ರಕ್ತಗತ

ಈಗಷ್ಟೇ ಪೇಪರಿನಲ್ಲಿ ಮುಂಬಯಿ ಉದ್ಯಮದ ಪ್ರಭಾವಶಾಲಿ, ಶ್ರೀಮಂತ ಕಛ್ಚಿ ವಾಗಡ್ ಸಮಾಜದವರು ಅಂತರಜಾತಿ ವಿವಾಹಕ್ಕೆ ನಿರ್ಭಂದನೆ ಹೇರಿದ್ದರ ಕುರಿತು ಓದುತ್ತಿದ್ದೆ. ತಮ್ಮ ಸಮಾಜದ ರೀತಿ-ನೀತಿ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕಾರಣ ಮುಂದಿಟ್ಟು ಜಾತಿ ಬಿಟ್ಟು ಮದುವೆಯಾಗುವವರನ್ನು ತಮ್ಮ ಸಮಾಜದಿಂದ ಹೊರಹಾಕುವುದಾಗಿ ನಿಯಮ ರೂಪಿಸಿದ್ದಾರೆ. ಅದಕ್ಕೆ ಅವರ ಸಮಾಜದ ಯುವಕರಿಂದಲೇ ವಿರೋಧಗಳು ವ್ಯಕ್ತವಾಗಿವೆ. ಇದನ್ನೆಲ್ಲ ಓದುತ್ತಿದ್ದಂತೆ ನನ್ನ ತಲೆಯಲ್ಲಿ ಅನೇಕ ವಿಚಾರಗಳು ಹಾದು ಹೋದವು.

ಇವರು ಕೊಟ್ಟ ಕಾರಣ ತಕ್ಕ ಮಟ್ಟಿಗೆ ಸರಿಯೆಂದು ನನಗೆ ಕಾಣಿಸಿತು. ನನ್ನ ಸ್ವಂತದ ಉದಾಹರಣೆ ಕೊಡುವುದಾದರೆ ನಾನು ಹವ್ಯಕ ಮತ್ತು ಮನೆಯವರು ಕೋಟಾ ಬ್ರಾಹ್ಮಣರು. ನಾವಿಬ್ಬರೂ ಬ್ರಾಹ್ಮಣರಾದರೂ ನಮ್ಮಿಬ್ಬರ ಕುಟುಂಬಗಳ ರೀತಿ-ನೀತಿ, ಸಂಸ್ಕೃತಿ, ಆಚರಣೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮಿಬ್ಬರ ವೇದಗಳು ಹಾಗೂ ಪ್ರದೇಶ (ಜಿಲ್ಲೆ) ಬದಲಾಗಿದ್ದೂ ಕಾರಣವಿರಬಹುದು. ಉದಾಹರಣೆಗೆ ನಮ್ಮ ಮದುವೆಯ ಮೊದಲಾರ್ಧ ಸಾಗರದ ಹವ್ಯಕರಂತೆ (ಸಾಗರ ಮತ್ತು ಶಿರಸಿ ಹವ್ಯಕರ ಆಚರಣೆಗಳಲ್ಲೂ ಸಾಕಷ್ಟು ಅಂತರವಿದೆ), ಉಳಿದಾರ್ಧ ಕೋಟಾದವರಂತೆ. ಸಾಗರದ(ದಶ ಸೀಮೆ) ಕಡೆಗಳಲ್ಲಿ ಕಾಲುಂಗುರವನ್ನು ವರನ ಕಡೆಯವರು ಕೊಡಬೇಕು, ಕೋಟಾದವರಲ್ಲಿ ವಧುವಿನ ಕಡೆಯವರು. ಹೀಗಾಗಿ ನನಗೆ ಕಾಲುಂಗುರ ಯಾರೂ ತೊಡಿಸಲಿಲ್ಲ. ಶಿರಸಿಯಿಂದ ಮಂಗಳೂರಿಗೆ ವಧು ಪ್ರವೇಶಕ್ಕೆ ಹೋಗುವಾಗ ಮುಂದಿನ ಕಾರ್ಯದಲ್ಲಿ ಆಡಿಕೊಳ್ಳುವರ ಬಾಯಿಗೆ ಆಹಾರವಾಗಬಾರದೆಂದು ನಾನು ಇವರ ಗಮನಕ್ಕೆ ತಂದೆ. ತದನಂತರ ಇಬ್ಬರೂ ಸಿಕ್ರೇಟಾಗಿ ಪಕ್ಕದ ಬೆಳ್ಳಿಯಂಗಡಿಯಲ್ಲಿ ಕಾಲುಂಗುರ ಕೊಂಡೆವು. ಇನ್ನೂ ಎರಡು ಕಡೆಯ ಹಿರಿಯರಿಗೆ ಹೀಗಾಗಿತ್ತೆಂದು ವಿಷಯ ತಿಳಿಸಿಲ್ಲ:)

ನನಗೆ ನೆನಪಿದ್ದಂತೆ ನಾನು ಇಷ್ಟಪಟ್ಟಿದ್ದು ಕೋಟಾದವರು ಎಂದು ಗೊತ್ತಾದಾಗ ಅಮ್ಮನ ಮುಖ ಗಂಭೀರವಾಗಿತ್ತು. ಗುರುಗಳು ಒಪ್ಪುವರೋ ಇಲ್ಲವೋ ಎಂಬ ದುಗುಡ. ಎಂಟು ವರ್ಷದ ಕೆಳಗೆ ನಮ್ಮ ಮನೆಯಲ್ಲಿನ ಅಂತಿಮ ನಿರ್ಧಾರಗಳು  ಈಗಿನಷ್ಟು ಸಂಸ್ಥಾನದ ಮೇಲೆ ನಿರ್ಭರವಾಗಿರಲಿಲ್ಲ. ನಾವು ಬಹು ಮುಂಚಿನಿಂದಲೇ ಶಿರಸಿಯಲ್ಲಿ ಸೆಟಲ್ ಆಗಿದ್ದರಿಂದ ಅಮ್ಮನ ತವರಿನ ಮಠವಾಗಿದ್ದ ಸ್ವರ್ಣವಳ್ಳಿಗೆ ನಡೆದುಕೊಳ್ಳುತ್ತಿದ್ದೆವು. ಅದೂ ವರ್ಷಕ್ಕೆರಡು ಭೇಟಿಯೊಂದಿಗೆ ಮುಗಿಯುತ್ತಿತ್ತು. ಆಗ ಸಾಗರದ ಮಠದ ಬಗ್ಗೆ  ಅಲ್ಲಿನ ಬಹುತೇಕ ಜನಕ್ಕೇ ಪ್ರೀತಿಯಿರಲಿಲ್ಲ. ನಾನಾಗ ಹವ್ಯಕರ ಮಠವೆಂದರೆ ಸ್ವರ್ಣವಳ್ಳಿ ಎಂದೇ ಭಾವಿಸಿದ್ದೆ. ತದನಂತರದ ವರ್ಷಗಳಲ್ಲಿ ರಾಘವೇಶ್ವರ ಸ್ವಾಮಿಗಳು ಅಧಿಕಾರ ವಹಿಸಿದ ನಂತರ ಆ ಮಠದ ಖದಿರೇ ಬದಲಾಯಿತು. ಹೊಸ ಸ್ವಾಮಿಗಳು ಜನರೊಡನೆ ಬೆರೆತು ಬಹುಬೇಗ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದರು. ನನ್ನ ಅಪ್ಪ-ಅಮ್ಮ ಸಹ ನಿಯಮಿತವಾಗಿ ರಾಮಚಂದ್ರಾಪುರ ಮಠಕ್ಕೆ ಹೋಗಲಾರಂಭಿಸಿದರು. ಹೀಗಾಗಿ ಕುಟುಂಬದ ಪ್ರಮುಖ ನಿರ್ಧಾರಗಳನ್ನು ಸ್ವಾಮಿಗಳ ಬಳಿ ಹೇಳಿಕೊಂಡು ಆಶೀರ್ವಾದಪೂರ್ವಕವಾಗಿ ಮಂತ್ರಾಕ್ಷತೆ ಪಡೆಯುವುದು ವಾಡಿಕೆಯಾಗಿ ಹೋಯಿತು. ಈಗ ಇದೇ ಸಮಸ್ಯೆಯಾಗಿತ್ತು.

ನಾವು ಕೇಳಿದ್ದ ಪ್ರಕಾರ ಸಗೋತ್ರ ವಿವಾಹಕ್ಕೆ ಸಂಸ್ಥಾನದ ಅನುಮತಿಯಿರಲಿಲ್ಲ ( ಪೀಠ, ಸಂಸ್ಥಾನ, ಸ್ವಾಮಿಗಳು, ಮಠ ಇವುಗಳ ಮಧ್ಯ ಬೇಧಗಳಿದೆ). ಸಗೋತ್ರ ಮದುವೆಗಳಿಗೆ ಗುರುಗಳ ಆಶೀರ್ವಾದ ಕೇಳಿಬಂದರೆ ಅವರು ಅಸಮ್ಮತಿ ಸೂಚಿಸುವುದಿಲ್ಲ. ಆದರೆ ಮಂತ್ರಾಕ್ಷತೆ ನೀಡುವುದಿಲ್ಲ. ಮಂತ್ರಾಕ್ಷತೆ ದೊರಕದ ಹೊರತು ಕಾರ್ಯ ಮುಂದುವರಿಸುವಂತಿಲ್ಲ. ಇಕ್ಕಟ್ಟಿನ ಸ್ಥಿತಿ. ನಮ್ಮದು ಸಗೋತ್ರವಲ್ಲದಿದ್ದರೂ, ಹವ್ಯಕರಾದ ನಾವು ಕೋಟಾದವರಿಗೆ ಹೆಣ್ಣು ನೀಡುವುದಕ್ಕೆ ಹೀಗೆ ಏನಾದರೂ ಆದರೆ ಎಂದು ಅಮ್ಮನ ಚಿಂತೆಯಾಗಿತ್ತು. ಕೊನೆಗೆ ಸ್ವಾಮಿಗಳಿಗೆ ತ್ರಿಮತಸ್ಥ ಬ್ರಾಹ್ಮಣರ ನಡುವಿನ ಕೊಟ್ಟು-ಕೊಳ್ಳುವಿಕೆಗೆ ಸಮ್ಮತಿಯಿದೆ ಎಂದು ತಿಳಿದುಬಂದು ಅಮ್ಮ ನಿರಾಳವಾದರು.

ಮದುವೆ ಆದ ಮೇಲೆ ಅತ್ತೆಯಿಂದ ಗೊತ್ತಾದ ವಿಷಯವೆಂದರೆ ನನ್ನ ಗಂಡನ ಮನೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದವಂತೆ. ಕೋಟಾದವರು ಯಾವುದೇ ಮಠಕ್ಕೆ ಬಂಧಿತರಾಗದಿದ್ದರಿಂದ ಹಿರಿಯ ಪಂಡಿತರ ಬಳಿ ಈ ವಿಷಯ ಪ್ರಸ್ತಾಪಿಸಿದ್ದರಂತೆ. ಅವರು ಅನುಮತಿ ನೀಡಿದ ಬಳಿಕವೇ ಮಾತು ಮುಂದುವರೆದಿದ್ದು. ನಮ್ಮದು ಲವ್ ಮ್ಯಾರೇಜ್ ಆದರೂ ವಿವಾಹ ಅನ್ನೊದು ವಧು-ವರರನ್ನು ಮೀರಿ ಎರಡು ಕುಟುಂಬಗಳ ನಡುವಿನ ಸಂಬಂಧವಾಗಿಬಿಡುತ್ತದೆ.

ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಭಾರತೀಯ ಸಮಾಜ ಪದ್ಧತಿ ತುಂಬಾ ಸಂಕೀರ್ಣವಾದದ್ದು ಎಂದು ನನಗೆ ಅನ್ನಿಸುವುದರಿಂದ. ಯಾವುದನ್ನೂ ತಪ್ಪು-ಸರಿ ಎಂದು ವರ್ಗೀಕರಿಸಿ ತುಲನೆ ಮಾಡಲು ಸಾಧ್ಯವಿಲ್ಲ. ಈ ಸಂಪ್ರದಾಯ ನಮ್ಮ ರಕ್ತದಲ್ಲಿ ನಮಗರಿವಿಲ್ಲದೆ ಬೆರೆತುಕೊಂಡು ಬಿಟ್ಟಿದೆ. ಅದನ್ನು ಶೋಧಿಸಿ  ಬೇರೆ ಮಾಡುವುದು ಡಯಾಲಿಸಸ್ ಮಾಡಿದಷ್ಟೇ ಯಾತನಾಮಯ. ಪೆನ್ನಲ್ಲಿ, ಮೈಕಿನಲ್ಲಿ ಅಂತರಜಾತಿ ವಿವಾಹಗಳ ಬಗ್ಗೆ ಕುಟ್ಟಬಹುದು, ಕೂಗಾಡಬಹುದು. ಆದರೆ ಈ ತರಹದ ವಿವಾಹಗಳನ್ನು ನಿಭಾಯಿಸುತ್ತಿರುವರಿಗೆ ಇದರ ಕಷ್ಟಗಳು ಗೊತ್ತು.

ಹಾಗಂತ ನಾನು ಈ ವಿವಾಹಗಳ ವಿರೋಧಿಯೇನಲ್ಲ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಮತ್ತು ಸಾಯುವ ತನಕ ಸಂಬಂಧಗಳನ್ನು ನಿಭಾಯಿಸಿಕೊಂಡು ಹೋಗುವ ಎದೆಗಾರಿಕೆಗೆ ಬಿಟ್ಟದ್ದು. ನಮ್ಮದು ಅಂತರಜಾತಿ ವಿವಾಹ ಅಲ್ಲದಿದ್ದರೂ ಅಂತರ ಒಳಜಾತಿ ವಿವಾಹ. ಎರಡು ಕುಟುಂಬಗಳ ಸಹಕಾರ, ಬೆಂಬಲವಿದ್ದರೂ ಬದಲಾಗುವ ರೀತಿ-ನೀತಿ, ಸಂಪ್ರದಾಯ, ಆಚರಣೆಗಳಿಗೆ ನಾನಿನ್ನೂ ಒಗ್ಗಿಕೊಂಡಿಲ್ಲ. ಇನ್ನು ಕುಟುಂಬದ ವಿರೋಧ ಕಟ್ಟಿಕೊಂಡವರ ಕತೆಯೇನು? ಹಾಗೇನೆ ಬೇರೆ ದೇವರ, ಬೇರೆ ತತ್ವಗಳನ್ನೇ ಉಸಿರಾಡುವ ಪರಕೀಯ ಕುಟುಂಬಕ್ಕೆ ಹೋಗಿ ಅನುಭವಿಸುವ ಹೆಣ್ಣಿನ ಹೇಳಿಕೊಳ್ಳಲಾಗದಂತಹ ಸಂಕಟಗಳಿಗೆ ನನ್ನ ಸಹಾನುಭೂತಿಯಿದೆ.

56 Responses to “ರಕ್ತಗತ”

  1. Amar Tumballi Says:

    well written. being outsider to this type of situation, i can’t tell much about it. But this is the exact point I advocate to people I know.

    Like

  2. Manoj Says:

    ಇದನ್ನ ನಾನೂ ಹೆಚ್ಚಾಗಿ ಒಪ್ತೇನೆ. ಆದರೆ ಕಡೆ ಪಕ್ಷ ನಮ್ಮ ಮುಂದಿನ ಜನರೇಶನ್ ಆದ್ರೂ ಈ ಭೇಧಗಳು ಇಲ್ದೇ ಇರೋ ಒಂದು ಸಮಾಜದಲ್ಲಿ ಇರುವ ಹಾಗೆ ಆಗ್ಲಿ ಅಂತ. ಸಂಸ್ಕೃತಿ, ಆಚಾರ, ಪದ್ದತಿಗಳ ಹೊಂದಾಣಿಕೆಯಲ್ಲಿ ಆಗೋ ಕಷ್ಟ ಎಲ್ಲಾ ಸರಿ, ಆದ್ರೆ ಅದು ಇಬ್ಬರ (ಅಥವಾ ಎರಡು ಕುಟುಂಬದ) ನಡುವೆ ಹೊಸ ಒಂದು ಕೊಡು ಕೊಳ್ಳುವಿಕೆ ಆಗಲಿ, ಅದರ ಬದಲು ದೂರನೇ ನಿಂತು ಇರೋದಿಕ್ಕೆ ಒಂದು ಕಾರಣ ಆಗ್ದೇ ಇರ್ಲಿ

    Like

  3. ಹರೀಶ ಮಾಂಬಾಡಿ Says:

    ಹುಡುಹ, ಹುಡುಗಿಯ ಕುಟುಂಬಗಳು ಒಪ್ಪಿದರೆ, ಅವರ ಜಾತಿ ಇರಲಿ ರೀತಿ, ನೀತಿಗಳು ಹೊಂದಾಣಿಕೆಯಾದಲ್ಲಿ ಅಂತರ್ಜಾತಿ ವಿವಾಹಗಳು ಸಕ್ಸಸ್. ಇಂಥದ್ದು ಯಾವಾಗ ಮುರಿದು ಬೀಳುತ್ತವೆಂದರೆ, ವಿವಾಹವಾದ ಮೇಲೆ ಪರಸ್ಪರ ಜಾತಿ, ಆಚಾರಗಳಾನ್ನು ಹೀಗಳೆಯುವುದು, ಮಕ್ಕಳಾದ ನಂತರ ಯಾವ ಭಾಶೆ ಮಾತನಾಡಬೇಕು ಎಂಬಿತ್ಯಾದಿ ಚರ್ಚೆಗಳು ಸಂಬಂಧ ಮುರಿಯಲು ಕಾರಣವಾಗುತ್ತವೆ. ಹಾಗೆಂದು ಓಂದೇ ಜಾತಿಯವರು ಮದುವೆಯಾದರೂ ಡೈವೋರ್ಸ್ ಆದ ಪ್ರಕರಣಗಳು ಹಲವಾರು.
    ಜಾತಿ ಏನೇ ಇರಲಿ ಹೊಂದಾಣಿಕೆ ಮೈನ್ ಟೈನ್ ಮಾಡಿಕೊಂಡು ಹೋಗುವುದು ಮುಖ್ಯ..

    Like

  4. ಸುನಾಥ Says:

    ಧಾರ್ಮಿಕ ಪದ್ಧತಿಗಳು ಲುಪ್ತವಾಗಿ ಹೋಗಬಾರದು ಎನ್ನುವ ಉದ್ದೇಶದಿಂದ ಅಂತರ್ಮತೀಯ (ಅಂತರ್ಮಠೀಯ?) ವಿವಾಹಗಳಿಗೆ ಅನುಮತಿ ಇರಲಿಲ್ಲ. ಆದರೆ ಈಗ ಬಹುತೇಕ ಪದ್ಧತಿಗಳು ಆಚರಣೆಯಲ್ಲಿ ಇಲ್ಲವೆಂದ ಮೇಲೆ ಈಂತಹ ವಿವಾಹಗಳಿಗೆ ಅಡ್ಡಿ ಇರಕೂಡದು.

    Like

  5. neelanjala Says:

    -ಅಮರ್, ನಿಮ್ಮ ಅಭಿಪ್ರಾಯಕ್ಕೂ ನನಗೂ ಸ್ವಲ್ಪ ಸಾಮ್ಯತೆ ಇರುವುದು ತಿಳಿದು ಖುಶಿಯಾಯಿತು.

    -ಹೌದು ಮನೋಜ್, ಆದರೆ ಭೇಧಗಳು ಇಲ್ಲದಿರುವ ಸಮಾಜ ಇರಲಿಕ್ಕೆ ಸಾಧ್ಯನಾ! ಈಗಾಗ್ಲೇ ಎಲ್ಲ ಸಮಾಜದವರು ಮೇಲೆ ಹೇಳಿದ ಕಛ್ಚಿ ವಾಗಡ ಅವರ ತರಹ ತಮ್ಮ ತಮ್ಮೊಳಗೆ ಅಲಿಖಿತ ನಿಯಮಗಳನ್ನು ರೂಪಿಸಿಕೊಳ್ಳತೊಡಗಿದ್ದಾರೆ. ಇನ್ನು ನಿಂತ ನೀರಾಗದಿರಲಿ ಎಂಬ ಆಶಯ ಮೆಚ್ಚತಕ್ಕದ್ದು.

    -ಹರೀಶ್, ಮದುವೆ ಮುರಿಯಲು ನೀವು ಕೊಟ್ಟ ಕಾರಣಗಳು ಹೊರನೋಟಕ್ಕೆ ಮಾತ್ರ ಗೋಚರಿಸುವಂತವುಗಳು ಎಂದು ನನಗನ್ನಿಸುತ್ತದೆ. ಮದುವೆಗಿಂತ ಮೊದಲು ಈ ವಿಷಯಗಳ ತೀರ್ಮಾನವಾಗಿರುತ್ತದೆ. ಆದರೆ ಇದನ್ನು ಆಚರಿಸುವಾಗ ಉಂಟಾಗುವ ದುಗುಡಗಳು ಅಂದರೆ ತನ್ನ ಮೂಲವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಅಳುಕೋ ಅಥವಾ ತನ್ನ ಮದುವೆಗೆ ಮೊದಲಿನ ಅಸ್ತಿತ್ವದ ಪ್ರಶ್ನೆಯೋ… ಇವೆಲ್ಲ ಸೂಕ್ಷ್ಮವಾಗಿ ಗೋಚರಿಸ ತೊಡಗಿದಾಗ ಸಂಬಂಧದಲ್ಲಿ ಬಿರುಕು ಬರಬಹುದೇನೊ.
    ಎಲ್ಲ ಮದುವೆಗಳು ಸಕ್ಸೆಸ್ ಆಗಕೆ ಅವರಿಬ್ಬರ ನಡುವಿನ ಹೊಂದಾಣಿಕೆ ಮೈನ್ ಟೈನ್ ಮಾಡಿಕೊಂಡು ಹೋಗುವುದು ಮುಖ್ಯ ಎನ್ನುವುದು ನನಗೆ ಸರಿ ಅನ್ನಿಸುತ್ತದೆ.

    -ಸುನಾಥ, ನೀವು ಹೇಳಿದ್ದೇನೊ ಸರಿ. ನಾನು ಮೇಲೆ ಬರೆಯದೆ ಇದ್ದ ವಿಷಯವೆಂದರೆ ಈ ಕಛ್ಚಿವಾಗಡ ಸಮಾಜದವರು ಹಿಂದೊಮ್ಮೆ ವಿಧವಾ ವಿವಾಹವನ್ನು ಬೆಂಬಲಿಸುವರನ್ನು ಸಮಾಜದಿಂದ ಹೊರ ಹಾಕಿದ್ದರಂತೆ. ಈಗ ಡೈವೋರ್ಸ ಕೊಡುವರನ್ನು ಸಹ ಹೊರ ಹಾಕುವುದಾಗಿ ನಿಯಮ ಮಾಡಿಕೊಂಡಿದ್ದಾರೆ. ಎಲ್ಲೊ ಒಂದು ಕಡೆ ನಮ್ಮ ಸಮಾಜ ಸಂಕುಚಿತವಾಗ್ತಾ ಇದ್ದೇಯಾ ಎಂಬ ಚಿಂತೆ ಮೂಡ್ತಾ ಇದೆ. ಇದರ ಬಗ್ಗೆ ಇನ್ನೊಮ್ಮೆ ಮಾತಾಡುವಾ.

    Like

  6. Sushrutha Says:

    Hmmm… Odiddi.

    Like

  7. ನೀಲಾಂಜಲ Says:

    ಸುಶ್ರುತ,
    ಎಂತಾ ಮಾರಾಯ, ನಾ ಬರೆದಿದ್ದು ಕಂಪಲ್ಸರಿ ಓದಿ ಕಮೆಂಟಿಸಲೇ ಬೇಕು ಹೇಳಿ ಎಲ್ಲಾದ್ರೂ ಹೇಳಿದ್ನಾ !
    😀 😀 😀

    Like

  8. shreenidhids Says:

    nicely written…

    Like

  9. divya.. Says:

    Am still in education life… but its true…. we feel difficult to fully adjust with our roomts itsef who are other casts!! then marriage life…… !!!!

    Like

  10. Vikas Hegde Says:

    neat presentation. liked it and agree with it.

    Really 🙂

    Like

  11. aksharavihaara Says:

    mattondu chendada baraha from neelanjala…! kushi aayitu…jaataka anno samasyeindale nanna hudugi kai tappihodlu…!!!

    Like

  12. gurubaliga Says:

    ವೈಚಾರಿಕತೆ ಹೆಚ್ಚಿದ ಹಾಗೆ ಸಂಪ್ರದಾಯಗಳ ಉಪಯುಕ್ತತೆಯೇ ಕಳೆದು ಹೋಗುತ್ತದೆ. ನೀವು ಹೊಸ ಸಂಪ್ರದಾಯಗಳಿಗೆ ಒಗ್ಗದಿರುವ ಕಾರಣವೂ ಇದೇ ಆಗಿರಬಹುದು. ನಿಮ್ಮಲ್ಲಿ ವೈಚಾರಿಕತೆ ಇದೆ ಎಂಬ ಬಗ್ಗೆಯೂ ನನಗಿರುವ ಸಂದೇಹಗಳನ್ನು ಒತ್ತಟ್ಟಿಗಿಟ್ಟು ಹೀಗೆ ಬರೆಯುತ್ತಿದ್ದೇನೆ. 🙂

    ಎರಡು ಜಾತಿಯವರ ನಡುವಿನ ವಿವಾಹವು ಜಾತಿಯೇ ಇಲ್ಲದ ಒಂದು ಹೊಸ ವರ್ಗವನ್ನು ಹುಟ್ಟು ಹಾಕಬೇಕಿತ್ತು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಗಿದ್ದು ಬೇರೆ. ಹೆಣ್ಣು ಗಂಡಿನ ಜಾತಿಯವಳಾಗಿ ಬಿಡುವುದು ಇಂತಹ ಹಲವು ವಿವಾಹಗಳಲ್ಲಿ ನಡೆದ ವಿಷಯ. ಆದಾಗ್ಯೂ ಹಲವು ದಂಪತಿಗಳು ಎರಡೂ ಕಡೆಯ ಸಂಪ್ರದಾಯಗಳನ್ನು ಬಿಟ್ಟು ದಾಂಪತ್ಯದಲ್ಲಿ ಯಶಸ್ಸು ಕಂಡಿದ್ದಾರೆ.

    ಮತ್ತೆ ಬೇಲಿ ಹಾಕತೊಡಗಿರುವ “ಉಲ್ಲೇಖಿಸಲಾದ ಪಂಗಡವು” ಕಾಲಾಂತರದಲ್ಲಿ ಅಳಿದು ಹೋಗುವುದು ಎನ್ನುವುದು ಅವರಿಗೆ ಅರಿವಿಲ್ಲ.
    ಅವರ ನಿರ್ಧಾರವು “ತಕ್ಕ ಮಟ್ಟಿಗೆ ಸರಿ” ಎಂದು ಒಪ್ಪಿಕೊಂಡಿರುವ ನಿಮ್ಮ ಬಗ್ಗೆಯೂ ನನಗೆ ಸಹನಾಭೂತಿ ಇದೆ.

    Like

  13. neelanjala Says:

    -ಶ್ರೀನಿಧಿ, ಥ್ಯಾಂಕ್ಸ್

    -ದಿವ್ಯಾ, ನಿಜ.

    -ವಿಕಾಸ್, ನಿಜಕ್ಕೂ ಒಪ್ತೀರಾ!! 😀

    -ವಿನಾಯಕ, ಷೆ! ನಿಮ್ಮ ಹುಡುಗಿ ಕೈ ತಪ್ಪಿ ಹೋಗಿದ್ದು ಕೇಳಿ ಭಾಳ ಬೇಜಾರಾಯಿತು. 😦
    ಮೊದಲೇ ಗೊತ್ತಿದ್ರೆ ಜಾತಕಾನ ಸ್ವಲ್ಪ ತಿದ್ದು ಪಡಿ ಮಾಡ್ಕೊಬಹುದಿತ್ತು, 😉

    -ಗುರು,
    >ಈ “ವೈಚಾರಿಕತೆ” ಅಂದರೆ ಏನು ಅಂತ ವಿಷದ ಪಡಿಸಿದರೆ ನಾನು ನೀವು ಕೊಟ್ಟ ಕಾರಣದ ಬಗ್ಗೆ ಯೋಚಿಸಬಹುದು.
    >ನಿಜ, ಹೊಸ ವರ್ಗ ಹುಟ್ಟಬೇಕಿತ್ತು. ಹಾಗೇ ಆಗೊದೆ ಇಲ್ವೆ.
    >ಎಷ್ಟೋ ದಂಪತಿಗಳು ಯಶಸ್ಸು ಕಂಡಿದ್ದಾರೆ. ಆದರೆ ಈ ಯಶಸ್ಸು ಪಡೆಯಲು ಅವರು ಪಟ್ಟ/ಪಡುವ ಕಷ್ಟಗಳ ಬಗ್ಗೆ ನಾನು ಮಾತಾಡ್ತಾ ಇದ್ದಿದ್ದು.
    >ಆ ಪಂಗಡ ಅಳಿದು ಹೋಗುತ್ತೆ ಎಂದು ಹೇಗೆ ಹೇಳಲಿಕ್ಕೆ ಆಗುತ್ತೆ. ಅದು ಉಳಿಯಲು ಬಹುದು. ಎರಡೂ ಸಾಧ್ಯತೆಗಳು ಇಲ್ಲಿವೆ. ಹೀಗೆ ಅಂತ ಈಗಲೇ ತೀರ್ಮಾನಿಸೊಕೆ ನಾವ್ಯಾರು?
    >ನೀವು ಉಪಯೋಗಿಸಿದ “ಬೇಲಿ ಹಾಕುವುದು” ರಕ್ಷಣೆಗೆ ತಾನೆ ? ಮಾತು ಇಲ್ಲಿ ಕಾಂಟ್ರಾಸ್ಟ್ ಆಯಿತು. ಇರಲಿ ಬಿಡಿ.
    >ಹೌದು, ನಿಮಗೆ ಯಾಕೆ ನನ್ನ ಮೇಲೆ ಸಹಾನುಭೂತಿ? ನನಗೆ ಆ ಹೆಣ್ಮಕ್ಕಳ ಒಂದಂಶ ಕಷ್ಟ ಆರ್ಥವಾಗುವುದರಿಂದ ಅವರ ಮೇಲೆ ಸಹಾನುಭೂತಿಯಿದೆ. ನಿಮಗೆ ನನ್ನ ಮೇಲೆ ಯಾವ ಕಾರಣಕ್ಕೆ??

    Like

  14. gurubaliga Says:

    >ಈ “ವೈಚಾರಿಕತೆ” ಅಂದರೆ ಏನು ಅಂತ ವಿಷದ ಪಡಿಸಿದರೆ ನಾನು ನೀವು ಕೊಟ್ಟ ಕಾರಣದ ಬಗ್ಗೆ ಯೋಚಿಸಬಹುದು.

    ಹಳೆಯ ಸಂಪ್ರದಾಯಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳದೆ ವಿಚಾರ ವಿಮರ್ಶೆಗೊಳಪಡಿಸುವ ಕ್ರಿಯೆ ನಡೆದಾಗ ನಾವಿಂದು ಬಳಸುವ ಸಂಪ್ರದಾಯಗಳ, ರೀತಿ ರಿವಾಜುಗಳ ಉಪಯುಕ್ತತೆ ಇಲ್ಲವಾಗುತ್ತದೆ. ನೀವು “ಉಲ್ಲೇಖಿತ ಸಮಾಜದ” ನಿರ್ಧಾರವನ್ನು “ತಕ್ಕ ಮಟ್ಟಿಗೆ ಸರಿ” ಎಂದು ಒಪ್ಪಿಕೊಂಡಿದ್ದರಿಂದ ನಿಮ್ಮಲ್ಲಿ ಸಂಪ್ರದಾಯಗಳ ಬಗ್ಗೆ ಇರುವ ಕಾಳಜಿ ಕಂಡು ನನಗೆ ನಿಮ್ಮ ವಿಚಾರ ಪ್ರಕ್ರಿಯೆಯ ಬಗ್ಗೆ ಸಂದೇಹ ಉಂಟಾಯಿತು.

    >ನಿಜ, ಹೊಸ ವರ್ಗ ಹುಟ್ಟಬೇಕಿತ್ತು. ಹಾಗೇ ಆಗೊದೆ ಇಲ್ವೆ.

    ಅಂತಹ ಒಂದು ವರ್ಗವು ನಗರಗಳಲ್ಲಿ ಬೆಳೆಯುತ್ತಿದೆ ಎಂದು ನಿಮಗೆ ತಿಳಿಸಲು ಹರ್ಷಿಸುತ್ತೇನೆ. ಇದು ಸಣ್ಣ ವರ್ಗವಾದರೂ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ.

    >ಎಷ್ಟೋ ದಂಪತಿಗಳು ಯಶಸ್ಸು ಕಂಡಿದ್ದಾರೆ. ಆದರೆ ಈ ಯಶಸ್ಸು ಪಡೆಯಲು ಅವರು ಪಟ್ಟ/ಪಡುವ ಕಷ್ಟಗಳ ಬಗ್ಗೆ ನಾನು ಮಾತಾಡ್ತಾ ಇದ್ದಿದ್ದು.

    ಆದರೆ ನಿಮ್ಮ ಲೇಖನ ಅದನ್ನು ಹಗುರವಾಗಿಟ್ಟು, ಸಂಪ್ರದಾಯಗಳ ಉಳಿಯುವಿಕೆಯ ಬಗ್ಗೆ ಕಾಳಜಿಯೇ ಹೆಚ್ಚು ಧ್ವನಿಸುತ್ತದೆ. ಇದನ್ನು ನಿಮ್ಮದೇ ವಾಕ್ಯಗಳ ಮೂಲಕ ವಿಶದೀಕರಿಸಲು ಬಯಸುತ್ತೇನೆ.

    ೧. ತಮ್ಮ ಸಮಾಜದ ರೀತಿ-ನೀತಿ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವ “ಕಾರಣ” ಮುಂದಿಟ್ಟು ಜಾತಿ ಬಿಟ್ಟು ಮದುವೆಯಾಗುವವರನ್ನು ತಮ್ಮ ಸಮಾಜದಿಂದ ಹೊರಹಾಕುವುದಾಗಿ ನಿಯಮ ರೂಪಿಸಿದ್ದಾರೆ.
    ೨. ಇವರು ಕೊಟ್ಟ ಕಾರಣ ತಕ್ಕ ಮಟ್ಟಿಗೆ ಸರಿಯೆಂದು ನನಗೆ ಕಾಣಿಸಿತು.
    ೩. ಈ ಸಂಪ್ರದಾಯ ನಮ್ಮ ರಕ್ತದಲ್ಲಿ ನಮಗರಿವಿಲ್ಲದೆ ಬೆರೆತುಕೊಂಡು ಬಿಟ್ಟಿದೆ. ಅದನ್ನು ಶೋಧಿಸಿ ಬೇರೆ ಮಾಡುವುದು ಡಯಾಲಿಸಸ್ ಮಾಡಿದಷ್ಟೇ ಯಾತನಾಮಯ.

    >>ಆ ಪಂಗಡ ಅಳಿದು ಹೋಗುತ್ತೆ ಎಂದು ಹೇಗೆ ಹೇಳಲಿಕ್ಕೆ ಆಗುತ್ತೆ. ಅದು ಉಳಿಯಲು ಬಹುದು. ಎರಡೂ ಸಾಧ್ಯತೆಗಳು ಇಲ್ಲಿವೆ. ಹೀಗೆ ಅಂತ ಈಗಲೇ ತೀರ್ಮಾನಿಸೊಕೆ ನಾವ್ಯಾರು?

    ಇದೇ ಕಾರಣದಿಂದ ಅಳಿದು ಹೋಗುತ್ತಿರುವ ಅನೇಕ ಪಂಗಡಗಳ ಉದಾಹರಣೆಯನ್ನು ನಾನು ಕೊಡಬಲ್ಲೆ. ಅಳಿದು ಹೋಗಿರುವ ಉದಾಹರಣೆ ಕೂಡ ಇವೆ. ಫಾರ್ಸಿ ಪಂಗಡ ಒಂದು ಸ್ಥೂಲ ಉದಾಹರಣೆ. ನನ್ನದು ತೀರ್ಮಾನವಲ್ಲ ಸಮಾಜಶಾಸ್ತ್ರೀಯ ಅಧ್ಯಯನದ ಒಂದು ಸ್ಥಾಪಿತ ಸತ್ಯ.

    >ನೀವು ಉಪಯೋಗಿಸಿದ “ಬೇಲಿ ಹಾಕುವುದು” ರಕ್ಷಣೆಗೆ ತಾನೆ ? ಮಾತು ಇಲ್ಲಿ ಕಾಂಟ್ರಾಸ್ಟ್ ಆಯಿತು. ಇರಲಿ ಬಿಡಿ.

    ಬೇಲಿ ಹಾಕುವುದು ರಕ್ಷಣೆಗೆ ಮಾತ್ರವಲ್ಲ, ಒಳಗೆ ಇರುವವರು (ಉದಾ: ದನಗಳು) ಹೊರಗೆ ಹೋಗದಂತೆ ಬಂಧನವೂ ಹೌದು. ಆಯಿತು “ಬಿಡಿ”

    >ಹೌದು, ನಿಮಗೆ ಯಾಕೆ ನನ್ನ ಮೇಲೆ ಸಹಾನುಭೂತಿ? ನನಗೆ ಆ ಹೆಣ್ಮಕ್ಕಳ ಒಂದಂಶ ಕಷ್ಟ ಆರ್ಥವಾಗುವುದರಿಂದ ಅವರ ಮೇಲೆ ಸಹಾನುಭೂತಿಯಿದೆ. ನಿಮಗೆ ನನ್ನ ಮೇಲೆ ಯಾವ ಕಾರಣಕ್ಕೆ??

    ಎರಡು ಕುಟುಂಬಗಳ ಸಹಕಾರ, ಬೆಂಬಲವಿದ್ದರೂ ಬದಲಾಗುವ ರೀತಿ-ನೀತಿ, ಸಂಪ್ರದಾಯ, ಆಚರಣೆಗಳಿಗೆ ನಾನಿನ್ನೂ ಒಗ್ಗಿಕೊಂಡಿಲ್ಲ. ಎಂದು ಹೇಳಿದಿರಿ. ಅಂದರೆ ನಿಮಗೆ ರೀತಿ ನೀತಿಗಳನ್ನು, ಸಂಪ್ರದಾಯಗಳನ್ನು ಸರಿ ಎಂದು ಒಪ್ಪಲು ಕಷ್ಟವಾಗುತ್ತಿದೆ. ಆದಾಗ್ಯೂ ಕಛ್ಚಿ ವಾಗಡ್ ಸಮಾಜದವರು ಸಂಪ್ರದಾಯಗಳನ್ನು ಉಳಿಸಲು ತೊಡಗುವುದನ್ನು ನೀವು ತಕ್ಕ ಮಟ್ಟಿಗೆ ಸರಿ ಎಂದೂ ಒಪ್ಪುತ್ತೀರಿ.
    ಯೋಚಿಸುವ ಶಕ್ತಿ ಇರುವ ವ್ಯಕ್ತಿ ದ್ವಂದ್ವದಿಂದ ಹೊರಬರಲು ಸಹಾನುಭೂತಿಯನ್ನಷ್ಟೇ ನಾನು ತೋರಬಲ್ಲೆ.

    Like

  15. ನೀಲಾಂಜಲ Says:

    ಗುರು, interesting………
    >ಅಂದರೆ ಸಂಪ್ರದಾಯಗಳ ಬಗ್ಗೆ ಕಾಳಜಿ ಇಲ್ಲದಿರುವುದಕ್ಕೆ ವೈಚಾರಿಕತೆ ಅನ್ನುತ್ತಾರೆ ಅಂದ ಹಾಗಾಯಿತು.
    >ಈ ಸಣ್ಣ ವರ್ಗ ನಗರದ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸಬಹುದು
    >ಹೀಗೂ ಅನ್ನಿಸುತ್ತದೆಯಾ! ಬರಹದ ಹಿಂದಿನ ಉದ್ದೇಶ ಮತ್ತು ಅದನ್ನು ಬರಹದಲ್ಲಿ ಪ್ರತಿಪಾದಿಸುವುದನ್ನು ನಾನಿನ್ನು ಕಲಿಯಬೇಕಿದೆ.
    >ಪಾರ್ಸಿಗಳಾ! ಈ ವಿಷಯದ ಬಗ್ಗೆ ನಾನು ಓದಲು ಬಯಸುತ್ತೇನೆ. ನಿಮ್ಮ ಬಳಿ ನೀವು ಪ್ರತಿಪಾದಿಸಿದ ಸತ್ಯದ ಬಗ್ಗೆ ಮಾಹಿತಿ ಇದ್ದರೆ ಕಳಿಸಿಕೊಡಿ.
    >ಮಾತಿಗೆ ಮಾತು
    >ಸಹ ಅನುಭೂತಿ ಹೇಗೆ ಎಂದು ಕೇಳಿದ್ದು. ಅದು ಕನಿಕರವೊ ಎಂದು ಅನುಮಾನ ಬಂತು.
    ನಾನಿಲ್ಲಿ ಸರಿ ತಪ್ಪು ಎನ್ನುವುದರ ಬಗ್ಗೆ ಹೇಳುತ್ತಿಲ್ಲ. ಬದಲಾಗುವ ರೀತಿ-ನೀತಿಗಳ ಬಗ್ಗೆ ಹೇಳುತ್ತಿದ್ದೇನೆ.

    ಉದಾಹರಣೆಗೆ ನನ್ನ ಅಮ್ಮನ ಮನೆ ಕಡೆ ಬೆಳಿಗ್ಗೆ ಹೊಸ್ತಿಲು ಸಾರಿಸೋದು ಮನೆ ಹೊರಗಡೆ ನಿಂತು. ನಾನೆಲ್ಲಾದರೂ ಮನೆ ಒಳಗಡೆ ನಿಂತು ಹೊರ ಬದಿಗೆ ಮುಖ ಮಾಡಿ ಹೊಸ್ತಿಲು ಒರೆಸಿದರೆ ಮುಗಿದೇ ಹೋಯಿತು. ನನ್ನ ಗಂಡನ ಮನೆಯಲ್ಲಿ ಇದು ಉಲ್ಟಾ. ಅಲ್ಲಿ ಮನೆ ಒಳಗೆ ನಿಂತು ಹೊರಗಡೆ ಮುಖ ಮಾಡಿ ಹೊಸ್ತಿಲು ಬರೆಯೊದು. ನಾನು ಅಮ್ಮನ ಮನೆಯ ತರಹ ಗಂಡನ ಮನೆಯಲ್ಲಿ ಹೊರಗಡೆಯಿಂದ ಒಳಮುಖವಾಗಿ ಹೊಸ್ತಿಲು ಬಳಿದರೆ ಅಪಚಾರವಾಗುತ್ತೆ. ಈ ತರಹ ಅನೇಕ ವಿಷಯಗಳಿವೆ. ಅದಕ್ಕೆ ಒಗ್ಗಿಕೊಳ್ಳೊದು ಕಷ್ಟ ಅಂದಿದ್ದು.

    ಅದಕ್ಕೆ ತಮ್ಮ ಸಂಪ್ರದಾಯದವರಲ್ಲೇ ಮದುವೆ ಆಗುವ ಕ್ರಮ “ತಕ್ಕ ಮಟ್ಟಿಗೆ ಸರಿ” ಅನ್ನಿಸಿದ್ದು. ಯಾವುದೇ ಕಿರಿಕಿರಿ ಇಲ್ಲ. ನನಗಾದರೆ ಅತ್ತೆ ಮನೆಯಲ್ಲಿ ನನ್ನ ಅರ್ಥ ಮಾಡಿಕೊತಾರೆ. ಹೀಗಲ್ಲ ಹೀಗೆ ಎಂದು ನಿಧಾನವಾಗಿ ತಿಳಿಸಿ ಹೇಳ್ತಾರೆ. ಯಾರೂ ಮುಖಕ್ಕೆ ಹೊಡೆದ ಹಾಗೆ ಹೇಳಲ್ಲ. ಆದರೂ ನಾನು ನನ್ನತನವನ್ನು ಬಿಟ್ಟುಕೊಡದೆ ಅವರ ಜೊತೆ ಸೇರುವುದು ಅಷ್ಟೆಲ್ಲಾ ಸುಲಭದ ಮಾತಲ್ಲ.

    ಅದಕ್ಕೆ ಬರೆದದ್ದು “ಇನ್ನು ಕುಟುಂಬದ ವಿರೋಧ ಕಟ್ಟಿಕೊಂಡವರ ಕತೆಯೇನು? ಹಾಗೇನೆ ಬೇರೆ ದೇವರ, ಬೇರೆ ತತ್ವಗಳನ್ನೇ ಉಸಿರಾಡುವ ಪರಕೀಯ ಕುಟುಂಬಕ್ಕೆ ಹೋಗಿ ಅನುಭವಿಸುವ “ಹೆಣ್ಣಿನ ಹೇಳಿಕೊಳ್ಳಲಾಗದಂತಹ ಸಂಕಟಗಳಿಗೆ” ನನ್ನ ಸಹಾನುಭೂತಿಯಿದೆ.”

    Like

  16. gurubaliga Says:

    >>> ನನ್ನ ಅಮ್ಮನ ಮನೆ ಕಡೆ ಬೆಳಿಗ್ಗೆ ಹೊಸ್ತಿಲು ಸಾರಿಸೋದು ಮನೆ ಹೊರಗಡೆ ನಿಂತು. ನಾನೆಲ್ಲಾದರೂ ಮನೆ ಒಳಗಡೆ ನಿಂತು ಹೊರ ಬದಿಗೆ ಮುಖ ಮಾಡಿ ಹೊಸ್ತಿಲು ಒರೆಸಿದರೆ ಮುಗಿದೇ ಹೋಯಿತು. ನನ್ನ ಗಂಡನ ಮನೆಯಲ್ಲಿ ಇದು ಉಲ್ಟಾ. ಅಲ್ಲಿ ಮನೆ ಒಳಗೆ ನಿಂತು ಹೊರಗಡೆ ಮುಖ ಮಾಡಿ ಹೊಸ್ತಿಲು ಬರೆಯೊದು. ನಾನು ಅಮ್ಮನ ಮನೆಯ ತರಹ ಗಂಡನ ಮನೆಯಲ್ಲಿ ಹೊರಗಡೆಯಿಂದ ಒಳಮುಖವಾಗಿ ಹೊಸ್ತಿಲು ಬಳಿದರೆ ಅಪಚಾರವಾಗುತ್ತೆ. ಈ ತರಹ ಅನೇಕ ವಿಷಯಗಳಿವೆ. ಅದಕ್ಕೆ ಒಗ್ಗಿಕೊಳ್ಳೊದು ಕಷ್ಟ ಅಂದಿದ್ದು.

    ಅಯ್ಯೋ ಪಾಪ ಎನ್ನದೇ ಬೇರೇನನ್ನೂ ಹೇಳಲಾರೆ. 🙂

    Like

  17. ನೀಲಾಂಜಲ Says:

    ಅಯ್ಯೋ ಪಾಪ ಅನ್ನುವುದಕ್ಕೆ ಸಹಾನುಭೂತಿ ಅನ್ನುವುದಿಲ್ಲ.
    ಓಡಿ ಹೋಗ್ತಾ ಇದ್ದಿರಾ??
    ಮಾತಿಗೆ ನಿಂತರೆ ಕರೆಕ್ಟ್ ಆಗಿ ಮಾತಾಡಬೇಕು.
    ಹೀಗೆಳೆದು ಹೀಗೆ ಓಡಿ ಹೋಗಬಾರದು.
    ಅದು ಅಷ್ಟು ಚೆನ್ನಾಗಿ ಕಾಣುವುದಿಲ್ಲ.

    Like

  18. gurubaliga Says:

    ಸರಿ. 🙂

    Like

  19. gurubaliga Says:

    ನೀವು ಕೊನೆಯ ಕಮೆಂಟನ್ನು ನಾನು ಉತ್ತರ ಕೊಟ್ಟ ಬಳಿಕ ಮರು ತಿದ್ದೀದ್ದಿರಿ.
    ನಿಮ್ಮ ಮೊದಲ ವಾಕ್ಯಕ್ಕೆ ನನ್ನ ಉತ್ತರ “ಸರಿ” (ನಾನು ಬಳಸಿದ “ಸಹಾನುಭೂತಿ” ಪದ ಸರಿಯಲ್ಲ. ನೀವೇ ಬರೆದ ಹಾಗೆ ಕನಿಕರ ಎಂದಾಗಬೇಕು.)

    >>> ಓಡಿ ಹೋಗ್ತಾ ಇದ್ದಿರಾ?? ಮಾತಿಗೆ ನಿಂತರೆ ಕರೆಕ್ಟ್ ಆಗಿ ಮಾತಾಡಬೇಕು. ಹೀಗೆಳೆದು ಹೀಗೆ ಓಡಿ ಹೋಗಬಾರದು. ಅದು ಅಷ್ಟು ಚೆನ್ನಾಗಿ ಕಾಣುವುದಿಲ್ಲ.
    ಇಲ್ಲ ನಾನಿನ್ನೂ ಇಲ್ಲೇ ಇದ್ದೇನೆ. ನಿಮ್ಮ ಚರ್ಚೆಯನ್ನು ಮುಂದುವರೆಸಿ.

    Like

  20. gurubaliga Says:

    ನಿಮ್ಮ ಅತ್ತೆ ಜೊತೆಗಿನ ಸಂಬಂಧವನ್ನು ನೀವು ನಿಭಾಯಿಸುತ್ತಿರುವ ಬಗ್ಗೆ ನನಗೆ ಗೌರವ ಇದೆ. ಹಿರಿಯರ ಇಗೊಗಳು ನಮ್ಮ ಬದುಕನ್ನು ಕಲಕದಿರುವಂತೆ ಎಚ್ಚರದಿಂದಿರುವುದು ಸುಲಭದ ಮಾತಲ್ಲ. ಆದರೆ ಅದು ಪ್ರಖ್ಯಾತವಾದ ಅತ್ತೆ ಸೊಸೆ ಡೈನಾಮಿಕ್ಸ್ ನ ವಿಚಾರ.
    ನಿಮ್ಮ ಹಿರಿಯರ ಇಗೋ ತೃಪ್ತಿಗೆ ನೀವು ಒಗ್ಗಿಕೊಳ್ಳಲು ಯತ್ನಿಸುತ್ತಿರುವ “ಹೊಸಿಲು ಸಾರಿಸುವ ನಮೂನೆ ಮತ್ತು ಅಂತಹ ಪದ್ಧತಿಗಳನ್ನೇ ಮುಖ್ಯ ಮಾಡಿಕೊಂಡು ಅಂತರ್ಜಾತೀಯ ವಿವಾಹದಿಂದ ತೊಂದರೆ ಇದೆ ಎನ್ನುವುದನ್ನು ನೀವು ಪ್ರತಿಪಾದಿಸುತ್ತಿದ್ದೀರಿ.
    ಯಾವುದೋ ಜಾತಿಯೊಂದು ಮತ್ತೆ ಶಿಲಾಯುಗಕ್ಕೆ ಮರಳಲು ಇಚ್ಚಿಸಿದಲ್ಲಿ ನೀವು ಅದನ್ನು ಬೆಂಬಲಿಸುವುದು ಸರಿಯಲ್ಲ.
    ಮರಳಿ ಬನ್ನಿ 🙂

    Like

  21. neelanjala Says:

    -ನಾನು ಕಮೆಂಟ್ ಪೂರ್ತಿ ಮಾಡುವಷ್ಟರಲ್ಲಿ ನಿಮ್ಮ ಕಮೆಂಟ್ ಬಂದಿತ್ತು. ನೀವು ಹೇಳಿದ್ದು ಗೊತ್ತಾಗಿದೆ.
    -ಸಂಪ್ರದಾಯಗಳು ಮತ್ತು ರೀತಿ-ನೀತಿಗಳು ಈಗ ನಿಮಗೆ ಹಿರಿಯರ ಇಗೋ ಗಳಾದವೇ !!
    -ಈ ತರಹದ ನಮೂನೆಗಳು ನಿಮಗೆ(ಗಂಡಸಿಗೆ) ಚಿಕ್ಕದಾಗಿ ಕಾಣುತ್ತೆ. ಆ ಕಷ್ಟ (ಎರಡು ಪಂಗಡಗಳ ನಡುವೆ ಇರುವ ವಿಚಾರ ವೈಪರೀತ್ಯ) ನೀವು ಅನುಭವಿಸಿಲ್ಲ.
    -ಈ ಪಂಗಡದವರ ನಿಯಮವನ್ನು ನಾನು ಪೂರ್ತಿ ಬೆಂಬಲಿಸುತ್ತಿಲ್ಲ. (ಸುನಾಥ ಅವರಿಗೆ ನಾನು ಮಾಡಿದ ಕಮೆಂಟ್ ಒಮ್ಮೆ ನೋಡಿ)
    -ಹಾಗೇನೆ ಅಂತರಜಾತಿ ವಿವಾಹಕ್ಕೆ ನನ್ನದೇನೂ ಅಭ್ಯಂತರವೂ ಇಲ್ಲ. ಅದು ಅವರವರಿಗೆ ಬಿಟ್ಟ ವಿಚಾರ. ಇದನ್ನು ಮೇಲೆ ಸಹ ಹೇಳಿದ್ದೇನೆ. ಆದರೆ ಈ ರೀತಿ ಮದುವೆ ಆಗುವವರ ಮುಂದಿನ ಸಾಮಾಜಿಕ ಜೀವನದ ಬಗ್ಗೆ ನನ್ನ ಕಳಕಳಿ. ಇನ್ನೊಮ್ಮೆ ಬೇಕಾದರೆ ಲಾಸ್ಟ ಪ್ಯಾರಾ ಓದಿ.
    -ಈ ಸಂಪ್ರದಾಯಗಳು, ರೀತಿ-ನೀತಿಗಳು ನಮ್ಮ ರಕ್ತದಲ್ಲಿ ಸೇರಿಕೊಂಡಿರುವುದರಿಂದ ಇದನ್ನು ಬಿಟ್ಟು ಬಾಳ್ವೆ ನಡೆಸುತ್ತೇನೆ ಎನ್ನುವುದು ಅಷ್ಟು ಸುಲಭವಲ್ಲ. ಇಷ್ಟೇ ನನಗೆ ಹೇಳಲಿಕ್ಕೆ ಇರುವುದು.

    ( ನಾನು ಕೊಟ್ಟ ಉದಾಹರಣೆಯನ್ನು ನೀವು ಅಪಾರ ಅರ್ಥ ಮಾಡಿಕೊಂಡ ಹಾಗಿದೆ. ಅತ್ತೆ ಮನೆಯಲ್ಲಿ ಅಂದರೆ ಬರೀ ಅತ್ತೆ ಮಾತ್ರವಲ್ಲ ಅತ್ತೆ, ಮಾವ, ಭಾವ, ಅತ್ತಿಗೆ, ಅಕ್ಕಂದಿರು…….naanu chikka sose ಮತ್ತೆ ನಾನು ದಿನಾ ಬಾಗಿಲು ಸಾರಿಸುತ್ತೇನೆ(!!) ಎಂದು ಎಲ್ಲೂ ಹೇಳಿಲ್ಲ. ಪಂಗಡದಿಂದ ಪಂಗಡಕ್ಕೆ ಬದಲಾಗುವ ರೀತಿ-ನೀತಿಗಳ, ವಿಚಾರಗಳ ಉದಾಹರಣೆ)

    Like

  22. gurubaliga Says:

    -ಸಂಪ್ರದಾಯಗಳು ಮತ್ತು ರೀತಿ-ನೀತಿಗಳು ಈಗ ನಿಮಗೆ ಹಿರಿಯರ ಇಗೋ ಗಳಾದವೇ !!
    ತಮಗೇ ಅರ್ಥ ಗೊತ್ತಿಲ್ಲದ ಸಂಪ್ರದಾಯಗಳನ್ನು ಕಿರಿಯರ ಮೇಲೆ ಹೇರುವುದು ಇಗೋ ಅಲ್ಲದೆ ಮತ್ತೇನೂ ಅಲ್ಲ. (ತಮ್ಮ ಆಣತಿಯನ್ನು ಪಾಲಿಸಬೇಕು ಅನ್ನುವ ಇಗೋ)

    –ಈ ತರಹದ ನಮೂನೆಗಳು ನಿಮಗೆ(ಗಂಡಸಿಗೆ) ಚಿಕ್ಕದಾಗಿ ಕಾಣುತ್ತೆ. ಆ ಕಷ್ಟ ನೀವು ಅನುಭವಿಸಿಲ್ಲ.
    ಬಾಲಿಶ ವಾದವಿದು. ಕೊನೆಗೊಮ್ಮೆ “ನಿಮಗೇನು ಗೊತ್ತು ನನ್ನ ಕಷ್ಟ” ಅಂತ.

    -ಈ ಪಂಗಡದವರ ನಿಯಮವನ್ನು ನಾನು ಪೂರ್ತಿ ಬೆಂಬಲಿಸುತ್ತಿಲ್ಲ. (ಸುನಾಥ ಅವರಿಗೆ ನಾನು ಮಾಡಿದ ಕಮೆಂಟ್ ಒಮ್ಮೆ ನೋಡಿ)
    ಅವರು ಅಂತರ್ಜಾತಿ ವಿವಾಹವನ್ನು ನಿಶೇದಿಸುವುದಕ್ಕೆ ಕೊಟ್ಟ ಕಾರಣವನ್ನು ನೀವು “ತಕ್ಕ ಮಟ್ಟಿಗೆ ಸರಿ” ಎಂದರೆ ಅವರು ಮಾಡಿದ ಕೃತ್ಯವು ನಿಮಗೆ ಕನ್ವಿನ್ಸ್ ಆದ ಹಾಗೆ. ಅವರ ವಾದವನ್ನು ನೀವು ಮುಂದಕ್ಕೊಯ್ದ ಹಾಗೆ.

    -ಹಾಗೇನೆ ಅಂತರಜಾತಿ ವಿವಾಹಕ್ಕೆ ನನ್ನದೇನೂ ಅಭ್ಯಂತರವೂ ಇಲ್ಲ. ಅದು ಅವರವರಿಗೆ ಬಿಟ್ಟ ವಿಚಾರ. ಇದನ್ನು ಮೇಲೆ ಸಹ ಹೇಳಿದ್ದೇನೆ. ಆದರೆ ಈ ರೀತಿ ಮದುವೆ ಆಗುವವರ ಮುಂದಿನ ಸಾಮಾಜಿಕ ಜೀವನದ ಬಗ್ಗೆ ನನ್ನ ಕಳಕಳಿ. ಇನ್ನೊಮ್ಮೆ ಬೇಕಾದರೆ ಲಾಸ್ಟ ಪ್ಯಾರಾ ಓದಿ.
    ದ್ವಂದ್ವ ಭರಿತ ಈ ವಾಕ್ಯವನ್ನೋದಿ ನಗೆ ಬರುತಿದೆ. 🙂 ಇಲ್ಲಿ ಇರುವುದು ನಿಮ್ಮ ಅಭ್ಯಂತರದ ಚರ್ಚೆಯಲ್ಲ ಅಭಿಪ್ರಾಯದ ಚರ್ಚೆ.

    -ಈ ಸಂಪ್ರದಾಯಗಳು, ರೀತಿ-ನೀತಿಗಳು ನಮ್ಮ ರಕ್ತದಲ್ಲಿ ಸೇರಿಕೊಂಡಿರುವುದರಿಂದ ಇದನ್ನು ಬಿಟ್ಟು ಬಾಳ್ವೆ ನಡೆಸುತ್ತೇನೆ ಎನ್ನುವುದು ಅಷ್ಟು ಸುಲಭವಲ್ಲ. ಇಷ್ಟೇ ನನಗೆ ಹೇಳಲಿಕ್ಕೆ ಇರುವುದು.
    ಸಂಪ್ರದಾಯಗಳು ರಕ್ತದಲ್ಲಿ (?) ಸೇರಿಕೊಂಡವರು ಬೇರೊಂದು ಜಾತಿಯವರನ್ನು ಪ್ರೇಮಿಸುವುದೂ ಕಷ್ಟವೇ. ಮದುವೆಯ ಮಾತೆಲ್ಲಿ ಬಂತು.

    ಅಂತರ್ಜಾತೀಯ ವಿವಾಹಗಳನ್ನು ನಿರ್ಬಂಧಿಸುವುದು ತರವಲ್ಲ. ನಿರ್ಬಂಧವನ್ನು ಪರೋಕ್ಷವಾಗಿಯೂ ಸಮರ್ಥಿಸುವುದೂ ತರವಲ್ಲ.
    ನಂಗೂ ಇಷ್ಟೇ ಹೇಳಲಿಕ್ಕೆ ಇರುವುದು 🙂

    Like

  23. neelanjala Says:

    ಇದು ಒಳ್ಳೆ ಕತೆ ಆಯಿತಲ್ಲಾ ಸ್ವಾಮಿ. ನಾನು ಹೇಳದೇ ಇರುವುದನ್ನು ಹೇಳಿದ್ದಿರಾ ಎಂದು ಆವಾಗಿನಿಂದ ಹೊರಿಸುತ್ತಿದ್ದಿರಿ. ನಂಗೂ ವಾದ ಮಾಡಿ ಮಾಡಿ ಸುಸ್ತಾಯಿತು. ಅದರಲ್ಲಿ ದ್ವಂದವೇನು ಬಂತು? ಅಂತರ ಜಾತಿ ವಿವಾಹ ಆದವರ ಬದುಕಿನ ಬಗ್ಗೆ ಮಾತಾಡಿದರೆ ಅದು ವಿವಾಹವನ್ನೇ ವಿರೋಧಿಸಿದ ಹಾಗಾಗುತ್ತಾ? ನನ್ನದು ಅಂತರ ಒಳಜಾತಿ ಲವ್ ಮ್ಯಾರೇಜ್. ನಾನು ಬೇರೆ ಒಂದು ಒಳ ಪಂಗಡಕ್ಕೆ ಸೇರಿದವನ ಜೊತೆ ಮದುವೆ ಆದವಳು. ಬ್ರಾಹ್ಮಣರಲ್ಲೇ ಇಷ್ಟು ವ್ಯತ್ಯಾಸಗಳಿದ್ದರೆ, ಇನ್ನು ಬ್ರಾಹ್ಮಣ ಮತ್ತು ವೈಶ್ಯ, ಕ್ಷತ್ರಿಯ, ದಲಿತ ವರ್ಗದವರ ನಡುವೆ ವ್ಯತ್ಯಾಸ ಎಷ್ಟು ಇರಬಹುದು ಎಂದು ಯೋಚಿಸ್ತ ಇದ್ದೇನೆ. ಹೋಗಲಿ, ಕ್ರಿಶ್ಚಿಯನ್ ಮತ್ತು ಹಿಂದೂಗಳ ನಡುವೆ ! ವಾದಕ್ಕೆ ಎಂದು ಮಾತಾಡಬೇಡಿ. ನಿಜಕ್ಕೂ ನಿಮ್ಮ ಕಣ್ಣಿಗೆ ಇದ್ಯಾವುದು ವ್ಯತ್ಯಾಸಗಳು ಗೋಚರಿಸುವುದೇ ಇಲ್ಲವಾ? ಧರ್ಮ ಬಿಟ್ಟು ಹಾಕಿ. ಪ್ರತಿ ರಾಜ್ಯದ ಜನತೆಗೆ, ಪ್ರತಿ ಜಿಲ್ಲೆಯ ಜನತೆಗೆ ಒಂದು characteristic ಇದೆ. ಆ characters ಉಳಿಸಿಕೊಳ್ಳುವ ಪ್ರಯತ್ನದಿಂದಲೇ ನನಗೆ ಅವರು ಕೊಟ್ಟ ಕಾರಣ “ತಕ್ಕ ಮಟ್ಟಿಗೆ” ಸರಿ ಎಂದು ಕಂಡಿದ್ದು. ಪೂರ್ತಿಯಾಗಿ ಸರಿ ಎಂದು ಹೇಳಿಲ್ಲವಲ್ಲ. ಇನ್ನು ನೀವು ನಿಮ್ಮ ಬರಹದಲ್ಲಿ ಇದು ವ್ಯಾಚ್ಯವಾಗಿ ಎಲ್ಲೂ ಕಂಡಿಲ್ಲ. ನನಗೆ ಧ್ವನಿಸಿದ್ದೇ ಬೇರೆ ಎಂದರೆ ನಾನೇನೂ ಹೇಳಲಾರೆ. ನಾನು ಬರಹದಲ್ಲಿ ಹೀಗೆ ಹೇಳಿದ್ದು ಎಂದು ಮಾತ್ರ ಹೇಳಬಲ್ಲೆ.

    Like

  24. gurubaliga Says:

    ನೀವು ಸಿಟ್ಟಾಗಿದ್ದೀರಿ. ನಿಮ್ಮನ್ನು ಹರ್ಟ್ ಮಾಡಿದ್ದಲ್ಲಿ ಕ್ಷಮಿಸಿ. 😦

    ಜನ, ಜಾತಿ, ಸಮುದಾಯ, ಪ್ರಾಂತ್ಯಗಳ characteristics ಗಳನ್ನೂ ಬೇಲಿ ಹಾಕಿ ಉಳಿಸಿಕೊಳ್ಳಲಾಗದು. ಅವು ಒಂದೇ ಸಲಕ್ಕೆ ಉದ್ಭವವಾದ ವಿಷಯಗಳಲ್ಲ. ಕಾಲಾನುಸಾರ ಬದಲಾಗುತ್ತಾ ಬಂದವು. ಈ ಕಾಲದಲ್ಲಿ ಅವು ಲುಪ್ತವಾಗುತ್ತಿವೆ ಎಂದರೆ ಅವು ಈ ಕಾಲಕ್ಕೆ ಸಲ್ಲವು ಎಂದೇ ಅರ್ಥ. ಅದನ್ನು ಉಳಿಸಿಕೊಳ್ಳಲು ಕಟ್ಟಳೆಗಳನ್ನು ಹೇರುವುದು ಮೂರ್ಖತನ.

    ಸಾಂಸ್ಕೃತಿಕ ವೈರುಧ್ಯಗಳು ದಾಂಪತ್ಯದಲ್ಲಿ ತೊಡಕಾಗುವಂತೆ ಕಂಡರೂ ನಿಜಕ್ಕೂ ಅವು ವ್ಯಕ್ತಿಗಳ ನಡುವಣ ಇಗೋ ಕಲಹಗಳು. ಇಗೊಗಳು ಒಂದೇ ಜಾತಿಯೋಳಗಿನ ಎರಡು ಮನೆಯಲ್ಲಿ ಇರುವ ವೈರುಧ್ಯಗಳನ್ನು ಬಳಸುತ್ತಾ ಕೂಡ ಜಗಳವಾಡುತ್ತವೆ. ಅವನ್ನು ಒಂದು ಸಂವಹನದ ಸಮಸ್ಯೆ ಎಂದು ಗ್ರಹಿಸಬೇಕಲ್ಲದೆ ಜಾತಿ ವೈರುಧ್ಯಗಳೆಂದು ಕಾಣುವುದರಿಂದ ಸಮಸ್ಯೆ ಪರಿಹಾರವಾಗದು.

    >>> ತಮ್ಮ ಸಮಾಜದ ರೀತಿ-ನೀತಿ ಹಾಗೂ “ಸಂಸ್ಕೃತಿಯನ್ನು ಉಳಿಸಿಕೊಳ್ಳುವ” ಕಾರಣ ಮುಂದಿಟ್ಟು ಜಾತಿ ಬಿಟ್ಟು ಮದುವೆಯಾಗುವವರನ್ನು ತಮ್ಮ ಸಮಾಜದಿಂದ ಹೊರಹಾಕುವುದಾಗಿ ನಿಯಮ ರೂಪಿಸಿದ್ದಾರೆ.

    ನನಗೆ ಇದು ಶ್ರೀ ರಾಮ ಸೇನೆಯವರ ಇನ್ನೊಂದು ರೂಪದಂತೆ ಕಾಣುತ್ತದೆ. ಇದನ್ನು ನೀವು “ತಕ್ಕ ಮಟ್ಟಿಗೆ ಸರಿ” ಎಂದು ಹೇಳಿದ್ದರಿಂದ ನಾನು ಪ್ರತಿಕ್ರಿಯೆ ಬರೆದೆ.

    Like

  25. neelanjala Says:

    😀

    Like

  26. gurubaliga Says:

    😦 😀

    Like

  27. Tejaswini Says:

    ನೀಲಾಂಜಲ,

    ಹೇಳಬೇಕಾದ್ದನ್ನು ನೇರವಾಗಿ ಸ್ಪಷ್ಟವಾಗಿ ಗೊಂದಲಗಳಿಲ್ಲದೇ ಹೇಳಿದ್ದೀರಿ. ಇಷ್ಟವಾಯಿತು.

    Like

  28. kaviswara shikaripura Says:

    maanaveeyathe, preethi emba sathyagaligintha jaathi-mathagalemba sullugale samaajakke hecchu priya.. adannu meeri nilluvude prathi-samskruthi… basavanna kansiddu anthaha samaajavannu..aadare avanannu ondu jaathiyalli katti-haakidavaru jaathi vyavastheyinada horabaralaagada namma neelaanjala-ranthavaru…

    Like

  29. ನೀಲಾಂಜಲ Says:

    -Kaviswara shikaripura,
    ha ha ha,
    chennagi barididdira 😀
    nange sannavalirabekadre namma uralli basavannana ratha hogabekadre nagu bartittu. hangene pakkada mane lingayitaru basavannana photokke naama balidu, udabatti hachchbekadru saha. basavanna murthi puje virodhisiddu. aadare iga avana murthine maadi jana pujistare. lingayita anta vandu jaatine aagi bittide.

    naanu bangalorenalli yavattu tamashe madta irtene, gandhi, basavanna n shivaji baduki bandre matte heart attack aagi sattu hogta idru anta; gandhi mg road nodi, shivaji shivajinagar nodi, basavanna tanna hesarina jaati n murthy nodi 😀

    iga nivu heli, samaja anta kudale alli vidha vidhavaada matagaliruttave. mata andare abhipraya. nivu nijavagiyu dharma illada samaja or jaati illada samaja nirmana agoke sadhya anta nambuttira? nimage gottirabahudu, hosadada, kiriya dharmada hesru “manaviyate” ante. idannu saha jaati anta madikondu adakke aada rules n regulation madikondiddarante. E hosa dharmada bagge innomme jaasti odi barettene. nimma maatige udafe anta bavisabedi. satyavaglu heege vandu dharma astitvakke bandide.

    hun, naanu jaati vyvastheyinda khandita horabaralare. haaganta innu varegu yarannu jatiya hesaralli jarididdilla, kilagi nadesi kondiddilla. hesru kelabekadare nimma jaati yavudu or adda hesru anta saha naanage kelodilla/heloduilla.

    -ತೇಜಸ್ವಿನಿ, 😀

    Like

  30. Radhika Says:

    I feel things are changing and people do not really insist on following the etiquette. So it is not an issue in deciding whether one should marry within same caste or not. For that matter each family is unique in its own way and day to day life of each family is different from any other family. Whether it’s a marriage within or outside a particular caste institute of marriage itself is quite complex. What matters is whether the two individuals can gel well or not. And even among love marriages the true personality of the partner shows up only when one starts living with him/her!

    Like

  31. ಸಿಂಚನ Says:

    ನಮಸ್ಕಾರ,
    ನಿಮ್ಮ ಒಂದು ಕಾಲುಂಗುರದ ಉದಾಹರಣೆ ಕೊಟ್ಟು, ಅಂತರ್ಜಾತಿ ವಿವಾಹಕ್ಕೆ ಯಾರೋ ಕೊಟ್ಟ ಕಾರಣಾನ ತಕ್ಕ ಮಟ್ಟಿಗೆ ಸರಿ ಅಂತಾ ಇದೀರ. ವಯುಕ್ತಿಕ ಪ್ರಶ್ನೆ ಅಂತ ತಿಳ್ಕೊಬೇಡಿ ಹಾಗಿದ್ರೆ ನಿಮ್ಮ ಅಂದಿನ ನಿರ್ಧಾರ ತಪ್ಪು ಅಂತ ಈಗ ಅನ್ನಿಸ್ತಾ ಇದ್ಯ.

    ಸಿಂಚನ

    Like

  32. ನೀಲಾಂಜಲ Says:

    -ರಾಧಿಕಾ,
    ನೀವು ಹೇಳಿದ್ದು ಸರಿ ಇದೆ. institute of marriage itself is quite complex.
    ಹಾಗೇನೆ ಬದಲಾಗುವ ಈ ಸಂಪ್ರದಾಯ, ಸಂಸ್ಕೃತಿ , ರೀತಿ-ನೀತಿಗಳು ಹೊಸ ಕುಟುಂಬಕ್ಕೆ ಸೇರುವ ಹೆಣ್ಣಿನ ಮೇಲೆ ಏನೂ ಇಫೆಕ್ಟ ಮಾಡೊದೇ ಇಲ್ಲ ಅಂತೀರಾ?
    -ಸಿಂಚನಾ, ನಮಸ್ಕಾರ
    ಅದು ಬರೀ ಕಾಲುಂಗುರದ ಪ್ರಶ್ನೆ ಅಲ್ಲ. ಎರಡು ಪಂಗಡಗಳ ನಡುವೆ ಇರುವ ವಿಚಾರ ವೈಪರೀತ್ಯಕ್ಕೆ ಉದಾಹರಣೆ. ಹಾಗೇನೆ ನೀವು ಯಾವ ನಿರ್ಧಾರದ ಬಗ್ಗೆ ಪ್ರಶ್ನೆ ಕೇಳಿದ್ದು?

    Like

  33. kaviswara shikaripura Says:

    sorry for late reply neela-ravare… jaathi vyavasthe-yinda khanditha horabaralaare emba thamma prathikriye nodi thaavu kuda shreni-krutha samaajada paleyulike endu thiliyithu.. kevala hutti-ninda manushyarannu vibhagisuva ee jeeva-virodhi vyavasthe-ge nimmanthavaru samarthisuvudu manushyathvada durantha… irali bidi… jaathi illada samaja nirmana agutte endu opputtira endu keliddiri… jaathi-rahitha, varga-rahitha samaajada koogu shatha-shathamaanagalindalu buddha,basava,Gandhi mulaka dhvanisutthale ide.. antha jeevapara dhvanigala munduvarike nammadu.. namma mundina peelige-galadaru anthahudondu arogyakara samaajavannu kaanali emba aase ashte.. jaathi hesarinda jariyada maatrakke neevu jaathi-muktha chinthane hondiddiri endu thilyuvudalla.. jaathi vyavastheyannu appikonde oppikollalaagada thamma haarike manasthithi nimma mundina peeligege baaradirali..

    Like

  34. ಸಿಂಚನ Says:

    ನೀಲಾಂಜಲ,
    ವಯುಕ್ತಿಕ ಪ್ರಶ್ನೆ, ನಿಮ್ಮ ನಿರ್ಧಾರ ಅಂತಾನೇ ಕೇಳಿದೀನಿ. ನಿಮಗೆ ನನ್ನ ಪ್ರಶ್ನೆ ಕಿರಿಕಿರಿ ಉಂಟುಮಾಡಿದ್ರೆ ಅದಕ್ಕೆ ಉತ್ತರ ಕೊಡೋ ಗೋಜಿಗೆ ಹೋಗಬೇಡಿ.

    ಕಾಲುಂಗುರ, ತಾಳಿ, ಹೊಸ್ತಿಲು ತೊಳಿಯೋದು ಇದೆಲ್ಲಾ ಬರೀ ಆಚರಣೆ ಅಲ್ವ. ಹೊಸ್ತಿಲು ಹೇಗೆ ತೊಳೆದ್ರೆ ಏನು, ಸ್ವಚ್ಛ ಆದ್ರೆ ಆಯ್ತು. ಮೊದಲಿಗೆ ಬೇಕಾಗಿದ್ದು ಗಂಡು ಮತ್ತು ಹೆಣ್ಣಿನ ನಡುವೆ ಒಲುಮೆ. ಇದೇ ಇಲ್ದೆ ಇದ್ದ ಮೇಲೆ ಯಾವ ಸಂಪ್ರದಾಯ ಏನು ಮಾಡೋಕೆ ಆಗುತ್ತೆ ಅಲ್ವ? ಅಂತರ್ಜಾತಿ ವಿವಾಹದಲ್ಲಿ ಹುಡ್ಗೀಗೆ ಕಷ್ಟ ಅಂತಂದ್ರಿ, ಸಂಪ್ರದಾಯದಿಂದ ಮದ್ವೆ ಆದ ಹುಡುಗಿಗೆ ಕಷ್ಟಾನೇ ಇಲ್ವೆ. ನಾವು ಬದುಕೋದು ಬರೀ ಸಂಪ್ರದಾಯಕ್ಕಾಗಿ ಮಾತ್ರಾನಾ?

    ಈಗ ಒಂದೇ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದ ಇಬ್ರು ಮದ್ವೆ ಆದ್ರು ಅಂದುಕೊಳ್ಳಿ. ಸಂಪ್ರದಾಯ ಒಂದೇ ಆದರೂ ಅವರಿಬ್ಬರ ಯೋಚನಾ ಲಹರಿ ಒಂದೇ ಆಗಿರೋದು ದುರ್ಲಭ. ಅಷ್ಟೇ ಏಕೆ ಒಂದೇ ಮನೇಲಿ ಹುಟ್ಟಿ ಬೆಳೆದ ಅಣ್ಣ, ತಮ್ಮಾನೋ ಅಕ್ಕ ತಂಗಿಯರಲ್ಲಿ ಎಷ್ಟೊಂದು ವ್ಯತ್ಯಾಸ ಇರುತ್ತೆ. ನೋಡಿ ಜೊತೆಗೆ ಬೆಳೆದವ್ರಲ್ಲೇ ಇಷ್ಟೊಂದ್ ವ್ಯತ್ಯಾಸ ಇರ್ಬೇಕಾದ್ರೆ ಇನ್ನು, ಬೇರೆ ಬೇರೆ ಜಾತೀಲಿ ಬೆಳದವರಲ್ಲಿ. ಆದರೆ ಈ ವ್ಯತ್ಯಾಸಾನಾ ಯಾವ ಹುಡುಗ, ಹುಡುಗಿ ಒಪ್ಪಿಕೊಂಡು ದಾಂಪತ್ಯ ಮಾಡ್ತಾರೋ…


    ಸಿಂಚನ

    Like

  35. ರಂಜಿತ್ Says:

    ಪರ ಮತ್ತು ವಿರೋಧ ಎರಡೂ ವಾದ ಬಲವಿದೆ, ಆದ್ದರಿಂದ ಒಂದು ನಿರ್ಧಾರಕ್ಕೆ ಬರೋದು ಸಲ್ಪ ಕಷ್ಟ. ಒಪ್ಪಿಕೊಂಡ ವಾದಕ್ಕೆ ಜೀವನಪೂರ್ತಿ ರಾಜಿಯಾಗಬೇಕಾದ್ದೇ ಸರಿ ಎನ್ನಬಹುದು ಅನ್ಸುತ್ತೆ.

    ಅಂದರೆ ಅಂತರಜಾತಿ ವಿವಾಹ ಒಪ್ಪಿದರೆ ಅದರ ನೆಗೆಟಿವ್ ನ ಜತೆ ರಾಜಿ ಮಾಡಿಕೊಳ್ಳಬೇಕಾಗುತ್ತೆ ಅಂತ.visa versa ಕೂಡ.

    Like

  36. ನೀಲಾಂಜಲ Says:

    kaviswara shikaripura,

    ಹೌದು, ನಾನು ಶ್ರೇಣಿ-ಕೃತ ಸಮಾಜದ ಪಳೆಯುಳಿಕೆ. ನಂಗೆ ಇದರ ಬಗ್ಗೆ ಖಂಡಿತ ಬೇಜಾರಿಲ್ಲ. ನಾನು ಶಿರ್ಸಿಯವಳು, ಉತ್ತರಕನ್ನಡದವಳು, ಕರ್ನಾಟಕದವಳು, ಭಾರತದವಳು ಅMತ ಹೇಗೆ ಹೇಳಿಕೊಳ್ಳುತ್ತೇನೊ ಅದೇ ರೀತಿಯಲ್ಲಿ , ನಂಗೆ ನಾನು ಬ್ರಾಹ್ಮಣ ಅMತ ಹೇಳಿಕೊಳ್ಳೊಕೆ ಹೆಮ್ಮೆ ಇದೆ. ಹುಟ್ಟಿನಿಂದ ಬೇರೆ ಕುಲದಲ್ಲಿ ಹುಟ್ಟಿದರೂ ಸಹ ಆ ಕುಲದವಳು ಅMತ ಹೇಳಿಕೊಳ್ಳುತ್ತಿದ್ದೆ.

    ನಾನೂ ಸಣ್ಣವಳಿರಬೇಕಾದರೆ ಇದೇ ರೀತಿ ಜಾತಿ ರಹಿತ ಸಮಾಜ ಅಂತ ಕೂಗಾಡ್ತಾ ಇದ್ದೆ. ಯಾಕೋ ಗೊತ್ತಿಲ್ಲ ದೊಡ್ಡವಳಾಗ್ತಾ ಇದ್ದ ಹಾಗೆ ನನ್ನ ಸುತ್ತಮುತ್ತಲಿನ ಸಮಾಜವೇ ಬೇರೆಯಾಗಿ ಕಂಡಿತು. ಸಾಹಿತ್ಯದಲ್ಲಿ ಓದಿದಷ್ಟು ಕೆಟ್ಟದಾಗಿ ಸಮಾಜ ಕಾಣಲಿಲ್ಲ. ಬೇರೆ ದೇಶಗಳ ಚರಿತ್ರೆ ಓದುತ್ತಿದ್ದಂತೆ ಈ ಜಾತಿ ರಹಿತ ಸಮಾಜ, ವರ್ಗ ರಹಿತ ಸಮಾಜ ಅನ್ನೋದು ರಮ್ಯ ಕಲ್ಪನೆ ಎMದು ಅನ್ನಿಸತೊಡಗಿತು. ದೇವರು ಅನ್ನೋದು ಮೂರ್ತಿ ಅಲ್ಲಾ, ಅದು ಜೀವನದ ಸತ್ಯ ದರ್ಶನ ಎಂದು ಗೊತ್ತಾಯಿತು. ಧರ್ಮ ಅನ್ನೋದು ಈ ಸತ್ಯ ದರ್ಶನ ಕಂಡು ಕೊಳ್ಳಲು ಇರುವ ಮಾರ್ಗ ಎಂದು ಅರಿವಾಯಿತು.

    ಸಣ್ಣವಳಿರುವಾಗ ಒಂದು ಕತೆಯಲ್ಲಿ ಓದಿದ್ದೆ, ತಪ್ಪು ಮಾಡಿದ ದಲಿತ ಹುಡುಗನ ಬಾಯಿಗೆ ಉಚ್ಚೆ ಹೊಯ್ಯಿಸುವುದು. ಅದು ಎಷ್ಟು ಪರಿಣಾಮ ಬೀರಿತ್ತೆಂದರೆ ನಾನು ಬ್ರಾಹ್ಮಣ ಎಂದು ಕೊಳ್ಳಲು ಅಸಹ್ಯ ಆಗುತ್ತಿತ್ತು. ದೊಡ್ಡವಳಾಗುತ್ತಾ ನನ್ನ ಸುತ್ತ ಮುತ್ತಲಿನ ಸಮಾಜದಲ್ಲಿ ನೋಡ್ತಾ ಇದೆಲ್ಲ ಬರೀ ಕತೆಗಳಲ್ಲಿ ಮಾತ್ರ ಎಂದು ಅನ್ನಿಸತೊಡಗಿತು. ಮನುಷ್ಯನ ವಿಕೃತಿಗಳು ಎಲ್ಲ ವರ್ಗದವರಲ್ಲಿಯೂ ಇದೆ ಎಂದು ಗೊತ್ತಾಯಿತು. ಮನುಷ್ಯನ ಕೀಳು ಭಾವನೆಗಳಿಗೆ, ಅಸೂಯೆ, ಮತ್ಸರ, ದ್ವೇಷಗಳಿಗೆ ಜಾತಿ / ಧರ್ಮದ ಬಣ್ಣ ಬಳಿತಾರೆ ಎಂದು ಅರಿವಾಯಿತು. ಆವಾಗಿನಿಂದ ನಾನು ನನ್ನ ಹುಟ್ಟಿನ ಸತ್ಯದಿಂದ ದೂರ ಓಡುವುದನ್ನು ಬಿಟ್ಟು ಬಿಟ್ಟೆ. ಅದನ್ನು ಅಪ್ಪಿಕೊಳ್ಳುವುದರಿಂದ ತಪ್ಪೇನೂ ಆಗುವುದಿಲ್ಲ ಎಂದು ಗೊತ್ತಾಯಿತು. ಆದರೆ ಈ ಅಸ್ತಿತ್ವದಿಂದ ಬೇರೆ ಜೀವಿಗಳ ಅಸ್ತಿತ್ವಕ್ಕೆ ಎಂದೂ ದಕ್ಕೆ ಬರದಂತೆ ಎಚ್ಚರ ವಹಿಸಿದ್ದೇನೆ. ಅದೂ ಬ್ರಾಹ್ಮಣನಾದ ನನ್ನ ಕರ್ತವ್ಯ ಕೂಡ. ಈ ಮನಸ್ಥಿತಿಯನ್ನು ನೀವು ಹಾರಿಕೆ ಮನಸ್ಥಿತಿ ಅನ್ನುವುದಾದರೆ ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ.

    Like

  37. ನೀಲಾಂಜಲ Says:

    ಸಿಂಚನಾ,
    ನಾನಿಲ್ಲಿ ಗಂಡು-ಹೆಣ್ಣಿನ ಒಲುಮೆಯ ಬಗ್ಗೆ ಅಥವಾ ದಾಂಪತ್ಯ ಜೀವನದ ಬಗ್ಗೆ ಮಾತಾಡ್ತಾ ಇಲ್ಲ.
    ಇದು ಕೇವಲ ಅಂತರ ಜಾತಿ ವಿವಾಹ ಮಾಡಿಕೊಂಡ ಹೆಣ್ಣೊಬ್ಬಳ ಬಗ್ಗೆ ಅಲ್ಲ, ವಿಚಾರ ವೈಪರಿತ್ಯ ಇರುವ ಎರಡು ಕುಟುಂಬಗಳ /ಸಮಾಜಗಳ ನಡುವೆ ಮದುವೆಯಾಗಿ ತಿಕಲಾಟ ಅನುಭವಿಸುವ ಹೆಣ್ಣಿನ ಬಗ್ಗೆ ಕೂಡ.
    ಹಾಗೆನೆ ನಾನಿದನ್ನು ಜನರಲೈಸ್ ಕೂಡ ಮಾಡ್ತಾ ಇಲ್ಲ. ನನಗನ್ನಿಸಿದ್ದು ನಾ ಹೇಳಿದ್ದು. ಇದು ಎಲ್ಲರಿಗೂ ಅಪ್ಲೈ ಆಗಬೇಕು ಅಂತವೇನು ಇಲ್ಲ.

    “ಹೊಸ್ತಿಲು ಹೇಗೆ ತೊಳೆದ್ರೆ ಏನು, ಸ್ವಚ್ಛ ಆದ್ರೆ ಆಯ್ತು.” ನಿಮಗೆ ಸಂಪ್ರದಾಯಸ್ಥ ಬ್ರಾಹ್ಮಣ ಮನೆಯ ಅನುಭವವಿಲ್ಲ ಕಾಣುತ್ತೆ. ಹಾಗೆಲ್ಲಾ ಆಗೋಲ್ವೇ. ಚಿಕ್ಕ ಚಿಕ್ಕ ತಪ್ಪುಗಳು ದೊಡ್ಡ ಮನಸ್ತಾಪಕ್ಕೆ ಕಾರಣವಾಗಬಹುದು. ಹೀಗೆ ಆದರೆ ನಾನೇನು ಮಾಡುತ್ತಿದ್ದೆ ಎಂದು “ಅಂದುಕೊಳ್ಳುವುದರಿಂದ” ಏನು ಉಪಯೋಗ ವಿಲ್ಲ. ಮದುವೆಯಾದ ನಿಮ್ಮ ಇತರ ಸ್ನೇಹಿತರಲ್ಲಿ ಯಾರಿಗಾದರೂ ಈ ತರಹದ ಅನುಭವಗಳಿವೆಯಾ ಕೇಳಿ ನೋಡಿ.

    “ನಾವು ಬದುಕೋದು ಬರೀ ಸಂಪ್ರದಾಯಕ್ಕಾಗಿ ಮಾತ್ರಾನಾ? ” ಬದುಕುವ ರೀತಿಗೆ ಸಂಪ್ರದಾಯ ಅನ್ನೊದಲ್ಲವೇ .

    “ತಮ್ಮಾನೋ ಅಕ್ಕ ತಂಗಿಯರಲ್ಲಿ ಎಷ್ಟೊಂದು ವ್ಯತ್ಯಾಸ ಇರುತ್ತೆ. ನೋಡಿ ಜೊತೆಗೆ ಬೆಳೆದವ್ರಲ್ಲೇ ಇಷ್ಟೊಂದ್ ವ್ಯತ್ಯಾಸ ಇರ್ಬೇಕಾದ್ರೆ ಇನ್ನು, ಬೇರೆ ಬೇರೆ ಜಾತೀಲಿ ಬೆಳದವರಲ್ಲಿ.” 😀
    ನೀವು ಮನೋಭಾವದ ವ್ಯತ್ಯಾಸ ತೋರಿಸಿದ್ದಿರಾ, ನಾನು ಸಂಪ್ರದಾಯ,ಸಂಸ್ಕೃತಿ ಮತ್ತು ರೀತಿ-ನೀತಿಗಳ ಬಗ್ಗೆ.

    Like

  38. kaviswara shikaripura Says:

    yako nimma prathi-kriye odida mele manassige picchenisithu.. Nimma hemme nimage irali.. neeve ullekhisidanthe sirsi,karnataka,bhaaratha ivella bhoomiya vargeekaranave horathu manushyana vibhaageekaranavalla.. adakke nanu heliddu jeeva-virodhi jaathi vyavastheyannu samarthisvudu manushythavada durantha.. idara bagge bere deshada charitreyinda thiliyabekaaddenu illa.. huttininda manushyana shreni aleyuvudu yaava deshadalliddaru adu khandaneeya… neevu kaanuva samaaja matra sathyada praathykshikeyagalaaradu.. kuvempu, vachana saahithya matthu dalitha saahithya katu sathyavannu abhivyakthi-golasithe horathu kettaddannalla.. jaathi,matha,varga-gale samskruthi yendaadare nimmannu prashnisalu namma prathi samskruthi buddha,basava,gaandhi-yadiyagi munduvariyutthale irutthe.. paleyulike-smaaraka-galaagi neevidde iruttheeralla… neevobba olleya charchaa-patu.. nimmanthavare intha vyavastheyannu ishtondu balavaagi samarthisuvaaga saamanyara paadenu..? jaathiginthalu manushythva doddadu yendu thilidu maathadibitte.. nimma sandehaaspada vychaarikathe charchege maatra meesalu.. nimma mundina peelige braahmanare aagirali…
    vishaadadinda…

    Like

  39. neelanjala Says:

    Kaviswara,:D
    naa heliddu nimage arthavagta illa. athava artha madisake nange aagta illa.
    dharmada innondu mukha maanaviyate, antakarana, preeti endu naanu nambiruvaaga dharma doddado manaviyate doddado emba prashneye baruvudilla. naanu nija arthadalli brahmana agalu horatiruvava. dalita saahityagaLalli baruva “jaati brahmana” alla.

    buddha,basava,gaandhi ellarU nannistadavaru. nange kuvempunu ista, anantamurthunu ista, bairappanu ista.

    naanu brahmana, hindu anta helikolluvudE manushatvakke maduva dodda aparadha endu nivu nambidare addi illa. nimma abhiprayakke gaurava ide. nammibbara daari bere bere. hOgi muttodu vande kadene. 🙂

    Like

  40. ಸಿಂಚನ Says:

    >>ನೀವು ಮನೋಭಾವದ ವ್ಯತ್ಯಾಸ ತೋರಿಸಿದ್ದಿರಾ, ನಾನು ಸಂಪ್ರದಾಯ,ಸಂಸ್ಕೃತಿ ಮತ್ತು ರೀತಿ-ನೀತಿಗಳ ಬಗ್ಗೆ.
    ಸರಿ, ನೀವು ಹೇಳ್ತಾ ಇರೋ ಸಂಪ್ರದಾಯಾನೂ ಯಾವುದೋ ಒಂದು ಸಮುದಾಯ ಮಾಡಿರ್ತಾರಲ್ವ. ಆ ಸಮುದಾಯದ ಜನರ ಮನೋಭಾವಕ್ಕೆ ತಕ್ಕಂತೆ ರೀತಿ ನೀತಿ ಎಲ್ಲಾ ರೂಪಿಸಿರ್ತಾರೆ. ಇಲ್ಲಾಂತ ಇದ್ದಿದ್ರೆ ಅದು ಎಲ್ಲಾ ಕಡೆನೂ ಒಂದೇ ತರ ಇರ್ಬೇಕಿತ್ತು. ವ್ಯಕ್ತಿ-ವ್ಯಕ್ತಿ ನಡುವೆ ಇರುವ ಭಿನ್ನತೆನಾ ಒಪ್ಪಿಕೊಂಡಂತೆ ಜಾತಿ-ಜಾತಿ ನಡುವೆ ಇರುವ ಭಿನ್ನತೆನೂ ಒಪ್ಪಿಕೋಬೇಕು, ಒಪ್ಪಿಕೊಳ್ತಿದಾರೆ ಅಂತ. ಇವತ್ತಿನ ಮಾತು ಬಿಡಿ, ಮಾಸ್ತಿಯವರಂತಹ ೧೯ನೇ ಶತಮಾನದ ಲೇಖಕರ ಕಥೆಗಳಲ್ಲೂ ಇವುಗಳ ಪ್ರಸ್ತಾಪ ಇದೆ. ಎಲ್ಲಾರೂ ಒಂದೇ ತರ ಇರೋಕಾಗಲ್ವೆ, ಹಾಗೇನೆ ಎಲ್ಲಾ ಜಾತೀನೂ!

    ಈ ಮೇಲಿನ ಮಾತು ನಿಮ್ಮ ಲೇಖನದಲ್ಲಿ ನೀವು ಹೇಳಿದ್ದೆ. ಆದ್ರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿ ಹೆಣ್ಣು ಕಷ್ಟಕ್ಕೆ ಒಳಗಾಗೋ ಸಂಭವ ಜಾಸ್ತಿ ಅಂತಾ ಇದೀರ. ಇದೇ ಮಾತನ್ನ ಒಂದು ೨೦ ವರ್ಷದ ಹಿಂದೆ ಹೇಳಿದ್ರೆ ಒಪ್ಪಬಹುದಿತ್ತೇನೋ! ಈಗ ಸಮಾಜದಲ್ಲಿ ಇಂತಹ ಸಂಕುಚಿತ ಮನೋಭಾವನೆ ಇಲ್ಲಾ ಅಂತ ನನ್ನಭಿಪ್ರಾಯ. ನಮ್ಮದು ಸ್ಮಾರ್ತ ಬ್ರಾಹ್ಮಣ ಕುಟುಂಬ. ನನ್ನ ಚಿಕ್ಕಪ್ಪಂದಿರಲ್ಲಿ ಮೂರು ಜನ ಮದ್ವೆ ಆಗಿದ್ದು ಶಿವಳ್ಳಿಯವರನ್ನ, ಸುಮಾರು ೨೫ ವರ್ಷದ ಕೆಳಗೆ. ನನ್ನ ಚಿಕ್ಕಮ್ಮಂದಿರುಗಳೆಲ್ಲಾ ನೀವು ಹೇಳಿದ ತರ ಕಷ್ಟ ಪಟ್ಟಿರಬಹುದಾದ ಉದಾಹರಣೆ ನನಗೆ ಸಿಕ್ಕಿಲ್ಲ. ೭ ವರ್ಷದ ಹಿಂದಷ್ಟೆ ನನ್ನ ಕಸಿನ್ ಒಬ್ರು ಶಟ್ಟರ ಹುಡ್ಗೀನ ಮದ್ವೆಯಾಗಿದಾರೆ, ಆರಾಮವಾಗಿಯೂ ಇದಾರೆ. ಕಾಲುಂಗುರ, ಹೊಸ್ತಿಲು ತೊಳಿಯೋದು ಇವುಗಳ ಭಿನ್ನತೆನೇ ನೀವು ದೊಡ್ಡ ಕಷ್ಟ ಅಂತ ಹೇಳಿದ್ರೆ, ಅದೊಂದು ಕಷ್ಟಾನೇ ಅಲ್ಲಾ ಅಂತ ನನ್ನನಿಸಿಕೆ.

    >>ಬದುಕುವ ರೀತಿಗೆ ಸಂಪ್ರದಾಯ ಅನ್ನೊದಲ್ಲವೇ
    ಅಲ್ಲ, ಸಂಪ್ರದಾಯ ಇಲ್ದೇ ಇರೋರೆಲ್ಲಾ ಬದುಕ್ತಾನೇ ಇಲ್ಲಾ ಅಂತೀರ?

    ಸಿಂಚನ

    Like

  41. neelanjala Says:

    ಸಿಂಚನಾ,
    ಹಾಗೆನೆ ನಾನಿದನ್ನು ಜನರಲೈಸ್ ಕೂಡ ಮಾಡ್ತಾ ಇಲ್ಲ. ನನಗನ್ನಿಸಿದ್ದು ನಾ ಹೇಳಿದ್ದು. ಇದು ಎಲ್ಲರಿಗೂ ಅಪ್ಲೈ ಆಗಬೇಕು ಅಂತವೇನು ಇಲ್ಲ.
    ಸಮಯ ಸಿಕ್ಕಾಗ ನಿಮ್ಮ ಚಿಕ್ಕಮ್ಮಂದಿರನ್ನು, ಕಸಿನ್ ಮನೆಯವರನ್ನು ಮದುವೆಯಾದ ಹೊಸತರಲ್ಲಿ ಬದಲಾಗುವ ಸಂಪ್ರದಾಯಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತೆ ಎಂದು ಕೇಳಿ ನೋಡಿ. ಹೊರನೋಟಕ್ಕೆ ಯಾರು ಇದನ್ನೆಲ್ಲಾ ತೋರಿಸಿಕೊಡುವುದಿಲ್ಲ. ನಾನು ಸಹ ಆರಾಮಾಗೆ ಇದ್ದೇನೆ. ಆದರೂ ಈ ಬದಲಾಗುವ ಸಂಪ್ರದಾಯಗಳಿಗೆ ಒಗ್ಗಿಕೊನ್ಡಿಲ್ಲ . ಇಲ್ಲಿ ಕಷ್ಟ ಅಂದರೆ ಹಳೆ ಸಾಂಸಾರಿಕ ಸಿನೆಮಾಗಳಲ್ಲಿ ತೋರಿಸುವ ಹಿಂಸೆ ಅಂತ ಅಲ್ಲ ಕಣೆ.

    ನನ್ನ ಲೆಕ್ಕದಲ್ಲಿ ಸಂಪ್ರದಾಯ ಅಂದರೆ ನಡುವಳಿಕೆ. ನಮ್ಮ ಮನೆಗಳಲ್ಲಿ ನಾವೂ ಹೇಗೆ ನಡೆದುಕೊಳ್ಳುತ್ತಿವಿ ಅದನ್ನು ಆ ಮನೆಯ ಸಂಪ್ರದಾಯ ಅನ್ನಬಹುದು.

    Like

  42. ಸಿಂಚನ Says:

    ನೀಲಾಂಜಲ,
    ಇಲ್ಲಾರೀ ನಮ್ಮ ಚಿಕ್ಕಮ್ಮಂದಿರು ಇನ್ನೂ ಶಿವಳ್ಳಿ ಸಂಪ್ರದಾಯ ಬಿಟ್ಟಿಲ್ಲ, ಅವ್ರ ಗಂಡಂದಿರೇ ಅದಕ್ಕೆ ಒಗ್ಗಿದಾರೆ 🙂

    ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಉದಾಹರಣೆಗಳೂ ಇವೆ, ಡೈವೋರ್ಸ್-ವರೆಗೂ ಹೋಗಿದೆ ವಿಷಯ. ಆದರೆ ಅದು ಹಿಂದು-ಮುಸ್ಲಿಂ ಮದ್ವೆ ಬೇರೆನೇ ಕೇಸು.

    ನೀವು ಕಾಲುಂಗುರದ ನಿಮ್ಮ ಉದಾಹರಣೆ ಕೊಡೋ ಬದ್ಲು ನಿಮ್ಮನುಭವಕ್ಕೆ ಬಂದಂತಹ ಬೇರೆ ಉದಾಹರಣೆ ಕೊಡಬಹುದಿತ್ತೇನೋ ಅಂತಾ ಅಷ್ಟೆ.

    ನನಗೆ ಮನೆ ಬಿಟ್ಟು ಹಾಸ್ಟೆಲಿಗೆ ಓದೋಕೆ ಹೋದಾಗ್ಲೆ ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳೋಕೆ ಕಷ್ಟ ಆಗಿತ್ತು. ಇದು ಅದೇ ತರ, ಒಂದೇ ಜಾತಿಯಲ್ಲಾದರೂ ತೀರಾ ಭಿನ್ನ ಅಂತ ನನಗನಿಸಿಲ್ಲ. ಅದಕ್ಕೆ ವೀ.ಸೀ.ಯವರು “ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು” ಅಂಥಾ ಒಳ್ಳೇ ಕಾವ್ಯ ರಚಿಸಿರಬೇಕಲ್ವ

    ನಿಮ್ಮ ಬ್ಲಾಗ್ ನೋಡಿ ತುಂಬಾ ಸಂತೋಷ ಆಯ್ತು.


    ಸಿಂಚನ

    Like

  43. neelanjala Says:

    ಸಿಂಚನ,
    😀

    Like

  44. gurubaliga Says:

    >> ನನ್ನ ಲೆಕ್ಕದಲ್ಲಿ ಸಂಪ್ರದಾಯ ಅಂದರೆ ನಡುವಳಿಕೆ. ನಮ್ಮ ಮನೆಗಳಲ್ಲಿ ನಾವೂ ಹೇಗೆ ನಡೆದುಕೊಳ್ಳುತ್ತಿವಿ ಅದನ್ನು ಆ ಮನೆಯ ಸಂಪ್ರದಾಯ ಅನ್ನಬಹುದು.

    😀

    Like

  45. mruthyu Says:

    “ದೇವರು ಅನ್ನೋದು ಮೂರ್ತಿ ಅಲ್ಲಾ, ಅದು ಜೀವನದ ಸತ್ಯದರ್ಶನ ಎಂದು ಗೊತ್ತಾಯಿತು” ಎಂದು ಮಾರ್ಚ್ ೨೧ ಕ್ಕೆ ಬರೆದಿದ್ದೀರಿ. ಈ “ಜೀವನದ ಸತ್ಯದರ್ಶನ ” ಎಂದರೆ ಏನು? “ಸತ್ಯ” ಅಂದರೆ? ಕ್ಷಮಿಸಿ, ಇದು ನಿಮ್ಮ ಇತರರ ನಡುವೆ ನಡೀತಿರೋ ವಾದಕ್ಕೆ ನೇರವಾಗಿ ಸಂಬಂಧಿಸಿದ್ದಲ್ಲ. ಪ್ರತಿಕ್ರಿಯೆಗಳ ಮೆಗಾ ಸೀರಿಯಲ್ ಓದ್ತಾ ನಂಗೆ ನಿಮ್ಮ ಈ ವಾಕ್ಯ ತುಂಬಾ ಕುತೂಹಲ ಹುಟ್ಟಿಸ್ತು.

    Like

  46. Just happened to visityou blog Says:

    Wonder why you want to walk your life with the stamp of caste! In this century you’re talking about caste and your pride about the caste is just disgusting.

    Like

  47. kaviswara shikaripura Says:

    sorry for late reply again…. Naanu dharmada bagge maathadtha illa neelanjala-ravare… Dharmadolage asamaanathe bimbisuva jaathi vyavastheya kurithu charchisutthidde.. Jaathi vyavasthe-yinda horabaralaare endu Dharmadolage thoorikondu-bittiri.. adakke nimmannu olle charchaa-patu yendiddu.. Dharma matthu jaathi-ya naduvana vyathyaasagalu nimage thiliyaddenalla… nimge ondu prashne; Namma ee Dharmadolage Jaathi-vyavasthe irle beka neela-ravare…?

    Like

  48. neema Says:

    Ms Neelanjala.
    Sorry I have not learnt how to write in kannada yet,But the point i wanted you to note is,Yes of course if everything else is matching,everybody would want to marry among there own caste,religion,whatever subcaste they belong,But most important thing in marriage is compatibility just because somebody is havyaka,if that`s the subcaste you belong you did not marry them right? you married someone whom you thought you are compatible with,I hope you dont have any regrets in that,all these small ,sometimes seemingly meanigless ritual does not matter in life! who cares who gave your toe ring,now a days how many women even put those things on?

    Like

  49. Rashmi Says:

    ಇದು ಪೂರ್ಣ ಬೇರೆ ವಿಷಯ ಈ ಬ್ಲಾಗ್ ಮತ್ತೆ ಚರ್ಚೆ ಓದಿ ನನಗೆ ಅನಿಸಿದ್ದು. ಮನುಷ್ಯನ ಆಲೋಚನೆಯ ರೀತಿ, ಅಭಿಪ್ರಾಯ ಮತ್ತು ಜೀವನ ಶೈಲಿ ಒಂದು ಜಾತಿ ಹುಟ್ಟು ಹಾಕುತ್ತದೆ ಅಂತ ಅನ್ನಿಸುತ್ತೆ. ಒಂದೇ ರೀತಿ ಯೋಚಿಸುವವರು ಮತ್ತು ಜೀವನ ಶೈಲಿ ಇರುವವರು ಒಂದು ಜಾತಿ. ಒಂದು ಜಾತಿಯ ಪ್ರಕಾರ ಇನ್ನೊಬ್ಬರ ವಿಚಾರ ಮತ್ತು ಆಚರಣೆ ತಪ್ಪು. ಒಂದು ಜೀವನ ಶೈಲಿ ಇಂದ ಇನ್ನೊಂದು ಜೀವನ ಶೈಲಿ ಗೆ ಎಷ್ಟು ಬೇಗ ಮನಪೂರ್ವಕವಾಗಿ ಒಪ್ಪಿಕೊಳ್ಳುತ್ತೆವೋ ಅಷ್ಟು ಬೇಗ ನಮಗೆ ಒಳ್ಳೇಯದು ಇಲ್ಲಾಂದರೆ ಘರ್ಷಣೆ ನಿಶ್ಚಿತ. ಆದರೆ ಒಮ್ಮೆ ನಮ್ಮ ವ್ಯಕ್ತಿತ್ವ ಬೆಳೆಸಿಕೊಂಡ ಮೇಲೆ ಇನ್ನೊಬ್ಬರ ವಿಚಾರಗಳನ್ನು ಒಪ್ಪಿ ನಡೆಯೋದು ಹೇಳಿದಷ್ಟು ಸುಲಭವಲ್ಲ. ಬಹುಷ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮಾಡುವೆ ಮಾಡಿ ಕಳುಹಿಸುತ್ತಿದ್ದರಿಂದ ಅವರು ಗಂಡನ ಮನೆ ಸಂಪ್ರದಾಯಕ್ಕೆ ಬೇಗ ಒಗ್ಗಿ ಹೋಗುತ್ತಿದ್ದರೇನೋ. ಈಗ ಹೆಣ್ಣು ಮಕ್ಕಳು ವಿಚಾರ ಮಾಡಿ ತರ್ಕಿಸಿ ತಮ್ಮ ಅಭಿಪ್ರಾಯ ಬೆಳೆಸಿಕೊಳ್ಳುವ ವಯಸ್ಸಿಗೆ ಬರುವ ತನಕವೂ ತಂದೆ ಮನೆಯಲ್ಲೇ ಇರುವದರಿಂದ ಅವರಿಗೆ ಗಂಡನ ಮನೆಯ ಸಂಪ್ರದಾಯಕ್ಕೆ ಕೂಡಲೇ ಹೊಂದಿಕೊಳ್ಳಲು ಕಷ್ಟ ಆಗುತ್ತದೆ. ಅವರ ಅಹಂ ಅಥವ ಈಗೋ ಗೆ ಪೆಟ್ಟು ಬೀಳುತ್ತದೆ. ಇಲ್ಲಿಯ ತನಕ ನಂಬಿಕೊಂಡು ಬಂದ ವಿಚಾರಗಳಿಗೆ ಪೆಟ್ಟು ಬೀಳುತ್ತದೆ. ಇದು ಬರಿ ಹೆಣ್ಣಿಗೆ ಅಂತ ಅಷ್ಟೇ ಅಲ್ಲ ಗಂಡಿಗೂ ಕೂಡ ಅನ್ವಯಿಸುತ್ತದೆ. ಎಷ್ಟು ಜನ ಗಂಡಸರು ತಮ್ಮ ಅತ್ತೆ ಮಾವ ಹೇಳಿದ ಹಾಗೆ ಕೇಳಿಕೊಂದಿರಲು ಇಷ್ಟ ಪಡುತ್ತಾರೆ?

    Like

  50. Rashmi Says:

    ನಾನು ಇಲ್ಲಿ ಬಾಲ್ಯ ವಿವಾಹವನ್ನು ಸಮರ್ಥಿಸುತ್ತ ಇಲ್ಲ. ವಯಸ್ಸಿನ ಜೊತೆ ನಮ್ಮ ಯೋಚನೆ ಮತ್ತು ಹೊಂದಿ ಕೊಳ್ಳುವ ಗುಣಗಳಲ್ಲಿ ಆಗುವ ಬದಲಾವಣೆ ಹೇಳ್ತಾ ಇದ್ದೀನಿ

    Like

  51. Vikas Hegde Says:

    ಒಂದು ಕಪ್ ಕಾಫಿ, ಚಿಪ್ಸ್ ಜೊತೆಗೆ ಈ ’ಚರ್ಚೆ’ ಓದೋಕೆ ಎಷ್ಟು ಚೆನ್ನಾಗಿರತ್ತೆ ಗೊತ್ತಾ? 🙂 ಆಹ್!

    Like

  52. kaviswara shikaripura Says:

    Rashmiyavare… Nijakku manushyana aalochaneya reethi, abhipraaya matthu jeevana-shyli ondu hosa jaathi huttu haakutthade.. Individually, prathiyobba manushyanu bere bere alwa? Bhinnathe annodu manushyana mano-vrutthi mulaka huttodu.. daampathya-da saangathya-dalli hondaanike moodabekaadaddu jaathi naduvegintha hecchu mano-vrutthi-gala naduve..
    Jaathi-rahitha samaaja annodu bhaaratha-dantha deshadalli asaadhya.. aadare jaathi-rahitha samaajada parikalpane prathi-samskruthiya pratheeka haagu ee mannina chaluvaligala jeevathikeya sanketha…
    Neelanjala-ravare neeve helidanthe nammibbara daari bere.. aadare serodu onde kade.. seruvalliyu kuda naa swalpa dooradalle ninthirutthene.. yaakanrde neevu braahmana naanu manushya maathra…

    Like

  53. ranjanahegde Says:

    very well written soupi. ನನಗು ಆಗಾಗ ಯಾರೋ ಮನೆಯವರನ್ನೂ ಎದುರು ಹಾಕಿಕೊಂಡು ಅಂತರ್ಜಾತೀಯ ವಿವಾಹ ಮಾಡಿಕೊಂಡವರ ಬಗ್ಗೆ ಹೀಗೆ ಅನಿಸುತ್ತಿರುತ್ತದೆ. ಅದು ತಪ್ಪೆಂದು ನಾನು ಹೇಳುತ್ತಿಲ್ಲ, ಜಾತೀಯತೆಯ ಬಗ್ಗೆಯೂ ಮಾತನಾಡುತ್ತಿಲ್ಲ ಆದರೆ ಅವರು ಎದುರಿಸಬೇಕಾದ ಬಹಾಳಸ್ತು ವಿಷಯಗಳಿರುತ್ತವೆ. ಅದು . ಸುಲಭವಲ್ಲ.

    Ranjana

    Like

  54. minchulli Says:

    chendage baredideeri neel.. khushi aythu. havyaka sammajadalli modalinindaloo ee riithiya nibandhanegaLiruvudu balle.. idu nanagoo eduraagittu.. naa maduve aagiddu smartha(smart too..) rannu..

    Like

  55. ganesh Says:

    ನೀಲಾಂಜಲಿ ಅವರಿಗೆ ನಮಸ್ಕಾರ,
    ನೀವು ಬರೆದಿರೋ ಲೇಖನ ನಿಮ್ಮ ಮನಸ್ಸಿಗೆ ಮದುವೆ ಆಗೋ ಸಮಯದಲ್ಲಿ ಆದಂತಹ ಕೆಲವು ಕಠಿಣ ಸ್ಥಿತಿಗಳನ್ನ ಬಿಂಬಿಸುತ್ತೆ..
    ನಾನು ಇಲ್ಲಿ ಅಂತರಜಾತಿ ವಿವಾಹ ಪರನು ಅಲ್ಲ ವಿರೋಧಿನು ಅಲ್ಲ..ಆದರೆ ಕೆಲವು ವಿಷಯಗಳನ್ನ ಹಂಚಕೊಬೇಕು ಅನಸ್ತ ಇದೆ..
    ಮದುವೆ ಅಂದ್ರೆ ಕೇವಲ ಒಂದು ಹುಡುಗ ಮತ್ತು ಹುಡುಗಿಯ ನಡುವೆ ನಡೆಯುವ ಪವಿತ್ರವಾದ ಬಂಧನ ಮಾತ್ರ ಅಲ್ಲ,ಅದು ಎರಡು ಕುಟುಂಬಗಳ ನಡುವೆ ನಡೆಯುವ ಸಂಬಂಧದ ಬೆಸೆತ..ಒಂದು ಹುಡುಗ ,ಹುಡುಗಿ ಹೇಗೆ ಒಬ್ಬರ ಜೊತೆ ಇನ್ನೊಬ್ರು ಉತ್ತಮ ಬಾಂಧವ್ಯ ಹೊಂದೋದು ಮುಖ್ಯಾನೋ ಅದೇ ರೀತಿ ಎರಡು ಪರಿವಾರಗಳ ಮಧ್ಯೆ ಸ್ವಲ್ಪ ಮಟ್ಟಿನ ಬಾಂಧವ್ಯ ಇರೋದು ಕೂಡ ಅವಶ್ಯಕ..ಪ್ರೀತಿ ಹೇಗೆ ,ಯಾರ ಮಧ್ಯೆ ಯಾವಾಗ ಹುಟ್ಟತ್ತೆ ಅಂತ ಹೇಳೋದು ಕಷ್ಟ ಆದ್ರೆ ಅದು ಯಾರನ್ನು ಹೇಳಿ ಕೇಳಿ ಹುಟ್ಟೋದಿಲ್ಲ..
    ಯಾವುದೇ ಸಂಪ್ರದಾಯ ಅಥವಾ ಧರ್ಮ ಹಾಗೆ ಹುತ್ತಿಕೊಂದಿಲ್ಲ ಪ್ರತಿಯೊಂದಕ್ಕೂ ಅದಕ್ಕೆ ಮೀಸಲಾದ ಕಾರಣಗಳಿವೆ,ಹಾಗಾಗಿ ಜಾತಿ,ಧರ್ಮ ಎಲ್ಲ ಸುಳ್ಳು ಅಂತ ಹೇಳೋದು ಕೂಡ ತಪ್ಪಾಗತ್ತೆ..ಹಾಗಾಗಿ ಪ್ರತಿಯೊಂದು ಜಾತಿ ಅಥವಾ ಒಳಜಾತಿ ತಮ್ಮದೇ ಆದ ಸಂಪ್ರದಾಯ ಹಾಗು ನಿಯಮಗಳನ್ನ ರೂದಿಸಿಕೊಂಡಿವೆ..ಹೀಗೆ ಒಮ್ಮೆಗೇ ಹುಟ್ಟಿನಿಂದ ಬೆಳೆಸಿಕೊಂಡು ಬಂದ ಆಚಾರಗಳನ್ನ ಬಿಡೋದು ಕಷ್ಟವೇ ಸರಿ..
    ಆದ್ರೆ ಎರಡು ಮನಸ್ಸುಗಳ ನಡುವೆ ಉತ್ತಮ ಹೊಂದಾಣಿಕೆ ಇದ್ದಾರೆ ಈ ಎಲ್ಲ ಅದೆತದೆಗಳನ್ನ ಸುಲಭವಾಗಿ ಹೋಗಲಾಡಿಸಬಹುದು..ಆದ್ರೆ ಇಲ್ಲಿ ಎರಡು ಕಡೆಯ ಹೊಂದಾಣಿಕೆ ಮುಖ್ಯ.ಉದಾಹರಣೆಗೆ ಹುಡುಗ ಮಾಂಸಹಾರಿ ಆಗಿದ್ದು ಹುಡುಗಿ ಸಸ್ಯಾಹಾರಿ ಆಗಿದ್ದರೆ ಇಲ್ಲಿ ಕೇವಲ ಹುಡುಗ ತನ್ನ ಅಧಿಕಾರ ಚಲಾಯಿಸಿ ತನ್ನ ಹೆಂಡತಿ ಕೂಡ ಮಾಂಸಾಹಾರ ಮಾಡಿ ತನಗೆ ಬಡಿಸಬೇಕು ಅಂದ್ರೆ ಅದು ಖಂಡಿತ ದಾಂಪತ್ಯದ ಕೊಲೆ ಆಗುತ್ತೆ..
    ಹಾಗೆ ಎರಡು ಕುಟುಂಬಗಳ ನಡುವೆ ವೈಮನಸ್ಸು ಬೆಳೆಯಲು ಕಾರಣ ಆಗತ್ತೆ..ಹೀಗೆ ಚಿಕ್ಕ ಚಿಕ್ಕ ವ್ಯತ್ಯಾಸಗಳೇ ಮುಂದೆ ಬಹುದೊಡ್ಡ ಕಂದಕ ಆದಿತು ..
    ಅದಕ್ಕೆ ಸಾಮಾನ್ಯವಾಗಿ ಅಂತರಜಾತಿ ವಿವಾಹಗಳು ಸಮಸ್ಯೆಗೆ ಕಾರಣವಾಗುತ್ತೆ..ಹೊಂದಾಣಿಕೆ ಕೊರತೆ ಮತ್ತು ತಾನು ಮೇಲು ನೀನು ಕೀಳು ಅನ್ನೋ ಮನೋಭಾವ ಇದ್ದಾಗ ಅಂತರಜಾತಿ ವಿವಾಹ ಖಂಡಿತ ಬೇಡ..ಆದ್ರೆ ಹೊಂದಾಣಿಕೆ ಅನ್ನೋದು ಇದ್ದಾಗ ಯಾವದೇ ಜಾತಿ ಅಥವಾ ಧರ್ಮದ ವ್ಯಕ್ತಿಗಳ ನಡುವೆ ವಿವಾಹವಾದರು ಅದು ಅತಿ ಸುಂದರವಾಗಿ ನಡೆಯುತ್ತೆ..

    Like

  56. ganesh Says:

    ಯಾವುದೇ ಒಂದು ಸಂಬಂಧಕ್ಕೆ ತಳಹದಿ ಹೊಂದಾಣಿಕೆ ಮತ್ತು ಭಿನ್ನಾಭಿಪ್ರಾಯ..ಒಂದೇ ಜಾತಿಯಲ್ಲಿ ಮದುವೆಯಾದರು ಕೂಡ ಹೊಂದಾಣಿಕೆ ಇರತ್ತೆ ಅಂತ ಹೇಳಲಿಕ್ಕೆ ಬಾರದು..ಆದ್ರೆ ವ್ಯತ್ಯಾಸಗಳು ಕಡಿಮೆ ಇರಬಹುದು ಅಂತ ಒಂದು ನಂಬಿಕೆ ಇರತ್ತೆ..ಯಾಕೆಂದ್ರೆ ಒಂದೇ ಜಾತಿಯಿಂದ ಇರೋದ್ರಿಂದ ಆಚರ ವಿಚಾರಗಳು ಹೊಂದಿಕೊಳ್ಳಬಹುದು ಅಂತ ಒಂದು ಆಶಾಭಾವನೆ ಅಷ್ಟೇ..ಭಿನ್ನಾಭಿಪ್ರಾಯ ಎಲ್ಲಿ ಇರತ್ತೋ ಅಲ್ಲಿ ಸಂಬಂಧ ಇರಲ್ಲ…ಅದು ಅಂತರಜಾತಿ ಮದುವೆ ಆಗಲಿ ಒಂದೇ ಜಾತಿಯ ಮದುವೆ ಆಗಲಿ ಹೊಂದಾಣಿಕೆ ಇಲ್ಲದೆ ಇದ್ರೆ ಖಂಡಿತ ಯಾವುದೇ ಪ್ರಯೋಜನ ಇಲ್ಲ…
    ಅದೇ ಕಾರಣಕ್ಕೆ ಇಂದು ಹವ್ಯಕರಲ್ಲಿ ನಡೆಯುತ್ತಿರುವ ಎಷ್ಟೋ arranged marriage ಕೂಡ ವಿವಾಹ ವಿಚ್ಚೇದನ ಅನ್ನೋ ಮಟ್ಟಿಗೆ ಹೋಗ್ತಾ ಇವೆ..
    ಆದ್ರೆ ಅಂತರಜಾತಿ ಮದುವೆ ಆಗಲು ಸಿದ್ಧ ಇದ್ರೆ ಅದಕ್ಕೆ ಎದುರಾಗುವ ಸಮಸ್ಯೆಗಳನ್ನ ಕೂಡ ಒಗ್ಗಟ್ಟಿನಿಂದ ನಿಭಾಯಿಸಬೇಕಗುತ್ತೆ…ಯಾಕೆ ಅಂದ್ರೆ ಅಲ್ಲಿ ಹಿರಿಯರ ವಿರೋಧ ಮತ್ತು ಸಮಾಜದ ಚುಚ್ಚು ನುಡಿಗಳು ಕಾಯ್ತಾ ಇರುತ್ತೆ..
    ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಹಾಗೆ ಹೊಂದಾಣಿಕೆ ಇದ್ದಲ್ಲಿ ಸಂಬಂಧ ಅಂತ ನನಗೆ ಅನಸತ್ತೆ..ಅದಕ್ಕೆ ವಿವಾಹ ಯಾರ ಮಧ್ಯೆ ಆದರು ಅದಕ್ಕೆ ಹೊಂದಾಣಿಕೆ ಅನ್ನೋ ಸೂತ್ರ ಇದ್ದಾರೆ ಆ ಮದುವೆ ಖಂಡಿತ ಸುತ್ರದಾರಣ ಕೈಲ್ಲೇ ಇರತ್ತೆ…

    Like

ನಿಮ್ಮ ಟಿಪ್ಪಣಿ ಬರೆಯಿರಿ