ಮೊಲಕ್ಕೆ ಮೂರೇ ಕಾಲು

ಭಕ್ತಿ ಅನ್ನೋದು ನನಗೆ ಏಕೆ ಬಂದಿಲ್ಲ ಅಂತ ಯೋಚಿಸಿ ನಗು ಬರ್ತಿದೆ. ಈಗಷ್ಟೇ ಟಿವಿ ಯಲ್ಲಿ, ಮೂರ್ತಿಗಳ ಮೇಲೆ ಸಹಸ್ರಧಾರ ಸೇವೆ ನಡೀತಾ ಇತ್ತು. ಅಯ್ಯೋ ಕರ್ಮವೇ ಅಂದುಕೊಂಡೆ. ಜೊತೆಗೆ ಅಮ್ಮನ ನೆನಪು ಬಂತು. ಪಾಪ ನನ್ನಮ್ಮ. ನಾನು ಹೊಟ್ಟೆಯಲ್ಲಿ ಇರಬೇಕಾದಾಗ ರಾಮಾಯಣ, ಮಹಾಭಾರತ, ಸಹಸ್ರನಾಮ, ಮತ್ತೆನ್ತೋ ಎಲ್ಲವನ್ನೂ ಶ್ರಧ್ಧೆಯಿಂದ ಮಾಡುತ್ತಿದ್ದರಂತೆ. ಮಾಡಿದ್ದು ಸ್ವಲ್ಪ ಜಾಸ್ತಿಯಾಗಿ ದೇವರು ಎಂದರೆ ಯಾರು ಎಂದು ಕೇಳುವ ನಾನು ಹುಟ್ಟಿಬಿಟ್ಟೆ.

ಅಯ್ಯೋ, ಬಾಲ್ಯದಲ್ಲಿ ಈ ದೇವರು ಯಾರು ಅಂತ ಮಾಡಿದ ವಾಗ್ಯುದ್ಧಗಳ ಲೆಕ್ಕ ಕೇಳಬೇಡಿ. ಹೊಡೆಸಿಕೊಂಡಿದ್ದು ಇದೆ. ಬುದ್ಧಿ ಸ್ವಲ್ಪ ಜಾಸ್ತಿನೇ ಬೆಳೆದು, ದೇವರಿಗೆ ದೀಪ ಹಚ್ಚೋದು, ನಮಸ್ಕಾರ ಮಾಡೋದು ಈ ತರಹ ಸಣ್ಣ ಸಣ್ಣ ಚಟುವಟಿಕೆಗಳಿಗೂ ರಂಪಾಟ ವಾಗುತ್ತಿತ್ತು. ಒಂದು ಸಲ ಮಠಕ್ಕೆ ಹೋಗಿ ಕ್ಯೂನಲ್ಲಿ ನಿಂತು ಸ್ವಾಮಿಗಳು ಕೊಟ್ಟ ತೀರ್ಥವನ್ನು ತೆಗೆದುಕೊಂಡು ಬಂದು ಸ್ವಲ್ಪ ದೂರ ಹೋಗಿ ಚೆಲ್ಲಿ ಸರಿಯಾಗಿ ಬಿದ್ದಿತ್ತು. ಸುಮಾರು ದಿನಗಳವರೆಗೆ ಮನೆಯಲ್ಲಿ ಕೋಪ ಇಳಿದಿರಲಿಲ್ಲ.

ನವೋದಯದಲ್ಲೂ ದೇವರು ಇಲ್ಲ ಅನ್ನೋ ಚರ್ಚೆ ಜೋರಾಗೇ ನಡಿತಿತ್ತು. ಒಂದು ಮೇಡಂ ನನಗೆ ದೇವರು ಇದ್ದಾನೆ ಅಂತ ತಿಳಿಸಲೇಬೇಕು ಎಂದು ಹಟಕ್ಕೆ ಬಿದ್ದಿದ್ದರು. ಬರೀ ತರ್ಕಗಳೇ. ಪ್ರಪಂಚದಲ್ಲಿ ಎಲ್ಲದಕ್ಕೊ ಮೂಲ ಅಂತ ಇದೆ ಅಂದರೆ, ಈ ದೇವರು ಅನ್ನೊದಕ್ಕೋ ಮೂಲ ಇರಬೇಕಲ್ಲ ಅಂತ ನಾನು, ಹಾಗೆಲ್ಲ ಕೇಳಬಾರದು ನಂಬಬೇಕು ಅಂತ ಅವರು. ಇನ್ನೂ ನೆನಪಿದೆ, ಹತ್ತನೇ ಕ್ಲಾಸ್ ಅದಮೇಲೆ ನವೋದಯ ಬಿಡಿಸಿ ಮನೆಗೆ ತಂದಿಟ್ಟುಕೊಂಡಿದ್ದರು. ಕಾಲೇಜು ಊರಲ್ಲೇ ಆಗಲಿ ಅಂತ. ಅಥವಾ ನನ್ನ ಯೋಚನೆ ಬದಲಾಗಬಹುದು ಎಂಬ ಆಸೆ ಇತ್ತೇನೋ.  ಹನ್ನೊಂದು ಮತ್ತು ಹನ್ನೇರಡನೇ ಕ್ಲಾಸಿನಲ್ಲಿ ಮನೆಯಲ್ಲಿ ಸಕತ್ ರಂಪ ಮಾಡಿದ್ದೇನೆ. ನಾನು ಹೇಳೋದು ಅವರಿಗೆ ಅರ್ಥ ಆಗಲ್ಲ, ಅವರು ಹೇಳಿದ್ದು ನಾನು ಪಾಲಿಸಲ್ಲ. ಆ ಹೊತ್ತಲ್ಲಿ ಬರೀಯೋ ಹುಚ್ಚು ಹತ್ತಿಕೊಂಡಿತ್ತು. ಈ ದೇವರು ಅನ್ನೋದು ಎಷ್ಟು ದೊಡ್ಡ ಸುಳ್ಳು ಅಂತ ಒಂದತ್ತು ಪುಟದ ಪ್ರಬಂಧ ಬರೆದಿದ್ದೆ. ಅದನ್ನು ನನ್ನಮ್ಮ ಯಾವಾಗ ಓದಿದರೋ, ಏನೋ, ಮರಳಿ ನನ್ನ ಕೈ ಸೇರಲಿಲ್ಲ.

ಹೆಚ್ಚಾಗಿ ಕಾಲೇಜಿಗೆ ಬಂದಮೇಲೆ ಈ ತರ್ಕಗಳಿಂದ ಹೊರಬಂದು ಸುಮ್ಮನಾಗಿಬಿಟ್ಟೆ. ಏಕೆಂದರೆ ನಾನು ಹೇಳಿದ್ದು ಅವರು ಕೇಳೋಲ್ಲ, ಅವರು ಹೇಳಿದ್ದನ್ನು ನಾನು ನಂಬಲ್ಲ. ಜಾಸ್ತಿ ಸ್ನೇಹಿತರ ಹತ್ತಿರ ಮಾತಾಡಿದರೆ ಮತ್ತದೇ ಕೊನೆಯ ಸಾಲು, ‘ಹೌದು, ನಿನ್ನ ಮೊಲಕ್ಕೆ ಮೂರೇ ಕಾಲು’ ಅಂತ. ಸುಮ್ಮನೆ ಇರೊದೇ ಬೆಸ್ಟ್.

ಎಲ್ಲಕ್ಕಿಂತ ಮಜಾ ಇರೋದು ನನ್ನ ಹುಡುಗನದ್ದು. ಮದುವೆ ಆದ ಮೇಲೆ ಗೊತ್ತಾಗಿದ್ದು, ಅವರ ಮನೆಲಿ ಪೂಜೆ-ಪುನರ್ಸ್ಕಾರ ಜಾಸ್ತಿ ಅಂತ. ಹಾಗಂತ ನನ್ನ ಅಮ್ಮನ ಮನೆಲಿ ಕಡಿಮೆ ಏನು ಇರಲಿಲ್ಲ. ಆದರೆ ಬರೋ ಪುರೋಹಿತರ ಜೊತೆ ಇದು ಏಕೆ ಹೀಗೆ, ಅದು ಯಾಕೆ ಹಾಗೆ ಅನ್ನೋದನ್ನೆಲ್ಲ ಕೇಳಬಹುದಿತ್ತು. ಇಲ್ಲಿ ಹಾಗಲ್ಲ. ಚುಪ್. ಇವನು ಪಕ್ಕಕ್ಕೆ ನಿಂತರೆ ಅಷ್ಟೇ ದೇವರಿಗೊಂದು ನಮಸ್ಕಾರ ಸಿಗುತ್ತೆ. ಅವನು ಕಂಡರೆ ನನಗೆ ಇಷ್ಟ. ನಾನು ಇದಕ್ಕೆಲ್ಲ ವಿರೋಧಿಸಿದರೆ ಅವನ ಕಣ್ಣಲ್ಲಿ ನೀರು ಬರುತ್ತೆ. ಕೋಪ, ಮಾತು ಎಲ್ಲ ತಡೆದುಕೊಳ್ಳ ಬಹುದು, ಆದರೆ ಈ ಮೌನ, ಕಣ್ಣೀರು, ಸಾಧ್ಯವಿಲ್ಲ. ಅದಕ್ಕೆ ಚುಪ್. ಈ ದೇವರು ಏನಾದರೂ ಆಗಿ ಹೋಗಲಿ ಅಂತ.

