ಒಂದು ದಿನದ ಡೈವೋರ್ಸ್

ಹೌದು, ಮೊನ್ನೆ ಓದಿದ ಶ್ರೀರಾಮರ ಕತೆಯಲ್ಲಿದ್ದಂತೆ ಇವಳಿಗೂ ಹುಕ್ಕಿ ಬಂದಿತ್ತು. ಸೀದಾ ಮೊಬೈಲ್ ಹಿಡಿದು ಅವನಿಗೆ ಕಾಲ್ ಒತ್ತಿದಳು. ನಿದ್ದೆಗಣ್ಣಿನಲ್ಲಿ ಆಕಳಿಸುತ್ತಾ ಹಲೋ ಅಂದವನಿಗೆ ಇವತ್ತು ಸುಂದರವಾಗಿ ಗುಡ್ ಮಾರ್ನಿಂಗ್ ಸಹ ಹೇಳದೆ ಕೇಳಿದಳು, ‘ಹೇ, ನನಗೆ ಡೈವೋರ್ಸ್ ಕೊಡ್ತಿಯಾ?’  ಆಕಡೆ ಫೋನ್ ಎತ್ತಿದ್ದ ಅವನಿಗೆ ಏನೂ ತಿಳಿಯದೆ ತಲೆಬಿಸಿಯಾಗಿ, ‘ಥೋ, ಬೆಳ್ಳಂಬೆಳಗ್ಗೆ ಏನೀದು ! ನಿನ್ನ ತಲೆ’ ಎಂದು ಫೋನ್ ಕಟ್ ಮಾಡಿ, ಸೈಲೆನ್ಸಿಗೆ ಹಾಕಿ ದುಪ್ಪಡಿಯನ್ನೆಳೆದು ಹೊರಳಿ ಮಲಗಿಬಿಟ್ಟ. ಇತ್ತ ಕಡೆ ಹಾಗೆ ಹೇಳಿ ನಗುತ್ತಿದ್ದ ಇವಳಿಗೆ ಅವನು ತಕ್ಷಣ ಕಾಲ್ ಕಟ್ ಮಾಡಿದ್ದು ಬೇಸರವಾಯಿತು, ಮತ್ತೆ ಮಾಡಿದಾಗ ಎತ್ತದಿದ್ದು ನೋಡಿ ಮೂತಿ ಚೂಪ ಮಾಡಿಕೊಂಡಳು. ಹೋಗಲಿ, ಮತ್ತೆ ಮಾಡಿದಾಗ ವಿಷಯ ಹೇಳಿದರಾಯಿತು ಎಂದು ಸಮಾಧಾನ ಮಾಡಿಕೊಂಡಳು.

ಇವತ್ತು ಬೆಳಗ್ಗೆ ತಿಂಡಿ ತಿನ್ನುತ್ತಾ ಕೆಫೆಟೆರಿಯಾದಲ್ಲಿ ಹರಟೆ ಹೊಡೆಯುತ್ತಿದ್ದಾಗ ಈ ವಿಷಯ ಪ್ರಸ್ತಾಪವಾಗಿತ್ತು. ಎತ್ತಿದ್ದು ರಾಧಿಕಾಳೇ. ಅವಳ ಅಕ್ಕನ ಕೇಸಿನಿಂದಾಗಿ ಅವಳಿಗೆ ಈ ವಿಷ್ಯದ ಬಗ್ಗೆ ಜಾಸ್ತಿನೇ ತಿಳಿದಿತ್ತು. ಇವಳಿಗೆ ಗೊತ್ತಿದ್ದಂತೆ ತಮ್ಮಿಬ್ಬರ ಮದುವೆ ರಿಜಿಸ್ಟಾರ್ ಆಗಲು ತೆಗೆದುಕೊಂಡಿದ್ದು ಇಪ್ಪತ್ತು-ಮೂವತ್ತು ನಿಮಿಷಗಳಿರಬಹುದು. ಮದುವೆ ಫೋಟೋ, ಕರೆಯೋಲೆ ತೋರಿಸಿ, ಕೇಳಿದ್ದಲ್ಲಿ ಸಹಿ ಮಾಡಿ ಎರಡೆರಡು ಕೋಣೆಗಳ ನಡುವೆ ಆ ಕಾಗದಗಳು ತಿರುಗಾಡಿ ಮದುವೆ ರಿಜಿಸ್ಟಾರ್ ಆಗಿತ್ತು. ಆ ರಿಜಿಸ್ಟಾರನ್ನು ಮುರಿಯಲು ಎರಡರಿಂದ ಆರೋ- ಏಳೋ ವರ್ಷಗಳು ಕೋರ್ಟ ಅಲೆದಾಡಿದರೆ ಸಿಗುವಂತದ್ದು ಎಂದು ಇವತ್ತು ಗೊತ್ತಾದಾಗ ಇವಳಿಗೆ ಈ ಮದುವೆ ಅನ್ನೋದು ಏಷ್ಟು ಸೀರಿಯಸ್ ಬಿಸಿನೆಸ್ ಎಂದು ಅರಿವಾಗಿದ್ದು. ತನಗೆ ಬೇಕು-ಬೇಡ ಅಂದಾಗಲೆಲ್ಲ  ಬಿಡುವಂತಿಲ್ಲ.  ಅವಳಿಗೆ ಅವನ ಜೊತೆ ಹಾಗೆ ಇದ್ದಿದ್ದರೂ ಏನು ಅನ್ನಿಸುತ್ತಿರಲಿಲ್ಲ. ಅವನು, ಮನೆಯವರು ಎಲ್ಲ ಹೇಳಿ ಮದುವೆ ಅಂತ ಮಾಡಿದ್ದರು. ಆಕೆಗೆ ಮದುವೆ ಆಗುತ್ತಿರುವಾಗಲೂ ಸಂಭ್ರಮ ಅಂತೇನೂ ಅನ್ನಿಸುತ್ತಿರಲಿಲ್ಲ. ಇಬ್ಬರು ಒಬ್ಬರಿಗೊಬ್ಬರು ಅಂತ ಬದುಕೋಕೇ ಇದೆಲ್ಲ ಏನಕೇ ಬೇಕು ಅಂತ ಅರ್ಥವಾಗದೆ ಸುಮ್ಮನಾಗಿದ್ದಳು.

ರಾಧಿಕಾ ಹೇಳಿದ ಇನ್ನೊಂದು ವಿಷಯವನ್ನು ಕೇಳಿ ಈಕೆಗೆ ಹುಡುಗರ ಮೇಲೆ ತುಂಬಾನೇ ಕನಿಕರವಾಯಿತು. ಗಂಡ ಡೈವೋರ್ಸ್ ಕೊಟ್ಟರೆ, ಹೆಂಡತಿಗೆ ತನ್ನ ಆದಾಯದ ಶೇಕಡಾ ೫೦ ಭಾಗ ಕೊಡಬೇಕಂತೆ, ಅದೂ ಆಕೆ ಕೆಲಸ ಮಾಡುತ್ತಿಲ್ಲವಾದಲ್ಲಿ. ಆಸ್ತಿಯ ಅರ್ಧ ಭಾಗವೂ ಆಕೆಗೆ ಸೇರುತ್ತದೆಯಂತೆ. ಇವಳು ಪಾಪ ಅಂದಿದ್ದು ಕೇಳಿ ರಾಧೆಗೆ ಸಿಟ್ಟು ಬಂತು. ಏಷ್ಟು ಜನ ಗಂಡಸರು ಹೆಂಡತಿಯನ್ನು ಕಾಲ ಕಸಕ್ಕಿಂತ ಕೆಳಗೆ ಅಂತ ನೋಡುತ್ತಾರೆ, ಮತ್ತೊಬ್ಬಳು ಸಿಕ್ಕಳು ಅಂತ ಆರಾಮವಾಗಿ ಡೈವೋರ್ಸ್ ಕೊಟ್ಟು ಹೋಗೋ ಹಾಗಿಲ್ಲ. ಅಂತವರಿಗೆಲ್ಲ ಈ ತರಹ ಕಾನೂನು ಸರಿಯೇ ಅಂದಳು. ಇದು ಇವಳಿಗೆ ಹೌದೆನಿಸಿತು. ಆಕೆ ಹೇಳುತ್ತಿದ್ದ ವಿಷಯ ಕೇಳುತ್ತಿದ್ದಂತೆ , ಮದುವೆ ಒಂದು ಬಂಧನ ಅನ್ನೋದು ಗಟ್ಟಿಯಾಗತೊಡಗಿತು. ಅಷ್ಟರಲ್ಲಿ ಅವನ ನೆನಪಾಗಿ ಮದುವೆ ಅಂದರೆ ಹೀಗೆಲ್ಲ ಇದೆ ಎಂದೆಲ್ಲ ಆತನಲ್ಲಿ ಹೇಳಬೇಕು ಅಂತಾಗಿ ತಮಾಷೆಯಿಂದ ಕಾಲ್ ಮಾಡಿದ್ದಳು.

ಮಧ್ಯಾಹ್ನ  ಆಗುತ್ತಿದ್ದಂತೆ ಅವನ ಕಾಲ್ ಇನ್ನೂ ಬಂದಿಲ್ಲವೆಂದು ನೆನಪಾಯಿತು. ಇವನು ಯಾವತ್ತೂ ಹೀಗೆಯೇ. ತಾನೇ ಮೇಲೆ ಬಿದ್ದು ವಿಚಾರಿಸಿಕೊಳ್ಳಬೇಕು. ನಾನಿದ್ದೀನೋ ಸತ್ತಿದ್ದೀನೋ ಅನ್ನೋದನ್ನು ಕೇಳೊದಿಲ್ಲ ಎಂದು ಮತ್ತೆ ಕಾಲ್ ಬಟನ್ ಒತ್ತಿದ್ದಳು. ಮೂರು ರಿಂಗ್ ಆದ ಮೇಲೆ ಕಟ್ ಆಯಿತು, ಜೊತೆಗೆ ಅಯೆಂ ಇನ್ ಮೀಟಿಂಗ್ ಅಂತ ಮೆಸೇಜ್ ಅದಕ್ಕೆ ಒತ್ತಿಕೊಂಡು ಬಂತು. ತುಟಿ ಓರೆ ಮಾಡಿ ಇವನೀಷ್ಟೆ ಎಂದು ಮಾಡಲಿದ್ದ ಕೆಲಸದ ಕಡೆ ತಲೆ ಓಡಿಸಿದಳು. ಊಟಕ್ಕೆ ಹೋದಾಗ ಜೊತೆ ಜೊತೆಗೆ ಓಡಾಡಿಕೊಂಡಿದ್ದ ಎಲ್ಲ ಜೋಡಿಗಳನ್ನು ಗುಮ್ಮನೆ ಗಮನಿಸಿ ಅರ್ಜೆಂಟಾಗಿ ತಿಂದು ಎದ್ದು ಬಂದಳು.

ಟೀ ಟೈಮ್ ಆಗುತ್ತಿದ್ದಂತೆ ಆಕೆಯ ಮನಸ್ಸು ಅವಳ ಕನಸಿನ ರಾಜಕುಮಾರನೇಡೆ  ಓಡತೊಡಗಿತು. ಅವನು ಹೇಗಿದ್ದಾನೆ, ಎಲ್ಲಿದ್ದಾನೆ ಇವಳಿಗೆ ಒಂದೂ ಗೊತ್ತಿಲ್ಲ. ಇವನಲ್ಲಿ ಸಿಗದ ಎಲ್ಲವೂ ಆತನಲ್ಲಿ ಇತ್ತು. ಆತ ಇವಳ ಕನಸಲ್ಲಿ ಮಾತ್ರ ಬರುತ್ತಿದ್ದ. ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ ಈಕೆ. ಹೇಳಿದರೆ ಅದಕೊಂದು ಹೆಸರು ಕಲ್ಪಿಸಿ, ಅದಕ್ಕೊಂದು ಸಂಬಂಧ ಅಂತ ಹಚ್ಚಿ ಎಲ್ಲವನ್ನೂ ಹಾಳು ಮಾಡುತ್ತಾರೆಂಬ ಭಯ.. ಇವನಲ್ಲಿ ಕೋಪ ಬಂದಾಗ ಅವನಲ್ಲಿ ಹೇಳಿ ಅತ್ತು ಕೊಳ್ಳುತ್ತಿದ್ದಳು. ಅವನೋ ಕನಸಿನವನು. ಈಕೆ ಹೇಳಿದ್ದೆಲ್ಲ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ. ಅವಳಿಗೆ ಸಮಾಧಾನ ಮಾಡಲು ಆತನಿಗೆ ಈಕೆಯದ್ದೇ ಕೈ ಬೇರೆ ಬೇಕಾಗಿತ್ತು.

ಇವತ್ತು ಯಾರೊಡನೆ ಹೆಚ್ಚು ಮಾತಾಡದೆ ಒಬ್ಬಳೇ ಸೀರಿಯಸ್ ಆಗಿ ಚಹಾ ಕುಡಿದು ಮುಗಿಸಿದ್ದಳು. ಇವನನ್ನು ಬಿಟ್ಟು ಬಿಡಬೇಕೆಂದು ಈಕೆ ತೀರ್ಮಾನ ಮಾಡಿ ಆಗಿತ್ತು. ಇವನಿಗೆ ತನ್ನ ಕಂಡರೆ ಅಷ್ಟಕಷ್ಟೇ. ಅವನು ಕಂಡ ಕನಸಿನ ಹುಡುಗಿ ತಾನಲ್ಲವಲ್ಲ. ಆಕೆಯ ತರಹ ತಾನೆಂದೂ ಆಗಲು ಸಾಧ್ಯವೂ ಇಲ್ಲ. ಈ ಬಾಬ್ ಕೂದಲ ಮೇಲೆ ಮಲ್ಲಿಗೆ ಹೂವು ಹೇರಿಕೊಂಡರೆ ಏಷ್ಟು ವಿಚಿತ್ರ ಕಾಣಬಹುದು, ಬಳೆಗೀಳೇ ಹಾಕಿಕೊಂಡರೆ ಮೌಸ್ ಕುಟ್ಟುವಾಗ ಅಡ್ಡ ಬರುತ್ತಿತ್ತು. ಅದಕ್ಕೆ ತಾನು ವಾಚ್ ಸಹ ಕಟ್ಟುವುದಿಲ್ಲ. ಹಣೆಗೆ ಕುಂಕುಮ, ಮೂಗಿಗೆ ಮೊಗ್ಬಟ್ತು ಎಲ್ಲ ಈ ಗಂಡಸರ ಅಧಿಕಾರ ಸಂಕೇತ ಎಂದು ಈಕೆ ಧರಿಸುತ್ತಿರಲಿಲ್ಲ. ಇವೆಲ್ಲಕ್ಕೂ ವಿಜ್ಞಾನವನ್ನು ಎಳೆದು ತಂದು ಹೊಸ ಅರ್ಥ ಕಲ್ಪಿಸುವರನ್ನು ಕಂಡರೆ ಇಲ್ಲಸಲ್ಲದ ಕೋಪ ಈಕೆಗೆ ಬರುತ್ತಿತ್ತು. ಬರೀ ಹುಡುಗಿಯರಿಗೆ ಮಾತ್ರ ಈ ಕಟ್ಟುನಿಟ್ಟು. ಹುಡುಗರು ಬೇಕಾದರೆ ಲೋ ಜೀನ್ಸ್ ಹಾಕಿ, ಬೆಲ್ಟ್ ಅಷ್ಟೇ ತೋರಿಸಿಕೊಂಡು ಫಿಟ್  ಟೀ ಶರ್ಟ್ ಹಾಕಿ ಅಲೆಯಬಹುದು ಅಂತ ಅಸಹನೆ. ಹೋಗಲಿ, ಯಾರು ಏನು ಮಾಡಿಕೊಂಡು ಬೇಕಾದರೂ ಹಾಳಾಗಲಿ, ತಾನು ಮಾತ್ರ ಅವನನ್ನು ಬಿಟ್ಟು ಬಿಡೋದೇ ಅಂತ ಮತ್ತೆ ನಿರ್ಧಾರ ಖಚಿತ ಪಡಿಸಿಕೊಂಡಳು. ಅವನಿಷ್ಟದ ಪ್ರಕಾರವೇ ಇರೋ ಹುಡುಗಿ ಸಿಕ್ಕಲ್ಲಿ ಅವಳ ಜೊತೆ ಚೆಂದಾಗಿ ಬದುಕಿ ಕೊಂಡಿರಲಿ, ತನ್ನ ಜೊತೆ ಏನಕೆ ಏಗಬೇಕು ಅಂದು ಅದಕ್ಕೊಂದು ಷರಾ ಬರೆದುಕೊಂಡಳು.

ಸಂಜೆ ಕೆಲಸ ಮುಗಿಸಿ ಬಸ್ ಹತ್ತಿದಾಗ ಪಕ್ಕದ ಹುಡುಗಿ ಮೊಬೈಲಿನಲ್ಲಿ ಮಾತನಾಡುವುದ ಕಂಡು ತನ್ನ ನಿರ್ಧಾರ ಮತ್ತೆ ನೆನಪಿಗೆ ತಂದುಕೊಂಡಳು. ಆಕೆ ಮಾತನಾಡುತ್ತಿದ್ದ ಪರಿ ನೋಡಿ ಇವಳದ್ದೂ ಕೂಡ ಡೈವೋರ್ಸ್ ಕೇಸೇ ಅಂತ ಅನುಮಾನ ಬಂತು. ಹೌದು, ನನಗೆ ಗೊತ್ತಿದ್ದವರಲ್ಲಿ ಏಷ್ಟು ಜನ ಡೈವೋರ್ಸಿಗಳಿದ್ದಾರೆ ಎಂದು ನೆನೆಸಿಕೊಂಡು ನಗೂನು ಬಂತು. ಹೌದು, ತಾನೀಗ ಅವನನ್ನು ಬಿಟ್ಟು ಹೋಗುವುದಕ್ಕೆ ಕಾರಣ ಏನು ಕೊಡುವುದು ಎಂದು ಯೋಚಿಸತೊಡಗಿದಳು. ಇಬ್ಬರ ಟೆಸ್ಟ್ ಬೇರೆ ಬೇರೆ, ತನ್ನ ಇಷ್ಟದ ಬಣ್ಣ ಅವನಿಗೆ ಕಷ್ಟ, ಆತನ ಇಷ್ಟದ ವಸ್ತು ತನಗೆ ಕಷ್ಟ. ಆದರೂ ಇಬ್ಬರು ಜಗಳ ಮಾಡುತ್ತಿರಲಿಲ್ಲ. ಅವಳು ಧ್ವನಿ ಎತ್ತಿದ ಕೂಡಲೇ ಆತ ಮನೆ ಬಾಗಿಲು ಹಾಕಿಕೊಂಡು ಹೊರಗೆ ಹೋಗಿ ಬಿಡುತ್ತಿದ್ದ, ಈತ ಧ್ವನಿ ಎತ್ತಿದಾಗ ಆಕೆ ಅಷ್ಟೂ ಕೇಳಿ ನಕ್ಕು ಬಿಡುತ್ತಿದ್ದಳು. ಹೋದಲೆಲ್ಲಾ ಇಬ್ಬರೂ ಮೆಡ್ ಫೋರ್ ಇಚ್ ಅದರ್ ಅಂತ ಹೊಗಳಿಸಿಕೊಂಡು, ಇಬ್ಬರೂ ಅದನ್ನು ಕೇಳಿ ದಂಗಾಗಿ, ಅಲ್ಲಿಂದ ಹೊರಗೆ ಬಂದಾಗ ಹೇಳಿಕೊಂಡು ನಗಾಡುತ್ತಿದ್ದರು. ತಾವಿಬ್ಬರೂ ಬೇರೆ ಬೇರೆ ದುನಿಯಾದವರು ಎಂದು ಇಬ್ಬರಿಗೂ ಖಚಿತವಾಗಿ ಗೊತ್ತಿತ್ತು. ಆದರೆ ಇದನ್ನೆಲ್ಲ ಹೇಳಿದರೆ ಡೈವೋರ್ಸ್ ಸಿಗುವುದಿಲ್ಲ ಎಂದು ಅವಳಿಗೆ ಗೊತ್ತಿತ್ತು. ತನಗೆ ಈ  ಬನ್ಧನವೇ ಬೇಡ. ಡೈವೋರ್ಸ ಕೊಡದೇ ಹಾಗೆ ಬಿಟ್ಟು ಒಬ್ಬಳೇ ಇರಬಹುದಲ್ಲವಾ ಅಂತ ಹೊಸದಾಗಿ ಅನ್ನಿಸಿ ಖುಷಿಯಾಗತೊಡಗಿತು. ಏನಾದರೂ ಆಗಿ ಹೋಗಲಿ, ಮುಂದಿನ ವೀಕೆನ್ಡೆ ಸಿಂಗಾಪುರಿನ ಕೆಲಸಕ್ಕೆ ಅರ್ಜಿ ಹಾಕುತ್ತೇನೆ ಎಂದು ನಿರ್ಧರಿಸಿದಳು.

ಹಾಗೆ ರಾತ್ರಿಯಾಗಿ ಮನೆಯೂ ಬಂದು, ಅವಳು ಕೀಲಿ ಕೈ ತೆಗೆದು ಮನೆಗೆ ಹೊಕ್ಕಳು. ಹೌದು, ಇವನನ್ನು ಬಿಟ್ಟು ಅಲ್ಲೆಲ್ಲೋ ಹೋಗಿ ಒಬ್ಬಳೇ ಇರುವುದಕ್ಕೆ ತನಗೆ ಸಾಧ್ಯವಾ ಎಂದು ಯೋಚನೆಗೆ ಬಿದ್ದಳು. ಕನಸಿನ ರಾಜಕುಮಾರನ ಜೊತೆ ನಿಜ ಜೀವನದಲ್ಲಿ ಇರಲಿಕ್ಕಾಗುವುದಿಲ್ಲ. ಹಾಗೇನಾದರೂ ಮುಂದೊಂದು ದಿನ ಆ ತರಹ ವ್ಯಕ್ತಿ ಸಿಕ್ಕರೆ, ಆ ದಿನ ಯೋಚಿಸುವ ಅಂದುಕೊಂಡಳು. ಇವನ ಬಿಟ್ಟು ಯಾರ ಜೊತೆಗೆ ಆಮೇಲೆ ಹೋದರೂ ಕೂಡ ಯಾರ ಜೊತೆಯೋ ಓಡಿ ಹೋದಳು ಅಂತೆಲ್ಲ ಹೇಳಿ ತನ್ನ ಕ್ಯಾರೆಕ್ಟರಿಗೆ ಅವಮಾನ ಆಗುತ್ತೆ ಅಂದುಕೊಂಡಳು. ಇಷ್ಟು ದಿನ ನಿಯತ್ತಾಗಿ ಇದ್ದು, ಸುಖಾಸುಮ್ಮನೆ ಇನ್ನೊಂದು ಕತೆ. ತಾನು, ತನ್ನ ಸ್ವಾತಂತ್ರ, ತನ್ನ ಜೀವನ, ಕನಸು ಅಂತೆಲ್ಲ ಹೇಳಿದರೆ ಕೇಳುವಷ್ಟು ಪುರಸೊತ್ತು ಯಾರಿಗೂ ಇಲ್ಲ ಎಂದು ಅವಳಿಗೆ ಅನುಭವ ಆಗಿತ್ತು. ಬೆಳಗ್ಗೆ ರಾಧೆ ಹೇಳಿದ ಅಡಲ್ಟ್ರಿ ನೆನಪಾಗಿ ತಲೆಬಿಸಿಯಾಯಿತು. ಓಪನ್ ಮ್ಯಾರೇಜ್ ಅನ್ನು ಜಾಸ್ತಿ ಜನ ಒಪ್ಪುವುದಿಲ್ಲ ಎಂಬುದು ಅವಳಿಗೆ ಗೊತ್ತಿದ್ದ ವಿಚಾರವೇ. ಕೊನೆಗೆ ಸುಮ್ಮ ಸುಮ್ಮನೆ ಜೀವನವನ್ನು ಕಷ್ಟಕ್ಕೆ ನೂಕುವುದು ಬೇಡ ಎಂದು ವಿರಮಿಸಿದಳು. ಕನಸಿನ ರಾಜಕುಮಾರ ಮುಂದೆ ಬಂದು ನಿಂತಾಗ ಬೆಳಗ್ಗಿನಿಂದ ಕೆಲಸ ಮಾಡಿ ಸುಸ್ತಾಗಿದ್ದಕೆ ಅವನಿಗೊಂದು ಬಾಯ್ ಹೇಳಿ ಕೂತಲ್ಲೇ ನಿದ್ದೆಗೆ ಹೋದಳು.

ಅವನು ಬಂದು ಬೆಲ್ ಮಾಡಿದಾಗಲೇ ಎಚ್ಚರವಾಗಿದ್ದು. ಬಾಗಿಲು ತೆಗೆದು ಎಂದಿನಂತೆ ಮುದ್ದು ಮಾಡಲು ಹೋದರೆ ಅವನು ತಯಾರಿರಲಿಲ್ಲ. ಓ! ಕೋಪನಾ ಎಂದು ಪೆಚ್ಚಾಗಿ, ಅವನು ಕೂತಾದ ಮೇಲೆ ಏನಕ್ಕೆ ಬೆಳಿಗ್ಗೆಯಿಂದ ಕಾಲ್ ಮಾಡಿಲ್ಲ ಎಂದು ಸಣ್ಣದಾಗಿ ಕೇಳಿದಳು. ನಿನಗೆ ಯಾವುದನ್ನು, ಎಲ್ಲಿ, ಹೇಗೆ ಮಾತನಾಡಬೇಕು ಎಂದು ಗೊತ್ತೇ ಆಗಲ್ವಾ ಎಂದು ಬಯ್ದು ಕೊಂಡಿದಕ್ಕೆ ತಲೆ ಅಲ್ಲಾಡಿಸಿ ಅವನು ತಂದ ಅವಳ ಇಷ್ಟದ ಆಲೂ ಪರಾಟ ಕಸಿದುಕೊಂಡಳು. ಇವನತ್ತಿರ ಬೆಳಗಿನಿಂದ ತಲೆಯಲ್ಲಿ ನಡೆದ ಕತೆಯನ್ನೆಲ್ಲ ಇವತ್ತು ಹೇಳುವುದಿಲ್ಲ, ಹೇಳಿದರೂ ಈತ ಕೇಳುವುದಿಲ್ಲ ಎಂದು ಆಕೆಗೆ ಮನವರಿಕೆ ಆಗಿತ್ತು. ಮೆಲ್ಲನೆ ಪರಾಟಾ ತಿಂದು, ಹಾಲು ಕುಡಿದು ಬೆಳಿಗ್ಗೆ ಬೇಗ ಎದ್ದು ಅಡಿಗೆ ಮಾಡಬೇಕಲ್ಲ ಎಂದು ಮತ್ತೆ ಹಾಸಿಗೆಗೆ ಹೋದಳು. ಅವನಿಗೊಂದು ಸಾರಿ ಹೇಳಿ, ಸಣ್ಣದಾಗಿ ಮುದ್ದು ಕೊಟ್ಟು ತನ್ನ ಜಾಗದಲ್ಲಿ ಹೊರಳಿ ಮಲಗಿದಳು. ಆಯ್, ಕನಸಿನ ರಾಜಕುಮಾರ ಎಲ್ಲಿ ಹೋದ ಎಂದು ಯೋಚಿಸುತ್ತಾ ನಿದ್ದೆಗೆ ಜಾರಿದಳು. ಕನಸಿನಲ್ಲಿ, ಕಳೆದು ಹೋದ ಅವನನ್ನು ಹುಡುಕುತ್ತಾ ಚಿತ್ರ ವಿಚಿತ್ರ ದೇಶದಲ್ಲಿ ಸಂಚರಿಸತೊಡಗಿದಳು. ಹೀಗೆ ಮಲಗಿದ್ದ ಅವಳ ಸುತ್ತ ಎಲ್ಲವೂ ಹೇಗಿತ್ತೋ ಹಾಗೆ ಬಿದ್ದುಕೊಂಡು ರಾತ್ರಿಯ ಛಳಿಗೆ ತಣ್ಣಗಾದವು.

————————-

ಏನಂದ್ರೆ ಆವತ್ತು ಕೆಂಡಸಂಪಿಗೆಲಿ ಕತೆ ಬಂದ ಮೇಲೆ, ಇನ್ನೊಂದು ದಿನ ಮತ್ತೇನೋ ಅನ್ನಿಸಿ ಅದನ್ನು ಕತೆ ಬರೆದಾಯ್ತು. ಆಮೇಲೆ ಕನ್ನಡ ಪ್ರಭ, ಪ್ರಜಾವಾಣಿ ಮತ್ತು ಕೆಂಡಸಂಪಿಗೆಗೆ ಕಳಿಸಿದ್ದು ಆಯಿತು. ಯಾರು ಏನು ಇದು ಒಂದು ಕತೆ ಅಂತ ಒಪ್ಪಲೆ ಇಲ್ಲ. ಏನ್ ಮಾಡೋದು ಈಗ.  ಇದು ಬ್ಲಾಗ್ ಅಂತೂ ಅಲ್ಲ ಅಂದ್ಕೊಂಡು ಮೇಲ್ ಕಟ್ಟೆನಲ್ಲಿ ಹಾಗೆ ಬಿದ್ದುಕೊಂಡಿತ್ತು. ಇವತ್ತು ಮತ್ತೆ ಇದನ್ನೇಕೆ ಪೋಸ್ಟ್ ಮಾಡಬಾರದು ಅಂದುಕೊಂಡು ಇಲ್ಲಿ ಹಾಕ್ತಾ ಇದ್ದೀನಿ. ಸ್ವಲ್ಪ ಗಾಳಿ ಆಡಲಿ, ಆಮೇಲೆ ಇನ್ನೂ ಚೆನ್ನಾಗಿದಾನದ್ದು ಹುಟ್ಟಬಹುದು.

2 Responses to “ಒಂದು ದಿನದ ಡೈವೋರ್ಸ್”

  1. Sunaath Says:

    ಸೊಗಸಾದ, ಮುದ್ದಾದ ಕತೆ. ಅವಳ ಭಾವಲಹರಿ ಹರಿಯುತ್ತಿರುವ ಬಗೆ ಇಷ್ಟವಾಯಿತು.

    Like

  2. ನೀಲಾಂಜಲ Says:

    ಸುನಾಥ ಅವರೇ, ಧನ್ಯವಾದ. ನೀವು ಓದಿ, ಪ್ರತಿಕ್ರಿಯೆ ನೀಡ್ತೀರಾ ಅನ್ನೋದೇ ಖುಷಿ ನನಗೆ 🙂

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: