಿಸ್ತಾನೆ ಇರಲಿಲ್ಲ. ನನಗೆ ಮೊದಲಿನಿಂದಲೂ ಈ ಚೆನ್ನಾಗಿ ಕಾಣುವ ಪ್ರಕ್ರಿಯೆ ಅಂದರೆ ಇಷ್ಟವಿರಲಿಲ್ಲ. ಸ್ವಲ್ಪ ಚೆನ್ನಾಗಿ ಮಾಡಿಕೊಂಡರೂ ಯಾರದ್ದೋ ಕಣ್ಣು ಬಿದ್ದು, ಅವನಿಗೆ ಮೈ ಬಿಸಿ ಏರುವುದು ನನಗೆ ಬೇಕಾಗಿರಲಿಲ್ಲ. ನನಗೆ ‘ಹೆಣ್ಣು’ ಅಂತ ನೋಡಿದರೆ ಈಗಲೂ ಕೋಪ ಬರುತ್ತೆ. ಎಲ್ಲರೂ ಮನುಷ್ಯರು ಅಂತ ನೋಡಿ ಅಂತ ನಾನು. ಇಲ್ಲಿ ಬಂದು ಮನೇಲಿದ್ದಾಗ ನೆಟ್ನಲ್ಲಿ ಸುಮಾರು ಜನ ಸ್ನೇಹಿತರಾದ ಮೇಲೆ, ಈ ಡೆಕಾರ್ ಬ್ಲಾಗುಗಳನ್ನೆಲ್ಲಾ ಓದುತ್ತಾ ಇದ್ದ ಹಾಗೆ ಒಂದು ವಿಷ್ಯ ಅರ್ಥ ಆಯಿತು. ಅಲಂಕಾರ ಮಾಡಿಕೊಳ್ಳೊದು ತಪ್ಪೇನು ಅಲ್ಲ ಅಂತ. ಅದು ಸಹ ಒಂದು ಅಭಿವ್ಯಕ್ತಿ. ನಾವೇನು ಡ್ರೆಸ್ ಹಾಕಿಕೊಳ್ತೆವೆ, ಹೇಗೆ ನಮ್ಮನ್ನು ನಾವು ತೋರಿಸಿಕೊಳ್ಳುತ್ತೇವೆ, ಇದೆಲ್ಲದೂ ಸೇರಿ ಒಂದು ವ್ಯಕ್ತಿತ್ವ ಅಂತ ಬರುತ್ತೆ ಅಂತ. ನಾನು ಹೇಗೆ ಇರ್ತೇನೆ ಅದು ನನ್ನ ಜೀವನದ ಬಗೆಗಿನ ಒಲುವು ತೋರಿಸುತ್ತೆ ಅಂತ. ಕೆಲವೊಬ್ಬರಿಗೆ ‘ಸೆಕ್ಸಿ’ ಅಂತ ಬಿಂಬಿಸಿಕೊಳ್ಳುವುದು ಇಷ್ಟ, ಮತ್ತೊಬ್ಬರಿಗೆ ‘ಆರ್ಟಿ’ ಅಂತ, ಅವರವರ ಅಭಿರುಚಿಗೆ ತಕ್ಕಂತೆ ಉಡುಪುಗಳನ್ನು ಹಾಕಿ ಕೊಳ್ತಾರೆ ಅಂತ.
ನಾನು ಈಗ ಜಾಸ್ತಿ ಅಲಂಕಾರ ಮಾಡಿಕೊಳ್ಳದಿದ್ದರೂ ನನ್ನನ್ನು ನಾನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದೆ. ಮೊದಲು ಹ್ಯಾಂಡ್ ಶೇಕ್ ಮಾಡಲೂ ನಿರಾಕರಿಸುತ್ತಿದ್ದ ನಾನು ಈಗ ಸಹಜವಾಗಿಯೇ ಕೈ ಕುಲುಕುತ್ತೇನೆ. ಕೈ ಮುಟ್ಟಿ ಅವನಿಗೇನೋ ಅನ್ನಿಸಿದರೆ ಅದು ಅವನ ತಲೆಬಿಸಿ. ನನಗಿಲ್ಲ. ಎದುಗಿರುವನು ಮೈಯೆಲ್ಲ ಮುಚ್ಚಿಕೊಂಡಿದ್ದರೂ ಸ್ವಲ್ಪ ಜಾಸ್ತಿ ನೋಡ್ತಾ ಇದ್ದರೆ ಕೈ ಆಡಿಸಿ, ಏನಾಯ್ತೋ ಮಗಾ ಅಂತ ಕೇಳಿ ಬಿಡ್ತೇನೆ. ಮುಂಬಯಿನಲ್ಲಿ ಹುಡುಗಿಯರಿಗೆ ತುಂಬಾ ಸೇಫ್ ಇರೋ ಕಾರಣ ಎಲ್ಲಿ ಹೋದ್ರು ಬೆಂಗಳೂರಿನ ತರಹ, ಶಿರಸಿಯ ತರಹದ ಆಸೆ ಹತ್ತಿದ ಬೆಂಕಿಯ ಕಣ್ಣುಗಳು ಕಾಣುವುದು ತುಂಬಾನೇ ಕಮ್ಮಿ. ಆ ಕಾರಣ ತಲೆಬಿಸಿ ಇಲ್ಲದೇ ಆರಾಮಾಗಿ ಖುಶಿಯಿಂದ ಓಡಾಡ್ಕೊಂಡು ಇರಬಹುದು.
ಸೆಪ್ಟೆಂಬರ್ 25, 2014 ರಲ್ಲಿ 12:50 ಫೂರ್ವಾಹ್ನ |
ನೀಲಾಂಜಲ,
ನಿಮ್ಮ ಲೇಖನದ ಅನುಭವಗಳು ನನಗೂ ಆಗಿವೆ ಅಂದರೆ ಜನರಲೈಸೇಶನ್ ಅಲ್ಲ. ನಿಮ್ಮ ಬರವಣಿಗೆಯಲ್ಲಿ ನನ್ನನ್ನು ನಾನು ಸಮೀಕರಿಸಿಕೊಂಡದ್ದೂ ಅಂತಲ್ಲ. ಮುಚ್ಚಿಟ್ಟುಕೊಂಡು ಉರಿಯುತ್ತಿದ್ದ ನನ್ನ ಭಾವಗಳನ್ನೂ ಹಂಚಿಕೊಂಡೆ.
ಇದಕ್ಕೆ ಕೊನೆಯಿದೆಯೆ? ಗೊತ್ತಿಲ್ಲ. ವ್ಯತ್ಯಯ? ಅದೂ ಗೊತ್ತಿಲ್ಲ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ಇಂಥವಕ್ಕೆಲ್ಲ ಸಡ್ಡುಹೊಡೆವ ಹಾಗೆ ಧೀರರಾಗಿ ಬೆಳೆಸೋಣ ಅಂದರೆ ಸಾಧ್ಯವೆ? ಅವರೊಳಗಿನ ನವಿರು ಭಾವ ಜಡ್ಡುಗಟ್ಟಿದರೆ? ಗಂಡು ಸಮಾಜದ ಮೇಲೆ ದ್ವೇಷ ಅಸಡ್ಡೆ ಬೆಳೆದರೆ? ಈ ಎಲ್ಲ ಪ್ರಶ್ನೆಗಳೂ ಸದಾ ಕಾಡುತ್ತವೆ.
LikeLike
ಅಕ್ಟೋಬರ್ 16, 2014 ರಲ್ಲಿ 5:01 ಅಪರಾಹ್ನ |
” ಅವರೊಳಗಿನ ನವಿರು ಭಾವ ಜಡ್ಡುಗಟ್ಟಿದರೆ?” ಇದುವೇ ನನಗೆ ಅತ್ಯಂತ ಭಯಪಡಿಸುವ ಸಂಗತಿ .. ನಾವು ಹೇಗೋ ಬೆಳೆದು ಬಂದೆವು..ನಮ್ಮ ಮಕ್ಕಳ ಮುಂದಿನ ಪೀಳಿಗೆಯ ಅವಸ್ಥೆ ಹೇಗೋ ಏನೋ.. Agree so much with u ನೀಲಾಂಜಲರವರೆ…
LikeLike
ಸೆಪ್ಟೆಂಬರ್ 26, 2014 ರಲ್ಲಿ 8:23 ಅಪರಾಹ್ನ |
Agree with you. But then, `Bettada melondu maneya madi….’!
LikeLike