ನಿರ್ಧರಿಸಿದ ಕೆಲಸ ಮುಗಿಸಿ, ನಾಳಿನ ಕೆಲಸದ ರೂಪುರೇಷೆ ರಚಿಸಿ,
ತೃಪ್ತಿಯಿಂದ ಲಾಗೌಟ್ ಆಗುವ ಹೊತ್ತು
ಕ್ಲಯಂಟ್ ಅಪ್‌ಲೌಡ್ ಇದ್ದಲ್ಲಿ ತಡರಾತ್ರಿಯ ಗಾಡಿಗೆ
ಫೆಸಿಲಿಟಿ ವಿಭಾಗಕ್ಕೆ ಮೇಲ್ ಅರ್ಜಿಸುವ ಹೊತ್ತು
ಇಲ್ಲದಿದ್ದಲ್ಲಿ ಮೂರು ನಿಮಿಷದ ಒಳಗೆ ನಿರ್ಧರಿತ ಸಮಯಕ್ಕೆ ತಪ್ಪದೇ ಚಾಲೂ ಆಗುವ
ಬಸ್ಸಿನ ಒಳಗೆ ಗಡಿಬಿಡಿಯಿಂದ ನುಗ್ಗಿ ಸೀಟಿನಲ್ಲಿ ನಿರಾಳವಾಗುವ ಹೊತ್ತು
ಮುಗಿಲ ಬಂಗಾರ ಕರಗಿ ನೀರಾಗಿ
ರೋಡು, ಫ್ಲೈಓವರು, ಮಾಲು, ಬಜಾರುಗಳ ಮೇಲೆ ಹರಡಿಕೊಳ್ಳುವ ಹೊತ್ತು
ಕೆಂಪು-ಹಸಿರು-ಹಳದಿ ಲೈಟುಗಳ ಮಧ್ಯೆ
ಹಾರ್ನು ಪೊಂಪೊಗಳ, ಗಾಡಿ ಚಕ್ರಗಳ ಸದ್ದಿನ ಹೊತ್ತು
ಮರಳಿ ಮನೆಗೆ ವಿಶ್ರಮಿಸಿ ಹಗುರಾಗಿ
ನಾಳೆ ಹೊಸ ಹುಮ್ಮಸ್ಸಿನಿಂದ ಬರುವ ಆಯಾಮದ ಹೊತ್ತು
ಏಕಾಂತ ಸಂಜೆಗಳಲ್ಲಿ,
ಬಾಲ್ಕನಿಯಿಂದ ಬೀಸುವ ತಣ್ಣಗಿನ ಗಾಳಿ
ಅನುಭವಿಸುತ್ತ ಕಳೆಯುವ ಹೊತ್ತು
ಬೆಳ್ಳಿ ಬೆಳಕು ಕಂದಿ ನಿಯಾನ್ ಬೆಳಕು
ಹೊತ್ತಿಕೊಳ್ಳುವ ಹೊತ್ತು
ಇರುವ ಚಿಕ್ಕ ಚಿಕ್ಕ ಏಲೆಗಳ ನಡುವಿನಿಂದ ಇಣುಕುವ ದೊಡ್ಡ ದೊಡ್ಡ ಏಲೆಗಳ ಪಾರ್ಕು
ತುಂಬಿ ತುಳುಕಾಡುವ ಹೊತ್ತು
ಚಂದ್ರನಿಲ್ಲದ ಬಾನಿಗಾಗಿ ಪಾರ್ಕಿನ ಸಾಲು ಸಾಲು ಬಿಳಿ ಗೋಲ ಬಲ್ಬುಗಳು
ಹೊತ್ತಿ ಚೆಲ್ಲುವ ಹೊತ್ತು
ಹಾಗೇನೆ ಇನ್ನೊಂದು ದಿನ ಮುಗಿಯಿತಲ್ಲ ಎಂದು ಹಪಹಪಿಸುತ್ತ
ಮತ್ತೆ ಬರೆಯದ ಪೆನ್ನೆತ್ತಿಕೊಂಡ ಹೊತ್ತು