ಹೀಗೊಂದು ಪ್ರವರ

ಬೆಳ್ಳಂಬೆಳಗ್ಗೆ ಎದ್ದು ತಿಂಡಿಯೇನು ಮಾಡುವುದೆಂದು ಯೋಚಿಸುತ್ತಿರುವಾಗ ಬೆಲ್ ಆಯಿತು. ತೆರೆದರೆ ಕೆಳಗಡೆ ಮನೆ ಪುಟ್ಟು ಗೆಳೆಯರೊಡನೆ ಇಣಚಿ ನೋಡಲು ಬಂದಿದ್ದ. ಇವನಿಗೆ ಬೇರೆ ಕೆಲಸವಿಲ್ಲ ಎಂದು ಬೈಯ್ದುಕೊಳ್ಳುತ್ತಾ ಇಣಚಿಯನ್ನು ಎತ್ತಿ ತೋರಿಸುತ್ತಿದ್ದೆ. ಅಷ್ಟರಲ್ಲಿ ಬಾಗಿಲ ಎದುರಿಗೆ ’ದುತ್’ ಎಂದು ಪ್ರತ್ಯಕ್ಷನಾಗಿದ್ದ ಅವನು. ಅಯ್ ಇವನೇನು ಇಲ್ಲಿ ಎಂದು ಅಚ್ಚರಿ ಪಡುತ್ತಿರುವಾಗಲೇ ಸೀದಾ ಮನೆಯೊಳಗೆ ನುಗ್ಗಿ ಬಿಡಬೇಕೆ. ನೀವು ಇಣಚಿ ಸಾಕ್ಕೊಂಡಿದಿರಂತಲ್ಲ, ನೋಡೊಣ ಅಂತ ಬಂದೆ ಎಂದು ಇಣಚಿ ನೋಡದೆ ಮನೆಯಲ್ಲಿ ಎಲ್ಲಿ ಏನೇನಿದೆ ಎಂದು ಇಣುಕಿದ. ಆ ಮಕ್ಕಳೆದುರು ಅವನಿಗೆ ಬಯ್ಯಲು ತೋಚುತ್ತಿರಲಿಲ್ಲ. ಹೇಗೊ ಮಾಡಿ ಸಾಗ ಹಾಕಿದೆ. ಆದರೆ ಹೋಗೊ ಮೊದಲು ಇನ್ನೊಬ್ರಿದ್ದ್ರಲ್ಲಾ, ನಿನ್ನೆ ಸಂಜೆ ಆಕಿ ಮನೆ ಖಾಲಿ ಮಾಡಿಕೊಂಡು ಹೋದ್ರಲಾ, ನಾ ಅಲ್ಲೆ ಕೆಳಗೆ ಇದ್ದೆ. ಇನ್ನೂ ನೀ ಒಬ್ಬಾಕಿನಾ ಎಂದು ಕೆಣಕಿ ಹೋಗಿದ್ದ. ಥತ್! ನಿನ್ನೆ ತನಕ ಸಾಂಬಾವೀತನಾಗಿದ್ದ ಎದುರುಗಡೆ ಮನೆ ಗಾರೆಕೆಲಸದ ಅಜ್ಜನಿಗೆ ಇದ್ದಕಿದ್ದ ಹಾಗೇ ಏನ್ ಆಯಿತಪಾ ಅಂದುಕೊಂಡೆ. ಒಬ್ಬಳೇ ಹೆಣ್ಣು ಅಂದ ಕೂಡಲೇ ಎಲ್ಲ ಗಂಡಸರಿಗೂ ಅದೇನು ಭಂಡ ಧೈರ್ಯ ಬಂದು ಬಿಡುತ್ತದೆ! ಕರ್ಮ.

ಹೌದು, ಹಿಂದಿನ ದಿನ ಆಕೆ ಮನೆ ಬಿಟ್ಟು ಹೋಗಿದ್ದಳು. ಬಾಗಿಲಿಗೆ ರಂಗೋಲಿ ಇಡುವ ವಿಷಯದಿಂದ ಹುಟ್ಟಿದ ಜಗಳ ಇಣಚಿಯವರೆಗೆ ಬೆಳೆದಿತ್ತು. ಸಿಂಪಲ್ಲಾಗಿ ಹೇಳುವುದಿದ್ದರೆ ಇಗೋ ಕ್ಲಾಶ್. ಇವತ್ತಿನಿಂದ ನಾನು ಒಬ್ಬಳೇ. ಪಕ್ಕದಲ್ಲೇ ದೊಡ್ಡಮ್ಮನ ಮಕ್ಕಳ ಸಂಸಾರ ಇರುವದರಿಂದ ನನ್ನ ಮನೆಯಲ್ಲಿ ಯಾರೂ ಕಿರಿಕಿರಿ ಮಾಡಿರಲಿಲ್ಲ. ಮನೆ ಓನರ್ ವಿಷಯ ಗೊತ್ತಾದ ಮೇಲೆ ಇಲ್ಲೇನೂ ಅಂತಾ ಹೆದರಿಕೆಯೇನಿಲ್ಲ, ಸ್ವಲ್ಪ ಹುಶಾರಿ ಎಂದರಷ್ಟೆ. ಜೊತೆಗೆ ಮನೆ ಭಾಡಿಗೆ ಏರಿಸಬೇಕಿತ್ತು ಎಂದು ಸಣ್ಣದಾಗಿ ಹೆದರಿಸಿದರು. ಅಮ್ಮನಿಗೆ ಸ್ವಲ್ಪ ಚಿಂತೆ ಇತ್ತು. ಅದೂ ಅಮ್ಮನಾದವರಿಗೆ ಬೆಳೆದ ಹುಡುಗಿಯರತ್ತ ಇರಬೇಕಾದ ಸಹಜ ಕಾಳಜಿ ಎನ್ನಿ.

ಈ ಮನೆಯನ್ನು ಹುಡುಕಬೇಕಾದರೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಗ ವಿದ್ಯಾರ್ಥಿನಿಯರ ಹಾಸ್ಟೇಲಿನಲ್ಲಿ ನನ್ನ ಅವಧಿ ಮುಗಿಯುತ್ತಾ ಬಂದಿತ್ತು. ಕೆಲಸ ಬೇರೆ ಸಿಗ್ತಾ ಇರಲಿಲ್ಲ. ಬೆಂಗಳೂರಿನ ಸುಮಾರು ಪಿಜಿಗಳನ್ನು ಅಲೆದು ಮುಗಿದಿತ್ತು. ಆ ಕೊಂಪೆಗಳಲ್ಲಿ ಸತ್ತರೂ ಸೇರುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಆಗ ಉಳಿದಿದ್ದು ಒಂದೇ ಮಾರ್ಗ. ಸ್ವಂತ ಮನೆ ಬಾಡಿಗೆಗೆ ಹಿಡಿಯುವುದು. ಅದೂ ಅಷ್ಟು ಸುಲಭವಾಗಿರಲಿಲ್ಲ. ಮೊದಲು ಅದಕ್ಕೊಂದು ಪಾರ್ಟನರ್ ಹುಡುಕಿಕೊಳ್ಳಬೇಕಿತ್ತು. ಅಂತೂ ಹಾಸ್ಟೇಲಿನ ಸ್ನೇಹಿತೆಯೊಬ್ಬಳು ನನಗೆ ಸಾಥ್ ಕೊಟ್ಟಳು. ಇಬ್ಬರೂ ನಮ್ಮ ಹಾಸ್ಟೇಲಿಗೆ ತರಕಾರಿ ಸಪ್ಲೈ ಮಾಡುತ್ತಿದ್ದವನು ಮನೆ ಬಾಡಿಗೆ ಏಜೆಂಟ್ ಎಂದು ಗೊತ್ತಾಗಿ ಅವನ ಬಳಿ ಹೋದೆವು. ಅವನು ಸುಮಾರು ಮನೆ ತೋರಿಸಿದ. ಫುಲ್ ಡಬ್ಬಾ ಮನೆಗಳು. ಓಡಾಡೊ ದಾರಿ ಸುರಂಗದಂತೆ ಕತ್ತಲಿರುವುದು, ಇಡೀ ಬಿಲ್ಡಿಂಗ್ ಸುತ್ತು ಹಾಕಿ ಮೂಲೆಯಲ್ಲಿದ್ದ ಔಟ್‌ಹೌಸುಗಳು, ಟೆರೆಸ್ಸಿನ ಮೂಲೆಯಲ್ಲಿರುವ ಒಬ್ಬಂಟಿ ಸಿಂಗಲ್ ರೂಂಗಳು, ನೆಲದ ಗಾರೆ ಕಿತ್ತು ಹೋದ ಮನೆಗಳು, ಸ್ನಾನ-ಶೌಚಾಲಯ ದೂರವಿದ್ದ ಅಥವಾ ಶೇರಿಂಗ್ ಸೌಲಭ್ಯದ ಮನೆಗಳು…. ನಾವು ಹುಡುಗಿಯರಾದ್ದರಿಂದ ನಮಗೆ ನಮ್ಮ ಸೇಫ್ಟಿಯ ಸಲುವಾಗಿ ಓನರ್, ಅಕ್ಕ-ಪಕ್ಕದವರು, ಏರಿಯಾ ಅಂತೆಲ್ಲಾ ಗಣನೆಗೆ ತೆಗೆದು ಕೊಳ್ಳಬೇಕಿತ್ತು. ಕೊನೆಗೆ ಒಂದು ದಿನ ಸಾಕಾಗಿ ನನ್ನ ಸ್ನೇಹಿತೆ ಇನ್ನು ತನ್ನ ಕೈಯಲಾಗುವುದಿಲ್ಲ ಎಂದು ’ಸ್ಸಾರಿ’ ಹೇಳಿ ಹೊರಟು ಹೋದಳು.

ಮತ್ತೆ ನಾನು ಒಬ್ಬಂಟಿ. ಪ್ರೊಸೆಸ್ಸನ್ನು ಮತ್ತೆ ಶುರುವಿನಿಂದ ಪ್ರಾರಂಭಿಸಬೇಕಿತ್ತು. ನಮ್ಮ ಹಾಸ್ಟೆಲ್ ಬಿಟ್ಟ ಅನೇಕರು ಸುತ್ತಮುತ್ತ ಗುಂಪಾಗಿ ಮನೆ ಮಾಡಿಕೊಂಡಿದ್ದರೂ ನನಗೆ ಅಲ್ಲಿ ಜಾಗ ಇರಲಿಲ್ಲ. ಹೌಸ್‌ಫುಲ್! ಅಯ್ಯೋ ರಾಮ, ಆ ಕೊಂಪೆ ಪಿಜಿಗಳಿಗೆ ಹೋಗಬೇಕಾ ಎಂದು ಅನ್ನಿಸಿ ಅಳುವುದೊಂದೆ ಬಾಕಿ. ಆ ಹೊತ್ತಿನಲ್ಲಿ ಬೆಂಗಳೂರಿನ ಮೂಲೆ ಮೂಲೆ ಸುತ್ತಿ ಅನೇಕ ಸಸ್ಯಾಹಾರಿ ಪಿಜಿಗಳನ್ನು ನೋಡಿದ್ದೇನೆ. ಆ ಹರಡಿಕೊಂಡಿರುವ ರೂಂಗಳು, ಕಂಡ ಕಂಡಲ್ಲಿ ಹಾರ್ಡಬೊರ್ಡ್ ನೆಟ್ಟು ಮಾಡಿದ ಚಿಕ್ಕ ಚಿಕ್ಕ ಉಸಿರುಗಟ್ಟಿಸುವ ರೂಮುಗಳು… ಈಗಲೂ ನೆನಪಿದೆ. ಓನರುಗಳು ದುಡ್ಡಿನ ಹಿಂದೆ ಬಿದ್ದು ಏಷ್ಟಾಗುತ್ತೊ ಅಷ್ಟು ಜನರನ್ನು ಒಳಗೆ ದಬ್ಬಿದ್ದರು. ಟಾಯ್ಲೆಟ್, ಬಾತ್ ರೂಂಗಳು ಆ ದೇವರಿಗೆ ಪ್ರೀತಿ. ಹಾಗಂತ ಎಲ್ಲ ಪಿಜಿಗಳೂ, ಹಾಸ್ಟೆಲ್‌ಗಳೂ ಕೆಟ್ಟವಿರಲಿಲ್ಲ. ವಿಜಯನಗರದ ಬಂಟ್ಸ್ ಇರಬಹುದು, ಸಂಪಿಗೆ ರೋಡಿನ ಮತ್ತು ಗಿರಿನಗರದ ಆ ಅಮ್ಮಂದಿರ ಪಿಜಿಗಳು ಇರಬಹುದು, ಬಿಟಿಎಂ ಲೇಔಟಿನ ಮಂಗಳೂರಿನವರ ಆ ಪಿಜಿಯಿರಬಹುದು. ಆದರೆ ಅವೆಲ್ಲ ಪೋಶ್ ಕೆಟಗೆರಿಯವು. ಅವುಗಳ ತಿಂಗಳ ಭಾಡಿಗೆ ಆಗತಾನೇ ಸಿಕ್ಕ ಚಿಕ್ಕ ಕೆಲಸದ ಸಂಬಳದಷ್ಟೇ ಇತ್ತು.

ಹಾಸ್ಟೇಲಿನ ಅಂತಿಮ ಅವಧಿಯ ದಿನ ಹತ್ತಿರ ಬರುತ್ತಿರುವಾಗ ನನ್ನ ಪುಣ್ಯಕ್ಕೆ ಸ್ಕೂಲಿನ ಸ್ನೇಹಿತೆಯ ಜೊತೆಗೆ ಬಾಡಿಗೆಮನೆ ಹಿಡಿಯುವ ಅವಕಾಶ ಲಭಿಸಿತು. ಆಕೆ ನಾನ್ ವೆಜ್ ಮತ್ತು ಬೇರೆ ಜಾತಿ ಎಂದು ಮನೆಯಲ್ಲಿ ಚಿಕ್ಕ ಅಸಮಾಧಾನವಿದ್ದರೂ ಆವತ್ತು ಬೇರೆ ದಾರಿ ಇರಲಿಲ್ಲ. ಆ ಓನರಿನ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ಇದ್ದ ಇನ್ನೊಬ್ಬ ಸ್ಕೂಲ್ ಸ್ನೇಹಿತೆಯಿಂದ ಆ ಅವಕಾಶ ಪ್ರಾಪ್ತವಾಗಿತ್ತು. ಮಾತಾಡಲು ಹೋದಾಗ ಓನರ್ ಆಂಟಿ ಅರಿಶಿನ-ಕುಂಕುಮ, ಮಲ್ಲಿಗೆ ಹೂವನ್ನೆಲ್ಲಾ ಕೊಟ್ಟು ಬಾಯ್ತುಂಬಾ ಮಾತಾಡಿಸಿ ಏನೂ ಟೆನ್ಶನ್ ಮಾಡಿಕೊ ಬೇಡಮ್ಮ, ಈ ಮನೆ ನಿಮಗೇನೆ ಅಂತ ಪಕ್ಕಾ ಮಾಡಿಕೊ ಎಂದು ಹೇಳಿ ಕಳಿಸಿದರು. ನನಗೆ ಆ ಮಾರನೇ ದಿನವೇ ದೊಡ್ಡಮ್ಮನ ಮಗನ ಮದುವೆಗೆ ಊರಿಗೆ ಹೋಗಬೇಕಾದ್ದರಿಂದ ಮುಂದಿನ ವಾರ ಬಂದು ಹಾಲು ಉಕ್ಕಿಸುತ್ತೇವೆ ಎಂದು ಹೇಳಿ ಬಂದಿದ್ದೆ. ಖುಷಿಯಿಂದ ಹಾಸ್ಟೆಲ್ಲಿನಲ್ಲಿನ ಎಲ್ಲ ಸಾಮಾನುಗಳನ್ನು ಪ್ಯಾಕ್ ಮಾಡಿ ಹೊರಗಡೆ ಕೋಣೆಯಲ್ಲಿ ಇಟ್ಟು ಎಲ್ಲರಿಗೂ ಬೈ ಹೇಳಿ ಊರಿಗೆ ಹೊರಟಿದ್ದೆ.

ಆದರೆ ಆ ಖುಷಿ ಜಾಸ್ತಿ ದಿನ ಇರಲಿಲ್ಲ. ಮದುವೆ ಅಟೆಂಡ್ ಮಾಡಲು ಊರಿಗೆ ಹೋದ ನನಗೆ ಫೋನ್ ಬಂತು. ಆ ಓನರ್ ಅಂಕಲ್ ಹತ್ತಿರ ಮನೆ ರೀಪೇಟಿಂಗ್ ಬಗ್ಗೆ ನಾ(ಯಕಃಶ್ಚಿತ ಹೆಣ್ಣಾಗಿ) ಮಾತಾಡಿದ್ದು ಸ್ವಲ್ಪ ಓವರ್ ಆಗಿ ಅವರು ಅದೇ ನೆವ ಹೇಳಿ ಮನೆಯನ್ನು ಬೇರೆಯವರಿಗೆ ಕೊಟ್ಟಿದ್ದರು. ನನ್ನ ಸ್ನೇಹಿತೆಗೆ ಚೆನ್ನಾಗಿ ಬೈದು ಆಕೆ ನನ್ನ ಮುಖ ನೋಡದ ಹಾಗೆ ಮಾಡಿದ್ದರು. ಬೆಂಗಳೂರಿಗೆ ವಾಪಾಸ್ಸಾದ ಮೇಲೆ ಉಳಿಯಲು ನನಗೆ ಜಾಗ ಇರಲಿಲ್ಲ. ಪುಣ್ಯಕ್ಕೆ ನನ್ನ ಮನೆಯಲ್ಲಿ ಗಟ್ಟಿ ಇದ್ದರು, ಬೆಂಗಳೂರಿನಲ್ಲಿ ಕೆಲವು ತಿಂಗಳು ಉಳಿಯಲು ಅವಕಾಶ ಮಾಡಿಕೊಡಬಲ್ಲ ಸಂಬಂಧಿಕರು ಇದ್ದರು. ಆ ಪ್ರಶ್ನೆ ಬಿಡಿ. ನನಗೆ ಆ ಹೊತ್ತಲ್ಲಿ ನಗು ನಗುತ್ತಾ ಮಾತಾಡಿಸಿದ್ದ ಆ ಆಂಟಿಯ ಮುಖ ಕಣ್ಮುಂದೆ ಹಾದು ಹೋಯಿತು.