ಒಳ್ಳೆ ವಿಷಯ ಅಂದ್ರೆ ಇಲ್ಲಿ ಮನೆಲಿ ಏನು ನಿರ್ಬಂಧವಿಲ್ಲ. ದೇವರು ಚಿತ್ರ ಇಟ್ಟು ಅದಕ್ಕೆ, ಊದಿನಕಡ್ಡಿ, ದೀಪ ಬೆಳಗೋ ಕಾರ್ಯಕ್ರಮವೇ ಇಲ್ಲ. ರಂಗೋಲಿನೂ ಹಾಕಲ್ಲ. ನನ್ನ ಜೊತೆ ಇದ್ದ ಇಣಚಿ ಕಳಿಸಿದ ಪಾಠ ಇದು. ಮನಸ್ಸಲ್ಲಿ ಸಕಲ ಜೀವ ಜಂತುಗಳ ಮೇಲೆ ಪ್ರೀತಿ ಇಲ್ಲದೇ ಹೋದರೆ, ಯಾವ ರಂಗೋಲಿ, ಯಾವ ಹೀಲಿಂಗೂ, ಯಾವ ರೇಖಿಯೂ, ಯಾವ ಧ್ಯಾನವೂ ಏನು ಪ್ರಯೋಜನ? ಜಗತ್ತು ಮತ್ತು ನಾನು ಇವುಗಳ ಸಂಬಂಧ ಅರಿಯದೇ ಯಾವುದೋ ಚಿತ್ರ, ವಿಗ್ರಹ, ಬಣ್ಣ, ಯಾವುದೋ ಒಂದರ ಹಿಂದೆ ಬಿದ್ದು ಏನು ಪ್ರಯೋಜನ? ನನಗೆ ತಿಳಿಯದು. ಅದು ಹೇಗೆ ಅಂದರೆ, ನನ್ನ ಕೈಯಲ್ಲಿ ನಡುಗುತ್ತ ಇದ್ದ ಅಳಿಲಿನ ಬೆನ್ನನ್ನು ಹುಚ್ಚು ನಂಬಿಕೆಯಿಂದ ಗಟ್ಟಿಯಾಗಿ ಮೂರು ಸಲ ಒತ್ತಿ ಓಡಿ ಹೋದ ಆ ಹುಡುಗಿಯ ತರಹ. ಆಕೆ ನನ್ನಲ್ಲಿದ್ದ ಅಳಿಲನ್ನು ‘ಮುಟ್ಟಲಾ’ ಅಂದಾಗ ಅದು ಪ್ರೀತಿಯಿಂದ, ಕುತೂಹಲದಿಂದ ಅಂದು ಕೊಂಡಿದ್ದು ನನ್ನ ಮೂರ್ಖತನವಾಗಿತ್ತು.

ನನಗೆ ಬಸವರನ್ನು, ಗಾಂಧೀಜಿಯನ್ನು, ಅಂಬೇಡ್ಕರರನ್ನು, ವಿವೇಕಾನಂದರನ್ನು, ಬುದ್ಧನನ್ನು ಮೂರ್ತಿ ರೂಪವಾಗಿ ಪೂಜಿಸುವ ಮಂದಿಗಳನ್ನು ಕಂಡಾಗ ಮತ್ತೆ ಮತ್ತೆ ಈ ಪ್ರಶ್ನೆ ಕಾಡುತ್ತದೆ. ಕೇವಲ ದೇಹವಲ್ಲದೆ, ಆತ್ಮದ ಬಗ್ಗೆ ಚರ್ಚಿಸುತ್ತಿದ್ದ, ಸಿದ್ಧಾಂತ ಬರೆಯುತ್ತಿದ್ದ ನನ್ನ ಜನರೆಲ್ಲಿ ಎಂದು. ಹಾಗೇಯೆ ಈಗ ಕಟ್ಟುವ ದೇಗುಲಗಳ ಬಗ್ಗೆಯೂ. ಈ ಮೂರ್ತಿಯನ್ನು ಬಿಟ್ಟು ಹೊರಗೆ ಯಾವಾಗ ಬರ್ತೀವಿ ನಾವು?

ದೇವರು ಯಾರು ಎಂದು ಕೇಳುವ ಹಾಗೆಯೇ ಇಲ್ಲ. ನನ್ನ ದೇವರು ಅಂದರೆ ಹೀಗೆ ಎಂದು ಹೇಳಿದರೆ ಮೊಲಕ್ಕೆ ಮೂರೇ ಕಾಲು.

3 Responses to “ಮೊಲಕ್ಕೆ ಮೂರೇ ಕಾಲು”

 1. Sushrutha Dodderi Says:

  🙂 ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಮ್ಮೂ…. 😀

  ನಾನೂ ಬುದ್ದಿ ಬೆಳೆದಮೇಲೆ ಆಸ್ತಿಕರ ಜೊತೆ ವಾದ ಮಾಡೋದು ಬಿಟ್ಟಿದಿ. ಅದು ಅವರು ನಾಸ್ತಿಕರ ಜೊತೆ ವಾದ ಮಾಡುವಷ್ಟೇ ಮೀನಿಂಗ್ಲೆಸ್ಸು. ’ನೀ ಯಾಕೆ ಪೂಜೆ ಮಾಡಲ್ಲ, ದೇವರಿಲ್ಲ ಅಂತಾನಾ?’ ಅಂತ ಯಾರಾದ್ರೂ ಕೇಳಿದ್ರೆ, ದೇವರಿಲ್ಲ ಅಂತ ನಾ ಹೇಳಲ್ಲ. ಸಧ್ಯಕ್ಕೆ ನನಗೆ ದೇವರು ಬೇಡ ಅಂತ ಹೇಳ್ತಿ. ಮೊನ್ಮೊನ್ನೆವರೆಗೂ ದೇವರ ಕಡೆ ತಲೆಯೆತ್ತಿ ನೋಡದ ನನ್ನಪ್ಪ ಇತ್ತೀಚೆಗೆ ಮಡಿ ಉಟ್ಕೊಂಡು ಪೂಜೆ ಮಾಡ್ತಿರೋದನ್ನ ನೋಡಿದಾಗ, ಯಾರಿಗ್ಗೊತ್ತು, ಮುಂದೊಂದು ದಿನ ನಾನೂ…. ?!

  ನನ್ನ ಪ್ರಕಾರ ಆಧ್ಯಾತ್ಮ ನನ್ನ ಕೊನೆಯ ಡೆಸ್ಟಿನೇಶನ್ನು. ಬೇರೆ ಎಲ್ಲ ಕಡೆ ಸುಖ/ನೆಮ್ಮದಿಯ ಅನ್ವೇಷಣೆ ಮುಗಿದಮೇಲೆ ನಾನು ಆ ಕಡೆ ವಾಲ್ತೀನೇನೋ. ಇವೆಲ್ಲ ಅಲ್ಲದ್ದು ಇನ್ನೇನೋ ಇದೆ ಅನ್ನೋ ನಂಬಿಕೆಗಿಂತ ದೊಡ್ಡದು, ಗಾಢವಾದ್ದು ಇನ್ನೇನಿದೆ? ಬಹುಶಃ ಸಂಸಾರ ವ್ಯಾಮೋಹ, ಸಾಹಿತ್ಯ, ಕಲೆ, ಸಂಗೀತಗಳಿಗಿಂತ ಡಿವೈನ್ ಆದದ್ದು ದೇವರ ಮೇಲಿನ ನಂಬಿಕೆ. ಅದನ್ನ ಶುರು ಮಾಡಿಕೊಂಡ್ರೆ, ಅದರ ಅನ್ವೇಷಣೆಗೆ ತೊಡಗಿದರೆ ನಾನು ವಾಪಸ್ ಬರೋದು ಡೌಟು. ಸೋ, ಸದ್ಯಕ್ಕೆ ನಂಗೆ ಅದು ಬೇಡ.

  Like

 2. Sunaath Says:

  ಗುಹೇಶ್ವರ ಸತ್ತ ; ನಾನು ಉಳಿದೆ.
  —————-ಅಲ್ಲಮ ಪ್ರಭು

  Like

 3. shruthi Says:

  Loved reading this post:))) Especially because of me too being an atheist…

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: