ಗೊತ್ತಾ, ಇವತ್ತು ಚಾನೆಲ್ ಬದಲಿಸ್ತಾ ಇದ್ದಾಗ ಒಂದು ಸೀರಿಯಲಿನಲ್ಲಿ ಕರಿಮಣಿ ಸರ ಮುರಿದು ಹೋಗಿದ್ದು, ಅದರಿಂದ ಗಂಡನಿಗೆ ಏನೋ ಅನಾಹುತ ಆಗುತ್ತೆ ಅಂತ ಅಳ್ತಾ ಇದ್ದದ್ದು ನನ್ನ ಕಣ್ಣಿಗೆ ಬಿತ್ತು. ಅಯ್ಯೋ ಕರ್ಮವೇ! ಅದು ಹೇಗೆ ಹರಿಯಿತು ಅನ್ನೋದನ್ನು ನೋಡಿರಲಿಲ್ಲ, ಹಾಗಾಗಿ ಮತ್ತೊಂದು ಚಾನೆಲ್ಲಿನ ಗುಂಡಿ ಒತ್ತಿದೆ. ನನಗೆ ಯಾವತ್ತೂ ಇದನ್ನೆಲ್ಲ ಬರಿಯೋರು ಗಂಡಸರೇ ಅಂತಲೇ ಡೌಟು. ನಮಗೆ ಗೊತ್ತಿಲ್ಲದ ಹಾಗೆ ನಮ್ಮ ತಲೆ ತಿರುಗಿಸಿ ಬಿಟ್ಟಿರುತ್ತಾರೆ. ಜೊತೆಗೆ ಮೊನ್ನೆ ಇನ್ನೊಂದು ನ್ಯೂಸ್ ಚಾನೆಲ್ಲಿನಲ್ಲಿ ಮಾಂಗಲ್ಯದ ಮಹಿಮೆ ಅಂದರೆ ಮಾಂಗಲ್ಯ ಧಾರಣೆ ನಿಜವಾಗಿಯೂ ನಮ್ಮ ಸಂಸ್ಕ್ರತಿಯೇ? ಅಂತೆಲ್ಲ ಚರ್ಚೆ ಮಾಡ್ತಾ ಇದ್ದಿದ್ದು ನೆನಪಾಯಿತು.
ಬಾಲ್ಯ ಕಾಲದಿಂದಲೂ ನನಗೆ ಈ ಮಾಂಗಲ್ಯದ ಬಗ್ಗೆ ಒಂದು ದೊಡ್ಡ ಡೌಟೇ ಇದೆ. ನಮ್ಮ ಮನೆಗೆ ಸ್ಥಳೀಯ ಮಠದ ಪತ್ರಿಕೆಯೊಂದು ಬರುತ್ತಾ ಇತ್ತು. ಅದರಲ್ಲಿ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದಿತ್ತು. ಹಾಗಾಗಿ ಅವರನ್ನು ಪ್ರಶ್ನಿಸಿ, ಏನಕೆ ಚಿತ್ರದ ದೇವರುಗಳು, ವಿಗ್ರಹದ ದೇವರುಗಳು ಕರಿಮಣಿ ಸರ ಹಾಕುವುದಿಲ್ಲವೆಂದು ಪತ್ರ ಬರೆದಿದ್ದೆ. ಹಲವು ತಿಂಗಳ ನಂತರ ಅವರು ಕೊಟ್ಟ ಉತ್ತರ ನನ್ನಲ್ಲಿನ ಪ್ರಶ್ನೆಯನ್ನು ಅಳಿಸಿಹಾಕಿರಲಿಲ್ಲ. ಇನ್ನೂ ಆ ಪ್ರಶ್ನೆ ಹಾಗೆ ಉಳಿದುಕೊಂಡಿದೆ. ಕೊನೆಗೆ ಕಾಲೇಜಿನ ದಿನಗಳಲ್ಲಿ ಉಪನ್ಯಾಸಕ್ಕೆ ಅಂತ ಬಂದವರೊಬ್ಬರು ಮೊದಲು ಕರಿಮಣಿ ಸರ ಅನ್ನುವುದು ಇರಲೇ ಇಲ್ಲವೆಂದು, ಆಗ ಈಕೆ ತನ್ನ ಹೆಣ್ಣೆಂದು ಪಂಗಡದ ಇನ್ನುಳಿದವರಿಗೆ ತಿಳಿಸಲು ಕಿವಿಗೆ ಸಣ್ಣ ಮಣಿಗಳನ್ನು ಪೋಣಿಸಿ ಹಾಕಿಸುತ್ತಿದ್ದದ್ದು ಈಗ ಕರಿಮಣಿ ಸರವಾಗಿದೆ ಎಂದು ಹೇಳಿದ್ದು ನನ್ನ ಮನದಲ್ಲಿ ಇಂದಿಗೂ ನಿಂತು ಬಿಟ್ಟಿದೆ. (ಏನಕೆ ಅಂದರೆ ನನಗೂ ಹೀಗಿದ್ದೆ ಒಂದು ವಾದ ಬೇಕಾಗಿದ್ದುದು.)
ಹೆಚ್ಚಾಗಿ ಅದು ‘ರಾಮಾಚಾರಿ’ ಚಿತ್ರವಿರಬೇಕು, ಅದರಲ್ಲಿ ತಾಳಿಯೂ ಕತೆಯ ಮುಖ್ಯ ಪಾತ್ರವಾಗಿತ್ತು. ಹಾಗೆ ಮೊನ್ನೆ ನೋಡಿದ ರಮ್ಯಾ ಮತ್ತು ವಿಜಯ್ ಇದ್ದ ‘ಸೇವಂತಿ ಸೇವಂತಿ’ ಯಲ್ಲೂ ತಾಳಿ ಅನ್ನೋದು ಮುಖ್ಯ ಪಾತ್ರ. ಇನ್ನೂ ಅನೇಕ ಹೆಸರು ನೆನಪಿರದ ಚಿತ್ರಗಳಲ್ಲಿ ಈ ತಾಳಿ ಮಾಡುವ ಅನಾಹುತಗಳನ್ನು ನೋಡಿದ್ದೇನೆ. ಯಾರೋ ಒಬ್ಬವನು ಬಂದು ತಾಳಿ ಕಟ್ಟಿಬಿಡುತ್ತಾನೆ, ಹಾಗಾಗಿ ಬೇರೆ ದಾರಿಯಿಲ್ಲದೆ ಆಕೆ ಆತನೇ ತನ್ನ ಗಂಡನೆಂದು ಅವನ ಹಿಂದೆ ಓಡುತ್ತಾಳೆ. ಇಲ್ಲಾ , ವಿಲನ್ ವಿಧವೆಗೆ ತಾಳಿ ಕಟ್ಟು ಬಿಡ್ತಿನಿ ಅಂತ ಬರೋದು, ಮಗ ಎದ್ದು ಬಂದು ಹೊಡೆಯೊದು, ಹೀಗೆ. ಮತ್ತೆ ಅಳೋ ಅಥವಾ ಸೆಂಟಿ ಸೀನುಗಳಲ್ಲಂತೂ ಈ ಮಾಂಗಲ್ಯದ ಮೇಲೆ ಆಣೆ ಅಂತಲೂ, ಮಾಂಗಲ್ಯ ಭಾಗ್ಯ ಅಂತಲೂ ಕಣ್ಣೀರು ಇಟ್ಟು ಬಿಡ್ತಾರೆ ಅನ್ನೋಕ್ಕಿಂತ ಇಡಿಸಿ ಬಿಡ್ತಾರೆ. ನೋಡಿದೊರಿಗೆಲ್ಲ ಹೌದೋದು, ಈ ಮಾಂಗಲ್ಯಕ್ಕೆ ಏನು ಮಹಿಮೆಯಿದೆ ಅಂತ ಅದರ ಹಿಂದೆ ಇನ್ನೂ ಬಿದ್ದಿರುತ್ತಾರೆ. ಇದನ್ನೆಲ್ಲ ಬರಿಯೋರು, ಚಿತ್ರ ಮಾಡೊರಲ್ಲಿ ಹೆಚ್ಚಿನವರು ಗಂಡಸರೇ ತಾನೇ. ನಮಗೇ ಗೊತ್ತಿಲ್ಲದ ಹಾಗೆ ನಮ್ಮ ತಲೆಯಲ್ಲಿ ಗಂಡ ಅಂದರೆ ದೇವರು ಅಂತ ಒಂದು ಇಮೇಜ್ ಕ್ರಿಯೇಟ್ ಮಾಡಿ ಬಿಡ್ತಾರೆ.
ಹೋಗಲಿ, ಈಗಿನ ಕಾಲದ ಸೀರಿಯಲ್ಲುಗಳು ಅಥವಾ ಸಿನೆಮಾಗಳಲ್ಲಿ ಇದು ಬದಲಾಗಿದೆಯಾ ಅಂದರೆ ಇನ್ನೂ ಆಗಿಲ್ಲ. ಈಗಲೂ ಮದುವೆ ಅನ್ನೋದು ಪವಿತ್ರ, ಮಾಂಗಲ್ಯ ಅನ್ನೋದು ಬಿಡಿಸಲಾಗದ ಗಂಟು ಅಂತೆಲ್ಲ ಊರು ಹೊಡೆಸಿ ಹೇಳಿಸಿ ಹೇಳಿಸಿ, ಅದನ್ನು ನೋಡಿದ ಹೆಂಗಳೆಯರು ಅದನ್ನು ಒಪ್ಪಿಕೊಂಡು ಬಿಟ್ಟಿರುತ್ತಾರೆ. ಹಾಗೆ ಮೊನ್ನೆ ಒಂದು ಧಾರಾವಾಹಿಯಲ್ಲಿ ‘ಅಡುಗೆಮನೆ ಹೆಂಗಸಿನ ಹಕ್ಕು’ ಅಂತೆಲ್ಲ ಬರ್ತಾ ಇತ್ತು, ಅಯ್ಯೋ ರಾಮ! ಇನ್ನೂ ಹಿಂದಿ ಕಡೆ ಹೋಗಲ್ಲ. ಅವರಿಗೆ ಈ ಮಾಂಗಲ್ಯಕ್ಕಿಂತ ಸಿಂಧೂರ ಜಾಸ್ತಿ ಪವಿತ್ರ. ‘ಏಕ್ ಚುಟುಕಿ ಸಿಂಧೂರ್ …’ ಅನ್ನೋ ಡೈಲಾಗು ಎಲ್ಲರಿಗೂ ಗೊತ್ತೇ ಇದೆ. ಮೊನ್ನೆ ನೋಡಿದ ‘ರಾಮಲೀಲಾ’ದಲ್ಲೂ ರಾಮ್ ಲೀಲಾಳಿಗೆ ಎರಡು ಸೆಂಟಿಮೆಂಟಿ ಕ್ಷಣಗಳಲ್ಲಿ, ಆಕೆ ಮಾರ್ಕೆಟಿನಿಂದ ಖರೀದಿಸಿದ್ದ ಸಿಂಧೂರದಿಂದ ಮಾಂಗ್ ಭರಾಯಿ ಮಾಡಿ ಮದುವೆ ಆಗಿ ಬಿಟ್ಟಿದ್ದ.
ಹಾಗಂತ ನನಗೆ ಕರಿಮಣಿಸರ ಹಾಕಿಕೊಳ್ಳೊರ ಬಗ್ಗೆ ಅಥವಾ ಮಾಂಗಲ್ಯ ವನ್ನು ಕಣ್ಣಿಗೆ ಒತ್ತಿಕೊಳ್ಳೊರ ಬಗ್ಗೆ ಅಗೌರವೇನು ಇಲ್ಲ. ಮೇಲೆ ಹೇಗೆಲ್ಲಾ ಹೇಳಿ, ಈಗ ಬೇರೆ ತರಹ ಷರಾ ಬರೀತಾಳಲ್ಲಪ್ಪೋ ಅಂದು ಕೊಳ್ಳಬೇಡಿ. ಅದು ಅವರವರ ನಂಬಿಕೆ, ಶ್ರಧ್ಧೆಗೆ ಬಿಟ್ಟಿದ್ದು. ಆದರೆ ಮಾಂಗಲ್ಯದ ಹೆಸರಲ್ಲಿ ಗಂಡನ ದಬ್ಬಾಳಿಕೆಯನ್ನು, ಆತನ ಗರ್ವವನ್ನು ಸಹಿಸಿಕೊಳ್ಳುವವರ ಬಗ್ಗೆ ಅಸಹನೆ ಇದೆ. ಗಂಡ ಏನು ಮಾಡಿದರೂ ಅದನ್ನು ಹೆಂಡತಿ ಸಹಿಸಿಕೊಳ್ಳಬೇಕು ಅನ್ನುವ ಸಮಾಜದ ಅಲಿಖಿತ ನಡಾವಳಿಕೆಗೆ ನನ್ನ ಅಸಮ್ಮತಿಯಿದೆ. ಮೊನ್ನೆ ಒಂದು ಸೀರಿಯಲ್ಲಿನಲ್ಲಿ ಗೋಳೆಂದು ಆಳುತ್ತಿದ್ದ ಹೆಂಡತಿಯ ಬಳಿ, ಕೆಟ್ಟ ಗಂಡನ ಜೊತೆ ಸಹನೆಯಿಂದ ಇರು, ಆತನನ್ನು ತಿದ್ದಲು ಪ್ರೀತಿಯಿಂದ ಪ್ರಯತ್ನಿಸು, ಭಗವಂತ ಕೈ ಬಿಡಲ್ಲ ಅಂತೆಲ್ಲ ಹೇಳಿಸ್ತಾ ಇದ್ದರು. ಅದರ ಬದಲು ಆಕೆಗೆ ಮನೆಯವರ ಬಿಸಿನೆಸ್ಸಿನಲ್ಲಿ ನೀನು ಕೈ ಜೋಡಿಸು, ಕೆಲಸಕ್ಕೆ ಹೋಗು, ನಿನ್ನದೇ ಜೀವನ ಮಾಡಿಕೊಳ್ಳಲು ಕಲಿ ಅಂತೆಲ್ಲ ಬುದ್ಧಿ ಹೇಳಿಸಲೇ ಇಲ್ಲ. ಆ ಸೀನೆಲ್ಲ ಬರೆದದ್ದು ಗಂಡಸರೇ ಅಂತ ನನಗೆ ಸಿರಿಯೆಸ್ ಆಗಿ ಅನ್ನಿಸ್ತಾ ಇತ್ತು..
ಹೋಗಲಿ, ಇತ್ತೀಚಿಗೆ ಬರುವ ಒಂದು ಜಾಹೀರಾತಿನಲ್ಲೂ ಹೀಗೆ ಇದೆ. ಗಂಡನಾದವನು ಅಪರಾತ್ರಿಯಲ್ಲಿ ಹೆಂಡತಿಯನ್ನು ಎಬ್ಬಿಸಿ, ಬೆಳಿಗ್ಗೆ ತನಗೆ ಓಟ್ಸ್ ಮಾಡಿಕೊಡೆನ್ದು ಆಸೆಯಿಂದ ಕೇಳುತ್ತಾನೆ. ಕೈ ಕಾಲು ಗಟ್ಟಿ ಇರುವ ಅವನು, ಸ್ವತಃ ಎದ್ದು ಮಾಡಿ ತಿನ್ನಬಾರದಿತ್ತೆ? ಇದರ ಜೊತೆಗೆ ಬರುವ ಸೋಪು, ಡಿಟರ್ಜೆಂಟ್ ಜಾಹೀರಾತುಗಳಲ್ಲೂ ಹೀಗೇನೇ. ಎಲ್ಲದರಲ್ಲೂ ಹೆಂಗಸರೇ ಬಟ್ಟೆ ತೊಳೆಯುವವರು, ಪಾತ್ರೆ ತೊಳೆಯುವವರು, ಕೊನೆಗೆ ಟಾಯ್ಲೆಟ್ ಕ್ಲೀನ್ ಮಾಡುವವರು. ನಮಗೆ ಗೊತ್ತಿಲ್ಲದೆ ಹೆಂಗಸು ಅಂದರೆ ಹೀಗೆ, ಗಂಡಸು ಅಂದರೆ ಹೀಗೆ ಎಂದು ತಲೆಯಲ್ಲಿ ಚಿತ್ರಿತವಾಗಿ ಹೋಗಿರುತ್ತೆ.
ಅದಕ್ಕೇನೇ ಈ ಚಲಿಸುವ ಚಿತ್ರಗಳಲ್ಲಿ ಮಾಂಗಲ್ಯದ ಆಣೆ ಹಾಕಿಸುವ ಬದಲು ಎರಡು ಜೀವಗಳ ಮಧ್ಯದ ಸಂಭಂದದ ಬಗ್ಗೆ, ಗಂಡ ಮತ್ತು ಹೆಂಡತಿ ಅನ್ನೋ ಪರಿಧಿ ಮೀರಿ, ಒಂದು ಸಂಬಂಧವನ್ನು ಜೀವನ ಪರ್ಯಂತ ಕಾದುಕೊಂಡು, ಬೆಳೆಸಿಕೊಂಡು ಹೋಗುವುದರ ಬಗ್ಗೆ ಹೇಳಬಹುದಾಗಿತ್ತು. ನನ್ನ ಪ್ರಕಾರ ಹೆಣ್ಣೊಬ್ಬಳು ತಾನು ಒಬ್ಬನಿಗೆ ಮಾತ್ರ ಮೀಸಲು ಅನ್ನೋದನ್ನು ಮಾಗಲ್ಯ ಧರಿಸುವ ಮೂಲಕ ಹೇಳಬೇಕಾದದ್ದಿಲ್ಲ. ಅದೊಂದು ಮಾನಸಿಕ ಬದ್ಧತೆ. ಹೇಗೆ ಗಂಡಸರು ಏನನ್ನೂ ಧರಿಸದೆ ಒಬ್ಬಳಿಗೆ ಮಾತ್ರ ನಿಷ್ಟರಾಗಿರ ಬಲ್ಲರೋ ಹಾಗೆ ಹೆಂಗಸರೂ ಸಹ ಈ ತಾಳಿ, ಕರಿಮಣಿ ಸರ ಇಲ್ಲದೆಯೂ ನಂಬಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬಲ್ಲಂತವರು.
ಮತ್ತೊಂದು ವಿಷಯ ಹೇಳ್ತೇನೆ, ಕೇಳಿ. ಮೊನ್ನೆ ನನ್ನ ಕರಿಮಣಿ ಸರ ಹರಿದು ಹೋದಾಗ ನಾನು ಸಕತ್ ಖುಷಿ ಪಟ್ಟು ಬಿಟ್ಟಿದ್ದೆ. ಏನಕೆ ಗೊತ್ತಾ? ನನಗೆ ಆಗಿದ್ದ ತಾಳಿಯ ಮಧ್ಯ ಸೋನೆಗಾರ ಹಾಕಿದ್ದ ಹವಳ ಕಂಡರೇ ಇಷ್ಟವೇ ಇರಲಿಲ್ಲ. ಅದನ್ನು ತೆಗೆಸಿ, ಬೇರೆ ಡಿಸೈನ್ ಮಾಡಿಸುವ ಅಂತ ನಾನು. ಆದರೆ ಕರಿಮಣಿ ಸರಕ್ಕೆ ಏನಾದರೂ ಆದರೆ ಗಂಡನಿಗೆ ಏನೋ ಆಪತ್ತು ಬರುತ್ತೆ ಅಂತ ನಂಬಿರುವ ಮನೆಯಲ್ಲಿ ನನ್ನ ಮಾತು ನಡೆಯಲೇ ಇಲ್ಲ. ಮಂತ್ರಗಳಿಂದ ಧರಿಸಿರುವ ಅದನ್ನು ಭಂಗ ಮಾಡಬಾರದೆಂದು, ಬೇಕಾದರೆ ಹೊಸತು ಮಾಡಿಸಿಕೋ ಎಂದು ಪುಕ್ಕಟೆ ಸಲಹೆ ಕೊಟ್ಟಿದ್ದರು. ಈಗ ತಾಳಿಯ ಭಾಗವೇ ಕಿತ್ತು ಹೋಗಿ, ನಾನು ತುಂಬಾ ಖುಷಿ ಪಟ್ಟು, ಆ ಹವಳವನ್ನು ಬೀಸಾಕಿ ನನಗೆ ಬೇಕಾದ ಹಾಗೆ ಮಾಡಿಸಿ ಕೊಂಡು ಸಂತ್ರಪ್ತ ಳಾಗಿದ್ದೇನೆ. ಮನೆಲಿ ಮಾತ್ರ ಈ ವಿಷಯ ಹೇಳಿಲ್ಲ. ಓದಿದ ನೀವು ಕೇಳಕೇ ಹೋಗಬೇಡಿ. ಗೊತ್ತಾದರೆ ಆವಾಗಾಗದ ಭೂಕಂಪ ಈಗ ಆಗಿ ಬಿಡುತ್ತಷ್ಟೇ .
ಹಾಗೇನೇ ಮೊದಲೆಲ್ಲ ಪತಿಯಿಂದ ಧರಿಸಿರುವ ಕರಿಮಣಿಸರ ತೆಗೆಯಬಾರದೆಂದು ಕಟ್ಟು ನಿಟ್ಟು ಇತ್ತಂತೆ. ನನಗೆ ನೆನಪಿದ್ದಂತೆ, ಬಾಲ್ಯದಲ್ಲಿ ಅತ್ತೆಯೊಬ್ಬರು ಮಲಗುವಾಗ ಮತ್ತು ಸ್ನಾನಕ್ಕೆ ಹೋಗುವಾಗ ಮಾಂಗಲ್ಯ ತೆಗೆದಿಡುತ್ತಾರೆಂದು ಅವರನ್ನು ಮಾಡ್ ಎಂದು ತೀರ್ಮಾನಿಸಿ ಬಿಟ್ಟಿದ್ದರು. ಈಗ ಪಾರ್ಲರ್ ಮತ್ತು ಮಸಾಜ್ ಸೆಂಟರುಗಳಿಗೆ ಹೋಗುವ ಪ್ರತಿ ಹೆಂಡತಿಯರು ಕರಿಮಣಿ ಸರ ತೆಗೆದಿಟ್ಟೆ ಹೋಗುತ್ತಾರಲ್ಲವೇ? ಆ ಹೊತ್ತಲ್ಲಿ ತಮ್ಮ ಗಂಡನನ್ನು ಕಾಯ್ದುಕೊಳ್ಳೆಂದು ಯಾವ ದೇವರಿಗೆ ಹರಕೆ ಹೇಳುತ್ತಾರೋ, ನಾನು ಕಾಣೆ.
ಹೋಗಲಿ, ನೀವೇನು ಧರಿಸಿದ್ದೀರಾ? ಮದುವೆಯಾದಾಗ ಸಮಾಜದ ಸಮಕ್ಷಮದಲ್ಲಿ ಗಂಡ ಕಟ್ಟಿದ್ದ ಮಾಂಗಲ್ಯವೆ ಅಥವಾ ಅದನ್ನು ತೆಗೆದಿಟ್ಟು ನೀವೇ ಮಾಡಿಸಿಕೊಂಡ ಚಿಕ್ಕ, ತೆಳುವಿನ ಸರವೇ? ಬದ್ದತೆಗೆ ನಿಜಕ್ಕೂ ಹೀಗೊಂದು ಸರವೇ ಬೇಕಾ ? ಹೆಣ್ಣಿನ ಪ್ರತಿ ತೋರಿಸುವ ಗೌರವಕ್ಕೆ, ಆದರಕ್ಕೆ ಕುತ್ತಿಗೆಗೊಂದು ಕರಿಮಣಿ ಸರದ ಆವಶ್ಯಕತೆ ನಿಜಕ್ಕೂ ಇದೆಯಾ? ಅದಿಲ್ಲದೆ ಸಮಾಜದಲ್ಲಿ ಹೆಣ್ಣಿಗೆ ಗೌರವವೇ ಇಲ್ಲವಾಗುವ ಮನಸ್ಥಿತಿ ಬೇಕಾ ನಮಗೆ? ಹೇಳಿ.
ಡಿಸೆಂಬರ್ 23, 2013 ರಲ್ಲಿ 1:06 ಅಪರಾಹ್ನ |
ಹಾಕ್ಕೋರು ಹಾಕ್ಕೋತಾರೆ. ತೆಗೆಯೋರು ತೆಗೆಡಿದ್ತಾರೆ. ಅದು ವೈಯಕ್ತಿಕ ಆಯ್ಕೆ (ಕುಟುಂಬ, ಸಂಪ್ರದಾಯಗಳಿಗೆ ತಕ್ಕಂತೆ). ನಿಮಗೆ ಬ್ಯಾಡದಿದ್ರೆ ತೆಗೆದಿಡಿ. . ಧಾರಾವಾಹಿ, ಟೀವಿ, ಸಿನೆಮಾ ತರ ಜೀವನ ಮಾಡಬೇಕಿಲ್ಲ.
ಗಂಡನನ್ನು ದೇವರಂತೆ ನೋಡುವುದೇನೂ ಬೇಕಿಲ್ಲ, ಮನುಷ್ಯರಂತಾದರೂ ನೋಡಿ ಎಂದು ಈಗಿನ ಗಂಡಸರು ಗೋಳಿಡೋದು ಕಾಣುವುದಿಲ್ವೇ ನಿಮಗೆ? 🙂
LikeLike
ಫೆಬ್ರವರಿ 15, 2014 ರಲ್ಲಿ 1:59 ಫೂರ್ವಾಹ್ನ |
ಬದ್ಧತೆಯೆನ್ನುವುದು ಹೆಣ್ಣಿಗೆಷ್ಟು ಮುಖ್ಯವೋ ಗಂಡಿಗೂ ಅಷ್ಟೇ ಮುಖ್ಯ. ಹೆಣ್ಣುಗಳೆಲ್ಲಾ ಬದ್ಧತೆಯಿಂದಿದ್ದರೆ, ಬದ್ಧತೆ ಮುರಿಯಬಯಸುವ ಗಂಡಸಿಗೆ ಒಬ್ಬಳೂ ಹೆಣ್ಣು ಈ ಉದ್ದೇಶಕ್ಕೆ ಸಿಗಲಾರಳು. ಹೆಂಗಸಿಗೆ ಹೇಗೆ ಹೊರಜಗತ್ತಿಗೆ ಕಾಣುವ ಹಾಗೆ ಮಾಂಗಲ್ಯವೋ ಅಥವಾ ಇನ್ನೊಂದೋ ಏನನ್ನೋ ಮಾಡಿಟ್ಟಿದ್ದಾರಲ್ಲ. ಹಾಗೆಯೇ ಗಂಡಸಿಗೆ ಕೂಡಾ ಒಂದು ಎದ್ದು ಕಾಣುವ ಗುರುತನ್ನು ನಿಗದಿಪಡಿಸಬೇಕು. ಅವನೂ ಕೂಡಾ ದೇವಸ್ಥಾನದಲ್ಲೋ ಅಥವಾ ನೆಂಟರ ಮನೆಯಲ್ಲೋ ಕುಂಕುಮವೋ ಅರಿಶಿನವೋ ಕೊಟ್ಟಾಗ ಅದಕ್ಕೆ ಒತ್ತಿಕೊಳ್ಳುವಂತಾಗಬೇಕು. ಬೇಡವೆಂದರೆ ಇಬ್ಬರಿಗೂ ಏನೂ ಬೇಡ. ಬೇಕೆಂದರೆ ಇಬ್ಬರಿಗೂ ಬೇಕು. ಅಷ್ಟೇ
LikeLike
ಫೆಬ್ರವರಿ 15, 2014 ರಲ್ಲಿ 12:07 ಅಪರಾಹ್ನ |
“ು. ಅವನೂ ಕೂಡಾ ದೇವಸ್ಥಾನದಲ್ಲೋ ಅಥವಾ ನೆಂಟರ ಮನೆಯಲ್ಲೋ ಕುಂಕುಮವೋ ಅರಿಶಿನವೋ ಕೊಟ್ಟಾಗ ಅದಕ್ಕೆ ಒತ್ತಿಕೊಳ್ಳುವಂತಾಗಬೇಕು. ” ಹ್ಹ ಹ್ಹ ಹ್ಹ, ಸುಮ್ಮನೆ ಹೀಗೆ ಮದುವೆಯಾದ ಗಂಡಸರೆಲ್ಲ ಮಾಡುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಏನಕೆ ಅರಿಶಿನ ಕುಂಕುಮ ಕೊಟ್ಟಾಗ ಒತ್ತಿಕೊಳ್ಳಬೇಕು? ಏನ್ ಹೊತ್ತಾ, ಮಧುರ ವೀಣಾ, ನನಗೆ ಯಾರಾರು ಕೊಟ್ಟಾಗ ಮೊದಲು ನಗು ಬರುತ್ತೆ, ಆಮೇಲೆ ಏನಾದರೂ ಹೇಳಿದರೆ ಅವರು ಇನ್ನೇನೋ ಅಂದುಕೊಳ್ತಾರೆ ಅಂತ, ಹಣೆ, ಗಲ್ಲ ಮುಂದು ಮಾಡುತ್ತೇನೆ. ನಾನು ಹೆಚ್ಚಾಗಿ ಹಣೆಯಲ್ಲಿ ಬೊಟ್ಟು ಇಟ್ಟುಕೊಳ್ಳದಿರುವದರಿಂದ, ಅವರು ಮೊದಲು ಹಣೆಗೊಂದು ಕುಂಕುಮ ಇಟ್ಟು, ನನ್ನ ಮುತ್ತೈದೆಯನ್ನಾಗಿ ಮಾಡಿ, ಆಮೇಲೆ ಹೂ, ಕುಂಕುಮ ಕೊಡುತ್ತಾರೆ. ಮೊನ್ನೆ ನನ್ನಮ್ಮ ನಮ್ಮ ಮನೆಗೆ ಬಂದಾಗ ಸಂಕಟ ಪಟ್ಟರು, ಇವಳಿಗೆ ಏನಕೆ ಈ ಸಂಸ್ಕಾರ ಬಂದಿಲ್ಲ ಅಂತ. ಮನೆಗೆ ಬಂದಿದ್ದ ಸಂಬಧಿಕರಿಗೆ ಬೌಸ್ ಪಿಸು, ಕುಂಕುಮ, ಹೂ ಕೊಡು ಅಂತ ಅವರು, ನಮ್ಮನೇಲಿ ಆ ತರಹ ಏನು ಸ್ಟಾಕ್ ಇಟ್ಟುಕೊಂಡಿಲ್ಲಾವಾದ್ದರಿಂದ ನನಗೆ ಪಜೀತಿ . ಆಮೇಲೆ ಇದ್ದ ಹಣ್ಣನ್ನು ಅವರಿಗೆ ಕೊಟ್ಟು ನನ್ನಮ್ಮ ಸಮಾಧಾನ ಮಾಡಿಕೊಂಡರು. ನಾನೊಂದು ಚೆಂದದ ಬಾಯ್ ಮತ್ತು ಹಗ್ ಕೊಡಬಲ್ಲೆ ಆ ಹೆಣ್ಣುಮಗಳಿಗೆ, ಇಲ್ಲಾ ಏನಾದರೂ ಗಿಫ್ಟ್. ನಂಬಿಕೆ ಇಲ್ಲದ ಮೇಲೆ ಕೊಟ್ಟು ಏನು ಉಪಯೋಗ, ಎಲ್ಲದೂ ಅವರವರ ಭಾವಕ್ಕೆ ತಕ್ಕ ಹಾಗೆ.
LikeLike