ಅಮ್ಮ ನಮ್ಮ ಮಾವನಿಗೆ ಊರಿನಿಂದಲೇ ಫೋನ್ ಮಾಡಿ ಪರಿಸ್ಥಿತಿ ವಿವರಿಸಿ, ಅವರ ವಶೀಲಿಯಿಂದ ಹಾಸ್ಟೇಲಿನಲ್ಲಿ ಒಂದು ತಿಂಗಳ ಹೆಚ್ಚುವರಿ ಗಡವು ತೆಗೆದುಕೊಂಡರು. ಈಗ ಮದುವೆಯಾಗುತ್ತಿದ್ದ ಅಣ್ಣನಿಗೆ ಅವನು ಹೊಸದಾಗಿ ಭಾಡಿಗೆ ಹಿಡಿದಿದ್ದ ಮನೆಯ ಬಗ್ಗೆ, ನನ್ನ ಇನ್ನೊಬ್ಬ ಹಾಸ್ಟೇಲ್ ಮೇಟಿನಿಂದ ವಿಷಯ ತಿಳಿದು ಆತನಿಗೆ ನಾನೇ ಹೇಳಿದ್ದೆ. ಆ ಮನೆಯೂ ಚೆನ್ನಾಗಿದ್ದರಿಂದ ಆತ ನೋಡಿದ ತಕ್ಷಣ ಒಪ್ಪಿಕೊಂಡಿದ್ದ. ಜೊತೆಗೆ ಆ ಮನೆಯ ಓನರ್ ನಮ್ಮ ಊರಿನವರೇ ಆಗಿದ್ದರು. ಹಾಗಾಗಿ ಆ ಮನೆಯ ಓನರ್ ಸಹ ಮದುವೆಗೆ ಬಂದಿದ್ದರು. ಮದುವೆಯ ದಿನ ಅಣ್ಣನ ಪಕ್ಕದ ಮನೆ ಖಾಲಿ ಇದ್ದದ್ದು ಅವರಿಂದ ತಿಳಿದು ಬಂದು ಮದುವೆ ಮಂಟಪದ ಪಕ್ಕವೇ ಅಪ್ಪ-ಅಮ್ಮ ಸೇರಿ ನನಗೆ ಮನೆ ಪಕ್ಕಾ ಮಾಡಿದರು. ಪಾರ್ಟನರ್ ಹುಡುಕಿ ಕೊಳ್ಳುವ ಒಂದು ಕೆಲಸವನ್ನು ನನಗೆ ಬಿಟ್ಟರು. ಏಕೆಂದರೆ ಒಬ್ಬಳೇ ಹುಡುಗಿ ಮನೆ ಮಾಡಿಕೊಂಡಿರುವುದು ಅವರಿಗೆ ಒಪ್ಪಿಗೆ ಇರಲಿಲ್ಲ, ಓನರ್ರು ಸಹ ಮನೆ ಕೊಡುವುದಕ್ಕೆ ಒಪ್ಪುವುದಿಲ್ಲ ಬಿಡಿ.

ಒಟ್ಟಿನಲ್ಲಿ ಎಲ್ಲ ಸುಖಾಂತವಾಗಿ ನನ್ನ ಹಾಸ್ಟೇಲಿನಲ್ಲಿ ಸೀನಿಯರ್ ಆಗಿದ್ದ ಆಕೆಯನ್ನು ಒಪ್ಪಿಸಿ ಈ ಮನೆಯನ್ನು ಮಾಡಿದ್ದಾಗಿತ್ತು. ಮಧ್ಯದಲ್ಲಿ ಮೊದಲೊಮ್ಮೆ ನನಗೆ ಕೈ ಕೊಟ್ಟ ಹಾಸ್ಟೆಲ್ ಸ್ನೇಹಿತೆಯು ಬಂದು ಒಂದು ವರ್ಷ ನಮ್ಮ ಜೊತೆ ಉಳಿದು ಹೋಗಿದ್ದಳು. ಮೂರು ವರ್ಷದ ನನ್ನ ಆಕೆಯ ಸ್ನೇಹಕ್ಕೆ ನಿನ್ನೆ ಕೊನೆಯ ದಿನವಾಗಿತ್ತು. ಮನದಲ್ಲಿ ಕಹಿ ತುಂಬಿಕೊಂಡು ಆಕೆ ಮತ್ತು ನಾನು ಬೇರೆಯಾಗಿದ್ದೆವು. ಇವತ್ತಿನಿಂದ ನಾನು ಒಬ್ಬಳೇ. ನನ್ನದೇ ದುಡ್ಡು, ನನ್ನದೇ ಮನೆ, ನನ್ನದೇ ಅನ್ನ.

ನನ್ನ ಮನೆ ಮೇಟ್ ತಾನು ಬೇರೆ ಹೋಗುತ್ತೇನೆ ಎಂದಾಗ ನಾನು ಕೆಲಸದಲ್ಲಿರಲಿಲ್ಲ. ಇದ್ದ ಕೆಲಸ ಬಿಟ್ಟು ಮನೆಯಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಹೊತ್ತಲ್ಲಿ ಸಿಕ್ಕ ಇಣಚಿ ಮರಿಯನ್ನು ಸಾಕಿಕೊಂಡಿದ್ದೆ. ಆಕೆ ಇಣಚಿಯನ್ನು ಮನೆಯಿಂದ ಹೊರ ಹಾಕಿದರೆ ತಾನು ಇರುವುದಾಗಿ ಹೇಳಿದರೆ ನಾನು ಕೇಳಬೇಕಲ್ಲ. ಇಣಚಿಯನ್ನು ಸಾಯಿಸುವುದು ನನ್ನಿಂದಾಗದ ಮಾತಾಗಿತ್ತು. ಅದು ಬೆಳೆದು ತನ್ನಷ್ಟಕ್ಕೆ ನಿಸರ್ಗಕ್ಕೆ ಮರಳಿ ಹೋಗುವ ತನಕ ನಾ ಅದನ್ನು ನೋಡಿಕೊಳ್ಳುತ್ತೇನೆ ಎಂದು ಆಣೆ ಮಾಡಿಕೊಂಡಿದ್ದೆ. ಅದೆಲ್ಲಿಂದ ಧೈರ್ಯ ಉಕ್ಕಿತ್ತೊ. ಆಯಿತು, ನಾನು ಒಬ್ಬಳೇ ಇರುತ್ತೇನೆ ಎಂದು ಹಟ ತೊಟ್ಟಿದ್ದೆ. ಆ ಹೊತ್ತಲ್ಲಿ ಆಕೆ ಶೇರ್ ಮಾಡಿದ್ದ ಅಡ್ವಾನ್ಸ್ ವಾಪಸ್ಸು ಕೊಡಲು ಹಣವಿರಲಿಲ್ಲ. ಆಕಾರಣ ಮೂರು ತಿಂಗಳ ಗಡವು ತೆಗೆದುಕೊಂಡೆ. ಇದ್ದ ಹಣ ಆಕೆಗೆ ಕೊಟ್ಟರೆ ಹೊಸ ಕೆಲಸ ಸಿಗುವವರೆಗೆ ಹಣಕ್ಕೇನು ಮಾಡುವುದು ಎಂಬ ಚಿಂತೆಯಿತ್ತು. ಮನೆಯಿಂದ ದುಡ್ಡು ತೆಗೆದುಕೊಳ್ಳುವುದು ಆಗದ ಮಾತು. (ಯಾರಿಗೂ ಕಡೆಘಳಿಗೆಯ ತನಕ ವಿಷಯ ಹೇಳಿದ್ದರೆ ತಾನೆ). ಆಗ ಸಹಾಯಕ್ಕೆ ಬಂದಿದ್ದು ನನ್ನ ಕಂಪ್ಯೂಟರ್. ಅದನ್ನು ’e-bay’ ಮೂಲಕ ಗಿರಾಕಿ ಹುಡುಕಿ ಮಾರಿ ಜೊತೆಗೆ ಸಿಕ್ಕ ಹೊಸ ಕೆಲಸದ ಮೊದಲ ಸಂಬಳದ ಸ್ವಲ್ಪ ದುಡ್ಡು ಸೇರಿಸಿ ವಾಪಾಸ್ಸು ಕೊಟ್ಟೆ. ಉಫ್! ಕೆಟ್ಟ ಹಟ.

ಪ್ರಾರಂಭದಲ್ಲಿ ಅಡಿಗೆ ಮನೆ ವ್ಯವಸ್ಥೆಗೆ ಸ್ವಲ್ಪ ಕಷ್ಟವಾಯಿತು. ಅಲ್ಲಿಯವರೆಗೂ ಆಕೆ ತಂದಿದ್ದ ಗ್ಯಾಸ್ ಸ್ಟೋವ್ ಇತ್ತು. ಹೊಸ ಕನೆಕ್ಷನ್ ನನಗೊಬ್ಬಳಿಗೆ ದುಬಾರಿ. ಕೊನೆಗೆ ಒಂದೇ ಒಲೆಯ ಚಿಕ್ಕ ಸಿಲೆಂಡರಿನ ಗ್ಯಾಸ್ ಒಲೆ ತಂದಿಟ್ಟುಕೊಂಡೆ. ಜೊತೆಗೆ ಒಬ್ಬಳಿಗೆ ಸಾಕಾಗುವಷ್ಟು ಚಿಕ್ಕ ಕುಕ್ಕರ್ ಮತ್ತು ಪಾತ್ರೆಗಳು ಬಂತು. ಮೊದಲೇ ನಾನು ಮಿಕ್ಸರ್ ಖರೀದಿಸಿದ್ದು ಆವತ್ತು ಉಪಯೋಗಕ್ಕೆ ಬಂತು. ಹೀಗೆ ನನ್ನ ಮತ್ತು ಇಣಚಿಯ ಪುಟ್ಟ ಸಂಸಾರ(!) ಪ್ರಾರಂಭವಾಗಿತ್ತು.

ಬೆಂಗಳೂರಿನಲ್ಲಿ ಮದುವೆಗೆ ಮುನ್ನ ಕಳೆದ ಆ ದಿನಗಳು ಇನ್ನೂ ನನಗೆ ನೆನಪಿವೆ. ನನಗೆ ಊಟ ಮಾಡಲು, ಶಾಪಿಂಗ್ ಹೋಗಲು ಜೊತೆ ಬೇಕೆನ್ನುವ ಆವಶ್ಯಕತೆ ಇಲ್ಲದ್ದರಿಂದ ಅಥವಾ ನನ್ನ ಜೊತೆ ನನಗೆ ಬದುಕಲು ಬೇಸರವಿಲ್ಲದ ಕಾರಣ ದಿನಗಳು ಬೇಗ ಖಾಲಿಯಾದವು. ಒಬ್ಬಳೇ ತಿಂದ ನೆರಳೆ ಹಣ್ಣಿನ ರುಚಿ ಇನ್ನೂ ನೆನಪಿದೆ. ದಿನಾ ಸಂಜೆ ಟೀ ಜೊತೆ ಈರುಳ್ಳಿ ಬಜೆ ಮಾಡಿಕೊಂಡು ಇಣಚಿ ಜೊತೆಗೆ ಸೇರಿ ಕಿಟಕಿಯ ಬಳಿ ತಿನ್ನುತ್ತಾ ಕುಳಿತುಕೊಳುತ್ತಿದ್ದೆ. ರಜಾ ದಿನಗಳಲ್ಲಿ ರಾತ್ರಿ ಎಷ್ಟು ಹೊತ್ತು ಬೇಕಾದರೂ ಕಂಪ್ಯೂಟರ್(ಭಾಡೀಗೆದು)ನಲ್ಲಿ ಕುಟ್ಟುತ್ತಾ ಅಥವಾ ದೊಡ್ಡದಾಗಿ ವಾಲ್ಯೂಮ್ ಹಾಕಿ ಸಿನೆಮಾ ನೋಡಬಹುದಿತ್ತು. ಇಣಚಿಗೂ ಇಡೀ ಮನೆ ಓಡಾಡುವ ಪರ್ಮಿಟ್ ಸಿಕ್ಕಿತ್ತು. ಅದಕ್ಕೆ ಬಯ್ಯುವರಾರು ಇರಲಿಲ್ಲ. ಬೇಕೆಂದಾಗ ಅಡಿಗೆ ಮಾಡಿಕೊಳ್ಳಬಹುದಿತ್ತು. ಪಾತ್ರೆ ತೊಳೆಯದೇ ಹಾಗೆ ಇಟ್ಟರೂ ಕೇಳುವರ್ಯಾರಿರಲಿಲ್ಲ. ಸುಮಾರು ಆರು ತಿಂಗಳ ಆ ಸಮಯದಲ್ಲಿ ಕೆಲವೊಂದು ಘಟನೆಗಳನ್ನು ಬಿಟ್ಟರೇ ಉಳಿದಿದ್ದೆಲ್ಲ ಸಕತ್ ಚೆನ್ನಾಗಿತ್ತು. ನಾನು ಒಬ್ಬಳೇ ಇರುವ ವಿಷಯ ಗೊತ್ತಾಗಿ ಭೂಪನೊಬ್ಬ ರಸ್ತೆಯಲ್ಲಿ ಹಿಂದೆ ಬಿದ್ದಿದ್ದು, ಆತನಿಗೆ ನಾ ಹೊಡೆಯಲು ಹೋಗಿದ್ದು,… ವಗೈರೆಗಳು. ಮೊದಲಿನಿಂದಲೂ ಮನೆಗೆ ಹುಡುಗರನ್ನು ಸ್ನೇಹಿತ ಅಥವಾ ದೂರದ ಅಣ್ಣ ಎಂದು ಕರೆತರುವ ಹಾಗಿರಲಿಲ್ಲ. ಆದು ನಮ್ಮ ಅಲಿಖಿತ ಒಪ್ಪಂದವಾಗಿತ್ತು. ಆಗ ಮಾಡಿಕೊಂಡಿದ್ದ ರೂಲ್ಸು ನಾನು ಒಬ್ಬನೇ ಇರಬೇಕಾದರೆ ತುಂಬಾ ಚೆನ್ನಾಗಿ ಸಹಾಯ ಮಾಡಿದವು. ಅಕ್ಕ-ಪಕ್ಕದ ಮನೆಯವರಿಗೆ, ಓನರಿಗೆ ಒಳ್ಳೆಯ ಅಭಿಪ್ರಾಯ ಇದ್ದುದರಿಂದ ಏನೂ ರಗಳೆಯಾಗಲಿಲ್ಲ. ಎಲ್ಲಕ್ಕಿಂತ ಜಾಸ್ತಿ ಪಕ್ಕವೇ ಅಣ್ಣನವರು ಇದ್ದುದು ನನಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಕೊನೆಗೊಂದು ದಿನ ನಾನು ಒಬ್ಬನೇ ಇರಲು ಕಾರಣವಾದ ಇಣಚಿ ಮನೆ ಬಿಟ್ಟು ಸಂಗಾತಿಯ ಬೆನ್ನು ಹತ್ತಿ ಹೋಯಿತು. ಮೊದಲು ಸ್ವಲ್ಪ ದಿನ ಅದರ ನೆನಪಲ್ಲಿ ಬೇಸರವಾದರೂ ನಂತರ ಹೊಸ ಕೆಲಸ ಮತ್ತು ನನ್ನ ಮದುವೆಯ ತಯಾರಿಯಲ್ಲಿ ನಾನು ಕಳೆದು ಹೋಗಿದ್ದೆ.

(ಕೆಲ ಬದಲಾವಣೆಗಳೊಂದಿಗೆ ‘ಸಖಿ’ಯ ಜನವರಿ೧೬-೩೦ರ ಸಂಚಿಕೆಯಲ್ಲಿ, ‘ಸಂತೆಯಲ್ಲಿ ಏಕಾಂತೆ’ ತಲೆಬರಹದಡಿ ಪ್ರಕಟವಾಗಿತ್ತು)

6 Responses to “ಹೀಗೊಂದು ಪ್ರವರ”

 1. sunaath Says:

  ದೊಡ್ಡೂರಿನ ಜೊಂಜಾಟಗಳನ್ನು ಚೆನ್ನಾಗಿ ವಿವರಿಸಿದ್ದೀರಿ.

  Like

 2. Sushrutha Says:

  ಬರೆದ ಶೈಲಿ ತುಂಬಾ ಇಷ್ಟ ಆತು. ಆದ್ರೆ ನಾನು ಇದನ್ನ ಕಥೆ ಥರಾ ಓದ್ಕೊಂಡೆ ಅನ್ಸುತ್ತೆ, ಅದ್ಕೇ incomplete ಅನ್ಸಿಬಿಡ್ತು.. Its like, I was expecting something to happen in the story.. ಏನೂ ಆಗ್ಲೇ ಇಲ್ಲ.. ಡೀಟೇಲ್ಸಲ್ಲೇ ಮುಗ್ದು ಹೋಯ್ತು. 😦

  Like

 3. ನೀಲಾಂಜಲ Says:

  @sunaath, ಧನ್ಯವಾದ 🙂

  @Sushrutha,
  ಹ್ಹ ಹ್ಹ ಹ್ಹಾ, ನಿ ಹೇಳಿದ್ದು ಒಂದು ಲೆಕ್ಕದಲ್ಲಿ ಸರಿ ಇದ್ದು. ಮಧ್ಯಕ್ಕೆ ಎಲ್ಲಿಂದಲೋ ಸ್ಟಾರ್ಟ್ ಆಗಿ ಮತ್ತೆಲ್ಲೋ ಬಂದು ನಿಂತಗಂಡಿಗಿದು. ಅವು ಸಿಟಿಯಲ್ಲಿಯ ಒಬ್ಬಂಟಿ ಮಹಿಳೆಯ ಜೀವನದ ಸುತ್ತ ಕೆಲ ಪಾಯಿಂಟ್ ಕೊಟ್ಟು ಬರೆಯಲೆ ಹೇಳಿದಿದ್ದ. ಅದನ್ನೆಲ್ಲ ನೆನಪಿಟ್ಟುಕೊಂಡು ಬರೆದದ್ದು ಅಥವಾ ಬರೆಯವು ಹೇಳಿ ಬರೆದದ್ದು ಹೀಗೆ ಆಯ್ದು.

  Like

 4. asha Says:

  hi koose…
  mane hudukida rampata nenapiddu…all of us can add a story of finding a house in Banaglore i guess.. I cant forget that owner uncle.

  Like

 5. chetana Teerthahalli Says:

  🙂
  Santeyalle Ekaante… onty aur Bubly 🙂 🙂

  Like

 6. ನೀಲಾಂಜಲ Says:

  @asha- ಹೌದು, ಮನೆ ಹುಡುಕುವ ಎಲ್ಲರತ್ತಿರನೂ ಈ ತರಹ ಕತೆಗಳು ಇರ್ತು. ನನ್ನ ಸಲುವಾಗಿ ನಿಂಗ ಹೇಳಿಸಿಕೊಳ್ಳಂಗೆ ಆಗಿತ್ತು. 🙂
  @chetana- ಹುಂ, ಒಂಟಿ ಔರ್ ಬಬ್ಲಿ, ಈ ಹೆಡ್ಡಿಂಗ್ ಕೊಟ್ಟಿದ್ದು ಚೆನ್ನಾಗಿತ್ತು. 🙂

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: